Image default
Dancer Profile

ಬಹುಮುಖ ಪ್ರತಿಭೆಯ ನೃತ್ಯ ಕಲಾವಿದೆ ಕಲಾವತಿ

ಹೆಸರಿಗೆ ತಕ್ಕಂತೆ ವಿವಿಧ ಕಲೆಗಳನ್ನು ತೆಕ್ಕೆಗೆ ತೆಗೆದುಕೊಂಡು, ಸಾಧಕಪಥದಲ್ಲಿ ಕ್ರಮಿಸುತ್ತಿರುವ ಕಲಾವತಿ ನಡೆದು ಬಂದ ಹಾದಿ ಹೂವಿನ ಹಾಸಿಗೆಯದ್ದಲ್ಲ. ಮಡಿಕೇರಿಯಲ್ಲಿ ಹುಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಪ್ರದೇಶದಿಂದ ಬಂದ ಈಕೆ ಬೆಂಗಳೂರಿನಂಥ ಬೃಹತ್ ನಗರದಲ್ಲಿ ಕಾಲೂರಿ ನಿಂತು ತನ್ನದೇ ಆದ ಸ್ವಂತ ದುಡಿಮೆ, ಅಸ್ಮಿತೆಯನ್ನು ದಾಖಲಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ ಪ್ರಯತ್ನ. ಕಳೆದ ಇಪ್ಪತ್ತೈದು ವರುಷಗಳಿಂದ ನೃತ್ಯಕ್ಷೇತ್ರದಲ್ಲಿ ಸಾಧನೆಯ ದಾರಿಯಲ್ಲಿ ಕ್ರಮಿಸುತ್ತಿದ್ದಾರೆ.  

ಮೂಲತಃ ಇವರದು ಚಿಕ್ಕಮಗಳೂರು.ತಂದೆಯ ಮುಖವನ್ನೂ ನೋಡಿದ ನೆನಪಿರದ ಕಲಾವತಿಗೆ ತಾಯಿ ಸುಲೋಚನರೇ ಸರ್ವಸ್ವ. ಸ್ವಾಭಿಮಾನಿ ತಾಯಿ, ಮಗಳಲ್ಲಿ ಬಿತ್ತಿದ ಗುಣಗಳೆಂದರೆ, ಧೈರ್ಯ, ಕಠಿಣ ಪರಿಶ್ರಮ, ಸಾಹಸ ಮತ್ತು ಸ್ವಾಭಿಮಾನದ ಮಂತ್ರ. ಮನೆಯಲ್ಲಿ ಆರ್ಥಿಕವಾಗಿ ತೊಂದರೆಯಿದ್ದರೂ, ಕಲಾವತಿ, ತನ್ನ ಯಾವ ಕನಸುಗಳನ್ನೂ ಹೊಸಕಿಹಾಕಲು ಸಿದ್ಧಳಿರಲಿಲ್ಲ. ಹಾಡು, ನಾಟಕ-ನೃತ್ಯ ಮುಂತಾದ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸೈ.

ತಾಯಿ ಪ್ರೋತ್ಸಾಹಿಸಿದ್ದರಿಂದ ಬಾಲಕಿ ಕಲಾವತಿ ಗುರು ವತ್ಸಲಾ ಸತೀಶ್ ಅವರಲ್ಲಿ ಭರತನಾಟ್ಯ ಮತ್ತು ಕಥಕ್ ಕಲಿಯಲು ಆರಂಭಿಸಿದರು. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಜಯಶೀಲರಾಗಿ ಜಿಲ್ಲೆಯಾದ್ಯಂತ ನೃತ್ಯಕಾರ್ಯಕ್ರಮ ನೀಡತೊಡಗಿದರು. ಶಾಲೆಯ ನಾಟಕ, ನೃತ್ಯ ಕಾರ್ಯಕ್ರಮಗಳಲ್ಲೂ ಭಾಗಿ.

ಮುಂದೆ ಮಣಿಪುರಿ ನೃತ್ಯವನ್ನು ಗುರು ಸ್ಯಾಮಲ್ ಮತ್ತು ಒಡಿಸ್ಸಿ ನೃತ್ಯವನ್ನು ಲಲಿತಾ ಶ್ರೀನಿವಾಸ ಅವರಿಂದ ಕಲಿತು ಬಹುನೃತ್ಯ ಶೈಲಿಯ ನರ್ತನ ರೂಢಿಸಿಕೊಂಡರು. ನಾಡಿನಲ್ಲೆಡೆ ಕಾರ್ಯಕ್ರಮ ನೀಡತೊಡಗಿದರು.  

ಹಲವಾರು ಸ್ಥಳೀಯ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಲಾರಸಿಕರ ಮೆಚ್ಚುಗೆ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಗಳಿಸಿರುವುದು ವಿಶೇಷವೇ ಸರಿ. ನೃತ್ಯದೊಂದಿಗೆ ಬಾಲ್ಯದಿಂದಲೂ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ. ಹಿಂದಿ ಮತ್ತು ಕನ್ನಡ ನಾಟಕಗಳು ಹಾಗೂ ಬೀದಿನಾಟಕಗಳಲ್ಲಿ ನಟಿಸಿರುವುದರೊಂದಿಗೆ, ಹಲವು ಕೇಬಲ್ ಟಿವಿಗಳಲ್ಲಿ ನಿರೂಪಕಿಯಾಗಿಯೂ ತೊಡಗಿಸಿಕೊಂಡು ಕಲಾವತಿ ತಮ್ಮ ಬಹುಮುಖ ಪ್ರತಿಭೆ ಪ್ರದರ್ಶಿಸಿದ್ದಾರೆ.

ಅತ್ಯಂತ ಉತ್ಸಾಹದ ಸ್ವಭಾವ ಮೈಗೂಡಿಸಿಕೊಂಡಿರುವ ಕಲಾವತಿ ಚೈತನ್ಯದ ಚಿಲುಮೆ. ಏನಾದರೂ ಮಹತ್ತನ್ನು ಸಾಧಿಸುವ ಹಂಬಲ-ಮಹತ್ವಾಕಾಂಕ್ಷೆ. ಇದಕ್ಕಾಗಿ ಎಷ್ಟು ಶ್ರಮ-ಪ್ರಯತ್ನಗಳಿಗೂ ಸಿದ್ಧರಾದ ಈಕೆ ತನ್ನತನದ ಅಭಿವ್ಯಕ್ತಿಗೆ ಹಲವಾರು ಮಾರ್ಗಗಳ ಅನ್ವೇಷಣೆಗೆ ತೊಡಗಿದರು. ಗೊತ್ತಿಲ್ಲದ ಬೆಂಗಳೂರಿನಂಥ ನಗರಕ್ಕೆ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವ ಈ ಕಲಾವಿದೆಯ ಪ್ರಯತ್ನ ಅಚ್ಚರಿ ಮೂಡಿಸದೇ ಇರದು.

ಕಲೆಯ ಹಲವು ವಿಭಾಗಗಳಲ್ಲಿ ತರಬೇತಿ-ಜ್ಞಾನ ಸಂಪಾದಿಸಲು ಸಾಹಸ ಮಾಡಿದ್ದು ಸಣ್ಣದೇನಲ್ಲ. ನಾಟಕ-ನೃತ್ಯಗಳಿಗೆ ಅವಶ್ಯಕವಾದ ಪ್ರಸಾಧನ  ತರಬೇತಿ, ಹೆಚ್ಚಿನ ಜ್ಞಾನಕ್ಕಾಗಿ ಹೆಗ್ಗೋಡಿನ `ನೀನಾಸಂ’ ನಡೆಸುವ ಕಾರ್ಯಶಿಬಿರಗಳಲ್ಲಿ ರಂಗತಾಲೀಮು ಗಳಿಸಿ, ನಾಟಕಗಳಲ್ಲಿ ಅಭಿನಯಿಸುತ್ತಾ, ರಂಗಭೂಮಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕಿರುಚಿತ್ರಗಳಿಗೆ ಕಂಠದಾನ ಮಾಡಿ ‘ಡಬ್ಬಿಂಗ್ ಆರ್ಟಿಸ್ಟ್’ ಎಂಬ ಅಭಿದಾನವನ್ನೂ ತಮ್ಮದಾಗಿಸಿಕೊಂಡಿರುವ ಇವರಿಗೆ ಮೂರು ಚಲನಚಿತ್ರಗಳಲ್ಲಿ ನಟಿಸಿದ ಅನುಭವವೂ ಲಭಿಸಿದೆ.

ಪಾದರಸದಂತೆ ಸದಾ ಚಟುವಟಿಕೆಯ ಬುಗ್ಗೆಯಾಗಿರುವ ಕಲಾವತಿ, ಟಿ.ವಿ.ವಾಹಿನಿಗಳಲ್ಲಿ ನೃತ್ಯ ಕಾರ್ಯಕ್ರಮ ಜೊತೆಗೆ ಹಲವು ಡಾನ್ಸ್ ರಿಯಾಲಿಟಿ ಶೋಗಳಲ್ಲೂ  ಭಾಗವಹಿಸಿರುವುದು ಶ್ಲಾಘ್ಯಾರ್ಹ. ರಂಗದ ಮೇಲೆ ಉತ್ತಮ ನೃತ್ಯಕಲಾವಿದೆಯಾಗಿ ಗಮನ ಸೆಳೆವ ಕಲಾವತಿ ‘ನೃತ್ಯ ಸಂಯೋಜನೆ’ಯಲ್ಲೂ ಪರಿಶ್ರಮಿಸಿದ್ದಾರೆ.

ಉಡುಪುಗಳನ್ನು ವಿನ್ಯಾಸ ಮಾಡುವ ಕೌಶಲ್ಯವುಳ್ಳ ಇವರು, ಇದೀಗ ತಮ್ಮದೇ ಆದ ಕಾಸ್ಟ್ಯೂಮ್ ಸೆಂಟರ್ ತೆರೆದಿದ್ದಾರೆ. ಸ್ವಂತ ನೃತ್ಯಶಾಲೆ ” ನಾಟ್ಯಕಲಾ ಸಾಂಸ್ಕೃತಿಕ ಕೇಂದ್ರ’’ದಲ್ಲಿ ಅನೇಕ ಮಕ್ಕಳಿಗೆ ನೃತ್ಯಶಿಕ್ಷಣ ನೀಡುತ್ತಿದ್ದಾರೆ. ಈ ಮಧ್ಯೆ ಒಂದೆರಡು ಖಾಸಗಿ ಶಾಲೆಗಳಲ್ಲಿ ನೃತ್ಯಗುರುವಾಗಿ ಉದ್ಯೋಗವನ್ನೂ ಮಾಡಿದ್ದೂ ಇದೆ. ಈಗಲೂ ಶಾಲೆಯೊಂದರಲ್ಲಿ ನೃತ್ಯ ಕಲಿಸುವ ಕಾಯಕ ಮಾಡುತ್ತಿದ್ದಾರೆ.

ಓದಿನಲ್ಲೂ ಹಿಂದೆ ಬೀಳದ ಈಕೆ ಹಿಂದೀ ಎಂ.ಎ. ಪದವೀಧರೆ. ಜೊತೆಗೆ ಬಿ.ಎಡ್. ಆಗಿದೆ. ಕಲೈ ಕಾವೇರಿ ವಿಶ್ವ ವಿದ್ಯಾಲಯದಿಂದ ಸದ್ಯ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ನಡೆಸಿದ್ದಾರೆ.

ಭರತನಾಟ್ಯದ ನಟುವಾಂಗ ಕಲಿಯುತ್ತಿರುವ ಇವರಿಗೆ ಬಂದಿರುವ ಹಲವಾರು ಪ್ರಶಸ್ತಿಗಳ ಪಟ್ಟಿ ತುಂಬಾ ದೊಡ್ಡದು. ನೃತ್ಯ ಕಲಾವಿದೆಯಾಗಿ ಗಳಿಸಿರುವ ಅನೇಕಾನೇಕ ಪ್ರಶಸ್ತಿಗಳೊಂದಿಗೆ ರಂಗಭೂಮಿಯ ಸೇವೆಗಾಗಿ ಸಿ.ಜಿ.ಕೆ ರಂಗವಸಂತ ಪ್ರಶಸ್ತಿ, ಕನ್ನಡ ರತ್ನ, ಕಲಾರತ್ನ, ಯುವ ಸಾಧಕಿ, ನಾಟ್ಯ ಮಯೂರಿ ಬಿರುದು, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಜೊತೆಗೆ ಜಿಲ್ಲಾಮಟ್ಟದ ಅನೇಕ ನೃತ್ಯಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದ ಕಲಾವತಿ ಬೆಂಗಳೂರು ದೂರದರ್ಶನ ಆಯೋಜಿಸಿದ್ದ ‘ಹೆಜ್ಜೆಗೊಂದು ಗೆಜ್ಜೆ’ ನೃತ್ಯಸ್ಪರ್ಧೆಯಲ್ಲಿ ಬಹುಮಾನ. 

ಇವಲ್ಲದೆ ಇನ್ನೂ ಸಂದಿರುವ ಪ್ರಶಸ್ತಿಗಳಲ್ಲಿ ಪ್ರಮುಖವಾದವು- ಬೆಂಗಳೂರು ಮಹಾನಗರ ಪಾಲಿಕೆಯ ‘’ಕೆಂಪೇಗೌಡ ಪ್ರಶಸ್ತಿ’’, ಸುವರ್ಣ ಟಿ.ವಿ. ಮತ್ತು ಕನ್ನಡಪ್ರಭ ಪತ್ರಿಕೆಯ ‘’ಮಹಿಳಾ ಸಾಧಕಿ’’ ಪ್ರಶಸ್ತಿ ಮತ್ತು ದೆಹಲಿ ಕರ್ನಾಟಕ ಸಂಘದ ‘’ಭಾರತ್ ಭೂಷಣ್ ‘’ಪ್ರಶಸ್ತಿ ಮುಂತಾದವು.

                          

  •       

Related posts

ಸೃಜನಶೀಲ ನೃತ್ಯಕಲಾವಿದೆ ಪೂರ್ಣಿಮಾ ರಜನಿ

YK Sandhya Sharma

ಮನಾಕರ್ಷಿಸುವ ಕಥಕ್ ನೃತ್ಯಪ್ರತಿಭೆ ಶ್ರೇಯಾ.ಪಿ.ವತ್ಸ

YK Sandhya Sharma

ಕೃಷಾಲ-ಕಥಕ್ ನೃತ್ಯಶಾಲೆ-ಅಂತರ್ಜಾಲದ ನೃತ್ಯ ತರಬೇತಿ

YK Sandhya Sharma

Leave a Comment

This site uses Akismet to reduce spam. Learn how your comment data is processed.