Image default
Dance Reviews

ಮೋಹಕತೆ ಚೆಲ್ಲಿದ ಕನ್ಯಾತ್ರಯರ ನರ್ತನ

ನೃತ್ಯ ಕಲಿತ ಅಥವಾ ಕಲಿಯುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೊದಲಬಾರಿಗೆ ರಂಗವೇರುವಾಗ ಗೆಜ್ಜೆಯನ್ನು ಕಾಲಿಗೆ ಕಟ್ಟಿಕೊಂಡು, ವಿದ್ಯುಕ್ತವಾಗಿ ‘’ಗೆಜ್ಜೆಪೂಜೆ’’ ವಿಧಿಯನ್ನು ಪೂರೈಸಿ ಶಾಸ್ತ್ರೋಕ್ತವಾಗಿ ವೇದಿಕೆಯಲ್ಲಿ ನರ್ತಿಸುವುದು ಸಂಪ್ರದಾಯ. ಇದು ‘ರಂಗಪ್ರವೇಶ’ದ ಪೂರ್ವರಂಗ ವಾಡಿಕೆ.

ಖ್ಯಾತ ‘’ರಾವ್ಸ್ ಅಕಾಡೆಮಿ ಆಫ್ ಡಾನ್ಸ್’’ ಸಂಸ್ಥೆಯ ನಾಟ್ಯಗುರು ಶುಭಾ ಪ್ರಹ್ಲಾದ್, ಬಹು ಕಾಳಜಿಯಿಂದ ಮಕ್ಕಳಿಗೆ ನೃತ್ಯಶಿಕ್ಷಣ ನೀಡುವವರು ಮತ್ತು ಉತ್ತಮ ಗುಣಮಟ್ಟ, ಸೃಜನಶೀಲತೆ ಹಾಗೂ ನಿಷ್ಠೆ-ದೃಢಸಂಕಲ್ಪಗಳಿಗೆ ಹೆಸರಾದವರು. ವಿದ್ಯಾಕಾಂಕ್ಷಿಗಳು ಪರಿಪೂರ್ಣವಾಗಿ ವಿದ್ಯೆಯನ್ನು ಕರಗತಗೊಳಿಸಿಕೊಳ್ಳದ ಹೊರತು ರಂಗಪ್ರವೇಶ ಮಾಡಿಸುವ ಆತುರ ತೋರದ, ಆಳವಾದ ಜ್ಞಾನ, ಶಿಕ್ಷಣ ನೀಡುವತ್ತಲೇ ಪರಿಶ್ರಮಿಸುವ ನಾಟ್ಯಗುರು.

ಶುಭಾ ಪ್ರಹ್ಲಾದ್ ಶಿಷ್ಯೆಯರಾದ ಅಂಕಿತಾ ರಶ್ಮಿ ರಾಜು, ಪೂರ್ಣಶ್ರೀ ಮತ್ತು ವರ್ಷಿತಾ ಗೊಲ್ಲ ತಾವು ಇದುವರೆಗೂ ಪರಿಶ್ರಮದಿಂದ ಕಲಿತ ನೃತ್ಯ ತರಬೇತಿಯನ್ನು ಕಲಾರಸಿಕರ ಮುಂದೆ ಆಹ್ಲಾದಕರವಾಗಿ ಪ್ರದರ್ಶಿಸಿದ್ದು ಅಂದಿನ ‘ಗೆಜ್ಜೆಪೂಜೆ’ಯ ವಿಶೇಷ. ಇತ್ತೀಚಿಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಕನ್ಯಾತ್ರಯರ ಪ್ರತಿಭಾ ಪ್ರದರ್ಶನ ಮೆಚ್ಚುಗೆ ಗಳಿಸಿತು.

ಪ್ರಾರಂಭದ ‘ಪುಷ್ಪಾಂಜಲಿ’ಯಲ್ಲಿ ಒಡಮೂಡಿದ ನೃತ್ತಗಳ ವಿನ್ಯಾಸ ಆಕರ್ಷಕವಾಗಿತ್ತು. ಕಲಾವಿದೆಯರ ನಡುವೆ ಕಂಡುಬಂದ ಸಾಮರಸ್ಯ, ಲವಲವಿಕೆಯ ನರ್ತನ ಗಮನ ಸೆಳೆದಿತ್ತು.  ಊತಕಾಡು ವೆಂಕಟಸುಬ್ಬಯ್ಯರ್ ರಚಿಸಿದ ‘ಶ್ರೀ ವಿಘ್ನರಾಜಂ ಭಜೆ’ ಗಣೇಶಸ್ತುತಿಯಲ್ಲಿ, ಗಣಪನ ವಿವಿಧ ಸ್ವರೂಪಗಳನ್ನು ಸುಂದರವಾಗಿ, ಅಷ್ಟೇ ಪ್ರಪ್ಹುಲ್ಲತೆಯಿಂದ ಅಭಿವ್ಯಕ್ತಿಸಿದರು. ಖಚಿತ ಅಡವು -ಹಸ್ತಚಲನೆಗಳ ಅಂಗಶುದ್ಧಿಯ ಜೊತೆಗೆ ಲಾವಣ್ಯದ ಮಿನುಗು ಕಂಡಿತ್ತು.

ಕಲ್ಯಾಣಿರಾಗದ ‘ಜತಿಸ್ವರ’ದಲ್ಲಿ, ಮುಂದಿನ ನೃತ್ಯಕ್ಕೆ ಅಣಿಗೊಳಿಸುವ ಎಲ್ಲ ನೃತ್ತಗಳ ಮಾದರಿಗಳೂ ದೃಗ್ಗೋಚರವಾದವು. ಸವಿಸ್ತಾರ ಪಾದಭೇದಗಳು, ನೃತ್ತಗಳ ಪ್ರಸ್ತುತಿಯಲ್ಲಿ ಅವರು ಪಡೆದುಕೊಂಡ ಉತ್ತಮ ತರಬೇತಿ, ಕಲಾವಿದರ ನಡುವಣ ಹೊಂದಾಣಿಕೆಗಳ ಶಿಸ್ತು ಗೋಚರಿಸಿತು. ವಿವಿಧ ಚಾರಿಗಳು ಅಂದವಾಗಿದ್ದವು. ‘ವರ್ಣ’ಕ್ಕಿಂತ ಮುಂಚಿತವಾಗಿ ಕಲಾವಿದರ ಅಭಿನಯ ಸಾಮರ್ಥ್ಯವನ್ನು ಪರಿಚಯಿಸುವ ‘ಶಬ್ದಂ’-ರಾಗಮಾಲಿಕೆಯ ಕೃಷ್ಣಸ್ತುತಿ ಮೋಹಕವಾಗಿ ಪ್ರಸ್ತುತವಾಯಿತು. ಬಾಲಕೃಷ್ಣನ ಸಾಹಸಗಾಥೆಯನ್ನು ಅರುಹುವ ಘಟನೆಗಳು ರಮ್ಯವಾಗಿ ಮೂಡಿಬಂದವು. ಅರ್ಥವನ್ನು ಸ್ಫುಟವಾಗಿ ಹೊಮ್ಮಿಸಿದ ಅಭಿನಯ ಸಾರ್ಥಕ್ಯ ಕಲಾವಿದೆಯರ ಗೆಲುವು.  ಅಂತ್ಯದ ಮೋಹಕಭಂಗಿಗಳ ವಿನ್ಯಾಸ ಗುರು ಶುಭಾ ಅವರ ವೈಶಿಷ್ಟ್ಯ.

ಮುಂದೆ ಮುತ್ತಯ್ಯ ಭಾಗವತರ್ ರಚನೆಯ ‘ಧರು ವರ್ಣಂ’’- ಚಾಮುಂಡೇಶ್ವರಿಯ ಮಹಿಮೆಯನ್ನು ಸಾರುವ ಕೃತಿ, ಕಲಾವಿದೆಯರ ವರ್ಚಸ್ವೀ ಅಭಿನಯದೊಂದಿಗೆ ಸಾಗಿತು. ಚಂಡ-ಮುಂಡ ರಕ್ಕಸರು, ಪಾರ್ವತಿದೇವಿಯನ್ನು ಕಂಡು ಅವಳು ತಮ್ಮ ದೈತ್ಯ ರಾಜನಿಗೆ ತಕ್ಕವಳು ಎಂದು ಅವಳನ್ನು ಎಳೆದೊಯ್ಯಲು ಪ್ರಯತ್ನಿಸಿದಾಗ, ದೇವಿ ಆತ ತನ್ನೊಂದಿಗೆ ಹೋರಾಡಿ ಗೆದ್ದರೆ ಸರಿ ಎಂದು ಸಮ್ಮತಿಸುವಳು. ಆದರೆ ಅವರಿಬ್ಬರು, ಅವನೇಕೆ ತಾವೇ ಕದನಕ್ಕೆ ಸಿದ್ಧ ಎಂದು ಹೋರಾಡತೊಡಗುವರು. ದೇವಿ ಮತ್ತು ಅವರೀರ್ವರ ನಡುವೆ ಭೀಕರ ಕದನ ನಡೆದು, ಚಾಮುಂಡಿಯಾದ ಆಕೆಯ ಪೌರುಷಕ್ಕೆ ಸೋತು, ಆಕೆಯಿಂದ ಸಂಹರಿಸಲ್ಪಡುವರು. -ಇದು ಚಾಮುಂಡೇಶ್ವರಿಯ ‘ದುಷ್ಟ ಸಂಹಾರ-ಶಿಷ್ಟ ರಕ್ಷೆ’ಯ ಸಂದೇಶ ಸಾರುವ, ಆಕೆಯ ಉಗ್ರರೂಪವನ್ನು ಅನಾವರಣಗೊಳಿಸುವ ಕಥಾಭಾಗ.  ಮೂವರೂ ಒಂದೊಂದು ಪಾತ್ರವಾಗಿ ಪರಿಣಾಮಕಾರಿ ಅಭಿನಯ ನೀಡಿದ್ದು ಶ್ಲಾಘನೀಯ. ಪರಸ್ಪರ ಹೋರಾಟದಲ್ಲಿ ಪ್ರಸ್ತುತಪಡಿಸಿದ ಮಂಡಿ ಅಡವುಗಳು, ವಿವಿಧ ವಿನ್ಯಾಸದ ನೃತ್ತಗಳಲ್ಲಿ ಮಿಂಚಿದ ವೀರಾವೇಶದ ನರ್ತನ ಮನಮುಟ್ಟಿತು.

‘’ ಸನ್ನುತಾಂಗಿ ಶ್ರೀ ಚಾಮುಂಡೇಶ್ವರಿ’’ಯನ್ನು ಕೊಂಡಾಡಿದ ಭಾರತೀ ವೇಣುಗೋಪಾಲರ  ಭಾವಪೂರ್ಣ ಗಾಯನ, ವಿ.ಆರ್.ಸಿ.ಮೃದಂಗದ ನುಡಿಸಾಣಿಕೆ, ಮಧುಸೂದನ್ ವಯೊಲಿನ್, ಜಯರಾಂ ಕೊಳಲದನಿಯೊಡನೆ ಶುಭಾರ ಸುಸ್ಪಷ್ಟ ನಟುವಾಂಗದ ಝೇಂಕಾರ ನೃತ್ಯದ ಪರಿಣಾಮವನ್ನು ಉನ್ನತೀಕರಿಸಿತು.

ಭೂಲೋಕಕ್ಕೆ ಗಂಗೆಯನ್ನು ಭಗೀರಥ ಅವತರಣಗೊಳಿಸಿದ ಕಥೆಯೇ ‘ಶಿವಕೃತಿ’ಯಾಗಿ ‘’ ಭೋ ಶಂಭೋ…’’ ಸುಂದರ ನೃತ್ಯಸಂಯೋಜನೆಯಲ್ಲಿ ಕಣ್ತುಂಬಿತು. ಸೊಕ್ಕಿಹರಿದ ಗಂಗೆಯನ್ನು ತನ್ನ ಜಟೆಯಲ್ಲಿ ಬಂಧಿಸಿ ಲೋಕಕಲ್ಯಾಣಗೈದ ಶಿವಾರ್ಚನೆ, ನೃತ್ಯಾಭಿಷೇಕ ಮುದ ತಂದಿತ್ತು. ಶ್ರೀಕೃಷ್ಣನ ಮುರಳೀಗಾನದ ಸವಿಯುಣಿಸಿದ ಮೋಹಕಚಲನೆಗಳ ‘ತಿಲ್ಲಾನ’, ದಶಾವತಾರದ ‘’ಮಂಗಳಂ’’ ವಿಶೇಷ ರಸಾನುಭವ ನೀಡಿತು.

Related posts

ಸಂಸ್ಕೃತಿಯ ಮುದ ನೀಡಿದ ನೃತ್ಯ ಸಂಭ್ರಮ

YK Sandhya Sharma

ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ  ರಮ್ಯನರ್ತನ

YK Sandhya Sharma

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma

Leave a Comment

This site uses Akismet to reduce spam. Learn how your comment data is processed.