Image default
Short Stories

ಬೆಸುಗೆ

ಕಚ್ಚಾಟದಿಂದಲೇ ಆ ದಂಪತಿಗಳಿಗೆ ಬೆಳಗು.

‘ಏಳೇ, ಆಗಲೇ ಆರುಗಂಟೆಯಾಯಿತು….. ಎಷ್ಟ್ಹೊತ್ತು ಬಿದ್ಗೋಳೋದೂ….. ಒಳ್ಳೇ ಸೋಮಾರಿತನ…..’ – ಮುದುಕನ ಒಂದೊಂದು ಮಾತೂ ಅವಳನ್ನು ಚುಚ್ಚಿ ಎಬ್ಬಿಸುತ್ತದೆ. ಹೊರಳಿ ದಢಾರನೆ ಎದ್ದು ಕೂರುತ್ತಾಳೆ ಮುದುಕಿ.

‘ಆಹಾಹಾ….. ನೀವು ಮಾತ್ರ ಪಾದರಸಾನೇನೋ….. ನಿಮಗಂತೂ ನಿದ್ದೆ ಬರಲ್ಲ…..ಬೆಳಕು ಹರಿಯೋದೇ ಕಾಯ್ತಿರ್ತೀರಿ….. ನಾನು ಮಲಗಿರೋದನ್ನ ಕಂಡ್ರೆ ನಿಮಗೆ ಹೊಟ್ಟೆಕಿಚ್ಚು….. ಅದಕ್ಕೆ ನನ್ನೂ ಎಬ್ಬಿಸಿ ಪ್ರಾಣ ತಿಂತೀರಿ’ ಎನ್ನುತ್ತ ಹಾಸಿಗೆ ಸುರುಳಿ ಮಾಡಿ ಗೋಡೆಯ ಬದಿಯಲ್ಲಿಡುತ್ತಾಳೆ. ಮೆಲ್ಲನೆ ಎದ್ದು ಬಚ್ಚಲಮನೆಗೆ ಹೋಗಿ, ಹಂಡೆಯಲ್ಲಿ ಕೈಬೆರಳದ್ದುತ್ತಾಳೆ. ಸರ್ರನೆ ಕೈ ಹಿಂದಕ್ಕೆ ತೆಗೆದುಕೊಂಡು ಹೊರಗೆ ಬಂದು ಅವನಿಗಾಗಿ ಸುತ್ತಲೂ ನೋಟ ಬೀರುತ್ತಾಳೆ. ಮುದುಕ ಕಾಣುವುದಿಲ್ಲ. ಬಾಯಲ್ಲಿರುವ ಮಾತುಗಳೆಲ್ಲ ಹೊರಗೆ ಸೋರುವಂತಾಗುತ್ತದೆ.  ಅದನ್ನು ತಡೆಹಿಡಿದು ತತ್‍ಕ್ಷಣ ಹಿತ್ತಲಿಗೆ ಬರುತ್ತಾಳೆ. ಅವನು ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಜೋಡಿಸುತ್ತಿದ್ದಾನೆ. ಅವಳ ಕೋಪ ಸ್ಫೋಟಗೊಳ್ಳುತ್ತದೆ.

‘ಯಾಕಿನ್ನೂ ಒಲೇ ಉರೀನೇ ಹಾಕಿಲ್ಲ.  ಆಗ್ಲೇ ನನ್ನ ಎಬ್ಬಿಸಿ ಕೂಡಿಸ್ ಬಿಟ್ರಿ. ನೀರು ಕಾದ ಮೇಲೆ ನನ್ನ ಏಳಿಸಬೇಕು ಅಂತ ಎಷ್ಟು ಸಲ ಬಡ್ಕೊಂಡಿಲ್ಲ?….. ಹೇಳಿದ ಮಾತು ಯಾವತ್ತಾದ್ರೂ ಕೇಳಿದ್ದೀರಾ….. ಎಲ್ಲಾ ಚಂಡಿ ಬುದ್ಧಿ ನಿಮ್ಮದು’

ಮುದುಕ ತನ್ನ ಪಾಡಿಗೆ ತಾನು ಚೆಕ್ಕೆ ಚೂರುಗಳನ್ನು ಆರಿಸುತ್ತಾನೆ. ತಲೆ ಎತ್ತುವುದಿಲ್ಲ.

‘ಏನೂ,  ನನ್ನ ಮಾತು ಕಿವೀ ಮೇಲೆ ಬಿತ್ತಾ?’

‘ಅಬ್ಬಬ್ಬ ನಿನ್ನ ಗಂಟ್ಲೇ, ನನಗೇನು ಮೂರು ಬೀದಿಗೂ ಕೇಳುತ್ತೆ….. ಹಿಂದೆ ಲಂಕಿಣಿ, ಶೂರ್ಪಣಖಿ ಅಂತ ಇದ್ರಂತಲ್ಲ-ಹೀಗೇ ಇದ್ದಿರಬೇಕು ಅಂತ ಈಗ ಅನ್ನಿಸ್ತಿದೆ.’ ಅವನ ಬೊಚ್ಚುನಗೆ ಅವಳನ್ನು ಕೆರಳಿಸುತ್ತೆ. ಇನ್ನೂ ಹತ್ತಿರ ಬರುತ್ತಾಳೆ.

‘ನೀವು ರಾಕ್ಷಸರು. ನಾನಲ್ಲ….. ಗಂಟ್ಲೊಂದು ಜೋರಾಗಿದ್ರೆ ನಾನು ರಾಕ್ಷಸೀನೇ….. ನಿಮ್ಮ ಜೊತೆ ಅಷ್ಟು ವರ್ಷದಿಂದ ಕೂಗಾಡ್ತಾ ಇದ್ರೆ ಇನ್ನೂ ಕೋಗಿಲೆ ಥರ ದನಿ ಮೃದುವಾಗಿರುತ್ತೆ ಅಂದ್ಕೊಡ್ರೇನು ? ನಿಮ್ಮ ಚರ್ಯೆ, ಮಾತು ಎಲ್ಲ ಅಂಥವರು ನೀವು ಅನ್ನೋದನ್ನ ತೋರಿಸುತ್ತೆ’ ಎಂದು ಹಿಂತಿರುಗಿ ಎರಡು ಹೆಜ್ಜೆ ಹಾಕಿ-

‘ನಾನು ಸೋಮಾರಿ ಅಂತೆ….. ಬೆಳಗ್ಗೆ ಬೇಗ ಎದ್ದು ಒಂದು ಒಲೆ ಉರಿ ಹಾಕಕ್ಕಾಗಲ್ಲ….. ಹತ್ತುಗಂಟೆಗೆ ಸರಿಯಾಗಿ ಹೊಟ್ಟೆಗೆ ಕವಳ ಬಿದ್ದುಬಿಡಬೇಕು. ನಾನೇನು ಮನುಷ್ಯಳೋ ಪಿಶಾಚೀನೋ?’ ಸಿಟ್ಟಿನಿಂದ ಗುಟುರು ಹಾಕುತ್ತಾಳೆ. ಅವನು ಮೆಲ್ಲನೆ ಮೇಲೇಳುತ್ತಾನೆ. ತುಟಿಯ ತುದಿಯಲ್ಲಿ ನಗುವಿನ ಗೆರೆ ಇನ್ನೂ ಅಳಿಸಿರುವುದಿಲ್ಲ. ಅವಳು ಕೆರಳಿದಷ್ಟೂ ಮುದುಕನಿಗೆ ಉತ್ಸಾಹ; ಅವಳು ಇಷ್ಟಕ್ಕೇ ಮಾತನ್ನು ತುಂಡು ಮಾಡಿ ಹೋದರೆ ಇವನಿಗೆ ನಿರಾಶೆ, ಅಪೂರ್ಣ ಎನಿಸುತ್ತದೆ.

ಮುದುಕ ಒಲೆಯ ಒಳಗೆ ನಾಲ್ಕು ಕಟ್ಟಿಗೆ ತೂರಿಸಿ ಬೆಂಕಿಕಡ್ಡಿ ಗೀರಿ ಅತ್ತ ಇತ್ತ ನೋಡುತ್ತಾನೆ. ಮುದುಕಿಯ ಗೊಣಗು ಕೇಳುತ್ತದೆ. ಹುರುಪು ಹೆಜ್ಜೆ ಹಾಕುತ್ತಾನೆ.

‘ಮನೆಯಲ್ಲಿ ನಾನು ನೀರು ಕಾಯಿಸಿದ್ರೆ ಸ್ನಾನ’ ಕೀಟಲೆಯ ದನಿಯಿಂದ ಅವಳತ್ತ ಕುಹಕ ನೋಟ ಎಸೆಯುತ್ತಾನೆ.

‘ನಾನು ಬೇಯಿಸಿ ಹಾಕಿದ್ರೆ ಹೊಟ್ಟೆಗೆ ಕೂಳು ‘-ಅಷ್ಟೇ ಚೂಪಾದ ಉತ್ತರ ಸಿಡಿಯುತ್ತದೆ.

‘ನಾನು ತಂದು ಹಾಕಿದರಲ್ವೆ ನೀನು ಬೇಯ್ಸೋದು ತಿನ್ನೋದು? ನಾನು ತರದೇನೇ ಇದ್ದರೆ…..’ ರಾಗವನ್ನು ರಬ್ಬರಿನಂತೆ ಎಳೆಯುತ್ತಾನೆ.

‘ನಾನು ಮಾಡದೇನೇ ಇದ್ರೆ….. ನಿಮ್ಮ ಪದಾರ್ಥಗಳೆಲ್ಲ ಹಾಗೇ ಬಿದ್ದು ಮುಗ್ಗು ಎದ್ಹೋಗತ್ತೆ’

ಅವಳ ರೇಗಾಟ ಯಾಕೋ ಇನ್ನೂ ಅವನಿಗೆ ತೃಪ್ತಿ ತಂದಿಲ್ಲ.

“ಮಹಾ ಕೋಳಿಜಂಬ ಆಡಬೇಡವೇ….. ತರೋದು ಮುಖ್ಯ, ತಿಳ್ಕೋ….. ನೀನು ಬೇಯ್ಸಿ ಹಾಕದೆ ಇದ್ರೆ ಒಬ್ಬ ಅಡಿಗೆಯವಳನ್ನ ಇಟ್ಟುಕೊಂಡರಾಯಿತು’’ ಅನ್ನುತ್ತಾನೆ.

ಇದಕ್ಕೇನು ಉತ್ತರ ಬರಬಹುದೆಂದು ಅವನಿಗೆ ಈಗ ಕುತೂಹಲ. ಮುದುಕಿ ಅವನ ಜಿಗಿದಾಡುವ ಬಾಯನ್ನು ಮುಚ್ಚಿಸಲಾರದೆ ತೆಪ್ಪಗೆ ಕೂಡುತ್ತಾಳೆ. ಅವನಂಥದೇ ಉತ್ತರ ನಾಲಗೆಯಲ್ಲಿ ಈಜುತ್ತಿದ್ದರೂ ಅದನ್ನು ಹೊರಗೆ ಉಗುಳಲು ಮನಸ್ಸು ಹಿಂಜರಿಯುತ್ತದೆ. ವಿಷಯ ಬದಲಿಸುತ್ತಾಳೆ.

‘ಇಷ್ಟೇನೇ ಕಟ್ಟಿಗೆ ಹಾಕೋದು….. ಜಿಪುಣ್ರು….. ನಿಮ್ಮದೊಬ್ಬರದು ಸ್ನಾನ ಆಗಿಬಿಟ್ರೆ ಸಾಕೇ?’

‘ಹೂಂ….. ಹೂಂ….. ನಾಳೆಯಿಂದ ಬಂಡಿ ಕಟ್ಟಿಗೆ ಬಡೀತೀನಿ, ನಿಮ್ಮಪ್ಪನಿಗೆ ಒಂದು ಸೌದೆ ಅಂಗಡಿ ಇಡಕ್ಕೆ ಹೇಳು’

‘ನಮ್ಮಪ್ಪನ ಸುದ್ದಿ ಮಾತ್ರ ಎತ್ತಬೇಡಿ, ನಾ ಸುಮ್ಮಿರಲ್ಲ….. ಅವರೇನು ನಿಮ್ಮನೆ ಜನಗಳ ಥರ ಅಂಗಡಿ, ಹೋಟ್ಲು ಇಟ್ಟವರಲ್ಲ….. ಭಾರಿ ಜಮೀನುದಾರರಾಗಿ ಬಾಳಿದವರು ತಿಳ್ಕೊಳ್ಳಿ….. ನಮ್ಮಪ್ಪನ ಮನೆಯಲ್ಲಿ ಬೆಳಗ್ಗೆ ಆರು ಗಂಟೆಗೆ ಒಲೆಗೆ ಕೊರಡುಗಳನ್ನು ತುರುಕಿಬಿಟ್ರೆ ರಾತ್ರಿವರೆಗೂ ಆರಿಸ್ತಿರಲಿಲ್ಲ….. ಹಾಲು-ತುಪ್ಪದಲ್ಲಿ ಕೈ ತೊಳೀತಿದ್ವಿ….. ನಾನು ನಿಮ್ಮನೆಗೆ ಬಂದಮೇಲೆ ಈ ಥರ ಜಿಪುಣತನ ಕಂಡಿದ್ದು’ ಎಂದು ಬಿರುಸಾಗಿ ಉತ್ತರ ಬಿಸಾಕುವಳು.

ಬಾಯಿಯವರೆಗೂ ಹೋದ ತುತ್ತು ಹಿಂದಕ್ಕೆ ಬರುತ್ತದೆ. ದವಡೆಯಲ್ಲಿದ ಸಾರನ್ನವನ್ನು ಬಲವಂತದಿಂದ ಗಂಟಲಿಗೆ ನೂಕಿ – ‘ಏ…..ಏ…..ಏನೇ ಇದು ನಿನ್ನ ಅಡಿಗೆ, ಬಾಯಿಗೆ ಹಾಕಕ್ಕಾಗಲ್ವಲ್ಲ….. ಥೂ, ತಬ್ಬಲಿ ಸಾರು..’ ಮುದುಕ ಜೋರುದನಿಯಲ್ಲಿ ಗೊಣಗುತ್ತಾನೆ. ಈ ಮಾತಿಗಾಗಿಯೇ ಕಾದಿದ್ದಂತೆ ‘ಸಿರ್’ ಎಂದು ಅವನ ಮೇಲೆ ಹಾಯ್ದು ಬರುತ್ತಾಳೆ ಮುದುಕಿ.

‘ಹ್ಞೂ ಹ್ಞೂ ಇರುತ್ತೆ….. ಸಾರಿಗೆ ತಂದೆ ತಾಯಿ ಅಣ್ಣ ತಮ್ಮಂದಿರು ಎಲ್ಲ ಇರುತ್ತೆ….. ಆಮೇಲೇನಿಲ್ಲ ದಿನಾ ಹೀಗೇ ನುಂಗ್ತಾ ಬಂದಿದ್ರೆ ನೀವು ಇಷ್ಟು ಗಟ್ಟುಮುಟ್ಟಾಗಿರ್ತಿದ್ರಾ?….. ಖಾರ ತಿಂದು ಹರ್ನಿಯಾ, ಉಪ್ಪು ಮುಕ್ಕಿ ಬ್ಲಡ್ ಪ್ರೆಷರ್ರು….. ಇದನ್ನ ನಾನು ನಿಮಗೆ ಬರಿಸಲಿಲ್ವಲ್ಲ….. ಹದವಾಗಿ ಮಾಡ್ಹಾಕಿ ಎಂಬತ್ತು ವರ್ಷ ಚಿಗರೆಮರಿ ಥರ ಓಡಾಡೋ ಹಾಗೆ ಮಾಡಿದ್ದೀನಲ್ಲ. ಅದನ್ನ ನೆನೆಸಿಕೊಳ್ಳಿ….. ಉಪ್ಪಂತೆ, ಖಾರ ಅಂತೆ….. ಚಪಲ’

‘ಅಡುಗೆ ರುಚಿಯಾಗಿ ಮಾಡಕ್ಕೆ ಬರಲ್ಲ….. ಏನೋ ಒಂದು ಹೇಳ್ತಾಳೆ ….. ಕುಣಿಯಲಾರದ…..’

ತಟ್ಟನೆ  ಕೋಪದಿಂದ ಅವನ ಮಾತನ್ನು ಅರ್ಧಕ್ಕೆ ತಡೆದು-

‘ನೀವು ಗಾದೆ ಮಾತು ಎತ್ತಬೇಡಿ, ನಾ ಸುಮ್ನೆ ಇರಲ್ಲ….. ನಿಮ್ಮಂಥ ಸೋಮಾರಿಗಳು ಕೂತುಕೊಂಡು ಗಳಿಗ್ಗೊಂದು ಹೇಳ್ಲಿ ಅಂತ್ಲೇ ಈ ಹಾಳು ಗಾದೆಗಳನ್ನು ಮಾಡಿದ್ದಾರೋ ಏನೋ’ ಎಂದು ಮುದುಕಿ ಸಿಡುಕುತ್ತಾಳೆ.

‘ಜಯನ ಹಾಗೆ ನಿಂಗೆ ಮಾಡಕ್ಕ ಬರಲ್ಲ….. ಹೌದು, ಬರಲ್ಲಾರಿ.. ಇನ್ನು ಮೇಲಿಂದ್ಲಾದ್ರೂ  ಕಲ್ತುಕೋತೀನಿ ಅನ್ನು’

 -ಮತ್ತೆ ಕೆಣಕು.

‘ನಿಮಗೆ ಬಿಡಿ ಅವಳು ಮಾಡಿದ್ದು ಚೆನ್ನಾಗಿರುತ್ತೆ ಇವಳು ಮಾಡಿದ್ದು ಚೆನ್ನಾಗಿರುತ್ತೆ….. ಪ್ರಪಂಚದಲ್ಲಿರೋ ಹೆಂಗಸ್ರೆಲ್ಲರೂ ಚೆನ್ನಾಗಿ ಮಾಡ್ತಾರೆ. ನಾ ಮಾಡಿದ್ದು ಮಾತ್ರ ನಿಮಗೆ ಅಪಥ್ಯ, ಇಷ್ಟವಾಗೋಲ್ಲ….. ಅವರುಗಳ ಹಾಗೆ ಮನೇಲಿರೋ ಎಣ್ಣೆ ತುಪ್ಪ ಹಾಲು ಮೊಸ್ರು ಎಲ್ಲಾ ಸುರಿದು ಮಾಡಿದ್ರೆ ಚೆನ್ನಾಗಿರ್ದೇ ಏನ್ನಾಗಿರತ್ತೆ? ಜೊತೆಗೆ ಗಂಡಂದಿರಿಗೆ ಯದ್ವಾತದ್ವಾ ಡಯಾಬಿಟೀಸು, ಬಿಪಿ, ಕೊಲೆಸ್ಟ್ರಾಲು, ಫ್ಯಾಟು ಇನ್ನೊಂದು ಮತ್ತೊಂದು ರೋಗಗಳೂ ಬಂದು ಅಡರಿಸಿಕೊಳ್ಳತ್ವೆ …ನಾನು ಎಷ್ಟು ನಾಜೂಕಾಗಿ ಸಂಸಾರ ಮಾಡ್ತಾ ಇದ್ದೀನಿ, ಅದನ್ನು ನೋಡಿ ಹೊಗಳೋದು ಬಿಟ್ಟು ಅವರಿವರ ಮನೆಸುದ್ದಿ ಎತ್ತುತ್ತಾರೆ….. ಮುಖ್ಯ ನನ್ನ ಹಣೆಬರ….. ನಿಮಗೆ ಒಳ್ಳೆ ಬುದ್ಧಿ ಇಲ್ಲ….. ಏನಾದ್ರೂ ತೆಕ್ಕೊಂಡು ನನ್ನ ಆಡ್ತಾ ಇದ್ರೆ ನಿಮಗೆ ಸಂತೋಷ….. ಇಂಥ ಪ್ರಾಣಿ ನನಗೇ ಗಂಟುಬಿತ್ತಲ್ಲ….. ನನ್ನ ಕರ್ಮ’ -ಅವಳ ಏರುದನಿ ಇಳಿಮುಖವಾಗುತ್ತದೆ. ಕಣ್ಣಿನ ಕುಣಿಯಲ್ಲಿಲ್ಲದ ನೀರನ್ನು ಒರೆಸುತ್ತ ಬಾಗಿಲಿಗೆ ಒರುಗುತ್ತಾಳೆ. ತನ್ನಲ್ಲೇ ಗೊಣಗಿಕೊಳುತ್ತಾಳೆ.

‘ನಿಮ್ಮ ಜೊತೆ ಐವತ್ತೆಂಟು ವರ್ಷಗಳು ಸಂಸಾರ ಮಾಡಿ ಇನ್ನೂ ನಾ ಬದುಕಿದ್ದೀನಲ್ಲ. ಅದೇ ನಂಗೆ ಆಶ್ಚರ್ಯ…..’ ‘ಹೂಂ’ ಎಂಬ ನಿಟ್ಟುಸಿರು ಮಧ್ಯೆ ಮಧ್ಯೆ ಹೊರಗೆ ಇಣುಕುತ್ತದೆ. ‘ಈ ಮನೆಗೆ ಬಂದಾಗಿನಿಂದ್ಲೂ ಇದೇ ಮಾತು, ಕೂಗಾಟ ಬದಲಾಯಿಸೇ ಇಲ್ವಲ್ಲ….. ಸೊಸೆ ಮಾಡಿದ್ದೆಲ್ಲ ಅಮೃತ…. .ಉಪ್ಪುಕಾರ ಜಾಸ್ತಿ ಬಡಿದು ಅಧ್ವಾನವಾಗಿ ಕುಕ್ಕಿ ಹಾಕಿದ ದಿನ ‘ಪಾಪ, ಎಲ್ಲೋ ಜ್ಞಾನ….. ತಾಯಿ ಮನೆ ನೆನಪು ಬಂದಿರಬೇಕು ಅವಳಿಗೆ’ ಎಂದು ಸೊಸೆ ಕಡೆ ಪರವಹಿಸಿ ಹಲ್ಲಿ ಲೊಚಗುಟ್ಟಿದ ಹಾಗೆ ‘ಅಯ್ಯೋ ಪಾಪ…..’ ಅಂತ ಲೊಚಗಟ್ಟುವುದನ್ನು ಕೇಳಿ ಮೈ ಉರಿಯುತ್ತೆ. ಹಾಯಾಗಿ  ಉಂಡುಕೊಂಡು ದಿನ ದಿನಕ್ಕೆ ಅಡ್ಡಡ್ಡಕ್ಕಾಗುತ್ತಿರುವ ಅವಳನ್ನು ಕಂಡರೆ ಇವರಿಗ್ಯಾಕೆ ಇಷ್ಟು ಕರುಣೆ, ಪ್ರೀತಿ? ಅಷ್ಟು ವರ್ಷಗಳಿಂದ್ಲೂ ಮಕ್ಕಳ ಸಾಕಾಟ, ಮನೆಗೆಲಸ-ಜವಾಬ್ದಾರಿಯಿಂದ ತೇದು ಹೋಗಿರುವ ನನ್ನ ಬಗ್ಗೆ ಯಾಕೆ ಈ ಕುಹಕದ ಮಾತುಗಳು?’ – ಮನಸ್ಸು ಅಡ್ಡದಾರಿ ತುಳಿಯುತ್ತದೆ. ಹೂಂ…ಈಗ ಬಂದಿರೋ ಹಾಗೆ ‘ಡೈವೋರ್ಸು’ ಅನ್ನೋದು ನಮ್ಮ ಕಾಲದಲ್ಲಿದ್ದಿದ್ರೆ ಮಾಡೇಬಿಡ್ತಿದ್ನೇನೋ, ಆದ್ರೆ ಅದರ ಓಡಾಟಕ್ಕೆಲ್ಲ ತನಗೆಲ್ಲಿ ಬಿಡುವಿತ್ತು? ವರ್ಷವಿಡೀ ಬಸುರಿ ಬಾಣಂತನ….. ಹನ್ನೆರಡು ಮಕ್ಕಳ ತಂದೆಯಾದರೂ, ತಾತನಾದರೂ ಈತನಿಗೆ ಮೊದಲಿಂದ ವಕ್ರ ನಡತೆಯೇ ಸುತ್ತಿ ಕೊಂಡಿದೆಯಲ್ಲ….. ದಿನಾ ನನ್ನನ್ನು ಏನಾದರೂ ಅನ್ನದೇ ಇದ್ರೆ ಅವರಿಗೆ ತಿಂದದ್ದು ಅರಗೋದೇ ಇಲ್ವೇನೋ….. ಕಣ್ಣಿಗೆ ನಿದ್ದೇನೇ ಹತ್ತಲ್ವೇನೋ.’ – ಸಿಟ್ಟಿನಿಂದ ಮುಖ ಕಂದೀಲಾಗುತ್ತದೆ. ಕಾಲುಗಳಿಗೆ ಜೋಮು ಹತ್ತಿದಂತಾಗಿ ಬಾಗಿಲ ಚೌಕಟ್ಟಿಗೆ ಕೈ ಊರಿ ಮೇಲೆದ್ದು ಕಾಲು ಝಾಡಿಸುತ್ತಾಳೆ.

ಯೌವನದಲ್ಲೇ ಬೇರೂರಿದ್ದ ಬುದ್ಧಿ ಮುದುಕನಾದರೆ ಹೋಗುತ್ಯೇ? ಅದೇ ಚರ್ಯೆ. ಮೊದಲಿನಿಂದಲೂ ಮುದುಕನಿಗೆ ಯಾವಾಗ್ಲೂ ಬಾಯಿ ಆಡಿಸುತ್ತಿರಬೇಕು. ಅಕ್ಕಪಕ್ಕದ ಮನೆಯಲ್ಲಿ ಸದ್ಯಕ್ಕೆ ಯಾರೂ ಜೊತೆಗಾರರಿರಲಿಲ್ಲ. ಅವನ ಬಾಯಿಗೆ ಆಹಾರವಾಗಿ ಕಂಡವಳು ಹೆಂಡತಿ. ಮದುವೆಯಾದಾರಭ್ಯ ಅವನ ನಾಲಗೆಯ ಕೆರೆತಕ್ಕೆ ಹೆಂಡತಿಯನ್ನೇ ಒರೆಗಲ್ಲು ಮಾಡಿಕೊಂಡ. ಏನಾದರೂ ನೆಪ ಹಾಕಿಕೊಂಡು ಅವಳ ಹತ್ತಿರ ಹೋಗಿ ಮಾತು ತೆಗೆದು ರೇಗಿಸುತ್ತಾನೆ. ಕೀಟಲೆ ಮಾಡುತ್ತಾನೆ. ಅವನ ಕೊಂಕುಮಾತುಗಳಿಗೆ ಕೆರಳಿ ಮುದುಕಿ ಸದಾ ಜಗಳಕ್ಕೆ ಸಿದ್ಧ. ಅವಳ ಏರುದನಿ ಕಿವಿಯಲ್ಲಿ ನರ್ತಿಸಿದಷ್ಟೂ ಮುದುಕನಿಗೆ ಉತ್ಸಾಹ. ಅರವತ್ತು ವರ್ಷದ ಕೆಳಗಿನ ಸಮಾಚಾರಗಳನ್ನೆಲ್ಲ ಜಗಿಯುತ್ತಾನೆ, ಟೀಕಿಸುತ್ತಾನೆ. ಅವಳ ಉತ್ತರಕ್ಕಾಗಿ ಕಾಯದೆ ತುಂಟುನಗೆ ತುಳುಕಿಸುತ್ತ ಮಾತನ್ನು ಕರಗಿಸುತ್ತಾನೆ. ವರ್ಷವಿಡೀ ಹೀಗೇ ಕಳೆಯುತ್ತದೆ. ಬೇಸಿಗೆ ರಜಕ್ಕೆ ಮಕ್ಕಳು ಬಂದಾಗಲೂ ಅವರು ಬದಲಾಗುವುದಿಲ್ಲ. ನಿತ್ಯದಂತೆ ನಾಲಗೆ ಹೆಣೆಯುತ್ತಾರೆ. ಇನ್ನು ಮಕ್ಕಳು ಯಾರ ಪರ ವಹಿಸಿಯಾರು? ಇವರ ಜಗಳದ ಕೊನೆ, ಮೊದಲು, ಕಾರಣ, ಹೊಣೆ ತಿಳಿಯದೆ ಅವರನ್ನು ಅವರ ಪಾಡಿಗೆ ಬಿಟ್ಟು ನಗುತ್ತ ಹೊರಗೆ ಸುತ್ತಾಡಲು ಹೊರಟು ಹೋಗುತ್ತಾರೆ.        

ಮುದುಕ ಮುದುಕಿಯರ ಸಂಸಾರದ ಆರಂಭವೇ ಹೀಗಾದುದು. ಕೊನೆಯವರೆಗೂ ಒಂದೇ ರೀತಿ ಇರಬೇಕು ಎಂದು ಇಬ್ಬರೂ ಸಂಕಲ್ಪಿಸಿದ್ದರೋ ಏನೋ? ತುಟಿಗಳು ಆಡುತ್ತಲೇ ಇರುತ್ತವೆ. ಅಪರೂಪಕ್ಕೆ ಒಮ್ಮೆ ಮುದುಕ ತನ್ನ ಬಾಯಿಗೆ ಜಿಪ್ ಹಾಕಿ ಕುಳಿತಿದ್ದರೆ ಮುದುಕಿಗೇನೋ ಕನಿವಿಸಿ, ಅವ್ಯಕ್ತ ಮುಜುಗರದ ಬಾಧೆ. ಕೆಲಸ ಸಾಗುವುದೇ ಇಲ್ಲ. ಏನೂ ತೋಚದೆ ಖಾಲಿ ಪಾತ್ರೆಗಳನ್ನು ಗಡಗಡ ಅಲ್ಲಾಡಿಸುತ್ತಾಳೆ. ಕೊನೆಗೆ ತಾಳಲಾರದೆ ಏನಾದರೂ ತೆಕ್ಕೊಂಡು ಅವನನ್ನು ಗುದ್ದಿ ಜಗಳಕ್ಕೆ ಆಹ್ವಾನಿಸುತ್ತಾಳೆ.

‘ಎದುರು ಮನೆಯವರನ್ನ ನೋಡಿ, ಪಕ್ಕದ ಮನೆಯವರನ್ನ ನೋಡಿ, ಏನು ಜಾಣರು….. ಎಲ್ರೂ ನಿಮ್ಮ ಥರಾನೇ ಪೆದ್ದರಾಗಿರ್ತಾರೆ ಅಂದ್ಕೊಂಡಿದ್ದೀರಾ? ಸಂಸಾರಕ್ಕೊಂದು ಅನುಕೂಲ, ಅಚ್ಚುಕಟ್ಟು ಮಾಡಿಕೊಟ್ಟಿಲ್ಲ. ಒಲೆ ಊದೀ ಊದಿ ಗಂಟಲ ನಾಳ ಹರ್ಕೊಂಡು ಬಂತು….. ಒಂದೂ ಅನುಕೂಲ ಮಾಡಿ ಕೊಡ್ದೆ, ಹಾಗೆ ಮಾಡು ಹೀಗೆ ಮಾಡು ಅಂತ ಹಾರಾಡಿದರೆ ಎಲ್ಲಿ ಸಾಧ್ಯ? ಕೈ ಕೆಸರಾದರೆ ಬಾಯಿ ಮೊಸರು’

‘ಹೌದ್ಹೌದು….. ನಂಗೊತ್ತು….. ನಿಂಗೆ ಮೊದಲಿಂದ್ಗೂ ಆಚೀಚೆ ಗಂಡಸರದೇ ಹೊಗಳಾಟ….. ಹಲ್ಲೆಲ್ಲ ಬಿದ್ದಿದ್ರೂ ಇನ್ನೂ ಹರೇದ ಹುಡ್ಗಿ ಅಂದುಕೊಂಡುಬಿಟ್ಟಿದ್ದೀಯೇನೋ!’

‘ಅಯ್ಯೋ ರಾಮ….. ಇನ್ನು ನನ್ನ ಕೈಯಲ್ಲಿ ನಿಮ್ಮ ಜೊತೆ ಏಗಕ್ಕೆ ಸಾಧ್ಯವಿಲ್ಲಪ್ಪ….. ಎಲ್ಲಾದ್ರೂ ದೂರ ನಿಮ್ಮಿಂದ ದೂರ…ಕೋಟಿ ಮೈಲು ದೂರ ಹೊರಟುಹೋಗ್ತೀನಿ’ ಎಂದು ಕಡೆಯ ಅಸ್ತ್ರ ಪ್ರಯೋಗಿಸಿ ಮುಖದಲ್ಲಿ ನೆರಿಗೆಗಳ ಗೊಂಚಲುಗೂಡಿಸುತ್ತಾಳೆ.

ಈ ಬಾರಿ ಮಕ್ಕಳೆಲ್ಲ ರಜಕ್ಕೆ ಕೂಡಿದಾಗ-ಮೂರನೇ ಮಗ ಸತೀಶ ಹಾಸ್ಯ ಮಾಡಿದ್ದ. ‘ಅಮ್ಮನಿಗೆ ಐವತ್ತು ವರ್ಷ ತುಂಬಿದಾಗಿನಿಂದ ಅಪ್ಪನ ಜಗಳ ಹೆಚ್ಚಾಗ್ಹೋಗಿದೆ….. ಭಗವಂತ ಅವರಿಬ್ರ್ರಿಗೂ ಮೊದಲಿನ ಯೌವನವನ್ನೇ ಉಳಿಸಿದ್ರೆ ಅವರ ಜಗಳಾನ ನಾವು ಪರಿಹಾರ ಮಾಡಬೇಕಿರಲಿಲ್ಲ.’

ಉಳಿದವರು ಜೋರಾಗಿ ನಕ್ಕರು.

‘ಏನೋ ಮಾಡೋಣ? ಇವರ ಜಗಳ ಹೇಗೆ ನಿಲ್ಲಿಸೋದು?..ಪರಿಹಾರ?’  ಗಂಭೀರವಾಗಿ ಸಭೆ ಸೇರಿ ಚರ್ಚಿಸಿದರು. ಒಟ್ಟಿಗೆ ಇದ್ದರಂತೂ ಜಗಳ ತಪ್ಪೋದಿಲ್ಲ. ಇದರಿಂದ ಅಮ್ಮನಿಗೆ ಬ್ಲಡ್‍ಪ್ರೆಷರ್ ಏರತ್ತೆ. ಅಪ್ಪ ವೀಕ್ ಆಗ್ತಾರೆ. ಜಗಳ ಹೇಗೆ ತಪ್ಪಿಸೋದು?… ತೀರ್ಮಾನ ಮಾಡಿದರು. ಅಪ್ಪನನ್ನು ಸೀತಾ, ಅಮ್ಮನನ್ನು ರಮೇಶ ತಮ್ಮ ತಮ್ಮ ಮನೆಗಳಿಗೆ  ಕರ್ಕೊಂಡು ಹೋಗೋದು. ನಿರ್ಧಾರವನ್ನು ತಂದೆ ತಾಯಿ ಮುಂದೆ ಇಟ್ಟರು.

‘ಅಪ್ಪಾ ನೀನು ನನ್ನ ಜೊತೆ ಡೆಲ್ಲಿಗೆ ಬಾ….. ಆಮೇಲಿನಿಂದ ಗೀತಾ ನಿನ್ನ ಭುವನೇಶ್ವರಕ್ಕೆ ಕರ್ಕೊಂಡು ಹೋಗ್ತಾಳೆ. ರಮೇಶ ಅಮ್ಮನ ತಿರುವಾಂಕೂರಿಗೆ ಕರ್ಕೊಂಡು ಹೋಗ್ತಾನಂತೆ. ಒಂದಷ್ಟು ದಿನ ಹಾಯಾಗಿರಬಹುದು. ಇಬ್ರೂ ಸ್ವಲ್ಪ ಚೇತರಿಸಿಕೊಳ್ಳಬಹುದು’ ಎಂದು ಸೀತಾ ತಾಯಿ ಕಡೆ ತಿರುಗಿದಳು.

‘ನಾನೇನೋ  ಅವನ ಜೊತೆ ಹೋಗಕ್ಕೆ ಸಿದ್ಧಕಣಮ್ಮ….. ಎಷ್ಟೋ ದಿನಗಳಿಂದ ನಾನು ಇದನ್ನೇ ಅಂದ್ಕೊಳ್ತಿದ್ದೆ….. ನನಗೆ ಇಲ್ಲಿ ಪ್ರಾಣ ಕಳ್ಕೊಳ್ಕೋ ಅಷ್ಟು ಬೇಸರ ಆಗಿದೆ….. ಮತ್ತೆ ಈ ಮನೆಗೆ ನಾನಂತೂ ಬರಲ್ಲ. ಕನ್ಯಾಕುಮಾರೀಲೇ ಹಾಯಂತ ಇದ್ದುಬಿಡ್ತೀನಿ.’

‘ನಾನೂ ಅಷ್ಟೇಮ್ಮ….. ನಿಮ್ಮಮ್ಮನ ಕಾಟದಿಂದ ತಪ್ಪಿಸ್ಕೋಳ್ಳೋದು ಯಾವಾಗ ಅಂತ ಜಪಿಸ್ತಿದ್ದೆ. ಈಗ ಬಂತು ಕಾಲ. ಹಾಗೇ ಬದರಿ ಯಾತ್ರೆ ಮಾಡಿಕೊಂಡು ಬಂದು ಕಡೆಗಾಲ ಕಾಶಿಯಲ್ಲೇ ಕಳೆದುಬಿಡ್ತೀನಿ.’

 ಗಂಡ ಹೆಂಡತಿ ಮುಖ ಮುಖ ನೋಡಿಕೊಂಡರು. ‘ನಿನ್ನ ಸಹವಾಸ ಸಾಕಾಯಿತು’ ಎಂಬ ಭಾವ. ಮುದುಕಿ ಹುರುಪಿನಿಂದ ಓಡಾಡಿ ಕೃಷ್ಣಾಜಿನದ ಪೆಟ್ಟಿಗೆ, ಸೀರೆ, ಬಟ್ಟೆಗಳನ್ನು ಸಿದ್ಧಮಾಡಿಕೊಂಡಳು. ಮುದುಕ ತನ್ನ ನಶ್ಯದ ಡಬ್ಬಿ, ಕೋಲು, ಪಂಚೆ, ಟವೆಲುಗಳನ್ನು ಒಂದು ಕಡೆ ತೆಗೆದು ಜೋಡಿಸಿಟ್ಟುಕೊಂಡ.

‘ಅಪ್ಪ ಇನ್ನು ನೀವು ಭೇಟಿಯಾಗೋದು ಎಷ್ಟು ದಿನವೋ?….. ಈಗ್ಲೇ ಎಷ್ಟು ಬೇಕೋ ಅಷ್ಟು ಜಗಳ ಆಡಿ ಮುಗಿಸಿಬಿಡಿ. ಆಮೇಲೆ ಆಡಬೇಕು ಫೋನ್ ಮಾಡಿ ಕರೆಸು ಅಂದ್ರೆ ಆಗಲ್ಲ.’ – ಕಡೆ ಮಗಳು ಸುನೀತಳ ಕೀಟಲೆ.

 ‘ಇನ್ನೇನು ನಿನ್ನ ಹಂಗಿಲ್ಲ’ ಎನ್ನುವಂತೆ ಮುದುಕ ರೆಪ್ಪೆ ಉದುರಿದ ಕಣ್ಣುಗಳಿಂದ ಹೆಂಡತಿಯನ್ನು ನೇರವಾಗಿ ನೋಡಿದ. ‘ಸದ್ಯ ಶನಿಕಾಟ ಮುಗೀತು’ ಎಂದು ಆವಳೂ ನಿಟ್ಟುಸಿರು ಹೊರಹಾಕಿದಳು.

ಊರಿಗೆ ಹೊರಡುವ ದಿನಗಳು ಸಮೀಪಿಸುತ್ತಿದ್ದ ಹಾಗೆ ಅವರೀರ್ವರ ನಡುವಣ ಜಗಳ ಕಡಮೆಯಾಗುತ್ತ ಬಂತು. ಆದರೂ ಅವಳು ತಟ್ಟೆ ಹಾಕಿ ಮೌನವಾಗಿ ಊಟ ಬಡಿಸುವಾಗ ನಾಲಗೆಗಳು ಬಳುಕಾಡುತ್ತವೆ. ಮುದುಕನೂ ತಹತಹಿಸಿದ. ಆದರೆ ಮಕ್ಕಳ ನಿಬಂಧನೆ. ಅವರ ಮುಂದೆ ಆಡಿದರೆ ಬೇಸರಿಸಿಕೊಳ್ಳುತ್ತಾರೆ.

ಊರಿಗೆ ಹೊರಡುವ ಹಿಂದಿನ ದಿನ-ಮುದುಕಿ ಮಗಳನ್ನು ಒತ್ತಟ್ಟಿಗೆ ಕರೆದು- ‘ನೋಡಮ್ಮ, ಮೊದಲನೆ ಸಲ ಮುದುಕರನ್ನು ಕರ್ಕೊಂಡು ಹೋಗ್ತಿದ್ದೀಯಾ….. ಅವರ ಊಟ ತಿಂಡಿ ನಿಂಗೊತ್ತಿಲ್ಲ….. ಖಾರ, ಉಪ್ಪು, ಸಕ್ರೆ ಜಾಸ್ತಿ ಹಾಕಬೇಡ. ಕರಿದಿದ್ದು ಪರಿದಿದ್ದು ತೋರಿಸಲೇಬೇಡ….. ಪಥ್ಯದ ಅಡಿಗೆ ಮಾಡ್ಹಾಕಬೇಕು. ಹಾಲು-ಹಣ್ಣು ಮರೀದೇ ಕೊಡು. ಸಂಜೆ ವಾಕಿಂಗಿಗೆ ಹೋದಾಗ ನಿನ್ನ ಮಗನ್ನ ಜೊತೆಗೆ ಕಳಿಸು…ದೊಡ್ಡ ಊರು, ವಾಹನಗಳು ಹೆಚ್ಚು. ಇವರಿಗೆ ಅಭ್ಯಾಸ ಇಲ್ಲ. ಹೇಳಿದ ಮಾತು ಕೇಳಲ್ಲ. ಎಲ್ಲೆಲ್ಲೋ ತಿರುಗಾಡಕ್ಕೆ ಹೊರಟುಬಿಡ್ತಾರೆ… ಬಿಡಬೇಡ, ಅದೇನೋ ಸನ್‍ಸ್ಟ್ರೋಕೋ ಏನೋ ಹೇಳ್ತಾರಲ್ಲಮ್ಮ….. ನನಗಂತೂ ತುಂಬ ಭಯ. ಬಿಸಿಲಿನಲ್ಲಿ ಓಡಾಟಕ್ಕೆ ಹೆಚ್ಚಾಗಿ ಕಳುಹಿಸಬೇಡಮ್ಮ, ಹುಷಾರು’ ಎಂದು ಹೇಳಿದಾಗ ಮಗಳ  ತುಟಿಯಂಚಿನಲ್ಲಿ ಕಿರುನಗೆ!!

ಮುದುಕ, ಮಗ ಸೊಸೆಯನ್ನು ಎದುರಿಗೆ ಕೂಡಿಸಿಕೊಂಡು ಉಪದೇಶ ಹೇಳುತ್ತಿದ್ದ:

‘ಅವಳಿಗೆ ಮೊದ್ಲೇ ಬ್ಲಡ್‍ಪ್ರೆಷರ್ರು, ಆಯಾಸ ಮಾಡಿಕೊಳ್ಳಬಾರ್ದು. ಬೆಟ್ಟ–ಗುಡ್ಡ ಅಂದ್ರೆ ಅವಳಿಗೆ ಭಾಳ ಆಸೆ. ಹತ್ತಿಬಿಡ್ತಾಳೆ. ಕೈಲಾಗಲ್ಲ. ಆಮೇಲೆ ಹೆಚ್ಚು ಕಮ್ಮಿಯಾದೀತು. ಸಮುದ್ರದ ಹತ್ರ ಅಂತೂ ಕರ್ಕೊಂಡು ಹೋಗ್ಲೇಬೇಡ. ಒಳ್ಳೆ ಡಾಕ್ಟ್ರಿಗೆ ತೋರ್ಸಿ ಆಗಾಗ ಬಿ.ಪಿ. ಚೆಕಪ್ ಮಾಡಿಸ್ತಿರಬೇಕಪ್ಪ…ಏನಮ್ಮ, ಕಾಫಿ ಗೀಫಿ ಕೊಟ್ಟೀಯಾ, ಹಾರ್ಲಿಕ್ಸೇ ಅವಳು ತೋಗೊಳ್ಳೋದು. ಹುಷಾರು….. ಕಾಯಿಲೆಯವಳನ್ನು ಕರ್ಕೊಂಡು ಹೋಗ್ತಿದ್ದೀರಾ,  ಬಲು ಜೋಪಾನವಾಗಿ ನೋಡ್ಕೊಳ್ಳಿ.’

ಸೊಸೆ ಗಂಡೆನೆಡೆ ಓರೆನೋಟ ಬೀರಿ ಕಣ್ಣು ಮಿಟುಕಿಸಿ ತುಟಿ ಹಿಂಜಿದಳು.

ದೊಡ್ಡ ನಡುಮನೆಯ ಕಂಬದ ಆಚೀಚೆ ಬದಿಯಲ್ಲಿ ಇಬ್ಬರೂ ಮಲಗಿದ್ದಾರೆ. ಎಂಟು ಗಂಟೆಗೇ ಕನಸು ಕಾಣುವ ಮುದುಕನಿಗೆ ಇನ್ನೂ ರಾತ್ರಿಯಾಗಿಲ್ಲ. ಗೊರಕೆ ಹೊಡೆಯುವ ಮುದುಕಿಗೆ ಇನ್ನೂ ರೆಪ್ಪೆಯಂಟಿಲ್ಲ….. ಕತ್ತಲು ಇಬ್ಬರ ಆಕಾರವನ್ನೂ ಮರೆಮಾಡಿದೆ. ಈಗ ತಮ್ಮಿಬ್ಬರ ನಡುವೆ ಇರುವ ಮೂರು ಅಡಿಗಳ ಜಾಗ ಹೆಚ್ಚಾಗುತ್ತದೆ. ನಾಳೆ ತಮ್ಮಿಬ್ಬರ ಮಧ್ಯೆ ಸಾವಿರಾರು ಮೈಲಿಗಳ ಅಂತರ. ಮಧ್ಯೆ ಕಂದರ, ಬಿರುಕು ದೊಡ್ಡದು ದೊಡ್ಡದಾಗಿ ಬಾಯಿ ತೆಗೆಯುತ್ತದೆ. ಕಣ್ಣಿಗೂ ಕಾಣದಷ್ಟು ದೂರದ ಆ ತುದಿಯಲ್ಲಿ ಅವಳು ಈ ತುದಿಯಲ್ಲಿ ಇವನು. ಹೊರಳಾಟ… ಬಾಯಿಗಳು ತುಕ್ಕು ಹಿಡಿಯುತ್ತವೆ… ಏನೇನೋ ಯೋಚನೆಗಳು. ಮೈತುಂಬ ಛಳಕುಗಳು. ಮುಜುಗರ. ಮೈಮೇಲೆ ಹೊದ್ದುಕೊಂಡ ಶಾಲು ಕೂಡ ಬಂಡೆಯ ಭಾರ. ಹಲಸಿನಕಾಯಿಯ ಮೇಲೆ ಮಲಗಿದಂತೆ ಇಡೀ ರಾತ್ರಿ ಆ ದಂಪತಿಗಳ ಚಡಪಡಿಕೆ.

‘ಯಾಕಪ್ಪ ಜ್ವರ ಬಂದ ಹಾಗಿದೆ?’ – ಮಗಳ ಗಾಬರಿ ದನಿ. ಮುಸುಕು ಸರಿಸಿ ಹಣೆ, ಕತ್ತು ಮುಟ್ಟಿ ನೋಡಿದಳು.

‘ಯಾಕಮ್ಮ ಮೈ ಎಲ್ಲ ಕೆಂಡವಾಗಿದೆ?’ ಮಗ ಗಾಬರಿಯಾದ.

‘ಏನೋಮ್ಮ ನಂಗೆ ಭಾಳ ಆಯಾಸ ಆಗ್ತಿದೆ. ಈ ಸ್ಥಿತೀಲಿ ನಾನು ಪ್ರಯಾಣ ಮಾಡೋ ಹಾಗೇ ಕಾಣ್ತಿಲ್ಲ. ಮುಂದಿನ್ವರ್ಷ ಬರ್ತೀನಿ. ಏನೂ ಬೇಜಾರು ಮಾಡಿಕೊಳ್ಳಬೇಡಮ್ಮ’ ಎನ್ನುತ್ತ ಮುದುಕ, ಮುದುಕಿಯ ಕಡೆ ಹೊರಳಿದ.

‘ಇಲ್ಲಪ್ಪ, ನಂಗೆ ಮೇಲೇ ಏಳಕ್ಕಾಗಲ್ಲ. ಒಂದು ಹೆಜ್ಜೇನೂ ಇಡ್ಲಾರೆ. ಇನ್ನು ಎಲ್ಲಿ ದಿನಗಟ್ಲೆ ರೈಲಿನಲ್ಲಿ ಕೂತಿರ್ಲಿ? ಮುಂದಿನ್ವರ್ಷ ಬರ್ತೀವಿ. ಏನೂ ತಿಳ್ಕೋಬೇಡಪ್ಪ’ ಎಂದು ಮುದುಕಿ ಪಕ್ಕದಲ್ಲಿ ಮಲಗಿದ್ದ ಗಂಡನಲ್ಲಿ ನೋಟ ನೆಟ್ಟಳು.             

Related posts

ಪಂಜ

YK Sandhya Sharma

ಕೋರಿಕೆ

YK Sandhya Sharma

Video-Short story by Y.K.Sandhya Sharma

YK Sandhya Sharma

8 comments

Shiva kumar August 16, 2020 at 11:35 am

Nice story.not able to stop in the mid very interesting

Reply
Sudhasri Raghunath August 17, 2020 at 8:31 am

Very nice story ma’am

Reply
YK Sandhya Sharma August 17, 2020 at 11:44 am

Thank you very much Sudhasri Raghunath. pl. subsribe Sandhya Patrike freely and encourage my writings.

Reply
Shiva kumar August 16, 2020 at 11:36 am

Nice write up sandya madam.

Reply
YK Sandhya Sharma August 16, 2020 at 12:40 pm

Thank you very much Shivakumar.

Reply
YK Sandhya Sharma August 16, 2020 at 12:42 pm

Thank you. pl. subscribe Sandhya Patrike and encourage.

Reply
RAMESH L N August 16, 2020 at 4:05 pm

So Nice story Madam Bahala chennagide Vayassada Ganda mattu Hendati yalli jeevanada nenapugala Besuge Hagiruthe

Reply
YK Sandhya Sharma August 16, 2020 at 5:38 pm

ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅನೇಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಿರಂತರ ಹೀಗೆಯೇ ಇರಲಿ. ದಯವಿಟ್ಟು ಸಂಧ್ಯಾ ಪತ್ರಿಕೆಗೆ ಉಚಿತವಾಗಿ ಚಂದಾದಾರರಾಗಿರಿ.

Reply

Leave a Comment

This site uses Akismet to reduce spam. Learn how your comment data is processed.