ಮಂಕಾಗಿ ಕುಳಿತ ಶ್ರೀಪತಿ ಧಡಾರನೆ ಎದ್ದು, ಹೆಚ್ಚು ಕಡಿಮೆ ಓಡಿದಂತೆಯೇ ಒಳಗೆ ನಡೆದ. ತಾಯಿಯ ಅದೇ ಗಾಬರಿಯ ದನಿ!……
‘ಶ್ರೀಪತಿ…… ಶ್ರೀ…..’
ತಟ್ಟೆಯಲ್ಲಿದ್ದ ಅನ್ನವನ್ನು ಬೇಗ ಬೇಗ ಕಲೆಸಿ ತುಟಿ, ನಾಲಿಗೆಯನ್ನು ಮುಸುರೆ ಮಾಡುವಂತೆ ಒಂದೆರಡು ಬಾರಿ ಬಾಯಿಗೆ ತಗುಲಿಸಿ ಎದ್ದುಬಿಟ್ಟ. ಹೆಂಡತಿಯ ಹೊಸ ಪರಿಯ ನಡತೆಯಿಂದ ತಲೆಕೆಟ್ಟು ಏನೇನೋ ಭಯಗಳಾಗಿ ಹಸಿವೇ ಮುಚ್ಚಿಹೋಗಿತ್ತು. ಮೆತ್ತನೆಯ ಹಾಸಿಗೆಯ ಮೇಲೆ ದೇಹ ಮಲಗಿದ್ದರೂ ರೆಪ್ಪೆಗಳು ಮಾತ್ರ ಶತ್ರುಗಳಂತೆ ಸಿಡಿದು ನಿಂತಿದ್ದವು. ಮಗ್ಗಲು ಹೊರಳಿ ನೋಡಿದ. ಗೇಣುದ್ದದಲ್ಲೇ ಅವಳು ಮಲಗಿದ್ದಾಳೆ. ಇನ್ನೊಂದು ಹೊರಳು ಹೊರಳಿದರೆ ಅವಳ ದೇಹ ಅಂಟುತ್ತದೆ. ಆದರೆ ಇದಾವುದರ ಬಗ್ಗೆಯೂ ಗಮನವಿಲ್ಲದೆ ಅವನು ಅವಳ ದೇಹದಲ್ಲಿರಬಹುದಾದ ಮನಸ್ಸಿನ ಬಗ್ಗೆ ಚಿಂತಿಸುತ್ತಾನೆ.
ಇದಕ್ಕಿದ್ದ ಹಾಗೆ ಏನಾಯ್ತು ಇವಳಿಗೆ? ತಾನು ಅರಿತಂತೆ ಇವಳು ಹೇಳಿಕೊಳ್ಳುವಷ್ಟು ದೈವಭಕ್ತಳೂ ಅಲ್ಲ. ಅಂಥ ದುರ್ಬಲ ಮನಸ್ಸಿನ ಅತಿ ಸೂಕ್ಷ್ಮ ಹುಡುಗಿಯೂ ಅಲ್ಲ. ಹೆಂಡತಿಯ ಬದಲಾದ ನಡವಳಿಕೆಗೆ ಕಾರಣವನ್ನು ಬೆದಕಾಡಿದ ಶ್ರೀಪತಿ. ಹತ್ತಾರು ಮಂದಿ ಹತ್ತಾರು ರೀತಿ ಹೇಳುವ ಕಾರಣಗಳಾವುವನ್ನೂ ಅವನ ಮನ ಅಂಗೀಕರಿಸುತ್ತಿಲ್ಲ. ಸಿಗದ ಕಾರಣ ನಾಲ್ಕಾರು ಮುಖ ತಳೆದು ನಿಮಿಷ ನಿಮಿಷಕ್ಕೂ ಹೊಸ ಹೊಸದಾಗಿ ಬೆಳೆದು ಬಲಿತು ಬಾಗತೊಡಗಿತು.
‘ಶ್ರೀಪತಿ…..’ ತಾಯಿಯ ಗಾಬರಿಯ ದನಿ!… ಶ್ರೀಪತಿ ಧಾವಿಸಿದ್ದ.
‘ನೋಡಪ್ಪ, ಯಾಕೋ ಶಾರದೆಯ ಮೈಯೆಲ್ಲ ನಡುಗ್ತಿದೆ….. ಕಣ್ಣೆಲ್ಲ ನೋಡು ಹೇಗೆ ಕೆಂಪಗಾಗಿದೆ….. ಅಬ್ಬಬ್ಬ ಹೇಗೆ ಬಿರುಗಣ್ಣಾಗಿದೆ ನೋಡು….. ಅಯ್ಯೋ ಶ್ರೀಪತಿ ನಂಗ್ಯಾಕೋ ಕೈ ಕಾಲೆಲ್ಲ ಸೋತುಹೋಗ್ತಿದೆ….. ಅಯ್ಯೋ…..”
ಶಾರದೆಯ ಮೈಗಿಂತ ತಾಯಿಯ ದೇಹವೇ ಹೆಚ್ಚಾಗಿ ಥರಥರಗುಟ್ಟುತ್ತಿತ್ತು. ಶ್ರೀಪತಿಯ ಎದೆಯೂ ಹೆಂಡತಿಯನ್ನು ಕಂಡು ಹಾಗೆಯೇ ಆಗಿತ್ತು. ಆದರೂ– ‘ಏನೂ ಗಾಬರಿಯಾಗಬೇಡಮ್ಮ, ಬೇಗ್ಹೋಗಿ ಒಂದು ಸ್ಪಲ್ಪ ನೀರು ತೊಗೊಂಡು ಬಾ’ ಎಂದು ತಾಯಿಗೆ ಧೈರ್ಯ ಹೇಳುತ್ತ, ತಾನೇ ಧೈರ್ಯಗುಂದಿ, ಶಾರದೆಯ ಅದರುತ್ತಿದ್ದ ದೇಹವನ್ನು ತನ್ನ ನಡುಗುವ ಎದೆಗೆ ಒರಗಿಸಿಕೊಂಡು ತಲೆಗೆ ನೀರು ತಟ್ಟಿ ಮೆಲ್ಲಗೆ ‘ಶಾರೀ…..’ ಎಂದು ಅವಳ ಕೆನ್ನೆ ತಟ್ಟಿ ಎಚ್ಚರಿಸಿದ. ತಾಯಿ ಗಾಬರಿಗೊಂಡು ಮುಂದೆ ಹಿಡಿಯಾಗಿ ನಿಂತಿದ್ದಾರೆ. ಶಾರದೆಯ ಬಿರುಗಣ್ಣುಗಳು ನಿಧಾನವಾಗಿ ಮುಚ್ಚಿದವು. ಮೈಯ ನಡುಕ ಕಡಿಮೆಯಾಗಿ ಎರಡು ನಿಮಿಷದಲ್ಲಿ ದೇಹ ನಿಶ್ಚೇಷ್ಟಿತವಾಗಿ ಶ್ರೀಪತಿಯ ಮೇಲೆ ಕೊರಡಿನಂತೆ ಭಾರ ಹೇರಿತು. ಆಳವಾದ ನಿದ್ರೆಯಲ್ಲಿ ಮುಳುಗಿದಂತೆ ಉಸಿರಾಟ ನಿಡಿದಾಯಿತು. ಮೆಲ್ಲಗೆ ತಾಯಿ ಮಗ ಸೇರಿಕೊಂಡು ಅವಳನ್ನು ಕೋಣೆಯ ಮಂಚದ ಮೇಲೆ ಮಲಗಿಸಿದರು. ಇಬ್ಬರ ಮನಸ್ಸಿನಲ್ಲೂ ಮುಂದೇನು ಗತಿ ಎಂಬ ವ್ಯಾಕುಲತೆ ತುಂಬಿತ್ತು.
ಒಂದೆರಡು ಗಂಟೆಗಳ ನಂತರ ಮೈ ಮುರಿದೆದ್ದ ಶಾರದೆ, ಸೊಗಸಾದ ನಿದ್ರೆ ಹೊಡೆದವಳಂತೆ ಆಕಳಿಸುತ್ತ ಮುಖ ತೊಳೆದು ಬಂದು ಜಡೆ ಬಿಚ್ಚಿದಳು. ಅವಳ ಅಲಂಕಾರ ಮುಗಿಯುವವರೆಗೂ ತಾಯಿ ಮಗ ತುಟಿ ಸೀಳದೆ ದೃಷ್ಟಿಯನ್ನೆಲ್ಲ ಅವಳಲ್ಲೇ ಹೂತು ಕುಳಿತಿದ್ದರು.
ಮಲ್ಲಿಗೆಯ ದಂಡೆಯನ್ನು ಕೂದಲು ತೆಗೆದು ಮುಡಿಯುತ್ತ– ‘ಯಾಕತ್ತೆ ಇವತ್ತು ನೀವಿನ್ನೂ ಕಾಫೀನೇ ಮಾಡಿಲ್ಲ? ನಾ ಮಾಡ್ಲಾ?… ಯಾಕೋ ಮಂಕಾಗಿ ಕಾಣ್ತೀರಲ್ಲ. ಹುಷಾರಾಗಿದ್ದೀರಾ ತಾನೆ ನೀವು?’ ಎಂದು ಅತ್ತೆಯ ಸಮೀಪಕ್ಕೆ ಬಂದುನಿಂತಳು. ಅತ್ತೆ ಆಲಸಿಕೆ ಎಂಬಂತೆ ನಿರುತ್ಸಾಹದಿಂದೆದ್ದು ಅವಳ ಕಡೆಗೊಮ್ಮೆ ಆಳವಾಗಿ ದಿಟ್ಟಿಸಿ ನೋಡಿ ಸ್ಟೌವ್ವಿನ ಬಳಿ ನಡೆದಾಗ ಶಾರದೆ ‘ಯಾಕೋ ಇವತ್ತು ಅತ್ತೆ ಭಾಳ ಡಲ್ ಆಗಿ ಕಾಣ್ತಾರಲ್ಲ? ವಿಚಾರಿಸ್ರಿ, ಅಥ್ವಾ ಡಾಕ್ಟರಿಗಾದ್ರೂ ಒಂದು ಸಲ ಫೋನ್ ಮಾಡಿ’ ಎಂದು ಗಂಡನಿಗೆ ಹೇಳಿದಳು.
ಶ್ರೀಪತಿ ಅವಳನ್ನೇ ವಿಚಿತ್ರ ರೀತಿಯಿಂದ ದಿಟ್ಟಿಸಿ ‘ನೀ ಹುಷಾರಾಗಿದ್ದೀಯಾ?’ ಎಂದ ಮೆದುವಾಗಿ.
‘ಅಯ್ಯೋ ರಾಮ ! ನಂಗೇನಾಗಿದೆ ಧಾಡಿ. ಗುಂಡುಕಲ್ ಹಾಗಿದ್ದೀನಿ’ – ಎಂದು ಶಾರದೆ ನಗು ಚೆಲ್ಲುತ್ತ ಉತ್ತರಿಸಿದರೂ ಶ್ರೀಪತಿಯ ಮನಸ್ಸಿಗೆ ಸಮಾಧಾನವಾಗಲಿಲ್ಲ.
ಅಂದು- ಇಬ್ಬರೂ ಉದ್ದನೆಯ ಬೀದಿಯಲ್ಲಿ ನಡೆಯುತ್ತಿದ್ದರು. ದಿನವೂ ಪಟ ಪಟ ಮಾತನಾಡುತ್ತಲೇ ಸಾಗುತ್ತಿದ್ದ ಶ್ರೀಪತಿ ಇಂದು ಮೂಕನಾಗಿದ್ದ. ಅವನ ಮಾತುಗಾರಿಕೆಯನ್ನು ಈ ದಿನ ಶಾರದೆ ತೆಗೆದುಕೊಂಡ ಹಾಗಿತ್ತು.
‘ಸುಮ್ನೆ ಒಂದ್ಸಲ ಡಾಕ್ಟರ ಹತ್ರ ಹೋಗ್ಬಿಟ್ಟು ಬರೋಣ ಬಾ ಶಾರೀ….’
-ಅವಳ ಮಾತಿನ ಯಾವುದೋ ಲಹರಿಯ ಮಧ್ಯೆ ಅಂದ, ಅಸಂಬದ್ಧವಾಗಿ.
‘ಏನಾಯ್ತು ನಿಮ್ಗೆ ಇವತ್ತು ಇದ್ದಕ್ಕಿದ ಹಾಗೆ? ಏನೇನೋ ಡಾಕ್ಟ್ರುಗೀಕ್ಟ್ರು ಅಂತಿದ್ದೀರಾ…. ನಡೀರಿ, ಬೇಗ ಮನೆ ಸೇರ್ಕೊಳೋಣ’ ಎಂದು ಮನೆಯ ಕಡೆಯ ಹೊರಡಿಸಿದಳು. ಶಾರದೆ ಅಂದವನ ಮಾತನ್ನು ತೇಲಿಸಿದ್ದರೂ ಅವನ ಮನಸ್ಸಿನಿಂದ ಆ ವಿಷಯ ಕರಗಿರಲಿಲ್ಲ. ರಾತ್ರಿಯೆಲ್ಲ ತಾಯಿ–ಮಗನಿಗೆ ಅದೇ ಚಿಂತೆ.
ಮುಂದಿನ ಎರಡು ಭಾನುವಾರಗಳಲ್ಲೂ ಶಾರದೆಯ ಅವಸ್ಥೆ ಹಾಗೇ ಹಾಗಿತ್ತು.
‘ಈಗಾಗ್ಲೆ ಮೂರು ಸಲ ಹೀಗಾಗಿದೆ. ಡಾಕ್ಟ್ರ ಹತ್ರವಾದ್ರೂ ತೋರಿಸ್ಕೊಂಡು ಬಾರೋ ಶ್ರೀಪತಿ. ಇದನ್ನು ಉದಾಸೀನ ಮಾಡಬಾರ್ದು.’
ಶ್ರೀಪತಿಯೇನು ಅದನ್ನು ಅಲಕ್ಷಿಸಿರಲಿಲ್ಲ. ಹೆಂಡತಿಯನ್ನು ಒತ್ತಾಯಿಸಿದ್ದ. ಡಾಕ್ಟರರ ಮಾತು ಬಂದ ಕೂಡಲೇ ಶಾರದೆ ನಕ್ಕು- ‘ನಾ ಆರೋಗ್ಯವಾಗೇ ಇದ್ದೀನಿ, ನೀವ್ಯಾಕೆ ಸುಮ್ನೆ ವರಿ ಮಾಡಿಕೊಳ್ತೀರಾ?’ ಎಂದುಬಿಟ್ಟಿದ್ದಳು. ಆಗ ಶ್ರೀಪತಿ ಗತ್ಯಂತರವಿಲ್ಲದೆ ಅವಳಲ್ಲಿ ಆಗಾಗ ಕಾಣುವ ಬದಲಾವಣೆ, ಅವಳ ಮೈ ನಡುಗುವ ಬಗ್ಗೆ, , ಬಿರುಗಣ್ಣಿನ ವಿಷಯ ಹೇಳಲೇಬೇಕಾಯಿತು.
‘ಹೌದಾ? ನಂಗೊತ್ತೇ ಆಗ್ಲಿಲ್ಲ!’ ಎಂದವಳು ಆಶ್ಚರ್ಯ ಸೂಚಿಸಿದ್ದರೂ ಶಾರದೆ, ಡಾಕ್ಟರ್ ಬಳಿಗೆ ಬರಲು ಒಪ್ಪಿರಲಿಲ್ಲ.
ತಾಯಿ – ಮಗನಿಗೆ ಚಿಂತೆಯ ಮೊತ್ತ ಹೆಚ್ಚಾಯಿತು.
ಮಗಳು, ಅಳಿಯ, ಮೊಮ್ಮಕ್ಕಳು ಊರಿಗೆ ಬರುತ್ತಾರೆಂದು ಪತ್ರ ಬಂದಾಗ ಇಬ್ಬರಿಗೂ ಗಾಬರಿಯೋ ಗಾಬರಿ!!. ‘ಅವರೆದುರಿಗೆಲ್ಲ ಇವಳಿಗೆ ಹೀಗಾದ್ರೆ ಏನೋ ಗತಿ ಶ್ರೀ…?’ – ಎಂಬುದು ತಾಯಿಯ ಅಳಲು.
ಆದರೆ,…ಬಂದವರು ಇಲ್ಲಿದ್ದಷ್ಟು ದಿನಗಳೂ ಶಾರದೆ ಯಥಾಪ್ರಕಾರವಾಗಿದ್ದಳು. ಯಾವ ಐಬೂ ಹೊರಬಿದ್ದಿರಲಿಲ್ಲ. ಸೊಸೆಯ ಸ್ಥಿತಿ ಹೆಚ್ಚು ಕಡಿಮೆಯಾಗದುದನ್ನು ಕಂಡು ಅತ್ತೆ ಸಮಾಧಾನದ ಉಸಿರಲ್ಲಿ ‘ಗೆದ್ದೆ!’ ಎಂದು ನಿಟ್ಟುಸಿರುಬಿಟ್ಟರು.
ಮಗಳು ಊರಿಗೆ ಹೊರಡುವ ದಿನ – ಅವಳನ್ನು ಕಾಣಲು ಅವಳ ಅತ್ತೆ, ಮಾವ ನಾದಿನಿಯರು ಬಂದಿದ್ದರು. ಎಲ್ಲರೊಡನೆ ನಗುತ್ತ ಮಾತನಾಡುತ್ತಿದ್ದ ಶಾರದ ಇದಕ್ಕಿದ್ದ ಹಾಗೆ ಕಣ್ಣು ಅರಳಿಸಿ ಮೈ ನಡುಗಿಸತೊಡಗಿದಳು. ಸುತ್ತಲೂ ಇವರೆಲ್ಲ ‘ಏನಾಯ್ತು? ಏನಾಯ್ತು?’ ಎಂದು ಗಾಬರಿ ದನಿ ಸೂಸಿದಾಗ ತಾಯಿ-ಮಗನಿಗೆ ಮೈಮುಖವೆಲ್ಲ ಹಿಡಿಯಾಯಿತು. ಶ್ರೀಪತಿ ಮೌನವಾಗಿ ನೀರು ತಂದು ಅವಳ ತಲೆಗೆ ತಟ್ಟಿದ. ಅವಳನ್ನು ಒಳಗೆ ಕರೆದೊಯ್ಯಲು ಪ್ರಯತ್ನಿಸಿದ. ಶಾರದೆ ‘ಊಂ. ಊಂ’ ಎಂದು ತನ್ನ ತಲೆಯನ್ನು ಅಡ್ಡಡ್ಡಕ್ಕೆ ಅಲ್ಲಾಡಿಸುತ್ತ ಒಮ್ಮೆ ಜೋರಾಗಿ ತನ್ನ ತಲೆಯ ಮೇಲಿದ್ದ ಅವನ ಕೈಯನ್ನು ಝಾಡಿಸಿದಳು. ಎದ್ದು ನಿಂತು ಬಿರುಗಣ್ಣು ಬಿಟ್ಟು ಅವನನ್ನೇ ನುಂಗುವಂತೆ ದಿಟ್ಟಿಸಿದಳು. ತಲೆಯನ್ನು ಆಡಿಸುತ್ತಲೇ ಇದ್ದುದರಿಂದ ಸಡಿಲವಾಗಿ ಹೆಣೆದಿದ್ದ ಜಡೆ ಬಿಚ್ಚಿ ಕೂದಲು ಮುಖದ ತುಂಬ ಹರಡಿಕೊಂಡಿತು.
‘ಅಮ್ಮಾ, ಅತ್ತಿಗೆಗೆ ಯಾವಾಗಿನಿಂದ ಹೀಗಮ್ಮ?’-ಮಗಳ ಆತಂಕದ ದನಿ.
‘ನಿಮ್ಮ ಮನೆದೇವರು ಯಾವ್ದು ? ಹಿಂದೆ ನಿಮ್ಮ ಪೈಕಿ ಯಾರಿಗಾದ್ರೂ ಬರ್ತಿತ್ತಾ?’ – ಬೀಗಿತ್ತಿಯ ಪ್ರಶ್ನೆ.
ಅಷ್ಟುಹೊತ್ತಿಗೆ ಸರಿಯಾಗಿ ಅಲ್ಲಿಗೆ ಏನೋ ಕೇಳಲು ಬಂದ ಪಕ್ಕದ ಮನೆಯಾಕೆ, ಶಾರದೆಯ ಅವತಾರ ಕಂಡು ಬೆಕ್ಕಸ ಬೆರಗಾಗಿ, ‘ಕುಂಕುಮ ಅರಿಶಿನ ಹಚ್ಚಿ ಆರತಿ ಮಾಡಿ, ಹೊರಟ್ಹೋಗತ್ತೆ’ ಎಂದರು.
ಶ್ರೀಪತಿ ಕಲ್ಲಿನ ಹಾಗೆ ನಿಂತಿದ್ದ. ಅರಿಶಿನ, ಕುಂಕುಮ ಹಚ್ಚಿದರು, ಆರತಿಯಾಯಿತು. ಬಿರುಗಣ್ಣು ತೇಲುಗಣ್ಣಾಗಿ ಮುಚ್ಚಿಕೊಂಡಿತು.
ಆದರೆ, ಮುಂದಿನ ನಾಲ್ಕು ದಿನಗಳಲ್ಲಿ ಮತ್ತೆ ಮೂರು ಸಲ ಹೀಗೇ ಆದಾಗ ತಾಯಿ ಮಗ ಉಸಿರು ಕಳೆದುಕೊಂಡವರಂತೆ ಅವ್ಯಕ್ತ ಹಿಂಸೆಯಿಂದ ಚಡಪಡಿಸಿದರು.
ಆ ರಾತ್ರಿ- ಶಾರದೆ ಮಗ್ಗಲು ಹೊರಳಿ ಶ್ರೀಪತಿಯ ಕೊರಳು ಬಳಸಿ, ಬರಸೆಳೆದಾಗ, ಅವನ ದೇಹ ನಿಷ್ಪಂದವಾಯಿತು. ಹಾವೊಂದು ಕುತ್ತಿಗೆಗೆ ನೇತು ಬಿದ್ದಂತೆ ಭಾಸವಾಗಿ ಅವನು ಹೆಣದಂತೆ ಮಲಗಿದ. ಮೊದಲು ಕಾವು ಹುಟ್ಟಿಸುತ್ತಿದ್ದ ಅವಳ ದೇಹ, ಈಗ ಮುಳ್ಳಿನ ತುರುಬಿನಂತಾಗಿತ್ತು. ಎಂದಿನಂತೆ ಅವನ ತೋಳುಗಳು ಅವಳನ್ನು ಬಿಗಿದು ಅಪ್ಪಲಿಲ್ಲ. ಲಕ್ವ ಹೊಡೆದಂತೆ ಕೈಗಳು ಹಾಸಿಗೆಯ ಮೇಲೆ ತೊಪ್ಪನೆ ನಿಶ್ಚೇಷ್ಟಿತವಾಗಿ ಬಿದ್ದಿದ್ದವು. ನಿದ್ದೆಗಣ್ಣಿನಲ್ಲಿಯೇ ಶಾರದೆ ತನ್ನ ತುಟಿಯನ್ನು ಅವನ ತುಟಿಗೆ ಅದುಮಿ ಸಣ್ಣದಾಗಿ ಮುಲುಕಿದಳು. ಶ್ರೀಪತಿ ಕದಲಲಿಲ್ಲ. ಇದುವರೆಗೂ ಅವನು ತೋರುತ್ತಿದ್ದ ಪ್ರೀತಿ-ಪ್ರೇಮ- ಉಪಚಾರಗಳೆಲ್ಲ ನಿಂತುಹೋಗಿ ಬಹಳ ದಿನಗಳೇ ಆಗಿರಬೇಕು. ಅವನ ಕೊರಡಾದ ದೇಹವನ್ನು ಮುನಿಸಿನಿಂದ ಅಲುಗಾಡಿಸಿದಳು…ಉಹೂಂ…ಅವಳ ಬದಲಾದ ನಡುವಳಿಕೆಗಳನ್ನು ಕಂಡು ಗರಬಡಿದಂತಾಗಿದ್ದ ಶ್ರೀಪತಿ.
ಅವನನ್ನು ವಿಸ್ಮಿತಗೊಳಿಸಿದ ಸಂಗತಿಯೆಂದರೆ, ಈಚೆಗೆ ಇವಳೇ ಮುಂದಾಗುತ್ತಿದ್ದಾಳೆ!!!… ಯಾಕೆ ಹೀಗೆ?….. ಪ್ರಶ್ನೆಗಳ ಕೊಂಡಿಗಳು ರಪ್ಪನೆ ಅವನನ್ನು ಸುತ್ತುವರಿಯತೊಡಗಿದಾಗ ಅವನು ನಿರ್ವಿಣ್ಣನಾದ.
‘ಶ್ರೀಪತಿಯ ಹೆಂಡ್ತೀ ಮೈಮೇಲೆ ದೇವಿ ಬರುತ್ತಂತೆ…..’
ನಾಲ್ಕಾರು ಕಂಠಗಳು ಆವನ ಕಿವಿಯಲ್ಲಿ ಕೊರೆದು ಮೈತುಂಬ ವ್ಯಾಪಿಸಿದಾಗ ಅವನು ಹೆದರಿಕೆಯಿಂದ ಧಡಾರನೆ ಮೇಲೆದ್ದು, ಶಾರದೆಯನ್ನು ದೂರ ತಳ್ಳಿ, ಅವಳಿಂದ ದೂರಕ್ಕೆ ಹೊರಳಿ ವಟ್ರುಸುಳಿಯಂತೆ ಸುತ್ತಿಕೊಂಡು ಮುದ್ದೆಯಾದ.
‘ದೇವಿಯೊಡನೆ ನಾನು ಈ ರೀತಿ ಸಂಬಂಧ ಇಟ್ಕೊಂಡ್ರೆ ಆಕೆಯ ಕೋಪ ಹೇಗೆ ಬೇಕಾದ್ರೂ ತಿರುಗಬಹುದು’ ಎಂದು ಮೆಲ್ಲನವನು ಸದ್ದುಮಾಡದೆ ಮಂಚದಿಂದ ಇಳಿದು ಕೆಳಗಡೆ ಮಲಗಿಕೊಂಡ.
ಆದರೂ ಮನಸ್ಸು ಸುಮ್ಮನಾಗಲಿಲ್ಲ. ಸಾಕ್ಷಾತ್ ದೇವಿಯೇ ತನ್ನ ಪಕ್ಕದಲ್ಲಿದ್ದರೂ ತನಗೇಕೆ ಎಲ್ಲರಂತೆ ಅವಳಲ್ಲಿ ಗೌರವ, ಪೂಜ್ಯಭಾವ ಹುಟ್ಟುತ್ತಿಲ್ಲ?!!… ಏನೋ ತಪ್ಪಿತಸ್ಥ ಭಾವನೆ ಮನೆ ಮಾಡಿತು. ಅವಳನ್ನು ದಿಟ್ಟಿಸಿ ನೋಡಿದ. ಮುಗ್ಧಭಾವ ಅವಳ ಮೊಗದಲ್ಲಿ ಮಡುಗಟ್ಟಿದಂತೆ ಅವನಿಗೆ ಭಾಸವಾಯಿತು. ದಿಟ್ಟಿಸಿದಷ್ಟೂ ಅವಳು ತನ್ನ ಮೋಹದ ಮಡದಿಯ ಹಾಗೆಯೇ ಗೋಚರಿಸಿದಳು.
ಬುದ್ಧಿ-ಮನಸ್ಸುಗಳ ಮಂಥನ ಎಡೆಬಿಡದೆ ನಡೆಯುತ್ತಾ ಸಾಗಿದಂತೆ, ಯಾವುದೋ ದಿವ್ಯಶಕ್ತಿಯೊಂದು ತನ್ನವಳಲ್ಲಿ ಸೇರಿದೆಯೆಂಬ ಹೆಮ್ಮೆಯ ಭಾವ ಮೂಡುವ ಬದಲು, ಅವನಲ್ಲಿ ಒಳಗಿಂದೊಳಗೆ ಅವ್ಯಕ್ತವಾಗಿ ಕಿಣಕಿಣಿಗುಟ್ಟುವ ಭೀತಿ ಈಗ ಢಂಗೂರ ಹೊಡೆದಂತೆ ವ್ಯಾಪಿಸುತ್ತ ಬಂದಿದೆ.
‘ಅಯ್ಯೋ ದೇವರೇ ! ನನ್ನ ಅದೃಷ್ಟವೇ ಇಷ್ಟೇನೋ? ಬಯಸಿ ಬಯಸಿ ಪಡೆದಿದ್ದು ಕೈಗೆ ಹತ್ತುವುದೇ ಇಲ್ಲವಲ್ಲ!… ಇಷ್ಟು ದಿನ ಅಂಥಾ ಚೆನ್ನಾಗಿದ್ದ ಇವಳಿಗೇ ಆ ದೇವಿಯ ಆವಾಹನೆಯಾಗಬೇಕೆ?!!!..’
ಚಿಂತೆ ಕುದ್ದು ಕರಗಿ ಹರಿದಂತೆ ಅವನ ಕೆನ್ನೆ ಒದ್ದೆಯಾಯಿತು.
ಮರುದಿನ- ಶ್ರೀಪತಿ ಎಂದಿನಂತೆ ಮಂಚದ ಮೇಲೆ ಮಲಗದೇ, ಹಾಸಿಗೆಯನ್ನು ಕೆಳಗೆ ಬಿಚ್ಚಿದಾಗ-
‘ಏನ್ರೀ ಇದು ಇದಕ್ಕಿದ್ದ ಹಾಗೆ ಹೊಸ ಪರಿ?’ -ಶಾರದೆ ತಮಾಷೆ ಮಾಡಿ ನಕ್ಕು, ಅವನನ್ನು ತಡೆದಳು.
‘ಹೌದು, ಎಲ್ಲಾ ಇದ್ದಕ್ಕಿದ್ದ ಹಾಗೆಯೇ ಹೊಸ ಪರಿ ಶುರುವಾಗಿದೆ.’ ಎಂದು ಅವಳ ಪ್ರಶ್ನೆಯನ್ನೇ ಉತ್ತರವಾಗಿಸಿ ನುಡಿದ ಶ್ರೀಪತಿ ಗೂಢವಾಗಿ. ತನ್ನ ಮಾತಿಗೆ ಅವಳ ಪ್ರತಿಕ್ರಿಯೆ ತಿಳಿಯಲು ಅವಳ ಮುಖವನ್ನೇ ಕುತೂಹಲದಿಂದ ನೋಡಿದ. ಅವಳು ಅದನ್ನು ಮನಸ್ಸಿಗೆ ತೆಗೆದುಕೊಂಡಂತೆ ಕಾಣಲಿಲ್ಲ. ಅವನ ಎದೆಯ ಮೇಲೆ ಮುಖವಿಟ್ಟು– ‘ಯಾಕೆ ನೀವು ಈ ನಡುವೆ ತುಂಬ ಮಾತು ಕಡಿಮೆ ಮಾಡಿಬಿಟ್ಟಿದ್ದೀರಾ? ನನ್ಮೇಲೆ ಕೋಪಾನಾ?’ ಅಂದಳು. ಅವನು ಉತ್ತರಿಸಲಿಲ್ಲ. ‘ನೀವು ಮೊದಲಿನ ಹಾಗೆ ಇದ್ರೆ ಚೆನ್ನಕಣ್ರೀ ’ ಅಂದಳು ಹುಸಿಮುನಿಸಿನಿಂದ . ಅವನು ಕೊರಡಂತೆ ಬಿದ್ದುಕೊಂಡಿದ್ದ. ಶಾರದೆ, ಮುದ್ದುಗರೆಯುತ್ತ, ‘ಹೋಗ್ರಿ, ನಿಮ್ಗೆ ನನ್ನ ಕಂಡ್ರೆ ಪ್ರೀತೀನೆ ಇಲ್ಲ’ ಎಂದು ಮುಖ ಊದಿಸಿಕೊಂಡಳು. ಶ್ರೀಪತಿಯ ಮನಸ್ಸು ಕುದಿಯುವ ಸಮುದ್ರವಾಗಿದ್ದರೂ ಮೌನವಾಗಿ ಗೋಡೆಗೆ ಮುಖ ಕೊಟ್ಟ.
ಅಂದು ಆಫೀಸಿನಿಂದ ಸ್ಪಲ್ವ ಬೇಗನೆ ಬಂದ ಶ್ರೀಪತಿಗೆ ಮನೆಯ ತುಂಬ ಜನ ನೆರೆದಿರುವುದನ್ನು ಕಂಡು ಎದೆಗುಂಡಿಗೆ ಬಾಯಿಗೆ ಬಂದಂತಾಯಿತು. ಗಾಬರಿಯಿಂದ ನಡುಮನೆಗೆ ನುಗ್ಗಿದ. ದೊಡ್ಡ ಮಣೆಯ ಮೇಲೆ ಶಾರದೆಯನ್ನು ಪದ್ಮಾಸನ ಹಾಕಿ ಕೂಡಿಸಿದ್ದರು. ಹಣೆಯ ತುಂಬ ಅರಿಶಿನ ಕುಂಕುಮಗಳ ರಾಶಿ ಈಡಾಡಿದ್ದವು….ಬಿರುಗಣ್ಣು!… ಬಿರುಮುಡಿ!… ‘ಊಂ ಊಂ…’ ಉಯ್ಯಾಲೆಯಂತೆ ತಲೆ ಅತ್ತಿಂದಿತ್ತ ಓಲಾಡುತ್ತಿದೆ. ಗಿರಗಿರನೆ ಸುತ್ತುತ್ತಿದ್ದ ಅವಳ ದೃಷ್ಟಿ ಶ್ರೀಪತಿಯನ್ನು ಕಂಡ ತತ್‍ಕ್ಷಣ ತಟ್ಟನೆ ನಿಂತುಕೊಂಡಿತು. ಅವನನ್ನೇ ಕ್ರೂರವಾಗಿ ದಿಟ್ಟಿಸುತ್ತ– ‘ನನಗೆ ಹೂವೀಳ್ಯ ಮಾಡಬೇಕು….. ಬ್ರಾಹ್ಮಣ ಮುತ್ತೈದೆಯರಿಗೆ ಊಟ….. ನನಗೆ ಭಾರಿ ಸೀರೆ ಉಡಿಸಿ ಒಡವೆಗಳನ್ನು ತೊಡಿಸಬೇಕು’ ಎಂದು ಅಪ್ಪಣೆಗೈದಿತು.
‘ಆಗಲಮ್ಮ ಮಹಾತಾಯಿ, ಧಾರಾಳವಾಗಿ ಮಾಡಿಸ್ತೇವೆ. ನಿಂಗೆ ತೃಪ್ತಿ ಮಾಡ್ತೀವಿ. ಶಾಂತಳಾಗು’ ತಾಯಿ ಕೈಜೋಡಿಸಿ ವಿನೀತವಾಗಿ ಬೇಡಿಕೊಳ್ಳುತ್ತಿದ್ದರು.
ಈ ನಾಟಕೀಯ ದೃಶ್ಯ ಕಂಡು ಶ್ರೀಪತಿಯ ಹೊಳ್ಳೆಗಳು ಕೋಪದಿಂದ ಅರಳಿದವು. ಆದರೂ ಒತ್ತಾಯಪೂರ್ವಕ ತನ್ನ ಭಾವನೆಗಳಿಗೆ ಬಿರಟೆಯೊತ್ತಿದ.
‘ಶಾರೀ, ನಿನ್ನ ಈ ಜಿಂಕೆ ಕಣ್ಣುಗಳು ಎಷ್ಟು ಚೆನ್ನಾಗಿವ್ಯೇ…..’ ಎಂದು ತಾನು ಅಪಾರ ಮೆಚ್ಚಿದ್ದ ಅದೇ ಕಣ್ಣುಗಳು ಅವನನ್ನು ಗುಳಕ್ಕನೆ ನುಂಗುವಂತೆ ಹತ್ತಿರ ಹತ್ತಿರವಾಗಲು ಅವನು ಬೆಚ್ಚಿ ಎರಡಡಿ ಹಿಂದೆ ಸರಿದ.
ದೇವಿಯ ಮಾತಿನಂತೆ ಅದೇ ಶುಕ್ರವಾರದ ದಿನ ಹೂವೀಳ್ಯದ ಶಾಸ್ತ್ರವನ್ನು ಇಟ್ಟುಕೊಂಡರು. ಮುತ್ತೈದೆಯರಿಗೆ ಪಾನಕ, ಕೋಸಂಬರಿ, ತಾಂಬೂಲ ಕೊಡುವ ಮುನ್ನ ದೇವಿಗೆ ನೈವೇದ್ಯ ಮಾಡಿದರು. ದೇವಿ, ಪಾನಕ–ಕೋಸಂಬರಿ ಸ್ವೀಕರಿಸಿ ತೃಪ್ತಿಯಾಯ್ತೆಂಬಂತೆ ತಲೆಯಾಡಿಸಿ ‘ನಾನು ನಿರ್ಮಲಾ’ ಎಂದು ಹೂಂಕರಿಸಿತು.
ಶ್ರೀಪತಿ ಬೆಚ್ಚಿಬಿದ್ದ!!!… ಅವನ ತಾಯಿಯ ಮುಖ ವಿವರ್ಣವಾಯಿತು. ಸುತ್ತಲಿದ್ದ ಮುತ್ತೈದೆಯರ ಕುತೂಹಲ, ಆಸಕ್ತಿ ಅರಳಿತು. ‘ನಾನು ನಿರ್ಮಲಾ…. ಏನೂಂದ್ರೆ, ಎಲ್ಲಿ ನನ್ನ ನಾಲ್ಕೆಳೆ ಮೋಪಿನ ಅವಲಕ್ಕಿ ಸರ, ಬಳೆ-ಹವಳ, ಕೆಂಪಿನ ಉಂಗುರ, ರೇಷ್ಮೆ ಸೀರೆಗಳು? ನನಗೆ ಸೇರಿದ ಒಡವೆ-ವಸ್ತ್ರಗಳನ್ನೆಲ್ಲ ಎಲ್ಲಿ ಮುಚ್ಚಿಟ್ಟಿದ್ದೀರಿ? ನನ್ನದು ನಂಗೆ ಬೇಕೂ….. ಬೇಕು…..’
ಶ್ರೀಪತಿಯ ತಾಯಿಗೆ ನಿರ್ಮಲೆಯ ದನಿ ಕೇಳಿದಂತೆಯೇ ಭಾಸ.
‘ಹೋ, ನಾನವತ್ತೇ ಹೇಳ್ಳಿಲ್ವೇ ಸಾವಿತ್ರಮ್ಮ ಇದು ಸವತಿಯ ಕಾಟಾಂತ?’
‘ಹಾಗಾದ್ರೆ ಇದು ದೇವಿಯಲ್ಲ, ದೆವ್ವ ಅಂತೀರಾ?’
‘ಮತ್ತಿನ್ನೇನು? ಶಾರದೆಯೊಳಗೆ ನಿರ್ಮಲಾ ಹೊಕ್ಕುಬಿಟ್ಟಿದ್ದಾಳೆ. ಈಗ ಅವಳು ಹೇಳಿದ್ದೆಲ್ಲ ಪೂರೈಸಲೇಬೇಕು. ಇಲ್ಲದಿದ್ರೆ ಅದು ಸುಮ್ಮೆ ಬಿಡಲ್ಲ’
‘ಶ್ರೀಪತಿ, ನಿಮ್ಮಾವನ ಮನೆಗ್ಹೋಗಿ ನಿರ್ಮಲಾನ ಒಡವೆ, ಸೀರೆ–ವಸ್ತುಗಳನ್ನೆಲ್ಲ ತೊಗೊಂಡು ಬಂದುಬಿಡಪ್ಪ….. ಇಲ್ಲಿ ನಡೆಯುತ್ತಿರುವ ವಿಷ್ಯವೆಲ್ಲ ಹೇಳಪ್ಪ ಅವರಿಗೆ… ಬೇರೆ ದಾರಿಯೇ ಇಲ್ಲ’- ತಾಯಿಯ ಬೆದರಿದ ದನಿ.
ಶ್ರೀಪತಿ ಎರಡು ವರ್ಷಗಳ ಮೇಲೆ ಮಾವನ ಮನೆಯ ಹಾದಿ ಮೆಟ್ಟಿದ. ಅಲ್ಲಿ ಹೋಗಿ ತಾನೇ ಕೈಯಾರೆ ನಿರ್ಮಮತೆಯಿಂದ ಒಪ್ಪಿಸಿದ ವಸ್ತುಗಳನ್ನು ಯಾವ ಬಾಯಲ್ಲಿ ಹಿಂದಕ್ಕೆ ಕೇಳುವುದೆಂಬ ಸಂಕೋಚ, ನಾಚಿಕೆ. ಜೊತೆ ಜೊತೆಗೆ ನಿಮ್ಮಿಯ ಬಳಿ ಇದ್ದ ಒಡವೆ, ಸೀರೆಯ ಮಾಹಿತಿಗಳೆಲ್ಲ ಶಾರದೆಗೆ ಹೇಗೆ ತಿಳಿಯಿತು? ಸರಿಯಾಗೇ ಹೇಳಿದಳಲ್ಲ ಎನ್ನುವ ಆಶ್ಚರ್ಯ!…ಮರೆಯಲೆತ್ನಿಸಿದ್ದ ನೆನಪುಗಳೆಲ್ಲ ಉಕ್ಕತೊಡಗಿದವು.
ತಾನು, ನಿರ್ಮಲಾ ಕಾಲೇಜಿನ ದಿನಗಳಲ್ಲಿ ಓಡಾಡಿದ್ದು, ಪ್ರೇಮಿಸಿದ್ದು, ಹಿರಿಯರ ಒಪ್ಪಿಗೆ ಮೇರೆಗೆ ಮದುವೆಯಾದದ್ದು. ತನ್ನ ಮನಸ್ಸೇ ಹೆಣ್ಣುರೂಪ ಧರಿಸಿ ಕೈ ಹಿಡಿದಂತೆ ಅವಳು ಬಾಳುವೆ ನಡೆಸಿದ ದಿನಗಳು. ಮುಂದೆ….. ಮುಂದೆ…..ಅಂಕೆಯಿಲ್ಲದೆ ಹಾರಾಡುತ್ತಿದ್ದ ತಮ್ಮ ಕನಸಿನ ಚಿಟ್ಟೆಗಳ ರೆಕ್ಕೆ ತರಿದು ನೆಲಕ್ಕುದುರಿದಂತೆ, ತನ್ನ ಪ್ರೀತಿಯ ನಿಮ್ಮಿಯ ಸಾವು. ಆಗ ತಾನು ಎಷ್ಟು ಹಣೆ ಗಟ್ಟಿಸಿಕೊಂಡು ಅತ್ತಿರಲಿಲ್ಲ! ಅವಳ ಚಿತೆ ಉರಿಯುತ್ತಿರುವಾಗ ‘ನಿಮ್ಮೂ’ ಎಂದು ಅದರಲ್ಲೇ ತಾನು ಧುಮುಕಲು ಹೊರಟಾಗ ಯಾರೋ ಈಚೆಗೆ ಎಳೆದುಕೊಂಡಿದ್ದರು. ಮುಂದೆ ಬದುಕು ಶೂನ್ಯವೆನಿಸಿತು.. ಬರಡಾಯಿತು.. ಆಮೇಲೆ, ತಾನು ಪ್ರೀತಿಯಿಂದ ಅವಳಿಗೆ ಮಾಡಿಸಿದ ಒಡವೆಗಳು ಅವಳ ನೆನಪನ್ನು ಕುದಿಸುತ್ತವೆ ಎಂದು ಅವನ್ನೊಯ್ದು ಅವಳ ತಾಯಿಯ ಮನೆಗೆ ಖುದ್ದಾಗಿ ಮುಟ್ಟಿಸಿ ಬಂದಿರಲಿಲ್ಲವೆ?..ಓಹ್.. ತಾನು ಇನ್ನೆಂದೂ ಅವಳ ವಸ್ತುಗಳನ್ನು ಕಾಣಲೇಬಾರದು ಎಂದುಕೊಂಡದ್ದು… ಕಾಣುವುದೇ ಇಲ್ಲ ಎಂದು ಭಾವಿಸಿದ್ದು….?!!
ಎದೆ ಭಾರವಾಗಿ ನಿಟ್ಟುಸಿರು ಧುಮುಕಿತು. ಈಗ ಏನೇನೋ ಊಹೆಗೆ ಸಿಲುಕದ ಘಟನೆಗಳು ಸಂಭವಿಸುತ್ತಿವೆಯಲ್ಲ!
‘ನಿಮಗೆ ನನ್ನ ಕಂಡ್ರೆ ಪ್ರೀತಿ ಇಲ್ವಾ?’ ಕತ್ತಲೆಯಲ್ಲಿ ಪಿಸುಗುಟ್ಟಿದ ಶಾರದೆ ಅವನ ತೋಳಿನ ಮೇಲೆ ತಲೆ ಇಟ್ಟಳು. ಅವನ ಮೈ ಮಂಜುಗಡ್ಡೆಯಾಗಿತ್ತು.
ಕತ್ತಲಲ್ಲಿ ಅರಳಿದ ಅವನ ಕಣ್ಣುಗಳು ನಿಷ್ಟ್ರಯೋಜಕವಾದವು. ಎಂದೋ ಎಲ್ಲೋ ನೋಡಿದ್ದ ಕ್ಯಾಲೆಂಡರಿನ ದುರ್ಗೆಯ ಚಿತ್ರ ಕಣ್ಣ ಮುಂದೆ ಕುಣಿದಂತಾಗಿ ಹೆಂಡತಿಯ ಕಡೆ ಸರ್ರನೆ ತಿರುಗಿ ನೋಡಿದ. ಕಣ್ಣನ್ನು ಹೂವಾಗಿಸಿ ತನ್ನನ್ನೇ ತಿನ್ನುವಂತೆ ದಿಟ್ಟಿಸುತ್ತ ಮಲಗಿದ್ದ ದೇವಿಯ ಪ್ರಖರ ತೇಜಸ್ಸನ್ನು ಕಂಡಂತಾಗಿ ಮೈ ನಡುಗಿ, ಒಮ್ಮೆಲೆ ಭಯ-ಭಕ್ತಿ-ಗೌರವಗಳು ಮೇಲಕ್ಕೆ ಚಿಮ್ಮಿಬಂದು ಎದ್ದು ಕೂತ.
‘ಇವೆಲ್ಲ ಸವತಿಯ ಕಾಟ….. ಅವಳ ಆಯಸ್ಸು ಪೂರ್ತಿಯಾಗಿರಲಿಲ್ಲ. ಆಕಸ್ಮಿಕ ಮರಣ ಆದ್ರೆ ಹೀಗೆ ಜೀವ ಅಲೆದಾಡುತ್ತಿರುತ್ತೆ’
ತಾನು ವಿಜ್ಣಾನದ ಪದವೀಧರನಾಗಿ ಏನೇನೋ ವಾದಿಸುತ್ತಿದ್ದುದೆಲ್ಲ ಅವನಿಗೆ ಮರೆತುಹೋಯ್ತು. ಯಾರೋ ಆಡಿದ ಮಾತುಗಳನ್ನೇ ಮೆಲುಕು ಹಾಕುತ್ತ ಬೆವತುಹೋದ. ಕತ್ತಲೆಯಲ್ಲಿ ಅಸ್ಪಷ್ಟವಾಗಿ ಕಂಡ ಅವಳ ಆಕಾರಕ್ಕೆ ವಿಚಿತ್ರ ರೂಪವನ್ನು ಕಲ್ಪಿಸಿಕೊಳ್ಳುತ್ತ ನಡುಗಹತ್ತಿದ. ಗೋಡೆಯತ್ತ ಮುಖ ಮಾಡಿ ಮುದುರಿ ಕುಳಿತ. ರಾತ್ರಿ ಸವೆಯುವುದೇ ಇಲ್ಲವೇನೋ ಎಂಬ ಭೀತಿ ಮಡುಗಟ್ಟಿತು.
ಶಾರದೆಗೆ ‘ದೇವಿ’ ಪಟ್ಟ ಲಭಿಸಿದಂದಿನಿಂದ ಮನೆಯ ವಾತಾವರಣವೇ ಒಂದು ರೀತಿ ಕೃತಕವಾಗಿಬಿಟ್ಟಿತ್ತು. ಗಂಡ-ಹೆಂಡತಿ, ಅತ್ತೆ-ಸೊಸೆಯರ ನಡುವೆ ಇದ್ದ ಬಾಂಧವ್ಯ ಈಗ ಸಂಪೂರ್ಣ ಭಿನ್ನವಾಗಿತ್ತು. ತಾಯಿ-ಮಗ ಒಳಗೇ ಕೊರಗುತ್ತಿದ್ದರೆ ಶಾರದೆ ಮಾತ್ರ ಎಂದಿನಂತೆ ಹಸನ್ಮುಖಿ. ಆದರೂ ತಾಯಿ, ಮಗನ ಹತ್ತಿರ ಗುಟ್ಟಾಗಿ– ‘ದಿನದಿಂದ ದಿನಕ್ಕೆ ಹೇಗೆ ಬಡವಾಗ್ತಿದ್ದಾಳೆ ನೋಡು. ನನಗೇನೋ ಗಾಬರಿ….. ಹೀಗಾದ್ರೆ ತೇದುಹೋಗ್ತಾರಂತೆ’ ಎಂದು ದುಃಖಿಸಿದರು.
‘ಬಿಡಮ್ಮ….. ನಿನ್ನ ಕಣ್ಗೆ ಯಾವತ್ತು ನಿನ್ ಸೊಸೆ ದುಂಡಗಾಗಿದ್ದಾಳೆ. ನಿನ್ನ ಪ್ರೀತಿ ಬರ್ತಾ ಬರ್ತಾ ಹೆಚ್ಚಾಯ್ತು. ಏನಾಗಿಲ್ಲ, ಅವಳು ಮೊದಲ ಹಾಗೇ ಗುಂಡಗೇ ಇದ್ದಾಳೆ, ಬಿಡಮ್ಮ ’ ಎಂದು ಶ್ರೀಪತಿ ತಾಯಿಗೆ ತೋರಿಕೆಯ ಸಮಾಧಾನ ಹೇಳಿದ್ದರೂ, ತಾಯಿ ಹೇಳಿದ್ದು ನಿಜವೇನೋ ಎಂಬ ಅಳುಕು ಒಳಗೆ ಕೊರೆದಿತ್ತು.
ಈಚೆಗೆ- ಶಾರದೆ ಗಂಡನ ಮುಂದೆ ತನ್ನ ಬಯಕೆಯೊಂದನ್ನು ಮುಂದಿಟ್ಟಳು.
ಅದು ಅವನ ಹಳೆಯ ನೆನಪನ್ನು ಕೆದಕಿತು. ಇನ್ನೊಂದು ದುರಂತದ ಛಾಯೆ ಅವನಿಗೆ ಚುರುಕು ತಗುಲಿಸಿದಂತಾಗಿ ‘ಅದೊಂದು ಬೇಡ ಶಾರೀ….. ಬೇಕಾದ್ರೆ ನಾಲ್ಕುದಿನ ನಂದಿಯೋ, ಕೆಮಣ್ಣುಗುಂಡಿಗೋ ಹಾಯಾಗಿ ಇನ್ನೆಲ್ಲಾದರೂ ಹೋಗ್ಬಿಟ್ಟು ಬರೋಣ ಎಂದ.
‘ಉಹುಂ, ನನಗೆ ನಾಕು ದಿನ ಮಂತ್ರಾಲಯಕ್ಕೆ ಹೋಗ್ಬರೋ ಮನಸ್ಸಾಗಿದೆ. ಹೋಗಿಬರೋಣ, ನೀವ್ಯಾಕೆ ಶುದ್ಧ ಮಗು ಥರ ಹಟ ಮಾಡ್ತೀರಲ್ಲ? ನಿಮ್ಗೆ ದೇವರು, ಯಾತ್ರಾ ಸ್ಥಳ ಅಂದ್ರೆ ಇಷ್ಟ ಇಲ್ವಾ? ನಂದಿ, ಪ್ರವಾಸ ಅಂತೀರಲ್ಲ… ಅದು ಇದ್ದೇ ಇರುತ್ತೆ’ ಎಂದು ಬಲವಂತ ಪಡಿಸಿದಳು.
‘ಬೇಡ ಶಾರೀ, ಪ್ಲೀಸ್ ’
‘ಊಹುಂ….. ಹೋಗ್ಲೇಬೇಕು…ನೀವ್ಯಾಕಿಷ್ಟು ವಿರೋಧಿಸ್ತಿದ್ದೀರಾ?’ ಶಾರದೆ ಲಲ್ಲೆಗರೆಯುತ್ತ ಹಟ ಮಾಡಿದಳು. ‘ಇಲ್ಲ ಶಾರೀ….. ನಿನ್ನ ನಾನು ಕಳೆದುಕೊಳ್ಳಲಾರೆ. ನೀ ನನ್ನ ಬಿಟ್ಟು ಹೋಗ್ಬೇಡ ‘ ಶ್ರೀಪತಿಯ ಮುಖ ದೀನವಾಗಿತ್ತು. ಅವನ ಮುಖದ ಬದಲಾವಣೆಯನ್ನು ಕಂಡು ಅವಳು ಅಚ್ಚರಿಯಿಂದ ‘ನಾನೆಲ್ಲಿ ಹೋಗ್ತೀನಿ? ನೀವೂ ನನ್ಜೊತೇಲೇ ಇರ್ತೀರಲ್ಲ. ನಿಮ್ಮಾತೊಂದೂ ನಂಗರ್ಥವಾಗ್ತಿಲ್ಲ’ ಅಂದಳು.
ಶ್ರೀಪತಿ ಒಳಗೇ ಕುದ್ದುಕೊಂಡ. ಎಲ್ಲಾ ವಿಚಾರವನ್ನೂ ಅವಳಿಗೆ ಬಿಡಿಸಿ ಹೇಳುವುದಾದರೂ ಹೇಗೆ? ಒಂದುಸಲ ಎಡವಿದ ಜಾಗದಲ್ಲೇ ಮತ್ತೆ ಹೋಗಿ ಎಡವೋದೇ? ಶಾರದೆಯನ್ನು ಮಾತ್ರ ಏನೇ ಆದರೂ ಅಲ್ಲಿಗೆ ಕರ್ಕೊಂಡು ಹೋಗಬಾರದು. ಅವಳಿಗೆ ತಾನೆ ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಹೋಗಲೇಬೇಕೂಂತ ಮನಸ್ಸು ಎಲ್ಲಿಂದ ಬಂತು?!
ತಟ್ಟನೆ ನೆನಪು ಹೆಡೆಬಿಚ್ಚಿತು. ಅಣ್ಣನ ದೊಡ್ಡಮಗ ಕಿರಣನ ಮುಂಜಿಗೆ ಎಲ್ಲರೂ ಮಂತ್ರಾಲಯಕ್ಕೆ ಹೋಗಿದ್ದಾಗಲೇ ನಿಮ್ಮಿ ತನ್ನಿಂದ ಅಗಲಿದ್ದು. ಅವಳಿಗೆ ಮೊದಲೇ ನೀರೆಂದರೆ ಆಸೆ. ತುಂಗಾನದಿಯ ತಿಳಿನೀರಿನಲ್ಲಿ ಆಡುತ್ತ ಕುಳಿತಿರುತ್ತಿದ್ದ ಅವಳನ್ನು ಎಬ್ಬಿಸಿ ಕರೆತರುವುದು ಕಷ್ಟವಾಗುತ್ತಿತ್ತು. ಸೀರೆಯನ್ನು ನೆನೆಸಿಕೊಳ್ಳುತ್ತ ನದಿಯ ಮಧ್ಯದವರೆಗೂ ಎಷ್ಟು ಹೇಳಿದರೂ ಕೇಳದೆ ಓಡಿಬಿಡುತ್ತಿದ್ದಳು. ಹಾಗೆ ಜಾರಿ ಕಿರುಚಿದ್ದಷ್ಟೇ ಗೊತ್ತು. ಅಮ್ಮಾ, ಅವಳು ಸತ್ತದ್ದು ಅಮಾವಾಸ್ಯೆ ಎನ್ನುತ್ತಾಳೆ. ‘ಪಾಪ ಬಸುರಿ ಹುಡ್ಗಿ, ಜೀವನದಲ್ಲಿ ಇನ್ನೂ ಎಷ್ಟು ಆಸೆ ಇಟ್ಕೊಂಡಿತ್ತೋ!’ – ಎಂದೊಬ್ಬರು. ತನ್ನ ನಿಮ್ಮಿಯನ್ನು ಕಳೆದುಕೊಂಡ ಜಾಗಕ್ಕೆ ಮತ್ತೆ ಶಾರಿಯನ್ನು ಕಳೆದುಕೊಳ್ಳಲು ಹೋಗಬೇಕೇ ? – ಎಂದು ಶ್ರೀಪತಿ ಗಾಬರಿಯಿಂದ ಹೊಯ್ದಾಡಿದ.
ಆದರೆ ಶಾರದೆಯ ಪಟ್ಟು ಬಲವಾಗಿದ್ದುದರಿಂದ ಎಲ್ಲರೂ ಹೊರಟರು. ಇದ್ದಕ್ಕಿದ್ದಂತೆ ಇಲ್ಲಿಗೇ ಹೊರಡುವ ಬಯಕೆ ಸೊಸೆಗೇಕೆ ಬಂತು ಎಂದು ಯೋಚಿಸುತ್ತ ಕುಳಿತ ಅತ್ತೆಯ ಮುಖ ಹಿಂದಿನ ಅಹಿತಕರ ಘಟನೆಯ ನೆನಪಿನಿಂದ ವಿವರ್ಣವಾಯಿತು. ಮುಂದಿನ ಯಾವುದೋ ಅವ್ಯಕ್ತ ಅಪಶಕುನದ ಕೆಡುಕಿನ ಇರುಚಲೂ ಬಡಿಯಿತು. ಎಲ್ಲರೂ ಹೇಳುವಂತೆ ಇದು ನಿರ್ಮಲೆಯ ಪ್ರೇತದ ಆಟವೇ ಎಂದು ಅವರಿಗೆ ಖಚಿತವಾಗತೊಡಗಿತು. ಅದೇ ಇವಳನ್ನು ಪ್ರೇರೇಪಿಸಿ ಮತ್ತೆ ಅದೇ ಜಾಗಕ್ಕೆ ಬರಮಾಡಿಕೊಳ್ಳುತ್ತಿದೆ. ಇವಳನ್ನೂ ತನ್ನ ಹಾಗೆಯೇ ಮಾಡಿಕೊಳ್ಳುವ ಆಸೆ ಇರಬೇಕು ಆ ಅತೃಪ್ತ ಆತ್ಮಕ್ಕೆ. ಈ ಕಲ್ಪನೆ, ವಿಚಾರಗಳಿಂದ ಮೊದಲೇ ರಕ್ತದೊತ್ತಡದಿಂದ ಬಳಲುತ್ತಿದ್ದ ಆಕೆಯ ಹೃದಯ ಢಮರುಗದಂತಾಯಿತು.
ಮಂತ್ರಾಲಯದಲ್ಲಿದ್ದ ಎರಡು ದಿನವೂ ಆಕೆ ಸೊಸೆಯನ್ನು ಕೂಡಿಸಿ ವಿಶೇಷ ಪೂಜೆ ಮಾಡಿಸಿದ್ದರು. ನದಿಯ ಕಡೆಗೆ ಸುಳಿಯದ ಹಾಗೆ ಮಾಡಿ ರಾತ್ರಿಯೆಲ್ಲ ಅವಳ ಬಳಿಯೇ ಕಾವಲಾಗಿ ಮಲಗಿದ್ದರು. ಮರುದಿನ ಇನ್ನೇನು ಎಲ್ಲರೂ ಊರಿಗೆ ವಾಪಸ್ಸಾಗಬೇಕು. ಸರಿರಾತ್ರಿಯಲ್ಲಿ ಆವಿಯಲ್ಲಿ ಬೆಂದಂತೆ ಶಾರದೆ ಶೆಖೆಯ ಬೇಗೆಯಿಂದ ಅತ್ತೆಯ ಪಕ್ಕ ಹೊರಳಾಡುತ್ತಲೇ ಇದ್ದಳು.
ನಡುರಾತ್ರಿ… ಎಷ್ಟೋಹೊತ್ತು ಕಳೆದರೂ ಅವಳಿಗೆ ನಿದ್ದೆಹತ್ತಿಲ್ಲ. ಮೈ ಒಳಗೂ ಹೊರಗೂ ಏನೋ ಉರಿ, ಸಂಕಟ. ಹಲವು ದಿನಗಳಿಂದ ಒಳಗೇ ಗಡ್ಡೆ ಕಟ್ಟಿ ಕುಳಿತಿದ್ದ ಅತೃಪ್ತಿ, ನೋವು ಸ್ರವಿಸತೊಡಗಿತು. ಅಲ್ಲಿದ್ದ ಮೂರು ದಿನಗಳಲ್ಲೇ ಆಚೆ ಈಚೆ ಬಾಡಿಗೆಯ ಮನೆಯಲ್ಲಿದ್ದ ಇಳಿದುಕೊಂಡಿದ್ದ ಯಾತ್ರಿಕರು ಆಡುತ್ತಿದ್ದ ಮಾತುಗಳನ್ನು ಕೇಳಿ ಜುಗುಪ್ಸೆ ಹುಟ್ಟಿತ್ತು. ತನ್ನ ಬಗ್ಗೆ ಹಬ್ಬಿರುವ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ ಅದಕ್ಕೆ ಬಣ್ಣ ಬೆರಸಿ ಕಿವಿಗೆ ಬೀಳುವಂತೆ ಅವರು ಆಡಿಕೊಳ್ಳುವ ಪರಿ ನೋವು ತಂದಿತ್ತು. ತಾನು ದೂರದಲ್ಲಿ ಬರುವುದನ್ನು ಕಂಡ ಕೂಡಲೇ ಕೆಲವರು ‘ದೇವಿ’ ಅಂತ, ಇನ್ನು ಕೆಲವರು ‘ದೆವ್ವ’ ಅಂತ ವಿಚಿತ್ರ ನೋಟದಿಂದ ತಿವಿಯುತ್ತಾರೆ. ಸದ್ಯ ಈ ಊರುಬಿಟ್ಟರೆ ಸಾಕೆನಿಸಿತ್ತವಳಿಗೆ .
ಬೆಳಗ್ಗೆ ಅತ್ತೆ-ಗಂಡನ ಕಾವಲಿನಲ್ಲಿ ಸ್ನಾನ ಮುಗಿಸಿ ರಾಯರಿಗೆ ಪ್ರದಕ್ಷಿಣೆ ಹಾಕಿ ಬೃಂದಾವನವನ್ನೇ ದಿಟ್ಟಿಸುವಾಗ ಏನೋ ಭೀತಿ ಅವಳೆದೆಯನ್ನು ತುಳಿಯತೊಡಗಿತು. ‘ನಿನ್ನೊಳಗನ್ನೆಲ್ಲ ಬಲ್ಲೆ’ ಎಂಬಂತೆ ರಾಯರ ಬೃಂದಾವನದ ಶಕ್ತಿಶಾಲಿಯಾದ ಆ ಬೆಳ್ಳಿ ಕಣ್ಣುಗಳು ತನ್ನ ಮನಸ್ಸಿಗೆ ಪಾತಾಳಗರಡಿಯಾಗುತ್ತವೆ. ಅದನ್ನೇ ಹೆಚ್ಚು ಹೊತ್ತು ದಿಟ್ಟಿಸಿದರೆ ಹೊಟ್ಟೆಯೊಳಗೆ ರಾಟೆಯಾಡಿದಂಥ ಅನುಭವ. ಊರಿಗೆ ಹೋದರಾದರೂ ನೆಮ್ಮದಿಯೇ? ಅಲ್ಲೂ ಕಾಟ ತಪ್ಪಿದ್ದಲ್ಲ. ಮನೆಯವರಿಂದ ಹಿಡಿದು ಬೀದಿಯವರೆಲ್ಲ ‘ದೇವಿ…ದೆವ್ವ..ಸವತಿ’ ಎಂದು ಗುರುತಿಸುವವರೇ; ತನ್ನಿಂದ ದೂರ ಸರಿಯುವವರೇ. ಹೃದಯದೊಳಗೆ ಅಲೆಯೆದ್ದ ತಳಮಳ.
ತನ್ನ ಮೇಲೆ ಈ ‘ದೇವಿ’ ಬರಲು ತೊಡಗಿ ಎಷ್ಟು ದಿನಗಳಾದುವೆಂದು ಕಣ್ಣು ಕಿವುಚಿಕೊಂಡು ನೆನಪು ಮಾಡಿಕೊಂಡಳು. ಆರೇಳು ತಿಂಗಳುಗಳಿಗೂ ಹೆಚ್ಚಿರಬೇಕು. ಯಾಕೋ ಈ ‘ದೇವೀ ಪಟ್ಟ’ ಜುಗುಪ್ಸೆಯನ್ನೊಸರುತ್ತ ಹಿಸುಕುತ್ತಿದೆ. ಮೊದಲಿನಂತೆ ಯಾರೂ ಮಾತಾಡಿಸರು. ಗಂಡನೊಡನೆ ವಾಕು , ಪಿಕ್ಚರ್ ಎಲ್ಲಾ ಬಂದ್. ಕಡೆಗೆ ಅವರು ತನ್ನ ಮೈ ಮುಟ್ಟಿಯೇ ಯಾವ ಕಾಲವಾಯಿತು? ಅವರೊಡನಾಟದ ರಸಕ್ಷಣಗಳು ಕನಸಿನ ಗಳಿಗೆಗಳಂತಾಗಿವೆ. ಅವರ ಬಿಸಿ ಸ್ಪರ್ಶ ನೆನಪಿಕೊಂಡ ಅವಳ ಮೈ ತುಂಬ ವಿರಹದ ಮುಳ್ಳು ನೆಟ್ಟಂತೆ, ಬಸವನಹುಳುವಿನಂತೆ ಸುತ್ತಿಕೊಂಡು, ಹಲ್ಲುಕಚ್ಚಿ ಉಸಿರು ಬಿಗಿಹಿಡಿದಳು ಶಾರದೆ. ಇಲ್ಲ..ಇಲ್ಲ.. ತಾನಿನ್ನು ಅವರ ಅಪ್ಪುಗೆ, ಚುಂಬನಗಳಿಲ್ಲದೆ ಬದುಕಿರಲಾರೆ….. ನನಗೆ ಈ ಗೌರವ, ಪೂಜೆ, ಪಟ್ಟ ಬೇಡ – ಎಂದು ಮನಸ್ಸು ಭೋರಿಟ್ಟಿತು. ಚಿಂತೆಯ ಕುಲುಮೆಗೆ ಸಂದಂತೆ ಅವಳಿಗೆ ತಾನು ಶ್ರೀಪತಿಯ ಮೊದಲಿನ ಮುದ್ದಿನ ಶಾರಿಯೇ ಆಗಬೇಕೇಂಬ ಬಯಕೆ ಕಡೆಯಿತು. ಹೌದು, ದೇವಿಯಾಗುವುದಕ್ಕಿಂತ ಮನುಷ್ಯರಾಗಿದ್ದಾಗಲೇ ಸುಖ-ಎನಿಸಿತು.
ಛೆ…ತಾನೇಕೆ ಇಂಥ ದುಷ್ಟ ಪ್ರವೃತ್ತಿಯ ಸೆಳೆತಕ್ಕೆ ಒಳಗಾದೆ?!!…ಹೀಗೆಂದು ಚಿಂತಿಸುತ್ತಾ ಅವಳು ತಾನು ದೇವಿಯಾದ ಮೊದಲ ಹಂತ-ಹಿನ್ನೆಲೆಯನ್ನು ನೆನೆಸಿಕೊಂಡಳು. ಅಬ್ಬಾ ಸ್ವಾರ್ಥವೇ.. ಎಷ್ಟೆಲ್ಲ ಆಡಿಸಿ ಕಡೆಗೆ ತನ್ನನ್ನೇ ದುಃಖದ ಗಾಣದಲ್ಲಿ ತಳ್ಳಿಬಿಟ್ಟಿತು! ತನ್ನ ಸಣ್ಣಬಯಕೆ ಈ ಆಕಾರ ತಳೆಯುವುದೆಂದು ಅವಳು ಊಹಿಸಿಯೇ ಇರಲಿಲ್ಲ. ಗಂಡ, ಅತ್ತೆ-ಮನೆಮಂದಿಯ ಗಮನ-ಆಸಕ್ತಿಯೆಲ್ಲ ತನ್ನಲ್ಲೇ ಕೇಂದ್ರೀಕೃತವಾಗಬೇಕು, ಸವತಿಯ ಒಡವೆಗಳೆಲ್ಲ ತನ್ನ ಸ್ವತ್ತಾಗಬೇಕು, ಗಂಡ ತನ್ನನ್ನು ಸವತಿಗಿಂತ ಹೆಚ್ಚು ಪ್ರೀತಿಸಬೇಕು. ಅವನಿಗೆ ತನ್ನ ಬೆಲೆಯ ಅರಿವು ಮಾಡಿಕೊಡಲು, ಅವರ ಪ್ರೀತಿಯನ್ನು ಪರೀಕ್ಷಿಸಲು, ನಿಕಷಕ್ಕೊಡ್ಡಲು ಈ ದಾರಿಯನ್ನೇಕೆ ಆಯ್ದುಕೊಂಡೇ? ಮಂತ್ರಾಲಯಕ್ಕೆ ಹೋಗೋಣವೆಂದು ಅವರನ್ನೇಕೆ ಒತ್ತಾಯಿಸಿದೆ ?. ಒಹ್.. ನಾನೇಕೆ ದೇವಿಯಾದೆ??!… ‘ಅವರಿಗೆ ದೇವಿ ಬರುತ್ತಂತೆ’, ‘ಲಕ್ಷಾಂತರ ಜನ ದರ್ಶನಕ್ಕಾಗಿ ನೆರೆಯುತ್ತಾರರಂತೆ ’, ವಿಶೇಷ ಪ್ರಾಮುಖ್ಯ ದೊರೆಯುತ್ತದಂತೆ ‘ – ಅಲ್ಲಲ್ಲಿ ಕೇಳಿದ ಸುದ್ದಿ. ಅದನ್ನು ಪ್ರಯೋಗಿಸಿ ಮೋಜುಪಡುವ ಕುತೂಹಲಕ್ಕೇಕೆ ಒಳಗಾದೆ? …ಛೆ..
ಎಲ್ಲರ ಕಣ್ಣಲ್ಲೂ ತಾನು ದೊಡ್ಡವಳಾಗಿ, ಕಡೆಗೆ ಗಂಡನೆದುರಲ್ಲಿ, ಇಲ್ಲವಾದ ನಿರ್ಮಲೆಗಿಂತ ದೊಡ್ಡವಳಾಗಬೇಕು ಎಂಬ ಹುಚ್ಚು ಹಂಬಲು ಅಲ್ಲವೇ ತನ್ನನ್ನು ಇಷ್ಟೆಲ್ಲಾ ನಾಟಕಕ್ಕೆ ದೂಡಿದ್ದು…ಪಶ್ಚಾತ್ತಾಪ ಅವಳನ್ನು ಸುಡತೊಡಗಿತು. ಹಿಂದೆ ಯಾವಾಗಲೋ ಗಂಡನಿಂದಲೇ ಸಂಗ್ರಹಿಸಿದ್ದ ಸುದ್ದಿಗಳನ್ನೇ ದೇವಿಯಾಗಿ ಹೊರಗೆಡವಿ ಅದನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಏನೋ ಯಾತನೆ..ಎಲ್ಲ ಕಡೆಯಿಂದಲೂ ಮೊನಚು ಬಾಣಗಳು ಇರಿಯುವ ಭಾಸ. ಈ ಹೊಸ ವೇಷಧಾರಿಯ ಅವತಾರದಲ್ಲಿ ತಾನು ತಾನಾಗಿಲ್ಲ..ಕಳೆದಾರು ತಿಂಗಳಿನಿಂದ ಮಂಕಾಗಿ, ಜೀವನದ ಬಹಳಷನ್ನು ಕಳೆದುಕೊಂಡೆನೆಂಬಂಥ ಅನಿಸಿಕೆ. ಈ ಅವಧಿಯಲ್ಲಿ, ನಾಟಕದ ಅಂಕದಲ್ಲಿ ತಾನು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಅಪಾರ ಎಂಬಂತೆ ಮೈ ತುಂಬ ಹಿಂಸಿಸುತ್ತಿದ್ದ ತಪ್ಪಿತಸ್ಥ ಪ್ರಜ್ಞೆಯ ಮುಳ್ಳುಗಳು ಮೊಳೆ ಮೊಳೆತು ಚುಚ್ಚುತ್ತಿದ್ದವು.
‘ಓಹ್! ನಾನಿನ್ನು ದೇವಿಯಾಗಿರಲಾರೆ….. ನಾನು ಮೊದಲಿನ ಶಾರದೆಯಾಗಬೇಕು. ನನ್ನವರ ಪ್ರೀತಿಯ ಮಡದಿಯಾಗಿದರಷ್ಟೇ ಸಾಕು, ನನಗಿನ್ನೇನು ಬೇಡ’ ಎಂದು ಹಲುಬುತ್ತ ಇಡೀ ರಾತ್ರಿಯನ್ನು ಜಾಗರಣೆ ಎಂಬಂತೆ ಬಹು ಪ್ರಯಾಸದಿಂದ ಕಳೆದಳು.
ಬೆಳಗ್ಗೆ–ಮೈ ಅಲುಗಿಸಿ ಎಬ್ಬಿಸಿದ ಅತ್ತೆಯನ್ನು ಕಾಣುತ್ತಲೇ, ಶಾರದೆ, ತಟ್ಟನೆ ಎದ್ದು ಕೂತು, ಮೈ ನಡುಗಿಸಿ, ಕೈ ಮುಗಿಯುತ್ತ, ‘ಉಂಹುಂ….. ನಾನಿನ್ನು ಇರಲ್ಲ…. ಈಗಲೇ, ಈಗಲೇ ನಾನು ಹೊರಟುಬಿಡುತ್ತೇನೆ…….ಮತ್ತೆ ನಾ ಬರಲ್ಲ… ಹೋಗ್ತೀನಿ’ ಎಂದು ನುಡಿಯುತ್ತ, ದೊಡ್ಡ ಭಾರವನ್ನು ಇಳಿಸಿಕೊಂಡವಳಂತೆ ದೀರ್ಘವಾದ ನೆಮ್ಮದಿಯ ಉಸಿರನ್ನು ಹೊರದೂಡಿದಳು.
***