Image default
Dancer Profile

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

 ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ  ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ  ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ,  ಸಂಶೋಧನೆಗಳನ್ನು ಮಾಡಿ ನೃತ್ಯದ  ವ್ಯಾಕರಣದ ಮೇಲೆ ಹಿಡಿತ  ಅಥವಾ  ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ .

 ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ.  ಹೀಗಾಗಿ ಈ ಕ್ಷೇತ್ರ ಬಹು ಜನರ  ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು  ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ  ಶಾಸ್ತ್ರಪಾಠಗಳನ್ನು  ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ  

ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು.  ತಾತ ಅನೇಕ ದೇವರನಾಮ, ಲಾವಣಿ,ನಾಟಕಗಳನ್ನು ರಚಿಸಿದವರು.ಈ ಹಿನ್ನಲೆಯಿಂದ ವಿದ್ಯಾಗೂ ಸಾಹಿತ್ಯದಲ್ಲಿ, ಸಂಗೀತ-ನೃತ್ಯಗಳಲ್ಲಿ ಬಹು ಆಸಕ್ತಿ.  ಬಾಲ್ಯದಿಂದ ಯಾವುದೇ ಸಂಗೀತ-ಹಾಡು ಕಿವಿಯ ಮೇಲೆ ಬೀಳಲಿ,  ತನಗೆ ತೋಚಿದಂತೆ ನೃತ್ಯಸಂಯೋಜನೆ ಮಾಡಿ ಎಲ್ಲರ  ಮುಂದೆ ದಿಟ್ಟವಾಗಿ ನರ್ತಿಸುತ್ತಿದ್ದರಂತೆ.  ಆಗಲೇ ಅವರಲ್ಲಿದ್ದ ಕಲಾವಿದೆ, ನೃತ್ಯ ಸಂಯೋಜಕಿ ಜಾಗೃತಳಾಗಿದ್ದಳು.  ನೃತ್ಯ ಕಲಿಯಲೇಬೇಕೆಂಬ  ಒಲವು ಮೂಡಿತು. 

ಆಗ ಪ್ರಸಿದ್ಧವಾಗಿದ್ದ ಪ್ರಭಾತ್ ಕಲಾವಿದರು ನೃತ್ಯಶಾಲೆಯಲ್ಲಿ ನೃತ್ಯ ಕಲಿಯಲು ಸೇರಿದರು. ಅಷ್ಟೇ ಬೇಗ ಕಲಿತು ಶಾಲೆಯ  ಅನೇಕ ಕಾರ್ಯಕ್ರಮ, ನೃತ್ಯರೂಪಕಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದರು. ಹೀಗಾಗಿ ನೃತ್ಯ ಅವರ  ಬಾಲ್ಯದ ಒಂದು  ಆನಂದದಾಯಕವಾದ ಭಾಗವಾಗಿತ್ತು. ಇದು ಅವರ ಪ್ರಾರಂಭಿಕ ನಾಟ್ಯಶಿಕ್ಷಣದ ದಿನಗಳು. 

ಮುಂದೆ ವಿದ್ಯಾ, ಬಿಕಾಂ ಪದವೀಧರೆಯಾದರು.ಆಮೇಲೆ ಚೆನ್ನೈನ ವಿದುಷಿ ಗೀತಾ ಅನಂತನಾರಾಯಣನ್  ಅವರಲ್ಲಿ ಭರತನಾಟ್ಯ  ಶಿಕ್ಷಣವನ್ನುಮುಂದುವರಿಸಿದರು. ಸೂಕ್ಷ್ಮಗ್ರಹಣವುಳ್ಳ ವಿದ್ಯಾ,   ಕರ್ನಾಟಕ ಸರ್ಕಾರ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ  ಅತ್ಯುಚ್ಚ ಅಂಕಗಳನ್ನು  ಗಳಿಸಿ ತೇರ್ಗಡೆಯಾದರು.  ಅನಂತರ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದರು.  ಸುಂದರ ಅಭಿನಯದಿಂದ ಹೆಸರು ಗಳಿಸುತ್ತಾ , ನೃತ್ಯಕ್ಷೇತ್ರದಲ್ಲಿರುವಾಗಲೇ ಮದುವೆಯಾಗಿ ಥಾಯ್ಲ್ಯಾಂಡ್ ಸೇರಿದರು. ಅನಂತರ ಅವರ ಕಾರ್ಯಕ್ಷೇತ್ರ ವಿಸ್ತಾರವಾಯಿತು. ನೃತ್ಯದೊಡನೆ ಸಂಗೀತ ನಾಟಕಾಭಿನಯವೂ ಸೇರಿತು.  ಚಟುವಟಿಕೆಯ ಚಿಲುಮೆ ಯಾಗಿದ್ದ ವಿದ್ಯಾ,  ‘ಥಾಯ್’ ಕನ್ನಡಸಂಘದ ಕಾರ್ಯದರ್ಶಿ  ಮತ್ತು ಅಧ್ಯಕ್ಷರಾಗಿ ಅನೇಕ  ಕಾರ್ಯಚಟುವಟಿಕೆಗಳನ್ನು ನಡೆಸಿದರು.ಅನಂತರ ಬೆಂಗಳೂರಿಗೆ ಬಂದನಂತರವೂ ನಾಟ್ಯ ಶಿಕ್ಷಣ ಮುಂದುವರಿಸಿ ನುರಿತ ಗುರುವೆನಿಸಿಕೊಂಡರು . 

ನೃತ್ಯ ಪ್ರದರ್ಶನ ನೀಡುವುದಕ್ಕಿಂತ ,  ವಿದ್ಯಾರ್ಥಿಗಳಿಗೆ ನಾಟ್ಯಶಿಕ್ಷಣ ನೀಡುವುದು, ಶಾಸ್ತ್ರಾನ್ವೇಷಣೆ, ಅಧ್ಯಯನ  ಅವರ ಆಸಕ್ತಿಯನ್ನು  ಕೆರಳಿಸಿತು.  ಮೊದಲಿಂದಲೂ ಪಠ್ಯ , ವ್ಯಾಕರಣ , ಶಾಸ್ತ್ರಾಧ್ಯಯನದತ್ತ  ಮನಸ್ಸು ತುಡಿಯುತ್ತಿದ್ದುದರಿಂದ  ವಿದ್ಯಾ, ಸಂಶೋಧನಾ ರಂಗದತ್ತ ವಾಲಿದರು. ಜೈನ ವಿಶ್ವವಿದ್ಯಾಲಯದಲ್ಲಿ ಭರತನಾಟ್ಯ ಎಂ.ಎ , ಎಂ.ಫಿಲ್   ಮಾಡಿದರು. ಫೆಲೋಶಿಪ್ ಕೂಡ ಪಡೆದರು.  ಸಂಸ್ಕೃತದಲ್ಲಿ ಎಂ.ಎ . ಸ್ನಾತಕೋತ್ತರ  ಪದವೀಧರೆಯಾದ  ಕಾರಣ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಮೇಲೆ ಹಿಡಿತವಿತ್ತು. ಚಿಕ್ಕಂದಿನಿಂದ ಹರಿದಾಸ ಸಾಹಿತ್ಯದ ಮೇಲೆ ಒಲವಿದ್ದ ಕಾರಣ  ‘ನೃತ್ಯಕ್ಷೇತ್ರಕ್ಕೆ ಹರಿದಾಸರ ಸಾಹಿತ್ಯದ ಕೊಡುಗೆ’ಎಂಬ ವಿಷಯದ ಮೇಲೆ  ಡಾ.ಕರುಣಾ ವಿಜೇಂದ್ರ ಮತ್ತು ಕೆ.ಗೋಕುಲ ನಾಥ್ ಅವರ  ಮಾರ್ಗದರ್ಶನದಲ್ಲಿ ಈಗಾಗಲೇ ಡಾಕ್ಟೊರೇಟ್  ಪ್ರಬಂಧ ಸಲ್ಲಿಸಿದ್ದಾರೆ. ಡಾ. ಚೂಡಾಮಣಿ  ನಂದಗೋಪಾಲ್ ಅವರ  ಮಾರ್ಗದರ್ಶನದಲ್ಲಿ   ‘ಭಕ್ತಿಅಭಿವ್ಯಕ್ತಿ’ ಎಂಬ  ವಿಷಯದ  ಮೇಲೆ ಕಲಾಸಂಶೋಧನೆ ಮಾಡಿದ್ದಾರೆ.  ಹೀಗಾಗಿ ಉದ್ದಕ್ಶೂ ಅಧ್ಯಯನ,ಪ್ರಾತ್ಯಕ್ಷಿಕೆ, ಬೋಧನೆ, ಸಂಶೋಧನೆಯೇ ಅವರ ಬಾಳಿನ ಗುರಿಯಾಗಿ  ಯಶಸ್ಸಿನತ್ತ  ದಾಪುಗಾಲಿಕ್ಕುತ್ತಿದ್ದಾರೆಎಂದರೆ ಅತಿಶಯೋಕ್ತಿಯಲ್ಲ.    

ನೃತ್ಯಕ್ಷೇತ್ರಕ್ಕೆ ಇವರಿಂದ ಸಲ್ಲುತ್ತಿರುವ ಕೊಡುಗೆ ಗಣನೀಯವಾದುದು. ಅನೇಕ ರಾಷ್ತ್ರೀಯ-ಅಂತರರಾಷ್ತ್ರೀಯ ಸಮ್ಮೇಳನಗಳಲ್ಲಿ  ಅನೇಕ ಭಾಷಣ,  ವಿದ್ವತ್ ಪ್ರಬಂಧಗಳನ್ನು  ಪ್ರಸ್ತುತಪಡಿಸಿರುವುದಲ್ಲದೆ  ವಿಶ್ವಾದ್ಯಂತ ವೃತ್ತಿ ನಿಮಿತ್ತ ಸಂಚರಿಸಿ, ಇಂಗ್ಲೆಂಡಿನಲ್ಲಿ ‘ ಸಾಂಸ್ಕೃತಿಕ ಜಾಗತೀಕರಣ’ ವಿಷಯದ ಮೇಲೆ ಪ್ರಬಂಧ ಮಂಡಿಸಿದ ಶ್ರೇಯಸ್ಸು ಇವರದು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.             ನೃತ್ಯಕ್ಕೆ ಅಳವಡಿಸಲು ಸೂಕ್ತವಾದ ಹರಿದಾಸರ ಕೃತಿಗಳನ್ನು ಆರಿಸಿ, ಅದರ ಪರಿಕಲ್ಪನೆ ಗಳನ್ನು  ಅನೇಕ ಜನ ನಾಟ್ಯಗುರುಗಳಿಗೆ ಒದಗಿಸಿಕೊಡುತ್ತ ನೆರವಾಗುತ್ತಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಸಿ ಸಿ ಆರ್ ಟಿ ಯಿಂದ ‘ಭಾರತೀಯ ರಂಗಭೂಮಿಯ ಪರಂಪರೆಯಲ್ಲಿ ಸೂತ್ರಧಾರ’ ಎಂಬ ವಿಷಯದ ಬಗ್ಗೆ ಅಧ್ಯಯನಕ್ಕಾಗಿ ಸೀನಿಯರ್ ಫೆಲ್ಲೋಶಿಪ್ ಪಡೆದ ಇವರು, ಜೈನ್ ವಿಶ್ವವಿದ್ಯಾಲಯ ಇವರನ್ನು ‘ಎಕ್ಸಿಟರ್ ಯೂನಿವರ್ಸಿಟಿ ಆಫ್ ಯುನೈಟೆಡ್ ಕಿಂಗ್ಡಂ’ ಗೆ ಫೆಲ್ಲೋಶಿಪ್ ನೀಡಿ ಕಳುಹಿಸಿಕೊಟ್ಟಿತ್ತು ಎಂಬುದು ಇವರ ಗರಿಮೆ.

ಇವಲ್ಲದೆ, ವಿದ್ಯಾ,ಅನೇಕ ವಿದ್ವತ್ ಗೋಷ್ಠಿ, ವಿಚಾರಸಂಕಿರಣ, ಅಂತರರಾಷ್ತ್ರೀಯ ಸಮ್ಮೇಳನಗಳ  ಆಯೋಜಕರಾಗಿ, ಸಂಘಟಕರಾಗಿ , ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.ಕಲೆಯ ಸಂರಕ್ಷಣೆ,ಸಂವರ್ಧನೆಗಾಗಿ ಇವರು ಅಹರ್ನಿಶಿ ಶ್ರಮಿಸುತ್ತಿರುವುದು  ನಿಜಕ್ಕೂ ಶ್ಲಾಘನೀಯ.   

Related posts

ಉದಯೋನ್ಮುಖ ಕಥಕ್ ನೃತ್ಯ ಕಲಾವಿದೆ ಶ್ರುತಿ ಗುಪ್ತ

YK Sandhya Sharma

ಖ್ಯಾತ ಅಭಿನೇತ್ರಿ – ನೃತ್ಯ ಕಲಾವಿದೆ ಹೇಮಾ ಪ್ರಶಾಂತ್

YK Sandhya Sharma

ಉಭಯ ಶೈಲಿಯ ನೃತ್ಯತಜ್ಞೆ ಡಾ.ಸುಪರ್ಣಾ ವೆಂಕಟೇಶ್

YK Sandhya Sharma

Leave a Comment

This site uses Akismet to reduce spam. Learn how your comment data is processed.