Image default
Dance Reviews

‘ಭರತದರ್ಶನ’ದ ಮನಸೆಳೆದ ರಮ್ಯನರ್ತನ

ಅಂತರರಾಷ್ಟ್ರೀಯ ಖ್ಯಾತಿಯ ‘’ ಭರತ ದರ್ಶನ ಸ್ಕೂಲ್ ಆಫ್ ಡಾನ್ಸ್’’ ನೃತ್ಯಶಾಲೆಯ ಜೀವನಾಡಿ ವಿದುಷಿ ನಾಗಮಣಿ ಶ್ರೀನಿವಾಸರಾವ್. ‘ಕಲಾಕ್ಷೇತ್ರ ಬಾನಿ’ಯಲ್ಲಿ ನುರಿತ ಪ್ರಸಿದ್ಧ ನಾಟ್ಯಗುರು, ಸಂಗೀತಗಾರ್ತಿ ಮತ್ತು ನಟುವನ್ನಾರ್ ಆಗಿ ವೈಶಿಷ್ಟ್ಯ ಪಡೆದವರು. ಕಲಾಕ್ಷೇತ್ರ ಖ್ಯಾತಿಯ ಪದ್ಮಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ ಮತ್ತು ಕೆ. ರಾಮರಾವ್ ಸಹೋದರಿ. ತಮ್ಮ ಏಳನೆಯ ವಯಸ್ಸಿಗೇ ಭರತನಾಟ್ಯ ಕಲಿಯಲಾರಂಭಿಸಿದ ಈಕೆ, ಮದರಾಸ್ ವಿಶ್ವ ವಿದ್ಯಾಲಯದಿಂದ ಸಂಗೀತದಲ್ಲಿ ಪದವಿ ಪಡೆದವರು. ‘ನೃತ್ಯ ಕಲೈವಾಣಿ’ ಎಂದು ನಾಟ್ಯಾಂಜಲಿ ಟ್ರಸ್ಟ್ ನಿಂದ ಬಿರುದಾಂಕಿತರಾದ ಇವರು, ಸತತ ನೃತ್ಯಾರಾಧನೆಯಿಂದ ವಿದ್ಯೆಯನ್ನು ಕರಗತ ಮಾಡಿಕೊಂಡವರು, ಸಾವಿರಾರು ನೃತ್ಯಾಕಾಂಕ್ಷಿಗಳಿಗೆ ಕಲಾಜ್ಞಾನವನ್ನು ನಿರ್ವಂಚನೆಯಿಂದ, ಬದ್ಧತೆಯಿಂದ ಧಾರೆ ಎರೆದವರು. ಯು.ಎಸ್.ಎ.,ಕೆನಡಾ, ಆಸ್ಟ್ರೇಲಿಯಾ, ಮಲೇಶಿಯಾ,ಸಿಂಗಾಪುರ, ಶ್ರೀಲಂಕಾ, ವೆಸ್ಟ್ ಇಂಡೀಸ್, ಫ್ರಾನ್ಸ್ ಮತ್ತು ಜರ್ಮನಿ ಇತ್ಯಾದಿ ಸ್ಥಳಗಳಲ್ಲಿ ವಿಶ್ವದಾದ್ಯಂತ ನೃತ್ಯ ಕಾರ್ಯಕ್ರಮಗಳನ್ನು, ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಇಂದು ಇವರ ಶಿಷ್ಯರು ಅಂತರರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ ನೃತ್ಯ ಕಲಾವಿದರು ಮತ್ತು ಗುರುಗಳಾಗಿ ಇವರನ್ನು ಅಮರರನ್ನಾಗಿಸಿದ್ದಾರೆ.

ಭರತನಾಟ್ಯ ಕ್ಷೇತ್ರದಲ್ಲಿ ಅತ್ಯಂತ ಹಿರಿಯ ಗುರುಗಳಾಗಿ ಗೌರವ ಪಡೆದಿರುವ ನಾಗಮಣಿ ತಮ್ಮ ವಿಶಿಷ್ಟ ನೃತ್ಯಸಂಯೋಜನೆಗಳಿಗೆ ಮತ್ತು ಬದ್ಧತೆಯ ನಾಟ್ಯಶಿಕ್ಷಣಕ್ಕೆ ಹೆಸರಾದವರು. ಕಳೆದ ಮೂರುದಶಕಗಳಿಂದ ‘ಭಾವ-ರಾಗ-ತಾಳ’ಗಳ ‘ಸಮನ್ವಯ’ ನೃತ್ಯಕಾರ್ಯಕ್ರಮವನ್ನು ನಿರಂತರ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ‘ಮಣಿ ಅಕ್ಕ’ ಅವರ ಸುಶ್ರಾವ್ಯ ನಟುವಾಂಗ ಕೂಡ ಪ್ರಸ್ತುತಿಯ ಗಮನಾರ್ಹಾಂಶ.

ಕೆ.ಹೆಚ್. ಕಲಾಸೌಧದಲ್ಲಿ ನಡೆದ ಸಮನ್ವಯ ನೃತ್ಯಕಾರ್ಯಕ್ರಮ ವೈವಿಧ್ಯಪೂರ್ಣ ಕೃತಿಗಳ ಆಯ್ಕೆ ಮತ್ತು ಸುಮನೋಹರ ಪ್ರಸ್ತುತಿಯಿಂದ ರಸಿಕರನ್ನು ರಂಜಿಸಿತು. ಪುಟ್ಟಮಕ್ಕಳಿಂದ ಹಿಡಿದು ಹಿರಿಯ ಶಿಷ್ಯರವರೆಗೂ ಅವಕಾಶ ಮಾಡಿಕೊಟ್ಟ ಗುರುಗಳ ‘ಸಮನ್ವಯ’ ದೃಷ್ಟಿ ಗಮನ ಸೆಳೆಯಿತು. ಮೊದಲಿಗೆ ‘ಗಣೇಶ ವಂದನ’ದಲ್ಲಿ ಮುದ್ದಾಗಿ ಕಾಣುತ್ತಿದ್ದ ಪುಟಾಣಿಗಳು ಖಚಿತ ಹಸ್ತಮುದ್ರೆ-ಚಲನೆಗಳಿಂದ ‘ಮೂಷಿಕ ವಾಹನ’ನಿಗೆ ನಮನ ಸಲ್ಲಿಸಿದ ಬಗೆ ಮುದತಂದಿತು. ‘ಗಣೇಶ ಕೌತ್ವಂ’ ಕೃತಿಯನ್ನು ಕಲಾವಿದೆಯರು ಬಹು ಸಾಮರಸ್ಯದಿಂದ ಜತಿಗಳನ್ನು ನಿರೂಪಿಸುತ್ತ, ಗಣಪನ ಸ್ವರೂಪವನ್ನು ನಾನಾ ಆಂಗಿಕಗಳಿಂದ ಸಾದರಪಡಿಸಿದರು. ಶಿಸ್ತು-ಅಚ್ಚುಕಟ್ಟು ಪ್ರಧಾನವಾಗಿ ಕಂಡಿತು. ಪುಟ್ಟಮಕ್ಕಳಿಗೆ ನೃತ್ತಗಳ ಖಾಚಿತ್ಯದ ಬಗ್ಗೆ ಶಿಸ್ತಿನ ತರಬೇತಿ ನೀಡಿರುವ ಗುರುಗಳ ನಾಟ್ಯಶಿಕ್ಷಣದ ವೈಶಿಷ್ಟ್ಯವನ್ನು ಗುರುತಿಸಬಹುದಾಗಿತ್ತು.

ಮುಂದಿನ ಹಂಸಧ್ವನಿ ರಾಗದ ‘ಸ್ವರಾಂಜಲಿ’ ಯಲ್ಲಿ ಪುಟಾಣಿಗಳು ಕೈಯಲ್ಲಿ ದೀಪದ ಹಣತೆಗಳನ್ನು ಹಿಡಿದು, ನಾಜೂಕಾಗಿ ಹೆಜ್ಜೆಗಳನ್ನಿರಿಸುತ್ತ ಸರಳ ನೃತ್ತಗಳಾದರೂ ಸುಂದರವಾಗಿ ಪ್ರಸ್ತುತಪಡಿಸಿದರು. ಕವಿ ಅಣ್ಣಮಾಚಾರ್ಯರ ‘’ತೋಡಯ ಮಂಗಳಂ’’ ರಾಮ ಹಾಗೂ ಕೃಷ್ಣ ಸಂಕೀರ್ತನೆ, ಹಿರಿಯ ಕಲಾವಿದೆಯರ ಸುಭಗ ನೃತ್ತಗಳ ರಮ್ಯ ಪ್ರಸ್ತುತಿಯಲ್ಲಿ, ನಾಗಮಣಿಯವರ ವಿಶಿಷ್ಟ ಸಂಯೋಜನೆಯಲ್ಲಿ ಆಕರ್ಷಕವಾಗಿ ಮೂಡಿಬಂತು. ‘ ಜಯ ಜಾನಕೀ ರಮಣ, ಜಯ ವಿಭೀಷಣ ಶರಣ ’ ಎಂಬ ಸುಶ್ರಾವ್ಯ ಗಾಯನ ( ಭಾರತೀ ವೇಣುಗೋಪಾಲ್) ದ ಪ್ರತಿಸಾಲಿಗೂ ಅನ್ವರ್ಥಕ ಆಂಗಿಕದ ಬೆಡಗಿನಲ್ಲಿ ಕಲಾವಿದೆಯರು ಸಾಮರಸ್ಯದಿಂದ ನರ್ತಿಸಿದ್ದು ಚೆಂದವೆನಿಸಿತು. ಸುಂದರಾಭಿನಯದೊಂದಿಗೆ ಹಸನ್ಮುಖದ ಮೋಹಕನೃತ್ತಗಳು ಹೊಸವಿನ್ಯಾಸದಲ್ಲಿ ಸಾದರಗೊಂಡು, ಅಂತ್ಯದ ಪಂಕಜನಾಭನ ಸುಮನೋಹರ ಭಂಗಿಯ ಪ್ರದರ್ಶನ ಆಕರ್ಷಕವಾಗಿತ್ತು.

ಮುಂದೆ ಭದ್ರಾಚಲ ರಾಮದಾಸರ ‘ಗರುಡಗಮನ ರಾ ರಾ ‘- ಕೃತಿಯ ರಸಾಭಿವ್ಯಕ್ತಿಯೊಂದಿಗೆ, ಲಯಾತ್ಮಕ ಚಲನೆಗಳ ‘ಸ್ವಾಗತಂ ಕೃಷ್ಣ..’ ಮಧುರಸ್ವರದ ನಟುವಾಂಗದೊಂದಿಗೆ ಸಂಗೀತದ ಜೇನು ಬೆರೆತ, ನರ್ತಕಿಯರ ತನ್ಮಯನೃತ್ಯ ಚುಂಬಕದಂತೆ ಮನಸೆಳೆಯಿತು. ನಡುವೆ ಪ್ರಸ್ತುತಗೊಂಡ ಸಣ್ಣ ಸಂಚಾರಿಗಳು ಪರಿಣಾಮಕಾರಿಯಾಗಿ ದ್ದವು. ‘ವರ್ಣ’ದಂತೆ ನರ್ತನ ಪ್ರತಿಭೆ ಮೆರೆದ ‘ರೂಪಮು ಚೂಚಿ…’ ಮಿಂಚಿನ ಸಂಚಾರದ ನೃತ್ತಗಳು, ಸೊಗಸಾದ ಪಾದಬೇಧಗಳ ಅಂಗಶುದ್ಧಿಯ ನರ್ತನ ಕಣ್ಣಿಗೆ ಹಬ್ಬವಾಯಿತು.

ಜಗನ್ನಾಥದಾಸರು ಬರೆದ ’ತೂಗಿರೇ ರಾಯರ, ತೂಗಿರೇ ಗುರುಗಳ’ ಸಚಿತ್ರದೃಶ್ಯಗಳಿಂದ ದೈವೀಕತೆ ಸೂಸಿತು. ತೊಟ್ಟಿಲನ್ನು ತೂಗಿದ ಅನುಭವವನ್ನು ಉಂಟುಮಾಡಿದ ನರ್ತಕಿಯರ ಅಭಿನಯ, ಚಲನೆಗಳು ಭಕ್ತಿಯಲ್ಲಿ ತೇಲಿಸಿದವು. ಮುಂದೆ ‘ಆನಂದ ನಟನ ಮಾಡುವ ತಿಲೈ’ ಚಿದಂಬರದ ಮಹತ್ವ ಮತ್ತು ಶಿವನ ವರ್ಣನೆಯನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟ ನರ್ತಕಿಯರ ಕಲಾನೈಪುಣ್ಯ ಶ್ಲಾಘ್ಯಾರ್ಹ. ಮುರುಗನ ಕುರಿತ ಕೃತಿಯಲ್ಲಿ ತೋರಿದ  ಶಿಲ್ಪಸದೃಶ ಮೋಹಕ ಭಂಗಿಗಳು, ‘ಕಂಜದಳಾಯತಾಕ್ಷಿ’ ದಲ್ಲಿ ಅಭಿವ್ಯಕ್ತವಾದ ಸಾತ್ವಿಕಾಭಿನಯ, ‘ತಿಲ್ಲಾನ’ ದ ಮುದವಾದ ನೃತ್ತ-ಚಲನೆಗಳು, ಮೈಸೂರು ದಯಾಕರ್ ಪಿಟೀಲು, ಸ್ಕಂಧಕುಮಾರ್ ಮುರಳೀಗಾನ ಮತ್ತು ವಿ.ಆರ್.ಚಂದ್ರಶೇಖರರ ಮೃದಂಗದ ನುಡಿಸಾಣಿಕೆ ಗಂಧರ್ವಲೋಕಕ್ಕೆ ಕರೆದೊಯ್ದಿತು. ಗಾಂಭೀರ್ಯ ತುಂಬಿದ ಸಂಯಮದ ಸುಂದರ ನೃತ್ಯಸಂಯೋಜನೆಯಲ್ಲಿ ಗುರು ನಾಗಮಣಿಯವರ ವೈಶಿಷ್ಟ್ಯಎದ್ದುಕಂಡಿತು.   

Related posts

ಚಿತ್ತಾಕರ್ಷಕ ನೃತ್ತ ವೈಭವ-ಮನಮೋಹಕ ಅಭಿನಯ

YK Sandhya Sharma

Yashasvi Jaana Rangapravesha Review

YK Sandhya Sharma

ರಸಾನುಭವ ನೀಡಿದ ಕನ್ನಡ ಕೃತಿಗಳ ಝೇಂಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.