Image default
Dance Reviews

‘ನಾಟ್ಯ ಕಲಾಕ್ಷೇತ್ರ’ ದ ವಿಶಿಷ್ಟ ಪ್ರಯೋಗ “ಸೃಷ್ಟಿ-ಸ್ಥಿತಿ-ಲಯ”

ಸೃಜನಶೀಲತೆ ಕಲಾವಿದರ ಹುಟ್ಟುಗುಣ. ಪ್ರತಿಯೊಬ್ಬ ಚಿಂತಕ ಚೇತನದಲ್ಲೂ ಸ್ರವಿಸುವ ನಿರಂತರ ಪ್ರಕ್ರಿಯೆ. ಸದಾ ಕ್ರಿಯಾತ್ಮಕವಾಗಿರ ಬಯಸುವ ಕಲಾವಿದ ಜಡವಾಗಿ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ. ಪ್ರತಿಕ್ಷಣ ರಚನಾತ್ಮಕವಾಗಿರುವವರ ಮನಸ್ಸಿನಲ್ಲಿ ಆಲೋಚನೆಗಳ ಬುಗ್ಗೆ, ವಿಶಿಷ್ಟ ಪರಿಕಲ್ಪನೆಗಳ ಹರಿವು ನಡದೇ ಇರುತ್ತದ್ದಾರಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನ್ವೇಷಕವಾಗಿ ತೊಡಗಿಕೊಂಡಿರುತ್ತಾರೆ. ಅದರಂತೆ ನೃತ್ಯ ಕ್ಷೇತ್ರದಲ್ಲಿ ಬಿಡುವಿರದ ಚಟುವಟಿಕೆಗಳಲ್ಲಿ ತನ್ಮಯರಾಗಿದ್ದ ಕಲಾವಿದರ ಸಮುದಾಯ ಒಮ್ಮೆಲೇ ಧುತ್ತೆಂದು ಎರಗಿದ ನಿರೀಕ್ಷಿಸಿರದ ‘ಕೊರೋನಾ’ ಆಘಾತದಿಂದ ತತ್ತರಿಸಿರುವ ಸಂಗತಿ ಸರ್ವವಿದಿತ.

ಇಡೀ ವಿಶ್ವವನ್ನೇ ಆವರಿಸಿ-ಅಲ್ಲಾಡಿಸಿರುವ ಈ ಸಮಸ್ಯೆಯ ರಾವು ಕಲಾರಂಗಕ್ಕೂ ಬಡಿದಿರುವುದು ನಿಚ್ಚಳ ಸತ್ಯ. ಇದರಿಂದ ಕಂಗಾಲಾದ ಕಲಾವಿದರು ಮೊದಲೆರಡು ತಿಂಗಳು ಆಘಾತದಿಂದ ಕೈ ಚೆಲ್ಲಿ ಕುಳಿತದ್ದು ನಿಜ. ಆತ್ಮಸ್ಥೈರ್ಯ ಕುಸಿಯುವ ಸಂದರ್ಭ. ಆದರೂ ತಮ್ಮ ಮನೋಬಲದಿಂದ ಚೇತರಿಸಿಕೊಂಡ ಗುಂಪು  ಚೈತನ್ಯಪೂರ್ಣವಾಗಿ ಮತ್ತೆ ಮೊದಲಿನಂತಾಗಲು  ಪ್ರಯತ್ನಿಸುತ್ತಿರುವುದು ಶುಭಲಕ್ಷಣವೇ ಸರಿ.

ಆವಶ್ಯಕತೆಯೇ ಎಲ್ಲ ಶೋಧನೆಗಳ ಮೂಲವಲ್ಲವೇ? ಅಂತೆಯೇ ಮನೆಯಿಂದ ಹೊರಗೆ ಚಲಿಸಲಾರದ  ಪರಿಸ್ಥಿತಿಯಲ್ಲಿ ಕಲಾವಿದರು ಪರ್ಯಾಯವಾಗಿ ಕಂಡುಕೊಂಡ ಮಾರ್ಗ ಅಂತರ್ಜಾಲದ ವಾಹಿನಿ. ಒಬ್ಬರ ಹಿಂದೆ ಒಬ್ಬರಂತೆ ನೃತ್ಯ ಕಲಾವಿದರು ತಂತಮ್ಮ ಮನೋವಿಕಾಸಕ್ಕೆ, ನೈತಿಕ ಬೆಂಬಲಕ್ಕೆ ಇಂದು ಬಳಸಿಕೊಳ್ಳುತ್ತಿರುವುದು ಅಂತರ್ಜಾಲ ಮಾಧ್ಯಮವನ್ನು. ಇದು ಅತ್ಯಂತ ಸ್ವಾಗತಾರ್ಹ ಮತ್ತು ಆರೋಗ್ಯಕರ ಬೆಳವಣಿಗೆ ಕೂಡ .

ಈ ನಿಟ್ಟಿನಲ್ಲಿ ಬಹುತೇಕರು ಪ್ರತಿದಿನ ಹೊಸ ಹೊಸ ಪರಿಕಲ್ಪನೆ-ಯೋಜನೆಗಳೊಂದಿಗೆ ‘ಆನ್ಲೈನ್’ ಮಾಧ್ಯಮದಲ್ಲಿ ಕಲಾಪ್ರದರ್ಶನ ಮಾಡುತ್ತಿದ್ದಾರೆ. ಮುದುಡಿಕೊಂಡಿದ್ದ ಮನಗಳನ್ನು ಅರಳಿಸುವ ಸಫಲ-ಸುಂದರ ಪ್ರಯೋಗಗಳು ಇಂದು ಹೇರಳವಾಗಿ ನಡೆಯುತ್ತಿವೆ. ಮತ್ತೆ ಪ್ರಕ್ರಿಯೆ-ಪ್ರಸ್ತುತಿಗಳು ಉತ್ಸಾಹದಿಂದ ಮೈಕೊಡವೆದ್ದು ಅಂತರ್ಜಾಲದ ಪರದೆಗಳ ಮುಂದೆ  ಚೈತನ್ಯಪೂರ್ಣವಾಗಿವೆ!!

ಪ್ರಖ್ಯಾತ ಭರತನಾಟ್ಯ ತಜ್ಞೆ-ತಾಯಿ ಗುರು ಪ್ರಭಾವತಿ ಶಾಸ್ತ್ರಿ ಅವರ ಪ್ರತಿಭಾ ಮೂಸೆಯಲ್ಲರಳಿದ ಖ್ಯಾತ ನೃತ್ಯ ಕಲಾವಿದ-ಗುರು ಪ್ರಶಾಂತ್ ಶಾಸ್ತ್ರಿ, ಅವರ ನೇತೃತ್ವದ ‘’ ನಾಟ್ಯ ಕಲಾಕ್ಷೇತ್ರ’’, ತನ್ನ ನಲವತ್ತೈದನೆಯ ವರುಷದ ಸಂಭ್ರಮವನ್ನು ಹೊಸ ಪರಿಕಲ್ಪನೆಯ ‘’ಸೃಷ್ಟಿ-ಸ್ಥಿತಿ-ಲಯ” ನೃತ್ಯ ಕಾರ್ಯಕ್ರಮವನ್ನು ಇತ್ತೀಚಿಗೆ, ಅಂತರ್ಜಾಲದಲ್ಲಿ, ಖ್ಯಾತ ಹಾಗೂ ಹಿರಿಯ ಗುರುಗಳ ಸಹಯೋಗದೊಂದಿಗೆ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿ ಮೆಚ್ಚುಗೆಯನ್ನು ಪಡೆಯಿತು. ಈ ಕಾರ್ಯಕ್ರಮದಲ್ಲಿ, ಪ್ರಸಿದ್ಧ ಅಭಿನೇತ್ರಿ, ನೃತ್ಯ ಕಲಾವಿದೆ ಹೇಮಾ ಪ್ರಭಾತ್, ಪ್ರಶಾಂತ್ ಶಾಸ್ತ್ರಿ ಅವರೊಂದಿಗೆ ‘ನೂಪುರ’ ದ ಡಾ. ಲಲಿತಾ ಶ್ರೀನಿವಾಸನ್ ಹಾಗೂ ಕೂಚಿಪುಡಿ ವಿದುಷಿ ಡಾ. ವೀಣಾ ಮೂರ್ತಿ ವಿಜಯ್ ಕೂಡ ಅಭಿನಂದನೀಯರು.

ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ, ಜಗದ್ರಕ್ಷಕನ ಕೃಪೆಯನ್ನು ಬೇಡುವ ‘ಸೃಷ್ಟಿ-ಸ್ಥಿತಿ-ಲಯ’ ಎಂಬ ವಿಶಿಷ್ಟ ಪರಿಕಲ್ಪನೆಯ ನೃತ್ಯಧಾರೆಯ ಪ್ರಯೋಗ ರಸಿಕರ ಮನವನ್ನು ರಂಜಿಸಿತು, ಯಾಂತ್ರಿಕತೆ, ನೈರಾಶ್ಯದಿಂದ ಬೇಸತ್ತ ಮನಗಳನ್ನು ಮುದಗೊಳಿಸಿತು. ಮೂರು ಪುಟ್ಟ ರೂಪಕಗಳಂತಿದ್ದ ನಾಟ್ಯ ಪ್ರಸ್ತುತಿಗಳು ಕೊಂಡಿಯಂತೆ  ಒಂದರೊಳಗೊಂದು ಅವಿನಾಭಾವವಾಗಿ ಬೆಸೆದುಕೊಂಡು ಸಾಂದ್ರ ಪರಿಣಾಮವನ್ನುಂಟು ಮಾಡಿದವು. 

ಶುಭಾರಂಭಕ್ಕೆ ಹೇಮಾ ಪ್ರಶಾಂತ್ ಅವರ ಶಿಷ್ಯೆ ಭರತನಾಟ್ಯ ಕಲಾವಿದೆಯಾದ ಕಾರುಣ್ಯ ವಸಿಷ್ಠ, ಶ್ರೀ ವಸಂತಕುಮಾರ್ ರಚಿಸಿದ, ಗುರು ಹೇಮಾ ನೃತ್ಯ ಸಂಯೋಜಿಸಿದ ‘ತ್ರಿಮೂರ್ತಿ ಪುಷ್ಪಾಂಜಲಿ’ಯನ್ನು ತನ್ನ ಅಂಗಶುದ್ಧಿಯ ಮೆರುಗಿನಿಂದ ಆಹ್ಲಾದಕರವಾಗಿ ಪ್ರದರ್ಶಿಸಿದಳು. ಆತ್ಮವಿಶ್ವಾಸದ ಆಕೆಯ ಮನೋಹರ ನೃತ್ಯದಲ್ಲಿ ಸ್ಫುಟವಾದ ಅಂಗಚಲನೆ, ಅಡವು ಮತ್ತು  ಹಸ್ತಚಲನೆಗಳ ಖಾಚಿತ್ಯ ಗಮನ ಸೆಳೆಯಿತು. ಕಲಾವಿದೆಯ ಅಪಾರ ಪರಿಶ್ರಮ, ಅಭ್ಯಾಸಗಳು ಸುವ್ಯಕ್ತವಾಗಿದ್ದ್ದು, ಅಚ್ಚುಕಟ್ಟಾದ ಅವಳ ಭಕ್ತಿಪೂರಿತ ಪ್ರಸ್ತುತಿಯಲ್ಲಿ ತ್ರಿಮೂರ್ತಿಗಳ ಸಾಕ್ಷಾತ್ಕಾರವಾಯಿತು.

ಅನಂತರ ‘ಸೃಷ್ಟಿ’-ವಿಸ್ಮಯದ ವಿವಿಧ ಆಯಾಮಗಳನ್ನು ತೆರೆದಿಟ್ಟವರು ಹಿರಿಯ ಕೂಚಿಪುಡಿ ನೃತ್ಯ ಕಲಾವಿದೆ-ಗುರು ಡಾ. ವೀಣಾ ಮೂರ್ತಿ ವಿಜಯ್ ಅವರು. ಅವರ ಜೊತೆಗೂಡಿ ಅಭಿನಯದಲ್ಲಿ ಪಾಲ್ಗೊಂಡವರು ಅವರ ಶಿಷ್ಯೆ ಹೇಮಾ ಗೌತಮ್. ಜಗತ್ತಿನ ಸೃಷ್ಟಿಗೆ ಸಂಬಂಧಿಸಿದಂತೆ ‘ ದೇವೀ ಮಹಾತ್ಮೆ’ಯಲ್ಲಿರುವ ಉಪಕಥೆಯನ್ನು ಆರಿಸಿಕೊಂಡು  ಮರೆಯಾಗುತ್ತಿರುವ ದೇಸೀ ರಂಗಭೂಮಿಯ ವಿಶಿಷ್ಟ ಶೈಲಿಯಲ್ಲಿ ಸಮರ್ಥವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಸ್ವಾರಸ್ಯವಾದ ಕಥೆಯನ್ನು ವೀಣಾ ಅವರು ತಮ್ಮ ಪರಿಪಕ್ವ ಅಭಿನಯದಲ್ಲಿ ‘ಕೂಚಿಪುಡಿ  ಹಳೆಯ ಯಕ್ಷಗಾನ’ದ ಸೊಗಡನ್ನು ಉಣಿಸಿದ್ದು ಹೊಸ ಅನುಭವ ನೀಡಿತು. ಆಂಗಿಕಾ, ವಾಚಿಕಾ, ಆಹಾರ್ಯ ಮತ್ತು ಸಾತ್ವಿಕ ಅಭಿನಯ ಮೇಳೈಸಿದ ಅಭಿವ್ಯಕ್ತಿ ಆದಿಶಕ್ತಿಯ ಕಥೆಯನ್ನು ಸಾದ್ಯಂತ ನಿರೂಪಿಸಿತು.

ಮೊತ್ತ ಮೊದಲು ಜನಿಸಿದ ಆದಿಶಕ್ತಿ, ಬ್ರಹ್ಮ, ವಿಷ್ಣು, ಮಹೇಶ್ವರರನ್ನು ತೊಟ್ಟಿಲಲ್ಲಿ ತೂಗಿ ಬೆಳೆಸಿದ ಮಹಾಮಾತೆ. ತ್ರಿಮೂರ್ತಿಗಳು ಯೌವನಾವಸ್ಥೆ ತಲುಪಿದಾಗ ಇದೇ ಮಹಾಶಕ್ತಿ ಮೊದಲು ಬ್ರಹ್ಮನ ಬಳಿ ಹೋಗಿ ತನ್ನನ್ನು ವಿವಾಹವಾಗುವಂತೆ ಕೇಳಿಕೊಂಡಳಂತೆ. ತಾಯಿಯ ಕೋರಿಕೆ ತಿಳಿದ ಬ್ರಹ್ಮ ಗಾಬರಿಗೊಂಡು ನಿರಾಕರಿಸಿದಾಗ, ಕುಪಿತಗೊಂಡ ಆಕೆ ಅವನನ್ನು ಸುಟ್ಟು ಬೂದಿ ಮಾಡಿದಳಂತೆ. ಅನಂತರ ವಿಷ್ಣುವಿನ ಬಳಿ ಇದೇ ಬೇಡಿಕೆ ಇಟ್ಟು ಅವನೂ ಒಪ್ಪದಾಗ, ವಿಷ್ಣುವೂ ಬೂದಿಯಾದ. ಅನಂತರ ಶಿವನ ಬಳಿ ಆಕೆ ಮದುವೆಯಾಗುವಂತೆ ಕೇಳಿದಾಗ, ಶಿವ ಅವಳ ಮೂರನೆಯ ಕಣ್ಣಿನ ಶಕ್ತಿಯನ್ನು ತನಗೆ  ಧಾರೆ ಎರೆದರೆ ಆಗಬಹುದು ಎಂದು ಒಪ್ಪಿದನಂತೆ. ಅದರಂತೆ ಆಕೆಯ ತ್ರಿನೇತ್ರದ ಶಕ್ತಿ ಪಡೆದ ಶಿವ, ಅವಳನ್ನು ಸುಟ್ಟು ಬೂದಿ ಮಾಡಿ, ಅದನ್ನು ಮೂರು ಗುಡ್ಡೆ ಮಾಡಿ, ಅದರಿಂದ ಸರಸ್ವತಿ, ಲಕ್ಷ್ಮೀ ಮತ್ತು ಸತಿಯನ್ನು ಸೃಷ್ಟಿ ಮಾಡಿದನಂತೆ. ಅವರನ್ನು ತ್ರಿಮೂರ್ತಿಗಳು ಮದುವೆಯಾದ  ಕುತೂಹಲಕರ ಕಥೆಯನ್ನು ಗುರು ವೀಣಾ, ಸುಂದರ ಅಭಿನಯ ಸಹಿತ ನಿರೂಪಿಸಿದರು. ಸೃಷ್ಟಿಕರ್ತನ ಸೃಷ್ಟಿ ರಹಸ್ಯದ ಈ ಕಥೆ ನಿಜಕ್ಕೂ ಆಸಕ್ತಿ ಕೆರಳಿಸಿತು.

ಗುರು-ಶಿಷ್ಯೆಯರು ಈ ಇಡೀ ಕಥಾನಕವನ್ನು ನಾಟಕೀಯ ದೃಶ್ಯಗಳಿಂದ,  ನರ್ತನದ ಮೋಹಕತ್ವದಿಂದ ಮನಂಬುಗುವಂತೆ ಅಭಿನಯಿಸಿದರು. ವೀಣಾ, ಸೂತ್ರಧಾರನಾಗಿ ಕಥೆ ನಿರೂಪಿಸುವುದರೊಂದಿಗೆ, ವಿವಿಧ ಪಾತ್ರಗಳ ಅಭಿನಯ ಹಾಗೂ ಅದಕ್ಕೆ ಪೂರಕವಾದ ಅಂಗಿಕಾಭಿನಯವನ್ನು, ನಡೆಗಳಿಗೆ ಅನುಗುಣವಾಗಿ ಸಾಗುವ ವಿವಿಧ ತಾಳಗಳ ಮಜಲುಗಳಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದರು. ಬಹುಜನರಿಗೆ ಅಷ್ಟಾಗಿ ಪರಿಚಿತವಲ್ಲದ ‘ಕೂಚಿಪುಡಿ ಯಕ್ಷಗಾನ’ದ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಅಭಿನಂದನಾರ್ಹ.

‘ಸ್ಥಿತಿ’ಯ ಮಹತ್ವವನ್ನು ಎತ್ತಿ ಹಿಡಿವ ದಶಾವತಾರದ ಸುಂದರ ರೂಪಕವನ್ನು ಪ್ರಸ್ತುತಪಡಿಸಿದವರು ‘’ನೂಪುರ’’ ಖ್ಯಾತಿಯ ಗುರು ಡಾ . ಲಲಿತಾ ಶ್ರೀನಿವಾಸನ್ ಶಿಷ್ಯೆಯರಾದ ನಿಖಿಲಾ ಬಾಲಾಜಿ ಮತ್ತು ಬೆಳ್ಳಿ ಸುರೇಶ್. ಜಯದೇವ ಕೃತ ‘ಗೀತ ಗೋವಿಂದ’ದ ಅಷ್ಟಪದಿಗೆ ‘ದಶಾವತಾರ’ವನ್ನು ಅಳವಡಿಸಿದ ನೃತ್ಯವಲ್ಲರಿ ಅಭಿನಯಪ್ರಧಾನಕ್ಕಿಂತ ಹೆಚ್ಚಾಗಿ ನೃತ್ತಾವಳಿಯಾಗಿತ್ತೆಂದೇ ಹೇಳಬಹುದು. ‘ಜಯ ಜಗದೀಶ ಹರೇ’ ಎಂಬ ಹರಿಸ್ಮರಣೆ ಜತಿಗಳ ಝೇಂಕಾರದಿಂದ ರಂಜಿಸಿತು. ಕಲಾವಿದೆದ್ವಯರು ಸಾಮರಸ್ಯದಿಂದ ಲವಲವಿಕೆಯಿಂದ ನರ್ತಿಸಿದರು. ನೃತ್ಯ ವ್ಯಾಕರಣವನ್ನು ಚಾಚೂತಪ್ಪದೆ ಅನುಸರಿಸಿದ ನಾಟ್ಯ ನಿರಾಯಾಸವಾಗಿ ವೈವಿಧ್ಯಪೂರ್ಣ ಜತಿಗಳೊಂದಿಗೆ ನಿರೂಪಿತವಾಯಿತು. ರಾಗಮಾಲಿಕೆಯ ‘ದಶಾವತಾರ’ ಸೊಬಗೆನಿಸಿತು.

ಅನಂತರ ಹಿರಿಯ ನೃತ್ಯಜ್ಞೆ ಲಲಿತಾ ಶ್ರೀನಿವಾಸನ್ ಆಸನದಲ್ಲಿ ಕುಳಿತುಕೊಂಡೇ ಗೋವರ್ಧನ ಗಿರಿಧಾರಿಯ ಅನಂತ ವಿಸ್ಮಯದ ಭಾವಗಳನ್ನು ತಮ್ಮ ಪ್ರೌಢ ಅಭಿನಯದಿಂದ ಮೈಸೂರು ಶೈಲಿಯ ವಿಶಿಷ್ಟ ಛಾಪಿನಲ್ಲಿ ಸಾಕಾರಗೊಳಿಸಿದರು. ಬಾಲಕೃಷ್ಣನು, ಧಾರಾಕಾರ ಸುರಿಯುತ್ತಿದ್ದ ಮಳೆಯಿಂದ ಪುರಜನರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಛತ್ರಿಯಂತೆ ಮೇಲೆತ್ತಿ ಸಮಸ್ತ ಪಶು-ಪ್ರಾಣಿ-ಜನತೆಯನ್ನು ಕಾಪಾಡಿದ ವಿಶಿಷ್ಟ ಪ್ರಸಂಗ ರೂಪಕಾತ್ಮಕವಾಗಿ ಬಿತ್ತರಗೊಂಡಿತು. ಪುಟ್ಟಬಾಲಕ ಜಗದೋದ್ಧಾರಕ ಶ್ರೀಕೃಷ್ಣ, ಅನಾಮತ್ತು ಗಿರಿಯನ್ನು ಮೇಲೆತ್ತಿದ ಚೋದ್ಯ ಪ್ರತಿಯೊಬ್ಬರ ಕಣ್ಣಲ್ಲೂ ವಿಭಿನ್ನ ಭಾವ, ರಸ-ರಾಗಗಳಲ್ಲಿ  ಆವಿರ್ಭವಿಸಿದ ಸುಂದರ ಚಿತ್ರಣವನ್ನು ಗುರು ಲಲಿತಾ ತಮ್ಮ ಕಣ್ಣು-ಹುಬ್ಬು, ಮುಖದ ಸ್ನಾಯುಗಳ ಅಲುಗಾಟದ ಅರ್ಥಪೂರ್ಣ ಅಭಿನಯದ ಮೂಲಕ, ಕೈಚಲನೆಯ ಆಂಗಿಕಗಳ ಮೂಲಕ ‘’ ಕೃಷ್ಣ ಕರ್ಣಾಮೃತ’ದ  ಶ್ಲೋಕವನ್ನು ದೃಶ್ಯರೂಪಕವಾಗಿ ಕಟ್ಟಿಕೊಟ್ಟರು. ತಾಯಿ ಯಶೋದೆಯ ವಾತ್ಸಲ್ಯಭಾವದ ಪ್ರೀತಿಯ ತುಂತುರು, ಗೋಪಿಕೆಯರ ಅಪರಿಮಿತ ಸಂತೋಷದ ಸೋನೆ,ಜೊತೆಗಾರ ಗೋಪಬಾಲರ ಮತ್ಸರದ ಜಿನುಗು, ಪುರಜನರ ಮೆಚ್ಚುಗೆಯ ಸಂತಸ ಪ್ರವಾಹ ಮತ್ತು ಇಷ್ಟೆಲ್ಲಾ ಪ್ರಾಕೃತಿಕ ವಿಕೋಪ ತಂದಿಟ್ಟ ಇಂದ್ರದೇವನ ಅತ್ಯಾಶ್ಚರ್ಯ ಮತ್ತು ಅಷ್ಟೇ ಆತಂಕದ ಭಾವಗಳನ್ನು ಗಾಢವಾಗಿ ಸಮಗ್ರ ಚಿತ್ರಣದಲ್ಲಿ ಕಟ್ಟಿಕೊಡಲಾಗಿದ್ದು ಸ್ತುತ್ಯಾರ್ಹ.

ಮುಂದೆ- ಲಯಕರ್ತ ಶಿವನ ವಿವಿಧ ರೂಪ-ಶಕ್ತಿ-ಮಹಿಮೆಗಳನ್ನು ಮನಮುಟ್ಟುವಂತೆ  ಅನಾವರಣಗೊಳಿಸಿದವರು ‘ನಾಟ್ಯ ಕಲಾಕ್ಷೇತ್ರ’ದ ಗುರುಗಳಾದ ಪ್ರಶಾಂತ್ ಶಾಸ್ತ್ರಿ, ಹೇಮಾ ಪ್ರಭಾತ್ ಮತ್ತು ಶಿಷ್ಯೆ ಕಾರುಣ್ಯ ವಸಿಷ್ಠ. ಈ ಗುರು ದಂಪತಿಗಳ ವಿಶೇಷವೆಂದರೆ ಕನ್ನಡ ಕೃತಿಗಳ ಇಂಪನ್ನು ಪಸರಿಸುತ್ತ, ಕನ್ನಡದ ಪೆಂಪನ್ನು ಎತ್ತಿ ಹಿಡಿವ ಕಣ್ಮನ ತಂಪಿನ ಕೃತಿಗಳನ್ನು ಜನಪ್ರಿಯಗೊಳಿಸುತ್ತ ತಮ್ಮ ‘ಅಸ್ಮಿತೆ’ಯನ್ನು ಬೆಳೆಸಿಕೊಂಡು ಬರುತ್ತಿರುವುದು. ಅವರು ಪ್ರಸ್ತುತಪಡಿಸಿದ ಕೃತಿಗಳ ರಚನೆ- ವಿದುಷಿ ದ್ವಾರಕೀ ಕೃಷ್ಣಸ್ವಾಮಿ, ಬಾಲಸುಬ್ರಮಣ್ಯ ಶರ್ಮ ಮತ್ತು ಜಿ. ಗುರುಮೂರ್ತಿ ಅವರದು.

ಮೊದಲಿಗೆ ಪ್ರಶಾಂತ್ ‘ಆನಂದ ತಾಂಡವ’ದ ಹಾಸು ಬೀಸಿನಲ್ಲಿ ನಟರಾಜನ ವೈವಿಧ್ಯ ರೂಪ-ಶಕ್ತಿಗಳಿಗೆ ಕನ್ನಡಿ ಹಿಡಿದರು. ಅಂಗಶುದ್ಧವಾದ ನರ್ತನ ನೋಡಲು ಖುಷಿ ತಂದರೆ, ಅಚ್ಚುಕಟ್ಟಾದ ನೃತ್ತಗಳ ವೈಖರಿ ಮೋಡಿ ಮಾಡಿತು. ಭಕ್ತಿಪೂರ್ವಕವಾಗಿ ಸಲ್ಲಿಸಿದ ನೃತ್ಯ ನೈವೇದ್ಯ ‘ಶಂಭೋ ಪರಮ ದಯಾಕರ’ನ ಅರ್ಧನಾರೀಶ್ವರ ಭಂಗಿಗಳು, ಆಕಾಶಚಾರಿ, ಪರಿಪೂರ್ಣ ಅರೆಮಂಡಿಯ ಲವಲವಿಕೆಯ ಆಂಗಿಕ ಚಲನೆಗಳು, ರಂಗದ ಸಮರ್ಥ ಬಳಕೆ ಪ್ರಶಾಂತ್ ಅವರ ನರ್ತನವನ್ನು ಸುಮನೋಹರತೆಯ ಔನ್ನತ್ಯಕ್ಕೆ ಕೊಂಡೊಯ್ದವು. ಆನಂದ ತಾಂಡವೇಶ್ವರನ ದರ್ಶನದಿಂದ ಭಕ್ತ ರೋಮಾಂಚಿತನಾದ ಕ್ಷಣಗಳನ್ನು ಪ್ರಶಾಂತ್,  ಸುಂದರವಾಗಿ ಘನೀಕರಿಸಿದರು.

ಅನಂತರ ಪರ್ವತ ರಾಜಕುಮಾರಿ ಪಾರ್ವತಿಯಾಗಿ ಕಲಾವಿದೆ ಹೇಮಾ, ತಮ್ಮ ನಾಜೂಕು ನಡೆ, ವಯ್ಯಾರ, ಲಜ್ಜಿತ ಮುಖಭಾವದಿಂದ ಸುಂದರವಾಗಿ ಹೊರಹೊಮ್ಮಿದರು. ಅಭಯಂಕರಿ ಗೌರೀದೇವಿಯ ಗುಣ ವಿಶೇಷಗಳ ವರ್ಣನೆಯನ್ನು ತಮ್ಮ ನುರಿತ ಸುಂದರಾಭಿನಯದಿಂದ ಸೆರೆ ಹಿಡಿದರು. ಪಾರ್ವತಿಯ ಪ್ರತಿಗುಣಗಳೂ ಸಮರ್ಥ ಆಂಗಿಕಾಭಿನಯ, ಹಸ್ತಚಲನೆಗಳಿಂದ ಪ್ರತಿಫಲಿಸಿದವು. ಸಿಂಹವಾಹಿನಿ, ಮೋದಕರಿ, ಶಾಂಭವಿ ಮುಂತಾದ ಪಾರ್ವತಿಯ ನಾಮಗಳೇ ಮುದವನ್ನು ಸಿಂಚನಗೊಳಿಸಿದವು.

ಅನಂತರ ಶಿವ ಪಾರ್ವತಿಯರು ಒಂದಾಗಿ ನರ್ತಿಸಿ, ಅರ್ಧನಾರೀಶ್ವರರ ಸಮನ್ವಯತೆಯನ್ನು ಸಾರಿದ್ದು ಅನನ್ಯವಾಗಿತ್ತು. ಅಂತ್ಯದಲ್ಲಿ ಕಾರುಣ್ಯ ಪ್ರಸ್ತುತಪಡಿಸಿದ ‘ ಕಂಡೆ ಕರುಣಾನಿಧಿಯ’ ದೇವರನಾಮ ಅತ್ಯಂತ ಮನೋಜ್ಞವಾಗಿ ಮೂಡಿಬಂತು. ಪ್ರತಿಭಾನ್ವಿತ ಕಲಾವಿದೆಯ ಲೀಲಾಜಾಲ ಅಭಿನಯ ಕೌಶಲ್ಯ , ನೃತ್ತ ನಿರ್ವಹಣೆಯ ಸೌಂದರ್ಯಕ್ಕೆ ಅವಳ ರಮ್ಯ ನರ್ತನ ಸಾಕ್ಷಿಯಾಯಿತು.

ಎದುರಿಗೆ ರಸಿಕರು ಉಪಸ್ಥಿತರಿದ್ದು, ನೃತ್ಯದ ರಸಾಸ್ವಾದನೆ ಮಾಡುತ್ತಿರುವರೆಂಬ ಭಾವದಲ್ಲಿ ನರ್ತಿಸಿದ ಎಲ್ಲ ನೃತ್ಯ ಕಲಾವಿದರೂ ಶ್ಲಾಘ್ಯಾರ್ಹರು. ನಾಟ್ಯಕಲಾಕ್ಷೇತ್ರದ ಈ ಸಫಲ ಪ್ರಯೋಗ ಅನುಕರಣೀಯ.

                                     **********

Related posts

ಸಂಸ್ಕೃತಿಯ ಮುದ ನೀಡಿದ ನೃತ್ಯ ಸಂಭ್ರಮ

YK Sandhya Sharma

ಅಪೂರ್ವ ಭಂಗಿಗಳ ಚೇತೋಹಾರಿ ನೃತ್ತಾಭಿನಯ

YK Sandhya Sharma

ಶಾಲಿವಾಹನ ಸುಂದರ ನೃತ್ಯರೂಪಕ

YK Sandhya Sharma

Leave a Comment

This site uses Akismet to reduce spam. Learn how your comment data is processed.