Image default
Dance Reviews

ಅಂತರ್ಜಾಲದಲ್ಲಿ ತಾಯಿ-ಮಗಳ ಅನುರೂಪ ನೃತ್ಯ

ಎರಡು ದಶಕಗಳ ನೃತ್ಯಶಿಕ್ಷಣದ ಅನುಭವವುಳ್ಳ ಫಣಿಮಾಲಾ ಚಂದ್ರಶೇಖರ್ ಉತ್ತಮ ಭರತನಾಟ್ಯ ಕಲಾವಿದೆ ಮತ್ತು ಬದ್ಧತೆಯುಳ್ಳ ನಾಟ್ಯಗುರು ಕೂಡ. ತಮ್ಮ ರಂಗಪ್ರವೇಶದ ಸುಮೂಹರ್ತದಲ್ಲೇ ’’ನೃತ್ಯ ಸಂಜೀವಿನಿ ಅಕಾಡೆಮಿ’’ ಎಂಬ ತಮ್ಮ ನೃತ್ಯಶಾಲೆಯನ್ನು ಆರಂಭಿಸಿದ ಪ್ರತಿಭಾವಂತೆ. ದೇಶಾದ್ಯಂತ ಹಲವಾರು ದೇವಾಲಯಗಳಲ್ಲಿ ದೈವೀಕ ನೃತ್ಯಕಾರ್ಯಕ್ರಮಗಳನ್ನು ನೀಡಿರುವ ಇವರ ಪ್ರಮುಖ ಕಾರ್ಯಕ್ರಮಗಳೆಂದರೆ- ಬೆಂಗಳೂರು, ಚೆನ್ನೈ, ರಾಜಸ್ಥಾನ ಮತ್ತು ಕೇರಳದಲ್ಲಿ ನಡೆದ ನೃತ್ಯೋತ್ಸವಗಳು. ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವ ಫಣಿಮಾಲಾ, ಇಂದು ನೂರಾರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ತಯಾರಾಗುತ್ತಿದ್ದಾರೆ. ಅವರಿಗೆ ಅನೇಕ ಉಪಯುಕ್ತ ಕಾರ್ಯಾಗಾರಗಳು, ವೇದಿಕೆ ಕಾರ್ಯಕ್ರಮಗಳು ಮತ್ತು ನಾಟ್ಯ ಗಣಪತಿ, ದಶಾವತಾರ, ರುದ್ರ ಸ್ಫಟಿಕಾ, ವಿಷ್ಣು ಕಲಾಪಂ , ಗೋಕುಲ ನಿರ್ಗಮನ  ಮುಂತಾದ ನೃತ್ಯರೂಪಕಗಳನ್ನು ರಚಿಸಿ-ತರಬೇತಿ ನೀಡಿ  ಶಿಷ್ಯರ ಕಲಾಪ್ರತಿಭೆಯ ಅಭಿವ್ಯಕ್ತಿಗೆ ಅನುವು ಮಾಡಿಕೊಟ್ಟಿದ್ದಾರೆ.

ತಾಯಿಯಂತೆ ಮಗಳು ಎಂಬ ಗಾದೆ ಮಾತಿಗೆ ತಕ್ಕಂತೆ ಇವರ ಮಗಳು ನಿರಂಜಿನಿ ಕೂಡ ನಾಟ್ಯಾಸಕ್ತಳು. ಪ್ರತಿಭೆ ರಕ್ತಗತವಾಗಿ ಬಂದಿರುವ ಕಾರಣ ತನ್ನ ಏಳನೆಯ ವಯಸ್ಸಿಗೇ ನೃತ್ಯ ಕಲಿಯಲಾರಂಭಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿ ಮೆಚ್ಚುಗೆ ಪಡೆದವಳು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು ಎಂಬಂತೆ ಭರತನಾಟ್ಯಜ್ಞೆ ತಾಯಿ ಫಣಿಮಾಲಾ ಮಗಳ ಆಸಕ್ತಿಗೆ ನೀರೆರೆದು, ಉತ್ತಮ ತಯಾರಿ ನೀಡಿ ‘ನೃತ್ಯ ಸಂಜೀವಿನಿ’ ಯ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಅವಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಸೀನಿಯರ್ ಪರೀಕ್ಷೆಗೆ ಅಭ್ಯಾಸ ನಡೆಸುತ್ತಿದ್ದಾಳೆ. ವಂಡರ್ ಬುಕ್ ಆಫ್ ರೆಕಾರ್ಡ್ಸ್ , ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮುಂತಾದ ದಾಖಲೆಗಳಲ್ಲಿ ಭಾಗವಹಿಸಿದ ಹೆಮ್ಮೆ ನಿರಂಜಿನಿಯದು.  

ವೇದಿಕೆಯ ಮೇಲೆ, ಕಲಾರಸಿಕರ ಸಮ್ಮುಖ ಅನೇಕ ಕಾರ್ಯಕ್ರಮಗಳನ್ನು ನೀಡಿದ ಚೇತನಗಳಿಗೆ ಸುಮ್ಮನೆ ಕೂರಲಾಗುವುದಿಲ್ಲ. ಆದರೆ ಇಡೀ ವಿಶ್ವವನ್ನು ‘ಕೊರೋನಾ’ ಆಕ್ರಮಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನಕ್ಕೆ  ಏನಾದರೊಂದು ದಾರಿ ಹುಡುಕಿಕೊಂಡೇ ಹುಡುಕಿಕೊಳ್ಳುವುದು ಅನಿವಾರ್ಯ. ಇಂಥ ಪರಿಸ್ಥಿತಿಯಲ್ಲಿ ಪ್ರಸ್ತುತ ‘’ ಆನ್ಲೈನ್’’ ನೃತ್ಯ ಪ್ರದರ್ಶನ ಸಾಮಾನ್ಯವಾಗಿದೆ. ಅದರಂತೆ ಈ ತಾಯಿ ಮಗಳು ಇತ್ತೀಚಿಗೆ ಅಂತರ್ಜಾಲದ ಮಾಧ್ಯಮದಲ್ಲಿ ತಮ್ಮ ನೃತ್ಯಪ್ರೀತಿಯನ್ನು ಪ್ರಸ್ತುತಪಡಿಸಿದ್ದು ಮೆಚ್ಚುಗೆ ಪಡೆದಿದೆ.

ನೃತ್ಯ ಕಲಾವಿದೆ-ಸಂಘಟಕಿ ಕಲಾವತಿ ತಮ್ಮ ‘ನಾಟ್ಯಕಲಾ ಕಲ್ಚುರಲ್ ಸೆಂಟರ್’ ಸಂಸ್ಥೆಯ ವತಿಯಿಂದ ಇತ್ತೀಚಿಗೆ ನಡೆಸಿದ ಆನ್ಲೈನ್’ ನೃತ್ಯ ಪ್ರದರ್ಶನಗಳ ಪ್ರಸಾರ ಸರಣಿಯಲ್ಲಿ ವಿದುಷಿ ಫಣಿಮಾಲಾ ಮತ್ತು ಅವರ ಶಿಷ್ಯೆ ಹಾಗೂ ಮಗಳು ನಿರಂಜಿನಿ ದೈವೀಕ ಕೃತಿಗಳನ್ನು ಪ್ರಸ್ತುತಪಡಿಸಿದರು.

ಮೊದಲಿಗೆ ದಾಸಶ್ರೇಷ್ಠ ಶ್ರೀ ಪುರಂದರದಾಸರು ಬರೆದ ( ರಾಗ- ನಾಟ, ತಾಳ-ಖಂಡಛಾಪು) ದೇವರನಾಮ ‘ವಂದಿಸುವುದಾದಿಯಲಿ ಗಣನಾಥನ’ನ್ನು ಸಮರ್ಪಣಾ ಭಾವದಿಂದ ವಂದಿಸಿ ಪ್ರಸ್ತುತಿಯನ್ನು ಉತ್ಸಾಹದಿಂದ ಆರಂಭಿಸಿದರು. ವಿಘ್ನೇಶ್ವರನ ಪೂಜೆ ಯಾವುದೇ ಶುಭಕಾರ್ಯಗಳಲ್ಲಿ ಎಷು ಮಹತ್ವವಾದದ್ದು ಎಂಬುದನ್ನು ನಿರೂಪಿಸುವ ರಾವಣ ಆತ್ಮಲಿಂಗವನ್ನು ಶಿವನಿಂದ ವರವಾಗಿ ಪಡೆದು ಬಂದ ಪ್ರಸಂಗವನ್ನು ಇಬ್ಬರು ಕಲಾವಿದೆಯರು ಅರ್ಥಪೂರ್ಣವಾಗಿ ನಿರೂಪಿಸಿದರು. ಸಮುದ್ರದ ತಡಿಯಲ್ಲಿ ಸಂಧ್ಯಾವಂದನೆ ಮಾಡುವ ಸಂದರ್ಭದಲ್ಲಿ ವಟುವಾಗಿ ಕಾಣಿಸಿಕೊಂಡ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ರಾವಣ, ಅದನ್ನು ಕಳೆದುಕೊಂಡ ನೋವಿನ ಕಥಾ ಸಂಚಾರಿಯನ್ನು ಸೂಕ್ತವಾಗಿ ನಿರೂಪಿಸಿದರು.

ಮುಂದೆ ಹಂಸಧ್ವನಿ ರಾಗದ ‘ನಟೇಶ ಕೌತ್ವಂ’ ಕೃತಿಯನ್ನು ನಿರಂಜಿನಿ ನೃತ್ತಗಳ ಮೂಲಕ ಆರಂಭಿಸಿ, ಶಿವನ ವಿವಿಧ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿದಳು. ನಟರಾಜನ, ಢಮರುಗ ಹಿಡಿದ ವೀರಹೆಜ್ಜೆಗಳು, ತ್ರಿನೇತ್ರ, ನಂದಿವಾಹನನ ರೂಪ ವೈವಿಧ್ಯವನ್ನು ಸುಂದರವಾಗಿ ತೋರಿದಳು. ಆಸಕ್ತಿ-ಉತ್ಸಾಹಶೀಲ ಕಲಾವಿದೆ ಇನ್ನಷ್ಟು ಅಭ್ಯಾಸ ಮಾಡಿದರೆ ಭರವಸೆಯ ಕಲಾವಿದೆಯಾಗುವ ಸೂಚನೆಗಳನ್ನು ತೋರಿದಳು.

ಒಂದು ಕಾಲಘಟ್ಟದಲ್ಲಿ ಬಹು ಜನಪ್ರಿಯವಾಗಿದ್ದ ವಸಂತ ರಾಗದ ‘ನಟನಂ ಆಡಿನಾರ್’ ಕೃತಿಯನ್ನು ಇಬ್ಬರು ಕಲಾವಿದೆಯರು ಮನೋಹರವಾಗಿ ಅರ್ಪಿಸಿದರು. ಇಬ್ಬರಲ್ಲೂ ಸಾಮರಸ್ಯ-ಹೊಂದಾಣಿಕೆ ಗಮನಾರ್ಹ ಅಂಶವಾಗಿತ್ತು. ಆಂಗಿಕಾಭಿನಯ ಮತ್ತು ಭಾವಾಭಿವ್ಯಕ್ತಿ ಸೂಕ್ತವಾಗಿತ್ತು. ಅಂತ್ಯದಲ್ಲಿ ಫಣಿಮಾಲ ಪ್ರಸ್ತುತಪಡಿಸಿದ ಭಕ್ತಿಪೂರ್ಣ ಕೃತಿ ‘ ಶ್ರೀ ರಾಮಚಂದ್ರ ಕೃಪಾಳು ಭಜಮನ…’ ಮನನೀಯವೆನಿಸಿತು. ಶ್ರೀರಾಮನ ಸಾತ್ವಿಕ ದಿವ್ಯರೂಪ-ಭಂಗಿಗಳು ಕಳೆಗಟ್ಟಿದವು. ಕಲಾವಿದೆಯ ಭಾವಪೂರ್ಣ ಅಭಿನಯ-ತಾದಾತ್ಮ್ಯತೆ ಪೂರಕವಾಗಿದ್ದವು.

ಒಟ್ಟಾರೆ, ಪ್ರಸ್ತುತ ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು ಮಾಡುತ್ತಿರುವ ನೃತ್ಯ ಪ್ರದರ್ಶನಗಳು ಸ್ವಾಗತಾರ್ಹವಾದರೂ ಅದಕ್ಕೆ ಬೇಕಾದ ಸೂಕ್ತ ತಾಂತ್ರಿಕ ಸಿದ್ಧತೆ ಮತ್ತು ತರಬೇತಿ ಅಗತ್ಯವೆನಿಸಿತು.

                               ********************

Related posts

ಕಣ್ಮನ ತಣಿಸಿದ ಸೋನಿಯಾಳ ಒಡಿಸ್ಸಿ ಲಾಸ್ಯ-ಲಾಲಿತ್ಯ

YK Sandhya Sharma

ಮನೋಜ್ಞ ಭಂಗಿಗಳ ಮೇಘನಾ ನೃತ್ಯಝೇಂಕಾರ

YK Sandhya Sharma

‘ಭರತದರ್ಶನ’ದ ಮನಸೆಳೆದ ರಮ್ಯನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.