ಸಾಮಾನ್ಯವಾಗಿ ರಂಗಪ್ರವೇಶಗಳಲ್ಲಿ ನೃತ್ಯ ಕಲಾವಿದೆಯರು ನರ್ತಿಸಲು ಆರಿಸಿಕೊಳ್ಳುವ ಕೃತಿಗಳ ಅನುಕ್ರಮಣಿಕೆ ಮತ್ತು ಜನಪ್ರಿಯ ಕೃತಿಗಳ ಶೀರ್ಷಿಕೆಗಳು ಒಂದೇ ಮಾದರಿಯಲ್ಲಿರುವುದನ್ನು ಗಮನಿಸಬಹುದು. ಆದರೆ ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಅಪರ್ಣಾ ಸುರೇಶ್ ರಂಗಪ್ರವೇಶದಲ್ಲಿ, ಅವರು ಆಯ್ದುಕೊಂಡ ವಿಭಿನ್ನ ಕೃತಿಗಳು ಚೇತೋ ಹಾರಿಯಾಗಿದ್ದವು. ನಾಟ್ಯಗುರು ರೇಖಾ ಜಗದೀಶ್ ಶಿಷ್ಯೆಯಾದ ಅಪರ್ಣಾ ಮೊದಲಿನಿಂದ ಕಡೆಯವರೆಗೂ ಬಹು ಲವಲವಿಕೆಯಿಂದ ನರ್ತಿಸಿದ್ದು ವಿಶೇಷವೆನಿಸಿತು.

ಪ್ರಾರಂಭಕ್ಕೆ, ಮಲಹರಿ ರಾಗ-ಆದಿತಾಳದಲ್ಲಿ ನಿಬದ್ಧವಾಗಿದ್ದ `ಪುಷ್ಪಾಂಜಲಿ’ ಯನ್ನು, ಶುದ್ಧ ನೃತ್ತಗಳಲ್ಲಿ ಅರ್ಥಪೂರ್ಣ ಭಾವಪ್ರಸ್ತುತಿಯ ಮೂಲಕ ನಿರೂಪಿಸಿದಳು.ವೈವಿಧ್ಯಪೂರ್ಣ ಜತಿಸ್ವರಗಳು ಸಮರ್ಥವಾಗಿ ಮೂಡಿಬಂದವು. ರಾಗಮಾಲಿಕೆಯ ಗಣೇಶ ಸ್ತುತಿ, ಬಾಲ ಗಣಪನ ವಿವಿಧ ವರ್ಣನೆಯನ್ನು ಕಲಾವಿದೆ ಸುಮನೋಹರ ಅಭಿನಯ ಹಾಗೂ ಚೆಂದದ ಭಂಗಿಗಳಲ್ಲಿ ಕಟ್ಟಿ ಕೊಟ್ಟಳು.
ಅಭಿನಯದ ಜೀವಾಳವಾದ `ನವರಸ’ಗಳನ್ನು ಕಲಾವಿದೆ, ಒಂದೊಂದು ರಸವನ್ನೂ ಪ್ರತ್ಯೇಕವಾಗಿ ಸೋದಾಹರಣವಾಗಿ , ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿ ತೋರಿಸಿ ಕಲಾರಸಿಕರ ಮನಸ್ಸನ್ನು ಗೆದ್ದುಕೊಂಡಳು.

ನೃತ್ಯ ಪ್ರಸ್ತುತಿಯ ರಸಘಟ್ಟ- `ವರ್ಣ’ ( ಆದಿತಾಳ- ಶಂಕರಾಭರಣ ರಾಗ) ವರ್ಣನಾತ್ಮಕ ನೃತ್ತ-ನೃತ್ಯಗಳ ರಸಮೇಳ, ಅಭಿನಯಕ್ಕೆ ಪ್ರಾಧಾನ್ಯ ಸಲ್ಲಿಸಿದ ಸುಂದರ ಕೃತಿ. ತಂಜಾವೂರು ಸಹೋದರರು ರಚಿಸಿದ `ಬೃಹದೀಶ್ವರ’ನಿಗೆ ಅಂಕಿತಗೊಂಡ ಈ ಕೃತಿ ಕಲಾವಿದೆಯ ನೆನಪಿನ ಶಕ್ತಿ, ಲಯಜ್ಞಾನ, ಅಭಿನಯ ಸಾಮರ್ಥ್ಯಕ್ಕೊಂದು ಸವಾಲು ನೀಡುವುದಾಗಿರುತ್ತದೆ. ಇದರಲ್ಲಿ ವಿರಹೋತ್ಖಂಠಿತ ನಾಯಕಿ ಶಿವನಲ್ಲಿ ತನ್ನ ಪ್ರೇಮನಿವೇದನೆಯನ್ನು ಮಾಡಿಕೊಳ್ಳುವಂಥ ಸಂದರ್ಭ. ತನ್ನ ಪರಮ ಆರಾಧನಾ ಸ್ವರೂಪಿಗೆ ಪ್ರೀತಿಯಿಂದ ಹೂ ಮಾಲೆ ಅರ್ಪಿಸಿ, ವಿಭೂತಿ ಲೇಪಿಸಿ ಅವನ ಪೂಜೆಯಲ್ಲಿ ಆನಂದ ಹಾಗೂ ತಲ್ಲಿನತೆಯನ್ನು ಕಾಣುತ್ತಾಳೆ. ಅವನೇಕೆ ಇನ್ನೂ ತನ್ನ ಮೇಲೆ ಕರುಣೆ ತೋರಿಲ್ಲ, ಒಲಿಯುತ್ತಿಲ್ಲವೇಕೆ ಎಂದು ವಿರಹಭಾವದಿಂದ ತಲ್ಲಣಿಸುತ್ತಾಳೆ. ನಾಯಕಿಯ ಮನಸ್ಸಿನ ತುಮುಲಗಳನ್ನು ನೃತ್ಯಕಲಾವಿದೆ, ತನ್ನ ಹಾವ-ಭಾವ, ಚಂಚಲ ಕಣ್ಣೋಟದ ಪರಿಣಾಮಕಾರಿ ಆಂಗಿಕಾ ಭಿನಯದಿಂದ ನೋಡುಗರ ಮನಸ್ಸನ್ನು ಸೂರೆಗೊಂಡಳು. ನಡುನಡುವೆ ನಿರೂಪಿಸಿದ ಸುಂದರ ಜತಿಗಳು ಭಕ್ತಿ ಭಾವಕ್ಕೆ ಜೊತೆ ನೀಡಿದವು. ಕಡೆಯಲ್ಲಿ ಅಪರ್ಣಾ ನೀಡಿದ ಹುಸಿಮುನಿಸಿನ ಬಿಂಕದ ನಿರ್ಗಮನ ಆಕರ್ಷಕವಾಗಿತ್ತು.

ರಂಗಪ್ರವೇಶದ `ಹೈಲೈಟ್’ ‘ – ರೋಚಕತೆ ಹುಟ್ಟಿಸಿದ ಕೃತಿ `ನಾಗಪದಂ’. ಪಾಂಬಾಟ್ಟಿಸಿದ್ದರ್ ರಚಿಸಿದ (ರಾಗ-ಪುನ್ನಾಗವರಾಳಿ , ಆದಿತಾಳ ) ನಾಗರಹಾವಿನ ವಿವಿಧ ಸ್ವರೂಪ, ಗುಣ-ಮಹಿಮೆಗಳನ್ನು ಸಾರುವ ಕೃತಿಯ ಹೂರಣಕ್ಕಿಂತ ಕಲಾವಿದೆ, ಅದನ್ನು ಪ್ರದರ್ಶಿಸಿದ ಬಗೆ ಆಕರ್ಷಣೆಯನ್ನುಂಟು ಮಾಡಿತ್ತು. `ಆಡು ಪಾಂಬೆ…ನಲಿದಾಡು ಪಾಂಬೆ’ ಎನ್ನುವ ಈ ನಾಗಸ್ತುತಿಯಲ್ಲಿ, ಶಿವನ ಆಭರಣವಾಗಿ, ಸುಬ್ರಹ್ಮಣ್ಯನ ಶಿರಕ್ಕೆ ಛತ್ರಿಯಾಗಿ, ವಿಷ್ಣುವಿಗೆ ತಲ್ಪವಾಗಿ ಪಡೆದ ಪ್ರಾಮುಖ್ಯತೆಯನ್ನು ಕೊಂಡಾಡಲಾಗಿತ್ತು. ಸರ್ಪವು ಗಳಿಸಿಕೊಂಡ ಸರ್ವಸಂಪನ್ನ ಸ್ಥಾನವನ್ನು ಎತ್ತಿಹಿಡಿಯುವಂತೆ ಕಲಾವಿದೆ ಅಭಿವ್ಯಕ್ತಿಸಿದ ಯೋಗದಭಂಗಿಗಳು ಅನನ್ಯವಾಗಿದ್ದವು. ತನ್ನ ಬಳುಕುವ ನಡುವನ್ನು ಉಂಡೆಯಂತೆ ಸುತ್ತಿ ನೆಲಕ್ಕೆ ಬಾಗಿಸಿದ ರೀತಿ, ಮೈಯನ್ನು ಲತೆಯಂತೆ ಹಬ್ಬಿಸಿದ ರೀತಿ , ಇವೇ ಮುಂತಾಗಿ ನರ್ತಕಿ, ತನ್ನ ತನುವನ್ನು ದ್ರವೀಕೃತ ಬಗೆಯಲ್ಲಿ ಚಲನೆಗೊಳಪಡಿಸಿ ತೋರಿದ ಹಾವಿನ ನಾನಾ ಭಂಗಿಗಳು ರೂಮಾಂಚಗೈದವು. ಅದ್ಭುತವಾಗಿ ಈ ಕೃತಿಯನ್ನು ನೃತ್ಯ ಸಂಯೋಜಿಸಿ ಮತ್ತು ಕಲಾವಿದೆಗೆ ತರಬೇತಿ ನೀಡಿದವರು ಕೆ.ಪಿ.ಸತೀಶ್ ಬಾಬು.

ಮುಂದಿನ ಪ್ರಸ್ತುತಿಯಲ್ಲಿ ಕೇದಾರ ರಾಗದ ಮಲಯಾಳಂ ದೇವರನಾಮದಲ್ಲಿ ಕೃಷ್ಣನ ಬಾಲಲೀಲೆಗಳಿಂದ ಹಿಡಿದು ಅವನ ಯೌವ್ವನದ ತುಂಟಾಟಗಳವರೆಗೂ ಸಾಗುವ ನಿರೂಪಣೆಯನ್ನು ಅಪರ್ಣಾ ತನ್ನ ಸೊಗಸಾದ ಅಭಿನಯದಿಂದ ಸಾದರಪಡಿಸಿದಳು. ಗೋಪಿಕೆಯರೊಡನೆ ಜಲಕ್ರೀಡೆ, ಚೆಂಡಾಟ, ಕೋಲಾಟ ಮತ್ತು ಉಯ್ಯಾಲೆಯಾಡುವ ಸಂಚಾರಿಗಳಲ್ಲಿ ಜಾನಪದ ಸೊಗಡು ಮಿಂಚಿತು.
ರಾಗಮಾಲಿಕೆಯ `ಕೃತಿ’ಯಲ್ಲಿ `ಅಳಗಿರಿ ನಂದಿನಿ …’ ಎಂದು ಆತ್ಮವಿಶ್ವಾಸದ ಲವಲವಿಕೆಯಿಂದ ವೀರಭವಾನಿ ರುದ್ರಾಣಿಯಾಗಿ ಆವೇಶದಿಂದ ನರ್ತಿಸಿದ ಕಲಾವಿದೆ, ತೋರಿದ ರೌದ್ರ ರೂಪಾಭಿನಯ ಶ್ಲಾಘನೀಯವಾಗಿತ್ತು. ಕಡೆಯಲ್ಲಿ `ಜೋಧ್ಪುರಿ’ ರಾಗದ `ತಿಲ್ಲಾನ’ದಲ್ಲಿ ಮಂಡಿಸಿದ, ನವವಿನ್ಯಾಸದ ನೃತ್ತಗಳ ವೃಷಭನಾಥ ಸ್ತುತಿ ಮತ್ತು ಅಷ್ಟ ದಿಕ್ಪಾಲಕರಿಗೆ ಸಲ್ಲಿಸಿದ ವಂದನೆಗಳು ಮತ್ತು ನಟರಾಜನಿಗೆ ಬೆಳಗಿದ ದೀಪದಾರತಿಯೊಂದಿಗೆ ಪ್ರಸ್ತುತಿ ಮಂಗಳವಾಯಿತು.

ವಾದ್ಯಸಹಕಾರದಲ್ಲಿ ಸುಶ್ರಾವ್ಯವಾಗಿ ಹಾಡಿದ ಐಶ್ವರ್ಯ ನಿತ್ಯಾನಂದ, ನಟುವಾಂಗ-ರೇಖಾ ಜಗದೀಶ್, ಮೃದಂಗ- ವಿ.ಆರ್.ಚಂದ್ರಶೇಖರ್, ಕೊಳಲು-ವಿವೇಕ ಕೃಷ್ಣ ಮತ್ತು ಪಿಟೀಲು-ಮಧುಸೂದನ್ ಸಮರ್ಥ ಸಹಕಾರ ನೀಡಿದ್ದರು.