Image default
Short Stories

ಯಾವುದೀ ಮಾಯೆ?!

 ‘ಅಯ್ಯೋ ಮಧ್ವೇಶ ಬೇಗ ಬಂದು ಈ ಅನಿಷ್ಟ ಮುಂಡೇದನ್ನ ಹಿಡ್ಕೊಳ್ಳೋ… ಎಲ್ಲಿ ಹೋದ್ರೂ ನನ್ನ ಹಿಂದ್ ಹಿಂದೇನೇ ಬರತ್ತಲ್ಲೋ ಹಾಳಾದ್ದು… ರಾಮ ರಾಮ ನನ್ನ ಮುಟ್ಟಿ ಮೈಲಿಗೆ ಮಾಡಿಬಿಡ್ತಲ್ಲೋ’- ಎಂದು ವೃಂದಾಬಾಯಿ ತಾರಕಸ್ಥಾಯಿಯಲ್ಲಿ ಚೀರುತ್ತ, ಜಾರುತ್ತಿದ್ದ ಕಚ್ಚೆಯ ಪರಿವೆಯೂ ಇಲ್ಲದೆ ಕೈಲಿದ್ದ ಪಂಚವಾಳ, ನೈವೇದ್ಯದ ಹರಿವಾಣದ ಸಮೇತ ಅಂಗಳದ ಉದ್ದಗಲಕ್ಕೂ ಓಡಾಡಿದರು.

ತಾಯಿಯ ಆರ್ಭಟದ ಧ್ವನಿಕೇಳಿ ಒಳಗಿದ್ದ ಮಧ್ವೇಶನೊಡನೆ ತುಳಸಿ ಕೂಡ ಗಾಬರಿಯಿಂದ ಹೊರಗೋಡಿ ಬಂದಳು. ಬಿಚ್ಚಿ ಹೋದ ಕಚ್ಚೆಯ ತುದಿಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದ ನಾಯಿಮರಿಯನ್ನು ಕೋಪದಿಂದ ಕೆಕ್ಕರಿಸಿ ನೋಡುತ್ತ ಕಚ್ಚೆಯೆಳೆದುಕೊಂಡು, ಕಾಲಿನಿಂದ ಅದನ್ನು ದೂರ ದೂಡಿದರು. ಆಕೆಯ ಕೋಪ ಮಿತಿಮೀರಿತ್ತು. ಮಗನ ಮುಖ ಕಾಣುತ್ತಲೇ- ‘ನನ್ನ ಕೈಲಿ ಇದರ ಉಪದ್ವ್ಯಾಪ ತಡೆಯಕ್ಕೆ ಸಾಧ್ಯ ಇಲ್ಲಪ್ಪ…ಮೊದ್ಲು ಈ ಹಾಳು ಶನೀನ ಮನೆಯಿಂದ ಹೊರಗೆ ತೊಲಗಿಸು’ ಎಂದು ಜೋರಾಗಿ ಕೂಗಾಡತೊಡಗಿದರು.

ಮಧ್ವೇಶ ಮುಖ ಹಿಂಡಿ- ‘ಸ್ವಲ್ಪ ನಿನ್ನ ಹಾರಾಟ ನಿಲ್ಲಿಸಮ್ಮ, ಮೆಲ್ಲಗೆ…ಅಕ್ಕಪಕ್ಕದವರು ಏನು ತಿಳಿದುಕೊಂಡಾರು? ಪಾಪ ಈ ಪುಟ್ಟಮರಿ ನಿಂಗೇನು ಮಾಡ್ತು? ಅದಕ್ಕೇನು ಗೊತ್ತು ನೀ ಮಡೀಲಿದ್ದೀಯಾಂತ…ಇನ್ನೂ ಇದು ಬಂದು ಎರಡು ದಿನ ಆಗಿಲ್ಲ… ನಿಧಾನವಾಗಿ ಎಲ್ಲ ಹೇಳಿಕೊಟ್ಟರೆ ಆಯಿತು’ ಎಂದು ಸಿಡಿಮಿಡಿಗುಟ್ಟುತ್ತ ತಾಯಿಯನ್ನು ಜೂಟಾಟ ಆಡಿಸುತ್ತಿದ್ದ ಆ ಪುಟ್ಟ ಪಮೇರಿಯನ್ ನಾಯಿಮರಿಯನ್ನು ತನ್ನ ಕಂಕುಳಲ್ಲಿ ಇರುಕಿಕೊಂಡು ಒಳನಡೆದ.

ವೃಂದಾಬಾಯಿ ದಂಗಾಗಿ ನಿಂತಿದ್ದರು! ಕ್ಷಣಕಾಲ ಅಷ್ಟೇ. ಬಾಗಿಲಲ್ಲಿ ಗಂಡನ ತಲೆ ಕಾಣುತ್ತಲೇ ಆಕೆಯ ಬಾಯಿ ಮತ್ತೆ ವಟಗುಟ್ಟಲಾರಂಭಿಸಿತು: ‘ನೀವಾದ್ರೂ ಸ್ವಲ್ಪ ಹೇಳಬಾರದೇಂದ್ರೆ…ಇದರಿಂದ ನನ್ನ ನೆಮ್ಮದೀನೇ ಕೆಟ್ಟುಹೋಗಿದೆ… ಎಲ್ಲಿಂದ ತಂದ್ನೋ ಈ ಹಾಳು ಪ್ರಾರಬ್ಧಾನ… ಎದೆ ಢವಢವ ಅನ್ತಿದೆ. ಬಿ.ಪಿ. ಏರ್ತಿದೆ. ಇದರಿಂದ ನನ್ನ ಮಡಿ-ನೇಮ ಎಲ್ಲಾ ನೆಗೆದುಬಿದ್ದ ಹಾಗೇ… ಹೂಂ…ನಂಗೊತ್ತು, ನಿಮಗೂ, ಮಕ್ಕಳ ಜೊತೆ ಸೇರ್ಕೊಂಡು ನನ್ನ ಗೋಳಾಡಿಸೋದು ಅಂದ್ರೆ ಮಹಾ ಪ್ರೀತಿ’. ವೃಂದಾಬಾಯಿ ಉದ್ವಿಗ್ನಗೊಂಡಿದ್ದರು. ಸೊರಬುಸ ಮಾಡುತ್ತ ‘ಹೂಂ ನೆಮ್ಮದಿಯಾಗಿ ಒಂದು ತುಳಸೀಪೂಜೇನೂ ಮಾಡೋ ಹಾಗಿಲ್ಲ ಈ ಮನೇಲೀ’ ಎಂದು ಗೊಣಗಾಡತೊಡಗಿದರು ಒಂದೇ ಸಮ.

`ಏ ಬಿಡೇ… ಪಾಪ ಏನೋ ಆಸೆಯಿಂದ ನಾಯಿಮರೀನ ತಂದ್ಕೊಂಡಿವೆ ಮಕ್ಳು…ಅದಕ್ಕಿಷ್ಟೊಂದು ಗಲಾಟೆಯೇನೇ ವೃಂದಾ? ಛೇ ನಿಂದ್ಯಾಕೋ ಅತಿಯಾಯ್ತು ಕಣೆ, ಪಾಪ ಆ ಮೂಕಪ್ರಾಣಿಗೆ ಏನು ಗೊತ್ತಾಗತ್ಯೇ ನಿನ್ನ ಮಡಿ ಹುಡಿ ಎಲ್ಲ…ನೀನೇನೇ ಹೇಳು…ಆ ಪುಟಾಣಿ ಮರಿ ಎಷ್ಟು ಮುದ್ದು ಮುದ್ದಾಗಿದೆ!!’

ಗಂಡನ ಮಾತಿನ ವರಸೆ ಕಂಡು ಆಕೆ ಮುಖಹುಳ್ಳಗೆ ಮಾಡಿ ಸೀದಾ ಬಚ್ಚಲು ಮನೆಯತ್ತ ದಾಪುಗಾಲಿಕ್ಕಿದರು. ಹೋಗುವಾಗ ನಡುಮನೆಯಲ್ಲಿ ಸೋಫಾದ ಮೇಲೆ ಕುಳಿತು ನಾಯಿಮರಿಯನ್ನು ಮುದ್ದಿಸುತ್ತಿದ್ದ ಮಗ-ಮಗಳನ್ನು ಕಂಡು ತುಟಿ ಕಚ್ಚಿ ‘ಕರ್ಮ… ಕರ್ಮ’ ಎಂದು ಹಣೆ ಹಣೆ ಬಡಿದುಕೊಂಡರು.

ಅದೇ ತಾನೇ ಉಟ್ಟಿದ್ದ ಮಡಿಸೀರೆಯನ್ನು ಬಿಚ್ಚಿ ನೀರಿಗದ್ದಿ, ಹಿಂಡಿ ಅಡುಗೆ ಮನೆಯೊಳಗೆ ಮೇಲೆ ಕಟ್ಟಿದ್ದ ಮಡಿಕೋಲಿನ ಮೇಲೆ ಅದನ್ನು ಹರವಿ, ಒಣಗಿದ್ದ ಬೇರೊಂದು ಮಡಿ ಸೀರೆಯನ್ನೆಳೆದುಕೊಂಡು ಮೈಗೆ ಸುತ್ತಿಕೊಂಡು ಮತ್ತೆ ಪಂಚವಾಳದೊಡನೆ ಅಂಗಳದತ್ತ ಹೆಜ್ಜೆಯ ಮೇಲೆ ಹೆಜ್ಜೆ ಪೋಣಿಸಿದರು. ನಡುಮನೆಗೆ ಬರುವಾಗಲೇ ಜೋರಾಗಿ ಕೂಗು ಹಾಕಿದರು:

“ಮಧ್ವೇಶ, ಭದ್ರವಾಗಿ ಹಿಡ್ಕೊಳ್ಳೋ ಅದನ್ನು ಸ್ವಲ್ಪ ಹೊತ್ತು…ನಾ ತುಳಸೀಪೂಜೆ ಮುಗಿಸಿಬಿಡ್ತೀನಿ’.

“ಈ ಥರ ಆತಂಕದಲ್ಲಿ ಮುಗಿಸಬಿಡಬೇಕು ಅಂತ ಮಾಡೋದನ್ನ ಪೂಜೆ ಅಂತಾರೇನೇ?’- ಹೆಂಡತಿಯ ಧಾವಂತ ಕಂಡು ಹುಸಿನಗೆ ನಕ್ಕರು ವ್ಯಾಸರಾಯರು.

ಆದರೆ, ತಾಯಿಯ ಸಿಡಿಮಿಡಿ ಕಂಡು, ಸಂತೋಷ ಕಿಕ್ಕಿರಿದಿದ್ದ ಮಧ್ವೇಶನ ಅರಳು ಮೊಗ ಒಮ್ಮೆಲೆ ಮುದುಡಿತು. ಸಾವಿರ ರೂಪಾಯಿ ಕೊಟ್ಟರೂ ಸಿಗದಂಥ ಮುದ್ದಾದ ಪಮೇರಿಯನ್ ಪಪ್ಪಿ ಅನಾಯಾಸವಾಗಿ ಗೆಳೆಯನಿಂದ ಬಿಟ್ಟಿ ದೊರೆತಾಗ ಅವನಿಗೆ ಸ್ವರ್ಗಕ್ಕೆರಡೇ ಗೇಣು! ನಾಯಿ ಸಾಕಬೇಕೆನ್ನುವ ಅವನ ಬಹುದಿನದ ಕನಸು ಕೈಗೂಡಿತ್ತು! ನೊರೆ ಬಿಳುಪಿನ ನಾಲ್ಕೈದು ಮರಿಗಳಲ್ಲಿ ಅವನು ತನಗಿಷ್ಟವಾದ ಒಂದನ್ನು ಆರಿಸಿ ಎದೆಗವುಚಿಕೊಂಡು ಹೊರಟಾಗ ಅವನೆದೆಯ ತುಂಬ ಸಂತಸ ಪಸರಿಸಿತ್ತು. ಆದರೆ ಮನೆ ಸಮೀಪಿಸುತ್ತಿದ್ದಂತೆ ಸಂತಸದ ಜಾಗದಲ್ಲಿ ಭಯ-ಆತಂಕಗಳು ಮೊಳೆಯಲಾರಂಭಿಸಿದ್ದವು. ಅಳುಕುತ್ತಲೇ ಅವನು ಮೆಲ್ಲನೆ ಗೇಟು ತೆರೆದಿದ್ದ. ಮೊದಲು ಅವನಿಗೆ ಎದುರಾದವಳು ತುಳಸಿ. ಅವಳ ಕಣ್ಣಲ್ಲಿ ಹೊಳಪಿನ ಗೊಂಚಲು. ಮುಖ ಸಂತಸದ ಊಟೆ !! ಪಪ್ಪಿಯ ಕರ್ರಗೆ ಮಿಂಚುವ ಗೋಲಿ ಕಣ್ಣುಗಳನ್ನು ನೋಡುತ್ತ ‘ಓಹ್… ಎಷ್ಟು ಕ್ಯೂಟಾಗಿದೆ ನಾಯಿಮರಿ’ ಎಂದು ಆನಂದದ ಭರದಿಂದ ಅದನ್ನೆತ್ತಿ ಎದೆಗವಚಿಕೊಂಡಳು.

ಆ ಮನೆಯ ಯಜಮಾನ ವ್ಯಾಸರಾಯರು, ವೃಂದಾಬಾಯಿಗಿಂತ ತುಂಬಾ ಮೆದು. ತಮ್ಮ ಪೂಜೆ-ಪುನಸ್ಕಾರಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಹೋಗುವಂಥ ಸಾಧುಪ್ರಾಣಿ. ಹೆಂಡತಿಯ ಅಡಾವುಡಿಯ ಸ್ವಭಾವ ಬಲ್ಲ ಅವರು, ಮಗ ಮನೆಗೆ ನಾಯಿಮರಿ ತಂದಿದ್ದನ್ನು ಕಾಣುತ್ತಲೇ ‘ಏನೋ ಗ್ರಾಚಾರ ಕಾದಿದೆ ಇವನಿಗೆ’ ಎಂದುಕೊಂಡರು ಮನದಲ್ಲೇ. ಆ ಗಳಿಗೆ ಬಂದೇಬಿಟ್ಟಿತು. ಮಗಳ ಅಪ್ಪುಗೆಯಲ್ಲಿದ್ದ ನಾಯಿಮರಿಯನ್ನು ಕಾಣುತ್ತಲೇ ವೃಂದಾಬಾಯಿ ಒಮ್ಮೆಲೆ ಹೌಹಾರಿದರು!

‘ಏನೋ ಇದು?!… ಈ ಅಧ್ವಾನಾನ ಎಲ್ಲಿಂದ ಹಿಡ್ಕೊಂಡು ಬಂದ್ರೋ-ಶುದ್ಧ ಹೊಲಸು-ಮೊದ್ಲು ಇದನ್ನ ಆಚೆಗಟ್ಟಿ…ಏಕಾಸೋಕಾ ಮಾಡಿ ಮನೆಯೆಲ್ಲ ಒಂದು ಮಾಡಿಬಿಡುತ್ತೆ… ಛೀ ಛೀ ಛೀ…’ ಎಂದು ಮುಖಸಿಂಡರಿಸಿದರು.

‘ಇಂಥ ಮುದ್ದಾದ ಮರೀನಾ ಅಧ್ವಾನ ಅಂತೀಯಲ್ಲಮ್ಮ!?… ಆಚೆಗಟ್ಟಕ್ಕಲ್ಲ ನಾವಿದನ್ನ ತಂದಿರೋದು, ಇದು ಇನ್ಮೇಲೆ ಇಲ್ಲೇ ಇರತ್ತೆ’

ಮಧ್ವೇಶ ನಾಯಿಮರಿಯನ್ನು ಬಿಗಿಯಾಗಿ ತನ್ನೆದೆಗೆ ಅವುಚಿಕೊಂಡ.

‘ಹೊಲಸು ಅಂತ ಯಾಕನ್ತೀಯಮ್ಮ?… ನೋಡು ಎಷ್ಟು ಕ್ಲೀನಾಗಿದೆ ಇದರ ನೊರೆಬಿಳುಪಿನ ದಟ್ಟಗೂದಲು… ಇಂಥ ಮುದ್ದುಮರೀನ ಆಚೆಗೆ ತಳ್ಳು ಅನ್ತೀಯಲ್ಲ… ನಿನಗೆ ಮನಸ್ಸಾದರೂ ಹೇಗೆ ಬರುತ್ತಮ್ಮ?’__

ತುಳಸಿ ಕೋಪದಿಂದ ಕೇಳಿದರೆ, ಹದಿನೆಂಟು ದಾಟಿದ ಮಗ, ಹಟದಿಂದ ಮುಖ ತಿರುವಿ ಧಡ ಧಡ ಷೆಡ್ಡಿನತ್ತ ಮೌನವಾಗಿ ನಡೆದಾಗ ಆಕೆ ಅವಾಕ್ಕಾಗಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಮಗಳೂ ಮುಖ ಊದಿಸಿಕೊಂಡು ಷೆಡ್ಡಿನತ್ತ ಅಣ್ಣನನ್ನು ಹಿಂಬಾಲಿಸಿದಾಗ, ತಮ್ಮ ಮಾತಿಗೆ ಕಿಂಚಿತ್ತೂ ಬೆಲೆಗೊಡದ ಮಕ್ಕಳ ಎದೆಗಾರಿಕೆ ಕಂಡು ಆಕೆಯ ಮೊಗ ಕೆಂಪಾಗಿ ಧುಮಗುಡಹತ್ತಿತ್ತು.

‘ನಿನಗಿಷ್ಟವಿಲ್ಲದಿದ್ರೆ, ನೀನದನ್ನ ಮುಟ್ಟಬೇಡ ಬಿಡು’- ಗಂಡ ಆಕೆಗೆ ಅಪ್ಪಣೆ ಕೊಡಿಸಿದ್ದರು.

ತಂದೆ ತಮಗೆ ಬೆಂಬಲವಾಗಿ ನಿಂತದ್ದನ್ನು ಕಂಡು ಮಕ್ಕಳಿಬ್ಬರ ಹೋದ ಉಸಿರು ಮತ್ತೆ ಬಂದಂತಾಗಿ ಹಾಲಿನ ಬಟ್ಟಲನ್ನು ಹಿತ್ತಲಿಗೆ ತೆಗೆದುಕೊಂಡು ಬರಲು ತಂಗಿಗೆ ಮಧ್ವೇಶ ಧೈರ್ಯವಾಗಿಯೇ ಹೇಳಿದ. ತುಳಸಿ ಗೆದ್ದ ಮುಖಭಾವದಿಂದ ತುಟಿ ಹಿಗ್ಗಿಸಿ ಅಡುಗೆಮನೆ ಕಡೆ ಓಡಿದಳು.

ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕುವಂತೆ ವೃಂದಾಬಾಯಿ ಆ ದಿನವಿಡೀ ಒಳಗೇಮಣಮಣಿಸುತ್ತ, ನಾಯಿಮರಿ ಮನೆಯೊಳಗೆ ಬಂದರೆ ತಪ್ಪು. ಹೊರಗೆ ಕುಣಿದಾಡಿದರೆ ತಪ್ಪು ಎನ್ನುವಂತೆ ಒಂದೇ ಸಮನೆ ಕೂಗಾಡುತ್ತ- ‘ನನ್ನ ಮಾತಿಗೇನು ಬೆಲೆ ಇದೆ ಈ ಮನೇಲಿ-ಎಲ್ಲರಿಗೂ ಅವರಾಡಿದ್ದೇ ಆಟ’ ಎಂದು ಅಸಹನೆಯ ಕಿಡಿ ಕಾರಿದರು.

ವ್ಯಾಸರಾಯರು ಉಭಾಶುಭ ಎನ್ನಲಿಲ್ಲ. ಮತ್ತೆ ಆಕೆಯ ಪಿತ್ತ ಕೆರಳಿತು.

‘ಮನೆಯ ಹಿರೇರು ಅನ್ನಿಸ್ಕೊಂಡ ನಿಮಗಾದ್ರೂ ಕೊಂಚ ವಿವೇಕ ಬೇಡವೇ? ಮಕ್ಕಳು ಕುಣಿದ ಹಾಗೇ ಕುಣೀತೀರಲ್ಲ?’- ಎಂದು ಗಂಡನತ್ತ ಕೆಕ್ಕರಿಕೆಯ ನೋಟ ಬೀರಿ,- ‘ಸರಿಯಾಗಿದ್ದೀರಾ ಅಣ್ಣ-ತಂಗಿ ಇಬ್ರೂ… ಒಂದಕ್ಕಾದರೂ ಸರಿಯಾದ ಬುದ್ಧಿ ಇಲ್ಲ… ಈಗಲೇ ಹೇಳಿಬಿಟ್ಟಿದ್ದೀನಿ ನೋಡ್ರಪ್ಪ-ಅದೇನಾದ್ರೂ ಅಡುಗೆಮನೆ, ದೇವರಮನೆ ಒಳಗೆ ಬಂತೋ ನಾನಂತೂ ಸುಮ್ನಿರಲ್ಲ’ ಎಂದು ಜೋರಾಗಿ ಅಬ್ಬರಿಸಿದರು.

ತಾಯಿಯ ಕಂಡೀಷನ್ ಕೇಳಿ ಮಧ್ವೇಶನ ಹೃದಯ ಹಗುರಾಯಿತು. ‘ನಿನ್ನ ಜ್ಯುರಿಸ್‍ಡಿಕ್ಷನ್‍ಗೆ ಬರದ ಹಾಗೆ ನಾನದನ್ನ ನೊಡ್ಕೋತೀನಿ ಬಿಡಮ್ಮ?’ ಎಂದು ಆಶ್ವಾಸನೆ ಇತ್ತ.

ಅದರಂತೆ ಮಧ್ವೇಶ ತಾನಾಡಿದ ಮಾತನ್ನು ತಪ್ಪದೆ ಉಳಿಸಿಕೊಂಡ. ತನ್ನ ಪ್ರೀತಿಯ ಮಂಜುವಿಗೆ ಚೆನ್ನಾಗಿ ತರಬೇತಿ ನೀಡಿದ. ಮಂಜುವಿಗೆ ತನ್ನ ರಾಜ್ಯಭಾರದ ಎಲ್ಲೆ ಎಲ್ಲಿಯವರೆಗೆ ಎಂಬುದು ಚೆನ್ನಾಗಿ ಮನವರಿಕೆಯಾಗಿತ್ತು. ಅದು ಅಪ್ಪಿತಪ್ಪಿಯೂ ಅಡುಗೆಮನೆ-ದೇವರ ಮನೆಯೊಳಗೆ ಅಡಿಯಿರಿಸುತ್ತಿರಲಿಲ್ಲ. ವೃಂದಾಬಾಯಿ ಮಡಿಯಲ್ಲಿ ಅಡುಗೆ ಮಾಡುತ್ತಿದ್ದರೆ ಮಂಜು ಅಡುಗೆಮನೆಯ ಬಾಗಿಲಲ್ಲಿ ‘ಮುಖ್ಯಪ್ರಾಣ’ನಂತೆ ಹಿಂಗಾಲ ಮೇಲೆ ತೆಪ್ಪಗೆ ಕುಳಿತಿರುತ್ತಿತ್ತು. ಆಕೆ ಪೂಜೆ ಮಾಡುವಾಗ ಅದು ಪಿಳಿ ಪಿಳಿ ಕಣ್ಣು ಪಿಳುಕಿಸುತ್ತ ಗಂಟೆಗಟ್ಟಲೆ ಸಮಾಧಾನವಾಗಿ ಅಲ್ಲೇ ಕುಳಿತು ವೀಕ್ಷಿಸುತ್ತಿತ್ತು. ತುಳಸೀಪೂಜೆ ಹೊತ್ತಿನಲ್ಲಿ ದೂರದ ಪಾತಿಯೊಳಗೆ ಹುದುಗಿಕೊಳ್ಳುತ್ತಿತ್ತು.

ಪೂಜೆ ಮುಗಿಸಿ ಒಳಗೆ ನಡೆದ ಆಕೆ ಮಂಜುವಿನ ಶಿಸ್ತು-ವಿಧೇಯ ನಡವಳಿಕೆ ಕಂಡು ಒಳಗೊಳಗೇ ಖುಷಿಗೊಂಡರೂ, ಮುಖದಲ್ಲಿ ಮುನಿಸು ಬಿಚ್ಚದೆ ‘ಏಯ್ ಅಲ್ಲೇ ನಿಂತ್ಕೋ’ ಎಂದು ಗದರುತ್ತಿದ್ದರು. ಮಂಜು ಆಕೆಯ ಧ್ವನಿಗೆ ಮಂತ್ರಮುಗ್ಧಗೊಂಡಂತೆ, ವಿಧೇಯ ವಿದ್ಯಾರ್ಥಿಯಂತೆ ಮುಖವನ್ನು ವಿನೀತವನ್ನಾಗಿಸಿಕೊಂಡು ಅಲ್ಲೇ ಪ್ರತಿಮೆಯಾಗುತ್ತಿತ್ತು. ಅಷ್ಟರಮಟ್ಟಿಗೆ ಮಂಜು ಆಕೆಯ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡಿತ್ತು.

ವೃಂದಾಬಾಯಿ, ತಮ್ಮ ಮಾತನ್ನು ಮೀರಿದ ಮಕ್ಕಳ ಮೇಲಿನ ಕೋಪವನ್ನು ಕೆಲವೊಮ್ಮೆ ಮಂಜುವಿನ ಮೇಲೆ ತೀರಿಸಿಕೊಳ್ಳುತ್ತಿದ್ದರು. ನಿತ್ಯ ಒಂದು ಹಗರಣ ತಪ್ಪಿದ್ದಲ್ಲ. ನೆಪ ಸಿಕ್ಕಾಗಲೆಲ್ಲ ಆಕೆ ತಮ್ಮ ಅಸಮಾಧಾನವನ್ನು ಹೊರ ಕಕ್ಕುತ್ತಿದ್ದರು.

ವಾರ-ತಿಂಗಳು ಕಳೆಯುವಷ್ಟರಲ್ಲಿ ಮಂಜು ಒಂದು ಶಿಸ್ತಿನ ಚೌಕಟ್ಟಿಗೆ ಒಳಪಟ್ಟಿದ್ದರಿಂದ ವೃಂದಾಬಾಯಿಯ ಅಸಹನೆ, ಸಿಡುಕು ಮಾಯವಾಗುತ್ತಾ ಬಂದಿತ್ತು. ತಮಗೆ ಗೌರವ ಸೂಚಿಸುವಂತೆ ತಮ್ಮಿಂದ  ಒಂದು ಅಂತರದಲ್ಲಿ ಮುದುಡಿ ನಿಲ್ಲುತ್ತಿದ್ದ ಮಂಜುವನ್ನು ಕಂಡಾಗ ಆಕೆಗೆ ಒಂದು ಬಗೆಯ ನಿರಾಳ…..ನೆಮ್ಮದಿ.

ಬೆಳಗ್ಗೆ ಹತ್ತಕ್ಕೆಲ್ಲ ರಾಯರು ಕಛೇರಿಗೆ, ಮಧ್ವೇಶ-ತುಳಸಿ ಕಾಲೇಜಿಗೆ ಹೊರಟರೆಂದರೆ ಇಡೀ ಮನೆಗೆಲ್ಲ ವೃಂದಾಬಾಯಿ-ಮಂಜು ಇಬ್ಬರೇ, ಮಕ್ಕಳು ಬರುವವರೆಗೆ ಮಂಜುವೇ ಆಕೆಗೆ ಬೆಂಬಿಡದ ಒಡನಾಡಿ. ಬೆಳಗ್ಗೆ ಮಧ್ವೇಶ ಮಂಜುವಿಗೆ, ಬ್ರೆಡ್ಡು-ಬಿಸ್ಕತ್ತು, ಹಾಲು ಹಾಕಿ ಹೋದನೆಂದರೆ ಮಧ್ಯಾಹ್ನ ಅದಕ್ಕೆ ಉಣಬಡಿಸುವ ಸರದಿ ವೃಂದಾಬಾಯಿಯದು.

“ಹೂಂ ಇದರ ಶುಶ್ರೂಷೆ ಬೇರೆ ಒಂದು ಬಾಕಿ ಇತ್ತು ನನಗೆ..” ಎಂದು ಗೊಣಗುತ್ತಲೇ ಆಕೆ ಅನ್ನದ ತಪ್ಪಲೆ ಹಿಡಿದು ಹಿತ್ತಲಿಗೆ ಧಡಧಡ ನಡೆದರೆ ಮಂಜು ಚಂಗನೆ ನೆಗೆಯುತ್ತ ಅವರನ್ನು ಹಿಂಬಾಲಿಸುತ್ತಿತ್ತು. ಆಕೆಯ ಗೊಣಗಾಟ ಅದಕ್ಕೆ ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ಮಂಜು ಮಾತ್ರ ಒಂದಿಷ್ಟೂ, ಬಿಂಕ ಬಿಗುಮಾನವಿಲ್ಲದೆ ಅನ್ನದ ತಟ್ಟೆಗೆ ಮೂತಿಯಿಡುತ್ತಿತ್ತು.

ಮಧ್ಯಾಹ್ನ ಊಟ ಮುಗಿಸಿ ಕೊಂಚ ಹೊತ್ತು ನೆಲದ ಮೇಲೆ ಅಡ್ಡಾಗುವ ಅಭ್ಯಾಸ ವೃಂದಾಬಾಯಿಗೆ. ಮಧ್ಯಾಹ್ನಗಳಲ್ಲಿ ಈ ಹಿಂದೆ ಎಂದೂ ಆಕೆ ನಿರಾಳವಾಗಿ ಕಣ್ಣು ಮುಚ್ಚಿದ್ದೇ ಇಲ್ಲ. ಮನೆಯ ಪಕ್ಕಕ್ಕೆ ತಂತಿಯ ಮೇಲೆ ಹರವಿದ್ದ ದುಬಾರಿ ಬೆಲೆಯ ಬಟ್ಟೆಗಳದೇ ಚಿಂತೆ. ನಿದ್ದೆ ಹತ್ತಿದಾಗ ಯಾವ ಮಾಯದಲ್ಲಿ ಕಳ್ಳರು ಬಂದು ಅದನ್ನು ಹಾರಿಸಿಕೊಂಡು ಹೋಗುತ್ತಿದ್ದರೋ, ಗೊತ್ತೇ ಆಗುತ್ತಿರಲಿಲ್ಲ. ಕಣ್ಣೆಳೆಯುತ್ತಿದ್ದರೂ ಜ್ಞಾಪಕವಾಗಿ ಒಣಹಾಕಿದ್ದ ಬಟ್ಟೆಗಳನ್ನು ಒಳಗೆ ತಂದುಬಿಡಬೇಕಿತ್ತು. ಮಧ್ಯಾಹ್ನದ ಹೊತ್ತೇ ಚಿಲ್ಲರೆ ಕಳ್ಳರ ಹಾವಳಿ. ಮನೆಯ ಹಿತ್ತಲಿನ ಸಣ್ಣ ಸಣ್ಣ ಸಾಮಾನುಗಳು ಮಾಯವಾಗುವ ಸಂಗತಿ ಆಕೆಗೆ ಅಪರೂಪವೇನಲ್ಲ. ಗಳಿಗೆ ಗಳಿಗೆಗೂ ಗೇಟು ತೆರೆಯುವ ಸೇಲ್ಸ್‍ನವರ ಕಾಟ ಬೇರೆ. ಸುಮ್ಮನೆ ಬಾಯಿ ನೋಯಿಸಿಕೊಳ್ಳುವ ದಂಧೆ. ಹೋಗುವಾಗ ಗೇಟು ಹಾಕಿಕೊಂಡು ಹೋಗದ ಅವರನ್ನು ಶಪಿಸುತ್ತ, ಅದೇ ತಾನೇ ಚಿಗುರುತ್ತಿದ್ದ ಮಲ್ಲಿಗೆ ಬಳ್ಳಿಯನ್ನು ದನ ಎಲ್ಲಿ ನುಗ್ಗಿ ಮೇಯ್ದು ಬಿಡುವುದೋ ಎನ್ನುವ ಆತಂಕ.

‘ಹೂಂ ನೀವೆಲ್ಲ ಹಾಯಂತ ದಿನವಿಡೀ ಮನೆಯಿಂದ ಹಾರಿ ಹೋಗಿರ್ತೀರಾ… ನನಗ್ತಾನೆ ನಿಮಿಷ ನಿಮಿಷಕ್ಕೂ ಬಾಗಿಲು ತಟ್ಟೋರನ್ನೆಲ್ಲ ಸಂಭಾಳಿಸೋ ಗೋಳು… ನೆಟ್ಟಗೈದು ನಿಮಿಷ ಕಣ್ಣು ಮುಚ್ಚುವ ಯೋಗವೇ ಇಲ್ಲ’ ಎಂದು ಸದಾ ಗಂಡ-ಮಕ್ಕಳ ಮುಂದೆ ದೂರುತ್ತಿದ್ದ, ವೃಂದಾಬಾಯಿಗೆ, ಮಂಜು ಈ ಮನೆಗೆ ಆಗಮಿಸಿದಾಗಿನಿಂದ ನಿರಾಳ. ಸಮೃದ್ಧ ನಿದ್ದೆ. ಮಂಜು ಆಕೆಯ ಸರ್ವ ಸಮಸ್ಯೆಗಳನ್ನು ಸುಲಭದಲ್ಲಿ ಕರಗಿಸಿ ಬಿಟ್ಟಿದ್ದ. ಎಲೆ ಕದಲಿದರೂ ಮೈಯೆಲ್ಲ ಕಣ್ಣಾಗಿರುತ್ತಿದ್ದ ಮಂಜು ಒಬ್ಬರನ್ನೂ ಗೇಟಿನೊಳಗೆ ಬಿಡುತ್ತಿರಲಿಲ್ಲ. ಸದಾ ಮನೆಯ ಸುತ್ತ ಠಳಾಯಿಸುತ್ತಿದ್ದ ಮಂಜು ನಿಜಕ್ಕೂ ವೃಂದಾಬಾಯಿಯ ಪಾಲಿಗೆ ಸರ್ಪಗಾವಲಾಗಿದ್ದ.

ಆಕೆಯ ಕೈ ಅಡುಗೆ ತಿಂದು ಮಂಜು ದಿನೇ ದಿನೇ ದಷ್ಟಪುಷ್ಟವಾಗಿ ಬೆಳೆಯುತ್ತಿತ್ತು. ಉಲ್ಲನ್ ಉಂಡೆಯಂತಿದ್ದ ಮೃದು ತುಪ್ಪಳದ ಮಂಜುವನ್ನು ಮಧ್ವೇಶ-ತುಳಸಿ ಮುದ್ದಾಡಿದ್ದೇ ಮುದ್ದಾಡಿದ್ದು. ರಾಯರೂ ಅದಕ್ಕೆ ಹೊರತಾಗಿರಲಿಲ್ಲ. ನ್ಯೂಸ್ ಪೇಪರ್ ಓದುತ್ತಿದ್ದವರ ಮಡಿಲೊಳಗೆ ಬುಡಕ್ಕನೆ ಹೊರಳುತ್ತಿದ್ದ ಮಂಜುವಿನ ಮೈಯನ್ನು ಆತ ತಮ್ಮರಿವಿಲ್ಲದೆ ಮೆಲ್ಲನೆ ನೇವರಿಸುತ್ತಿದ್ದರು. ಮಂಜುವಿಲ್ಲದೆ ಆ ತಂದೆ ಮಕ್ಕಳಿಗೆ ಹಗಲಿಲ್ಲ-ಇರುಳಿಲ್ಲ.

ಮಂಜು ಆ ಮನೆಗೆ ಕಾಲಿಟ್ಟು ವರ್ಷಾವರೆ ಕಳೆದದ್ದೇ ಯಾರಿಗೂ ಗೊತ್ತಾಗಲಿಲ್ಲ. ಆ ಪುಟ್ಟಸಂಸಾರದಲ್ಲಿ ಅದೂ ಒಬ್ಬ ಸದಸ್ಯನಾಗಿ ಬೆರೆತು ಹೋಗಿದ್ದರೂ ವೃಂದಾಬಾಯಿಯ ವರ್ತನೆ ಮಾತ್ರ ಎಂದಿನಂತೆಯೇ. ಆರಕ್ಕೆ ಹೆಚ್ಚಿಲ್ಲ-ಮೂರಕ್ಕೆ ಕಡಿಮೆಯಿಲ್ಲ.

ಮನೆಯವರೆಲ್ಲರ ಮುದ್ದಿನ ಕಣ್ಮಣಿ ಮಂಜು ಎಂದಿನಂತೆ ಆ ಸಂಜೆ ಮಧ್ವೇಶನ ದನಿಕೇಳಿ ಬಾಗಿಲೆಡೆ ಚಿಮ್ಮಿಕೊಂಡು ಓಡಿ ಬರಲಿಲ್ಲ. ಅವನಿಗೆ ಅಚ್ಚರಿಯಾದರೂ ಹುಸಿಮುನಿಸು ತೋರುತ್ತ, ಕೈಲ್ಲಿದ್ದ ಪುಸ್ತಕಗಳನ್ನು ಮೇಜಿನ ಮೇಲೆಸೆದು, ಸೋಫದ ಮೇಲೆ ಮುದುಡಿ ಮಲಗಿದ್ದ ಮಂಜುವನ್ನು ಎತ್ತಿಕೊಂಡು ಅದರ ತಲೆಯ ಮೇಲೊಂದು ಮಟುಕಿ- ‘ಹೂಂ ಬರ್ತಾ ಬರ್ತಾ ನಿಂಗೆ ಪ್ರೀತಿ ಜಾಸ್ತಿಯಾಗಿ ಜಂಭ ಬರ್ತಿದೆ ಅಂತ ಕಾಣ್ಸತ್ತೆ’ ಎಂದು ಅವರ ತಲೆ ನೇವರಿಸಿದ್ದ. ಆದರೆ ಮಂಜು ಎಂದಿನ ಲವಲವಿಕೆ ತೋರದೆ ಮಂಕಾಗಿ ಅವನನ್ನು ಪಿಳಿಪಿಳಿ ನೋಡಿತು.

‘ಹ್ಞಾ ಏನಾಯ್ತೋ ನಿಂಗೆ? ಬೆಳಗ್ಗಿಂದ ಒಬ್ನೇ ಮನೇಲಿ ಅಂತ ಬೇಜಾರಾ ಪುಟ್ಟಿ?… ಅಥ್ವಾ ಅಮ್ಮ ಏನಾದ್ರೂ ಬಯ್ದಳಾ?’ ಎಂಬ ತುಳಸಿಯ ಪ್ರೀತಿಯ ನೇವರಿಕೆಗೂ ಮಂಜು ಪ್ರತಿಕ್ರಿಯಿಸಲಿಲ್ಲ.

ಎಂದೂ ಮಂಜು ಹೀಗೆ ನಿರ್ಭಾವದಿಂದಿದ್ದವನಲ್ಲ. ಅಣ್ಣ-ತಂಗಿಯರಿಬ್ಬರಿಗೂ ಆಶ್ಚರ್ಯ! ಇದೇಕಿಂದು ಮಂಜು ಹೀಗೆ ಬಿಂಕದಿಂದಿದೆಯಲ್ಲ ಅಂತ?!

“ಅಮ್ಮಾ… ಏನಾಯ್ತಮ್ಮ ಮಂಜೂಗೆ ಇದ್ದಕ್ಕಿದ್ದ ಹಾಗೆ? ನೀನೇನಾದ್ರೂ ಗದರಿಸಿದೆಯಾ?”

`ಇಲ್ಲಪ್ಪ, ನಾನದರ ತಂಟೆಗೇ ಹೋಗಿಲ್ಲ.. ಮಧ್ಹಾಹ್ನದಿಂದ್ಲೂ ಯಾಕೋ ಹೀಗೆ ತಪ್ಪಗೇ ಇದೆ… ಊಟಾನೂ ಸರ್ಯಾಗಿ ಮಾಡಿಲ್ಲ…! ತಾಯಿಯ ನುಡಿ ಕೇಳಿ ಮಧ್ವೇಶ ಆತಂಕಗೊಂಡ.

 “ಎಲ್ಲೋ ಸ್ವಲ್ಪ ಆಲಸಿಕೆಯಾಗಿರಬೇಕು… ನಾಳೆ ಬೆಳಿಗ್ಗೆ ಹೊತ್ತಿಗೆ ಎಲ್ಲ ಸರಿಹೋಗತ್ತೆ ಬಿಡೋ’- ತಂದೆ ಸಮಾಧಾನ ಹೇಳಿದರು.

“ಇಲ್ಲಣ್ಣ… ಮಂಜು ಮೈ ಯಾಕೋ ಸ್ವಲ್ಪ ಬೆಚ್ಚಗಿದ್ದ ಹಾಗಿದೆ”

“ತುಳಸಿಯ ಮೊಗದಲ್ಲಿ ಕಳವಳ ತುಂಬಿತ್ತು. ಆದರೆ ರಾಯರು ಅಂದಂತೆ ಮಂಜು ಬೆಳಿಗ್ಗೆ ಹೊತ್ತಿಗೆ ಸರಿಹೋಗಲಿಲ್ಲ. ತಿಂದದ್ದೆಲ್ಲ ವಾಂತಿ ಮಾಡುತ್ತ ಸೊಪ್ಪಾಗಿ ಒಂದು ಮೂಲೆಯಲ್ಲಿ ಬಿದ್ದುಕೊಂಡಿತ್ತು. ಮಧ್ವೇಶ ಅಂದು ಕಾಲೇಜಿಗೆ ಚಕ್ಕರ್ ಹಾಕಿ, ಗಾಬರಿಯಿಂದ ತತ್‍ಕ್ಷಣ ಅದನ್ನು ವೆಟರ್ನರಿ ಡಾಕ್ಟರರ ಬಳಿ ಕೊಂಡೊಯ್ದ.

ಮಂಜುವನ್ನು ವಿವರವಾಗಿ ಪರೀಕ್ಷಿಸಿದ ಡಾಕ್ಟರರ ಹುಬ್ಬು ಮೇಲೇರಿತು.

“ನಮ್ಮಂಜೂಗೆ ಏನಾಗಿದೆ ಡಾಕ್ಟರ್?”- ಮಧ್ವೇಶ್ವನ ಕಂಠ ಗದ್ಗದಿತವಾಗಿತ್ತು.

“ನನ್ನ ಅಂದಾಜಿನ ಪ್ರಕಾರ ಇದರ ದೇಹದಲ್ಲಿ ವಿಷದ ಅಂಶ ಸೇರಿದೆ ಅನ್ನಿಸತ್ತೆ”

“ವಿಷಾ!?… ವಿಷ ಯಾರು ಹಾಕ್ತಾರೆ ಡಾಕ್ಟರ್ ಇಂಥ ಮೂಕಪ್ರಾಣಿಗೆ?”

“ಯಾರೂ ಹಾಕಿರಬೇಕಿಲ್ಲ… ನಾನು ಆಬ್ಸರ್ವ್ ಮಾಡಿದ ಹಾಗೆ ನಾಯಿಗಳು ಹೊರಗೆಲ್ಲೋ ಅಡ್ಡಾಡುವಾಗ ಪೊದೆ, ಗಿಡಗಳನ್ನೆಲ್ಲ ಮೂಸಿ ನೋಡ್ತಾ ಬರೋದು ಅಭ್ಯಾಸ… ಒಮ್ಮೊಮ್ಮೆ ಪೊದೆಗಳ ಎಲೆಗಳ ಮೇಲೆ ಹಾವು ಉಗುಳಿ ಹೋಗಿರಬಹುದಾದ ವಿಷಾನ ನಾಯಿಗಳು ನೆಕ್ಕಿರುವ ಸಾಧ್ಯತೆಗಳು ಇರುತ್ವೇ… ಹೀಗೆ ಪಾಯ್ಸನ್ ಆಗಿರ್ಬೋದು ಅಂತ ನನ್ನ ಊಹೆ…”

ವೈದ್ಯರ ಊಹೆ ಕೇಳಿ ಮಧ್ವೇಶನ ಎದೆ ಧಸಕ್ಕೆಂದಿತು. ರಾಯರೂ ಅವನ ಜೊತೆಗಿದ್ದರು. ವೈದ್ಯರು ಕೂಡಲೇ ಅದರ ಹೊಟ್ಟೆ ತೊಳೆದು ಡ್ರಿಪ್ಸ್ ಹಾಕಿದರು. ಇಂಜೆಕ್ಷನ್ನೂ ಕೊಟ್ಟರು. ಆದರೆ ಮಂಜು ಮಾತ್ರ ಎರಡು ಮೂರು ಗಂಟೆಗಳು ಕಳೆದರೂ ಚೇತರಿಸಿಕೊಳ್ಳಲಿಲ್ಲ.

“ನೀವಿದನ್ನ ಈಗ ಮನೆಗೆ ಕರ್ಕೊಂಡು ಹೋಗಿ. ಈ ಔಷಧಿ ಕೊಡಿ’- ಎಂದಾಗ ಎಲ್ಲರೆದೆಗಳೂ ಭಾರವಾಗಿದ್ದವು.

ಗೇಟು ಕಿರ್ರೆನ್ನುತ್ತಲೇ ವೃಂದಾಬಾಯಿ ಬಾಗಿಲಿಗೋಡಿ ಬಂದರು. ಮೌನವಾಗಿ ಮಂಜುವನ್ನು ದಿಟ್ಟಿಸಿದರಾದರೂ, ಏನೂ ಪ್ರಶ್ನಿಸದೆ ಮೌನವಾಗಿ ಒಳ ಸರಿದರು.

ನಡುಮನೆಯಲ್ಲಿ ತಂದೆ ಮಕ್ಕಳು ಗರಬಡಿದವರಂತೆ ಮೂಕರಾಗಿ ಮಂಜುವನ್ನು ದಿಟ್ಟಿಸಿ ನೋಡುತ್ತ ಕುಳಿತಿದ್ದರು. ತುಳಸಿಯ ತೊಡೆಯ ಮೇಲೆ ಕಣ್ಮುಚ್ಚಿ ಮಲಗಿದ್ದ ಮಂಜುವಿನ ಉಸಿರಾಟ ತೀವ್ರವಾಗಿತ್ತು.

ಮುಸ್ಸಂಜೆ ಹೊತ್ತಾದರೂ ಯಾರೂ ಕುಳಿತಲ್ಲಿಂದ ಕದಲಿರಲಿಲ್ಲ. ರಾಯರೂ ಆ ದಿನ ಕಛೇರಿಗೆ ಹೋಗಿರಲಿಲ್ಲ. ಮನೆಯೊಳಗೆ ಉಸಿರು ಅಮುಕುವ ಮೌನ. ನಿಮಿಷ-ಗಂಟೆಗಳು ಯುಗಗಳಂತೆ ಭಾಸವಾಗತೊಡಗಿತು.

ರಾತ್ರಿ ಯಾರೂ ಊಟಕ್ಕೆ ಮೇಲೇಳದಾಗ, ವೃಂದಾಬಾಯಿ ಎಂದಿನಂತೆ ವಟಗುಟ್ಟದೆ, ತಾವೂ ಊಟ ಮಾಡದೆ, ಮಾಡಿದ ಅಡುಗೆಯನ್ನು ಹಾಗೇ ಮುಚ್ಚಿಟ್ಟರು. ಹಸಿವು ಇಂಗಿಹೋಗಿತ್ತು. ಮಂಜುವಿನ ಸುತ್ತ ತಂದೆ ಮಕ್ಕಳು ಗೊಂಬೆಗಳಂತೆ ಕುಳಿತಿದ್ದರು.

ಗೋಡೆ ಗಡಿಯಾರ ಹತ್ತು ಬಡಿಯುವಷ್ಟರಲ್ಲಿ ವೃಂದಾಬಾಯಿ ಅಡುಗೆಮನೆ ಕೆಲಸವೆಲ್ಲ ಮುಗಿಸಿ ಬಾಗಿಲು ಹಾಕಿಕೊಂಡು ನಡುಮನೆಗೆ ಬಂದರು. ಆಕೆಯ ಹೆಜ್ಜೆಸಪ್ಪಳಕ್ಕೆ ಮಂಜು ಮೆಲ್ಲನೆ ಪ್ರಯಾಸದಿಂದ ಕಣ್ತೆರೆಯಿತು. ಕೋಣೆಯತ್ತ ಸಾಗಿದ ಅವರ ಹೆಜ್ಜೆ ಹಾಗೇ ತಡೆಯಿತು. ಮಂಜು ಸುಸ್ತಾಗಿ, ಕಣ್ಣರಳಿಸಲೂ ಶಕ್ತಿ ಇಲ್ಲದೆ, ಮುಚ್ಚಿಕೊಳ್ಳುತ್ತಿದ್ದ ರೆಪ್ಪೆಯಡಿಯಿಂದ ವೃಂದಾಬಾಯಿಯನ್ನೇ ದಿಟ್ಟಿಸಿ ನೋಡಿತು ತದೇಕವಾಗಿ. ಉಸಿರು ತಿದಿಯಾಗಿತ್ತು ಅದರ ಕಣ್ಣುಗಳಲ್ಲಿ ಯಾವುದೋ ಅವ್ಯಕ್ತ ವೇದನೆ-ಅಸಹಾಯಕ ಭಾವ ಕೆನೆಗಟ್ಟಿದ್ದನ್ನು ಕಾಣುತ್ತ ಆಕೆ ಅರಿವಿಲ್ಲದೆ ಹೆಜ್ಜೆಯನ್ನು ನಿಂತಲ್ಲೇ ಕೀಲಿಸಿದರು. ಆಕೆಯತ್ತಲೇ ಮಂಜುವಿನ ನೆಟ್ಟ ನೋಟ-ಆದ್ರ್ರಭಾವ….. ವಾತಾವರಣ ಹೆಪ್ಪುಗಟ್ಟಿದಂತೆ ಎನಿಸಿತು. ಆಕೆ ನಿಂತಲ್ಲೇ ಮೂರ್ತಿಯಾಗಿದ್ದರು. ಎಲ್ಲರ ಹೃದಯಗಳೂ ಒದ್ದೆಯಾಗಿದ್ದವು. ಎಲ್ಲರ ನೋಟವೂ ಅದರತ್ತಲೇ ಕೇಂದ್ರೀಕೃತ.

ಮಂಜುವಿನ ಆರ್ತ ಹೃದಯಸ್ಪರ್ಶಿ ನೋಟ ಆಕೆಯೆದೆಯೊಳಗೆ ಕುಡುಗೋಲು ಆಡಿಸಿದಂತಾಗಿ ಕಂಪಿಸಿದ್ದರು. ಮಂಜು ಆಕೆಯನ್ನೇ ನೋಡುತ್ತಿತ್ತು. ನಿಶ್ಚಲ ನೋಟ. ನೂರು ಭಾವ ಉಸುರುವ ನೆಟ್ಟ ನೋಟ. ಒಂದು ಕ್ಷಣದಲ್ಲಿ ಅದರ ಉಸಿರು ಸ್ತಬ್ಧವಾಗಿತ್ತು.

ಮಕ್ಕಳಿಬ್ಬರೂ ಅನಿರೀಕ್ಷಿತ ಆಘಾತದಿಂದ ಅಳತೊಡಗಿದರು. ರಾಯರ ಹೃದಯವೂ ತಳಮಳಿಸಿದರೂ ಅವರು ಒತ್ತಾಯಪೂರ್ವಕವಾಗಿ ತಮ್ಮೊಳಗಿನ ಉಮ್ಮಳವನ್ನು ತಡೆ ಹಿಡಿದುಕೊಂಡು ಮಕ್ಕಳಿಗೆ ಸಾಂತ್ವನ ಹೇಳಿದರು. ವೃಂದಾಬಾಯಿ, ಅಚಲವಾಗಿದ್ದ ಮಂಜುವಿನ ದೇಹವನ್ನೇ ಗರಬಡಿದಂತೆ ನೋಡುತ್ತಿದ್ದರು. ಆದರೆ ಅವರ ಕಣ್ಣುಗಳಲ್ಲಿ ಪಸೆಯಿರಲಿಲ್ಲ.

ರಾಯರು ಬಲವಂತವಾಗಿ ಮಗನನ್ನು ಮೇಲೆಬ್ಬಿಸಿ, ಸಮಾಧಾನ ಹೇಳುತ್ತಲೇ ಮಂಜುವಿನ ದೇಹವನ್ನು ಎತ್ತಿಕೊಂಡು ಹೋಗಿ ತಮ್ಮ ಮನೆಯ ಬಲಭಾಗದಲ್ಲಿದ್ದ ನಿತ್ಯಮಲ್ಲಿಗೆ ಗಿಡದ ಪಾತಿಯಲ್ಲಿರಿಸಿ ಬಂದರು. ರಾತ್ರಿ ಪೂರ್ತಿ ಅವರ ಪಾಲಿಗೆ ಹಗಲಾಗಿತ್ತು. ಯಾರೂ ಕಣ್ಮುಚ್ಚಲಿಲ್ಲ. ನಾಲ್ಕೈದು ದಿನ ಇಬ್ಬರಿಗೂ ಕಾಲೇಜು ಬೇಕೆನಿಸಲಿಲ್ಲ. ಊಟ ತಿಂಡಿಯೂ.

“ಮಧ್ವೇಶ, ನೀನು ದೊಡ್ಡೋನು, ತಿಳುವಳಿಕಸ್ಥ… ನೀನೇ ಹೀಗೆ ದುಃಖಿಸ್ತಾ ಕೂರೋದು ಸರಿಯಲ್ಲಪ್ಪ… ಏನೋ ಮಂಜುವಿನ ಋಣ ನಮಗಿಷ್ಟೇ ದಿನ ಇದ್ದಿದ್ದು ಅಂತ ಕಾಣತ್ತೆ… ಏಳು… ಮೇಲೇಳು… ಸಮಾಧಾನ ಮಾಡ್ಕೋ”

ತಂದೆಯ ಮಾತಿನಂತೆ ಅವನು ಮೇಲೆದ್ದು ದೈನಂದಿನ ಕೆಲಸಗಳತ್ತ ಗಮನ ಕೊಟ್ಟ. ತುಳಸಿಯೂ ಕಾಲೇಜಿಗೆ ಹೋಗತೊಡಗಿದಳು. ಮಂಜುವಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ಅಂಬೆಗಾಲಿಕ್ಕುವ ತುಂಟಮಗುವಂತೆ ಮನೆಯಲ್ಲಿ ಚಟುವಟಿಕೆಯಿಂದ ಕುಪ್ಪಳಿಸಿಕೊಂಡು ಓಡಾಡುತ್ತಿದ್ದ ಮಂಜುವಿನ ಕಣ್ಮರೆ ಸ್ಪಷ್ಟ ಗೋಚರವಾಗಿತ್ತು. ಮತ್ತೆ ಎಲ್ಲರೂ ಮೊದಲಿನಂತಾಗುತ್ತಿದ್ದರೆ ವೃಂದಾಬಾಯಿ ಮಾತ್ರ ಮೌನದ ಹುತ್ತವಾಗಿದ್ದರು. ಗಂಟೆಗಟ್ಟಲೆ ಗರಬಡಿದಂತೆ ಕುಳಿತಲ್ಲೇ ಕುಳಿತಿರುತ್ತಿದ್ದರು! ಪೂಜೆ ಪುನಸ್ಕಾರ, ಅಡುಗೆ, ಹರಟೆ ಯಾವುದರಲ್ಲೂ ಆಸಕ್ತಿಯಿಲ್ಲ. ಹತ್ತುಗಂಟೆಯ ನಂತರ ಮನೆಯಿಂದ ಎಲ್ಲ ಹೊರಟುಹೋದ ಮೇಲೆ ಗವ್ವೆನ್ನುವ ಮನೆಯೊಳಗೆ ವೃಥಾ ಚಡಪಡಿಸುತ್ತ ಶತಪಥ ಹಾಕುತ್ತಿದ್ದರು. ಇಲ್ಲವೇ ಗಲ್ಲಕ್ಕೆ ಕೈಕೊಟ್ಟು ಕುಳಿತರೆಂದÀರೆ ಸಂಜೆ ಹುಡುಗರು ಬರುವವರೆಗೂ ಪರಿವೆಯಿಲ್ಲ. ಮುಚ್ಚಿಟ್ಟ ಅಡುಗೆ ಹಾಗೆಯೇ ಹಿಂದಿನ ವೃಂದಾಬಾಯಿ ಎಲ್ಲಿ ಕಳೆದು ಹೋಗಿದ್ದರೋ? ಸದಾ ಮೆತ್ತಿಹಾಕಿಕೊಂಡ ತುಟಿಗಳು. ದಿನೇ ದಿನೇ ವೃಂದಾಬಾಯಿ ಮನೆಯವರಿಗೆಲ್ಲ ದೊಡ್ಡ ಒಗಟಾಗತೊಡಗಿದ್ದರು. ಸದಾ ಮಂಕುಬಡಿದಂತೆ ಕುಳಿತಿದ್ದ ಆಕೆಯ ಸ್ಥಿತಿಯನ್ನು ಕಂಡು ಎಲ್ಲರಿಗೂ ಗಾಬರಿ.

“ಅಮ್ಮಾ ಏನಾಗಿದೆಯಮ್ಮ ನಿಂಗೆ?”- ಮಧ್ವೇಶ ನಡುಗುವ ದನಿಯಿಂದ ತಾಯಿಯ ಹೆಗಲನ್ನು ಅಲುಗಿಸುತ್ತ ಕೇಳಿದಾಗ ಆಕೆ ಒಮ್ಮೆಲೆ ಚೀರಿದರು- “ಮಧ್ವೇಶ, ನನ್ನ ಕೈಲಿ ಮಂಜು ಇಲ್ಲದೆ ಈ ಮನೇಲಿ ಇರಕ್ಕಾಗಲ್ಲ ಕಣೋ… ದಯವಿಟ್ಟು ಎಲ್ಲಿಂದಾದರೂ ಒಂದು ನಾಯಿಮರೀನ ತೊಗೊಂಡು ಬಾರೋ”

-ಅವರ ದನಿಯಲ್ಲಿ ಗೋಗರೆತವಿತ್ತು.

                                                                                   *  * * *  * *

Related posts

ಹೊದಿಕೆಗಳು

YK Sandhya Sharma

ಪ್ರಹಾರ

YK Sandhya Sharma

ಹುಟ್ಟುಹಬ್ಬ

YK Sandhya Sharma

Leave a Comment

This site uses Akismet to reduce spam. Learn how your comment data is processed.