ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥಕ ಪ್ರತಿಭಾವಂತ ನೃತ್ಯಕಲಾವಿದೆ ಮತ್ತು ನಾಟ್ಯಗುರು ಎನ್.ಸಜಿನಿ, ಸುಮಾರು ಮೂರುದಶಕಗಳ ನಾಟ್ಯಾನುಭಾವ ಹೊಂದಿದ್ದಾರೆ. ಬೆಂಗಳೂರಿನ ಸುಪ್ರಸಿದ್ಧ ‘’ಶಿವಪ್ರಿಯ’’ ನಾಟ್ಯಸಂಸ್ಥೆಯ ಜೀವನಾಡಿಯಾಗಿ, ಉದಯೋನ್ಮುಖ ಕಲಾವಿದರ ಅಭಿವೃದ್ಧಿಗಾಗಿ, ಚಟುವಟಿಕೆಯಿಂದ ತೊಡಗಿಸಿಕೊಂಡು, ಸೇವೆ ಸಲ್ಲಿಸುತ್ತಿರುವ ಈಕೆ ನೂರಾರು ಉತ್ತಮ ಕಲಾವಿದರನ್ನು ತಯಾರು ಮಾಡಿರುವುದು ಶ್ಲಾಘನೀಯ. ‘’ಶಿವಪ್ರಿಯ’’ದ ಎಲ್ಲ ಉತ್ತಮ ನಿರ್ಮಾಣ-ಪ್ರದರ್ಶನಗಳ ಹಿಂದೆಯೂ ಇವರ ಪರಿಶ್ರಮವಿರುವುದು ಇವರ ಬದ್ಧತೆಗೆ ಹಿಡಿದ ಕನ್ನಡಿ.
ಮೂಲತಃ ಕೇರಳದವರಾದರೂ, ಸಜಿನಿಯ ತಂದೆ ಜಯಪ್ರಕಾಶ್ ಮತ್ತು ತಾಯಿ ಸರಸ್ವತಿ ಕನ್ನಡನಾಡಿನಲ್ಲಿ ನೆಲೆಸಿ ನಾಲ್ಕೈದು ದಶಕಗಳೇ ಸಂದಿವೆ. ಸಜಿನಿ ಹುಟ್ಟಿ, ಬೆಳೆದದ್ದು, ಶಾಲಾ, ಕಾಲೇಜು ವಿದ್ಯಾಭ್ಯಾಸ ಪಡೆದದ್ದು ಇಲ್ಲೇ. ನಾಲ್ಕುವರ್ಷದ ಪುಟ್ಟಮಗುವಿದ್ದಾಗಲೇ ಅವರ ತಾಯಿ ತಮ್ಮ ಕನಸನ್ನು ಅವಳಲ್ಲಿ ಸಾಕಾರಗೊಳಿಸಲು ಭರತನಾಟ್ಯ ಕಲಿಯಲು ಮೊದಲಿಗೆ ಸರಸ್ವತಿ, ಅನಂತರ ಅನ್ನಪೂರ್ಣ ಎಂಬ ಗುರುಗಳ ಬಳಿ ಸೇರಿಸಿದರು. ನಾಟ್ಯದ ಗಂಧ-ಗಾಳಿ ಅರಿಯದ ಮುಗ್ಧಮಗು ಸಜಿನಿ, ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದರಂತೆ. ಅನಂತರ ತಾಯಿಯ ಒತ್ತಾಸೆಗೆ ಮಣಿದು, ಡಾ.ಸಂಜಯ್ ಶಾಂತಾರಾಮ್ ನೇತೃತ್ವದ ‘’ಶಿವಪ್ರಿಯ’’ ಸೇರಿದಾಗ ಅವರಿಗೆ ಹನ್ನೊಂದರ ಪ್ರಾಯ. ಸಂಜಯ್ ಅವರ ನೃತ್ಯಶಿಕ್ಷಣದ ಬಗೆಯಿಂದ ಸ್ಫೂರ್ತಿಗೊಂಡ ಸಜಿನಿ, ಉತ್ತಮ ನೃತ್ಯಸಾಧನೆ ಮಾಡುವ ಮಹದಾಸೆಯಿಂದ, ಅತ್ಯಂತ ಆಸಕ್ತಿ-ಏಕಾಗ್ರತೆ-ಪರಿಶ್ರಮಗಳಿಂದ ನೃತ್ಯ ಕಲಿತರು. ಪರಿಪೂರ್ಣ ಆಂಗಿಕಾಭಿನಯ, ಖಾಚಿತ್ಯ, ಅಂಗಶುದ್ಧಿಯ ಉತ್ತಮ ನೃತ್ಯಾಭಿನಯಕ್ಕೆ ಹೆಸರಾದ ಸಜಿನಿ ನವರಸಗಳ ಅಭಿನಯವನ್ನು ಪರಿಣಾಮಕಾರಿಯಾಗಿ ಒಡಮೂಡಿಸಬಲ್ಲ ಕಲಾವಿದೆ.
`ಶಿವಪ್ರಿಯ’ದ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಸಜಿನಿ, ಭಾಗವಹಿಸಿರುವ ಪ್ರತಿಷ್ಟಿತ ನೃತ್ಯೋತ್ಸವಗಳೆಂದರೆ, ಹಂಪಿ ಉತ್ಸವ, ಬೆಂಗಳೂರು ಹಬ್ಬ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ, ಮೈಸೂರು ದಸರಾ, ತಂಜಾವೂರಿನ ನಾಟ್ಯಾಂಜಲಿ ಉತ್ಸವ, ನಟರಾಜೋತ್ಸವ, ರವೀಂದ್ರನಾಥ ಟ್ಯಾಗೂರರ 150 ನೇ ವರ್ಧಂತಿ ಸಮಾರಂಭ ಮುಂತಾದವು.
ಈಗಾಗಲೇ ರಂಗಪ್ರವೇಶವನ್ನು ಯಶಸ್ವಿಯಾಗಿ ಪೂರೈಸಿರುವ ಸಜಿನಿ, ಬೆಂಗಳೂರು ದೂರದರ್ಶನದಲ್ಲಿ ಮಾನ್ಯತೆ ಪಡೆದಿರುವ ನೃತ್ಯಕಲಾವಿದೆ. ನೃತ್ಯದ ನಾಟಕೀಯ ಆಯಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನೃತ್ಯ ಸಂಯೋಜಿಸುವ ಸಜಿನಿಯದು ಹೊಸತನದ ಆವಿಷ್ಕಾರಕ್ಕೆ ತುಡಿಯುವ ಮನಸ್ಸು. ಅನೇಕ ಸೋಲೋ ನೃತ್ಯ ಪ್ರದರ್ಶನಗಳನ್ನು ನೀಡಿರುವ ಇವರು ಅಂಗಶುದ್ಧಿ, ಮನೋಹರ ಅಭಿನಯದಲ್ಲಿ ಪಕ್ವತೆ ಸಾಧಿಸಿದ್ದಾರೆ. ಸಾಯಿ ನೃತ್ಯೋತ್ಸವ, ಅನನ್ಯ ನೃತ್ಯೋತ್ಸವ ಮತ್ತು ಕರೂರು ನಾಟ್ಯಾಂಜಲಿಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.
ಪರಿಪೂರ್ಣತೆಗೆ ಒತ್ತುನೀಡುವ ಈಕೆ, ವೇದಿಕೆ ಏರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ತಯಾರಿ ನೀಡುವುದು ಇವರ ವಿಶೇಷಗುಣ. ಹೀಗಾಗಿ `ಗೆಜ್ಜೆಪೂಜೆ’ ಗೆ ಸಿದ್ಧಗೊಳಿಸುವ ಜವಾಬ್ದಾರಿ ಇವರದೇ. ನಟುವಾಂಗವನ್ನೂ ನಿರ್ವಹಿಸುವ ಈಕೆಗೆ ‘ಶಿವಪ್ರಿಯ’ ಬಹು ಪ್ರೀತಿಯ ತವರುಮನೆ ಎಂದರೂ ಅತಿಶಯೋಕ್ತಿಯಲ್ಲ. ಗುರು ಸಂಜಯ್ ಅವರಿಂದ ಪಡೆದ ವಿದ್ಯಾಧಾರೆಗೆ ತಾನೆಂದೂ ಚಿರಋಣಿ ಎನ್ನುವ ಕೃತಜ್ಞತಾಭಾವ ಸಜಿನಿಯವರದು. ಶಿವಪ್ರಿಯದ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಸಮರ್ಥವಾಗಿ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಸಮರ್ಥವಾಗಿ ನಿರೂಪಣೆಯನ್ನೂ ಮಾಡುವ ಕಲೆ ಇವರಿಗೆ ಕರಗತ.
ಹಿರಿಯ ನೃತ್ಯ ಕಲಾವಿದೆ ಮತ್ತು ನೃತ್ಯಜ್ಞೆ ಡಾ. ಪದ್ಮಾ ಸುಬ್ರಹ್ಮಣ್ಯಂ ನಡೆಸಿಕೊಟ್ಟ ವಿಶೇಷ ಕರಣ, ಚಾರಿಗಳು ಮುಂತಾದ ತಂತ್ರಕೌಶಲ್ಯದ `ಭರತನೃತ್ಯ’ ಕಾರ್ಯಾಗಾರ ಮತ್ತು ಗುರು ಭಾನುಮತಿಯವರ ‘ಅಭಿನಯ’, ಮೈಸೂರು ಬಿ.ನಾಗರಾಜ್ ಅವರ ಕಥಕ್ ಕಾರ್ಯಾಗಾರ, ಮಾಧವಪೆದ್ದಿ ರೆಡ್ಡಿಯವರ ಕೂಚಿಪುಡಿ, ಸಿಜು ಥಾಮಸ್ ಡೇನಿಯಲ್ ಮತ್ತು ಸುದರ್ಶನ್ ಸಂಪತ್ ಅವರ ‘ಕಲರಿಪಟ್ಟು’ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಾಕಷ್ಟು ನೃತ್ಯತರಬೇತಿ ಹೊಂದಿದ್ದಾರೆ ಸಜಿನಿ . ಪ್ರಸ್ತುತ, ನಾಟ್ಯಗುರು ಬಿ.ನಾಗರಾಜ್ ಅವರ ಬಳಿ ಕಥಕ್ ನೃತ್ಯಾಭ್ಯಾಸವನ್ನೂ ಮಾಡುತ್ತಿದ್ದು, ಜೊತೆಗೆ ತಮ್ಮದೇ ಅದ ನೃತ್ಯಶಾಲೆಯಲ್ಲಿ ನೃತ್ಯಾಂಕಾಂಕ್ಷಿಗಳಿಗೆ ನಾಟ್ಯಶಿಕ್ಷಣವನ್ನು ನೀಡುತ್ತಿದ್ದಾರೆ. ನೃತ್ಯಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟಿರುವ ಸಜಿನಿ, ನೃತ್ಯ ನನ್ನಿಂದ ಅಭೇಧ್ಯ ಎನ್ನುವ ತಾದಾತ್ಮ್ಯಭಾವ ಅಭಿವ್ಯಕ್ತಿಸುವರು.