ಖ್ಯಾತ ‘ಟೆಂಪಲ್ ಸ್ಟ್ರೀಟ್ ಡಾನ್ಸ್ ಅಕಾಡೆಮಿ’ಯ ನೃತ್ಯಗುರು ಸುಕೃತಿ ತಿರುಪತ್ತೂರ್ ಪ್ರಸಿದ್ಧ ‘ಕಲಾಕ್ಷೇತ್ರ’ ದಲ್ಲಿ ನೃತ್ಯಾಭ್ಯಾಸ ಮಾಡಿದ ಸಾಧಕಿ, ಅನೇಕ ನೃತ್ಯ ಪ್ರದರ್ಶನ-ಪ್ರಯೋಗಗಳ ಮೂಲಕ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಉತ್ತಮ ಭರತನಾಟ್ಯ ಕಲಾವಿದೆ. ನಾಟ್ಯಶಾಸ್ತ್ರದ ಕೂಲಂಕಷ ಜ್ಞಾನ, ಶಾಸ್ತ್ರೀಯ ಸೊಗಡಿನ ವೈಶಿಷ್ಟ್ಯ ಪಡೆದ ಅಭಿನಯ ಚತುರೆ, ಬದ್ಧತೆಯ ನಾಟ್ಯಗುರು ಕೂಡ. ನೃತ್ತಾಭಿನಯದಲ್ಲಿ ತನ್ನದೇ ಆದ ಅಸ್ಮಿತೆಯನ್ನು ಅಭಿವ್ಯಕ್ತಿಸುವ ಸುಕೃತಿ ಎಲೆಮರೆಯ ಕಾಯಂತೆ ಸದ್ದಿಲ್ಲದೆ ಸಾಧನೆ ಮಾಡುತ್ತಿರುವವರು.
ಇವರ ಸಮರ್ಥ ಮಾರ್ಗದರ್ಶನದಲ್ಲಿ ತಯಾರಾದ ಶಿಷ್ಯೆ ನವ್ಯ ಮೇಘನಾ ಗೌಡ, ಗುರುಗಳು ಹೇಳಿಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು. ಇತ್ತೀಚಿಗೆ ‘ಸೇವಾಸದನ’ದಲ್ಲಿ ನಡೆದ ‘ರಂಗಪ್ರವೇಶ’ದಲ್ಲಿ ಅವಳ ನಗುಮೊಗದ ಆಹ್ಲಾದಕರ ನರ್ತನ ಎರಡುಗಂಟೆಗಳ ಕಾಲ ರಸಿಕರನ್ನು ಹಿಡಿದಿಟ್ಟುಕೊಂಡಿತ್ತು.
ಮೊದಲಿಗೆ ದೇವ ನಟರಾಜನಿಗೆ, ನರ್ತಿಸುವ ರಂಗ, ಪ್ರೇಕ್ಷಕರು ಹಾಗೂ ವಾದ್ಯಗೋಷ್ಟಿಗೆ ಕಲಾವಿದೆ ನವ್ಯಾ, ವಿನಮ್ರತೆಯಿಂದ, ತನ್ನ ಸುಂದರ ಆಂಗಿಕಗಳಿಂದ ಕಲಾತ್ಮಕವಾಗಿ ನಮನ ಸಲ್ಲಿಸಿದಳು. ಜೊತೆಗೆ ಗಣಪತಿ-ಸರಸ್ವತಿಗೆ ನಾಟ್ಯಾರಾಧನೆಯ ಸಮರ್ಪಣೆ. ಎಳೆಬಾಲೆಯ ಸುಂದರ ನೃತ್ಯ, ಅರೆಮಂಡಿ, ಆಕಾಶಚಾರಿಗಳಿಂದ ಕೂಡಿದ ಮೋಹಕಭಂಗಿಗಳಿಂದ ಶೋಭಿಸಿದವು. ‘ಕಲಾಕ್ಷೇತ್ರ’ ಪದ್ಧತಿಯ ಶಾಸ್ತ್ರದ ಚೌಕಟ್ಟಿನೊಳಗೆ ವಿಜ್ರುಂಭಿಸಿದ ಸರಸ್ವತಿ ರಾಗದ ‘ಜತಿಸ್ವರ’- ವಿವಿಧ ಅಡವು-ಸ್ವರಗಳ ವಿನ್ಯಾಸದಲ್ಲಿ, ಪಲ್ಲವಿ-ಅನುಪಲ್ಲವಿ, ಸೊಗಸಾದ ಮುಕ್ತಾಯಗಳ ನಿರೂಪಣೆ, ಅಂಗಶುದ್ಧಿಯಿಂದ ಗಮನ ಸೆಳೆಯಿತು.
ಅಭಿನಯ ಪ್ರಧಾನ ‘ಧರು ವರ್ಣಂ’( ರಚನೆ-ಮುತ್ತಯ್ಯ ಭಾಗವತಾರ್, ಕಮಾಚ್ ರಾಗ,ಆದಿತಾಳ ) ‘ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ’- ಮೀನಾಕ್ಷಿದೇವಿಯನ್ನು ಸ್ತುತಿಸುವ ಕೀರ್ತನೆಯನ್ನು ಕಲಾವಿದೆ, ಮಂದಾನಿಲನಂತೆ ಸಾಗುವ ನಿಧಾನಗತಿಯ ಜತಿಗಳಿಂದ ಆರಂಭಿಸಿದಳು. ಅವು ಕ್ರಮೇಣ ವೇಗ ಪಡೆಯುತ್ತ, ಖಚಿತ ಅಡವುಗಳ ಸೌಂದರ್ಯದಲ್ಲಿ ಅಚ್ಚುಕಟ್ಟಾಗಿ ನಿರೂಪಿತವಾದವು. ಅರ್ಥವತ್ತಾದ ಹಸ್ತಚಲನೆ-ಭಂಗಿಗಳಲ್ಲಿ ಮಾತೆಯ ಸಮ್ಮೋಹಕ ರೂಪವನ್ನು ಚಿತ್ರಿಸಿದಳು. ಸ್ಫೂರ್ತಿ ನೀಡುವಂತಿದ್ದ ಗುರು ಸುಕೃತಿಯ ಸ್ಫುಟವಾದ ನಟುವಾಂಗ, ವಿಶೇಷ ವಿನ್ಯಾಸದ ಜತಿಗಳ ಮೆರುಗಿನಲ್ಲಿ ನವ್ಯಳ ನೃತ್ಯಸಾಮರ್ಥ್ಯವನ್ನು ಒರೆಗೆ ಹಚ್ಚಿತು. ಗಾಯಕ ರೋಹಿತ್ ಭಟ್ ರವರ ಸೌಮ್ಯ-ಸಲಿಲ ಗಾನಧಾರೆ, ಗಣೇಶರ ಸುಶ್ರಾವ್ಯ ಮುರಳೀವಾದನ, ನಾರಾಯಣಸ್ವಾಮಿಯ ಮೃದಂಗದ ನುಡಿಸಾಣಿಕೆ, ಗೀತಾರ ವೀಣಾವಾದನ ಭಕ್ತಿಪೂರ್ಣ ಕೃತಿಗೊಂದು ವಿಶೇಷ ಪ್ರಭಾವಳಿ ನೀಡಿತ್ತು.
ಯಜ್ಞಫಲದಿಂದ ಜನಿಸಿದ ಮಗುವಿನ ಲಾಲನೆ-ಪಾಲನೆ, ವೀರೋಚಿತ ವಿದ್ಯೆಗಳ ತರಬೇತಿ, ಅನಂತರ ಸಂಚಾರಿಯಲ್ಲಿ, ಸುಂದರೇಶ್ವರನೊಡನೆ ಪಾಣಿಗ್ರಹಣದ ದೃಶ್ಯಗಳನ್ನು ನವ್ಯ, ತನ್ನ ಲೀಲಾಜಾಲ ನರ್ತನ, ಸುಮನೋಹರ ಭಂಗಿಗಳಿಂದ ಚಿತ್ರಿಸಿದಳು. ಚಿಟ್ಟೆಸ್ವರದಲ್ಲಿ ಆಶ್ರಯದಾತ ಕೃಷ್ಣರಾಜೇಂದ್ರನನ್ನು ಸ್ತುತಿಸಿ, ಚಾಮುಂಡೇಶ್ವರಿಯ ಸೌಮ್ಯ ಹಾಗೂ ಉಗ್ರರೂಪಗಳನ್ನು ಮನಮೋಹಕವಾಗಿ ಕಟ್ಟಿಕೊಟ್ಟಳು. ಗುರು ಸುಕೃತಿಯ ಸೃಜನಶೀಲ ನೃತ್ಯಸಂಯೋಜನೆ ನೃತ್ತ-ನೃತ್ಯಗಳ ಹದವರಿತ ಮಿಶ್ರಣದಲ್ಲಿದ್ದು ಹೃದಯವನ್ನು ತುಂಬಿತು.
ಶ್ರೀ ಡಿ.ವಿ.ಜಿ. ಅವರ ಜನಪ್ರಿಯ ‘ಅಂತಃಪುರ ಗೀತೆ’ಗಳಿಂದ ಆರಿಸಿಕೊಂಡ ‘ಏನೀ ಮಹಾನಂದವೇ’ ಬೇಲೂರು ಚೆನ್ನಕೇಶವನನ್ನು ತನ್ಮಯತೆಯಿಂದ ಆರಾಧಿಸುತ್ತ ನರ್ತಿಸುವ ಶಿಲಾಬಾಲಿಕೆಯನ್ನು ಆವಾಹಿಸಿಕೊಂಡು ನವ್ಯ, ಆನಂದಿಸುತ್ತ ಮೈಮರೆತು ಕುಣಿದಳು. ಪ್ರೇಮಾರಾಧನೆಯ ಲಜ್ಜೆಯ ಓರೆನೋಟ, ಒಲುಮೆಯ ಹೆಜ್ಜೆ-ಗೆಜ್ಜೆಗಳ ಸೌಂದರ್ಯ, ಭ್ರಮರಿಗಳ ಮೆರುಗು ಕಣ್ಣಿಗೆ ತಂಪೆರೆದವು. ಅನಂತರದ ಸಾಮಾಜಿಕ ಆಯಾಮವುಳ್ಳ ಕಮಾಚ್ ರಾಗದ ‘ಜಾವಳಿ’ಯ ಅಭಿನಯದಲ್ಲಿ ಕಲಾವಿದೆ, ಮುಗ್ಧನಾಯಿಕೆಯ ಪ್ರಣಯ ಭಾವನೆ-ತುಮುಲಗಳನ್ನು, ಸೊಗಸಾಗಿ ಅನಾವರಣಗೊಳಿಸಿದಳು. ಆಕೆಯ ಅಭಿನಯದಲ್ಲಿ ಮುಗ್ಧತೆಯೊಂದಿಗೆ ಪ್ರಾಮಾಣಿಕ ಸೊಬಗೂ ಅಡಗಿತ್ತು.
ಶ್ರೀಪುರಂದರದಾಸರ ದೇವರನಾಮ ‘’ ಚಿಕ್ಕವನೇ ಇವನು, ನಮ್ಮ ಕೈಗೆ ಸಿಕ್ಕದೆ ಓಡುವನು ’’ ಎಂದು ಗೋಪಿಕೆಯರು ಕೃಷ್ಣನ ತುಂಟಾಟವನ್ನು ಬಣ್ಣಿಸುತ್ತಾ ಅಚ್ಚರಿಪಡುವ, ಹುಸಿಮುನಿಸು ತಾಳುವ ಸನ್ನಿವೇಶಗಳನ್ನು ನವ್ಯಾ, ತನ್ನ ಮುದವಾದ ಅಭಿನಯದಿಂದ ಮನಸ್ಸನ್ನು ಆವರಿಸಿದಳೆಂದರೆ ಅತಿಶಯೋಕ್ತಿಯಲ್ಲ. ಪೂರ್ಣಚಂದ್ರಿಕ ರಾಗದ ‘’ತಿಲ್ಲಾನ’’ ದಲ್ಲಿ ಕಲಾವಿದೆ ಪ್ರದರ್ಶಿಸಿದ ನೃತ್ತಲಾಸ್ಯ , ಮಿಂಚಿನ ಸಂಚಾರದ ಜತಿಗಳು ಆಕರ್ಷಿಸಿದವು. ಒಟ್ಟಾರೆ ಆಕೆಯ ಲೀಲಾಜಾಲದ ನೃತ್ಯಸಾಮರ್ಥ್ಯ, ವಯಸ್ಸಿಗೇ ಮೀರಿದ ಅಭಿನಯಪಕ್ವತೆ ಮೆಚ್ಚುಗೆ ತಂದಿತ್ತು.