ಸಾಮಾನ್ಯವಾಗಿ, ವೇದಿಕೆಯ ಮೇಲೆ ನೃತ್ಯ ಪ್ರದರ್ಶಿಸುವ ಕಲಾವಿದರಿಗೆ ಬಹು ಬೇಗ ಹೆಸರು-ಜನಪ್ರಿಯತೆಗಳು ದೊರಕುತ್ತವೆ. ಆದರೆ, ನೃತ್ಯವನ್ನು ಪ್ರದರ್ಶಕ ಕಲೆಯಾಗಿ ಬಳಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನೃತ್ಯಶಾಸ್ತ್ರದ ವ್ಯಾಕರಣದಲ್ಲಿ ಆಸಕ್ತಿ ತಳೆದು ಅದರ ಆಳ-ಹರವಿನ ಶಾಸ್ತ್ರಾಧ್ಯಯನ ಮಾಡುವವರು ವಿರಳ. ನಮ್ಮ ನಡುವಣ ಇರುವ ಅಂಥ ಕೆಲವೇ ವಿದ್ವಾಂಸರ ಪೈಕಿ ವಿದುಷಿ ಮಾನಸಿ ಪಾಂಡ್ಯ ರಘುನಂದನ್ ಅವರು ಗಮನಾರ್ಹರು. ಸುಲಭಕ್ಕೆ ದಕ್ಕುವ ವಿದ್ಯೆ ಇದಲ್ಲ. ಆಳವಾದ ಪಾಂಡಿತ್ಯ, ಅಧ್ಯಯನ, ಕ್ಷೇತ್ರ ಕಾರ್ಯ, ಪ್ರವಾಸ, ತಜ್ಞರೊಂದಿಗಿನ ಸಮಾಲೋಚನೆ ಮುಂತಾದ ಸಾಧನಾತ್ಮಕ ಅನ್ವೇಷಕ ನಡೆಯಿಂದ ಪಡೆಯಬಹುದಾದ ಸಿದ್ಧಿ ಇದು. ಇಂಥ ಕಠಿಣತಮ ಸಾಧನೆಯ ಹಾದಿ ಮಾನಸಿ ಅವರದು.
ಬೆಂಗಳೂರಿನಲ್ಲಿ ವಾಸವಿದ್ದು, ಕನ್ನಡಿಗರಾದ ಭರತನಾಟ್ಯ ಕೋವಿದ-ಗುರು ರಘುನಂದನ್ ಶ್ಯಾಮಪ್ರಕಾಶರನ್ನು ಪತಿಯಾಗಿ ಪಡೆದು, ಕಳೆದ ಒಂದು ದಶಕದಿಂದ ಇಲ್ಲೇ ತಮ್ಮ ನೃತ್ಯಕಾಯಕ ನಡೆಸುತ್ತಿರುವ ಮಾನಸಿ ಮೂಲತಃ ಗುಜರಾತಿನ ಬರೋಡಾದವರಾಗಿದ್ದು, ಅಲ್ಲೇ ಹುಟ್ಟಿ ಬೆಳೆದವರು. ಭರತನಾಟ್ಯ ನೃತ್ಯಗುರು ದಂಪತಿಗಳಾದ ಡಾ. ಶರದ್ ಪಾಂಡ್ಯ ಮತ್ತು ನೀರೂ ಪಾಂಡ್ಯ ಅವರ ಪುತ್ರಿ ಮಾನಸಿಗೆ ನೃತ್ಯಪ್ರೀತಿ ರಕ್ತದಲ್ಲೇ ಹರಿದು ಬಂದದ್ದು. ಆಕೆಯ ತಮ್ಮ ಪಾರ್ಥ್ ಕೂಡ ಹಿಂದೂಸ್ಥಾನಿ ಸಂಗೀತದಲ್ಲಿ ಪರಿಶ್ರಮಿಸಿ, ಗಿಟಾರ್ ವಾದನದಲ್ಲಿ ಪಾಂಡಿತ್ಯ ಪಡೆದು, ಬರೋಡಾ ಮತ್ತು ಅಮೆರಿಕೆ ಎರಡೂ ಕಡೆಯಲ್ಲಿ ವಾದ್ಯಗೋಷ್ಠಿ ನಡೆಸುತ್ತಿದ್ದಾರೆ.
ಮನೆಯಲ್ಲಿ ಸಂಗೀತ-ನೃತ್ಯದ ವಾತಾವರಣ. ಸಹಜವಾಗಿ ಆರುವರ್ಷದ ಮಾನಸೀ ಕಲಾಕರ್ಷಿತರಾದರು. ತಂದೆ-ತಾಯಿಗಳೇ ಗುರುಗಳು. ಭರತನಾಟ್ಯಾಭ್ಯಾಸ ಪಾರಂಭವಾಯಿತು. ತಮ್ಮ ಹದಿನೈದರ ಪ್ರಾಯದಲ್ಲಿ ‘ಕಲಾಕ್ಷೇತ್ರ’ದ ಖ್ಯಾತ ನಾಟ್ಯಗುರು ಪದ್ಮಭೂಷಣ ಸಿ.ವಿ.ಚಂದ್ರಶೇಖರ್ ಅವರ ಬಳಿ ನೃತ್ಯ ತರಬೇತಿ. ಆಗಲೇ ಭರತನಾಟ್ಯದಲ್ಲಿ ಸತತ ಐದು ವರ್ಷಗಳ ಕಾಲ ಸಿ.ಸಿ.ಆರ್.ಟಿ..ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಪಡೆದ ಹಿರಿಮೆ ಮಾನಸಿಯದು. ಹೈಸ್ಕೂಲಿಗೆ ಬರುವ ವೇಳೆಗೆ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ನಾಲ್ಕುವರ್ಷಗಳ ಡಿಪ್ಲೊಮಾ ಮಾಡಿದ್ದರು. ಈ ನಡುವೆ ಒರಿಸ್ಸಾದಲ್ಲಿದ್ದ ನಾಟ್ಯಗುರು ಪದ್ಮಶ್ರೀ ಡಾ. ಗಂಗಾಧರ್ ಪ್ರಧಾನ್ ಅವರಲ್ಲಿ ಹದಿನಾಲ್ಕರ ಬಾಲಕಿ ಮಾನಸಿ ‘ಒಡಿಸ್ಸಿ’ನೃತ್ಯ ಕಲಿಕೆಗೆ ಸೇರ್ಪಡೆಯಾದರು. ಹತ್ತುವರ್ಷಗಳ ಕಾಲ ಎಡೆಬಿಡದ ತರಬೇತಿ. ಸಣ್ಣವಯಸ್ಸಿಗೆ, ನಿಷ್ಠಾಭ್ಯಾಸಿ ಮಾನಸಿ, ಭರತನಾಟ್ಯ ಹಾಗೂ ಒಡಿಸ್ಸಿ ಎರಡೂ ನೃತ್ಯ ಶೈಲಿಗಳಲ್ಲಿ ಪರಿಣಿತಿ ಪಡೆದುಕೊಂಡರು.
ಆರನೆಯ ವಯಸ್ಸಿಗೆ ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ಕೊಡಲಾರಂಭಿಸಿದ ಬಾಲಕಿ, ಒಂಭತ್ತನೆಯ ತರಗತಿಯಲ್ಲಿದ್ದಾಗಲೇ ಮಾರಿಷಸ್ ನಲ್ಲಿ ಕಾರ್ಯಕ್ರಮ ನೀಡಿದಳಷ್ಟೇ ಅಲ್ಲದೆ, ತಂದೆಯ ‘ಪೂರ್ವ ನೃತ್ಯಶಾಲೆ’ಯ ಮುಖಾಂತರ ಪಾಕೀಸ್ಥಾನದಲ್ಲಿ ಮೂರುಬಾರಿ ನೃತ್ಯ ಪ್ರದರ್ಶನ ನೀಡಿದ ವಿಶೇಷ ಇವಳದು. ಮುಂದೆ ದೊಡ್ಡ ನೃತ್ಯ ಕಲಾವಿದೆಯಾಗಿ ಬೆಳೆದ ಮಾನಸಿ, ರಾಷ್ಟ್ರಾದ್ಯಂತ-ವಿಶ್ವದಾದ್ಯಂತ ಕಾರ್ಯಕ್ರಮ ನೀಡುತ್ತ ಬಂದಳು.
ಕೇವಲ ನೃತ್ಯಪ್ರದರ್ಶನಕ್ಕೆ ಮಾತ್ರ ಸೀಮಿತವಾಗಲಿಲ್ಲ ಈ ಬಹುಮುಖ ಪ್ರತಿಭೆಯ ಕಾರ್ಯಕ್ಷೇತ್ರ. ಚಿಕ್ಕಂದಿನಿಂದ ಬರೆಯುವ ಹವ್ಯಾಸವಿದ್ದ ಈಕೆ ಮುಂದೆ ಅನೇಕ ಸಂಶೋಧನಾತ್ಮಕ ಲೇಖನ, ಪುಸ್ತಕಗಳನ್ನು ಬರೆದು ಲೇಖಕಿಯಾದರು. ಕಲಾ ವಿಮರ್ಶಕಿ, ನೃತ್ಯದ ಬಗ್ಗೆ ಭಾಷಣ ಮಾಡುವ ಉಪನ್ಯಾಸಕಿಯೂ ಆದರು. ಗಂಧರ್ವ ಮಹಾವಿದ್ಯಾಲಯ ಮಂಡಲದಿಂದ ಭರತನಾಟ್ಯದಲ್ಲಿ ವಿಶಾರದ ಮತ್ತು ‘ಅಲಂಕಾರ್’ ನಲ್ಲಿ ಸ್ವರ್ಣಪದಕ ಗಳಿಕೆ. ಫ್ರೆಂಚ್ ಭಾಷೆಯಲ್ಲಿ ಪಿ.ಜಿ.ಡಿಪ್ಲೋಮಾ, ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಎಂ.ಎ. ಮತ್ತು ಕಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ‘ಒಡಿಸ್ಸಿ’ಯಲ್ಲಿ -ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡರು. ನಳಂದ ವಿಶ್ವವಿದ್ಯಾಲಯದ ರಿಸರ್ಚ್ ಸೆಂಟರ್ ನಿಂದ ಒಡಿಸ್ಸಿ ನೃತ್ಯದಲ್ಲಿ ‘ಕೋವಿದ’ಳಾದ ಮಾನಸಿ, ಕನ್ನಡ , ಇಂಗ್ಲೀಷ್ , ಹಿಂದೀ, ಒರಿಯಾ, ಗುಜರಾತೀ, ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ಬಲ್ಲ ಬಹುಭಾಷಾ ತಜ್ಞೆ.
ಆಕೆಯ ಕನಸಿನ ಕೂಸಾದ ‘ಅಭಿವ್ಯಕ್ತಿ ಕಲ್ಚರಲ್ ಟ್ರಸ್ಟ್’ ಇಂದು ಬೆಂಗಳೂರಿನಲ್ಲಿ ಅನೇಕ ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ನೃತ್ಯೋತ್ಸವಗಳನ್ನು ನಡೆಸುತ್ತಿರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಪ್ರದರ್ಶನ, ಕಾರ್ಯಾಗಾರ, ಪ್ರಾತ್ಯಕ್ಷಿಕ ಉಪನ್ಯಾಸ, ಸಂಶೋಧನಾ ಲೇಖನಗಳ ಮಂಡನೆ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುತ್ತಿರುವ ಗರಿಮೆ ಮಾನಸಿ ಅವರದು. ವೃತ್ತಿಪರತೆ-ಬದ್ಧತೆಗಳಿಗೆ ಹೆಸರಾದ ಇವರು, ಇಂದು ನೂರಾರು ಶಿಷ್ಯರನ್ನು ಇಲ್ಲಿ ತಯಾರು ಮಾಡುತ್ತಿರುವುದಲ್ಲದೆ, ರಷ್ಯಾ, ಬ್ರೆಜಿಲ್, ಆಸ್ಟ್ರಿಯಾ, ಚೈನಾ, ಕೆನಡಾ, ಸ್ವಿಸರ್ಲ್ಯಾಂಡ್ , ಶ್ರೀಲಂಕಾ, ಅಮೇರಿಕ ಮತ್ತು ಚಿಲಿ ದೇಶಗಳ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡುತ್ತಿರುವುದು ಇವರ ಅಗ್ಗಳಿಕೆ.
ವಾಷಿಂಗ್ ಟನ್ ಡಿ.ಸಿ.ಯ ಡಿಸ್ಕವರಿ ಚಾನಲ್ನಲ್ಲಿ ಇವರ ಕುರಿತ ವಿಶೇಷ ನೃತ್ಯಚಿತ್ರವಿದೆ. ಮಾನಸಿ ನೀಡಿರುವ ನೃತ್ಯ ಪ್ರದರ್ಶನಗಳು ಅಸಂಖ್ಯ. ಕೇರಳ ಹಾಗೂ ನಳಂದ ರಾಷ್ಟ್ರೀಯ ನೃತ್ಯೋತ್ಸವಗಳು , ಐ.ಸಿ.ಸಿ.ಆರ್., ನೃತ್ಯ ಪ್ರತಿಭಾ- ಔರಂಗಾಬಾದ್, ಇಂದ್ರಧನುಷ್ -ದೆಹಲಿ, ಕೊನಾರ್ಕ್, ಕೋಲ್ಕತ್ತಾ, ಜಲಗಾಂವ್, ಚೆನ್ನೈ, ವೆಲ್ಲೂರು, ರುಕ್ಮಿಣಿ ದೇವಿ ಅರುಂಡೆಲ್ ನೃತ್ಯೋತ್ಸವವಲ್ಲದೆ, ಬೆಂಗಳೂರಿನ ಬಹುತೇಕ ಎಲ್ಲ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ವಿದೇಶಗಳಲ್ಲಿ ನೀಡಿರುವ ಮುಖ್ಯ ನರ್ತನ ಕಾರ್ಯಕ್ರಮಗಳೆಂದರೆ- ಸ್ಪೇನ್, ಫ್ರಾನ್ಸ್, ಮಲೇಶಿಯಾ, ಸಿಂಗಾಪುರ್, ಶ್ರೀಲಂಕಾ, ನೇಪಾಳ್, ಮಾರೀಶಸ್, ಸೈಬೀರಿಯ, ಯುಗೋಸ್ಲಾವಿಯಾ, ಕತಾರ್ , ಇಥಿಯೋಪಿಯಾ ಮತ್ತು ಬ್ರೆಜಿಲ್ ಮುಂತಾದ ದೇಶಗಳಲ್ಲಿ ಆಯೋಜಿತವಾದವು.
ಶಾಸ್ತ್ರಾಧ್ಯನದ ಬೆಂಬಲ, ಪ್ರಯೋಗ-ಹೊಸ ಪರಿಕಲ್ಪನೆ, ಸಂಶೋಧನೆಗಳಿಂದ ಅರ್ಥಪೂರ್ಣವಾಗಿ ನೃತ್ಯ ಸಂಯೋಜನೆ ಮಾಡುವ ಮಾನಸಿ, ಸದಾ ಹೊಸತನಕ್ಕೆ ತುಡಿಯುವವರು. ಇವರು ವಿಶೇಷವಾಗಿ ನೃತ್ಯ ಸಂಯೋಜಿಸಿ ಪ್ರಸ್ತುತಿಪಡಿಸಿರುವ ಕೃತಿಗಳು- ಶ್ರೀರಾಮ ರಕ್ಷಾ ಸ್ತೋತ್ರಂ, ಹನುಮಾನ್ ಚಾಲೀಸ್, ಕಲಾ ಸಂಗಮ, ಸಂಧ್ಯಾ ದೇವಿ ಸ್ತೋತ್ರಂ, ಅಭಯಂಕರ, ಶಿವರಕ್ಷಾ ಸ್ತ್ರೋತ್ರಂ, ಮಂಗಳಾಚರಣ , ವಿಷ್ಣು ಸ್ತುತಿ, ಅಷ್ಟದಿಕ್ಪಾಲಕರು, ಕದನ ಕುತೂಹಲ ರಾಗದಲ್ಲಿ ‘ಪಲ್ಲವಿ’, ಕನ್ನಡ ವಚನಗಳ ಪ್ರಯೋಗ ಮತ್ತು ಜಗನ್ನಾಥಚರಿತಂ ನೃತ್ಯರೂಪಕ ಗಮನಾರ್ಹವಾದುದು.
ಇವರ ಪ್ರತಿಭೆಗೆ ಸಂದಿರುವ ಪ್ರಶಸ್ತಿ-ಬಿರುದು-ಗೌರವಗಳು ಅನೇಕಾನೇಕ. ನೃತ್ಯವಿಲಾಸಿನಿ-ಛತ್ತೀಸಗಡ, ಪೂರ್ವರತ್ನ- ಗುಜರಾತ್, ಭಾರತಶ್ರೀ -ಕರ್ನಾಟಕ, ಡಾನ್ಸ್ ಕ್ವೀನ್ – ಗುಜರಾತ್(ಮಹಿಳಾದಿನದ ಪ್ರಶಸ್ತಿ) ಮುಂತಾದವು. ಇತ್ತೀಚಿಗೆ ಇವರ ಒಡಿಸ್ಸಿ ನೃತ್ಯಸಾಧನೆಗೆ ಕ್ರಿಸ್ಟ್ ಫೌಂಡೆಶನ್’ ಎಕ್ಸಲೆನ್ಸಿ ನ್ಯಾಷನಲ್ ಅವಾರ್ಡ್’ ನೀಡಿದೆ.
ಪ್ರಸ್ತುತ, ಡಾಕ್ಟೊರೇಟ್ ಸಂಶೋಧನೆಯ ಅಂತಿಮವರ್ಷದಲ್ಲಿ ತೊಡಗಿಕೊಂಡಿರುವ ಸತಿಯ ಸರ್ವತೋಮುಖ ನೃತ್ಯಾಭಿವೃದ್ಧಿಗೆ ಬೆಂಬಲವಾಗಿರುವ ಪತಿ, ಎಂಜಿನಿಯರ್, ಭರತನಾಟ್ಯ ಕಲಾಯೋಗಿ ಎಸ್. ರಘುನಂದನ್ ಮತ್ತು ಐದುವರ್ಷದ ಮಗ ಹೃಷಿಕೇಶ್ ಅವರೊಂದಿಗಿನ ನೆಮ್ಮದಿಯ ಸುಖ ಸಂಸಾರ ಮಾನಸಿ ಅವರದು.
- Y.K.Sandhya sharma