Image default
Short Stories

ಮಹಿಳಾ ವಿಮೋಚನೆ

ಉಲ್ಲಾಸದಿಂದ ಸಣ್ಣದನಿಯಲ್ಲಿ ಹಾಡಿಕೊಳ್ಳುತ್ತ ಕುಕ್ಕರ್ ಜೋಡಿಸುತ್ತಿದ್ದೆ. ಹಿಂದೆ ಏನೋ ಜೋರಾಗಿ ಗುಟುರು ಹಾಕಿದ ಶಬ್ದ ಕೇಳಿ ಬೆಚ್ಚಿಬಿದ್ದು, ಗಾಬರಿಯಿಂದ ಹಿಂತಿರುಗಿ ನೋಡಿದೆ. ಹೃದಯ ಧಡ್ಡೆಂದು ಸೂರಿಗೆ ಬಡಿದು ನೆಲಕ್ಕೆ ರಪ್ಪನೆ ಅಪ್ಪಳಿಸಿದಂತಾಯ್ತು!!

ಎದುರಿಗೆ ಕಂಡ ದೃಶ್ಯ ನೋಡಿ ನನ್ನ ಕಣ್ಣನ್ನು ನಾನೇ ನಂಬದಾದೆ! ಇದೇನು ನಿಜವೋ-ಭ್ರಮೆಯೋ ಒಂದೂ ಅರಿಯದಾಯಿತು. ಯಾವುದೋ ಪೌರಾಣಿಕ ಚಲನಚಿತ್ರದಲ್ಲಿ ನೋಡಿದ್ದ ದೃಶ್ಯವೇ!….ಭರ್ಜರಿ ದೇಹ-ಮುಖವನ್ನೆಲ್ಲ ಆವರಿಸಿದ್ದ ಗಿರಿಜಾಮೀಸೆ–ಕೆಂಡಗಣ್ಣು–ಮಾಂಸಲ ರೆಟ್ಟೆ, ಹಂಡೆ ಹೊಟ್ಟೆ. ಅಂಥ ಬೆಟ್ಟದಂಥ ಆಸಾಮಿಯನ್ನು ಹೊತ್ತರೂ ಕೊಂಚವೂ ಕುಗ್ಗದ, ಅರಳು ಹೊಳ್ಳೆಯಿಂದ ನನ್ನನ್ನೇ ಕೆಕ್ಕರಿಸಿ ನೋಡುತ್ತಿದ್ದ ಟಾರುಗಪ್ಪು, ದೆವ್ವಗಾತ್ರದ ಕೋಣನನ್ನು ಕಂಡಾಗ ನನ್ನ ಜಂಘಾಬಲವೇ ಉಡುಗಿಹೋದಂತಾಯ್ತು!

‘ಅಯ್ಯೋ ದೇವ್ರೇ ಇದೇನು ಗ್ರಹಚಾರ ಬಂದು ವಕ್ರಿಸಿತಪ್ಪ ನಂಗೆ? ಈ ಖಳನ ಜೊತೆ ಈ ದೈತ್ಯ ಪ್ರಾಣಿಯೂ ನನ್ನನ್ಯಾಕೆ ಹೀಗೆ ದುರುಗುಟ್ಟಿಕೊಂಡು ನೋಡ್ತಿದೆ?! ನಾನೇನು ಮಾಡಿದ್ನಪ್ಪ ಅಂಥ ಮಹಾ ಅಪರಾಧ?’ ಎಂದು ಗಲಿಬಿಲಿಯಿಂದ ಕೈಚಿವುಟಿ ನೋಡಿಕೊಂಡೆ. ಚರ್ಮ ಚುರುಗುಟ್ಟಿತು. ಅನುಮಾನವೇ ಇಲ್ಲ-ಥೇಟ್ ಸಿನಿಮಾ  ಪರದೆ ಮೇಲೆ ಕಂಡ ಗೆಟ್‍ಅಪ್‍ನಲ್ಲಿದ್ದ ಭೂಲೋಕದಲ್ಲಿ ಯಮರಾಜ!!!

ಒಂದು ಗಳಿಗೆ ಉಸಿರೇ ನಿಂತ ಹಾಗಾಯ್ತು. ಅಡುಗೆ ಮನೆ ಬಾಗಿಲುದ್ದಕ್ಕೂ ಆವರಿಸಿ ನಿಂತ ಎರಡು ಧಡೂತಿ ಆಕೃತಿಗಳು!

“ಹೂಂ….. ಈಗಿಂದೀಗ್ಲೇ ನಡಿ….. ನಿನ್ನ ಟೈಂ ಮುಗೀತು.’’- ಪರ್ವತದಿಂದ ಬಂಡೆಗಳು ಒಂದೊಂದೇ ಗುಡುಗುಡು ಕೆಳಗುರುಳಿ ಬಿದ್ದಂತೆ ಗರ್ಜಿಸಿತು ಆ ಕಂಠ. ಅದರ ಹಿಮ್ಮೇಳದಲ್ಲಿ ಆ ಕೋಣವೂ ಹೂಂಕರಿಸಿತು ಗಡುಸಾಗಿ…..

ಬಾಗಿಲಲ್ಲಿ ಅನಾಮತ್ತು ಕಾಣಿಸಿಕೊಂಡ ಆ ದೈತ್ಯದೇಹಿಯ ಆಜ್ಞೆ ಕೇಳಿ ತಲ್ಲಣಿಸಿಹೋದೆ!!

“ಇದ್ಯಾಕೆ ಹೀಗೆ ಬೆಪ್ಪಾಗಿ ನಿಂತೆ? ಈಗ್ಲೇ, ಈಗಿಂದೀಗಲೇ ಹೊರಡು, ನಿನ್ನ ಆಯುಷ್ಯ ಮುಗೀತು….. ಇನ್ನೊಂದು ಗಳಿಗೆಯೂ ತಡಮಾಡೋ ಹಾಗಿಲ್ಲ. ಹೂಂ, ರೆಡಿಯಾಗು’’ ಎನ್ನುತ್ತ ಯಮಲೋಕದ ರಾಜ, ಸಾಕ್ಷಾತ್ ಯಮಧರ್ಮರಾಯ ಕೋಣದ ಮೇಲೆ ಕೂತುಕೊಂಡೇ, ಕೈಯಲ್ಲಿ ಹಿಡಿದಿದ್ದ ಪಾಶವನ್ನು ಕುಣಿಕೆ ಮಾಡಿ ನನ್ನ ಕುತ್ತಿಗೆಗೆ ಸರಿಯಾಗಿ  ಬೀಸಿ ಒಗೆಯಬೇಕು ಅನ್ನುವಷ್ಟರಲ್ಲಿ ನಾನು-

“ಸ್ವಲ್ಪ ತಡಿಯಪ್ಪ ಮಾರಾಯ….. ಒಂದೇ ಒಂದು ನಿಮಿಷ….. ಈಗ್ತಾನೆ ಕುಕ್ಕರ್‍ಗಿಟ್ಟಿದ್ದೀನಿ….. ಇನ್ನೂ ಒಂದ್ ವಿಷಲ್ ಕೂಡ ಹಾಕಿಲ್ಲ….. ಪ್ಲೀಸ್ ಕಣಯ್ಯ…… ಮೂರು ವಿಷಲ್ ಕೂಗ್ತಿದ್ದ ಹಾಗೆ ಆರಿಸಿ ಬಿಟ್ಟು ಬಂದ್ಬಿಡ್ತೀನಿ….. ಇಲ್ಲದಿದ್ದರೆ ಈ ಕುಕ್ಕರನ್ನ ಆರಿಸೋಕೆ ಮನೇಲಿ ಯಾರಿದ್ದಾರೆ ಹೇಳು? ಆಮೇಲೇನಿಲ್ಲ ದೇವರೇ ಗತಿ! ಕುಕ್ಕರ್ ವಿಷಲ್ ಹಾಕೀ ಹಾಕಿ ಸೋತು, ಒಳಗಿನ ನೀರೆಲ್ಲ ಖಾಲಿಯಾಗಿ ಕುಕ್ಕರ್ ಬರ್ಸ್ಟ್  ಆಗಿಬಿಡುತ್ತೆ ಅಷ್ಟೇ. ಆಮೇಲೆ ಮನೆಯೆಲ್ಲ ರಣರಂಪವಾಗಿ ಬಿಡುತ್ತೆ… ರೂಫೆಲ್ಲ ತೂತು ಬಿದ್ದು, ಸುತ್ತಲಿನ ಸಾಮಾನೆಲ್ಲ ಚೆಲ್ಲಾಪಿಲ್ಲಿಯಾಗಿ, ಕುಕ್ಕರ್ ಕರಗಿ ಹೋಗಿ ಸೊಟ್ಟಾಪಟ್ಟೆಯಾಗಿ ಒಳಗಿನ ಅಕ್ಕಿ, ಬೇಳೆ, ತರಕಾರಿಯೆಲ್ಲ ಸುತ್ತ ಸಿಡಿದು ಅಡುಗೆಮನೆ ಗೊಬ್ಬರದ ಗುಂಡಿಯಾಗಿ ಬಿಡುತ್ತೆ….. ದಯವಿಟ್ಟು ಯಮಣ್ಣ, ಒಂದೈದು ನಿಮಿಷ ಪೇಷಂಟಾಗಿರಪ್ಪ….. ಈ ಅನಾಹುತವೆಲ್ಲ ಆಗೋದ್ಬೇಡ… ನಾನು ನಿನ್ಜೊತೆ ಬರೋದಂತೂ ಗ್ಯಾರಂಟಿ. ಡೋಂಟ್ ವರಿ….. ಕುಕ್ಕರ್ ಆರಿಸೇ ಬರ್ತೀನಿ, ಇರು…..’’ ಎಂದು ಎದುರು ನಿಂತವನನ್ನು ದೈನ್ಯವಾಗಿ ಗೋಗರೆದು ಕೇಳಿಕೊಂಡೆ.

ಏನನ್ನಿಸಿತೋ ಏನೋ, ಮುಖವನ್ನು ಆತ, ಒಂದು ನಮೂನೆ ವಕ್ರ ಮಾಡಿ ಸಿಡುಕಿನಿಂದ- “ಹೂಂ ಆಯ್ತಾಯ್ತು…..” ಎಂದು ಕೂತಲ್ಲೇ ಅಸಹನೆಯಿಂದ ಈಜಾಡಿದ.

ಅಷ್ಟರಲ್ಲಿ ಕುಕ್ಕರ್ ವಿಷಲ್ ಆಯ್ತು, ನಾನು ಆರಿಸಿದ್ದೂ ಆಯ್ತು. ಯಮರಾಯ ಮುಖವರಳಿಸಿ- “ಹ್ಞಾಂ….. ಆಯ್ತಲ್ಲ….. ಇನ್ನು ನಡಿ ಮತ್ತೆ’’ ಎಂದವನ ಗಮನ ಗೋಡೆ ಗಡಿಯಾರದತ್ತ ಹೊರಳಿ ಮುಖ ಹುಳ್ಳಗಾಯ್ತು!

“ಕಡೆಗೂ ಗಳಿಗೆ ಸಾಧಿಸಕ್ಕೆ ಆಗಲಿಲ್ಲ’’ – ಅಸಮಾಧಾನದ ಭುಗು ಭುಗು!!

ನಾನು ಮಾತ್ರ ನಿಂತಲ್ಲಿಂದ ಇಂಚೂ ಕದಲಲಿಲ್ಲ.

“ಮತ್ತೇನು ನಿನ್ನ ಗೋಳು?’’ -ಹಲ್ಲು ಕಟಕಟನೆಂದಿತು. ನಾನು ಎಂಜಲು ನುಂಗುತ್ತಲೇ, ಅಂಜುತ್ತ, ಅಳುಕುತ್ತ  ನುಡಿದೆ. “ನಾನು ಈಗ ನಿನ್ಜೊತೆ ಹೊರಟು ಬಿಟ್ರೆ, ಈ ಕುಕ್ಕರ್‍ನಲ್ಲಿ ಬೆಂದಿರೋ ಪದಾರ್ಥವೆಲ್ಲ ರಾತ್ರೀವರ್ಗೂ ಹಾಗೇ ಕೂತಿರುತ್ತೆ-ನಾಳೆ ತಂಗಳಾಗಿ ಹಳಸೋವರೆಗೂ.”

“ಅದಕ್ಕೆ ನನ್ನೇನು ಮಾಡೂ ಅಂತೀ??!’’

ಅಷ್ಟರಲ್ಲಿ ನನ್ನ ಗಂಟಲಲ್ಲಿ ಗೊರಗೊರ- ಕಣ್ಣಂಚು ಹನಿ ಹನಿ….

 ‘ಅಯ್ಯಾ ಪ್ಲೀಸ್ ಯಮಣ್ಣ, ನನಗಿರೋ ನಾಲ್ಕು ಜನ ಅಣ್ಣಂದಿರ ಜೊತೆ ನಿನ್ನೂ ಐದನೇ ಅಣ್ಣ ಅಂದ್ಕೋತೀನಿ….. ಈ ತಂಗೀ ಕಷ್ಟ ಸ್ಪಲ್ಪ ಕೇಳಿಸಿಕೊಳ್ಳಪ್ಪ….. ನಮ್ಮನೇಲೋ ಬರೀ ಗಂಡು ಪಾಳ್ಯ. ಇವರು ಅಮ್ಮನ ಮುದ್ದಿನ ಮಗನಾಗಿ ಬೆಳೆದಿರೋ ಆಸಾಮಿ….. ಈ ಸಾಮಾನು ಆ ಕಡೆ ಸರಿಸೋ ಜಾಯಮಾನದೋರಲ್ಲ. ಅಂಥಾ ಸೋಮಾರಿ, ಅಮಾಯಕರು….. ಇನ್ನು ಇವರ ಮಕ್ಕಳು ಕೇಳಬೇಕೇ? ಇವರನ್ನ ಮೀರಿಸ್ತಾರೆ….. ಅದೂ ಅಲ್ಲದೆ ಇಬ್ರೂ ಗಂಡು ಹುಡುಗ್ರು, ಅವರ್ಯಾಕೆ ಹೆಣ್ಮಕ್ಕಳ ಥರ ಕೈ ಬಾಯಿ ಸುಟ್ಕೊಂಡು  ಒದ್ದಾಡಬೇಕೂಂತ ನಾನು ಅವರಿಗೆ ಏನೂ ಕೆಲಸಾನೇ ಕಲಿಸಿಲ್ಲ….. ಪಾಪ ಓದೋ ಹುಡುಗ್ರು, ದೊಡ್ಡೋನು ಎಂಜಿನಿಯರಿಂಗು. ತುಂಬಾ ಆಸೈನ್‍ಮೆಂಟ್ಸು….. ತುಂಬಾ ಓದೋದು ಇರುತ್ತಪ್ಪ….. ಸದ್ಯ ಹೊತ್ತೊತ್ತಿಗೆ ತಿಂದ್ರೆ ಸಾಕು ಅನ್ನಿಸಿಬಿಟ್ಟಿದೆ. ಇನ್ನು ಚಿಕ್ಕದು, ಪಾಪ ಮಿಡ್ಲ್ ಸ್ಕೂಲಿನಲ್ಲಿದೆ. ಕಡೇ  ಮಗು ಅಂತ ತುಂಬಾ ಮುದ್ದಾಗಿ ಸಾಕಿದ್ದೀವಿ….. ಅದಕ್ಕೇನೂ  ತಿಳೀದೂ….. ಬೆಳಗ್ಗೆ ನಾನೇ ತಿಂಡಿ ತಿನ್ನಿಸಿ, ಡಬ್ಬಿಗೆ ಹಾಕಿಕೊಟ್ಟು ಸ್ಕೂಲ್‍ವರೆಗೂ ಬಿಟ್ಟಂದೆ…..”

“ಷ್….. ಇದೇನು ದೊಡ್ಡ ಕಂತೇಪುರಾಣವೇ ಒದರಕ್ಕೆ ಶುರು ಮಾಡಿಕೊಂಡ್ಯಲ್ಲ, ಹೂಂ, ಯಾರು ಕೇಳಿದ್ರು ನಿನ್ನ ಈ ಸಂಸಾರದ ವೃತ್ತಾಂತಾನ – ಸಾಕು ಮಾಡುವಂಥವಳಾಗು. ಹೆಚ್ಚಿಗೆ ಮಾತು ಬೇಡ. ಬಾಯಿ ಮುಚ್ಕೊಂಡು ಈಗ್ಲೇ ಹೊರಡ್ತೀಯೋ ಇಲ್ವೋ?” ಎಂದು ಗುರುಗಟ್ಟಿದ ಕೋಣವಾಹನ ಯಮರಾಜ.

ಅವನ ಗಡಸುಕಂಠಕ್ಕೆ ಪತರುಗುಟ್ಟಿ ಹೋದೆ. ಆದರೂ ಅವನ ಮುಂದೆ  ಮುಖ್ಯಪ್ರಾಣನಂತೆ ಕೈ ಜೋಡಿಸಿ ನಿಂತು – “ನಿನ್ನ ದಮ್ಮಯ್ಯ ಕಣಣ್ಣ….. ಒಂದೈದೇ ಐದು ನಿಮಿಷ ಇರಣ್ಣ….. ಕುಕ್ಕರ್ ಕೂಲ್ ಆದ ತಕ್ಷಣ, ತರಕಾರಿ ಹೋಳು-ಬೇಳೆ ಎಲ್ಲ ಸೇರಿಸಿ ಹುಳಿ-ಉಪ್ಪು- ಖಾರ ಹಾಕಿ ಒಂದು ಕುದಿ, ಕುದಿಸಿ ಬಂದು ಬಿಡ್ತೀನಿ….. ಒಗ್ಗರಣೆ ಹಾಕದಿದ್ರೂ ಪರ್ವಾಗಿಲ್ಲ, ಒಂದು ಹುಳೀಂತ ಆದ್ರೆ ಸಾಕು….. ಯಾಕಂದ್ರೆ ಮಧ್ಯಾಹ್ನ ಮೂರುಗಂಟೆಗೆ ಎಂಜಿನಿಯರಿಂಗ್ ಓದೋ ಹುಡ್ಗ ಬರ್ತಾನೆ….. ಅವನ ಹಿಂದೆನೇ ಸಣ್ಣದೂ….. ಆಗ್ಲೇ ಹೇಳಿದ್ನಲ್ಲ ಎರಡಕ್ಕೂ ಏನೂ ಕೆಲ್ಸ ಬರದೂಂತ….. ಬೆನ್ನು ಮೂಳೆ ಮುರಿಯೋ ಹಾಗೆ ಪುಸ್ತಕದ ಲಗೇಜ್ ಹೊತ್ತು ಸುಸ್ತಾಗಿ ಬಂದಿರತ್ವೆ….. ಹೊಟ್ಟೆ ಬೇರೆ ಹಪಹಪಾಂತಿರತ್ತೆ. ಬರೀ ಅನ್ನ ಕಟ್ಕೊಂಡು ಏನ್ಮಾಡತ್ವೇ? ಊಟ ಅಂದ್ಮೇಲೆ ಕೊಂಚ ಸಾರು, ಹುಳಿ ಬೇಡ್ವೇ? ಅದಕ್ಕೆ ಬೇಗ ಬೇಗ ಹುಳಿ ಮಾಡಿ, ಕೆನೆ ಮೊಸರು ಕಡೆದು ಟೇಬಲ್ ಮೇಲಿಟ್ಟುಬಿಟ್ಟು ಬರ್ತೀನಿ ಕಣಣ್ಣ” ಎಂದು ದೈನ್ಯಳಾಗಿ ಬೇಡುತ್ತ, ಬೇಗಬೇಗ ಇನ್ನೂ ಆರದಿದ್ದ ಕುಕ್ಕರಿಗೆ ತಣ್ಣೀರು ಚುಮುಕಿಸಿ, ಕೂಲ್ ಮಾಡಿ, ಒಳಗಿನ ಬಟ್ಟಲುಗಳನ್ನು ತೆಗೆದು ಹುಳಿ ಮಾಡಿ ಟೇಬಲ್ ಮೇಲಿರಿಸಿ ಬಂದು, ಅನ್ನ, ಉಪ್ಪಿನಕಾಯಿ-ಮೊಸರು, ಸಕಲವನ್ನೂ ಅಣಿಗೊಳಿಸಿ, ಹಣೆಯ ಮೇಲೆ ಇಟ್ಟಾಡುತ್ತಿದ್ದ ಬೆವರನ್ನು ಸೆರಗಿನಿಂದ ಒತ್ತಿಕೊಳ್ಳುತ್ತಿದ್ದವಳಿಗೆ ಯಮರಾಯನ ಅಸಹನೆಯ ಹೂಂಕಾರ ಕೇಳಿ ಎದೆ ಧಡ್ಡೆಂದು, ಕಣ್ಣು ಕತ್ತಲಿಟ್ಟಂತಾಯ್ತು.

ಬೇರೆ ವಿಧಿಯೇ ಇಲ್ಲ! ನನ್ನ ಆಯುಷ್ಯ ಮುಗಿದಿದೆ! ಒಂದು ಗಳಿಗೆಯೂ ತಡಮಾಡುವಂತಿಲ್ಲ. ನಿಂತ ನಿಲುವಿನಲ್ಲೇ ಹೊರಡಬೇಕಾದ ದೌರ್ಭಾಗ್ಯ ನನ್ನದು ಎಂದು ನೆನಸಿಕೊಂಡವಳಿಗೆ ಕೊರಳುಬ್ಬಿ ಬಂತು. ಮಕ್ಕಳು ಇನ್ನೂ ಚಿಕ್ಕವರು….. ನನ್ನ ಸಾವಿನ ನಂತರ ಅವರ ಪಾಲನೆ- ಪೋಷಣೆ? ಒಮ್ಮೆಲೆ ಎಲ್ಲಾ ಜವಾಬ್ದಾರಿ ಅವರ ಮೇಲೆ ? ಗಂಡನಿಗೊದಗಿದ ಅನಾಥ ಪರಿಸ್ಥಿತಿ ನೆನೆದು ಬಿಕ್ಕಳಿಸತೊಡಗಿದೆ.

“ಏಯ್ ನಿಂದೇನಿದು ಗೋಳು?!!”  ನಿಗಿನಿಗಿ ಕೆಂಡದ ಕಣ್ಣು!

“ನಿಜವಾಗಿ, ನನ್ನೊಬ್ಬಳನ್ನು ಮಾತ್ರ ಕರ್ಕೊಂಡು ಹೋಗ್ತಿಲ್ಲ ನೀನು ಯಮಧರ್ಮರಾಜ. ನನ್ನ ಹಿಂದೆ ನನ್ನ ಸಂಸಾರ  ಪೂರಾ….. ನನ್ನೊಂದು ಕ್ಷಣವೂ ಬಿಟ್ಟಿರಲಾರದ ನನ್ನ ಯಜಮಾನರು ಬದುಕಿದ್ದೂ ಹೆಣವಾಗಿ ಹೋಗ್ತಾರೆ. ಪಾಪ ನಾನಿಲ್ದೆ ಅದೆಷ್ಟು ಕೈಬಾಯಿ ಸುಟ್ಕೋತಾರೋ ಏನೋ, ಮನೆ ಹೇಗೆ ಮ್ಯಾನೇಜ್ ಮಾಡೋದು ಅಂಬೋದೇ ಅವರು ಕಾಣರು….. ಮನೆ ಒಳಗೇ- ಹೊರಗೇ ಎರಡು ಕಡೇನೂ ನಾನೇ ದುಡೀತಿದ್ದೀನಿ ಮಾರಾಯ….. ದಿನದಿಂದ ದಿನಕ್ಕೆ ಬೆಲೆಗಳು ಏರ್ತಿರೋ ಈ ದಿನಗಳಲ್ಲಿ ಇಬ್ರೂ ದುಡಿದರೇನೇಪ್ಪ ಒಂದು ಸಂಸಾರ, ಮಕ್ಕಳ ವಿದ್ಯಾಭ್ಯಾಸ….. ನನ್ನ ವಿಷ್ಯ ಬಿಡು, ನಾನು ಹೋದ್ಮೇಲೆ ಇವರೊಬ್ಬರೇ ಇಷ್ಟು ದೊಡ್ಡ ಹೊರೆ ಹೊತ್ಕೋಬೇಕು, ಜೊತೆಗೆ ಒಲೇ ಮುಂದೇನೂ ಬೇಯಬೇಕು. ಅಯ್ಯೊ ಗ್ರಾಚಾರವೇ!”

ಕಂಠ ಗದ್ಗದವಾಯಿತು.

“ಏನ್ ಹಾಗಂದ್ರೆ?!!! ನಿನ್ನ ಬದ್ಲು ನಾನು ಸೌಟು ಹಿಡ್ಕೊಂಡು ಬಾಣಸಿಗನ ಪಾರ್ಟ್ ಮಾಡ್ಬೇಕು ಅಂತ ಸೂಚನೆ ಕೊಡ್ತಿದ್ಯೇನು?’’ – ಎಂದು ಎದುರಿಗೆ ವಾಹನರೂಢನಾಗಿದ್ದ ದೈತ್ಯಾಕೃತಿ ಝಿಲ್ಲನೆ ಕೋಣದ ಮೇಲಿಂದ ಕೆಳಗೆ ಜಿಗಿದು ಕೋಪದಿಂದ ಕಾಲನ್ನು ನೆಲಕ್ಕೆ ಅಪ್ಪಳಿಸಿತು. ನೆಲ ಅದುರಿದ ರಭಸಕ್ಕೆ ಅಲಮಾರಿನಲ್ಲಿದ್ದ ಡಬ್ಬಗಳೆಲ್ಲ ಗಡಗಡನೆ ಅಲ್ಲಾಡಿ ಸಾರಿನಪುಡಿ ಡಬ್ಬ ಕೆಳಗೆ ಬಿದ್ದುಹೋಗಿ ಒಳಗಿದ್ದ ಪುಡಿಯೆಲ್ಲ ನೆಲದ ಮೇಲೆ ಚೆಲ್ಲಿತು. ಸುತ್ತಲಿಟ್ಟಿದ್ದ ಪಾತ್ರಗಳೆಲ್ಲ ಕಿಂಕಿಣಿಸಿದವು.

“ಅರರೇ….. ಎಂಥ ಕೆಲ್ಸ ಮಾಡಿದ್ಯಲ್ಲಣ್ಣ. ಕಷ್ಟಪಟ್ಟು ಮಾಡಿದ್ದ ಸಾರಿನ ಪುಡೀನೆಲ್ಲ ಹಾಳು ಮಾಡಿದ್ಯಲ್ಲ! ಅಲ್ಲಪ್ಪ, ಇನ್ಮೇಲೆ ನಾನೂ ಇರಲ್ಲ, ಇವರು ಹೇಗೆ ಸಾರು ಮಾಡ್ಕೋಬೇಕು ಹೇಳು. ಸಾರಿಲ್ಲದಿದ್ರೆ ನಮ್ಮ ಹುಡುಗ್ರು ತುತ್ತೇ ಎತ್ತಲ್ಲ. ಇವರಾದ್ರೂ ಪಾಪ ಚಿತ್ರಾನ್ನ, ವಾಂಗೀಭಾತು, ಪುಳಿಯೋಗರೆ, ಕಲಸಿದನ್ನ ಏನಿದ್ರೂ ಅಡ್ಜಸ್ಟ್ ಮಾಡ್ಕೋತಾರೆ. ನನ್ನ ಮಕ್ಕಳ ಗತಿ ಹೇಳಪ್ಪ” -ಎಂದವಳೇ ಒಡನೆಯೇ ಬಗ್ಗಿ ನೆಲದ ಮೇಲೆ ಚೆಲ್ಲಿದ್ದ ಪುಡಿಯನ್ನೆಲ್ಲ ಬಳಿದು ಡಬ್ಬಿಗೆ ತುಂಬಿಸತೊಡಗಿದೆ.

“ಆಯ್ತಮ್ಮಾ….. ಅಯಾಮ್ ಸಾರಿ….. ಇನ್ನೂ ಒಂದು ಮಿನಿಟ್ ಟೈಂ ಕೊಡ್ತೀನಿ. ಬೇಗ ಬೇಗ ಎಲ್ಲಾ ಎತ್ತಿಟ್ಟು-ನನ್ಜೊತೆ ಹೊರಡು” ರೆಟ್ಟೆಗಾತ್ರದ ಮೀಸೆ ತುದೀನ ನೀವಿಕೊಳ್ತಾ ಅವಸರಿಸಿದ ಕೋಣದೊಡೆಯ .

“ಒಳ್ಳೇ ಚೆನ್ನಾಗಿ ಹೇಳ್ತಿಯಪ್ಪ ನೀನು. ನೆಲದ ಮೇಲೆ ಬಿದ್ದಿದ್ದನ್ನ ಅವರು ತಿನ್ನೋದೇ!? ಕಾಲು ದೂಳಾಗಿ ಅವರು ನಾಳೆ ಮಲಗಿದರೆ ಅವರ ಆರೈಕೆ ಮಾಡೋರು ಯಾರು? ನಾನೂ ಇರಲ್ಲ. ಅವರಿಗೆ ಏನಾದ್ರೂ ಹೆಚ್ಚೂ ಕಡ್ಮೆಯಾದ್ರೆ ಬಡಪಾಯಿ ನನ್ನ ಮಕ್ಕಳ ಗತಿ? ನೀನೂ ಮಕ್ಕಳೊಂದಿಗ… ಕೊಂಚ ಯೋಚ್ನೆ ಮಾಡು. ಹೇಗೂ ನೀನು ಬಂದು ಬಿಟ್ಟಿದ್ದೀಯಾ, ನನ್ನ ಕರ್ಕೊಂಡು ಹೋಗೇ ಹೋಗ್ತೀಯ….. ಸ್ವಲ್ಪ ದಯೆ ತೋರಿಸು. ನಾನು ಬೇಗ ರೆಡಿಯಾಗಿ ಬಂದ್ಬಿಡ್ತೀನಿ” ಎನ್ನುತ್ತ ಅವನಿಗೆ ಅಲ್ಲೇ ಒಂದು ಮಜಭೂತ ಮರದ ಕುರ್ಚಿ ಹಾಕಿ-

“ಒಂದೈದು ನಿಮ್ಷ ಕೂತ್ಕೊಂಡಿರಣ್ಣ ತಾಳ್ಮೆಯಿಂದ….. ಜಟ್‍ಪಟ್ ಅಂತ ಒಂಚೂರು ಹುಣಸೇಹಣ್ಣಿನ ಗೊಜ್ಜು ಕುದಿಸಿಟ್ಟುಬಿಟ್ಟು ಬರ್ತೀನಿ. ಪುಳಿಯೋಗರೆ ಗೊಜ್ಜು ಫ್ರಿಜ್‍ನಲ್ಲಿಟ್ರೆ ಕಡಮೆ ಅಂದ್ರೆ 15 ದಿನ ಇರತ್ತೆ. ಯೋಚ್ನೆ ಇಲ್ಲ….. ಎರಡು ವಾರ ಇವರ ಕಥೆ ಕಳಿಯುತ್ತೆ….. ಹಾಗೇ ಉಗ್ರಾಣದಲ್ಲಿ ಇಟ್ಟಿರೋ ಉಪ್ಪಿನಕಾಯೀನೂ ಸ್ವಲ್ಪ ಕೈಯಾಡಿಸಿ ಬರ್ತೀನಿ. ಇಲ್ಲದಿದ್ರೆ ಹುಳು ಬಿದ್ದುಬಿಡತ್ತೆ. ಇವರಿಗೋ ಒಂದು ಸಾಮಾನೂ ಎಲ್ಲೆಲ್ಲಿವೆ ಅಂತಾನೇ ಗೊತ್ತಿಲ್ಲ. ಎಲ್ಲ ಸ್ವಲ್ಪ ತೆಗೆದಿಟ್ಟು ಬಂದು ಬಿಡ್ತೀನಿ ಇರು” – ಎಂದು  ಅಳುಕುತ್ತಲೇ ಮೇಲೆದ್ದು ಅವನತ್ತ ಭಯದಿಂದ ಕಣ್ಣು ಹರಿಸಿದೆ.

ಅವನ ಮುಖದಲ್ಲಿ ಬಳುಕಾಡುತ್ತಿದ್ದ ಕ್ರೌರ್ಯದ ಗೆರೆ ಶಾಂತವಾಗಿ ಪವಡಿಸಿತ್ತು. ಕಣ್ಣಲ್ಲಿ ಅನುತಾಪದ ಮಿನುಗು ಹೊಳೆದಂತೆ ಭಾಸವಾಯ್ತು. ಬಾಯ್ತೆರೆದವನ ದನಿ ಮೊದಲಿನಷ್ಟು ಕರ್ಕಶವಾಗಿ ಇರಲಿಲ್ಲ.

“ಅಲ್ಲಾ ಕಣೆ ತಾಯಿ, ನೀನು ಮಾಡಿಟ್ಟಿದ್ದು ಎಷ್ಟು ದಿನ ಇರುತ್ತೆ ಹೇಳು? ಇಷ್ಟು ವರ್ಷಗಳು ಗಂಡ-ಮಕ್ಳೂಂತ ಈ ಸಂಸಾರಕ್ಕೆ ಕತ್ತೆ ಥರ ದುಡಿದಿದ್ದೀ….. ಇನ್ನಾದ್ರೂ ನಿನಗೆ ವಿಶ್ರಾಂತಿ ಬೇಡವೇ?”

ಆತನ ಮಾತು ನನ್ನ ಕಿವಿಗೆ ತಾಗಲೇ ಇಲ್ಲ….. ನನ್ನ ಯೋಚ್ನೆ ನನ್ನದು. ‘ಪುಳಿಯೋಗರೆ ಗೊಜ್ಜಿನ ಜೊತೆ, ಸ್ವಲ್ಪ ಮೆಂತ್ಯದ ಹಿಟ್ಟು ಮಾಡಿದ್ರೆ ಹೇಗೆ?’

 “ಅಮ್ಮಾ ತಾಯಿ….. ಗಂಟೆ ಒಂದಾಗ್ತಾ ಬಂತು. ನಿನ್ನ ಭೂಮಿ ಋಣ ಬೆಳಿಗ್ಗೆ ಹತ್ತಕ್ಕೇ ಮುಗಿದು ಹೋಯ್ತು. ಈಗಾಗ್ಲೇ ಲೇಟಾಗಿದೆ, ಇನ್ನು ತಡಮಾಡ ಬೇಡ’’ ಎನ್ನುತ್ತ ಮೇಲೇಳ ಹೊರಟವನ ಕೈಗೆ, ಹಿಂದಿನ ದಿನ ತಾನೇ ಮಾಡಿಟ್ಟಿದ್ದ  ಕೋಡುಬಳೆ-ಚಕ್ಕುಲಿಯನ್ನು ನಾಲ್ಕು ನಾಲ್ಕು, ತಟ್ಟೆಗೆ ಹಾಕಿ ಅವನ ಕೈಗೆ ಕೊಟ್ಟು-

“ಮನೆಗೆ ಬಂದ ಅತಿಥಿಗಳನ್ನು ಆದರಿಸೋದು ನಮ್ಮ ಸಂಪ್ರದಾಯ ಕಣಯ್ಯ, ಬೇಡ ಅನ್ಬೇಡ-ತಿನ್ನು ಪ್ಲೀಸ್. ಹಾಗೇ ಒಂದು ತೊಟ್ಟು ಬಿಸಿ ಬಿಸಿ ಕಾಫೀನೂ ಕೊಡ್ತೀನಿ’’ – ಎನ್ನುತ್ತ ನಾನು ಅವನಿಗೆ ಉಪಚಾರ ಹೇಳುತ್ತ ಕಾಫಿ ಬೆರೆಸಿ ಅವನ ಮುಂದಿಟ್ಟೆ.

ಗತ್ಯಂತರವಿಲ್ಲದೆ ಆ ದೈತ್ಯದೇಹಿ ತನ್ನ ಕೋಣವನ್ನು ಹಿತ್ತಲಿಲ್ಲ ಕಟ್ಟಿಬಂದು, ಚಕ್ಕುಲಿ ಕುರುಂ ಕುರುಂ ಅಗಿಯತೊಡಗಿದ. ನನ್ನ ಕೈಗಳು ಅಷ್ಟೇ ವೇಗದಲ್ಲಿ ಹರಿದಾಡುತ್ತ, ಮೆಣಸಿನಕಾಯಿ, ಧನಿಯಾ, ಜೀರಿಗೆ, ಮೆಂತ್ಯ,  ಮೆಣಸಿನ ಡಬ್ಬಿಗಳನ್ನು ಎದುರಿಗೆ ಹರವಿಕೊಂಡು, ಸಾರಿನಪುಡಿ, ಹುಳೀಪುಡಿ, ಪಲ್ಯದ ಪುಡಿ, ಚಟ್ನಿಪುಡಿ ತಯಾರಿಕೆಯಲ್ಲಿ ತೊಡಗಿದವು. ಕೋಡುಬಳೆ ಡಬ್ಬಿಯನ್ನು ಅವನತ್ತ ತಳ್ಳಿ ನನ್ನ ಪಾಡಿಗೆ ನಾನು ಕೆಲಸದಲ್ಲಿ ತಲ್ಲೀನಳಾದೆ.

ಗಂಟೆ ನೋಡಿಕೊಳ್ಳುತ್ತ ಹೂಂಕರಿಸಿ ಮೇಲೆದ್ದ ಯಮರಾಜ-ಸಿಡುಕುತ್ತ ಲಾಸ್ಟ್ ವಾರ್ನಿಂಗ್ ಕೊಟ್ಟ : “ಈಗ ನೀನೇನು ಹೊರಡ್ತೀಯೋ ಇಲ್ವೋ….. ಇನ್ನೇನು ನಿನ್ನ ಮಕ್ಳು ಬರೋ ಸಮಯ ಆಯ್ತು….. ಆಮೇಲೆ ನಿನ್ನ ರಾಮಾಯಣ ಇದ್ದದ್ದೇ. ಯೂನಿಫಾರಂ ಬದಲಾಯಿಸಿ ತಿಂಡಿ ಕೊಡ್ಬೇಕು, ಕಾಫಿ ಡಿಕಾಕ್ಷನ್ ಹಾಕಬೇಕು, ಅವರಿಗೆ ಬಾಯಾಡಿಸಲು ಏನಾದ್ರೂ ಕೊಟ್ಟು ಆಮೇಲೆ ರಾತ್ರೀ ಅಡುಗೆಗೆ ತಯಾರಿ ನಡೆಸಬೇಕು….. ಥತ್…..’’ ಎಂದವನು ಒಂದೇ ಸಮನೆ ಬಡಬಡಿಸಲಾರಂಭಿಸಿದ.

ನನ್ನ ಕಿವಿಗೇನೂ ಬೀಳುತ್ತಿರಲಿಲ್ಲ. ಸಮಾರಾಧನೆಯ ಅಡುಗೆಗೆ ತಯಾರಿ ನಡೆಸಿದಂತೆ ನಾನು ರಾಶಿ ರಾಶಿ ಪುಡಿ-ಸಡಿಯ ತಯಾರಿಯಲ್ಲಿ ತೊಡಗಿಸಿಕೊಂಡು ಅವನ ಮಾತಿಗೆ ಹಾಂ….. ಹೂಂ….. ಅನ್ನಲಿಲ್ಲ.

“ಅಮ್ಮಾ, ತಾಯಿ ನಿಂಗೇ ಹೇಳ್ತಿರೋದು ಮಾರಾಯ್ತೀ” – ಜೋರಾಗಿ ಅಬ್ಬರಿಸಿದ. ಮಿಕ್ಸಿ ಆನ್ ಮಾಡಿದೆ. ಅವನ ಅಬ್ಬರ ಆ ಸದ್ದಿನಲ್ಲಿ ಕರಗಿಹೋಯ್ತು.

ರೋಷಾವಿಷ್ಟನಾಗಿ ಮೇಲೆದ್ದ ಯಮಧರ್ಮರಾಯ ಸ್ಫೋಟಗೊಂಡು ಕೂತ ಕುರ್ಚಿ ಹಿಂದಕ್ಕೆ ಮಗುಚಿಕೊಳ್ಳುವಂತೆ ಚಿಮ್ಮಿ- “ಅಬ್ಬಬ್ಬ ಈ ಜನ್ಮಪೂರ ನಿನ್ನ ಕೆಲ್ಸ ಮುಗಿಯಲ್ಲ!! ನಿನ್ನ ಹಣೇಬರಹ ಅನುಭವಿಸಿಕೋ ಹೋಗು….. ಏನೋ ಪಾಪ, ನೀನು ವರ್ಕಿಂಗ್ ವುಮನ್ನು, ಒಳಗೂ-ಹೊರಗೂ ಒಂದೇ ಸಮನೆ ದುಡೀತೀಯ….. ಮನೇಗೆ ಬಂದ್ರೂ ರೆಸ್ಟಿಲ್ಲ….. ಗಂಡ-ಮಕ್ಕಳು ಮೊದ್ಲೇ ಕೋ-ಆಪರೇಟ್ ಮಾಡಲ್ಲ. ಈ ಜಂಜಡ ಎಲ್ಲ ತೊರೆದು ಬಂದುಬಿಡಮ್ಮ. ನಮ್ಮ ಲೋಕದಲ್ಲಿ ನೀನು ಫ್ರೀ ಬರ್ಡ್ ಆಗಿರ್ಬೋದು. ನಿನ್ನ ಜೀವಕ್ಕೆ ಮುಕ್ತಿ ಕೊಡೋಣಾಂದ್ರೆ ನಿಂಗೇ ಇಷ್ಟವಿಲ್ಲ!! ಇನ್ನೂ ಹೆಚ್ಚೆಚ್ಚು ಈ ಸಂಸಾರ ಬಂಧನ-ಸುಳಿಯೊಳಗೆ ಸಿಕ್ಕಿಹಾಕ್ಕೋತಿದ್ದೀಯಾ….. ನಿನಗೇ ಬಿಡುಗಡೆ, ವಿಮುಕ್ತಿ ಬೇಡ ಅಂದ್ರೆ ನಾನೇನ್ಮಾಡಲಿ?… ಐ ಕಾಂಟ್ ಹೆಲ್ಪ್….. ನಿನ್ನ ಕರ್ಮ….. ಇನ್ನೆಷ್ಟು ಶತಮಾನಗಳು ಕಳೆದರೂ ನಿಮ್ಮ ಹೆಂಗಸರ  ಸ್ಟೇಟಸ್ ಇಂಪ್ರೂವ್ ಆಗಲ್ಲ. ನಿಮ್ಮ ಹಣೆಬರಹವೇ ಇಷ್ಟು…ಸ್ತ್ರೀವಾದ, ಸ್ವಾತಂತ್ರ್ಯ, ಶೋಷಣೆ, ಹಕ್ಕುಗಳು ಅದೂ ಇದೂಂತ ನೂರೆಂಟು ಸ್ಟೇಜಿನ ಮೇಲೆ ಬಡಬಡಿಸೋ ನಿಮ್ಮಗಳಿಗೆ, ನಿಜಜೀವನದಲ್ಲಿ ಅವು ಬೇಡ ಅನ್ನಿಸಿದ್ರೆ, ಈ ಬಂಧನಾನೇ ನೀನು ಬಯಸೋದಾದ್ರೆ, ಇದನ್ನೇ ಎಂಜಾಯ್ ಮಾಡೋದಾದ್ರೆ ನಾನ್ಯಾಕೆ ನಿನ್ನ ಬಗ್ಗೆ ತಲೆಕಡಿಸಿಕೊಳ್ಲಿ? ಅಯ್ಯೋ ಹೆಣ್ಣು ಜನ್ಮವೇ….. ಐ ಪಿಟಿ ಯೂ….. ಈ ಸುಳಿಯೊಳಗೇ ಬಿದ್ದು ಒದ್ದಾಡು, ನಾ ಬರ್ತೀನಿ.”

-ಎನ್ನುತ್ತ ರೋಸಿ ಶಾಪವಿತ್ತ ಯಮಧರ್ಮರಾಯ, ನನ್ನನ್ನು ಅಡುಗೆ ಮನೆಯೊಳಗೆ ಅನಾಥವಾಗಿ ಬಿಟ್ಟು ಥಟ್ಟನೆ ಅಂತರ್ಧಾನನಾದ!

                                                *********************

Related posts

ಗುದ್ದು

YK Sandhya Sharma

ನಿನ್ನಂಥ ಅಪ್ಪಾ ಇಲ್ಲ!!

YK Sandhya Sharma

ಕೆಂಪುಕೋಟೆ

YK Sandhya Sharma

4 comments

ಡಾ.ಹನಿಯೂರು ಚಂದ್ರೇಗೌಡ August 9, 2020 at 11:29 pm

ಹಲೋ ನಮ್ ಪದ್ದುರಾಯ್ರ ಸೊಸೆಯೇ,

ನವಿರುಹಾಸ್ಯದ ಧಾಟಿಯಲ್ಲಿ ಮಹಿಳೆಯ ಕೊನೆಯಾಗದ ಕರ್ತವ್ಯ, ಕುಟುಂಬದ ಲಾಲನೆ-ಪಾಲನೆಯನ್ನು ಮನಗಾಣಿಸಿದ್ದೀರಿ.
ನಿಜವಾಗಿಯೂ ಹೆಣ್ಣಿಗೆ ಯಾವತ್ತೂ ವಿಶ್ರಾಂತಿ ಇಲ್ಲ; ಒಂದು ವೇಳೆ ಅವಳು ವಿಶ್ರಾಂತಿ ಪಡೆದಿದ್ದಾಳೆ ಎಂದರೆ ಅವಳು ಜೀವಂತವಿಲ್ಲ ಎಂದೇ ಅರ್ಥ….

ಉತ್ತಮ ಲಲಿತ ಪ್ರಬಂಧ.
ಧನ್ಯವಾದಗಳು…
ನಮ್ಮೂರಿನ ಸೊಸೆಯೇ….

-ಡಾ.ಹನಿಯೂರು ಚಂದ್ರೇಗೌಡ

Reply
YK Sandhya Sharma August 11, 2020 at 7:28 pm

ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅನಂತ ಧನ್ಯವಾದಗಳು.

Reply
ಡಾ.ಹನಿಯೂರು ಚಂದ್ರೇಗೌಡ August 9, 2020 at 11:31 pm

ಉತ್ತಮ ಪ್ರಬಂಧ

-ಡಾ.ಹನಿಯೂರು ಚಂದ್ರೇಗೌಡ
9901609723

Reply
YK Sandhya Sharma August 10, 2020 at 6:22 pm

ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಅನಂತ ಕೃತಜ್ಞತೆಗಳು ಗೌಡರೇ.

Reply

Leave a Comment

This site uses Akismet to reduce spam. Learn how your comment data is processed.