Image default
Dancer Profile

ನೃತ್ಯ ತಜ್ಞೆ ಗುರು ಡಾ.ಲಲಿತಾ ಶ್ರೀನಿವಾಸನ್

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಸೊಗಡಿನ  `ನೂಪುರ ಭರತನಾಟ್ಯ ಶಾಲೆ’ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿಸುವ ನಿಷ್ಠೆ, ಕಲಾತ್ಮಕತೆ ಮತ್ತು ಅನ್ವೇಷಕ ಪ್ರಯೋಗಗಳಿಗೆ ಹೆಸರಾದವರು ಹಿರಿಯ ನಾಟ್ಯಗುರು ಡಾ.ಲಲಿತಾ ಶ್ರೀನಿವಾಸನ್.

ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ `ಕಲ್ಕುಂಟೆ’ಯವರಾದ ಲಲಿತಾ ಅವರ ತಂದೆ ಎಂಜಿನಿಯರ್. ಸರಕಾರೀ ಉದ್ಯೋಗವಾದ ಕಾರಣ ಅವರಿಗೆ ಆಗಿನ ಮೈಸೂರು ರಾಜ್ಯಾದ್ಯಂತ ವರ್ಗಾವಣೆಯಾಗುತ್ತ  ಹೋದಂತೆ ಬೇರೆ ಬೇರೆ ಊರುಗಳಲ್ಲಿ ಶಿಕ್ಷಣ ನಡೆಯಿತು. ಬಾಲ್ಯದ ಆಸಕ್ತಿ ನೃತ್ಯ. ಹಾಸನದ ಜಾತ್ರೆಯಲ್ಲಿ ಪ್ರದರ್ಶನ ನೀಡಲು ಹೊರಗಿಂದ  ಬರುತ್ತಿದ್ದ ನೃತ್ಯ-ನಾಟಕಗಳ ಕಲಾವಿದರ ಅಭಿನಯ ಮತ್ತು ನಾಟ್ಯ ನೋಡಿದಾಗ ಪ್ರೇರಣೆಗೊಂಡ ಲಲಿತ ತಾವೂ ಮನಸ್ಸಿಗೆ ಬಂದಂತೆ ನರ್ತಿಸುತ್ತಿದ್ದರಂತೆ. ಅವರ ಆಸಕ್ತಿ ಗಮನಿಸಿದ ತಾಯಿ, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವ ಸಂದರ್ಭದಲ್ಲಿ ನಾಟ್ಯಾಚಾರ್ಯ ಹೆಚ್.ಆರ್. ಕೇಶವಮೂರ್ತಿಯವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರಂತೆ. ಆಗ ಲಲಿತಾ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು.

ಹತ್ತೊಂಭತ್ತನೆಯ ವಯಸ್ಸಿನವರೆಗೆ ಅಡೆತಡೆಯಿಲ್ಲದೆ ನಾಟ್ಯ ಕಲಿಕೆ ಮುಂದುವರಿಯಿತು. ಆದರೆ ಹತ್ತೊಂಭತ್ತನೆಯ ವಯಸ್ಸಿಗೇ ಶ್ರೀನಿವಾಸನ್ ಅವರೊಂದಿಗೆ ವಿವಾಹ, ಸಂಸಾರ, ಮಗಳ ಜನನ. ಹೀಗಾಗಿ ಮೂರುವರ್ಷಗಳು ನೃತ್ಯ ಕಲಿಕೆಗೆ ಬ್ರೇಕ್ ಬಿದ್ದಿತ್ತು. ಲಲಿತಾ ಅವರ ಮನಸ್ಸು ನೃತ್ಯಕ್ಕಾಗಿ ತುಡಿಯುತ್ತಿತ್ತು. ಮನೆಯವರನ್ನು ಒಪ್ಪಿಸಿ ಮತ್ತೆ  ಅದೇ ಗುರುಗಳ ನೃತ್ಯವಿದ್ಯಾರ್ಥಿನಿಯಾಗಿ ಮುಂದುವರಿದರು. ಇಪ್ಪತ್ತೆರಡನೆಯ ವಯಸ್ಸಿನಲ್ಲಿ `ರಂಗಪ್ರವೇಶ’. ತದನಂತರ ನೃತ್ಯ ಪ್ರದರ್ಶನಗಳು ಒಂದರ ನಂತರ ಒಂದು ನಡೆಯುತ್ತ ಹೋದದ್ದರಿಂದ ಅವರ ಉತ್ಸಾಹ ಇಮ್ಮಡಿಯಾಯಿತು.

ವಿದ್ವತ್ ಪರೀಕ್ಷೆಯಲ್ಲಿ ನಾಡಿಗೆ ಮೊದಲಸ್ಥಾನ ಪಡೆದ ಅವರಿಗೆ ಅಭಿನಯ ಎಂದರೆ ಅತ್ಯಂತ ಒಲವು. ಪ್ರತಿವಾರಾಂತ್ಯ ಮೈಸೂರಿಗೆ ಪಯಣಿಸಿ, ಪದ್ಮಭೂಷಣ ಡಾ. ವೆಂಕಟಲಕ್ಷಮ್ಮನವರಲ್ಲಿ ಅಭಿನಯ ಪ್ರಾವೀಣ್ಯತೆಯನ್ನು ಕರಗತ ಮಾಡಿಕೊಳ್ಳುವ ಯತ್ನ. ಹಾಗೆಯೇ ‘ನೃತ್ತ’ ದ ಬಗ್ಗೆ ಹೆಚ್ಚಿನ ಕಲಿಕೆಗೆ ನೃತ್ಯಜ್ಞೆ ಜೇಚಮ್ಮ ಅವರ ಬಳಿ ವಿದ್ಯಾಭ್ಯಾಸ. ಸಣ್ಣ ಮಗುವಿದ್ದರೂ ನೃತ್ಯಸಾಧನೆಯಿಂದ ಗಮನ ವಿಚಲಿತವಾಗಲಿಲ್ಲ. ಪರಿಶ್ರಮ-ಪ್ರಾಮಾಣಿಕ ಅಭ್ಯಾಸ ನಿತ್ಯ ಮಂತ್ರವಾಯಿತು. ಹೆಚ್ಚಿನ ವಿದ್ಯಾರ್ಜನೆಯ ಬಗ್ಗೆ ಮನ ಹಾತೊರೆಯುತ್ತಲೇ ಇತ್ತು. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಮುಗಿಸಿ, ಧಾರವಾಡ ವಿಶ್ವವಿದ್ಯಾಲಯದಿಂದ ಇತಿಹಾಸದ ವಿಷಯದ ಬಗ್ಗೆ ಎಂ.ಎ.ಪದವಿ ಪಡೆದರು.

ಲಲಿತಾ ಅವರದು ಬಹುಮುಖ ಆಸಕ್ತಿ. ಓದುವಾಗಲೇ ಚಿತ್ರ ಬರೆಯುವ ಪೇಂಟಿಂಗ್ ಹವ್ಯಾಸ ಬೆಳೆಸಿಕೊಂಡಿದ್ದು, ಟೈಪಿಂಗ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಟೈಲರಿಂಗ್ , ಹೇರ್ ಸ್ಟೈಲ್, ಕುಕಿಂಗ್, ಇಂಟೀರಿಯರ್ ಡೆಕೋರೇಶನ್ ತರಬೇತಿಗಳನ್ನು ಪಡೆದು,  ಜೊತೆಗೆ  ಪ್ರಸಾಧನ ಕಲೆಯನ್ನೂ ಕಲಿತರು. ವಿದೇಶಿ ಕಾಸ್ಮೆಟಿಕ್ಸ್ ಕಂಪೆನಿಯೊಂದರಲ್ಲಿ ಸೂಪರ್ವೈಸರ್ ಆಗಿ ಪ್ರಸಾಧನ ಉತ್ಪನ್ನಗಳ ಪ್ರದರ್ಶನ-ಮಾರಾಟ ಕಾರ್ಯಗಳ ಅಭಿವೃದ್ಧಿಯಲ್ಲಿ ಭಾಗಿಯಾದರು.

ನಾಟ್ಯಗುರುವಾಗಿ ಲಲಿತಾ ಶ್ರೀನಿವಾಸನ್ , ನಲವತ್ತೈದು ವರುಷಗಳ ಹಿರಿದಾದ ಅನುಭವ ಪಯಣದಲ್ಲಿ ನೃತ್ಯಶಾಸ್ತ್ರದ ಬಗ್ಗೆ ಆಳವಾದ ಜ್ಞಾನ, ನೃತ್ಯ ಸಂಯೋಜನೆಯ ಕೌಶಲ್ಯ ಮತ್ತು ಪಾಂಡಿತ್ಯವನ್ನು ಗಳಿಸಿದ್ದಾರೆ. ಮೊದಲಿಗೆ ಮಲ್ಲೇಶ್ವರದ ಎಂ.ಎಲ್.ಎ.ಸಂಸ್ಥೆಯಲ್ಲಿ ನಾಟ್ಯ ಕಲಿಸುತ್ತಿದವರು, 1978 ರಲ್ಲಿ ತಮ್ಮದೇ ಆದ ‘ನೂಪುರ’ ನಾಟ್ಯಶಾಲೆ ತೆರೆದು,  ಇದುವರೆಗೂ ಸಾವಿರಾರು ನೃತ್ಯವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ನೃತ್ಯಪಟುಗಳಾಗಿ ತಯಾರು ಮಾಡಿರುವ ಕೀರ್ತಿ ಅವರದು. ನೃತ್ಯ, ಸಂಗೀತ ಮತ್ತು ನಟುವಾಂಗವನ್ನು ಇಲ್ಲಿ ಆಸ್ಥೆಯಿಂದ ಕಲಿಸಲಾಗುತ್ತದೆ.  

ಒಂದು ಕಾಲದಲ್ಲಿ ಎಲ್ಲೆಡೆ ನೂಪುರ ಶಾಲೆಯ ಮಕ್ಕಳದೇ  ನೃತ್ಯ ಸುಗ್ಗಿ. ಪಟ್ಟದಕಲ್ಲು, ಸೋಮನಾಥಪುರ, ಕಾಕತೀಯ ನೃತ್ಯೋತ್ಸವ, ಲಾಸ್ಯೋತ್ಸವ, ಮುಂತಾದ ಅನೇಕಾನೇಕ ಕರ್ನಾಟಕದ ಎಲ್ಲ ಉತ್ಸವಗಳಲ್ಲಿ `ನೂಪುರ’ ಭಾಗಿ. ದೆಹಲಿಯ ಐ.ಸಿ.ಸಿ.ಆರ್.ನ ಗುರು-ಶಿಷ್ಯ ಪರಂಪರ, ಚೆನ್ನೈನ ಕೃಷ್ಣಗಾನಸಭಾ ಉತ್ಸವ, ರಾಜಾಸ್ಥಾನ ಮತ್ತು ತಂಜಾವೂರು , ಲಕ್ನೋ, ನಾಗಪುರ್, ಮುಂಬೈ, ಪುಣೆ, ಹೈದರಾಬಾದ್ ಮುಂತಾದ ಉತ್ಸವಗಳಲ್ಲಿ ಮತ್ತು ಯು.ಕೆ., ಯು.ಎಸ್.ಎ.ಮತ್ತು ಕೆನಡಾಗಳಲ್ಲಿ ಲಲಿತಾ ಶ್ರೀನಿವಾಸನ್ ನೃತ್ಯ ಸಂಯೋಜಿಸಿದ ನೃತ್ಯರೂಪಕಗಳನ್ನು ಪ್ರದರ್ಶಿಸಲಾಗಿದೆ.

ಪ್ರಯೋಗಾತ್ಮಕ ಮತ್ತು ಸೃಜನಶೀಲ ನೃತ್ಯರೂಪಕಗಳು ಇವರ ವೈಶಿಷ್ಟ್ಯ. ಇವರ ಪ್ರಮುಖ ನೃತ್ಯರೂಪಕಗಳು- ಚಿತ್ರಾಂಗದೆ, ಗೌಡರಮಲ್ಲಿ, ದೇವಕನ್ನಿಕೆ, ಪ್ರೇಮ-ಭಕ್ತಿ-ಮುಕ್ತಿ, ಆನಂದದೇವಿ, ನಿಶಾ ವಿಭ್ರಮ, ಲಾಸ್ಯೋತ್ಸವ, ನಾಟ್ಯತರಂಗ, ಶ್ರೀ ಕೃಷ್ಣ ಪಾರಿಜಾತ, ಕರ್ನಾಟಕ ನೃತ್ಯವಾಹಿನಿ ಮುಂತಾದ ಒಟ್ಟು 28 ನೃತ್ಯರೂಪಕಗಳನ್ನು ನಿರ್ಮಿಸಿ ಎಲ್ಲೆ ಡೆ ಯಶಸ್ವೀ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ. ಎಲ್ಲ ದಾಸರ ಸುಳಾದಿ ಪ್ರಬಂಧಗಳನ್ನು ನೃತ್ಯಕ್ಕೆ ಅಳವಡಿಸಿ ಪ್ರದರ್ಶಿಸಿರುವ ಹಿರಿಮೆ ಇವರದು. ಕನ್ನಡದಲ್ಲಿ ಅನೇಕ ವರ್ಣ ಗಳು ಮತ್ತು ತಿಲ್ಲಾನಗಳನ್ನು ರಚಿಸಿ ವಾಗ್ಗೇಯಕಾರರೆನಿಸಿಕೊಂಡಿದ್ದಾರೆ.

ಇವರ ಪ್ರತಿಭೆಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಉನ್ನತ ‘ಶಾಂತಲಾ’ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ, ಅನನ್ಯ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ, ಶಿರೋಮಣಿ, ಪ್ರಿಯದರ್ಶಿನಿ, ಕರ್ನಾಟಕ ಕಲಾತಿಲಕ ಮುಂತಾದ ಸಾಲು ಸಾಲು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೋರೇಟಿಗೆ ಭಾಜನರಾಗಿದ್ದಾರೆ. ಇವರು ರಚಿಸಿದ ಎರಡು ಕೃತಿಗಳು ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ಪ್ರಕಟವಾಗಿವೆ. ವಿಶ್ವದಾದ್ಯಂತ ಇವರ ಶಿಷ್ಯರು ಇವರ ಹೆಸರನ್ನು ಖ್ಯಾತಗೊಳಿಸುತ್ತಿರುವ ಜೊತೆಗೆ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ‘ನಿತ್ಯ-ನೃತ್ಯ’ ರಾಷ್ಟ್ರೀಯ ನೃತ್ಯೋತ್ಸವ ಇವರಿಗೆ ಅಪಾರ ಕೀರ್ತಿ ತಂದಿದ್ದು ನಾಡಿನಲ್ಲೆಡೆ ಹೆಸರುವಾಸಿಯಾಗಿದೆ .

Related posts

ಕೃಷಾಲ-ಕಥಕ್ ನೃತ್ಯಶಾಲೆ-ಅಂತರ್ಜಾಲದ ನೃತ್ಯ ತರಬೇತಿ

YK Sandhya Sharma

ನೃತ್ಯಸಾಧನೆಯ ಛಲಗಾರ್ತಿ ಅನುಪಮಾ ಮಂಗಳವೇಡೆ

YK Sandhya Sharma

‘ಕರ್ನಾಟಕ ಡಾನ್ಸಿಂಗ್ ಕ್ವೀನ್ 2021 ’- ಕೂಚಿಪುಡಿ ನೃತ್ಯ ಕಲಾವಿದೆ ರೇಖಾ ಸತೀಶ್

YK Sandhya Sharma

Leave a Comment

This site uses Akismet to reduce spam. Learn how your comment data is processed.