Image default
Dance Reviews

ಸುಂದರ ಅಭಿನಯದ ಸುಷ್ಮಳ ಕಲಾತ್ಮಕ ನಾಟ್ಯಪ್ರದರ್ಶನ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ `ರಂಗಪ್ರವೇಶ’ದ  ಮೂಲಕ ಕಲಾಪ್ರೌಢಿಮೆಯ ಸೊಗಸಾದ ನೃತ್ಯ ಪ್ರಸ್ತುತಿ ನೀಡಿದ್ದು ಸುಷ್ಮಾ ಮನೋರಂಜನಳ ಹೆಮ್ಮೆ. ನಾಟ್ಯಗುರು ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ನಿಪುಣ ಡಾ.ಸಂಜಯ್ ಶಾಂತಾರಾಂ ಅವರ ಕಂಠಸಿರಿಯ ಗಾಯನದ ಸಾಥ್ ಪಡೆದು, ಅವರ ಉತ್ಸಾಹಪೂರ್ಣ ನಟುವಾಂಗಕ್ಕನುಗುಣವಾಗಿ ನೃತ್ತದೈಸಿರಿಯನ್ನು ಅಭಿವ್ಯಕ್ತಿಸಿದ ಸುಷ್ಮಳ ಪ್ರತಿಭೆ ಪರಿಪೂರ್ಣವಾಗಿ ವ್ಯಕ್ತವಾಯಿತು.

`ಪುಷ್ಪಾಂಜಲಿ’ ಯಲ್ಲಿ ಸಿದ್ಧಿ-ಬುದ್ಧಿಯರ ಸಹಿತ ಗಣಾಧಿಪನನ್ನು ಕೊಂಡಾಡುವ ರಾಷ್ಟ್ರಕವಿ ಕುವೆಂಪು ಅವರ ವಿಶಿಷ್ಟ ರಚನೆಯನ್ನು ಅರ್ಥೈಸಿದ ಕಲಾವಿದೆ, ತನ್ನ ಕಲಾತ್ಮಕ ಭಂಗಿಗಳಿಂದ ಗಣಪನ ಗುಣಾಧಿಕ್ಯವನ್ನು ಕಣ್ಮುಂದೆ ಕಟ್ಟಿಕೊಟ್ಟಳು. `ಅಲ್ಲರಿಪು’ ವಿನಲ್ಲಿ ತನ್ನ ಮುಂದಿನ ಮಹತ್ವದ ಕೃತಿಗಳ ಪ್ರದರ್ಶನಕ್ಕೆ ಅನುವಾಗುವಂತೆ ಮೈಯನ್ನು ಹದವಾಗಿ ಬಗ್ಗಿಸಿ, ಸ್ನಾಯುಗಳನ್ನು ಸಡಿಲ ಮಾಡಿಕೊಳ್ಳುವ ತಯಾರಿಯ ಹಲವು ಬಗೆಯ ನೃತ್ತಗಳನ್ನು ಪ್ರದರ್ಶಿಸಿದಳು. ಅವಳ ಖಚಿತ ಹಸ್ತಮುದ್ರೆ, ಅಡವುಗಳು ಸುಂದರ ನೋಟವನ್ನು ಒದಗಿಸಿದವು.

ಮುಂದಿನ ಕೃತಿ `ಶಬ್ದಂ’ ನಲ್ಲಿ , ಕೃಷ್ಣ, ಮೋಹಿನಿಯ ರೂಪ ತಳೆದು ಶಿವನೊಡನೆ ಕೂಡಿ, ಅಯ್ಯಪ್ಪನಾಗಿ ಭಕ್ತ ಸಮಸ್ತರನ್ನೂ ಕಾಪಾಡಿದ ದಿವ್ಯ ಚರಿತೆಯನ್ನು ಸಾರುವ ಸುಂದರ ಕೃತಿಯನ್ನು ರಚಿಸಿದವರು ವಾಗ್ಗೇಯಕಾರ ಡಾ. ಸಂಜಯ್.

ಅಯ್ಯಪ್ಪನನ್ನು ಸೇವಿಸುವ ನಾಯಕಿ ಅತೀ ಮುಗ್ಧೆ , ಅಷ್ಟೇ ಪ್ರೇಮೋನ್ಮಾದ ಭಕ್ತಿ ಪ್ರತಿಮೆ. ಕಲಾವಿದೆ ಕಣ್ಣಲ್ಲಿ ಮಿನುಗು ಹೊಮ್ಮಿಸಿ, ಹಸನ್ಮುಖದಿಂದ ಲೀಲಾಜಾಲವಾಗಿ ನರ್ತಿಸುತ್ತಾ, ಸುಂದರ ನೃತ್ತಗಳಿಂದ ಅರ್ಚನೆ ಮಾಡುವಳು. ಭಾವಾರ್ತತೆಯಿಂದ ಅಭಿನಯಿಸಿ ಕಲಾರಸಿಕರ ಮನಸೂರೆಗೊಂಡಳು. ನಾಯಕಿ ಅಲಂಕಾರ ಮಾಡಿಕೊಳ್ಳುವ ಸಣ್ಣ ಸೂಕ್ಷ್ಮ ವಿವರಗಳನ್ನೂ ಸೊಗಸಾಗಿ ಅಭಿನಯಿಸಿ ತೋರಿದಳು.

ಕ್ಲಿಷ್ಟ ನೃತ್ತಗಳ ಸರಮಾಲೆಯಿಂದ ಅಲಂಕೃತವಾದ ` ಪದವರ್ಣ’ ಸಾಮಾನ್ಯವಾಗಿ ಕಲಾವಿದರಿಗೆ ಸವಾಲು ಒಡ್ಡುವಂತಿರುತ್ತವೆ. ಡಾ. ಸಂಜಯ್ ಕೃತ ಹಿಂದೋಳ ರಾಗದ ಈ ವರ್ಣದಲ್ಲಿ, ಅಂಜಾನಾಸುತನ ಶಕ್ತಿ-ಸಾಮರ್ಥ್ಯವನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡುವ ಸಂಪೂರ್ಣ ವರ್ಣನೆಯಿತ್ತು.

ಸಾಹಿತ್ಯದ ಪ್ರತಿ ಪದಕ್ಕೂ ಪ್ರತ್ಯರ್ಥ ನೀಡುವಂತೆ ಕಲಾವಿದೆ ತನ್ನ ಮನನೀಯ ಅಭಿನಯದಿಂದ, ಭಕ್ತಿರಸಭಾವದಿಂದ, ನಾಟಕೀಯ ಸನ್ನಿವೇಶಗಳನ್ನು ಕಣ್ಮುಂದೆ ರೂಪಿಸುವಲ್ಲಿ ಯಶಸ್ವಿಯಾದಳು. ವಿಶೇಷವಾಗಿ ಸಂಜೀವಿನಿ ಪರ್ವತವನ್ನು ಹೊತ್ತು, ಅವಳು, ತನ್ನ ವಿಶಿಷ್ಟ ತೇಲು ನಡಿಗೆಯಲ್ಲಿ ಆಗಸದಲ್ಲಿ ಹಾರುತ್ತ ಚಲಿಸುವ ದೃಶ್ಯ ಅಮೋಘವಾಗಿತ್ತು. ವಜ್ರಕಾಯ ನಡುವೆ ಸಾಮು ಮಾಡುವಂಥ ವಿನೋದಪರ ಸಂಗತಿಗಳಿಗೆ ಹಾಗೂ ಇಡೀ ಲಂಕೆಗೆ ಬೆಂಕಿ ಇಟ್ಟು ಮುಗ್ಧವಾಗಿ ಕಣ್ಣುಮಿಟುಕಿಸುವ ಹನುಮನ ತುಂಟತನದ ಅಭಿವ್ಯಕ್ತಿಯಂಥ ಸೂಕ್ಷ್ಮ ವಿವರಗಳಿಗೂ ಗಮನವಿತ್ತು ಸಂಯೋಜಿಸಿದ ಸಂಜಯ್ ಅವರ ನೃತ್ಯ ಸಂಯೋಜನೆ ಮೆಚ್ಚುಗೆ ಪಡೆಯಿತು.

`ನಾದ ತನುಮನಿಷಂ’ ಎಂದು ಸ್ತುತಿಸುವ ಭಕ್ತಿಭಾವದ ಅಭಿನಯದಲ್ಲಿ ಸುಷ್ಮಾ, ತನ್ನ ಮೈಯನ್ನು ಸುರುಳಿಯಂತೆ ಬಗ್ಗಿಸುತ್ತಾ, ಮನಮೋಹಕ ಭಂಗಿಗಳನ್ನು ಪ್ರದರ್ಶಿಸುತ್ತ , ರಸಾಭಿಜ್ಞತೆಯನ್ನು ಮೂಡಿಸಿದಳು.ಶಿವಪೂಜೆಯಲ್ಲೂ ಅಹಂಕಾರದ ಸೆಳವು ತೋರುವ  ರಾವಣನ ಪುರುಷಾಹಂಕಾರವನ್ನು, ಕರುಳನ್ನೇ ರುದ್ರವೀಣೆಯನ್ನಾಗಿ ಮಾಡಿಕೊಂಡು ರೌದ್ರಾವೇಶದಿಂದ ನುಡಿಸುವ ಭಕ್ತಿತಾದಾತ್ಮ್ಯತೆಯನ್ನು ಕಲಾವಿದೆ ಪರಿಣಾಮಕಾರಿಯಾಗಿ ಹೊಮ್ಮಿಸಿದಳು. ಮುಂದಿನ `ಜಾವಳಿ’ ಯಲ್ಲಿ ವಿರಹೋತ್ಖಂಡಿತ ನಾಯಕಿ, ತನ್ನ ಇನಿಯನಿಗಾಗಿ ಅಭಿಸಾರಿಕೆಯಾಗಿ ಕಾಯುತ್ತ, ಪಡುವ ಬವಣೆ, ವಿರಹದ ಸಂಕಟಗಳನ್ನು ಸುಷ್ಮಾ, ತೀವ್ರತೆಯಿಂದ ಅಭಿವ್ಯಕ್ತಿಸಿದಳು. ಶೃಂಗಾರ ಮಿಳಿತ ಕಾತರದ ಭಾವಗಳು ಸಮರ್ಥವಾಗಿ ಹೊರಹೊಮ್ಮಿ, ಹಿನ್ನಲೆಯಲ್ಲಿ ಮೂಡಿ ಬಂದ ವಿಷಾದದ ರಾಗ, ಇಂಪಾದ ವಾದ್ಯಮೇಳಗಳ ನಡುವಣ ಅರ್ಥಪೂರ್ಣ `ನೀರವ’ ಪ್ರಣಯಿನಿಯ ನೋವಿನ ತಳಮಳವನ್ನು ಮುಟ್ಟಿಸಿತು.

ಅಂತಿಮವಾಗಿ ಸುಷ್ಮಾ ಪ್ರಸ್ತುತಿಪಡಿಸಿದ ಸರಸ್ವತಿ ರಾಗದ `ತಿಲ್ಲಾನ’ , ಸುಂದರ, ಸುಲಲಿತ, ಸುಮ್ಮಾನದ ನೃತ್ತಸೌಂದರ್ಯದ  ವೇಗಗತಿಯಲ್ಲಿ ತೋರಿದ ಪಾದಭೇದಗಳ, ಅಡವುಗಳ ಪರಿಣತಿಯ ಲಾಸ್ಯದಿಂದ ತಾನೊಬ್ಬ ಭರವಸೆಯ ಕಲಾವಿದೆ ಎಂಬುದನ್ನು ಸಾಬೀತುಪಡಿಸಿದಳು.

Related posts

ರಂಜನಿ ರಂಗಪ್ರವೇಶದ ಮೂಲಕ ಮೆರೆದ ಸಾಮಾಜಿಕ ಕಾಳಜಿ

YK Sandhya Sharma

ಪ್ರೌಢ ಅಭಿನಯದ ಅನಿಷಳ ಸೊಗಸಾದ ನರ್ತನ

YK Sandhya Sharma

‘ಕೃಷ್ಣಾರ್ಪಣ’-ಹೃದಯಸ್ಪರ್ಶಿ ರಸಕಾವ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.