ಅಯ್ಯಯ್ಯೋ ಕಣ್ಣು ಕತ್ಲೆ ಬಂತು… ಬಂದೇ ಬಿಡ್ತು… ಬೇಗ ಹಾಸಿಗೆ ಮೇಲೆ ಕೂಡಿಸ್ರೇ, ಏ ಹೇಮಾ… ಪ್ರಭಾ… ಸುಧಾ…ಲತಾ’
-ಎನ್ನುತ್ತ ಸೀತಮ್ಮ ಸಹಸ್ರನಾಮವನ್ನು, ಒಟ್ಟಿಗೆ ಉಚ್ಚರಿಸುವಂತೆ ಉದ್ದಕ್ಕೆ ಹೆಸರಿನ ಪಟ್ಟಿಯನ್ನು ಉಸರುತ್ತ ಧಡಕ್ಕನೆ ಕುಕ್ಕರಿಸಿದರು. ಇಬ್ಬದಿಯಲ್ಲಿ ಆಕೆಯ ತೋಳುಗಳನ್ನು ಹಿಡಿದುಕೊಂಡಿದ್ದ ಪ್ರಭಾ-ಹೇಮಾ ಕೂಡ ಅವರ ಭಾರದ ಎಳೆತಕ್ಕೆ ಹಾಸಿಗೆಯ ಮೇಲೇ ಕವುಚಿ ಬಿದ್ದರು.
ಗಾಬರಿಯಿಂದ ಹಣೆಯ ಮೇಲೆ ಬೆವರು ಹನಿಯನ್ನು ಉಕ್ಕಿಸಿಕೊಂಡು ಮೂಲೆಯಲ್ಲಿ ನಿಂತಿದ್ದ ಸುಧಾ-ಲತಾ ಗಂಭೀರ ಸನ್ನಿವೇಶದಲ್ಲೂ ಎದುರಿನ ದೃಶ್ಯ ಕಂಡು ನಗು ತಡಯಲಾರದೆ ಸೆರಗನ್ನು ಬಾಯಿಗೆ ತುರುಕಿಕೊಂಡರು.
ಸಾವರಿಸಿಕೊಳ್ಳುತ್ತ ಮೇಲೆದ್ದ ಹೇಮಾ-ಪ್ರಭಾ ಸೊಂಟ ನೀವಿಕೊಳ್ಳುತ್ತ ಮುಖದ ಮೇಲೆ ಕಿಕ್ಕಿರಿದ ಬೆವರ ಬಿಂದುಗಳನ್ನು ಚಿಮ್ಮಿ, ಹಣೆಯ ಮೇಲೆ ಸುಕ್ಕು ಹೆಣೆದುಕೊಂಡು ನಿಟ್ಟುಸಿರು ಬಿಟ್ಟರು.
‘ಅಯ್ಯೋ, ಏನಪ್ಪ ಗತಿ ದೇವ್ರ್ರೇ…ಎದೆ ತುಂಬ ನೋಯ್ತಿದೆಯಲ್ಲಾ!’
ಅತ್ತೆಯ ಆರ್ಭಟ, ಹಾರಾಟ ಕಂಡು, ಮೂಲೆಯಲ್ಲಿ ನಿಂತಿದ್ದ ಸುಧಾ-ಲತಾ, ‘ಏನಾಗ್ತಿದೆ ಅತ್ತೆ?’ ಅಂತ ಜೋಡಿ ರಾಗ ಎಳೆಯುತ್ತ ಆಕೆಯ ಎದೆಯನ್ನು ಒಬ್ಬರು, ತಲೆ ಒಬ್ಬರು ನೇವರಿಸಲು ಪ್ರಾರಂಭಿಸಿದರು. ‘ಉಸ್ಸಪ್ಪ’ ಸೀತಮ್ಮ ಹೆಬ್ಬಾವಿನ ರೀತಿ ಭುಸುಗುಟ್ಟುವ ಉಸಿರನ್ನು ಊದಿ ‘ಏನೇನೋ ಆಗ್ತಿದೆ ಹೇಳಕ್ಕಾಗ್ತಿಲ್ಲ…ಎದೆ, ಹೊಟ್ಟೆ ತುಂಬ ಸಂಕಟ’ ಎನ್ನುತ್ತ ರಿವರಿವನೆ ಮಿಸುಕಾಡಿದರು.
‘ಬೇಗ್ಹೋಗಿ ಡಾಕ್ಟರನ್ನ ಕರ್ಕೊಂಡು ಬಾ ಲತಾ’ ಎಂದು ಹೇಮಾ, ಕುಳಿತಿದ್ದ ಅತ್ತೆಯನ್ನು ಹಾಸಿಗೆಯ ಮೇಲೆ ಮಲಗಿಸಿ, ಕೂಡಲೆ ಬೀಸಣಿಗೆ ಹಿಡಿದು ಮೆಲ್ಲನೆ ಗಾಳಿ ಹಾಕತೊಡಗಿದಳು ಮೇಲೆ ಫ್ಯಾನ್ ಸಣ್ಣನೆ ತಿರುಗುತ್ತಿದ್ದರೂ. ಪ್ರಭಾ ಗ್ಲೂಕೋಸ್ ನೀರನ್ನು ನಿಧಾನವಾಗಿ ಅತ್ತೆಯ ಬಾಯಿ ಅಗಲಿಸಿ ಕುಡಿಸಿದಳು.
ಉಳಿದಿಬ್ಬರು ಸೊಸೆಯರು ಓಡಿ ಹೋಗಿ ಡಾಕ್ಟರ್, ನರ್ಸ್‍ನ್ನು ಬೇಗ ಕರೆತಂದರು. ಡಾಕ್ಟರ್ ಸೀತಮ್ಮನ ಬ್ಲಡ್‍ಪ್ರೆಷರ್ರು, ಹಾರ್ಟ್ ಬೀಟ್ಸ್ ಪರೀಕ್ಷಿಸಿ, ‘ಏನ್ರಮ್ಮ ಸುಮ್ನೆ ಗಾಬ್ರಿಪಡಿಸ್ತೀರಾ…ನಿಮಗೇನಾಗಿಲ್ಲ ಧೈರ್ಯವಾಗಿರಿ…”ಎಂದು, ಡಾಕ್ಟರ್ ಹುಬ್ಬುಗಂಟಿಕ್ಕಿ, ಅಸಹನೆಯ ದನಿಯಲ್ಲಿ ನುಡಿದು ಗೊಣಗುತ್ತ ಹೊರಗೆ ನಡದೇಬಿಟ್ಟರು.
‘ನೀವು ಡಾಕ್ಟರುಗಳೆಲ್ಲ ಇಷ್ಟೇನ್ರಪ್ಪ ನಂಗೊತ್ತು…ನಾವು ಹೆದರ್ತೀವೀಂತ ಸುಮ್ನೆ ಸಮಾಧಾನ ಹೇಳಿ ಎಲ್ಲ ಮುಚ್ಚಿಡ್ತೀರಿ…ಕಡೇಲಿ ಅನುಭವಿಸೋರು ನಾವು ತಾನೇ? ನಮ್ಮ ಕಷ್ಟ ನಂಗೊತ್ತು…ನಿಮಗೆಲ್ಲ ಲಘುವೇ…ಎಲ್ಲರೂ ಮದ್ವೆಯಾಗಿ ಹಾಯಾಗಿದ್ದಾರೆ…ಎಲ್ಲರಿಗೂ ಅವರವರದೇ ಲೋಕ, ಬದುಕು…ನಮ್ಮನ್ಯಾರು ಕೇಳ್ಬೇಕು?… ನಾವ್ಯಾರಿಗೂ ಬೇಡ…ನಾವಿದ್ರೂ ಒಂದೇ…’ ಸೀತಮ್ಮ ಮುಂದಿನ ಮಾತುಗಳನ್ನು ಆಡುವ ಮೊದಲೇ ಗೋಳೋ ಎಂದು ಅಳಲು ಪ್ರಾರಂಭಿಸಿದರು.
ಸುತ್ತ ನಿಂತಿದ್ದ ನಾಲ್ಕು ಜನ ಸೊಸೆಯರೂ ಒಮ್ಮೆಲೆ ಗಾಬರಿಗೊಂಡರು. ಅಷ್ಟು ಹೊತ್ತಿಗೆ ಸರಿಯಾಗಿ ಬಾಗಿಲಿಗೆ ಬಂದಿದ್ದ ರಾಮಚಂದ್ರಯ್ಯ, ಒಳಗಿನ ದೃಶ್ಯ ಕಂಡು ಹೆಂಡತಿ ಬಳಿ ಧಾವಿಸಿ,- ‘ಏನಾಯ್ತು ಸೀತೂ…ಯಾಕಳ್ತಿದ್ದೀ?… ಅಳ್ಬೇಡ, ಅತ್ರೆ ನಿನ್ನ ಮೈಗೆ ಆಗಲ್ಲ, ನೀನು ಮೊದ್ಲು ಹುಷಾರಾಗಿ ಮನೆಗೆ ಬಾ. ಅಷ್ಟೇ ಸಾಕು…ಏನೇನೋ ಯೋಚಿಸ್ಬೇಡ…ನೀನು ನಮ್ಮೆಲ್ಲರಿಗೂ ಬೇಕು ಕಣೇ’ ಎನ್ನುತ್ತ ಹೆಂಡತಿಯ ಕಣ್ಣೊರೆಸಿ, ಮಗುವನ್ನು ಸಾಂತ್ವನಿಸುವಂತೆ ಸಮಾಧಾನಪಡಿಸುತ್ತ, ‘ಅಲ್ವೇನ್ರಮ್ಮ?’ ಎಂದು ಸೊಸೆಯರತ್ತ ತಿರುಗಿದರು.
ಸಪ್ಪಗೆ ನಿಂತಿದ್ದ ನಾಲ್ವರೂ ಬೆಪ್ಪುಬೆಪ್ಪಾಗಿ ಹೌದೆಂದು ತಲೆಯಾಡಿಸಿದ ಮೇಲೆಯೇ ಸೀತಮ್ಮನಿಗೆ ಕೊಂಚ ಸಮಾಧಾನ, ಎಲ್ಲರನ್ನೂ ಪರೀಕ್ಷಾತ್ಮಕವಾಗಿ ದಿಟ್ಟಿಸಿದರು. ಕೊಂಚ ಕೀಟಲೆಯ ಸ್ವಭಾವದ ಲತಾಳಿಗೆ ಗಾಡ್‍ಪ್ರಾಮಿಸ್ ಎಂದು ತನ್ನ ಕೊರಳು ಮುಟ್ಟಿ ಕೊಂಡು ಅವರಿಗೆ ನಂಬಿಕೆ ಸೂಚಿಸುವ ಎನಿಸಿದರೂ ಮಾವನವರ ಮುಂದೆ ತಮಾಷೆ ಬೇಡವೆಂದು ಗಾಂಭೀರ್ಯ ನಟಿಸಿದಳು.
ರಾಮಚಂದ್ರಯ್ಯ ಮನೆಯಿಂದ ತಂದಿದ್ದ ಟಿಫಿನ್ ಕ್ಯಾರಿಯರ್ ಬಿಚ್ಚಿ, ಕಟ್ಟು, ಅನ್ನ, ಮಜ್ಜಿಗೆಯನ್ನವನ್ನು ತಟ್ಟೆಗೆ ಹಾಕಿ ಅತ್ತೆಯ ಕೈಗಿತ್ತಳು ಸುಧಾ.
ರುಚಿಕಟ್ಟಾದ ಅಡುಗೆ ಉಂಡು ಅಭ್ಯಾಸವಿದ್ದ ಸೀತಮ್ಮನ ನಾಲಗೆ ಮೊಂಡು ಮಾಡಿತು. ‘ನನಗೊಳ್ಳೆ ಗ್ರಾಚಾರ ಇದು. ಕೆಟ್ಟ ಪಥ್ಯದೂಟ ಯಾರಿಗೆ ಬೇಕು?’ ಸೀತಮ್ಮನ ಗೊಣಗು ಯಾರ ಗಮನವನ್ನೂ ಸೆಳೆಯಲಿಲ್ಲ. ಪ್ರಭಾ ಆಕೆಯ ಕಾಲ ಕೆಳಗೆ ಬಿದ್ದದ್ದ ಕಂಬಳಿಕುಪ್ಪೆಯನ್ನು ಸರಿಪಡಿಸಿ ತಟ್ಟೆ ತೊಳೆದುಕೊಂಡು ಬರಲು ಎದ್ದು ಹೋದಳು.
ಕೋಣೆಯ ತುಂಬ ಇಟ್ಟಾಡುತ್ತಿದ್ದ ಸದ್ದು ಒಮ್ಮೆಲೆ ಮಾಯವಾಗಿ ನಿಶ್ಯಬ್ದವಾಯಿತು. ಹೆಂಡತಿ ಗೊರಕೆ ಹೊಡೆಯಲು ತೊಡಗಿದ ತಕ್ಷಣ ರಾಮಚಂದ್ರಯ್ಯ ಮೇಲೆದ್ದು, ‘ನಾನಿನ್ನು ಮನೆಗೆ ಹೋಗ್ತೀನಿ…ರಾತ್ರಿ ನೀವೆಲ್ಲ ಇರ್ತಿರಲ್ಲ,….ಹುಷಾರಾಗಿ ನೋಡ್ಕೊಳ್ಳಿ’ ಎಂದು ಎಚ್ಚರಿಸಿ ಮನೆಗೆ ಹೊರಟರು.
ಸೀತಮ್ಮನದು ತುಂಬ ಗಾಬರಿ-ಗಡಿಬಿಡಿ-ಆತಂಕದ ಸ್ವಭಾವ. ಒಂದು ನಿಮಿಷ ಕೂತ ಜಾಗದಲ್ಲಿ ಕೂತಿರುವುದಿಲ್ಲ. ಮನಸ್ಸು ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ಪಟಪಟ ಏನಾದರೂ ಮಾತೋ ಗೊಣಗೋ ನಡೆದೇ ಇರಬೇಕು. ಕೆಲಸ ಮಾಡುವಾಗಲೂ ತುಟಿಗಳು ಹಾಯಿಪಟದಂತೆ ಸದಾ ಅಲ್ಲಾಡುತ್ತಲೇ ಇರುತ್ತವೆ.
‘ಹೂಂ, ಅನ್ನ ಆಯ್ತು…ಬೇಳೆ ಬೆಂದಿದೆ…ಈಗ ಹುಳಿ ಕಿವುಚಿ, ಉಪ್ಪುಕಾರ ಕುದಿಸ್ಬೇಕು…ಹಾಲು ಉಕ್ತಿದೆ, ಇಳಿಸ್ಬೇಕು…ಅಯ್ಯೋ ಅಂದ್ಹಾಗೆ ಮುಂದಿನ ಬಾಗ್ಲು ಹಾಕಿದ್ದೀನೋ ಇಲ್ಲೋ?’ ಅಂತ ಸುಮ್ಮನೆ ಗಾಬರಿ ತಳೆದು ಮೂರು ಬಾಗಿಲು ದಾಟಿಕೊಂಡು ವರಾಂಡಕ್ಕೆ ಓಡಿ ಬಂದು, ‘ಸದ್ಯ ಹಾಕಿದೆ’ ಎಂದು ನಿಟ್ಟುಸಿರುಬಿಡುತ್ತಲೇ ‘ಅರೆ ಹಾಲಿಟ್ಟಿದ್ದೆ’ ಅಂತ ಅಡಿಗೆಮನೆಗೆ ಹಾರುತ್ತಾರೆ. ಅಷ್ಟರಲ್ಲಿ ಹಾಲು ಉಕ್ಕಿ ಒಲೆ ಆರಿ ತಣ್ಣಗಾಗಿರುತ್ತೆ. ಆ ಹಾಲು ಉಕ್ಕಿದ ತತ್‍ಕ್ಷಣ ನೆನಪಾಯ್ತು… ಹಾಳು ಸೊಸೆಯರಿಗೆ ಒಂಚೂರೂ ನಯ ನಾಜೂಕು ಗೊತ್ತಿಲ್ಲ…ಪಕ್ಕದ್ಮನೆಯೋರು ಕೇಳಿದ ತಕ್ಷಣ ಒಂದು ಲೋಟದ ತುಂಬಾನೇ ಹಾಲು ಕೊಡೋದು…! ಅವಕ್ಕೇನಾಗ್ಬೇಕು? …ತಡೀ ವಾಪಸ್ ಇಸ್ಕೊಂಡ್ಬರ್ತೀನಿ’ ಎನ್ನುತ್ತ ವೀರಗಚ್ಚೆ ಬಿಗಿದು ದೊಡ್ಡ ಖಾಲಿ ಲೋಟದೊಡನೆ ಬಿರುಸಾಗಿ ಪಕ್ಕದ ಮನೆಯ ಕಡೆ ಹೆಜ್ಜೆ ಹಾಕಿದವರಿಗೆ ಎದುರುಮನೆಯಾಕೆ ಎದುರಾಗಬೇಕೇ? ಅವರ ಕೊರಳಲ್ಲಿ ಮಿನುಗುತ್ತಿದ್ದ ಹೊಸ ಮಾದರಿಯ ಚಿನ್ನದ ಸರ ಕಂಡು ‘ಅಂದ್ಹಾಗೆ ನಿಮ್ಮ ಅಕ್ಕಸಾಲಿಗನ ಅಡ್ರೆಸ್ ಕೊಡ್ತೀನಿ ಅಂದ್ರೀ, ಮರ್ತೇ ಬಿಟ್ಟೆ…ಈಗ ಕೊಡಿ ಬರ್ತಿನಿ’ ಎಂದು ತಮ್ಮ ಸವಾರಿಯ ದಿಕ್ಕನ್ನು ಬದಲಿಸಿ ಎದುರು ಮನೆಗೆ ನುಗ್ಗುತ್ತಾರೆ.
ಆಕೆ ಅಡ್ರೆಸ್ ಬರೆದುಕೊಂಡು ಹೊರಬರುವಷ್ಟರಲ್ಲಿ, ಸೀತಮ್ಮನ ಸೂಕ್ಷ್ಮ ಮೂಗಿನ ಹೊಳ್ಳೆಗಳಿಗೆ ಪಕ್ಕದ ಮನೆಯತ್ತಣಿಂದ ಬೇಳೆ ಸೀದ ವಾಸನೆ ತಟ್ಟಿ, ‘ಅಯ್ಯೋ ತರಕಾರಿ ಬೇಯಕ್ಕೆ ಹಾಕಿದ್ದೆ’ ಅಂತ ನೆನೆಸಿಕೊಂಡು ಆಕೆಗೂ ಹೇಳದೆ ಧಡಾರನೆ ಬಾಗಿಲು ಹಾರು ಹೊಡೆದುಕೊಂಡು ಮನೆಕಡೆ ಓಡುತ್ತಾ, ವರಾಂಡದಲ್ಲಿ ಕಸೂತಿಹಾಕುತ್ತ ಕುಳಿತ ಪ್ರಭಳನ್ನು ನೋಡಿ, ‘ಸುಮ್ನೆ ಇದಕ್ಕೆಲ್ಲ ಯಾಕೆ ದುಡ್ಡು ದಂಡ ಮಾಡ್ತೀರೋ, ನಾ ಬೇರೆ ಕಾಣೆ’ ಅಂತ ಸೊಸೆಗೆ ದೊಡ್ಡ ಲೆಕ್ಚರ್ ಕೊಡುವುದರಲ್ಲಿ ಆಕೆಗೆ ಅಡಿಗೆ ಮನೆ ತರಕಾರಿ ವಿಷ್ಯ ಸಂಪೂರ್ಣ ಮರೆತು ಹೋಗುತ್ತದೆ..
‘ಅಮ್ಮಾ ಹಾಲು’ ಮೊಮ್ಮಗ ಕೋಣೆಯಲ್ಲಿ ಸುಧಳನ್ನು ಕಾಡುತ್ತಿರುವುದನ್ನು ಕೇಳಿದವರೆ ಸೀತಮ್ಮ, ‘ಅಯ್ಯೋ ನನ್ನ ಬುದ್ಧಿಗಿಷ್ಟು ಅಂತ ಸೊಂಟದಲ್ಲಿದ್ದ ಖಾಲಿ ಲೋಟ ತಿರುಗಿಸಿಕೊಂಡು ಪಕ್ಕದ ಮನೆಕಡೆ ಹೊರಟವರು ಯಾಕೋ ನಿಂತರು. ಅತ್ತೆಯ ಪರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಸೊಸೆಯರು ಆಗಲೇ ಅಡಿಗೆ ಮನೆ ಹೊಕ್ಕಾಗಿರುತ್ತದೆ. ಸೀತಮ್ಮ ಹೆಸರಿಗೆ ಅಡಿಗೆ ಮಾಡಿದರೂ ಉಳಿದವರು ಅದನ್ನು ಪೂರೈಸಿ ಗಂಡಂದಿರಿಗೆ ಟಿಫಿನ್ ಕ್ಯಾರಿಯರ್ ಭರ್ತಿ ಮಾಡಿ ಕಳಿಸಿ ಅತ್ತೆಗೆ ತಟ್ಟೆ ಹಾಕಿ ಸಿದ್ದ ಮಾಡಿಟ್ಟಿರುತ್ತಾರೆ. ಸದಾ ಪತರುಗುಟ್ಟುತ್ತಿರುವ ಅತ್ತೆಯನ್ನು ನಂಬಿಕೊಂಡರೆ ತಮ್ಮ ಹೊಟ್ಟೆಗೆ ಸೊನ್ನೆಯೇ ಎಂಬುದನ್ನವರು ಚೆನ್ನಾಗಿ ಬಲ್ಲರು.
ದಿನದ ಇಪ್ಪತ್ನಾಲ್ಕು ಗಂಟೆಯೂ ಸೀತಮ್ಮನದು ಸುಮ್ಮನೆ ಅಡಾವುಡಿ-ಆತಂಕ ಅವಸರ, ಪಟಪಟ ಮಾತು, ಧಾವಂತ ಅಷ್ಟೆ. ಸಮಾಧಾನದ ಮನಸ್ಥಿತಿ ಎನ್ನುವುದೇ ಇರಲಿಲ್ಲ. ಸಾಮಾನ್ಯ ದಿನಗಳಲ್ಲೇ ಹೀಗಾದರೆ ಹಬ್ಬ-ಹರಿದಿನ, ತಿಥಿ, ಮದುವೆ-ಮುಂಜಿಗಳಿಗೆ ಹೋಗಬೇಕಾದ ದಿನಗಳಲ್ಲಂತೂ ಅತೀವ ಗಡಿಬಿಡಿ. ಸ್ವಲ್ಪ ಆರೋಗ್ಯ ಕೆಟ್ಟರಂತೂ ಆರ್ಭಟ ನೂರು ಮುಖವಾಗಿರುತ್ತಿತ್ತು. ಸೀತಮ್ಮ ಹಾಸಿಗೆಯಿಂದ ಏಳುವವರೆಗೂ ಮನೆ ಮಂದಿಗೆಲ್ಲ ಜ್ವರ ಬಂದ ಹಾಗಿರುತ್ತಿತ್ತು. ಎಲ್ಲರೂ ತಮ್ಮನ್ನು ವಿಚಾರಿಸಿಕೊಳ್ಳಬೇಕು, ಗಮನಿಸಿ ಉಪಚರಿಸಬೇಕು ಎಂಬುದು ಆಕೆಯ ಆಶಯ. ಆಕೆ ಒಬ್ಬರಿದ್ದರೆ ಹತ್ತು ಜನ ತುಂಬಿಕೊಂಡ ಹಾಗಿರುತ್ತಿತ್ತು. ಮನೆ, ಮನೆಯ ಕೇಂದ್ರವ್ಯಕ್ತಿಯಾಗಿ ಅಧಿಕಾರ ವಹಿಸಿಕೊಂಡು ತಮ್ಮ ಇಷ್ಟದಂತೆಯೇ ಉಳಿದವರನ್ನು ಇರಗೊಟ್ಟಿದ್ದರು ಸೀತಮ್ಮ.
ಈ ಬಾರಿ ಆಕೆಗೆ ಸ್ವಲ್ಪ ಜೋರು ಎದೆನೋವೇ ಬಂದಿತ್ತು. ಡಾಕ್ಟರರ ಸಲಹೆಯಂತೆ ಆಕೆಯನ್ನು ನರ್ಸಿಂಗ್ ಹೋಂಗೆ ಸೇರಿಸಿದಾಗ ಯದ್ವಾತದ್ವಾ ಹಾರಾಡಿದರು. ಮನೆ-ಆಸ್ತಿ, ಜೀವನ-ಜಗತ್ತಿನ ಬಗೆ ಬಲು ಅಂಟಿಕೊಂಡಿದ್ದ ಆಕೆ ಮನೆಯಿಂದ ದೂರಾಗಿ ನರ್ಸಿಂಗ್ ಹೋಂನ ನಾಲ್ಕು ಗೋಡೆಯ ಮಧ್ಯೆ, ಡಾಕ್ಟರರ ಕೈಕೆಳಗೆ ಹೇಗಿರುತ್ತಾರೆ ಎಂಬುದೇ ಚಿಂತೆಯಾಗಿತ್ತು ಎಲ್ಲರಿಗೂ. ಅವರ ಕೈಕಾಲು ಕಟ್ಟಿಹಾಕಿ, ಇ.ಸಿ.ಜಿ. ಬ್ಲಡ್ ಪ್ರೆಷರ್, ಎಕ್ಸರೇ ಪರೀಕ್ಷೆಗಳನ್ನು ಮಾಡಿಸಬೇಕಾಯಿತು. ಅವರಿಗೆ ಹಾಟ್ ಮೈಲ್ಡಾಗಿ ಹಾರ್ಟ್ ಅಟ್ಯಾಕ್ ಆಗಿರುವ ವಿಷಯಾನ ಮುಚ್ಚಿಟ್ಟರು, ಏಕೆಂದರೆ ಈ ವಿಷಯ ಗೊತ್ತಾದರೆ ಆಕೆಗೆ ಹಾರ್ಟ್ ಫೈಲ್ಯೂರೇ ಆಗಬಹುದು ಎಂದು, ಅತ್ತೆಯ ಶುಶ್ರೂಷೆಗೆ ನಾಲ್ಕುಜನ ಸೊಸೆಯರೂ ಟೊಂಕ ಕಟ್ಟಿ ನಿಂತಿದ್ದರು.
ಸ್ಪ್ರಿಂಗ್ ಮಂಚ ಜೀಕಾಡುವಂತೆ ಸ್ಥೂಲಶರೀರದ ಸೀತಮ್ಮ ಗೊರಕೆ ಗುಟರಾಯಿಸುತ್ತಲೇ ಅತ್ತಿತ್ತ ಹೊರಳಾಡುತ್ತಿದ್ದರು. ಅವರ ಮಂಚದ ನಾಲ್ಕು ಕಾಲುಗಳಿಗೆ ಒರಗಿ ತೂಕಡಿಸುತ್ತಿದ್ದರು ಸೊಸೆಯರು. ಹಾಸಿಗೆಯ ಮೇಲೆ ಮಲಗಿದರೆ ಗಡದ್ದು ನಿದ್ದೆ ಬಂದು, ಎಲ್ಲಿ ಅತ್ತೆಯ ಕೈಲಿ ಬೈಸಿಕೊಳ್ಳಬೇಕಾಗುತ್ತದೋ ಎಂದು ಅವರು ತಮಗೆ ಪ್ರತ್ಯೇಕ ಮಲಗುವ ಏರ್ಪಾಟನ್ನೇ ಮಾಡಿಕೊಂಡಿರಲಿಲ್ಲ. ಅತ್ತೆಯ ಕುತ್ತಿಗೆಯವರೆಗೂ ಕಂಬಳಿ ಹೊದಿಸಿ, ದೀಪ ಆರಿಸಿ ರೆಪ್ಪೆಗೂಡಿಸಲು ಹವಣಿಸಿದ ಸುಧಾ ಅತ್ತೆಯ ಕನವರಿಕೆಗೆ ಎಚ್ಚರಗೊಂಡಳು.
‘ರಚೂ, ಕಬ್ಬಿಣದ ಪೆಟ್ಟಿಗೆ…ಗಾಡ್ರೇಜು…?’ ಅಸ್ಪಷ್ಟವಾಗಿ ಬಡಬಡಿಸುತ್ತಿದ್ದರು ಸೀತಮ್ಮ. ಅವರ ಕನವರಿಕೆಯ ಮುಂದಿನ ಸಾಲುಗಳು ಸುಧಳಿಗೆ ತಿಳಿದಿತ್ತು. ಹಿಂದಿನ ನೆನಪೊಂದು ಉಕ್ಕಿ ಬಂದಾಗ ನಗುವುದೋ ಅಳುವುದೋ ತಿಳಿಯದಾಯಿತು.
***
ಹಿರಿಮಗ ರಮೇಶನ ಮದುವೆಯ ತರಾತುರಿ. ಮನೆಯ ತುಂಬ ನೆಂಟರು ಬಂದಿಳಿದಿದ್ದಾರೆ. ಜನ ಜಂಗುಳಿಯಲ್ಲಿ ಯಥಾಪ್ರಕಾರ ಸೀತಮ್ಮನಿಗೆ ಏನೂ ತೋಚದು… ಸ್ವಲ್ಪ ಗಡಿಬಿಡಿಯಾದರೂ ಕಣ್ಣಿಗೆ ಕವಚುವ ಕತ್ತಲೆ, ‘ಸಾಕಪ್ಪ ಸಾಕು…ಈ ಮದ್ವೆ-ಮುಂಜಿ ಸಂಭ್ರಮಗಳಲ್ಲಿ ವಸ್ತುಗಳನ್ನು ಜೋಪಾನವಾಗಿಡೋದ್ರಲ್ಲೇ ನನ್ನ ಅರ್ಧ ಆಯಸ್ಸು ಕಡಿಮೆ ಆಗ್ಹೋಗುತ್ತೆ…?’ ಸೀತಮ್ಮ ಒದ್ದುಗೊಳ್ಳುತ್ತ, ಅರೆಬರೆ ಮನಸ್ಸಿನಿಂದ ಕಿರುಮನೆ ಬಿಟ್ಟು ನಡುಮನೆಯ ಹಸೆಮಣೆ ಮೇಲೆ ಕೂತು ದೇವರ ಸಮಾರಾಧನೆ ಶಾಸ್ತ್ರದಲ್ಲಿ ಭಾಗವಹಿಸಿದರು.
ಸಂಜೆ ಛತ್ರಕ್ಕೆ ಹೋದ ಮೇಲೆ ನೆಂಟರು ಹೆಚ್ಚಾದರು. ಎರಡೂ ಕಡೆಯ ಬಳಗದ ಹಿಂಡು. ಸೀತಮ್ಮನ ಆತಂಕದ ಡಿಗ್ರಿ ಮೇಲೇರಿತ್ತು.
‘ಚಿನ್ನ ಬೆಳ್ಳಿ ಸಾಮಾನುಗಳು…ಸೀರೆ ಪಾರೆ ಹೇಗಂದ್ರೆ ಹಾಗೇ ಹರವಿವೆ…ಇಲ್ಲೇ ಕಾಯ್ತಾ ಕೂತಿರು’- ಮಗಳು ರಚನಾಗೆ ಸೀತಮ್ಮನ ಆಜ್ಞೆ. ತಾಯಿಯ ಬುದ್ಧಿ ಹೊಸತಲ್ಲವಾದರೂ ರಚನಾ ಕಬ್ಬಿಣದ ಪೆಟ್ಟಿಗೆಯ ಮೇಲೆ ಕೂತು ಬೀಗದ ಕೈ ಗೊಂಚಲ ಭಾರ ಹೊತ್ತು ಗೊಣಗುತ್ತಿದ್ದಳು. ‘ಸಂತೋಷವಾಗಿ ಅಣ್ಣನ ಮದ್ವೇನೂ ನೋಡೋ ಹಾಗಿಲ್ಲ ಈ ಹಾಳು ಸಾಮಾನು, ಅಮ್ಮನ ಅವಾಂತರದಿಂದ…ಕರ್ಮ’
ಹಸೇಮಣೆ ಮೇಲೆ ಕುಳಿತಿದ್ದರೂ ಸೀತಮ್ಮನ ಮನಸ್ಸೆಲ್ಲ ಕೋಣೆಯಲ್ಲೇ, ಕಣ್ಣು, ಹಾಲಿನ ತುಂಬ ಓಡಾಡುತ್ತಿದ್ದ ತಮ್ಮ, ಹಾಗೂ ಬೀಗರ ಮನೆಯವರ ಅರಿಶಿಣ, ಕುಂಕುಮದ ಬೆಳ್ಳಿ ಬಟ್ಟಲುಗಳ ತಟ್ಟೆಯ ಹಿಂದೆಯೇ ಓಡಾಡುತ್ತಿತ್ತು. ‘ಎರಡೂ ಬೆರೆತು ಹೋದಾವು ಸ್ವಲ್ಪ ಹುಷಾರು’- ಸೀತಮ್ಮ ಬೀಗಿತ್ತಿಯ ಕಿವಿಯಲ್ಲಂದಾಗ ಆಕೆ ಮುಖ ಒಂಥರಾ ಮಾಡಿಕೊಂಡರು. ರಮೇಶನಿಗೆ ಅವಮಾನವಾದ ಹಾಗಾಗಿ, ‘ಅದೇನು ಹಾಗಾಡ್ತೀ ಅಸಹ್ಯ’ ಅಂತ ತಾಯಿಯ ಕಂಕುಳಿಗೆ ಮೊಣಕೈಯಲ್ಲಿ ತಿವಿದರೂ ಸೀತಮ್ಮನ ಕಣ್ಣು ತಟ್ಟೆಗಳನ್ನು ಹಿಂಬಾಲಿಸುವುದು ಬಿಡಲಿಲ್ಲ. ಮದುವೆ ಹುಡುಗನೇ ತಾಯಿಯ ವರ್ತನೆಗೆ ನಾಚಿ ಕೂಡಬೇಕಾಯ್ತಷ್ಟೆ.
ಸ್ವಲ್ಪ ಹೊತ್ತಿನಲ್ಲಿ ರಚನಾ, ಹೊರಗೆ ಯಾರದೋ ಜೊತೆ ಮಾತನಾಡುತ್ತ ನಿಂತಿದ್ದಳು. ಸೀತಮ್ಮ ಅವಳನ್ನು ಕಂಡವರೆ ಕೈಲಿದ್ದ ಕೊಬ್ಬರಿ ಗಿಟಕನ್ನು ಕೆಳಗೆ ಕುಕ್ಕಿ ಧಿಮ್ಮನೆದ್ದು, ‘ಅಯ್ಯೋ ರೂಂ ಬಿಟ್ಟು ಯಾಕೆ ಬಂದ್ಯೇ?… ಕೋಣೆ ಕಾಯಿ ಅಂದ್ರೆ ಹರಟೆಗೆ ನಿಂತ್ಯಾ?… ಬೇಗ್ಹೋಗೇ’ ಎಂದು ಕೈ ಬಾಯಿ ತಿರುವುತ್ತ ಏರುದನಿಯಲ್ಲಿ ಕೂಗಿ ಹೇಳಿದಾಗ, ಆಕೆಯ ಗಡಿಬಿಡಿ ಕಂಡು ಸುತ್ತಲಿದ್ದವರು ಸಣ್ಣಗೆ ನಕ್ಕರು. ತಾಯಿಯ ಕೆಂಗಣ್ಣು ಕಂಡು ರಚನಾ ಕೋಣೆಯ ಕಡೆ ಓಟಕಿತ್ತಳು.
ಸೀತಮ್ಮ ನಿಟ್ಟುಸಿರ ಸರಮಾಲೆ ಬಿಡುತ್ತ, ಎದುರಿಗಿದ್ದ ತಮ್ಮ ಮನೆಯ ಸಾಮಾನುಗಳು ಸರಿಯಾಗಿವೆಯೇ ಇಲ್ಲವೇ ಎಂದು ಬಡಬಡ ಬೆರಳು ಮಡಿಸಿ ಎಣಿಸಿಕೊಂಡರು. ಸುಧಾಗೆ ಆಗಲೇ ಅತ್ತೆಯ ಸ್ವಭಾವ ಪರಿಚಯವಾಗಿದ್ದು.
ವರಪೂಜೆಯ ರಾತ್ರಿ ಬಿಸಿಲೂಟ ಮುಗಿಸಿಕೊಂಡು ಮಲಗುವುದು ತುಂಬಾ ತಡವೇ ಆಯ್ತು. ಸೀತಮ್ಮನಿಗೆ ಅರೆ ಬರೆ ನಿದ್ದೆ. ಒಂದು ಜಾವದಲ್ಲಿ ದಡಬಡಿಸಿ ಎದ್ದು ಕುಳಿತು, ‘ಲೇ ರಚೂ, ಕಬ್ಬಿಣದ ಪೆಟ್ಗೆ ಬೀಗದ ಕೈ ಜೋಪಾನ್ವಾಗಿ ಇಟ್ಕೊಂಡಿದ್ದೀಯೇನೇ?’ ಎಂದು ಏದುಸಿರಲ್ಲಿ ಕೇಳಿದಾಗ ರಚನಾ ಮಲಗಿದಲ್ಲಿಂದಲೇ ಬೀಗದ ಕೈ ಗೊಂಚಲನ್ನು ‘ಝಣಝಣ’ ಅಲ್ಲಾಡಿಸಿ, ‘ಧೈರ್ಯವಾಗಿ ಮಲ್ಕೊಮ್ಮ ಪರ್ವಾಗಿಲ್ಲ’ ಎಂದು ಕಿವಿಯಲ್ಲಿ ಉಸುರಿದಾಗ, ‘ಹಾಂ ಹೂಂ’ ಎನ್ನುತ್ತ ಸುಮ್ಮನೆ ಮಲಗಿದರು.
ಐದೇ ನಿಮಿಷ, ಮತ್ತೆ ಬಡಕ್ಕನೆ ಹೊರಳಿ ಕೂತು, ‘ಏ ರಮೇಶ ವರದಕ್ಷಿಣೆ ಹಣ, ಬಂಗಾರದ ಒಡವೆ ಪೆಟ್ಟಿಗೆಗೆ ಬೀಗ…’ ಅವರ ಮಾತು ಮುಗಿಯುವ ಮುನ್ನವೇ ರಮೇಶ ಪೆಟ್ಟಿಗೆಗೆ ಹಾಕಿದ್ದ ಬೀಗವನ್ನು ‘ಧಡಧಡ’ ಅಲ್ಲಾಡಿಸಿ ‘ಸಮಾಧಾನ ಆಯ್ತೋ ?… ನಿಶ್ಚಿಂತೆಯಾಗಿ ಮಲಗು ಇನ್ನು ’ ಎಂದು ಸಿಡುಕಿದ.
ಐದಾರು ಕ್ಷಣ…. ‘ಏನೂಂದ್ರೇ…’ ಸೀತಮ್ಮನ ರಾಗವನ್ನು ಮಧ್ಯದಲ್ಲೇ ತುಂಡರಿಸಿದ ರಾಮಚಂದ್ರಯ್ಯ ‘ಏಯ್ ಸಾಕು, ಮಲ್ಕೊಳ್ಳೆ…ಅದೇನ್ ಪ್ರಾಣ ಹಿಂಡ್ತೀ… ರಾತ್ರಿ ನಿನ್ನಿಂದ ಯಾರ್ಗೂ ನಿದ್ದೆಯಿಲ್ಲ. ದಿನಾ ಇದೇ ಕಥೆಯಾಗಿ ಹೋಯ್ತು ನಿಂದು ’ ಎಂದು ಒರಟಾಗಿ ಗದರಿಸಿದ ಮೇಲೆ ಸೀತಮ್ಮ ಕಮಕ್ ಕಿಮಕ್ ಎನ್ನದೆ ಸುಮ್ಮನೆ ಬಿದ್ದುಕೊಂಡರು.
ಛತ್ರದಲ್ಲಿ ಮೂರು ದಿನವೂ ಸೀತಮ್ಮನಿಗೆ ಸ್ವಲ್ಪವೂ ನಿದ್ದೆಯಿಲ್ಲದೆ, ಛತ್ರ ಬಿಡುವುದರೊಳಗೆ ಜ್ವರ ಕಾಯುತ್ತಿತ್ತು.
ಮದುವೆಯ ನಂತರ ಅತ್ತೆಯ ವಿಚಿತ್ರ ಚರ್ಯೆಗಳ ಬಗ್ಗೆ ಒಂದೊಂದು ಘಟನೆಗಳನ್ನೂ ಕೇಳಿದಾಗ ಸುಧಳಿಗೆ ಹೊಟ್ಟೆ ಹುಣ್ಣಾಗಿಸುವ ನಗು ಉಕ್ಕಿ ಬಂದರೂ, ಆಕೆಯ ವ್ಯಾಮೋಹ ಸ್ವಭಾವ ಕಂಡು ತುಸು ಹೇಸಿಕೆಯೂ ಮೂಡದಿರಲಿಲ್ಲ.
***
ಎಂದಿನ ನರಳಿಕೆ ದನಿ ಹೊರಡಿಸುತ್ತ ಎದ್ದು ಕುಳಿತರು. ಸೀತಮ್ಮ, ಮಂಚದ ಸದ್ದಿಗೆ ಎಚ್ಚೆತ್ತ ಹೇಮಾ ಅದರ ಸೂಚನೆಯರಿತು ಆಕೆಯ ಕೈ ಹಿಡಿದು ಬಚ್ಚಲು ಮನೆಗೆ ಕರೆದೊಯ್ದಳು. ರಾತ್ರಿ ಎರಡು ಮೂರು ಬಾರಿ ಏಳುವುದು ಸೀತಮ್ಮನ ಅಭ್ಯಾಸ. ಆಗ ಯಾರಾದರೂ ಆಕೆಯ ಜೊತೆ ಇರಲೇಬೇಕು. ಇಲ್ಲವಾದರೆ ಅದರಿಂದಾಗುವ ಅನಾಹುತಗಳಿಗೆ ಬೇರೆಯವರು ವಿನಾಕಾರಣ ಹೊಣೆಯಾಗಬೇಕಾಗುತ್ತಿತ್ತು. ಎಂದೋ ಒಮ್ಮೆ, ಉಜ್ಜದ ಬಚ್ಚಲಲ್ಲಿ ಆಕೆ ಜಾರಿ ಬಿದ್ದು, ಆರ್ಭಟ ನಡೆಸಿದ ಪ್ರಕರಣದ ಚುರುಕು ಇನ್ನೂ ಯಾರೂ ಮರೆತಿರಲಿಲ್ಲ. ಆ ರಾತ್ರಿಯೆಲ್ಲ ಜಾಗರಣೆಯಾಗಿತ್ತು. ಹೀಗಾಗಿ ಅವರೊಡನೆ ಯಾರಾದರೊಬ್ಬರು ಇದ್ದೇ ಇರುತ್ತಿದ್ದರು. ನಚ್ಚು ಅಂದರೆ ಬಹಳ ನಚ್ಚು ಸೀತಮ್ಮನದು. ಫ್ಯಾನಿನ ಗಾಳಿ ಉಷ್ಣ… ಬದನೇಕಾಯಿ ವಾಯು…’ ಆಕೆಯನ್ನು ಮೆಚ್ಚಿಸೋ ಅಷ್ಟರಲ್ಲಿ ಎಲ್ಲರಿಗೂ ಸಾಕು ಸಾಕಾಗುತ್ತಿತ್ತು.
‘ಗಂಟಲೊಣಗ್ತಿದೆ…’ ಹೇಮಾ ಆಗಲೇ ಗ್ಲೂಕೋಸ್ ಡಬ್ಬಿ ತೆಗೆದಾಗಿತ್ತು. ಆಕೆ ಅಂದದ್ದೆಲ್ಲ ಆಗಲೇಬೇಕು. ಹೇಮಳ ನೆನಪಲ್ಲಿ ಗೂಡು ಮಾಡಿಕೊಂಡಿದ್ದ ಘಟನೆಯೊಂದು ರೆಕ್ಕೆ ಬಿಚ್ಚಿತು.
***
‘ನಮ್ಮ ಕಡೆಯೆಲ್ಲ ಭಾಳ ಮಡಿ ಜಾಸ್ತಿ…ದೊಡ್ಡೋರು, ಋಷಿಪಂಚಮಿ ಮಾಡಿದೋರು ಮಡಿ ಹೆಂಗಸರಿದ್ದಾರೆ…ಎಲ್ಲಾ ಮಡೀಲೇ ಆಗಬೇಕು… ಅಡಿಗೆ ಇತ್ಯಾದಿ ಎಲ್ಲಕ್ಕೂ ನದೀ ನೀರೇ ಬಳಸ್ಕೋಬೇಕು’ – ಸುರೇಶನ ಮದುವೆಯ ವರಪೂಜೆಯ ದಿನ ಬಸ್ಸಿನಿಂದಿಳಿಯುವಾಗಲೇ ಸೀತಮ್ಮ ಬೀಗರಿಗೆ ಆಜ್ಞೆ ವಿಧಿಸಿದ್ದರು.
ಹೆಣ್ಣಿನ ಕಡೆಯವರು ಜೋಲು ಮೋರೆ ಮಾಡಿಕೊಂಡರು. ಛತ್ರದಿಂದ ಎರಡು ಮೈಲಿ ದೂರದಲ್ಲಿ ನದಿ ಹರಿಯುತ್ತಿತ್ತು. ಅಷ್ಟು ದೂರದಿಂದ ನೀರು ತಂದು ಹೇಗೆ ಪೂರೈಸುವದು ಎಂಬುದು ಅವರ ಚಿಂತೆ. ಮದುವೆ ಹುಡುಗಿ ಹೇಮಳ ಅಣ್ಣ ಅಡಿಗೆ ಭಟ್ಟರನ್ನು ಕರೆದು ವಿಷಯ ತಿಳಿಸಿದ ಕೂಡಲೇ ಅವರು ಹಾರಾಡಿದರು. ಹಾಗಾದ್ರೆ ನಾವು ಅಡಿಗೆ ಮಾಡಕ್ಕಾಗಲ್ಲ ಮಾರಾಯ್ರೆ, ಬರ್ತೀವಿ.’
ಬೀಗರು ತಲೆಯ ಮೇಲೆ ಕೈ ಹೊತ್ತು ಕೂತರು. ಅತ್ತೆಯ ವಿಲಕ್ಷಣ ಕರಾರು ಕಂಡು ವಧು ಹೇಮಳಿಗೂ ಸಿಟ್ಟು ಬಂತು. ಆಡುವಂತಿಲ್ಲ. ಅನುಭವಿಸುವಂತಿಲ್ಲ. ರಾಮಚಂದ್ರಯ್ಯ, ಸುರೇಶ ಗೊಣಗಿಕೊಂಡರು: ‘ಇದೆಂಥÀದಿದು ಹೊಸ ಕಂಡೀಷನ್ನು !’
ಸೀತಮ್ಮನದು ಹಟವೇ ಹಟ. ‘ಅಷ್ಟೂ ಮಾಡಕ್ಕಾಗದಿದ್ರೆ ಅವರೆಂಥ ಮದುವೆ ಮಾಡ್ಕೋಡ್ತಾರೆ?… ನಮಗೆ ಬೇರೆ ಹೆಣ್ಣೇ ಇಲ್ವೇ?… ನಡಿರೀ ವಾಪಸ್ ಹೋಗೋಣ.’
ಕಂಗಾಲಾದರು ಹೆಣ್ಣಿನವರು. ಹೇಮಳ ಅಣ್ಣ ಅಡಿಗೆಯವರ ಕಿವಿಯಲ್ಲಿ ಏನೋ ಉಸುರಿ, ನಾಲ್ಕು ಜನ ಅಡಿಗೆಯವರನ್ನು ಕರೆದುಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ನಿಲ್ಲಿಸಿ ಬಸ್‍ಸ್ಟಾಂಡಿನತ್ತ ದಾಪುಗಾಲು ಹಾಕಿ ಸುತ್ತಮುತ್ತ ಕಣ್ಣಾಡಿಸಿದ. ಆರೇಳು ಜನ ಬೀಡಿ ಸೇದಿಕೊಂಡು ಕೂತಿದ್ದವರು ಕಣ್ಣಿಗೆ ಬಿದ್ದರು. ಅವರನ್ನು ಹತ್ತಿರ ಕರೆದು ಕೇಳಿದ. ಅವರು ಮೊದಲು ಹಿಂಜರಿದರೂ ಅವನ ಒತ್ತಾಯಕ್ಕೆ ಕಟ್ಟುಬಿದ್ದು ಆನಂತರ ಒಪ್ಪಿದರು.
ಅವರು ನದಿಯಿಂದ ನೀರನ್ನು ಕೊಡದಲ್ಲಿ ತುಂಬಿಸಿ ತಂದು ಛತ್ರದ ತಿರುವಿನಲ್ಲಿ ನಿಂತಿದ್ದ ಅಡುಗೆಭಟ್ಟರ ಕೈಗೆ ಕೊಡುತ್ತಿದ್ದರು. ಅವರು ಮಡಿಯಾಗಿ ನೀರನ್ನು ನದಿಯಿಂದ ಹೊತ್ತು ತಂದಂತೆ, ಹೆಗಲ ಮೇಲೆ ಕೊಡಗಳನ್ನು ಹೊತ್ತು ತಂದು ಅಡಿಗೆ ಪೂರೈಸಿದರು. ಅಂತೂ ಮಡಿಯ ನೀರಿನ ಮರ್ಮವನ್ನರಿಯದ ಸೀತಮ್ಮ ಮತ್ತವರ ಕಡೆಯ ಮಡೀ ಹೆಂಗಸರು ತೃಪ್ತಿಯಿಂದ ಗಡದ್ದು ಊಟ ಉಂಡಿದ್ದೇ ಉಂಡಿದ್ದು. ತಮ್ಮ ಮಾತು ನಡೆಸಿಕೊಂಡದ್ದಕ್ಕೆ ಸೀತಮ್ಮ ಹೆಮ್ಮೆಯಿಂದ ಬೀಗಿದರು.
ಇಂಥ ಪ್ರಸಂಗಗಳು ಅವರ ಬಾಳಿನಲ್ಲಿ ಇನ್ನೂ ಅದೆಷ್ಟೋ. ಸಣ್ಣದನ್ನೇ ದೊಡ್ಡದು ಮಾಡಿಕೊಂಡು ಪ್ರಕರಣವೊಂದನ್ನು ಸ್ಪಷ್ಟಿಸಿ ಬಿಡುವ ಅತ್ತೆಯ ಬಾಯಿಗೆ ಹೆದರಿ ಹೇಮಾ ಎಂದೂ ಈ ಪ್ರಸಂಗವನ್ನು ಎತ್ತಿ ಆಡಿರಲಿಲ್ಲ.
‘ಸೆಕೆ, ತುಂಬ ಸೆಕೆ…ಸೊಳ್ಳೆ ಬೇರೆ ಕಡೀತಿದೆ…ಎಲ್ಲಾ ಬಿದ್ಕೊಂಡು ಗೊರಕೆ ಹೊಡೀತಿವೆಯೇನು?’ ಎಂದು ಸೀತಮ್ಮ ಗುಟುರು ಹಾಕಿದಾಗ ಪ್ರಭಾ ಹೊರಳೆದ್ದು ಮರುಮಾತಾಡದೆ ಫ್ಯಾನ್ ಹಾಕಿ ಬೀಸಣಿಗೆ ಹಿಡಿದು ಅವರ ಪಕ್ಕ ಕುಳಿತಿದ್ದಳು. ಬೀಸಿ ಬೀಸಿ ಕೈ ಸೋಲುತ್ತ ಬಂದಿದ್ದರೂ ಕೈ ಬದಲಾಯಿಸಿಕೊಂಡು ಅವಳು ಇನ್ನೂ ಬೀಸುತ್ತಲೇ ಇದ್ದಳು.
ತಾನು ಅತ್ತೆಯ ಮನೆಗೆ ಕಾಲು ಹಾಕಿದಾಗಿನಿಂದ ಇದುವರೆಗೂ ಆಕೆ ನಡೆಸಿಕೊಂಡು ಬರುತ್ತಿರುವ ಎಲ್ಲ ಸೇವೆ-ಚಾಕರಿಗಳ ನೆನಪುಗಳೆಲ್ಲ ಬಿರುಗಾಳಿಯಾಗಿ ಬೀಸಿಕೊಂಡು ಬಂದವು.
****
ದಿನೇಶ ಬಲು ನಾಚಿಕೆ ಸ್ವಭಾವದವನು. ತಾಯಿ ಹೇಳಿದಂತೆ ಎಲ್ಲಾ ಅನ್ನುವವ. ಹುಡುಗಿಯರನ್ನು ನೀನು ನೋಡಿದರಾಯ್ತು, ತನ್ನದೇನಿಲ್ಲ ಅಂದಿದ್ದ. ಆ ಅಧಿಕಾರವನ್ನು ಸೀತಮ್ಮ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದರು. ಪ್ರತಿಯೊಂದು ಮದುವೆಗೆ ಹೋದಾಗಲೂ ಆಕೆಗೆ ಅದೇ ಕೆಲಸ. ಹೆಣ್ಣಿನವರು ಎಷ್ಟು ಕೊಟ್ಟು ಬಿಟ್ಟು ಮಾಡುತ್ತಾರೆ. ಅವರ ಹಣ, ಅಂತಸ್ತು-ಆಸ್ತಿ ಅಳೆಯುತ್ತ ಸ್ಥಿತಿವಂತರೆಂದು ಕಂಡುಬಂದ ಕಡೆಯೊಂದರಲ್ಲಿ ಪ್ರಭಳನ್ನು ಆಯ್ಕೆ ಮಾಡಿದ್ದರು. ಅವಳಿಗೆ ಚೆನ್ನಾಗಿ ಕೆಲಸ-ಬೊಗಸೆ ಬರುತ್ತದೆಂದು ಅರಿತ ಮೇಲಂತೂ ಅದನ್ನು ಸೂಕ್ತವಾಗಿ ಬಳಸಿಕೊಂಡರು.
‘ನಮ್ಮ ಪ್ರಭನ ಸಮಾನ ಇಲ್ಲ’ ಎಂದು ಅವಳನ್ನು ಹೊಗಳಿ ಹೊಗಳುತ್ತಲೇ ಮನೆಯ ಸಕಲ ಕೆಲಸಗಳ ಜವಾಬ್ದಾರಿಗಳನ್ನೂ ಅವಳ ತಲೆಗೇ ಕಟ್ಟಿದರು. ಮದುವೆಯಾದ ಹುಡುಗಿ ಚೂಟಿಯಾಗಿರಬೇಕು. ಸೂರ್ಯ ಹುಟ್ಟಿದ ಮೇಲೆ ಮಲಗಿದ್ದರೆ ಚೆನ್ನಾಗಿರುವುದಿಲ್ಲ ಎಂದು ಕಂಡು ಕೇಳಿರದ ಶಾಸ್ತ್ರ, ಹಬ್ಬಗಳಿಂದ ಹಿಡಿದು ತದಿಗೆ ಗೌರಿ, ಶ್ರಾವಣ ಶುಕ್ರವಾರ, ಮಂಗಳ ಗೌರೀ ವ್ರತದ ಅಷ್ಟೂ ಪಟ್ಟಿಯನ್ನು ಒದರಿ ಅವಳನ್ನು ಬೆಳಗ್ಗೆ ಐದಕ್ಕೇ ಏಳುವಂತೆ ಮಾಡಿ, ರಾತ್ರಿ ಹನ್ನೆರಡಾದರೂ ಬಿಡುಗಡೆ ನೀಡುತ್ತಿರಲಿಲ್ಲ.
‘ಸಂಜೆ ಹೊತ್ತು ದೇವರಪಟಕ್ಕೆ ಹೂ ಕಟ್ಟುವಂತಿ ಬಾ… ನಮ್ಮ ದಿನೂಗೆ ತುಂಬ ನಾಚ್ಕೆ, ಹೆಂಡ್ತೀನ ವಾಕೂ ಗೀಕೂ ಕರ್ಕೊಂಡು ಹೋಗೋದು ಅವನಿಗೆ ಸರಿಹೋಗಲ್ಲ’ ಎಂದು ಅವಳನ್ನು ಮನೆಯಲ್ಲೇ ಕಟ್ಟಿ ಹಾಕಿ ತಮ್ಮೊಡನೆಯೇ ಉಳಿಸಿಕೊಳ್ಳುತ್ತಿದ್ದರು.
ಹೀಗೆಯೇ ಹತ್ತು ವರ್ಷಗಳು ಬರೀ ಈ ಮನೆಯ ಚಾಕರಿಯಲ್ಲೇ, ಅತ್ತೆಯ ಸೇವೆಯಲ್ಲೇ ಪ್ರಭಳ ದಾಂಪತ್ಯ ಜೀವನ ಯಾಂತ್ರಿಕವಾಗಿ ಸಾಗುತ್ತಿದೆ. ಅವಳ ಅತೃಪ್ತ ಬಯಕೆಗಳು, ಅಸಹನೆ ಹೊರಗೆ ಹೆಡೆ ಬಿಚ್ಚಲು ಹೆದರಿಕೊಂಡು ಒಳಗೇ ಅಡಗಿ ಕುಳಿತಿವೆ.
‘ಊಂ ಬಾಯಾರಿಕೆ…ನೀರು…’
ಪ್ರಭಾ ಆಗತಾನೇ ಮಲಗಿದ್ದಳು. ಸರದಿ ಪ್ರಕಾರ ಲತಾ ಎಚ್ಚೆತ್ತು ಸೀತಮ್ಮನಿಗೆ ನೀರಿತ್ತು ಬೀಸಣಿಗೆ ಹಿಡಿದು ಕೂತಳು. ‘ಸ್ವಲ್ಪ ಸರ್ಯಾಗಿ ಬೀಸು, ಗಾಳೀನೇ ಬರ್ತಿಲ್ಲ…ಉಸ್ಸಪ್ಪ’-ದೊಡ್ಡದನಿಯಲ್ಲಿ ಉಸಿರುಗರೆದು ಹೊರಳಾಡಿದರು ಸೀತಮ್ಮ. ನಿದ್ದೆಯ ಮಂಪರಿನಿಂದ ಕಣ್ಣುಜ್ಜುತ್ತ ಕುಳಿತ ಲತಾ ಅತ್ತೆಯ ದರ್ಪವನ್ನು ಕಂಡು ಕೋಪದಿಂದ ತುಟಿ ಕಚ್ಚಿಕೊಂಡು ನೋವು ನುಂಗಿಕೊಂಡಳು.
***
ಗಿರೀಶ ತಾನೇ ಹುಡುಗಿಯನ್ನು ಆರಿಸಿಕೊಂಡಿರುವೆನೆಂದು ತಿಳಿಸಿದಾಗ ಸೀತಮ್ಮ ಸಿಡಿದು ಬಿದ್ದಿದ್ದರು!!!.. ‘ನಾವ್ಯಾಕಿರೋದು ದೊಡ್ಡವರು ದಂಡಕ್ಕೆ’… ಅವರ ಮನೆಯೋರು ನಮ್ಮ ಮನೆಗೆ ನಾಕುಸಲ ಅಲೆದರಾ?…. ನಾವು ಹುಡುಗೀನ ನೋಡಿ, ಒಪ್ಪಿ, ಉಪ್ಪಿಟ್ಟು-ಕೇಸರೀಭಾತ್ ತಿಂದ್ಕೊಂಡು ಸಂತೋಷ್ವಾಗಿ ಬಂದ್ವಾ?…. ಹೂಂ… ಒಂದೂ ಇಲ್ಲ.’ – ಅಸಮಾಧಾನದಿಂದ ಕಿಡಿ ಕಾರಿದರು.
ಗಿರೀಶ ಕೂಡಲೇ ಈ ಸುದ್ದಿಯನ್ನು ಲತಳ ಮನೆಯವರಿಗೆ ಮುಟ್ಟಿಸಿರಬೇಕು. ಅವಳ ತಂದೆ-ತಾಯಿ ಜಾತಕ ಹಿಡಿದುಕೊಂಡು ಓಡಿ ಬಂದರು. ‘ಜಾತಕ ಕೂಡಿದೆ, ಇಲ್ಲ’ ಎಂದು ತಿಳಿಸಲು ಸೀತಮ್ಮ, ಅವರನ್ನು ಮತ್ತಷ್ಟು ಬಾರಿ ತಮ್ಮ ಮನೆಗೆ ಅಲೆಯುವಂತೆ ಮಾಡಿದರು.
ನಿಶ್ಚಿತಾರ್ಥದ ದಿನ ಚಿರೋಟಿ ಊಟ ಇಟ್ಕೋಬೇಕು. ತೆಂಗಿನ ಕಾಯಿ ಅಡಿಕೆಲೆ… ನಮ್ಮಡೆ ತುಂಬ ಜನ ದೊಡ್ಡ ಮನುಷ್ಯರು ಬರ್ತಾರೆ. ಚೂರೂ ಲೋಪವಾಗದ ಹಾಗೆ ನೋಡ್ಕೋಬೇಕು… ಹುಡುಗನಿಗೆ ವಾಚು, ಉಂಗುರ, ಬೆಳ್ಳಿ ಪಾತ್ರೆಗಳು, ವರದಕ್ಷಿಣೆ ಇತ್ಯಾದಿ ಇತ್ಯಾದಿ ಎಲ್ಲ ನಿಮಗೆ ಗೊತ್ತೇ ಇದೆಯಲ್ಲ… ನನ್ನ ಮಗಳು-ಸೊಸೆಯರಿಗೆಲ್ಲ ರೇಷ್ಮೆ ಸೀರೆ, ಗಂಡು ಮಕ್ಕಳಿಗೆ ಬಟ್ಟೆ…;’
‘ನೀನು ಯಾವ ಕಾಲದಲ್ಲಿದ್ದೀಯಮ್ಮ; – ಎಂದು ಗಿರೀಶ ಮುಖ ಸೊಟ್ಟಗೆ ಮಾಡಿದ. ಲತಳ ತಂದೆ ಹಾಂ ಹೂಂ ಎನ್ನುವಂತಿರಲಿಲ್ಲ. ಲತಾ, ಗಿರೀಶನನ್ನೇ ಮದುವೆ ಮಾಡಿಕೊಳ್ಳೋದು ಎಂದು ಹಟ ಹಿಡಿದಿದ್ದಳು. ಮದುವೆ ಮನೆಯಲ್ಲೂ ಸೀತಮ್ಮನದು ಅದೇನು ಅಡಾವುಡಿ!!!… ಮಾತೆತ್ತಿದರೆ ಮುನಿಸು…
‘ವಿಚಿತ್ರ ಹೆಂಗಸು! ಎಂದು ಎಲ್ಲರೂ ಒಳಗೇ ಗೊಣಗೊಟ್ಟಿಕೊಂಡರೂ ತುಟಿ ಎರಡು ಮಾಡಿರಲಿಲ್ಲ. ಸೀತಮ್ಮ ಯಾರನ್ನೂ ಕೇರ್ ಮಾಡಲಿಲ್ಲ. ಕೋಸಂಬರಿ ಸರಿಯಾಗಿ ಬಡಿಸಲಿಲ್ಲ ಎಂದು ಕೋಪ… ಲತನ ಅಕ್ಕನಿಗೆ ಕೊಟ್ಟ ಹಾಗೆ ಬೆಳ್ಳಿಯ ದೇವರ ಸಾಮಾನು ಗಳನ್ನು ಕೊಡಲಿಲ್ಲ. ರಿಸೆಪ್ಷನ್ ತೆಂಗಿನಕಾಯಿ ಚಿಕ್ಕದಾಯ್ತು… ತಮಗೆ ಕೊಟ್ಟ ಸೀರೆಯಲ್ಲಿ ಜರಿ ಕಡಿಮೆಯಿದೆ ಅಂಥ ಏನೇನೊ ಸಿಟ್ಟುಗಳು. ಅಂತೂ ಮೂರು ದಿನ ತಳ್ಳೋದರಲ್ಲಿ ಲತಳನ್ನು ಹೆತ್ತವರು ಬಟ್ಟೆಯಾದರು.
‘ಶುಕ್ರವಾರ ಛತ್ರ ಬಿಡಲ್ಲ…ಏಕಾದಶಿ ಶಾಸ್ತ್ರ ನಡೆಯೋ ಹಾಗಿಲ್ಲ’ ಎಂದು ಸೀತಮ್ಮ ಗಟ್ಟಿಗತನದಿಂದ ಐದು ದಿನಗಳವರೆಗೆ ಅಲ್ಲೇ ಠಿಕಾಣಿ ಹೂಡಿದ್ದರು. ‘ಇನ್ನೇನು ಊರಿಗೆ ಹೋಗೋದು? ದೀಪಾವಳಿ ಎಂಟೇ ದಿನವಿದೆ… ಮತ್ತೆ ಬಸ್ ಚಾರ್ಜ್ ದಂಡ. ಹೋಗಿ ಬರೋದ್ಯಾಕೆ?… ನಮ್ಮನ್ನ ಒಂದು ಬಿಡದಿ ಮನೆ ಮಾಡಿ ಇಳಿಸಿಬಿಡಿ’ ಎಂದಾಗ ಬೀಗರು ಪೂರಾ ಸುಸ್ತಾದರು. ಆದರೂ ಸೀತಮ್ಮ ಜಗ್ಗುವ ಹಾಗೆ ಕಾಣದಾದಾಗ ಎದುರುಗಡೆ ಮನೆಯವರನ್ನು ಕೇಳಿಕೊಂಡು ಒಂದು ಕೋಣೆ ಬಿಡಿಸಿಕೊಟ್ಟಿದ್ದರು.
ಹದಿನೈದು ದಿನಗಳು ಬೀಗರ ಶೋಷಣೆ ಮಾಡಿ ಸೀತಮ್ಮ ಹೊರಟಾಗ, ಬೀಗರ ಅರ್ಧ ಮನೆಯಷ್ಟು ಸಾಮಾನು ಗಾಡಿಯೇರಿತ್ತು. ಮುಂದೆ ಪ್ರತಿಯೊಂದು ಹಬ್ಬ-ಹರಿದಿನದಲ್ಲೂ ಕೊಡುವ ಬಿಡುವ ಬಗ್ಗೆ ಆಕ್ಷೇಪಣೆಯಂತೂ ತಪ್ಪಲಿಲ್ಲ. ಲತಾ ಅತ್ತೆಯ ದುರಾಸೆ ಸ್ವಭಾವದ ಬಗ್ಗೆ ಅಸಮಾಧಾನದಿಂದ ಕುದಿಯುತ್ತಿದ್ದರೂ ಉಳಿದ ಮೂರು ಜನ ವಾರಗಿತ್ತಿಯರೊಂದಿಗೆ ಮೂಕವಾಗಿ ಆಕೆಯ ದರ್ಪರಥದ ಚಕ್ರವಾಗಿ ಮುಂದೆ ಸಾಗದೆ ವಿಧಿಯಿರಲಿಲ್ಲ.
ನೆನಪುಗಳ ಗದ್ದಲದ ಅರೆಬರೆ ನಿದ್ದೆಯಲ್ಲಿ ಅತ್ತೆಯ ಕಾಟದಿಂದ, ಬೆಳಗಾಗುವುದರಲ್ಲಿ ನಾಲ್ಕು ಜನರೂ ಸುಸ್ತಾಗಿದ್ದರು. ಕಣ್ಣುಗಳು ಕೆಂಪು ಕೆಂಪು. ಬೆಳಗಿನ ಕಾಫಿ-ತಿಂಡಿ ಮಾಡಿಡಲು ಇಬ್ಬರು ಮನೆಗೆ ಓಡಿದರು. ಇನ್ನಿಬ್ಬರು ಅತ್ತೆಯ ಕೈಕಂಕರ್ಯಕ್ಕೆ ಸಿದ್ಧವಾಗಿ ನಿಂತರು.
ಮನೆಯಿಂದ ಹಾರ್ಲಿಕ್ಸು, ತಿಂಡಿ ಬಂತು. ಸೀತಮ್ಮ ಗೆಲುವಾಗಿ ಕುಳಿತು ತಿಂದರೂ ಸಪ್ಪಗಿನ ದನಿಯಲ್ಲಿ, ‘ಆಯ್ತಿನ್ನು… ಎಲ್ಲರನ್ನು ಕರೆಸಿಬಿಡು ಪ್ರಭಾ… ಕಣ್ತುಂಬ ನೋಡಿ ಬಿಡ್ತೀನಿ… ಇನ್ನು ನಾನುಳಿಯಲ್ಲ. ಖಂಡಿತ ಇಲ್ಲ… ನಾಳೆ ದಿನ ವೈಕುಂಠ ಏಕಾದಶಿ… ಮಹಾದಿನ… ಸ್ವರ್ಗದ ಬಾಗ್ಲು ತೆಗೆಯುತ್ತೆ. ನಾನು ನಾಳೆ ಹೊರಟುಹೋಗ್ತೀನಿ… ಆ ದೇವ್ರು ಮತ್ತೈದೆ ಸಾವು ಕರುಣಿಸಿದನಲ್ಲ ಅಷ್ಟೇ ಸಾಕು, ಏಳೇಳು ಜನ್ಮದ ಪುಣ್ಯ… ಅವರನ್ನು ಸ್ವಲ್ಪ ಬರಹೇಳು.’ ಸೀತಮ್ಮ ವ್ಯವಸ್ಥಿತವಾಗಿ ಬಡಬಡಿಸಿದರು.
ಅತ್ತೆ ಆರೈಕೆ ಹೊಂದಿ, ಸುಖವಾಗಿ ಮನೆಗೆ ಮರಳಿ ಬರುವ ನಿರೀಕ್ಷೆಯಲ್ಲಿದ್ದ ಸೊಸೆಯರಿಗೆ ಆಕೆಯ ಮಾತು ಕೇಳಿ ರಾವು ಬಡಿದಂತಾಯ್ತು. ಪ್ರಪಂಚದ ಬಗ್ಗೆ, ಭೌತಿಕ ವಸ್ತುಗಳ ಬಗ್ಗೆ ಅತೀವ ವ್ಯಾಮೋಹ ಇಟ್ಟುಕೊಂಡಿರುವಾಕೆ ಇವನ್ನೆಲ್ಲ ಖಂಡಿತ ಬಿಟ್ಟು ಹೋಗುತ್ತಾರೆಯೇ ಎಂಬ ಅಪನಂಬಿಕೆ ಹರಡತೊಡಗಿತು.
ಮಧ್ಯಾಹ್ನವಾಗುವುದರಲ್ಲಿ ಆಕೆ ಹೊರಡುವುದು ನಿಶ್ಚಯವಾಗಿತ್ತು. ಅಷ್ಟು ಹೊತ್ತಿಗೆ ಸೀತಮ್ಮ ಸುಮಾರು ನೂರು ಬಾರಿಯಾದರೂ ಅದನ್ನು ಬಾಯಲ್ಲಿ ಅಂದು ಖಚಿತಪಡಿಸಿದ್ದರು. ಬೇಕಾದ ನೆಂಟರುಗಳಿಗೆಲ್ಲ ಹೇಳಿ ಕಳುಹಿಸಿದ್ದರು. ಹೆಣ್ಣು ಮಕ್ಕಳು ಊರುಗಳಿಂದ ಬಂದು ಇಳಿದರು. ತಾಯಿ-ಮಕ್ಕಳು ಅಳುವುದು ಕರೆಯುವುದು ನಡೆಯಿತು. ಗಂಡು ಮಕ್ಕಳೂ ರಜ ಹಾಕಿ ಮಂಕಾಗಿ ತಾಯಿಯ ಬಳಿ ಕುಳಿತರು. ಮೊಮ್ಮಕ್ಕಳೂ ಗದ್ದಲ ನಿಲ್ಲಿಸಿ ಅಜ್ಜಿಗೆ ವಿದಾಯ ಹೇಳಲು ನೆರೆದಿದ್ದರು. ಧೈರ್ಯ ಉಡುಗದೇ ಇದ್ದವರೆಂದರೆ ರಾಮಚಂದ್ರಯ್ಯನವರೊಬ್ಬರೇ.
‘ ಸುಮ್ನೆ ಇಲ್ಲದ್ದೆಲ್ಲ ತಲೆ ಕೆಡಿಸಿಕೊಳ್ತೀ… ನಿನ್ನದ್ಯಾವತ್ತೂ ಇದ್ದದ್ದೇ ಗಾಬರಿ…ನಿಂಗೇನಾಗಿದೆ ಅಂತ ಹೀಗಾಡ್ತೀ. ಕಲ್ಲು ಗುಂಡು ಇದ್ಹಾಗಿದ್ದೀಯ. ಇಂಥ ಹತ್ತು ವೈಕುಂಠ ಏಕಾದಶಿ ದಾಟುತ್ತೀ… ಭಯಪಡಬೇಡ… ಇನ್ನೂ ಎಷ್ಟು ಜನರ ಮುಂಜಿ-ಮದ್ವೆ ಬಾಕಿಯಿದೆ. ಆ ಸಂಭ್ರಮಗಳಲ್ಲಿ ಭಾಗವಹಿಸದೆ ಹೋಗ್ತೀಯಾ… ಎಂಥ ಮಾತಾಡ್ತ್ತೀ ಬಿಡು’ _ ಕೀಟಲೆಯಾಗಿ, ರೇಗಿಕೊಂಡೇ ಸಮಾಧಾನ ಹೇಳಿ ಹೆಂಡತಿಯ ಮನಸ್ಸಿನಿಂದ ಸಾವಿನ ಕೀಟವನ್ನು ತೊಲಗಿಸಲು ಪ್ರಯತ್ನಿಸಿದರು. ಆದರೆ ಸೀತಮ್ಮನವರಿಗೆ ತಾವು ಹೋಗುವುದು ಗೊತ್ತಾಗಿತ್ತು.
‘ಮುತ್ತೈದೆ ಸಾವು… ಮಕ್ಳೆಲ್ಲ ದೊಡ್ಡೋರಾಗಿ ಅವರವರ ಸಂಸಾರ ಬೆಳೆದಿದೆ… ಸುಖವಾಗಿದ್ದಾರೆ ಇನ್ನೇನು ಬೇಕು… ನಾನು ನಿಮ್ಮ ಕಣ್ಮುಂದೆಯೇ…?’ ಗಂಟಲುಬ್ಬಿ ಬಂತು ಆಕೆಗೆ.
ರಾಮಚಂದ್ರಯ್ಯ ಈ ಬಾರಿ ಮೌನವಾದರು. ಕೋಣೆಯೊಳಗೆ ಶೋಕ ಲಕ್ಷಣ ಅಡಿಯಿರಿಸಿತ್ತು. ತೀರ್ಮಾನದ ಶಿಲಾಶಾಸನವನ್ನು ಒಂದೇ ಸಮನೆ ಘೋಷಿಸುತ್ತಿರುವ ತಾಯಿಯನ್ನು ಸುಮ್ಮನಾಗಿಸುವ ಮಾರ್ಗ ತೋರದೆ ಗಂಡು ಮಕ್ಕಳು ನೊಂದುಕೊಂಡು ಕಾರಿಡಾರಿನಲ್ಲಿ ಅಡ್ಡಾಡತೊಡಗಿದರು.
‘ಲತಾ, ಹೋಗಮ್ಮ ನನ್ನ ಹಸಿರು ಸೀರೆ ತೊಗೊಂಡು ಬಾ… ಪ್ರಭಾ, ಮರದ ಜೊತೆ ಸಿದ್ದ ಮಾಡ್ಕೊಂಡು ಬಾ… ಸುಧಾ, ಹಸಿರು ಬಳೆ-ಕುಂಕುಮ, ಅರಿಶಿನ, ಹೂವು…ಹೇಮಾ, ನನ್ನ ಒಡವೆಗಳು…’
ಸೀತಮ್ಮನ ಕೊನೆಯ ಬಯಕೆ ಕ್ಷಣಕಾಲದಲ್ಲಿ ಈಡೇರಿತು. ಸೀತಮ್ಮ, ತೊಟ್ಟಿದ್ದ ಆಸ್ಪತ್ರೆಯ ನಿಲುವಂಗಿ ಕಳಚಿ, ಲಕ್ಷಣವಾಗಿ ಹದಿನೆಂಟು ಮೊಳದ ಹಸಿರು ಧರ್ಮಾವರಂ ಕಚ್ಚೆ ಸೀರೆ ಉಟ್ಟು, ಹಸಿರು ಬಳೆ ಒಡವೆ ತೊಟ್ಟು, ಹೂ ಮುಡಿದು, ಹಿರೀ ಮಗಳನ್ನು ಕೂರಿಸಿ ಮುತ್ತೈದೆಗೆ ಬಾಗಿನ ದಾನ ಕೊಟ್ಟರು. ಈ ದೃಶ್ಯವನ್ನು ಕಾಣುತ್ತ ಸುತ್ತಲಿದ್ದವರು ಮೌನವಾಗಿ ಕಣ್ಣಂಚಿನ ನೀರನ್ನು ತೊಡೆದುಕೊಂಡರು. ಸಾಲಾಗಿ ನಾಲ್ಕು ಜನ ಸೊಸೆಯರೂ ಅತ್ತೆಯ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು. ಸೀತಮ್ಮ, ಮೊಮ್ಮಕ್ಕಳಿಗೆ ಬುದ್ಧಿವಾದ ಹೇಳಿ ಹರಸಿ ಕಡೆಯದಾಗಿ ರಾಮಚಂದ್ರಯ್ಯನವರ ಕೈಯಿಂದ ಹಣೆಗೆ ಕುಂಕುಮ ಇರಿಸಿಕೊಂಡು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.
ದೃಶ್ಯ ನಾಟಕೀಯವಾಗಿ ಬೆಳೆಯುತ್ತ ಹೋದರೂ ಕೋಣೆಯೊಳಗೆ ಅಡಿಯಿರಿಸಿದ ಪ್ರತಿಯೊಬ್ಬರೂ ಅದರಲ್ಲಿ ಭಾಗವಹಿಸಿ ಅನುಕಂಪದ ಲೇಪನ ಮಾಡಿದರು. ಡಾಕ್ಟರ್ ಬಂದು ಧೈರ್ಯ ಹೇಳಿದರೂ ದೃಶ್ಯ-ಧೋರಣೆ ವ್ಯತ್ಯಾಸವಾಗಲಿಲ್ಲ.
ಕಡೇ ಮಗಳು ರಚನಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಸೀತಮ್ಮ ಅವಳ ತಲೆ ನೇವರಿಸಿ ಸಾಂತ್ವನಗೊಳಿಸುತ್ತ ತಮ್ಮ ಜೀವನವನ್ನೇ ಕಿತ್ತುಕೊಟ್ಟಂತೆ ಸೊಂಟದಲ್ಲಿ ತೂಗಾಡುತ್ತಿದ್ದ ಬೀಗದ ಕೈ ಗೊಂಚಲನ್ನು ಅವಳ ಕೈಗಿತ್ತು, ಮುಖ ಕಹಿಮಾಡಿಕೊಂಡರು. ತಮ್ಮ ಸಾವನ್ನು ನೆನೆಸಿಕೊಂಡು ಅವರಿಗೇ ದುಃಖ ಭೋರ್ಗರೆದು ಬಂತು. ಕಣ್ಮುಂದೆ ನಿಂತಿರುವ ಬಂಧು-ಬಾಂಧವರು ಒಡವೆ ಸೀರೆ-ಆಸ್ತಿ ವಸ್ತುಗಳಿಂದ ಮೆಲ್ಲ ಮೆಲ್ಲನೆ ಹಿಂದಕ್ಕೆ ತೇಲಿ ಹೋಗುತ್ತಿರುವಂತೆ ಭಾಸವಾಗಿ ಒಮ್ಮೆಲೇ ಕಾಣದಂತಾದಾಗ ಎದೆ ಸಿಡಿದು ಚಿಟ್ಟನೆ ಚೀರಿ ಹಾಸಿಗೆಯ ಮೇಲೆ ನಿಶ್ಚೇಷ್ಟಿತರಾಗಿ ಬಿದ್ದರು ಸೀತಮ್ಮ. ತತ್‍ಕ್ಷಣ ಡಾಕ್ಟರ್ ಬಂದು ಪರೀಕ್ಷಿಸಿದರು. ಎಲ್ಲರಿಗೂ ಪರಿಸ್ಥಿತಿ ಅರ್ಥವಾಗಿತ್ತು. ತೃಪ್ತಿಯಾಗುವ ತನಕ ಆಕೆಯ ದರ್ಶನ ಮಾಡಿ ಒಬ್ಬೊಬ್ಬರೇ ಮೆಲ್ಲಗೆ ಅಲ್ಲಿಂದ ಕದಲಿದರು.
ಕಡೆಯಲ್ಲಿ ನಾಲ್ಕು ಜನ ಸೊಸೆಯರು, ರಚನಾ ಮಾತ್ರ ಉಳಿದರು. ಮಂಚದ ಕಾಲಿನ ಬುಡಕ್ಕೆ ಒರಗಿ ತಲೆಯ ಮೇಲೆ ಕೈ ಹೊತ್ತು ಕುಳಿತರು. ಬೆಳಕು ಹರಿಯುವುದರೊಳಗೆ ವೈಕುಂಠದ ಬಾಗಿಲು ತೆರೆಯುತ್ತಿದ್ದ ಹಾಗೆ ಅಲ್ಲಿಗೆ ಸೀತಮ್ಮನದೇ ಮೊದಲ ಪ್ರವೇಶ ಎಂದು ನೆನೆಯುತ್ತ ಸುಧಾಳಲ್ಲಿ ಭಯ-ದುಃಖ-ಆಶ್ಚರ್ಯ ಒಟ್ಟಿಗೆ ಮಿಳಿತಗೊಂಡವು. ಅತ್ತೆ ಈ ಪ್ರಾಪಂಚಿಕ ವಸ್ತುಗಳನ್ನೆಲ್ಲ ಬಿಟ್ಟು ಹೋಗುವ ವಿಚಾರ ನಿಜವಾಗಿ ಶೋಚನೀಯವೆನಿಸಿದರೂ ಚೋದ್ಯ ಎನಿಸಿತು.
ಹೇಮಳಿಗೂ ಕೌತುಕ!… ತಮ್ಮೆಲ್ಲರ ಮದುವೆಯಿಂದ ಹಿಡಿದು, ಇಂದಿನವರೆಗೂ ದಬ್ಬಾಳಿಕೆ ನಡೆಸಿಕೊಂಡೇ ಬರುತ್ತಿರುವ ಈ ಗಟ್ಟಿಗತ್ತಿಯ ನಾಟಕೀಯ ಮಡಿ ಆಚಾರ, ಪೂಜೆ-ಪುನಸ್ಕಾರಗಳಿಗೆ ಮನಸೋತು ದೇವರು ಸ್ವರ್ಗಕ್ಕೆ ಸೇರಿಸಿಕೊಳ್ಳುತ್ತಿರುವುದು ಸರಿಯೇ?
ಪ್ರಭಳ ಆಲೋಚನೆ ಮತ್ತೊಂದು ಕವಲು. ಅಂತೂ ಕಡೆಗೂ ಬೀಗದ ಕೈ ಗೊಂಚಲು ಮಗಳಿಗೇ ಕೊಟ್ಟರೇ ಹೊರತು ಇಷ್ಟು ದಿನ ಸೇವೆ ಮಾಡಿಕೊಂಡು ಬಂದ ಸೊಸೆಯರಿಗಲ್ಲ… ಇದು ಯಾವ ನ್ಯಾಯ? ಅಂಥವರಿಗೆ ನಾಳೆ ಸ್ವರ್ಗಪ್ರಾಪ್ತಿಯೇ ಎಂಬ ಕಿಚ್ಚು ಭುಗಿಲ್ಲೆನ್ನ ತೊಡಗಿತು.
ಲತಳ ನಿರೀಕ್ಷೆ, ತಾಳ್ಮೆಯ ಬಸಿರೊಡೆದು ಹೊರ ಬರುವಂತಿತ್ತು. ಅತ್ತೆಯ ಆಳ್ವಿಕೆಯಿಲ್ಲದ ಮನೆ ಇನ್ನು ಮೇಲೆ ಹೇಗಿರುತ್ತದೋ? ಕಲ್ಪನೆ ಊಹಾತೀತವಾಗಿ ಸಾಗುತ್ತಿತ್ತು.
ಇಡೀ ರಾತ್ರಿ ಯಾರಿಗೂ ನಿದ್ರೆಯಿಲ್ಲ. ಗಳಿಗೆಗಳು ಗಂಟೆಯನ್ನು ಹೊತ್ತು ನಡೆಯುತ್ತಿರುವಂತೆ ಭಾಸ. ಪೂರ್ವ ದಿಕ್ಕನ್ನೇ ದಿಟ್ಟಿಸುತ್ತ ಪ್ರತಿಯೊಬ್ಬರೂ ಗಳಿಗೆ ಗಳಿಗೆಗೂ ಸೀತಮ್ಮನ ಮುಖದತ್ತ ಬಾಗಿ ಬಾಗಿ ನೋಡುತ್ತಾರೆ. ಎಂದಿನಂತೆ ಆಕೆ ಮಧ್ಯರಾತ್ರಿಯಲ್ಲಿ ಒಂದು ಬಾರಿಯೂ ಏಳಲಿಲ್ಲ. ನೀರು-ಸೆಕೆ ಎಂದು ಉಸಿರು ಹಾಕಲಿಲ್ಲ. ಕದಲದ ಸ್ಥೂಲಕಾಯ ಮಲಗಿದಲ್ಲೇ ಮಲಗಿತ್ತು.
ಪೂರ್ವ ದಿಕ್ಕಿನಲ್ಲಿ ಸೂರ್ಯನ ಕಿರಣಗಳು ಬೆಳಕಿನ ಸರಪಳಿಗಳಂತೆ ತೆಳುವಾಗಿ ಹರಡತೊಡಗಿದಾಗ ಅವರ ಆತಂಕ ಉಬ್ಬಿ, ಸಿದ್ಧಪಡಿಸಿಕೊಂಡಿದ್ದ ಗಂಗಾ ತಾಲಿಯನ್ನು ಒಡೆದು ಪಕ್ಕದ ಮೇಜಿನ ಮೇಲೆ ಇಟ್ಟುಕೊಂಡರು.
ಸೀತಮ್ಮನ ಉಸಿರು ಉಬ್ಬುಬ್ಬಿ ಇಳಿಯುತ್ತಿತ್ತು. ಕತ್ತಿನಲ್ಲಿ ಕೊತಕೊತ ಸಣ್ಣ ಸಪ್ಪುಳ… ಗುಟುಕು ಪ್ರಾಣ ಆಡುತ್ತಿರಬೇಕೆಂದು ಬೇಗ ಡಾಕ್ಟರರನ್ನು ಕರೆತಂದರು. ಮುಂದಿನ ಘಟನೆಗೆ ತಯಾರಾಗಿ ನಿಂತ ಅವರ ಭಾವನೆಗಳನ್ನು ಅರಿಯುವ ಗೋಜಿಗೆ ಹೋಗದೆ, ಡಾಕ್ಟರ್, ಮಾಮೂಲಿನಂತೆ ಆಕೆಯ ನಾಡಿ ಬಡಿತ ನೋಡಿ ಬ್ಯಾಟರಿ ತೆಗೆದುಕೊಂಡು ಸೀತಮ್ಮನ ಕಣ್ಣುಗಳಿಗೆ ಬಿಟ್ಟರು.
‘ಅಯ್ಯೋ ರಚೂ, ಕಬ್ಬಿಣದ ಪೆಟ್ಟಿಗೆ ಬೀಗದ ಕೈ’ ಎಂದು ಜೋರಾಗಿ ಚೀರಿಕೊಂಡು ಹಾಸಿಗೆಯ ಮೇಲೆ ಹಾರಿ ಕುಳಿತ ಸೀತಮ್ಮ, ದಡದಡ ಸೊಂಟವೆಲ್ಲ ತಡವಿ ನೋಡಿಕೊಂಡು ಗಾಬರಿಯಿಂದ, ‘ಅಯ್ಯೋ ರಚೂ, ಬೀಗದ ಕೈ ಇಲ್ವಲ್ಲೇ’ ಎಂದು ಕೂಗಾಡಿದರು. ರಚನಾ ಅದೇ ವೇಗದಲ್ಲಿ ತಾಯಿ ಬಳಿ ಹಾರಿ ಬಂದು , ಬೀಗದ ಕೈಗೊಂಚಲನ್ನು ಕುಲುಕುಲು ಜೋರಾಗಿ ಸಪ್ಪುಳ ಮಾಡಿ ಅದನ್ನ ವರ ಸೊಂಟಕ್ಕೆ ಸಿಕ್ಕಿಸಿ, ಅವರ ಎದೆ ನೀವಿ, ‘ಗಾಬರಿಯಾಗ್ಬೇಡ ಜೋಪಾನ್ವಾಗಿದೆ’ ಎಂದು ಸಮಾಧಾನಪಡಿಸಿದ ಮೇಲೆ ಸೀತಮ್ಮ ನಿಡಿದಾದ ದೊಡ್ಡ ಉಸಿರುಬಿಟ್ಟರು.
ಅಷ್ಟರಲ್ಲಿ ಸುಧಳ ಮಗ ಎದುಸಿರು ಬಿಡುತ್ತ ಒಳಗೆ ಓಡೋಡಿ ಬಂದವನೆ, ‘ಅಮ್ಮಾ ಅಮ್ಮಾ…ಅಜ್ಜಿ ಅಜ್ಜಿ…’ ಎಂದು ಬಿಕ್ಕಳಿಸುತ್ತ ನಿಂತುಕೊಂಡ. ‘ ತಾತ ಹೋಗಿಬಿಟ್ರು… ರಾತ್ರಿ ಮಲಗಿದವರು ಏಳಲೇ ಇಲ್ಲ’ ಎಂದು ರಾಮಚಂದ್ರಯ್ಯನವರ ಸಾವಿನ ಸುದ್ದಿ ತಿಳಿಸಿದಾಗ ಎಲ್ಲರೂ ದಿಗ್ಭ್ರಮೆಯಿಂದ ಕಲ್ಲಿನಂತೆ ನಿಂತರು.
************