ಸಾ.ಕು…ಇದೇನು ಏನೂ ಹೇಳುವ ಮುಂಚೆಯೇ ಸಾಕ್ ಸಾಕು ಅಂತ ಕೈ ಚೆಲ್ಲಿ ಕೂತ್ಕೋತಿದ್ದೀನಿ ಅಂತ ಭಾವಿಸಬೇಡಿ…ಸಾ.ಕು…ಅಂದರೆ ಅರ್ಥಾತ್ ನಮ್ಮ ಸತ್ಯವಾನನ ಹೆಂಡತಿ ಅಲ್ಲಲ್ಲ…ಇನ್ನೂ ಯಾರ ಹೆಂಡತಿಯೂ ಆಗಿರದ ಪರಮ ಪತಿವ್ರತಾಶೀಲೆ(?) ಮೀಸಲು ಮುರಿಯದ ಕು-ಮಾರಿ…ಎಲಿಜಬಲ್ ಬ್ಯಾಚುರಲ್ ಅಂತಾರಲ್ಲ ಹಾಗೆ, ಅತ್ಯಂತ ಎಲಿಜಬಲ್ ಸ್ಪಿನ್‍ಸ್ಟರ್ ಅಂತ ಇಟ್ಕೋಬಹುದಾದ ಈ ನಮ್ಮ ಕಥಾನಾಯಕಿ ಸಾವಿತ್ರಿಕುಮಾರಿ…ಸಾ.ಕು. ಅಡ್ಡನಾಮಧಾರಿ!!
ಹೌದಂತೆ…ಅವಳ ಅಮ್ಮ ಸಾಲಾಗಿ ಆರು ಹೆಣ್ಣುಮಕ್ಕಳನ್ನು ಹಡೆದನಂತರ `ಸಾಕು ಸಾವಿತ್ರಿ’ ಅಂತ ಇವಳಿಗೆ ನಾಮಕರಣ ಮಾಡಿದ ಮೇಲೆಯೇ ಅಂತೆ ಆಕೆಯ ಗರ್ಭಕ್ಕೆ ರೆಸ್ಟು ಸಿಕ್ಕಿದ್ದು. ಆದರೆ ಯಾವ ಗಳಿಗೆಯಲ್ಲಿ ಅವಳಿಗೆ ಸಾವಿತ್ರಿಕುಮಾರಿ ಅಂತ ನಾಮಕರಣ ಮಾಡಿದರೋ, ಅವಳ ಹೆಸರಿನ ಅರ್ಧ ಪಾರ್ಟ್ ನಿಜವಾಗಿ, ಅವಳ ಹಿಂದೆ ಮಕ್ಕಳು ಫುಲ್ ಸ್ಟಾಪ್ ಆಗಿದ್ದಲ್ಲದೆ, ಅವಳ ಹೆಸರಿನ ಇನ್ನರ್ಧ ಭಾಗವೂ ನಿಜವಾಗಿ ಈ ಕುಮಾರಿಗೆ ಶ್ರೀಮತಿಯಾಗೋ ಸೌಭಾಗ್ಯವೇ ಪ್ರಾಪ್ತವಾಗಿರಲಿಲ್ಲ. ಅವಳ ಎಷ್ಟೋಜನ ಗೆಳತಿಯರು ಅವಳಿಗೆ ಪುಕ್ಕಟೆ ಸಲಹೆಗಳನ್ನು ಕೊಟ್ಟಿದ್ದೇ ಕೊಟ್ಟಿದ್ದು. ನಿನ್ನ ಫುಲ್‍ನೇಮನ್ನು ಅರ್ಧಕ್ಕೆ ಬ್ರೇಕ್ ಮಾಡು, ನಿನ್ನ ಜೀವನಕ್ಕೂ ಒಂದು ಬ್ರೇಕ್ ಸಿಗಬಹುದೂಂತ…ಆದರೆ ಮದುವೆಯಾಗೋವರೆಗೂ ಹುಚ್ಚುಬಿಡಲ್ಲ-ಹುಚ್ಚು ಬಿಡೋವರ್ಗೂ ಮದುವೆಯಾಗಲ್ಲ ಅಂತಾರಲ್ಲ ಹಾಗೆ- ಈ ನಮ್ಮ ಜಗಮೊಂಡಿ ಅಥವಾ ಆಶಾವಾದಿ ಅನ್ನಿ- ಈ ನಮ್ಮ ಸಾ.ಕು. ಶ್ರೀಮತಿ ಪಟ್ಟ ದಕ್ಕಿದ ಮೇಲೇನೇ ಕುಮಾರಿ ಹೆಸರಿಗೆ ಮೋಕ್ಷ ಅಂತ ಪಟ್ಟು ಹಿಡಿದುಬಿಡೋದೇ?…!!… ಅಂತೂ ಅದೇ ಹುಚ್ಚು…ಆ ಗಾದೆ ಥರಾನೇ, ಇದೂ ಯಾಕೋ ಚುಯಿಂಗ್ ಗಂ ಕೇಸೇ ಆಗಿಬಿಟ್ಟಿತ್ತು!!
ಇರಲಿ,….ಮೂಗಿಗಿಂತ ಮೂಗುತಿಯೇ ಭಾರವಾಯಿತಲ್ಲ…ಅವಳ ಹಿಸ್ಟರಿಗಿಂತ ಅವಳ ಸದ್ಯದ ಪುರಾಣಾನೇ ಬರೀತಾ ಹೋದ್ರೆ, ಒಂದು ಬೃಹತ್‍ಗ್ರಂಥವೇ ಆದೀತು !!… ಸ್ಯಾಂಪಲ್‍ಗೆ ಒಂದ್ ಹೇಳ್ತೀನಿ ನೋಡಿ…ಸಾ.ಕು. ಹೇಳಿಕೇಳಿ ಬಹು ಅಡಾವುಡಿ ಸ್ವಭಾವದವಳು…ಎಲ್ಲದರಲ್ಲೂ ಆತುರ-ಕಾತುರ- ಕೆಟ್ಟ ಕುತೂಹಲ!…ತಾನು ಕೆಲಸ ಮಾಡುತ್ತಿದ್ದ ಆಫೀಸಿನ ನೂರೈವತ್ತು ಜನರಿಗಿಂತ ತುಂಬ ಭಿನ್ನವಾಗಿ , ಸ್ಪೆಷಲ್ಲಾಗಿ ಅಪಿಯರ್ ಆಗಬೇಕು ಅನ್ನೋದೇ ಅವಳ ಮಹತ್ವಾಕಾಂಕ್ಷೆ. ಅದಕ್ಕಾಗಿ ಅವಳು ತನ್ನ ವೇಷ-ಭೂಷಣದಿಂದ ಹಿಡಿದು ತನ್ನ ನಡೆ-ನುಡಿ, ಕೆಲಸ-ಕಾರ್ಯ-ಸುದ್ದಿಬಿತ್ತನೆಯ ಕಿವಿಗುಟ್ಟಿನ ವದಂತಿ ಹರಡೋವರೆಗೂ ತನ್ನದೇ ಆದ ಒಂದು ಸ್ಪೆಷಾಲಿಟಿ ಕಾಪಾಡಿಕೊಂಡುಬಂದಿದ್ಳು!
ಸಾ.ಕು. ಕಿವಿಗೇನಾದರೂ ಒಂದು ಸಣ್ಣ ಸುದ್ದಿ ಬಿದ್ದರೂ ಅದು ತಮಟೆಗೆ ಮುತ್ತಿಟ್ಟ ಹಾಗೆಯೇ, ಊರೆಲ್ಲ ಢಾಣಾ ಢಂಗೂರ…!
ಮೊನ್ನೆ ಅವಳದು ಎಂಥ ಇನ್‍ವೆನ್‍ಷನ್ ಅಂತೀರಾ?!….ಇಡೀ ಕಛೇರಿ ಬೆಚ್ಚಿಬಿದ್ದು, ಕಿವಿ ನಿಮಿರಿಸುವ ಗರಂ ಗರಂ ಸುದ್ದಿಯನ್ನು ಹೊತ್ತು ತಂದಳು. ಕವಡೆ ಅಲ್ಲಾಡಿಸಿದ ಹಾಗೆ ಪಿಸು ಪಿಸು ದನಿ, ಗಜ ಗಜ ಶಬ್ದ ಮಾಡ್ತಾ ಎಲ್ಲೆಡೆ ಸುದ್ದೀನ ಹಂಚಿಬಂದಳು. ಕಡೆಗೆ ಕಛೇರಿಯ ಮುಖ್ಯಸ್ಥರ ಕಿವಿಯೂ ತಲುಪಿಯೇ ಬಿಟ್ಟಿತ್ತು! ಇದುವರೆಗೂ ಆಫೀಸಿನ ಅತ್ಯಂತ ಪ್ರಾಮಾಣಿಕ ಉದ್ಯೋಗಿ ಎನಿಸಿಕೊಂಡಿದ್ದ ಉಷಾದೇವಿಯೇ ಅಂದಿನ ಬಲಿಪಶು.
ಸಾ.ಕು. ಸಿಡಿಸಿದ್ದ ಬಾಂಬಿನಿಂದ ಇಡೀ ಆಫೀಸಿನವರು ಬೆಚ್ಚಿಬಿದ್ದಿದ್ದರು!!…
`ತಾನೊಬ್ಳೆ ಮಹಾ ಸಾಚಾ ಅನ್ನೋ ಥರ ಪೋಸ್ ಮಾಡುತ್ತಿದ್ದ ಆ ಉಷಾದೇವಿ ಎಂಥ ಊಸರವಳ್ಳಿ ಅಂತೀರಾ….ನಿನ್ನೆ ಸರಿಯಾದ ಸಮಯಕ್ಕೆ ಫೈಲು ಕೊಡಕ್ಕೆ ನಾನವಳ ರೂಮಿನೊಳಗೆ ಹೋದ್ನಾ…ರೆಡ್ ಹ್ಯಾಂಡಾಗಿಸಿಕ್ಕಿಹಾಕ್ಕೊಂಡು ಬಿಟ್ಳೂರೀ….ಎಲ್ಲ ಸಾವಿರಾರು ರೂಪಾಯಿಗಳ ಮಾತೇ ಅವಳ ಬಾಯಲ್ಲಿ…’
ಸುತ್ತ ಕೂತವರ ಕಣ್ಣು ಅರಳುವ ಜೊತೆಗೆ ಕಿವಿಗಳೂ ನಿಮಿರಿದವು!!…
`ಇಷ್ಟುದಿನ ಎಲ್ಲ ಗುಟ್ಟು ಗುಟ್ಟಾಗಿ ನಡೆಸ್ತಿದ್ಳು ಮಾರಾಯ್ತಿ…ಈಗ ಅವಳ ನಿಜಬಣ್ಣ ಬಯಲಾಗ್ಹೋಯ್ತು ಕಣ್ರೀ…ದಿನಾ ಅವಳು ಉಡೋ ಪ್ರಿಂಟೆಡ್ ಸ್ಯಾರೀಸು-ಹೊಸ ಹೊಸ ಆಭರಣಗಳ ರಹಸ್ಯ ಇವತ್ತು ರಟ್ಟಾಗಿಹೋಯ್ತು ನೋಡಿ!’
ದೊಡ್ಡ ಸಂಶೋಧನೆ ಮಾಡಿದ ಸಾಹಸಿಯಂತೆ ಬಾಯಿ-ಮುಖ ಅಗಲಿಸಿ ನುಡಿದ ಸಾ.ಕು.ನ ವದನಾರವಿಂದದಲ್ಲಿ ಮಿನುಗಿದ ಬೆಳಕನ್ನು ನೋಡಬೇಕಿತ್ತು.
ಸಾ.ಕು. ಉವಾಚವನ್ನು ಅರಗಿಸಿಕೊಳ್ಳಲರದೆ ಟೈಪಿಸ್ಟ್ ರಮಾ ಮುಖವನ್ನು ಬೇಸರದಿಂದ ಹಿಂಡಿ, `ನಂಗೇನೋ ಹಾಗನ್ನಿಸಲ್ಲಪ್ಪ…ಉಷಾ ಹಸ್‍ಬೆಂಡು ಈ ಊರಿನ ದೊಡ್ಡ ಡಾಕ್ಟರ್ರು….ಒಳ್ಳೆ ಸಂಪಾದನೆ, ಬಂಗ್ಲೆ-ಕಾರು ಇಟ್ಕೊಂಡೋರಿಗೆ ಒಡವೆ-ಸೀರೆಗಳಿಗೇನ್ ಬರ?!…ಉಹುಂ ನಂಗೆ ನಂಬಕ್ಕೆ ಆಗ್ತಿಲ್ಲ…’ ಎಂದು ತನ್ನ ತಲೆಯನ್ನು ಅಡ್ಡಡ್ಡಕ್ಕೆ ಆಡಿಸಿದಾಗ ಮಹಾ ಅದ್ಭುತ ಕಂಡುಹಿಡಿದ ಮೂಡ್‍ನಲ್ಲಿದ್ದ ಸಾ.ಕು. ಗೆ ಯದ್ವಾ ತದ್ವಾ ಕೋಪಾನೇ ಬಂದುಬಿಡೋದೇ?…
` ಹೌದಾ…ಸರಿ ನೀವೆಲ್ಲಾ ನಂಬೋಹಾಗೆ ಮಾಡದಿದ್ರೆ ನನ್ನ ಹೆಸರು ಸಾವಿತ್ರಿಕುಮಾರೀನೇ ಅಲ್ಲ’ ಅಂತ ಸವಾಲು ಹಾಕಿದವಳೇ ಅವಳು ದಾಪುಗಾಲಿಕ್ಕುತ್ತ ಸೀದಾ ಡೈರೆಕ್ಟರ್ ಛೇಂಬರ್ರಿಗೆ ನುಗ್ಗೇಬಿಟ್ಳು!
ಅರ್ಧಗಂಟೇಲಿ ಈ ನ್ಯೂಸ್ ಆಫೀಸ್ ತುಂಬಾ ಬೆಂಗಳೂರಿನ ಕಸದ ದುರ್ಗಂಧದ ಹಾಗೆ ಘಾಟಾಗಿ ಹರಡಿಕೊಂಡುಬಿಟ್ಟಿತ್ತು. ಪಾಪ ಮೆದುಸ್ವಭಾವದ ದೈವಭಕ್ತೆ ಉಷಾದೇವಿ ಕೂತಲ್ಲೇ ಮಂಜುಗಡ್ಡೆಯಾಗಿಹೋದ್ಳು….ಯಾವುದೇ ಮುನ್ಸೂಚನೆಯಿಲ್ಲದೆ ಮೋಡ ಕಟ್ಟೋಕ್ಕೆ ಮುಂಚೆ ಜಡಿಮಳೆ ಧಬಧಬ ರಾಚಿದ ಹಾಗೆ , ಅನಾಮತ್ ಬಂದೆರಗಿದ ಭ್ರಷ್ಟಾಚಾರದ ಆಪಾದನೆ ಕೇಳಿ ಗಡಗಡ ನಡುಗಿಹೋದಳು!!
`ಮಿಸ್. ಸಾ.ಕು. ಈ ಸಲ ನೀವ್ ಹೇಳ್ತಿರೋ ಸುದ್ದಿ ಖಂಡಿತ ನಿಜವೇನ್ರೀ?…ಅಥ್ವಾ ಇದೂ ನಿಮ್ಮ ಇನ್ನೊಂದು ಹೊಸ ಅವಾಂತರ ಅಲ್ಲಾ ತಾನೇ?…’- ಎಂದು ನಿರ್ದೇಶಕರು, ಅವಳ ರಾದ್ಧಂತ ಸೃಷ್ಟಿಯ ಸ್ವಭಾವ ಪರಿಚಿತವಾದ್ದರಿಂದ ,ಗುಮಾನಿಯ ಕಣ್ಣೋಟವನ್ನು ಕನ್ನಡಕದೊಳಗಿಂದ ಗುರಾಯಿಸಿ ಹಾಯಿಸಿದರು. ಅವರ ದನಿಯಲ್ಲಿ ಗರ್ಜನೆಯ ಗುಡುಗಿತ್ತು.
` ಗಾಡ್ ಪ್ರಾಮಿಸ್ ಸಾರ್’ ಅನ್ನುವ ಎಂಟುವರ್ಷದ ಪೋರಿ ಥರ, ಸಾ.ಕು. ತನ್ನ ಗಂಟಲಿನ ಚರ್ಮವನ್ನು ಜಿಗುಟಿ ಹಿಡ್ಕೊಂಡ್ಳು.
ತತ್‍ಕ್ಷಣ ಉಷಾದೇವಿಗೆ ಡೈರೆಕ್ಟರಿಂದ ಬುಲಾವ್ ಹೋಯ್ತು.
ಕ್ಷಣಾರ್ಧದಲ್ಲಿ ಅವರಮುಂದೆ ತಲೆಬಗ್ಗಿಸಿಕೊಂಡು ನಿಂತ ಉಷಾದೇವಿಯನ್ನು ಕಂಡ ಸಾ.ಕು. ಮುಖದಲ್ಲಿ ಗೆಲುವಿನ ಮಹಾ ವಿಜಯಪತಾಕೆ!
` ರೀ ಉಷಾ, ಈಕೆ ಹೇಳ್ತಿರೋದು ನಿಜವೇನ್ರೀ?’- ಬಾಸ್ ಕಣ್ಣಲ್ಲಿ ಕೆಂಡದ ಹೊಳೆ!
ಅವರ ನರಸಿಂಹಾವತಾರ ಕಂಡು ಉಷಾ ಥಂಡಾ ಹೊಡೆದುಹೋದ್ಳು!…..ಗಂಟಲು ಮರಭೂಮಿಯಂತೆ ಒಣಗಿ ಒತ್ತತೊಡಗಿತು.
` ಅಲ್ಲಾರೀ, ನೀವು ಆ ಕಂಟ್ರ್ಯಾಕ್ಟರ್ ರೆಡ್ಡಿ ಹತ್ತಿರ ನಿಮ್ಮ ಫೈಲ್ ಕ್ಲಿಯರ್ ಮಾಡಿಸ್ತೀನಿ, ಮಿನಿಮಮ್ 50 ಸಾವಿರಾನಾದ್ರೂ ಬೇಕೇಬೇಕು ಅಂತ ಡಿಮ್ಯಾಂಡ್ ಮಾಡಿದ್ರಂತಲ್ಲ, ನಿಜಾನಾ?…ಸತ್ಯ ಹೇಳದಿದ್ರೆ ನಿಮ್ಮೇಲೆ ಸಿವಿಯರ್ ಆಕ್ಷನ್ ತೊಗೋತೀನಿ ನೋಡಿ’- ಎಂದು ಅಬ್ಬರಿಸಿ ಕಣ್ಣಲ್ಲಿ ಜ್ವಾಲಾಮುಖಿ ಕಾರಿದರು.
ಅಷ್ಟರಲ್ಲಿ ಸಾ.ಕು. ಮಧ್ಯೆ ಬಾಯಿ ಹಾಕಿ ಸತ್ಯಹರಿಶ್ಚಂದ್ರನ ಪೋಸ್‍ನಲ್ಲಿ ಅಭಿನಯಿಸುತ್ತ- `ನಾನು ಫೈಲು ಕೊಡಕ್ಕೆ ಒಳಗೆ ಹೋದಾಗ ನೆಗೋಸಿಯೇಷನ್ಸ್ ನಡೀತಿತ್ತು ಸಾ…ಇವರು 50 ಸಾವಿರ ಅಂತಿದ್ರೆ, ಆತ ಕಷ್ಟ ಮೇಡಂ, 20 ಸಾವಿರಕ್ಕೆ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಗೋಗರಿತಾ, ಮಗಳ ಮದುವೆ ಫಿಕ್ಸ್ ಆಗಿದೆ’ ಅಂತ ಅಂಗಲಾಚ್ತಾ ಇದ್ರು ಸಾರ್…ಆದರೆ ಈಕೆ ಮಾತ್ರ ಜಪ್ಪಯ್ಯ ಅನ್ಲಿಲ್ಲ…’ – ಎಂದು ಕೈ-ಬಾಯಿ ತಿರುಗಿಸಿಕೊಂಡು ಉತ್ಸಾಹದಿಂದ ದೂರು ಒಪ್ಪಿಸುತ್ತ ಮುಖದಲ್ಲಿ ನವರಸ ತೋರಿದಳು.
ನಿರ್ದೇಶಕರ ಪ್ರಶ್ನೆ ಕೇಳಿ, ಉಷಾದೇವಿಯ ಕಪ್ಪಿಟ್ಟುಹೋಗಿದ್ದ ಮುಖ ತಟ್ಟನೆ ಅಳ್ಳಕವಾಗಿ-`ಓಹ್ ಅದಾ…ರೆಡ್ಡಿಯವರನ್ನ ನಾನು 50 ಸಾವಿರ ಕೇಳಿದ್ದು ನಿಜ ಸಾರ್’ ಎಂದು ಒಪ್ಪಿಕೊಂಡುಬಿಟ್ಟಳು ಸರಾಗವಾಗಿ. ಆಗ ನೋಡಬೇಕಿತ್ತು ಸಾ.ಕು. ತನ್ನ ಮೀಸೆಯ ಮೇಲೆ ಕೈ ಹಾಕಿಕೊಂಡ ಪರೀನಾ…ಅವಳ ಮುಖದ ಮೇಲೆ ನಗುವಿನ ಅಟ್ಟಹಾಸ!!
`ನಾ ಹೇಳಿಲ್ವಾ ಸಾ…’ ಅಂತ ರಾಗ ಎಳೆದಳು ವಯ್ಯಾರದಿಂದ.
`ನೀವೊಂದು ನಿಮಿಷ ಭಾಯ್ಮುಚ್ಕೊಂಡಿರ್ರೀ’….ಬಾಸ್ ಗುರಾಯಿಸಿದರು.
ಉಷಾದೇವಿ ನಿರಾಳ ದನಿಯಲ್ಲಿ ಮೆಲ್ಲನೆ ನುಡಿದಿದ್ದಳು : ` ಆದರೆ ನಾನವರನ್ನ ಕೇಳಿದ್ದು 50 ಸಾವಿರ ರೂಪಾಯಿಗಳನ್ನಲ್ಲ ಸಾರ್…50 ಸಾವಿರ ರಾಮನಾಮ ಜಪ ಬರೆದುಕೊಡಿ ಅಂತ…ನಮ್ಮನೆ ಹತ್ರ ಹೊಸದಾಗಿ ಒಂದು ರಾಮದೇವರ ದೇವಸ್ಥಾನ ಕಟ್ತಿದ್ದಾರೆ ಅಂತ ನಾನು ರೆಡ್ಡಿ ಅವರಿಗೆ ಹೇಳಿದ್ದೆ, ಆಗವರು ನನ್ಮಗಳು ಒಂದು ಪುಸ್ತಕದಲ್ಲಿ ರಾಮನಾಮ ಬರೆದುಕೊಡ್ತಾಳೆ- ಹಾಗಾದ್ರೂ ಅವಳ ಮದ್ವೆ ಗೊತ್ತಾದ್ರೆ ಸಾಕು ಅಂತ ಹೇಳಿದ್ರು…ನಾನೂ ದೇವಸ್ಥಾನದ ಕಮಿಟಿಯವರಲ್ಲಿ ಕನಿಷ್ಠ 5 ಲಕ್ಷ ರಾಮನಾಮನಾದರೂ ಬರೆಸಿಕೊಡ್ತೀನಿ ಅಂತ ಒಪ್ಪಿಕೊಂಡುಬಿಟ್ಟಿದ್ದೆ, 50 ಸಾವಿರವಲ್ಲದಿದ್ರೂ, 30 ಸಾವಿರವಾದ್ರೂ ನಿಮ್ಮಗಳ ಕೈಲಿ ಬರೆಸಿಕೊಡಿ ಅಂತ ಕೇಳ್ತಿದ್ದೆ, ಆದರೆ ಅದಕ್ಕವರು ಈಗ ಮಗಳ ಮದುವೆ ಗೊತ್ತಾಗಿರೋದ್ರಿಂದ ಟೈಂ ಅಷ್ಟಿಲ್ಲ, 10 ಸಾವಿರ ಮಾತ್ರ ಸಾಧ್ಯ ಅಂತ ಹೇಳ್ತಿದ್ರು, ಅಷ್ರಲ್ಲಿ ಈಕೆ ಒಳಗೆ ಬಂದು…..’
ಉಷಾದೇವಿ ಮಾತು ಮುಗಿಯೋದ್ರಲ್ಲಿ. ಸಾ.ಕು. ಅರ್ಥಾತ್ ಸತ್ಯವಾನನ ಪತ್ನಿಯ ಮುಖ ಹರಳೆಣ್ಣೆ ಕುಡಿದ ಹಾಗಾಗಿ, ಬಾಸ್ ಅವಳತ್ತ ಕೆಕ್ಕರಿಕೆಯ ನೋಟ ಚುಚ್ಚುವ ಮುನ್ನ, ತನ್ನ ಅಡಾವುಡಿ ಸ್ವಭಾವ ತಂದಿಟ್ಟ ಪೀಕಲಾಟಾನ ಎದುರಿಸಲಾರದೆ ತಟ್ಟನೆ ಅಲ್ಲಿಂದ ಅಂತರ್ಧಾನಳಾಗಿದ್ದಳು!