ಖ್ಯಾತ ‘ನಾಟ್ಯಸುಕೃತಿ ’ ನೃತ್ಯಸಂಸ್ಥೆಯ ಗುರುಗಳಾದ ಹೇಮಾ ಪ್ರಶಾಂತ್ ಮತ್ತು ಪ್ರಶಾಂತ್ ಗೋಪಾಲ್ ಶಾಸ್ತ್ರೀ ಅವರ ಸಮರ್ಥ ಮಾರ್ಗದರ್ಶನದಲ್ಲಿ ಅರಳಿದ ನೃತ್ಯಕುಸುಮ ಕು. ಸಾಹಿತ್ಯ ವೆಂಕಟಸುಬ್ರಹ್ಮಣ್ಯಮ್. ಇತ್ತೀಚಿಗೆ ಇವಳು ‘ಕಲಾಗೌರಿ’ ಆಡಿಟೋರಿಯಂನಲ್ಲಿ ತನ್ನ ಸುಮನೋಹರ ನೃತ್ಯಲಾಸ್ಯವನ್ನು ಕಲಾರಸಿಕರೆದುರು ಪ್ರದರ್ಶಿಸಿ ಮೆಚ್ಚುಗೆ ಪಡೆದಳು.
ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ ಮೈಮಾಟ, ಆಕರ್ಷಕ ಬೊಗಸೆಕಂಗಳು ಅವಳ ಅಭಿನಯದ ರಸೋತ್ಪತ್ತಿಯನ್ನು ಎತ್ತಿಹಿಡಿದವು. ಮೋಹನ ಕಲ್ಯಾಣಿ ರಾಗದ ‘ಗಣೇಶ ಪುಷ್ಪಾಂಜಲಿ’ಯಲ್ಲಿ ಸಾಹಿತ್ಯ ಪ್ರದರ್ಶಿಸಿದ ಮಂಡಿ ಅಡವು, ಆಕಾಶಚಾರಿಗಳಿಂದ ಕೂಡಿದ ಅಂಗಶುದ್ಧಿಯ ನರ್ತನ ನೋಡಲು ಚೆಂದವೆನಿಸಿತು. ಗಣೇಶನ ಹುಟ್ಟಿನ ಬಗೆಗಿನ ಸಂಚಾರಿಯಲ್ಲಿ ಪಾರ್ವತಿಯು ತನ್ನ ಮೈಯ ಚಂದನದಿಂದ ಬಾಲಕನನ್ನು ಸೃಷ್ಟಿಸುವ ವಿವರಣಾತ್ಮಕ ಆಂಗಿಕಾಭಿನಯದಿಂದ ಹಿಡಿದು ಅವನಿಗೆ ಆನೆಮೊಗ ಬರುವ ಇಡೀ ಕಥಾನಕವನ್ನು ನಾಟಕೀಯ ಅಭಿನಯದಿಂದ ಕಟ್ಟಿಕೊಡಲಾಯಿತು.
ರಾಗಮಾಲಿಕೆ-ಖಂಡಛಾಪು ತಾಳದ ‘ಸೂರ್ಯ ಕೌತ್ವಂ’ ಕೃತಿ ಅಮಿತ ತೇಜೋಮಯ ಆದಿತ್ಯನ ವೈಶಿಷ್ಟ್ಯ ಮತ್ತು ಪ್ರಾಮುಖ್ಯವನ್ನು ಸಾಹಿತ್ಯಳ ವರ್ಚಸ್ವೀ ನೃತ್ಯದ ಬೆಡಗು ಅನಾವರಣಗೊಳಿಸಿತು. ನಗುಮುಖದಿಂದ ಅಷ್ಟೇ ಆತ್ಮವಿಶ್ವಾಸದ ಲವಲವಿಕೆಯಿಂದ ಅರ್ಥಪೂರ್ಣ ನೃತ್ತವೈವಿಧ್ಯವನ್ನು ಪ್ರದರ್ಶಿಸಿದಳು ಕಲಾವಿದೆ. ಶ್ರೀಕೃಷ್ಣನ ವಿಶ್ವರೂಪ, ಗೀತೋಪದೇಶಗಳ ದೃಶ್ಯ ಮನಸೆಳೆಯಿತು.
ಮುಂದೆ ರಾಗಮಾಲಿಕೆಯ ‘ಶಬ್ದಂ’-ಕೃಷ್ಣನ ಲೀಲೆಗಳನ್ನು ಮುದವಾಗಿ ತೆರೆದಿಟ್ಟಿತು. ವಿದ್ವಾನ್ ಕರಿಗಿರಿದಾಸರ ರಚನೆ ‘ಕೊಳಲ ನಾದವು ಕೇಳಿಬರುತಿದೆ…’ -ಮುರಳೀಧರನ ಬಗೆಗಿನ ಆಕರ್ಷಣೆಯನ್ನು ಸಾಹಿತ್ಯ, ತನ್ನ ಲಾಸ್ಯಪೂರ್ಣ ವಿವಿಧ ಆಂಗಿಕಗಳಲ್ಲಿ ಕಟ್ಟಿಕೊಟ್ಟಳು. ಗೋಪಿಕೆಯರ ಕೆಲಸ-ಕಾರ್ಯಗಳೆಲ್ಲಾ ಅರ್ಧಕ್ಕೇ ನಿಂತು, ಮುರಳೀಗಾನಕ್ಕೆ ತಲೆದೂಗಿ ಮೈಮರೆತು ನಿಂತಿದ್ದಾರೆ. ಅವರ ತಪಸ್ಸಿನ ಏಕಾಗ್ರತೆಯು ಭಂಗವಾಗಿದೆ. ಅವರ ಮೊಗಗಳಲ್ಲಿ ಧನ್ಯತಾಭಾವ ಕೆನೆಗಟ್ಟಿದೆ. ಅವರ ತನ್ಮಯತೆಯನ್ನು ಕಲಾವಿದೆ ಪರಕಾಯ ಪ್ರವೇಶಮಾಡಿ ಅಭಿನಯಿಸಿದ್ದು ಮೆಚ್ಚುಗೆ ತಂದಿತ್ತು. ಗಿರಿಧರನ ಮನಮೋಹಕ ಭಂಗಿಗಳು, ವಿಶ್ವರೂಪ, ದಶಾವತಾರಗಳು ಸುಮನೋಹರವಾಗಿದ್ದರೆ, ಕಲ್ಕಿಯ ವೀರಾವೇಶದ ಭಾವಪ್ರದರ್ಶನ ಮನಮುಟ್ಟಿತು.
ವಿದ್ವಾನ್ ಗುರುಮೂರ್ತಿ ರಚಿಸಿದ ‘’ ವರ್ಣ’’ –‘ಶಾಂಭವಿ ಮಹಿಷಾಸುರಮರ್ಧಿನಿ’- ವೀರಾವೇಶದ ಹೆಜ್ಜೆಗಳ ಶಕ್ತಿಭರಿತ ನೃತ್ತಗಳಿಂದ ಶಾಂಭವಿಯ ಉಗ್ರರೂಪವನ್ನು ಬಿತ್ತರಿಸಿತು. ಮಹಿಷಾಸುರಮರ್ಧಿನಿಯ ಸಮಗ್ರ ವ್ಯಕ್ತಿತ್ವವನ್ನು ಕಲಾವಿದೆ, ತನ್ನ ಪ್ರೌಢ ಅಭಿನಯದಿಂದ ಕಣ್ಮುಂದೆ ರೂಪಿಸುತ್ತಾ, ಆಕೆಯ ಆವೇಶಭರಿತ ಭಾವಗಳನ್ನು ವೇಗದ ಜತಿಗಳ ನಿರೂಪಣೆಯೊಂದಿಗೆ ಅಭಿವ್ಯಕ್ತಿಸಿದಳು. ಉಗ್ರನೋಟದಿಂದ ಕೂಡಿದ ಸಿಂಹವಾಹಿನಿಯ ತೇಜಸ್ಸು ಮಿಂಚಿನ ಸಂಚಾರದ ನೃತ್ತಗಳ ಪಲುಕುಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತವಾದವು. ಸ್ಫುಟವಾದ ಆಂಗಿಕಗಳು ಸ್ವಯಂ ಅರ್ಥವನ್ನು ಧ್ವನಿಸಿದವು. ಮಂಡಿ, ಅರೆಮಂಡಿಯಿಂದ ಕೂಡಿದ ಸಂಕೀರ್ಣ ಜತಿಗಳು ದೇವಿಯ ಉಗ್ರಭಾವನೆಗಳಿಗೆ ಕನ್ನಡಿ ಹಿಡಿದವು. ಜೊತೆಗೆ ಆಕೆಯ ಸ್ವರೂಪ-ಶಕ್ತಿಗಳ ಸವಿವರ ವರ್ಣನೆ ಮತ್ತು ಲಾಸ್ಯದ ಬೆಡಗನ್ನೂ ಅನಾವರಣಗೊಳಿಸಿತು. ಒಂದೊಂದು ಸಂಚಾರಿಗಳ ಮೂಲಕ ನವರಸಗಳು ಝೇಂಕರಿಸಿದವು. ಪ್ರಭಾವಶಾಲಿಯಾದ ಅಭಿನಯದೊಂದಿಗೆ ನವರಸನಾಯಕಿ ಸ್ವರಗಳಿಗೆ, ಮೃದಂಗದ ನುಡಿಸಾಣಿಕೆಗೆ ಅನುಗುಣವಾಗಿ ನರ್ತಿಸಿ ಮುದನೀಡಿದಳು ಸಾಹಿತ್ಯ. ಒಟ್ಟಾರೆ, ಭಕ್ತಿ ತುಂದಿಲ ದೈನ್ಯಾಭಿನಯ, ಮನೋಜ್ಞ ಭಂಗಿಗಳ ಮೂಲಕ, ತನ್ನ ನೃತ್ತ-ನೃತ್ಯ ಸಾಮರ್ಥ್ಯ ಸಾಬೀತುಪಡಿಸಿ, ಶ್ರೀ ರಾಜೇಶ್ವರಿಯ ದೈವೀಕ ಆಯಾಮವನ್ನು ಭಕ್ತಿಭಾವದಿಂದ ಪ್ರದರ್ಶಿಸಿದಳು.
ಅಂತ್ಯದಲ್ಲಿ ನವವಿನ್ಯಾಸದ ನೃತ್ತಗಳು, ಪಾದಭೇದಗಳ ಸೌಂದರ್ಯದಿಂದ ಕಂಗೊಳಿಸಿದ ‘ತಿಲ್ಲಾನ’ದೊಂದಿಗೆ ನೃತ್ಯಪ್ರಸ್ತುತಿ ಸಂಪನ್ನವಾಯಿತು. ರಾಮಭಂಟನ ಭಕ್ತಿ-ಸಾಹಸದ ಕಥೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಸಾಹಿತ್ಯಕ್ಕೆ ಅನುರೂಪವಾಗಿ ಕಲಾವಿದೆ ಸಾಹಿತ್ಯ, ಮನೋಹರವಾಗಿ ನರ್ತಿಸಿದಳು. ರಾಮಭಕ್ತ ಆಂಜನೇಯನ ಭಕ್ತಿ ಭಾವತಾದಾತ್ಮ್ಯಗಳು, ಭ್ರಮರಿಗಳಲ್ಲಿ ಗರಿಗಟ್ಟಿದವು.