Image default
Articles

ಹೆಜ್ಜೆ ಗೆಜ್ಜೆ- ಹರಿದಾಸ ಸಾಹಿತ್ಯದಲ್ಲಿ ನೃತ್ಯಾವಲೋಕನ

                   ನಮ್ಮ ಸನಾತನಧರ್ಮದ ಮೂಲತತ್ವಗಳನ್ನು ಭಕ್ತಿ ಸಾಹಿತ್ಯದ ಮೂಲಕ ಸುಶ್ರಾವ್ಯ ಸಂಗೀತಪೂರ್ಣವಾಗಿ ಬೀದಿ-ಬೀದಿಯಲ್ಲೂ, ಮನೆ-ಮನೆಗೂ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿಯು ಶಿವಶರಣರಿಗೂ (ವಚನ ಸಾಹಿತ್ಯ) ಮತ್ತು ಹರಿದಾಸರಿಗೂ (ದಾಸ ಸಾಹಿತ್ಯ) ಸಲ್ಲುತ್ತದೆ. ಹರಿದಾಸ ಸಾಹಿತ್ಯವು ವೇದ, ಉಪನಿಷತ್, ಪುರಾಣಗಳ ಸಾರ – ತತ್ವ, ಮೌಲ್ಯಗಳ ಪ್ರತಿಬಿಂಬ, ಮಾನಸಿಕ ಸ್ಥೈರ್ಯವನ್ನು ಕೊಡುವ ಗುಪ್ತಗಾಮಿನಿ, ರಸವನ್ನು ಉಣಬಡಿಸುವ ಚೇತೋಹಾರಿ ರಸಗಂಗೆ. ಹೀಗೆಲ್ಲಾ ಏನೇ ಹೇಳಿದರೂ ಬರೀ ಉತ್ಪ್ರೇಕ್ಷೆಯ ಒಣಮಾತುಗಳೆನಿಸುತ್ತದೆ. ಆದರೆ ದಾಸರ ಪದವೊಂದನ್ನು ಕೇಳಿದಾಗ ಉಂಟಾಗುವ ಆಹ್ಲಾದ, ರಸಾಸ್ವಾದನೆಯು ಅದಮ್ಯ ಆನಂದದ ಅನುಭವವನ್ನು ಕೊಡುತ್ತದೆ.

“ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ” (ಪುರಂದರದಾಸರು), “ಗೆಜ್ಜೆಯ ಕಟ್ಟಿದವ, ಖಳರೆದೆ ಮೆಟ್ಟಿದವ” (ಪುರಂದರದಾಸರು), “ಮಲಗಿ ಪರಮಾದರದಿ ಪಾಡಲು, ಕುಳಿತು ಕೇಳುವ …” (ಜಗನ್ನಾಥದಾಸರು), ಹೀಗೆ ಎಲ್ಲಾ ದಾಸರುಗಳೂ ಲಜ್ಜೆ ಬಿಟ್ಟು ಗೆಜ್ಜೆಕಟ್ಟಿ, ದಾಸಪಂಥವನ್ನು ಅನುಸರಿಸಿದವರು. ಹಾಗಾದರೆ ಗೆಜ್ಜೆ ಕಟ್ಟಿದವರೆಲ್ಲಾ ಲಜ್ಜೆ ಬಿಟ್ಟವರೇ ? ಇಲ್ಲ. ನಾನು, ನನ್ನದು ಎಂಬ ಅಹಂಭಾವವನ್ನು ತೊರೆದು, ಭಗವಂತನಿಗೆ ಶರಣಾಗಿ ದಾಸ್ಯತ್ವವನ್ನು ಹೊಂದುವ ನಿರಹಂಕಾರ ಸ್ಥಿತಿ ಎನ್ನಬಹುದು. ಕಾಲಿಗೆ ಗೆಜ್ಜೆ, ಕೈಯಲ್ಲಿ ತಂಬೂರಿ-ಚಿಟಿಕೆಯನ್ನು ಹಿಡಿದು, ಹೆಗಲಿಗೆ ಜೋಳಿಗೆಯನ್ನು ಹಾಕಿಕೊಂಡು ಮಧುಕರ ವೃತ್ತಿಯನ್ನು ಅನುಸರಿಸಿದ ದಾಸರುಗಳು ಭಿಕ್ಷುಕರಲ್ಲ, ತಮ್ಮ ಸಮಸ್ತ ಸೊತ್ತು-ಸೊಕ್ಕುಗಳನ್ನು ಕಿತ್ತೊಗೆದು, ಹರಿಸೇವೆಯನ್ನು ಭಕ್ತಿಮಾರ್ಗದಲ್ಲಿ ಕೈಕೊಂಡ ಪ್ರವರ್ತಕರು.  ಈ ದಾಸರುಗಳು ಹಾಡುತ್ತಾ ಭಕ್ತಿಪರವಶರಾಗಿ ಮೈಮರೆತು ಕುಣಿಯುವುದು ಸಾಮಾನ್ಯವಾದ ವಿಷಯವಾದರೂ, ಇವರೆಲ್ಲರೂ ಶಾಸ್ತ್ರೀಯವಾಗಿ ನೃತ್ಯವನ್ನು ಕಲಿತವರಲ್ಲ. ಆದರೆ ತಮಗಾದ ಸಂತೋಷವನ್ನು ಕುಣಿಯುವ ಮೂಲಕ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಭಾರತದಲ್ಲಿ  ಭಕ್ತಿಯ ಆಂದೋಲನದಲ್ಲಿ ಪಾಲ್ಗೊಂಡ ದಾಸರುಗಳ, ಭಕ್ತಿಯ ಅಭಿವ್ಯಕ್ತಿಯೂ ಕೂಡ ಹೀಗೆಯೇ ಕಂಡುಬರುತ್ತದೆ. ಇವರುಗಳ ರಚನೆಗಳನ್ನು ಸಂಗೀತವು ಬಳಸಿಕೊಂಡಂತೆ, ನೃತ್ಯಕ್ಷೇತ್ರವೂ ಬಳಸಿಕೊಂಡಿದೆ. ನೃತ್ಯ ಎಂಬುದು ನಮ್ಮ ಸಂಸ್ಕೃತಿಯ ಅಂಗವಾಗಿ, ದೈವವನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗವಾಗಿ ಭಕ್ತಿಯ ಅಭಿವ್ಯಕ್ತಿಯನ್ನು , ಮನರಂಜನೆಯನ್ನೂ ಕೊಡುವ ಸಾಧನಾ ಮಾರ್ಗವಾಗಿದೆ. ಇಂತಹ ನೃತ್ಯವನ್ನು, ಹರಿದಾಸರು ಭಕ್ತಿಪರವಶತೆಯಿಂದ ಭಗವಂತನ ವಿವಿಧ ಅವತಾರಗಳನ್ನೂ, ಅವನ ಲೀಲೆಗಳನ್ನೂ ಕಲ್ಪಿಸಿ, ತಮ್ಮ ಮುಂದೆ ಸಾಕ್ಷಾತ್ಕರಿಸಿಕೊಂಡು ಭಾವುಕರಾಗಿ ಹಾಡಿ, ಕುಣಿದು ಆನಂದವನ್ನು ಅನುಭವಿಸಿರುವುದು ಅವರ ರಚನೆಗಳಿಂದ ವೇದ್ಯವಾಗುತ್ತದೆ. ಇಲ್ಲಿ ಭಕ್ತಿಯ ಪರಾಕಾಷ್ಠತೆ, ಭಕ್ತನ ಅಂತರಂಗಶುದ್ಧಿಯ ಆಳವನ್ನು ಕಾಣುತ್ತೇವೆ. ಯಾವ ಭಕ್ತನು ಭಗವಂತನಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿದ್ದಾಗ ಮಾತ್ರ ಈ ರೀತಿಯ ನಡವಳಿಕೆಗಳು ಗೋಚರವಾಗುತ್ತವೆ. ಲೋಕದ ಜನರ ಮುಂದೆ ಇರುವ ನಾಚಿಕೆ -ಸಂಕೋಚಗಳು, ಭಗವಂತನ ಮುಂದೆ ಇರುವುದಿಲ್ಲ. ಇಂತಹ ಸಂತೋಷಾತಿರೇಕ ಮತ್ತು ತಾದಾತ್ಮ್ಯ- ಭಕ್ತಿಭಾವಗಳು ಹರಿದಾಸರನ್ನು ಕುಣಿಯಲು ಪ್ರೇರೇಪಿಸಿರಬೇಕು. ಶ್ರೀಕೃಷ್ಣನ ಬಾಲಲೀಲೆಗಳು, ಹನುಮಂತನ ಅದ್ಭುತ ಪರಾಕ್ರಮಗಳು, ಗೋಪಿಕೆಯರ ದೂರುಗಳು, ವಿರಹಾಲಾಪನೆಗಳು, ಹರಿದಾಸರ ಅಂತರಂಗದಿಂದ ಹೊರಹೊಮ್ಮಿದ ರಚನೆಗಳಾಗಿ, ನವರಸಗಳಿಂದ ಕೂಡಿ ನವವಿಧಭಕ್ತಿಯನ್ನು ಸ್ಪುರಿಸುತ್ತವೆ.

ಭಾಗವತ, ಭಾರತ, ರಾಮಾಯಣ ಮುಂತಾದ ಪುರಾಣಗಳನ್ನು ಆಧರಿಸಿ ರಚಿಸಲ್ಪಟ್ಟ ಹರಿದಾಸರ ಕೃತಿಗಳು ಸಂಗೀತ-ನೃತ್ಯಗಳ ಮೂಲಕ ಭಕ್ತಿಪ್ರಚಾರವನ್ನು ಮಾಡುವ ಮಾರ್ಗವಾಗಿದೆ. ಅಂತೆಯೇ ಈ ಸಂದರ್ಭಕ್ಕೆಂದೇ ಗೆಜ್ಜೆ ಕಟ್ಟುವ ಸಂಪ್ರದಾಯವೂ ಕೂಡ ಬಂದಂತಿದೆ. ಹರಿದಾಸರು ಅನುಸರಿಸಿದ್ದು ಜಗದ್ಗುರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಮಾಧ್ವಸಂಪ್ರದಾಯವನ್ನು ಮತ್ತು ‘ಹರಿಸರ್ವೋತ್ತಮ, ವಾಯುಜೀವೋತ್ತಮ’ಎಂಬ ತತ್ವವನ್ನು.  ಇವರು ಭಾಗವತ ಧರ್ಮವನ್ನನುಸರಿಸಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಮತ್ತು ಸಂಗೀತ ಪ್ರಕಾರಗಳಲ್ಲಿ ಲಕ್ಷಾಂತರ ಕೀರ್ತನೆಗಳನ್ನು ರಚಿಸಿದರು. ಹರಿದಾಸರ ಕೀರ್ತನೆಗಳು ಹೆಚ್ಚಾಗಿ ತತ್ವಗಳು, ಧರ್ಮಗಳು, ಭಗವಂತನ ಅದ್ಭುತ ಕಾರ್ಯಗಳು ಮತ್ತು ಗುಣಗಳು. ಲೋಕನೀತಿ, ಅನುಗ್ರಹ – ಶ್ರೀಹರಿಯ ಲೀಲೆಗಳು, ಕೃಷ್ಣ-ರಾಮರ ಜೀವನದ ಸಂದೇಶಗಳು, ಭಕ್ತಿ, ಶರಣಾಗತಿ ಮುಂತಾದ ಆಯಾಮಗಳಲ್ಲಿ ಕಂಡು ಬರುತ್ತವೆ. ಭಕ್ತಿ ಎಂದಾಗ ಭಕ್ತನ ದಾಸ್ಯಭಾವ, ಭಗವಂತನ ಈಶತ್ವವನ್ನು (ಒಡೆತನ) ವಿವಿಧ ಬಗೆಗಳಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಹರಿದಾಸರುಗಳು ಭಕ್ತನ ಎಲ್ಲೆಯನ್ನೂ ಮೀರದೆ, ಭಗವಂತನ ಗುಣ, ಲೀಲೆಗಳನ್ನು ಸುಂದರವಾಗಿ ಪದಗಳಲ್ಲಿ ಬಂಧಿಸಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇವರ ರಚನೆಗಳು ಶೃಂಗಾರಮಯವಾಗಿದ್ದರೂ ಭಕ್ತಿಪ್ರಾಧಾನ್ಯತೆಯಿಂದ ಕೂಡಿದೆ. ನೃತ್ಯದಲ್ಲಿ ಹೆಚ್ಚಾಗಿ ಶೃಂಗಾರ, ವಾತ್ಸಲ್ಯ, ನಿಂದಾಸ್ತುತಿ, ಕರುಣಾ ರಸಗಳು ಅಭಿನಯಿಸಲು ಯೋಗ್ಯವಾಗಿರುತ್ತವೆ. ನೇರವಾದ ಕಥಾವಸ್ತು ಸಂಚಾರಿ ಭಾವಗಳ ಬಳಕೆಗಳು ನೃತ್ಯಕ್ಕೆ ಬೇಕಾದ ಸಾಹಿತ್ಯದಲ್ಲಿರಬೇಕು. ಅಂತಹ ಕಥೆಗಳನ್ನು ಅಭಿನಯಿಸಿ ಪ್ರದರ್ಶಿಸುವುದು, ನರ್ತಕರಿಗೆ ಸ್ಪರ್ಧಾತ್ಮಕವೂ ಹಾಗೂ ಅವರ ಅನುಭವ-ಅನುಭಾವಗಳ ತಿಳುವಳಿಕೆಯನ್ನು ಆಧರಿಸಿರುತ್ತವೆ. ಹರಿದಾಸರ ಕೃತಿಗಳಲ್ಲಿ ನೃತ್ಯಕ್ಕೆ ಪೂರಕವಾದ ಚತುರ್ವಿಧ ಅಭಿನಯಗಳನ್ನು, ರಸಗಳನ್ನು, ವೈವಿಧ್ಯಮಯವಾದ ಭಕ್ತಿಯನ್ನು ನಾವು ಕಾಣಬಹುದು. ವಿಶೇಷವಾಗಿ ಕೋಲಾಟ, ಕೊರವಂಜಿ, ಕಲ್ಯಾಣಗಳು, ಸುಳಾದಿಗಳು, ಉಗಾಭೋಗಗಳು, ಜೋಜೋ ಮತ್ತು ಲಾಲಿ ಪದಗಳೆಂಬ ಅನೇಕ ಪ್ರಕಾರಗಳಲ್ಲಿ ಸಾವಿರಾರು ಪದಗಳು ಲಭ್ಯವಿದೆ.


           ಶ್ರೀ ಶ್ರೀಪಾದರಾಜರು ಹರಿದಾಸ ಸಾಹಿತ್ಯದ ಹರಿಕಾರರು. ಕ್ರಿ.ಶ.೧೫ ನೆಯ ಶತಮಾನದಲ್ಲಿದ್ದ ಇವರು ಮೊತ್ತಮೊದಲಿಗೆ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಇವರು ಸಂಜೆ ಪೂಜಾಕಾಲದಲ್ಲಿ ದೇವರನ್ನು ಸ್ತುತಿಸಲು ಭಜನಾ ಮಂಡಲಿಯನ್ನು ಏರ್ಪಡಿಸಿ ಆ ಮೂಲಕ ಕೃತಿಗಳನ್ನು ಪ್ರಚಾರಕ್ಕೆ ತಂದರೆಂದೂ, ಎಷ್ಟೋ ವೇಳೆ ತಾವೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ಭಗವಂತನನ್ನು ಸ್ತುತಿಸುತ್ತಿದ್ದರೆಂದೂ ಹೇಳಿರುತ್ತಾರೆ. ಇವರು ಅಲಂಕಾರಶಾಸ್ತ್ರ, ನಾಟ್ಯಶಾಸ್ತ್ರ, ರಸಸೂತ್ರಗಳನ್ನು ಅಧ್ಯಯನ ಮಾಡಿದ್ದರೆಂದು ತಿಳಿದುಬರುತ್ತದೆ. ಇವರು ಅನೇಕ ವೃತ್ತನಾಮಗಳು, ಸುಳಾದಿಗಳು, ಉಗಾಭೋಗಗಳು, ದಂಡಕಗಳನ್ನು ರಚಿಸಿದ್ದಾರೆ. ಹರಿದಾಸ ಸಾಹಿತ್ಯದಲ್ಲಿ ಮೊತ್ತ ಮೊದಲಿಗೆ ಭಾಗವತದ ಶ್ರೀಕೃಷ್ಣನ ಲೀಲೆಗಳನ್ನು ಶೃಂಗಾರಮಯವಾಗಿ ರಚಿಸಿದವರಲ್ಲಿ ಅಗ್ರಗಣ್ಯರೆನಿಸಿದ್ದಾರೆ. ಇವುಗಳಲ್ಲಿ ಭ್ರಮರಗೀತೆ, ಗೋಪೀಗೀತೆ ಮತ್ತು ವೇಣುಗೀತೆಗಳು ಪ್ರಮುಖವಾಗಿವೆ. ಶ್ರೀ ವ್ಯಾಸರಾಜರು, ಶ್ರೀ ಶ್ರೀಪಾದರಾಜರ ಕರಕಮಲಗಳಲ್ಲಿ ರೂಪುಗೊಂಡು, ಶಿಷ್ಯರೆನಿಸಿ, ದಾಸಕೂಟವನ್ನು ಕಟ್ಟಿ ಹರಿದಾಸ ಪರಂಪರೆಗೆ ಒಂದು ಸ್ಪಷ್ಟರೂಪವನ್ನು ಕೊಟ್ಟಿರುತ್ತಾರೆ. ಇವರು ಚಂದ್ರಿಕಾಚಾರ್ಯರೆಂದು ಪ್ರಸಿದ್ಧಿ ಪಡೆದಿದ್ದು, ಅನೇಕ ಸಂಸ್ಕೃತ ಕೃತಿಗಳನ್ನು ರಚಿಸಿದ್ದು , ಕನ್ನಡದಲ್ಲಿ ಅನೇಕ ವೃತ್ತನಾಮಗಳನ್ನು, ಸುಳಾದಿಗಳನ್ನು ರಚಿಸಿದ್ದಾರೆ. ಶ್ರೀಕೃಷ್ಣದೇವರಾಯನ ಆಸ್ಥಾನದ ಧರ್ಮಗುರುಗಳಾಗಿ ಮೆರೆದ ಇವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೂಡ ಪ್ರಮುಖ ಪಾತ್ರವನ್ನಲಂಕರಿಸಿರುತ್ತಾರೆ. ಶ್ರೀ ವಾದಿರಾಜರು, ಶ್ರೀವ್ಯಾಸರಾಜರ ಶಿಷ್ಯರಾಗಿ, ಉಡುಪಿಯ ಅಷ್ಟಮಠಗಳಲ್ಲೊಂದಾದ, ಸೋದೆ ಮಠದ ಯತಿಗಳಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಸಂಸ್ಕೃತ, ಕನ್ನಡ-ತುಳು ಭಾಷೆಗಳಲ್ಲಿ ಸಾಹಿತ್ಯಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಸಂಸ್ಕೃತ ಕೃತಿಗಳಂತೆಯೇ ಕನ್ನಡ ಕೃತಿಗಳೂ ಜನಮನ್ನಣೆಯನ್ನು ಪಡೆದಿವೆ. ಇವರು ಕೂಡ ಶ್ರೀಪಾದರಾಜರಂತೆ ಭಾಗವತವನ್ನು ಅನುಕರಿಸಿ ಭ್ರಮರಗೀತೆಯನ್ನು ಕನ್ನಡದಲ್ಲಿ ಬರೆದಿದ್ದಾರೆ.

ಯತಿತ್ರಯರ ನಂತರ ದಾಸಕೂಟದ ಮೇರುಶಿಖರದಲ್ಲಿರುವ ಶ್ರೀಪುರಂದರದಾಸರು, ಶ್ರೀವ್ಯಾಸರಾಜರ ಆಪ್ತ ಶಿಷ್ಯರು. ‘ಕರ್ನಾಟಕ ಸಂಗೀತ ಪಿತಾಮಹ’ನೆಂದು ಕರೆಸಿಕೊಳ್ಳುವ ಇವರ ಜೀವನ ಚರಿತ್ರೆಯು ವಿಶಿಷ್ಟವಾಗಿದೆ. ಇವರು ಶ್ರೀವ್ಯಾಸರಾಜರಿಂದ ದೀಕ್ಷೆಯನ್ನು ಪಡೆದು ‘ಶ್ರೀ ಪುರಂದರ ವಿಠಲ’ ನೆಂಬ ಅಂಕಿತ ದಿಂದ ೪,೭೫,೦೦೦ ಕೀರ್ತನೆಗಳನ್ನು ರಚಿಸಿದ್ದಾರೆಂದು, ವಿಜಯದಾಸರು ತಮ್ಮ ರಚನೆಯೊಂದರಲ್ಲಿ ತಿಳಿಸಿರುತ್ತಾರೆ. ದುರದೃಷ್ಟವಶಾತ್ ಇಂದು ನಮಗೆ ಹಲವು ಸಾವಿರ ಕೀರ್ತನೆಗಳು ಮಾತ್ರ ಲಭ್ಯವಿವೆ. ಇವರ ರಚನೆಗಳು ಸರಳವಾದ ಭಾಷಾಸಂಪತ್ತನ್ನು ಹೊಂದಿದ್ದು, ರಸ, ಭಕ್ತಿಗಳಿಂದ ಅನುಭವಪೂರ್ಣವಾಗಿದೆ.  

           ಜನ್ಮತಃ ಕುರುಬರ ಕುಲಕ್ಕೆ ಸೇರಿದ ಶ್ರೀಕನಕದಾಸರು, ವ್ಯಾಸರಾಜರಿಂದ ಶಿಷ್ಯತ್ವ ಪಡೆದವರು, . ಇವರ ರೋಚಕವಾದ ಜೀವನ ಚರಿತ್ರೆಯ ಹಿನ್ನೆಲೆಯಿಂದ, ವಿಭಿನ್ನವಾದ ಕಾವ್ಯಪ್ರತಿಭೆ, ಶೈಲಿಗಳಿಂದ ಇವರು ಹರಿದಾಸ ಸಾಹಿತ್ಯ ಕಂಡ ವಿಶೇಷವಾದ ಹರಿದಾಸರೆನ್ನಬಹುದು. ಇನ್ನಿತರರಂತೆ ಗದ್ಯ, ಪದ್ಯ, ಕೀರ್ತನೆ, ಸುಳಾದಿ, ಉಗಾಭೋಗಗಳೆಂಬ ಪ್ರಕಾರಗಳಂತೆ ಮುಂಡಿಗೆಗಳು, ಕಾವ್ಯಗಳು ಇವರ ವಿಶೇಷ ಕೊಡುಗೆಯಾಗಿವೆ . ಮುಂಡಿಗೆಗಳಂತೂ ಪಂಡಿತರಿಗೂ ಕಬ್ಬಿಣದ ಕಡಲೆಯಾಗಿ ಸವಾಲೆಸೆಯುತ್ತವೆ . ‘ಕನಕನ ಕೆಣಕಬೇಡ, ಕೆಣಕಿ ತಿಣಕಬೇಡ’ ಎಂಬ ಮಾತು, ಇವರ ಶೈಲಿಯಲ್ಲಿ ಸಿಗುವ ಅಪರೂಪದ, ಕಠಿಣವಾದ ರಚನೆಗಳಿಗೆ ಅನ್ವಯಿಸುತ್ತದೆ. ಇವರ ಕೃತಿಗಳಲ್ಲಿ ಜನಪದದ ಸೊಗಡಿದೆ, ತತ್ವದ ಗೂಡಾರ್ಥಗಳಿವೆ.

 ಶ್ರೀ ಕನಕದಾಸರಿಂದ ಮುಂದುವರೆದು ಶ್ರೀ ಮಹಿಪತಿದಾಸರು, ಶ್ರೀ ಪ್ರಸನ್ನವೆಂಕಟದಾಸರು, ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಮೋಹನದಾಸರು, ಶ್ರೀ ಜಗನ್ನಾಥದಾಸರು, ಶ್ರೀ ಪ್ರಾಣೇಶದಾಸರು, ಮುಂತಾದವರು  ಅಷ್ಟೇ ಅಲ್ಲದೆ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ಗಲಗಲಿ ಅವ್ವರಂತಹ ಅನೇಕ ಮಹಿಳಾ ಹರಿದಾಸರೂ ಕೂಡ ಹರಿದಾಸ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಜೀವಂತ ನದಿಯಂತೆ ಪ್ರವಹಿಸುತ್ತಿರುವ ಹರಿದಾಸ ಸಾಹಿತ್ಯದಲ್ಲಿ ಇಂದಿಗೂ ಅನೇಕ ಹರಿದಾಸರು ತಮ್ಮ ಕೃಷಿಯನ್ನು ಮುಂದುವರೆಸಿದ್ದಾರೆ.

 ಸಾಮಾನ್ಯರಿಗೆ ಈ ಹರಿದಾಸರ ಕೀರ್ತನೆಗಳು, ತತ್ವಪದಗಳಾಗಿರಬಹುದು, ಲೋಕಕ್ಕೆ ಹೇಳಿದ ನೀತಿಪದಗಳಾಗಿರಬಹುದು, ಧರ್ಮ ಸೂಕ್ಷ್ಮವನ್ನು ಮಾರ್ಮಿಕವಾಗಿ ತಿಳಿಸುವ ಪದಗಳಾಗಿರಬಹುದು. ಭಕ್ತಿಯನ್ನುದ್ಭೋದಿಸುವ ಕೀರ್ತನೆಗಳಾಗಿರಬಹುದು. ಆದರೆ ಪ್ರವೃತ್ತಿಯಲ್ಲಿ ನರ್ತಕಿಯಾಗಿರುವ ನನಗೆ ಈ ಒಬ್ಬೊಬ್ಬರ ಕೀರ್ತನೆಗಳೂ ಕಲಾತ್ಮಕವಾಗಿಯೂ, ರಸಾತ್ಮಕವಾಗಿಯೂ, ಭಾವಾತ್ಮಕವಾಗಿಯೂ, ಭಕ್ತಿಪೂರಕವಾಗಿಯೂ ಕಾಣುತ್ತದೆ. ಇವುಗಳನ್ನು ವೇದಿಕೆಯಲ್ಲಿ ನುರಿತ ನೃತ್ಯಪಟುಗಳಿಂದ ಅಭಿನಯಿಸಲ್ಪಟ್ಟಾಗ, ಸಾತ್ವಿಕ ವೃತ್ತಿಯು ನೋಡುಗರಲ್ಲಿ ಜಾಗೃತವಾಗಿ ಭಕ್ತಿಭಾವವನ್ನುಂಟು ಮಾಡುತ್ತವೆ. ಹೀಗಾಗಿ ಗೀತ, ವಾದ್ಯ, ನೃತ್ಯಗಳು ಸಂಗೀತದ ರೂಪದಲ್ಲಿ ದೈವದ ಸಾಕ್ಷಾತ್ಕಾರದ ಭಕ್ತಿಯ ಸೋಪಾನಗಳೆಂದಿನಿಸಿವೆ.  

ಡಾ. ವಿದ್ಯಾ ರಾವ್

ಎಂ.ಫಿಲ್, ಪಿಹೆಚ್.ಡಿ .ಹರಿದಾಸ ಸಾಹಿತ್ಯ ಮತ್ತು ನೃತ್ಯ.                                      ಫೋ ; 9980382992

Related posts

DR.GEETHA RAMANUJAM –A woman with a difference

YK Sandhya Sharma

A HISTORIC EVENT IN THE CITY OF ‘TEHZEEBee’ LUCKNOW

YK Sandhya Sharma

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

YK Sandhya Sharma

Leave a Comment

This site uses Akismet to reduce spam. Learn how your comment data is processed.