Image default
Short Stories

ಪಟ್ಟಾ(ಭದ್ರಾ)ಭಿಷೇಕ

ಬೆಳಗ್ಗೆ ಆರಕ್ಕೆ ಮನೆಬಿಟ್ಟು ಹೊರಗೆ ಹೋದವರು ಇದೀಗ ದಣಿದು ಬಂದು ಮತ್ತೆ ಕೋಟೇರಿಸಿಕೊಂಡು ಹೊರಟ ಸಾಂಬಶಿವಯ್ಯನವರನ್ನು ಕಂಡು ಶಂಕರ ಧಾವಿಸಿ ಬಂದ. ಅವರು ತಟಕ್ಕನೆ ನಿಂತು ಹಿಂದೆ ತಿರುಗಿದಾಗ ಅವನೂ ತಟ್ಟನೆ ನಿಂತು ಸಂಕೋಚದಿಂದ ಏನೋ ಹೇಳಲು ಹೋಗುವಂತೆ ಬಲಗೈಯನ್ನು ಮುಂದೆ ಮುಂದೆ ತಂದು ಹಿಂಜರಿದವನಂತೆ ಹಿಂತೆಗೆದುಕೊಂಡು ಅವರ ಮುಖ ನೋಡಿದ.

ಇನ್ನೇನು ಮುಂದೆ ನಡೆಯಬೇಕಾದ ಚುನಾವಣೆಯ ಆಗಾಧ ಕೆಲಸಗಳ ವರ್ಕಿಂಗ್ ಎನ್ನುವ ಹಾಗೆ ಅವರ ಮುಖದ ತುಂಬ ಯೋಚನೆಯ ಪಿರಮಿಡ್ಡುಗಳು. ತಾನು ಬಾಯಿ ಬಿಚ್ಚಿದರೆ ರೇಗುವರೇನೋ ಎಂಬ ಆತಂಕವಿದ್ದರೂ ಶಂಕರ ಮೆಲ್ಲನೆ ‘ರಾಯರೇ,  ಊಟ ಮಾಡ್ಕೊಂಡು ಹೋಗಿ’ ಅಂದ. ಅವನ ಮಾತು ಕೇಳಿಸದವರಂತೆ ಸಾಂಬಶಿವಯ್ಯ ತಮ್ಮಪಾಡಿಗೆ ತಾವು ಕೋಟಿನ ಗುಂಡಿಗಳನ್ನು ಬಿಗಿದು ಷೂಸ್ ಹಾಕಿಕೊಳ್ಳಲು ಸೋಫಾದ ಮೇಲೆ ಕೂತಾಗ ಹಿಂದಿನಿಂದ ಮತ್ತೆ ಅದೇ ಮೃದುಕರೆಯ ಆಲಾಪ.

 “ರಾಯರೇ, ಸ್ಪಲ್ಪಾನಾದ್ರೂ ಊಟ ಮಾಡ್ಕೊಂಡು ಹೋಗಿ….. ಬೆಳಗ್ಗಿಂದ ತಿಂಡೀನೂ ತಿಂದಿಲ್ಲ….. ಹೀಗಾದ್ರೆ ಹೇಗೆ? ಮುಂದಿನ ತಿಂಗಳ್ಹೊತ್ತಿಗಾದ್ರೂ ಗಟ್ಟಿಯಾಗಿರಬೇಡ್ವೇ?….. ಬನ್ನಿ.”

ಸಾಂಬಶಿಯ್ಯನವರಿಗೆ ಏನನ್ನಿಸಿತೋ ಏನೋ ಕೂಡಲೇ ಷೂಸಿನ ಗುಹೆಯೊಳಗಿಂದ ತಮ್ಮ ಕಾಲುಗಳನ್ನು ಹೊರತೆಗೆದು ಶಂಕರನನ್ನು ಹಿಂಬಾಲಿಸಿದರು. ಬೆವರುಕ್ಕಿಸುವ ಉರಿಸೆಕೆಯಲ್ಲೂ ಕೋಟು ತೆಗೆಯದೆ ಹಾಗೇ ಊಟಕ್ಕೆ ಕುಳಿತ ಅವರಿಗೆ ‘ಕೋಟು ತೆಗೆದು ಆರಾಮವಾಗಿ ಕೂತ್ಕೊಳ್ಳಿ’ ಎಂದು ಹೇಳಲಾರದೆ, ಶಂಕರ, ಮೇಲಿನ ಫ್ಯಾನನ್ನು ಆನ್ ಮಾಡಿ ಗೋಧಿ ಅನ್ನದ ಡಬರಿಯನ್ನು ತಂದು ಮೇಜಿನ ಮೇಲಿಟ್ಟ.  

ಗೋಧಿ ಅನ್ನದೊಳಗೆ ಉಪ್ಪಿಲ್ಲದ ಸಾರನ್ನು ಹಾಯಿಸಿ ನಿರ್ಲಕ್ಷ್ಯದಿಂದ ತುತ್ತನ್ನು  ಗಂಟಲೊಳಗೆ ಇಳಿಸುತ್ತಿದ್ದ ಅವರನ್ನು ಕಂಡು ಶಂಕರನ ಕರುಳಲ್ಲಿ ಕುಡಗೋಲು ಆಡಿಸಿದಂತಾಯ್ತು. ಎದುರಿಗೆ ಪರಾತದಲ್ಲಿ ಘಮ್ಮೆಂದು ವಾಸನೆ ತೂರುತ್ತಿದ್ದ ಜಹಂಗೀರಿನ ಕಟ್ಟಡದತ್ತ ಅವರ ಗಮನ ಕಿಂಚಿತ್ತೂ ಇಲ್ಲದಿದ್ದರೂ, ಶಂಕರನ ಕಣ್ಣು ಮಾತ್ರ ಅದರತ್ತ ರಾಯರತ್ತ ತುಯ್ದಾಡಿ ನಿರಾಸೆಗೊಂಡಿತು.

ಮೇಜಿನ ತುಂಬ ಖಾದ್ಯಗಳಿದ್ದರೂ ಅವರೆಂದೂ ನಿರಾತಂಕವಾಗಿ ಕುಳಿತು ಊಟ ಮಾಡಿದ್ದು ಶಂಕರನಿಗೆ ನೆನಪಿಲ್ಲ. ಸದಾ ಹೊರಗಿನ ಕೆಲಸಗಳ ಸುತ್ತಾಟ. ಮನೆಯಲ್ಲಿ ಬಿಡುವಿಲ್ಲದೆ ಹೊಡೆದುಕೊಳ್ಳುವ ಫೋನಿಗೆ ಬಾಯಿ ಹಚ್ಚುವುದು. ಕಾಗದ ಪತ್ರಗಳಿಗೆ ಸಹಿ ಗುದ್ದಿ ಪಿ.ಎ. ಬಳಿ ದೀರ್ಘ ಗುಪ್ತ ಸಮಾಲೋಚನೆ ನಡೆಸುವುದು.

ಪ್ರತಿದಿನ ಸಾಂಬಶಿವಯ್ಯನವರನ್ನು ಕಾಣಲು ಪ್ರವಾಹದಂತೆ ಮಂದಿ ನುಗ್ಗುತ್ತಾರೆ. ಸಂದರ್ಶನ ವೇಳೆಯ ಕೇವಲ ಒಂದು ಗಂಟೆಯಲ್ಲಿ ಎಂಟು ಹತ್ತು ಜನರಿಗೆ ಮುಖದರ್ಶನ ಸಿಕ್ಕರೆ ಹೆಚ್ಚು. ದಿನಾ ಬರುವ ಮುಖ, ಕೈ ಕಾಲುಗಳೇ ತಪ್ಪದೆ ಗೇಟು ತೆರೆದು ಹಾಕಿ ಮಾಡಿದ್ದರೂ ವರಾಂಡದಿಂದ ಒಳಹೊಸಿಲು ದಾಟಲು ಸಾಧ್ಯವಾಗಿಲ್ಲ. ಈಚೆಗೆ ಈ ಕೆಲಸಗಳಿಗೆಂದೇ ಇಬ್ಬರು ಹೊಸಬರು ಅಪಾಯಿಂಟ್ ಆಗಿದ್ದಾರೆ. ನಡುಮನೆ ಕೋಣೆಗಳಲ್ಲಿ ಬಿರುಸಿನ ಓಡಾಟ, ಮಾತುಕತೆ, ಒಳಗಿಂದ ಸ್ಪೆಷಲ್ ಆರ್ಡರ್ ಬಂದಾಗ ಪಾನಕದ ಲೋಟಗಳ ಸರಿದಾಟ, ಒಮ್ಮೊಮ್ಮೆ ತಿಂಡಿಯ ತಟ್ಟೆಗಳೂ. ಅಡುಗೆ ಕೆಲಸವೆಲ್ಲ ಮುಗಿಸಿ ಶಂಕರ, ವರಾಂಡದಲ್ಲಿ ರಾಯರ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿ ಕೀಲಿಸಿ ಕೂತ ಜನಗಳನ್ನು ನೋಡುತ್ತ ಕುಳಿತುಕೊಳ್ಳುತ್ತಿದ್ದವನಿಗೆ ಈಗೊಂದು ಅರ್ಥವಾಗದ ಸಮಸ್ಯೆ! ಮೊದಲಾದರೂ ಪರವಾಗಿಲ್ಲ, ತೂಕದ ಕವರು ಹಿಡಿದು ಕುಳಿತವರ ಕ್ಯೂ ಬೇಗ ಕರಗುತ್ತಿತ್ತು. ಹೊಸ ಕವರಿನ ಕೈಗಳು ಸೇರುತ್ತಿದ್ದವು. ಈಗ ಹಾಗಲ್ಲ. ಈ ಕೆಲಸಕ್ಕೆಂದೇ ನೇಮಕವಾದ ಹೊಸಬರಿಬ್ಬರು ಎಲ್ಲಾ ಪರಿಶೀಲಿಸಿದ ನಂತರ ಒಬ್ಬರನ್ನೋ ಇಬ್ಬರನ್ನೋ ಕೋಣೆಯ ಕಡೆ ಸಾಗಿಸುತ್ತಿದ್ದರು. ಹಿಂದೆಂದೂ ನೋಡಿರದ ಹೊಸಮುಖ-ಆಕೃತಿ, ಕಾರುಗಳು ಬಂಗಲೆಯ ಮುಂದೆ ನಿಂತು ಒಳಬಂದು ಪಿಸಿಪಿಸಿಸಿ, ಅವಸರವಾಗಿ ತೆರಳುತ್ತಿದ್ದುದರ ಅರ್ಥವನ್ನು ಅವನೇ ಲಟ್ಟಿಸಿ ನೋಡಿಕೊಳ್ಳಬೇಕಿತ್ತು. ಎಲ್ಲವನ್ನೂ ಶಂಕರ ತುಟಿ ಸೀಳದೆ ಗಮನಿಸುತ್ತ ನಿಲ್ಲುತ್ತಿದ್ದ.

ಫೋನಿನ ಪುಟ್ಟ ಕಪ್ಪು ಬಾಯೊಳಗೆ-ಸಭೆಗಳಲ್ಲಿ ಗಂಟೆಗಟ್ಟಲೆ ಕೊರೆಯುವ ಹಾಗೆ ಆವೇಶದಿಂದ, ಭರವಸೆಯಿಂದ, ಆಶ್ವಾಸನಾಪೂರ್ವಕವಾಗಿ ಇನ್ನೂ ಹತ್ತು ಹಲವು ರೀತಿಗಳಲ್ಲಿ ಏರುಧ್ವನಿಯಲ್ಲಿ ಮಾತನಾಡುತ್ತಿದ್ದ ಆ ಸಾಂಬಶಿವಯ್ಯನವರ ಚಿತ್ರ ಕಣ್ಣುಮುಂದೆ ಕೊರೆದಾಗ, ಎದುರಿಗೆ ಮೌನದ ಗೂಡೆಯಾಗಿ ಉಣ್ಣುತ್ತಿರುವಾತನನ್ನು ದಿಟ್ಟಿಸಿ ಇಬ್ಬರೂ ಒಬ್ಬರೇನಾ ಎನ್ನುವ ಅನುಮಾನ ಆಶ್ಚರ್ಯದ ಹೊಡೆತ ಶಂಕರನಿಗೆ.

 ತಟ್ಟೆಯಲ್ಲಿರುವುದನ್ನೆಲ್ಲ ಮುದ್ದೆಯಾಗಿ ಕಲೆಸುತ್ತಿರುವಂತೆ  ತಮ್ಮ  ಹಣೆಯ ತುಂಬ ಹಬ್ಬುತ್ತಿರುವ ಯೋಚನೆಗಳನ್ನು ಕೈಯಿಂದ ಉಜ್ಜಿ, ಉಂಡೆಮಾಡಿ ಮೇಲಕ್ಕೆದ್ದು ಬಿಟ್ಟರು ಸಾಂಬಶಿವಯ್ಯ. ಮಾತನಾಡಲು ಶಂಕರನಿಗೆ ಧ್ವನಿ ಸಾಲದಾಯಿತು. ಅರೆಹೊಟ್ಟೆ ಉಂಡು ಎದ್ದುಹೋದ ರಾಯರು ಕಾರಿನೊಳಕ್ಕೆ ಸೇರಿಕೊಂಡಾಗ ಶಂಕರ ದೊಡ್ಡ ನಿಟ್ಟುಸಿರು ಹೊರಹುಯ್ದ.

ಸಾಂಬಶಿವಯ್ಯನ ಕಾರು ದೂರಕ್ಕೆ ಸಣ್ಣದಾಗುತ್ತಿದ್ದ ಹಾಗೆ, ಅದಕ್ಕೆ ಹಿಂದೆಯೇ ಬಂದ ಕೆನೆ ಬಣ್ಣದ ಬೆಂಜ್ ಕಾರು ಪೋರ್ಟಿಕೋದಲ್ಲಿ ಬಂದು ನಿಂತಿತು. ಧಡಾರನೆ ಕಾರಿನ ಬಾಗಿಲು ತಳ್ಳಿ ಮೆಟ್ಟಿಲ ಮೇಲೆ ಚಿಮ್ಮುತ್ತ ಧಾವಂತದಿಂದ ಒಳಬಂದ  ಸೋಮಶೇಖರ- ‘ಲೋ ಶಂಕ್ರಾ….. ಬೇಗ ಬಡಿಸು….. ನಾ ಅರ್ಜೆಂಟಾಗಿ ಹೋಗ್ಬೇಕು’ ಎಂದು ಮಾತನಾಡುತ್ತಲೇ, ತನ್ನ ಕೋಣೆಗೆ ಹೋದವನೆ ಡೈರಿ ತೆಗೆದು ಫೋನಿನ ಬಳಿ ಸಾಗಿ ಯಾವುದೋ ಒಂದೆರಡು ನಂಬರುಗಳಿಗೆ ಡಯಲ್ ಮಾಡಿ ಮಾತನಾಡಿದ. ತತ್‍ಕ್ಷಣ ನಡೆಯಬೇಕಿದ್ದ ಕೆಲಸಗಳನ್ನು ತನ್ನ ಪಿ.ಎ.ಗೆ ಒಪ್ಪಿಸಿ, ಶಂಕರ ಊಟಕ್ಕೆ ಕರೆಯುವಷ್ಟರಲ್ಲಿ, ಹೊರಗೆ ಬೆಳಗಿಂದ ಕಾಯುತ್ತ ಬಸವಳಿದು ಹೋದ ಒಂದಿಬ್ಬರಿಗೆ ಸಂದರ್ಶನ ನೀಡಿ ತಟ್ಟೆ ಮುಂದೆ ಹಾಜರಾದ.

ಅವನದು ಎರಡು ನಿಮಿಷದ ಊಟ. ತಟ್ಟೆಯ ಕೊನೆಯಲ್ಲಿದ್ದ ಅವನ ಅತ್ಯಂತ ಪ್ರಿಯ ಖಾದ್ಯ ಜಹಂಗೀರಿನ ಕಡೆ ಕಡೆಗಣ್ಣು ಕೂಡ ಹಾಯಿಸದೆ, ಶಂಕರ  ಬಡಿಸಿದ್ದನ್ನೆಲ್ಲ ನಾಲಗೆಯ ಮೇಲೆ ಆಡಿಸಿ ಚಪ್ಪರಿಸದೆ ‘ಸತೃಣಾಭ್ಯ ವ್ಯವಹಾರಿ’ಯಂತೆ ಗುಳಕ್ಕನೆ ನುಂಗಿ ಕೈಮೇಲೆ ನೀರು ಸುರಿದುಕೊಂಡ. ಥೇಟ್ ಅಪ್ಪನಂತೆಯೇ!!!…ಬೆಳಗಿನಿಂದ ಅವನ ಸತತ ಭಾಷಣ ಕೇಳಿ ಬೇಸರಗೊಂಡ ಜನ ತಮ್ಮ ಹಣೆಗಳನ್ನು ಹೊಸಕಿಕೊಂಡ ಹಾಗೆ, ಸೋಮಶೇಖರ, ತನ್ನ ಮುಖದ ಸ್ನಾಯುಗಳನ್ನು ಹೊಸಕಿ, ಒದ್ದೆ ಕರವಸ್ತ್ರವನ್ನು ಮುಖಕ್ಕೆ ತಟ್ಟಿಕೊಳ್ಳುತ್ತ ಕಾರಿನ ಸೀಟಿನ ಮೇಲೆ ಚಂಗನೆ ಹಾರಿ, ಭುರ್ರನೆ ಕಾರು ಗೇಟಿನಂದ ಹೊರನುಗ್ಗಿ ಧೂಳು ತೆನೆಯಾದಾಗ ಶಂಕರನಿಂದ ಮತ್ತೊಮ್ಮೆ ಭಾರಿ ನಿಟ್ಟುಸಿರು.

ನಲವತ್ತು ಜನ ಸುಖವಾಗಿ ಸಂಸಾರ ಮಾಡಬಹುದಂತಿದ್ದ ವಿಶಾಲ ಬಂಗಲೆ ದನಿ ತುಂಬದೆ, ಹೆಜ್ಜೆ ಹರಿಯದೆ ‘ಬಿಕೋ’ ಎನ್ನುತ್ತ ಬಾಯಿ ಹೆಣೆದು ಗುಮ್ಮನೆ ಮುದುಡಿ ಕೂತಿತ್ತು. ನಿಶ್ಶಬ್ದಕ್ಕೆ ಎಲ್ಲಿಲ್ಲದ ಸಾಮ್ರಾಟನ ಗತ್ತು, ಬಿಂಕ!!!

ರಾತ್ರಿ ಹನ್ನೊಂದೂವರೆ ಗಂಟೆಗೆ ಸೋಮಶೇಖರ ಬಿರುಗಾಳಿಯಂತೆ ಹೊಮ್ಮಿಬಂದು ದಡಬಡ ಬಾಗಿಲುಗಳು ಮೈ ಹಿಚುಕಿ ಗುದ್ದಿ ‘ಇನ್ನೂ ಅಪ್ಪಾಜಿ ಬಂದಿಲ್ವೇ ಶಂಕ್ರಾ?’ ಎಂದು ಮಹಡಿ ಕೋಣೆಯಿಂದ ಕೂಗಿದವನೆ, ಉತ್ತರವಾಗಿ ತಾನೇ ಕೆಳಗಿಳಿದು ಬಂದು, ತಂದೆಯ ಕೋಣೆ ಹೊಕ್ಕು ಹ್ಯಾಪುಮೋರೆಯಲ್ಲಿ  ಹಿಂತಿರುಗಿ, ಡೈನಿಂಗ್ ಹಾಲಿಗೆ ನುಗ್ಗಿ ತಟ್ಟೆಯ ಮುಂದೆ ಕುಳಿತ. ಒಂದೆರಡು ಕ್ಷಣ ಮೌನ ಉಯ್ಯಾಲೆಯಾಡಿತು…ಶಂಕರ ಏನು ಬಡಿಸುತ್ತಿದ್ದಾನೆಂಬ ಪರಿವೆಯಿಲ್ಲದೆ, ಒಬ್ಬನೇ ಸ್ವಗತ ಏನೋ ಮಾತನಾಡಿಕೊಳ್ಳುತ್ತ ಬಾಯಿ ಎಂಜಲು ಮಾಡಿಕೊಂಡು ಮೇಲೆದ್ದವನೆ ಮೂತಿ ಒರೆಸಿಕೊಂಡು ನಡುಮನೆಗೆ ಬಂದ. ಮೌನ ರಿವ್ವನೆ ಗಿರಾಕಿ ಹೊಡೆಯುತ್ತಿತ್ತು….ಎದುರಿಗಿದ್ದ ಟೀಪಾಯಿಯ ಮೇಲಿದ್ದ ಪತ್ರಿಕೆಗಳನ್ನೆಲ್ಲಾ ತಿರುವಿ ಹಾಕಿದ. ಗಮನ ಮತ್ತು ದೃಷ್ಟಿ ಮಾತ್ರ ಅದರೊಳಗೆ ಕೀಲಿಸಿರಲಿಲ್ಲ….ಗೋಡೆ ಗಡಿಯಾರ  ಹನ್ನೆರಡು….. ಹನ್ನೆರಡೂವರೆ ಗಂಟೆಯೂ ಹೊಡೆಯಿತು. ಎಷ್ಟೋ ಹೊತ್ತಿನ ಮೇಲೆ ಸಾಂಬಶಿವಯ್ಯನ ಕಾರಿನ ಶಬ್ದ ಕೇಳಿ ತೂಕಡಿಸುತ್ತಿದ್ದವನು ಜಗ್ಗನೆ ಎದ್ದು ಕೂತ ಸೋಮಶೇಖರ . ತುಂಬಾ ದಣಿದು ಬಂದಿದ್ದ ಸಾಂಬಶಿವಯ್ಯ, ಊಟಕ್ಕೆ ಕರೆದ ಶಂಕರನನ್ನು ‘ಹಸಿವಿಲ್ಲ ಹೋಗು… ಸುಮ್ನೆ ತೊಂದ್ರೆ ಕೊಡ್ಬೇಡ’ ಎಂದು ಗದರಿ –  ‘ಬಾ ನನ್ನ ರೂಮ್ನಲ್ಲೇ ಮಾತಾಡೋಣ’ ಎಂದು ಮಗನನ್ನು ಕರೆದುಕೊಂಡು ರೂಮಿನೊಳಕ್ಕೆ ಹೋದರು.

ರಾತ್ರಿ ಮಾತುಕತೆ ಮುಗಿಸಿ ಸೋಮಶೇಖರ ತಂದೆಯ ಕೋಣೆಯಿಂದ ಹೊರಬಂದಾಗ ನಡುರಾತ್ರಿ ಮೂರು ದಾಟಿತ್ತು. ಆದರೂ ಅವನ ಕಣ್ಣುಗಳು ನಿದ್ರೆಯ ಸುಳಿವಿಲ್ಲದೆ ಬಿಚ್ಚಿಕೊಂಡೇ ಇದ್ದವು. ಮೆತ್ತನೆಯ ಹಾಸಿಗೆ ಕಟ್ಟೊಲುಮೆಯಿಂದ ಅವನನ್ನು ಅಪ್ಪಿಕೊಂಡಿದ್ದರೂ ಅವನು ಮಾತ್ರ ಮಹಾ ಅರಸಿಕನಂತೆ ಐದು ಹೊಡೆಯುವ  ಮುಂಚೆಯೇ ಅವಸರದಿಂದೆದ್ದು ಸಿದ್ಧನಾಗಿ ಮನೆಯಿಂದ ಹೊರಬಿದ್ದಾಗ,  ಸಾಂಬಶಿವಯ್ಯ ಮನೆಯಲ್ಲಿರಲಿಲ್ಲ. ಸಾಂಬಶಿವಯ್ಯನ ಕಾರು ಆಗಲೇ ನಲವತ್ತೆರಡು ಮೈಲಿ ದೂರದ ಕುಗ್ರಾಮವೊಂದರ ಹೊಕ್ಕುಳಲ್ಲಿ ನಿಂತಿತ್ತು. ಅವರ ಪಿ.ಎ. ಕಾರ್ಯಕ್ರಮದ ದೊಡ್ಡ ಪಟ್ಟಿಯೊಂದನ್ನೇ ಅವರ ಕೈಯಲ್ಲಿಟ್ಟಿದ್ದ. ಇದುವರೆಗೂ ಅವರು ಹಲವಾರು ಕಡೆ ಭಾಷಣ ಮಾಡಿ ಇನ್ನು ಉಳಿದಿರುವ ಕ್ಷೇತ್ರಗಳಲ್ಲಿ ಮಾಡಬೇಕಿದ್ದ ಭಾಷಣಕ್ಕಾಗಿ ಗಂಟಲು ಹದಮಾಡಿಕೊಳ್ಳುವಂತೆ ಜೋರಾಗಿ ಕೆಮ್ಮಿ ಸಭೆಯ ಪೀಠವನ್ನೇರಿದರು. ಅಲ್ಲಿ ಸೇರಿದ್ದವರೆಲ್ಲ ಮಸಿಯಲ್ಲಿ ಅಕ್ಷರ ಮೂಡಿಸಲು ಬಾರದವರು, ಹೆಂಗಸರು, ಗಂಡಸರು, ಮಕ್ಕಳು, ಮುದುಕರು. ಎಲ್ಲ ಮಣ್ಣಹಾಸಿನಲ್ಲಿ ಲಕ್ಷಣವಾಗಿ ಚಕ್ಕಂಬಕ್ಕಳ, ಕುಕ್ಕುರುಗಾಲಿನಲ್ಲಿ ಕುಳಿತು ಎತ್ತರದಲ್ಲಿ ಡೋಲುಹೊಟ್ಟೆ ಹೊತ್ತು ಕುಳಿತಿದ್ದ ಸಾಂಬಶಿವಯ್ಯನನ್ನೇ  ದಿಟ್ಟಿಸಿ ನೋಡುತ್ತಿದ್ದರು. ಭಾಷಣಕ್ಕೆ ಮುಂಚೆ ಸಾಂಬಶಿವಯ್ಯನ ಕಡೆಯ ಕಾರ್ಯಕರ್ತರು ಹಂಚಿದ್ದ ತಿಂಡಿಯ ಪೊಟ್ಟಣಗಳನ್ನು ಬಿಚ್ಚುವ, ಹರಿಯುವ ಕಾಗದದ ಚರಪರ ಸದ್ದು ಭಾಷಣಕ್ಕೆ  ಹಿಮ್ಮೇಳ ನೀಡುತ್ತಿತ್ತು. ಕೊನೆಕೊನೆಯಲ್ಲಿ ಅವರ ಭಾಷಣವನ್ನು ಎಷ್ಟು ಅರ್ಥಮಾಡಿಕೊಂಡರೋ? ಗೊತ್ತಿಲ್ಲ. ತಿಂಡಿ ಪೊಟ್ಟಣಗಳು ಖಾಲಿಯಾಗುತ್ತಿದ್ದಂತೆ ಕೆಲವರು ತುಟಿ, ಕಟವಾಯಿಯಲ್ಲಿ ಅಂಟಿಕೊಂಡಿದ್ದ ತಿಂಡಿಯ ಚೂರುಗಳನ್ನು ನಾಲಗೆಯಿಂದ ದಬ್ಬಿಕೊಂಡು ಚೀಪುತ್ತ ಇನ್ನೂ ನಿಧಾನವಾಗಿ ತಿನ್ನುತ್ತಿದ್ದ ಪಕ್ಕದವರ ಪೊಟ್ಟಣಗಳ ಮೇಲೆ ಕಣ್ಣು ಹೂತು ಕುಳಿತಿದ್ದರು. ಮತ್ತೊಮ್ಮೆ ಸಾಂಬಶಿವಯ್ಯ ಕೈ ಮೇಲೆತ್ತಿ ಮುಗಿದು, ತಮ್ಮ ಗುರುತಿಗೆ ಮುದ್ರೆ ಒತ್ತಲು ಪ್ರಾರ್ಥಿಸಿಕೊಂಡು ಬಡವರ ಉದ್ಧಾರ ತಮ್ಮ ನಿರಂತರ ನಿರ್ಧಾರವೆಂದು ಸಾರಿ ಸಾರಿ ಹೇಳುತ್ತ ಕಾರಿನತ್ತ ಸಾಗಿದರು.

ಮುಂದೆ ಹತ್ತು ಹಲವು ಹಳ್ಳಿಗಳನ್ನು ಸಂದರ್ಶಿಸಿ ರಾತ್ರಿಯ ವಿಮಾನದಲ್ಲಿ ರಾಜ್ಯದ ತುತ್ತ ತುದಿಯ ಇನ್ನೊಂದು ಭಾಗದಲ್ಲಿಳಿದರು. ಆ ದಿನವೆಲ್ಲ ಬಿಡುವಿಲ್ಲದ ಓಡಾಟ, ಭಾಷಣ; ಹಲವಾರು ಆಶ್ವಾಸನೆಗಳಿಗೆ ಪಂಪೊತ್ತಿ ದೇಶದ ಬೆನ್ನೆಲುಬಾದ ಹಳ್ಳಿಗರಿಗೆ, ತಿಪ್ಪೆವಾಸಿಗರಿಗೆ ರಾತ್ರಿ ಅಕ್ಕಿ, ದುಡ್ಡು, ಹಲವೆಡೆ ವಸ್ತ್ರದಾನವನ್ನೂ ನಡೆಸಿ ಮುಂದಿನ ಯೋಜನೆಗಳತ್ತ ಗಮನ ಹರಿಸಿದರು.

 ಹೋದೆಡೆಯೆಲ್ಲ ಅವರ ಮರೆಯದ ಒಂದೇ ಮಾತು, ಕೊಳಚೆ ಪ್ರದೇಶದ ನಿವಾಸಿಗಳಿಗೆ ನೋಟನ್ನು ಕೈಲಿಡುವಾಗ ‘ನೀವು ಓಟು ಹಾಕದಿದ್ರೆ ನಮಗೆ ತಿಳಿದುಬಿಡತ್ತೆ….. ಆದ್ದರಿಂದ ನೋಟು ತೆಗೆದುಕೊಂಡು ಓಟು ಹಾಕದಿದ್ರೆ ಶಿಕ್ಷೆಗೆ ಒಳಗಾಗ್ತೀರ, ಎಚ್ಚರಿಕೆ’ ಎಂದು ಬೆದರಿಕೆಯ ನುಡಿಗಳನ್ನೂ ಉದುರಿಸುತ್ತಿದ್ದರು. ನೋಟು ನಿಗರುತ್ತಿರುವ ಕೈಗಳ ಮುಂದೆ ಜನರ ಕೈಗಳು ‘ ಓಹೋ….. ನಾವಂಥ ಮೋಸ ಮಾಡಾಕಿಲ್ಲ ಬುದ್ಧಿ’ ಎಂದು ದನಿಗೈಯುತ್ತ  ನೋಟನ್ನು ಹಗುರವಾಗಿ ಕಸಿದು ಜೇಬಿನೊಳಕ್ಕೆ ತುರುಕಿಕೊಂಡವು. ಸಾಂಬಶಿವಯ್ಯನವರ ಪಿ.ಎ. ಎಲ್ಲೆಲ್ಲಿ ತಮಗೆ ಓಟುಗಳು ಖಾತ್ರಿ ಎಂದು ಗುರುತು ಹಾಕಿಕೊಳ್ಳುತ್ತ ನಡೆದಿದ್ದ. ಕೆಲವೆಡೆ ಸಾಂಬಶಿವಯ್ಯನವರ ಪಾದಯಾತ್ರೆಯೂ ನಡೆದಿತ್ತು. ಅವರು ಕಾಲು ಹಾಕಿದ ಕಡೆಯೆಲ್ಲ ಅನ್ನಸಂತರ್ಪಣೆ, ವಸ್ತ್ರದಾನ ಹೇರಳ. ಎಲ್ಲ ಕ್ಷೇತ್ರಗಳಲ್ಲೂ ಭಾಷಣ ಮುಗಿಸಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಓಟುಗಳನ್ನು ಹೊಂದಿಸಿ ಮನೆಗೆ ಹಿಂತಿರುಗುವುದರಲ್ಲಿ ಹದಿನೈದು ದಿನಗಳು ಉರುಳಿದ್ದವು.

ಸೋಮಶೇಖರನೂ ಈ ವೇಳೆಗೆ ಹಲವಾರು ಜಾಗಗಳಿಗೆ ಹೋಗಿ ಬಂದಿದ್ದ. ತಂದೆಯಂತೆಯೇ ಪರಮನಿಷ್ಠನಾಗಿ ದಾನಧರ್ಮ ಸಾಂಗವಾಗಿ ನಡೆಸಿ ಮರಳಿ ಬಂದಿದ್ದ. ಈಗ ಅವನ ಹಿಂದೆ ಅವನ ಪಕ್ಷದ ಅಭ್ಯರ್ಥಿಗಳ ದೊಡ್ಡ ಹಿಂಡೇ ಅಂಟಿಕೊಂಡಿರುತ್ತಿತ್ತು. ಕೊಂಚ ಹೆಚ್ಚು ಕಡಿಮೆಯಾದರೂ ಅವನು ತಂದೆಗೆ ದೂರು ಸಲ್ಲಿಸಿ, ಹೇಳಿ ಮಾಡಿಸುವ ಪರಿಣಾಮಗಳ ಬಿಸಿ ಅವರಲ್ಲಿನ್ನೂ ಹಬೆಯಾಡುತ್ತಿದ್ದುದರಿಂದ ಸಾಂಬಶಿವಯ್ಯನವರಿಗಿಂತ ಇವನ ಮರ್ಜಿ ಕಾಯುವ ಬಾಗಿದ ಬೆನ್ನುಗಳೇ ಅವನ ಹಿಂದೆ ಹೆಚ್ಚಾಗಿದ್ದವು.

ಆಗೀಗ ತಮ್ಮ ಕಡೆಯವರು ತರುತ್ತಿದ್ದ ಕೆಲಸುದ್ದಿಗಳನ್ನು ಕೇಳಿದಾಗ ಸಾಂಬಶಿವಯ್ಯನವರ ಬ್ಲಡ್‍ಪ್ರೆಷರ್ ಹತ್ತಿ ಇಳಿದು ಅವರನ್ನು ಸುಸ್ತುಗೊಳಿಸುತ್ತಿತ್ತು. ವಿರೋಧ ಪಕ್ಷಗಳ ಬಲ ಹೆಚ್ಚಿದೆಯೆಂದು ತಿಳಿದಾಗ ತಂದೆ-ಮಗ ಸೇರಿದಂತೆ ಇಪ್ಪತ್ತೈದು ಆಪ್ತ ಜನರ ಸಭೆ ನಾಲ್ಕೆಂಟು ಬಾರಿ ಸೇರಿತು. ಪರಿಣಾಮವಾಗಿ ತೀವ್ರ ಪ್ರಚಾರ ನಡೆಯಿತು. ನೂರಾರು ರೀತಿಯ ಪೋಸ್ಟರ್, ಬ್ಯಾನರುಗಳು ರಸ್ತೆಗಳಲ್ಲಿ ಗುಡಿ ಗೋಪುರಗಳ ಮೇಲೆ ಹಾರಾಡಿದವು. ಅವರ ಪಕ್ಷದ ಪ್ರಣಾಳಿಕೆಯ ತುತ್ತೂರಿ ಬೀದಿ ಬೀದಿಗಳಲ್ಲಿ ಮೊಳಗಿತು. ಇಷ್ಟಾದರೂ ಸಾಂಬಶಿವಯ್ಯನಿಗೆ ಸಮಾಧಾನವಿರಲಿಲ್ಲ. ಮನಸ್ಸಿನಲ್ಲಿ ಮುಗಿಯದ ದೊಂಬರಾಟ!!…

ವಿರೋಧ ಪಕ್ಷದ ಕೆಲವು ಅಭ್ಯರ್ಥಿಗಳ ಮನೆಗೆ ರಾತ್ರೋರಾತ್ರಿ ಹೋಗಿ ತಮ್ಮ ಪಕ್ಷಕ್ಕೆ ಸೇರಲು ಜೇನು ಮಾತುಗಳಲ್ಲಿ ಒತ್ತಾಯಪಡಿಸಿದರು. ಬಂಗಲೆ, ಕಾರು ತಕ್ಕಡಿಯಲ್ಲಿಟ್ಟರು. ಹಣ ತುಂಬಿದ ಕವರುಗಳನ್ನು ಬಳುಕಾಡಿಸಿ, ಕಡೆಗೂ ಕೆಲವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದಾಗ ಅವರಿಗೆ ಕನಕಾಭಿಷೇಕವಾದಷ್ಟೇ ಸಂತೋಷ. ಮೆದುಳು ಕಂಪ್ಯೂಟರಿನಂತೆ ಕೆಲಸ ಮಾಡಿತು. ವಿರೋಧ ಪಕ್ಷದ ಕಡೆ ಓಟು ಸೂರೆ ಹೋಗುವುದೆಂದು ಕಂಡುಬಂದ ಕಡೆಗಳಲ್ಲಿ ಚತುರೋಪಾಯ ಬಳಸಿ ಅವರ ಓಟು  ಹರಿದು ಹಂಚಿಹೋಗುವಂತೆ ಮತ್ತಷ್ಟು ಜನ ಅಭ್ಯರ್ಥಿಗಳನ್ನು ಅವರೆದುರು  ನಿಲ್ಲಿಸಿದಾಗ ಅವರಲ್ಲಿ ವಿಶೇಷ ಆನಂದ ಕೆನೆಗುಟ್ಟುತ್ತಿತ್ತು. ತಮ್ಮ ಸುತ್ತ ಹುತ್ತಗಟ್ಟುವ ವರದಿಗಾರರೊಡನೆ ಮಾತಾಡುತ್ತ ತಮ್ಮ ಪಕ್ಷದ ಉದಾತ್ತ ಗುರಿ-ಸಂದೇಶಗಳನ್ನು, ಪ್ರಣಾಳಿಕೆ-ಆಶ್ವಾಸನೆಗಳನ್ನು ಉರು ಒಪ್ಪಿಸುವಂತೆ ಟೇಪ್ ಬಿಚ್ಚಿ, ಫೋಟೋಗೆ ಪೋಸ್‍ಗಳನ್ನು ಕೊಡುವುದರಲ್ಲಿ ಸಾಂಬಶಿವಯ್ಯ ನಿರತರಾಗಿದ್ದರು. ಆದರೂ ಬೆಳಗೆದ್ದರೆ ಪತ್ರಿಕೆ ಸಾರುವ ಎದೆಹಾರಿಸುವ ಹಲವು ಸುದ್ದಿಗಳನ್ನು ಓದಿದಾಗ ತಾವು ಹರಿಸುತ್ತಿರುವ ಹಣದ ಹೊಳೆ ವ್ಯರ್ಥವೇ ಎಂಬ ದುಗುಡ, ಭೀತಿ ಅವರನ್ನು ಅಪ್ಪಳಿಸುತ್ತಿತ್ತು. ಕೂಡಲೇ ತಮ್ಮ ಪಕ್ಷದ ಅಭ್ಯರ್ಥಿಗಳ ತುರ್ತುಸಭೆ ಸೇರಿಸಿ ಸಮಾಲೋಚಿಸಿದರು. ಜನರ ವಿಶ್ವಾಸ ಗಳಿಸುವ ಯೋಚನೆಗಳನ್ನು ಶೋಧಿಸಿದರು.

ಆ ದಿನ-ಬೆಳಗಿನ ಜಾವ ಪತ್ರಿಕೆ ಓದಿದವರೆಲ್ಲ ‘ಹಾಂ.. ಅಯ್ಯೋ ಹೀಗೂ ಉಂಟೇ?’’ ಎಂದು ಉದ್ಗರಿಸಿದರು. ಅವರ ಮನಸ್ಸುಗಳು ಕುದಿಯಿತು..ಅನುಕಂಪದಿಂದ ಕದಲಿದವು. ಇದುವರೆಗೂ ವಿರೋಧ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದವರೆಲ್ಲ ಸರಕ್ಕನೆ ಸಾಂಬಶಿವಯ್ಯನ ಪಕ್ಷಕ್ಕೆ ವಾಲಿದರು, ಜೋತುಬಿದ್ದರು.

‘ರಾತ್ರಿ ಹನ್ನೊಂದು ಗಂಟೆಯ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಾಂಬಶಿವಯ್ಯನವರ ಮಗ ಸೋಮಶೇಖರ ಅವರನ್ನು ಕೊಲ್ಲುವ ಪ್ರಯತ್ನ…. ಕೊಲೆಗಡುಕರು ಪರಾರಿಯಾಗಿದ್ದಾರೆ. ಸೋಮಶೇಖರ್ ಸ್ಪಲ್ಪದಲ್ಲಿ ಪ್ರಾಣಾಪಾಯದಿಂದ ಪಾರಾದರು’

ಲೌಕಿಕವಾದ ಕ್ಷಣಿಕ ಲಾಭದ ಚುನಾವಣೆಯ ಕಣದಲ್ಲಿ ಗೆಲುವಿನ ಅಧಿಕಾರ ಲಾಲಸೆಯಿಂದ ಕೆಲ ವಿರೋಧಪಕ್ಷಗಳು ತಮ್ಮ ಮಗನ ಪ್ರಾಣಕ್ಕೇ  ಸಂಚಕಾರ ತರಲೆತ್ನಿಸಿದ ಹೀನ ಹಿಂಸಾಕೃತ್ಯವನ್ನು ಸಾಂಬಶಿವಯ್ಯ ಬಗೆಬಗೆಯಾಗಿ ಖಂಡಿಸಿದರು , ರಂಗುರಂಗಾಗಿ ಪತ್ರಿಕೆಗೆ ಹೇಳಿಕೆಯಿತ್ತರು. ಶೀಘ್ರದಲ್ಲೇ ಪತ್ರದ ಮೇಲೆ ಪತ್ರದ ಅನುಕಂಪದ ಅಭ್ಯಂಜನ ಯಥೇಚ್ಛವಾಗಿ, ತಮ್ಮ ಪಕ್ಕಕ್ಕೆ ಸೇರ್ಪಡೆಯಾದವರ ಸಂಖ್ಯೆ ಕೇಳಿ ಸಂತೋಷ ಸಾಗರದಲ್ಲಿ ವಿಹರಿಸುತ್ತಿದ್ದ ಸಾಂಬಶಿವಯ್ಯನವರಿಗೆ ಒಮ್ಮೆಲೇ ಆಘಾತ ಉಂಟಾಯಿತು.  ಒಮ್ಮೆಲೆ ತೂರಿ ಬಂದ ಕೆಲವು ಹೊಸ ಸುದ್ದಿಗಳು ನೀರಿನಲ್ಲಿ ಒತ್ತಡಗಟ್ಟಿ ಮುಳುಗಿಸಿದಂತೆ ಮಾಡಿದಾಗ ಅವರ ಉಸಿರು ಜೀಕಾಡಿದಂತಾಯಿತು…ಭಯವಿಹ್ವಲರಾದರು.

ಆ ಕೊಲೆಯ ಸುದ್ದಿ ಹರಡಿದ ದಿನ- ಸಾಂಬಶಿವಯ್ಯನವರ ಮನೆಯ ಬಾಗಿಲುಗಳಿಂದ ಸೋರಿಹೋಗುತ್ತಿದ್ದ ಪತ್ರಕರ್ತರ ದಂಡಿನಲೊಬ್ಬ, ಕುತೂಹಲದಿಂದ ಕಣ್ಣು ಪಿಳುಕಿಸುತ್ತ ಗೋಡೆಗೆ ಒರಗಿ ನಿಂತಿದ್ದ ಶಂಕರನನ್ನೂ ಕೆದಕಿ ಹೋಗದೆ ಇರಲಿಲ್ಲ. ಅಂದಿನ ರಾತ್ರಿ ಮನೆಬಿಟ್ಟೇ ಹೊರಟಿರದ ಸೋಮಶೇಖರನ ಕೊಲೆಯ ಕಥೆ ಕೇಳಿ ಶಂಕರನಿಗೆ ಎದೆ ಹಾರಿಹೋಗುವ  ಆಶ್ಚರ್ಯದೊಡನೆ ಏನೂ ಸ್ಪಷ್ಟವಾಗಿ ಅರ್ಥವಾಗದೆ ಗಲಿಬಿಲಿಯಾಯಿತು. ಹಾಗೇ ಬಾಯಿ ಕೂಡ ಬಿಟ್ಟೇ ಬಿಟ್ಟೆ…. ಬೆಳಗಾಗಲಿಕ್ಕಿಲ್ಲ ಅವನ ಮಾತುಗಳು  ಅಕ್ಷರಗಳಾಗಿದ್ದವು.

‘ಸೋಮಶೇಖರನ ಕೊಲೆ ಪ್ರಕರಣ ಸುಳ್ಳು. ಸ್ವತಃ ಅವರ ಮನೆಯ ಅಡಿಗೆಯಾಳು ಶಂಕರನಿಂದ ಹೇಳಿಕೆ…..’

ತಮ್ಮ ಗುಟ್ಟು ತೆರೆದುಕೊಂಡದ್ದನ್ನು ಕಂಡು ಸಾಂಬಶಿವಯ್ಯ ಕ್ರೋಧಪರ್ವತವಾಗಿ ಮನೆಯೊಳಗೆ ನುಗ್ಗಿ ಶಂಕರನ  ಕುತ್ತಿಗೆ ಹಿಡಿದು ದರದರ ಎಳೆದು ಒದ್ದು ಬೀದಿಗೆ ಹಾಕಿದರು. ಆಗ ಉಳಿದ ಆಳುಗಳು ಅವನನ್ನು ಬಿಡಿಸಿಕೊಳ್ಳದೇ ಇದ್ದಿದ್ದರೆ ಶಂಕರನ ಉಸಿರು ಗಾಳಿಯೊಡನೆ ಹೊಸೆದು ಹೋಗುತ್ತಿತ್ತು.

 ಉಗಿಯಂತ್ರದಂತೆ ಭುಸುಗುಟ್ಟುತ್ತ ಸಾಂಬಶಿವಯ್ಯ ಒಂದೇ ಸಮನೆ ಕೋಣೆಯಲ್ಲಿ ಶತಪಥ ಹಾಕಿದರು. ತಲೆ ಗೊಬ್ಬರವಾಗಿ ಹೋಗಿತ್ತು. ಅವಮಾನ  ಕಿತ್ತು ತಿನ್ನುತ್ತಿತ್ತು.  ಏನು ಮಾಡಿದರೂ, ಎಷ್ಟು ಯೋಚಿಸಿದರೂ ಒಳಗೆ ಉಬ್ಬಿ ಹೊರಳುತ್ತಿದ್ದ ಯೋಚನೆಗಳು ಶಾಂತವಾಗಲಿಲ್ಲ. ಪಟ್ಟಕ್ಕೆ ಮೇಲೇರುತ್ತಿದ್ದ ಏಣಿಯನ್ನು ಜರ್ರನೆ ಜಾರಿಸಿದಂತಾಗಿ ಮುಗ್ಗರಿಸಿ ಮೂತಿ ಒಡೆದುಕೊಂಡವರಂತೆ ಕೆಂಪು ತುಳುಕುತ್ತಿದ್ದ ಮುಖವನ್ನು ದುಮ್ಮಿಸಿ ಕುಳಿತಿದ್ದರು.

 ಇತ್ತ ವಿರೋಧಪಕ್ಷದವರು ಬೊಬ್ಬಿರಿದರು. ತಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಯತ್ನ,  ಅಪಪ್ರಚಾರದ ಅಸ್ತ್ರ ಈ ಪ್ರಕರಣ ಎಂದು ವಿರೋಧ ಪಕ್ಷಗಳು ಅಬ್ಬರಿಸತೊಡಗಿದಾಗ, ಸಾಂಬಶಿವಯ್ಯ ಬಹಿರಂಗ ಸಭೆಗಳಲ್ಲಿ ತಮ್ಮ ಮಗನ ಕೊಲೆಯ ಯತ್ನ ನಿಜವೆಂದು ಆಣೆ ಮಾಡಿ ಹೇಳಿ, ಕಣ್ಣಲ್ಲಿ ನೀರು ತುಂಬಿಸಿಕೊಂಡು, ಗದ್ಗದಿತರಾಗಿ ಸಾರಿ ಸಾರಿ ಹೇಳಿದರೂ ಜನ ನಂಬಲಿಲ್ಲ. ನಾಲ್ಕಾರು ಕಡೆಗಳಲ್ಲಿ ವಿರೋಧಿಗಳು, ಅವರ ಕಾರನ್ನು ಪ್ರಚಾರಕ್ಕೆ ಎಡೆಗೊಡದಂತೆ ತಡೆದಾಗ, ಸಾಂಬಶಿವಯ್ಯ ಮನೆಯೊಳಗೆ ರೋಷದಿಂದ ಹುಲಿಯಂತೆ ಅಬ್ಬರಿಸಿ ಎಗರಾಡಿದರೂ, ಭಾಷಣದ ವೇದಿಕೆಯಲ್ಲಿ ವಿನಯಮೂರ್ತಿಯಾಗಿ ಮುಖ್ಯಪ್ರಾಣನಂತೆ  ಕೈ ಜೋಡಿಸಿ ನಿಂತು ಭರವಸೆಯ ನುಡಿಗಳ ಸೇಸೆಯನ್ನಿಟ್ಟರು. ಮುಖಭಾವವನ್ನು ಆರ್ದ್ರಗೊಳಿಸಿ, ಮೃದುವಾಗಿ ಓಟು ಬೇಡಿದರು….ಜನ ಮೆತ್ತಗಾದರು…ವಿರೋಧದ ದನಿಗಳು ಕ್ಷೀಣವಾದವು.  ಸಾವಧಾನವಾಗಿದ್ದ ಸಭೆಯನ್ನು ಕಂಡು ಅವರ ಮನದೊಳಗೆ ಭರವಸೆ ಮೊಳೆಯತೊಡಗಿತು. ಸಂತುಷ್ಟರಾಗಿ ಶಿರಬಾಗಿ ವಂದಿಸಿ, ಪೀಠದಿಂದೆದ್ದು ಹೊರಟಾಗ, ಜನ ಸಮುದಾಯದೊಳಗಿಂದ ನಾಲ್ಕೆಂಟು ದನಿಗಳು  ವಿರೋಧ ಪಕ್ಷಕ್ಕೆ ಜೈಕಾರವೆಬ್ಬಿಸಿತು. ತತ್‍ಕ್ಷಣ ಅವರ ಮುಖ ಕಪ್ಪಿಟ್ಟರೂ, ಅದನ್ನು ತೋರಗೊಡದೆ ಹುಸಿ ನಗುವಿನಲೆ ಉಕ್ಕಿಸುತ್ತ , ಸರಸರನೆ ಕಾರನ್ನೇರಿ ಭುರ್ರನೆ ಕಾರನ್ನು ಓಡಿಸಲು ಡ್ರೈವರ್ ಗೆ ಅವಸರಿಸಿದರು.

ತಾವು ಕೈ ಹಾಕಿದ ಪ್ರಯತ್ನಗಳು ಎಲ್ಲೆಡೆ ಹಾಸ್ಯಾಸ್ಪದವಾದಾಗ ಸಾಂಬಶಿವಯ್ಯನವರಿಗೆ ಎಲ್ಲರೆದುರು ಎಕ್ಕಡದಲ್ಲಿ ಏಟು ತಿಂದಷ್ಟು ಅವಮಾನ-ಅಪಮಾನ. ಅಂತರಂಗ ಸಭೆಯಲ್ಲಿ ಸಿಂಹದಂತೆ ಗರ್ಜಿಸಿ ಕುದ್ದರು. ತಾವು ಏನೋ ಮಾಡಲು ಹೊರಟು ಏನೋ ಆಯಿತೆಂದು ಮಮ್ಮಲ ಮರುಗಿ ಬೇರೆ ಉಪಾಯದ ಎಡೆಬಿಡದ ಚಿಂತನೆಯಲ್ಲಿ ತೊಡಗಿದರು. ವಿರೋಧ ಪಕ್ಷಗಳ ಮೇಲೆ ಬಲವಾದ ಮಸಿ ಬಳಿಯಬೇಕೆಂದು ಛಲ ಹುಟ್ಟಿದ್ದರೂ ಭವಿಷ್ಯದ ಚಿಂತೆ ಅವರ ಬುದ್ಧಿಯನ್ನು ಪಾಳುಗೆಡವಿತು. ದಿನ ದಿನಕ್ಕೇಳುತ್ತಿದ್ದ ಗಲಭೆಗಳು ಅವರಿಗೆ ಆಸನಕಂಪನವನ್ನುಂಟು ಮಾಡಿದವು. ದೀರ್ಘಕಾಲ ತಾವು ಅನುಭವಿಸಿಕೊಂಡು ಬಂದ ಗದ್ದುಗೆಯಿಂದ ಉಚ್ಛಾಟನೆಯಾದಂಥ ದುಸ್ವಪ್ನಗಳಾಗಿ ಅವರ ಧೃತಿಗೆಟ್ಟಿತು… ಮೈ ಕಂಪಿಸಿತು…. ಚುನಾವಣೆಯ ದಿನ ಸಮೀಪಿಸುತ್ತಿದಂತೆ ಅವರ ಜೀವ ಮೆತ್ತಗಾಗಿ ತಮ್ಮ ಅಧಿಕಾರ ಪರಭಾರೆಯಾಗುವ ದಿನಗಳು  ಹತ್ತಿರವಾದಂತೆ ಪ್ರಾಣ ತುಯ್ದಾಡಿತು. ಏನೇ ಆದರೂ ಪದವಿ ಬಿಟ್ಟುಕೊಡಬಾರದಂತೆ ಛಲ, ದರ್ಪ ತಲೆ ಸೆಟಿಸಿದರೆ, ಅನಿರ್ದಿಷ್ಟ ಭವಿಷ್ಯದ ಅನುಮಾನದ ಕುಡಿ ಹೊಯ್ದಾಡುತ್ತಲೇ ಇತ್ತು. ಆದರೂ ಬಿಡುವಿರದ ಪಕ್ಷದ ಪ್ರಚಾರಕಾರ್ಯ ಅದರ ಪಾಡಿಗೆ ಅದು ನಡೆಯುತ್ತಿತ್ತು.

ಚುನಾವಣೆ ಸರಿಯಾಗಿ ಇನ್ನೊಂದು ವಾರ ಇದೆ ಎನ್ನುವಾಗ ಹಿಂದೆ ಸೋಮಶೇಖರನ ಕೊಲೆಯ ಪ್ರಕರಣ ಎಂದು ಹೆಸರು ಮಾಡಿದ್ದ ಘಟನೆ ನಿಜಕ್ಕೂ ಸಂಭವಿಸಿಯೇ ಬಿಟ್ಟಿತ್ತು!!…. ಪತ್ರಿಕೆಯ ಮುಖಪುಟದಲ್ಲಿ ಕಣು ತಿವಿಯುವ ಅಕ್ಷರಗಳಲ್ಲಿ ‘ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶ್ರೀ ಸೋಮಶೇಖರ್ ಅವರನ್ನು ವಿರೋಧ ಪಕ್ಷದವರು ಗುಂಡಿಟ್ಟು ಕೊಂದಿದ್ದಾರೆ. ಅಪರಾಧಿ ಪತ್ತೆಯಾಗಿಲ್ಲ’ ಎಂದು ವರದಿಯಾಗಿತ್ತು.

ಸುದ್ದಿ ತಿಳಿದ ಸಾಂಬಶಿವಯ್ಯ ತಲ್ಲಣಿಸಿ ಹೋದರು!!…ಹೌಹಾರಿ ಕೊಲೆ ನಡೆದ ಜಾಗಕ್ಕೆ ಧಾವಿಸಿ ಮಗನ ಶವವನ್ನು ಕಾಣುತ್ತಿದ್ದ ಹಾಗೆ ಜ್ಞಾನ ತಪ್ಪಿಬಿದ್ದರು. ನಿಧಾನವಾಗಿ ಎಚ್ಚರವಾಗುತ್ತಿದ್ದಂತೆ ಮಗನ ಮೇಲೆ ಬಿದ್ದು ಎದೆ ಚಚ್ಚಿಕೊಂಡು ಗೋಳಾಡಿದರು. ಹದಿನಾರು ವರುಷಗಳ ಕೆಳಗೆ ಪತ್ನಿಯನ್ನು ಕಳೆದುಕೊಂಡು ದೆವ್ವದಂಥ ಮನೆಗೆಲ್ಲ ತಂದೆ-ಮಗ ಇಬ್ಬರೇ. ಹೆಣ್ಣೆಂಬ ಹೆಣ್ಣೇ ಇರದ ಶೂನ್ಯದ ಮನೆಯಲ್ಲಿ ಏಕೈಕ ವಂಶೋದ್ಧಾರಕನಾದ ಮಗನಿಗೆ ಮದುವೆ ಮಾಡುವ ತಮ್ಮ ಅನಂತ ಕನಸುಗಳನ್ನು, ಮೊಮ್ಮಕ್ಕಳನ್ನು ಆಡಿಸುವ ಬಯಕೆಗಳನ್ನು ನೆನೆನೆನೆದು ದುಃಖಿಸಿದರು. ಜೀವನ ಶೂನ್ಯವಾದಂತೆ ಅಪಾರವಾಗಿ ಶೋಕಿಸಿದರು.

ನಿಷ್ಕರುಣಿಯೆಂಬಂತೆ ಚುನಾವಣೆ ಅದರ ಪಾಡಿಗೆ ಅದು ನಡೆಯಿತು. ಮತಿವಿಭ್ರಮರಂತೆ ಅತೀವ ಶೋಕಿಸುತ್ತ ಕುಳಿತ ಸಾಂಬಶಿವಯ್ಯನ ಭಾವಚಿತ್ರವನ್ನು ಎಲ್ಲ ಪತ್ರಿಕೆಗಳೂ ಪ್ರಕಟಿಸಿದವು. ಸಾಂಬಶಿವಯ್ಯ ಯಾವುದಕ್ಕೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಚುನಾವಣೆಯ ದಿನ ಅವರನ್ನು ಯಾವ ಆಸಕ್ತಿ, ಆತಂಕಗಳೂ ಮುತ್ತಲಿಲ್ಲ. ಕಣ್ಣೀರುಗರೆಯುತ್ತ ಬಂಗಲೆಯಲ್ಲಿಯೇ ಕಲ್ಲಿನಂತೆ ಕುಳಿತಿದ್ದರು. ರೇಡಿಯೋ ಫಲಿತಾಂಶ ಪ್ರಕಟಿಸಿದಾಗ ಅವರಿಗೆ ಒಂದೆಡೆ ಸಂತೋಷದ  ಸೋನೆಯೊಡನೆ ದುಃಖದ ಇರುಚಲು ಬಡಿಯಿತು.

ಕೊನೆಗೆ ಅವರ ಪಕ್ಷಕ್ಷೇ ವಿಜಯಲಕ್ಷ್ಮೀ ಒಲಿದಿದ್ದಳು!!!… ಸುರಿಮಳೆಯಾದ ವಿಜಯಮಾಲೆಗಳು ಕೊರಳನ್ನು ಅಮುಕಿದ್ದವು. ಸರ್ವ ಸದಸ್ಯರ ಆಯ್ಕೆಯಂತೆ ಸಾಂಬಶಿವಯ್ಯನವರು ಹಗಲಿರುಳು ಹಂಬಲಿಸಿದ್ದ ಗದ್ದುಗೆ ಏರಿದ ವೈಭವೋಪೇತ ಮಹೋತ್ಸವದಲ್ಲಿ ಅವರ ಕಣ್ಣುಗಳಿಂದ ದಳದಳನೆ ಆನಂದಬಾಷ್ಪ ಉದುರಿದವು.

 ಕಣ್ಣಂಚಿನ ಬಿಸಿ ಹನಿಗಳೆರಡು ತಮ್ಮ ತೀರದ ಅಧಿಕಾರಲಾಲಸೆಯನ್ನು ಅಣಕಿಸಿದವು. ತಾವು ಮಗನ ಶವದ ಮೇಲೆ ಕುಳಿತು ದುರ್ಬಾರು ನಡೆಸುತ್ತಿರುವಂತೆ ಭಾಸವಾಗಿ, ಕುಳಿತ ಆಸನ ಅವರಿಗೆ ಮುಳ್ಳಂತೆ ಒತ್ತತೊಡಗಿತು.

                           ***********************************

Related posts

ಹೀಗೊಂದು ಸ್ವಗತ

YK Sandhya Sharma

ಹಾವಸೆ

YK Sandhya Sharma

ಎಣಿಕೆ

YK Sandhya Sharma

Leave a Comment

This site uses Akismet to reduce spam. Learn how your comment data is processed.