Image default
Dancer Profile

ಪ್ರತಿಭಾವಂತ ಕಲಾಪ್ರಪೂರ್ಣೆ ಸುಷ್ಮಾ ಕೆ.ರಾವ್

ಬಹುಮುಖ ಪ್ರತಿಭೆಯ ನಾಟ್ಯಕೋವಿದೆ ಸುಷ್ಮಾ ರಾವ್ ಬಹು ಲವಲವಿಕೆಯ ಯುವತಿ. ಅರಳು ಹುರಿದಂತೆ ಪಟಪಟನೆ ಮಾತನಾಡುವ ವಾಗ್ಮಿ. ಸುಂದರ ರೂಪಿನ ಈ ತರುಣಿಗೆ ಒಲಿದುಬಂದ ಕಲಾರಂಗ ವಿಪುಲ ಅವಕಾಶಗಳ ಸುರಿಮಳೆಗೆರೆದಿದೆ. ವರ್ಷಗಟ್ಟಲೆ ಪ್ರಸಾರವಾದ  ಟಿವಿ ಧಾರಾವಾಹಿ ‘ಗುಪ್ತ ಗಾಮಿನಿ ಮತ್ತು ಭಾಗೀರಥಿ’ ಮುಂತಾದ ಅನೇಕ ಧಾರಾವಾಹಿಗಳಲ್ಲಿ ಉತ್ತಮ ಅಭಿನಯ ನೀಡಿದ ನಾಯಕಿ ಸುಷ್ಮಾ ಅವರನ್ನು ಗುರುತಿಸದವರಾರು?!…ಜೀನ್ಸ್, ಸೈ, ಸಕತ್ ಅತ್ತೆ-ಸೂಪರ್ ಸೊಸೆ ಮತ್ತು ಸೀರಿಯಲ್ ಸಂತೆಯಂಥ ಅನೇಕ ರಿಯಾಲಿಟಿ ಶೋಗಳಲ್ಲಿ ಕಾಣಿಸುವ ಪಾದರಸದ ನಡೆ-ನುಡಿಯ ಸೂಪರ್ ನಿರೂಪಕಿಯೂ ಇವರೇ. ಇವೆಲ್ಲಕ್ಕಿಂತ ಹೆಚ್ಚಾಗಿ ಸುಷ್ಮಾ ಭರತನಾಟ್ಯ-ಕೂಚಿಪುಡಿ ನೃತ್ಯಗಾರ್ತಿ, ವಿಶ್ವದಾದ್ಯಂತ ನೂರಾರು ನೃತ್ಯ ಪ್ರದರ್ಶನಗಳನ್ನು ನೀಡಿದ ಪ್ರತಿಭಾವಂತೆ ಎಂಬುದು ಆದ್ಯತೆಯಲ್ಲಿ ಹೆಸರಿಸಬೇಕಾದ ಪ್ರಮುಖ ಸಂಗತಿ.

ಬೆಂಗಳೂರಿನವರಾದ ಕೃಷ್ಣಮೂರ್ತಿ ರಾವ್ ಮತ್ತು ಭಾರತಿ ದಂಪತಿಗಳ ಪುತ್ರಿಯಾದ ಸುಷ್ಮಾ ಬಾಲಪ್ರತಿಭೆ. ತಮಗೆ ಹೆಣ್ಣು ಮಗುವಾಗಬೇಕು, ಅವಳನ್ನು ದೊಡ್ಡ ನೃತ್ಯಗಾರ್ತಿಯನ್ನಾಗಿ ಮಾಡಬೇಕೆನ್ನುವುದು ತಂದೆಯ ದೊಡ್ಡ ಕನಸು. ಅದಕ್ಕಾಗಿ ಅವರು ಹೆಣ್ಣುಮಗು ಕರುಣಿಸೆಂದು ಬೇಡಿಕೆ ಸಲ್ಲಿಸದ ದೇವಾಲಯ, ಚರ್ಚು, ಗುರುದ್ವಾರ ಮತ್ತು ಮಸೀದಿಗಳು ಯಾವುದೂ ಇರಲಿಲ್ಲವಂತೆ. ಫಲವಾಗಿ ಮಗಳು ಜನಿಸಿದಳಂತೆ!!. ಪುಟ್ಟಕೂಸನ್ನು ಮಡಿಲಲ್ಲಿ ಮಲಗಿಸಿಕೊಂಡು ತಪ್ಪದೆ ಎಲ್ಲ ನೃತ್ಯ ಪ್ರದರ್ಶನಗಳಲ್ಲೂ ಹಾಜರಿರುತ್ತಿದ್ದರಂತೆ. ಆಗಲೇ ಅವಳ ಕಣ್ಣು-ಕಿವಿಗಳಲ್ಲಿ ಕಲಾರವ ಝೇಂಕರಿಸಲಿ ಎಂಬ ಆಶಯ. ಎರಡು ವರ್ಷದ ಮಗು ಕೂಚಿಪುಡಿ ತರಂಗವನ್ನು ನೋಡಿಬಂದವಳು ತಟ್ಟೆಯ ಮೇಲೆ ನಿಂತು ಹೆಜ್ಜೆ ಹಾಕಿದಳಂತೆ. ಹೀಗಾಗಿ ಸುಷ್ಮಾ ನಾಲ್ಕುವರ್ಷದವಳಿ ದ್ದಾಗ ಅವಳನ್ನು ಶ್ರೀನಿವಾಸ್ ಎಂಬ ಗುರುವಿನ ಬಳಿ ಭರತನಾಟ್ಯ ಕಲಿಯಲು ಸೇರಿಸಿದರು. ಅನಂತರ ಗುರು ಶುಭಾ ಧನಂಜಯ ಅವರ ಬಳಿ ಕಲಿತಳು. ಶಾಲೆಯಲ್ಲೂ ಎಲ್ಲ ಕಾರ್ಯಕ್ರಮಗಳಲ್ಲೂ ನರ್ತಿಸಿದಳು, ಕಾಲೇಜಿನಲ್ಲೂ ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿದ್ದು ಅವಳಿಗೆ ಉತ್ತೇಜಕರವಾಯಿತು. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮಾತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆ. ಅನಂತರ ನಾಟ್ಯಗುರು ವೈಜಯಂತಿ ಕಾಶಿ ಅವರ ಬಳಿ ಕೂಚಿಪುಡಿ ನೃತ್ಯಾಭ್ಯಾಸ.

ಕಾಲೇಜಿಗೆ ಅಡಿಯಿಡುತ್ತಿದ್ದಂತೆ ಆಕೆಯ ನೃತ್ಯ ನೋಡಿದ ಸಿನಿಮಾ ನಿರ್ದೇಶಕ ಎಸ್. ನಾರಾಯಣ್ ತಮ್ಮ ‘ಭಾಗೀರಥಿ’ ಸೀರಿಯಲ್ಲಿಗೆ ಮುಖ್ಯಪಾತ್ರಕ್ಕೆ ಆರಿಸಿದರು. ವರ್ಷಗಟ್ಟಲೆ ಧಾರಾವಾಹಿ ಸರಣಿ ನಡೆಯಿತು. ಹಿಂದೆಯೇ’’ ಗುಪ್ತಗಾಮಿನಿ’’ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಕಂಡು ಖ್ಯಾತಿ ಗಳಿಸಿದ ಫಲ ಸುಷ್ಮಾಳಿಗೆ ಬೇಡಿಕೆ ಹೆಚ್ಚಾಯಿತು. ಬೀದಿಗೆ ಚಂದ್ರಮ, ಸ್ವಾತಿಮುತ್ತು, ಯಾವ ಜನ್ಮದ ಮೈತ್ರಿ, ಸೊಸೆ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಒದಗಿ ದಿನಬೆಳಗಾಗುವುದರಲ್ಲಿ ಜನಪ್ರಿಯತೆ ಮುಡಿಗೇರಿತು. ಪ್ರಮುಖ ಟಿವಿ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಪ್ರಮುಖ ನಿರೂಪಕಿಯಾದದ್ದು ಅವರ ಅದೃಷ್ಟ.

ಈ ಮಧ್ಯೆ ಆಕೆ ವಿದ್ಯಾಭ್ಯಾಸವನ್ನು ಕಡೆಗಣಿಸಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಎಸ್ಸಿ. ಪದವೀಧರೆಯಾದರು. ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯದಿಂದ ಹಿಂದೀ ವಿಷಯದಲ್ಲಿ ಎಂ.ಎ. ಪದವಿ ಗಳಿಸಿಕೊಂಡರು. ಹೆಚ್ಚಿನ ನೃತ್ಯಾಭ್ಯಾಸವನ್ನು ಖ್ಯಾತಗುರು ಬಿ.ಭಾನುಮತಿ ಅವರಲ್ಲಿ ಕಲಿತು ಇಂದಿಗೂ ಶಿಕ್ಷಣ ಅವರಲ್ಲೇ ಮುಂದುವರಿಸುತ್ತಾ ಸಾಧನೆಯ ಪಥದಲ್ಲಿ ಶ್ರಮಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಮತ್ತು ಕೇಂದ್ರ ಸರ್ಕಾರ (ಐ.ಸಿ.ಸಿ.ಆರ್. ನವದೆಹಲಿ) ದ ಸ್ಕಾಲರ್ಶಿಪ್ ಗಳನ್ನು ಪಡೆದುಕೊಂಡಿರುವುದು ಅವರ ಹೆಮ್ಮೆ.

ರೋಟರಿ ಇಂಟರ್ನ್ಯಾಷನಲ್ ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಆಯ್ಕೆಯಾದ ಸುಷ್ಮಾ, ಅರಿಜೋನಾ, ಅಮೆರಿಕಾದ್ಯಂತ ಅನೇಕ ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದ್ದು ಅವರ ವಿಶೇಷ. ರಾಜ್ಯಮಟ್ಟದ ಶಾಂಭವಿ ಸ್ಕೂಲ್ ಆಫ್ ಡಾನ್ಸ್ , ಕಲೈ ಮಗಲ್ ಸಭಾ, ತಮಿಳು ಸಂಘಂ, ರಮಣ ಮಹರ್ಷಿ ಸೆಂಟರ್ ಮುಂತಾದ ರಾಜ್ಯಮಟ್ಟದ ನೃತ್ಯಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಗಳಿಸಿದ ಅಗ್ಗಳಿಕೆ ಇವರದು.

ಹಂಪಿ, ಲಕ್ಕುಂಡಿ, ಕದಂಬ, ಸಹ್ಯಾದ್ರಿ, ಜೈಪುರ್, ಮಲಖೇಡ, ತಂಜಾವೂರು, ಕೋನಾರ್ಕ್, ಕಟಕ್ ಮುಂತಾದ ಉತ್ಸವಗಳಲ್ಲಿ ನರ್ತಿಸಿದ ಹೆಮ್ಮೆ. ನೃತ್ಯ ಶಿರೋಮಣಿ, ಆರ್ಯಭಟ, ನೃತ್ಯ ಸಂಧ್ಯಾ, ನಾಟ್ಯಕಲಾ ಪ್ರವೀಣೆ, ಗ್ಲೋಬಲ್ ಹಾರ್ಮನಿ ಪ್ರಶಸ್ತಿಗಳಲ್ಲದೆ, ಅತ್ಯುತ್ತಮ ಅಭಿನಯ ಮತ್ತು ನಿರೂಪಣೆಗೂ ಅನೇಕ ಪ್ರಶಸ್ತಿಗಳು ಸಂದಿವೆ.

ಸದಾ ಸಕ್ರಿಯರಾಗಿರುವ ಸುಷ್ಮಾ ರೋಲರ್ ಸ್ಕೇಟಿಂಗ್, ಪೇಂಟಿಂಗ್, ಪ್ರಬಂಧ ರಚನೆ, ರೇಖೀ ವಿದ್ಯೆಗಳ ಪ್ರವೀಣೆ, ಟ್ರೆಕ್ಕಿಂಗ್ ನಿಪುಣೆ. ನೃತ್ಯಚಟುವಟಿಕೆಗಳಿಗೆ ಬೆಂಬಲ ನೀಡುವ ಪತಿ ಮಧುಕರ್ ಸಾಫ್ಟ್ ವೇರ್ ಎಂಜಿನಿಯರ್ ಮತ್ತು ಪುಟ್ಟ ಮಗ ಆರ್ಯರಿಂದ ಕೂಡಿದ ಸುಮಧುರ ಸಂಸಾರ ಇವರದು.

Related posts

ಮೋಹಕ ಕೂಚಿಪುಡಿ ನೃತ್ಯಕಲಾವಿದೆ ರಾಜಶ್ರೀ ಹೊಳ್ಳ

YK Sandhya Sharma

ಮನಾಕರ್ಷಿಸುವ ಕಥಕ್ ನೃತ್ಯಪ್ರತಿಭೆ ಶ್ರೇಯಾ.ಪಿ.ವತ್ಸ

YK Sandhya Sharma

ಉತ್ಸಾಹೀ ನೃತ್ಯಪ್ರತಿಭೆ ನಾಗಶ್ರೀ ಶ್ರೀನಿವಾಸ್

YK Sandhya Sharma

Leave a Comment

This site uses Akismet to reduce spam. Learn how your comment data is processed.