Image default
Dancer Profile

ಕಡಲಾಚೆಯ ಅಪೂರ್ವ ನೃತ್ಯಪ್ರತಿಭೆ ಶ್ರೀದೇವಿ ಜಗನ್ನಾಥ್

ನಾಟ್ಯಕ್ಕೆ ಹೇಳಿ ಮಾಡಿಸಿದ ಸುಂದರ ಮೈಮಾಟ, ಎತ್ತರದ ನಿಲುವು, ಚೆಂದದ ಆಕರ್ಷಕ ರೂಪ, ಇದು ಅಪೂರ್ವ ನೃತ್ಯಕಲಾವಿದೆ ಶ್ರೀದೇವಿ ಜಗನ್ನಾಥ್. ರಂಗದ ಮೇಲೆ `ಗಂಗಾವತರಣ’ ನೃತ್ಯರೂಪಕದಲ್ಲಿ ಇವರು, ಗಂಗೆಯಾಗಿ ಇಡೀ ಶರೀರವನ್ನು ದ್ರವೀಕೃತಗೊಳಿಸಿ, ಬಾಗು ಬಳುಕುಗಳಲ್ಲಿ ನೀರಿನಂತೆ ಹರಿಸಿ ಚೇತೋಹಾರಿಯಾಗಿ ನರ್ತಿಸಿದ್ದು ಕಲಾರಸಿಕರ ನೆನಪಲ್ಲಿ ಇನ್ನೂ ಹಸಿರು. ಇವರ ಮನೋಜ್ಞ ಅಭಿನಯವೂ ಅಷ್ಟೇ ಮುದ ತಂದಿತ್ತು.

ಶ್ರೀದೇವಿಯವರಿಗೆ ನಾಟ್ಯಕಲೆ, ಜನ್ಮಜಾತವಾಗಿ ಬಂದ ವರ. ಮನೆಯಲ್ಲಿ ಸಂಗೀತ ಅನುರಣಿಸುವ ವಾತಾವರಣ. ತಾಯಿ ಪ್ರಸಿದ್ಧ ಸಂಗೀತ ವಿದುಷಿ ರಂಗನಾಯಕಿ ರಾಜನ್. ಮೃದಂಗ ನುಡಿಸುವ ಮೊದಲ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾದವರು ಈಕೆ. ಭರತನಾಟ್ಯವನ್ನೂ ಅಭ್ಯಾಸ ಮಾಡಿದ ಈಕೆ ಮಗಳಲ್ಲೂ ಕಲಾಭಿರುಚಿಯನ್ನು ಬಿತ್ತಿದರು.

ಶ್ರೀದೇವಿ ಮೂರುವರ್ಷದ ಮಗುವಿದ್ದಾಗಲೇ ಸಂಗೀತದ ನಾದಕ್ಕೆ ತಲೆದೂಗಿ ತಾಳ ಹಾಕತೊಡಗಿದಳಂತೆ. ತಾಯಿಯೊಡನೆ ಅನೇಕ ಕೃತಿಗಳನ್ನು ಹಾಡಿ ತನ್ನ ಸಂಗೀತಾಸಕ್ತಿಯನ್ನು ಅಭಿವ್ಯಕ್ತಿಸಿದಳಂತೆ. ಹೀಗಾಗಿ ಸಂಗೀತದ ಜೊತೆ ವಯೋಲಿನ್ ವಾದನ ಕೂಡ ಕಲಿಯತೊಡಗಿದಳಂತೆ ಬಾಲಕಿ.

ಶ್ರೀದೇವಿ ತನ್ನ ಐದನೇ ವಯಸ್ಸಿಗೆ ನಾಟ್ಯಗುರು ಪದ್ಮಿನಿ ರವಿ  ಅವರಲ್ಲಿ ಭರತನಾಟ್ಯಾಭ್ಯಾಸಕ್ಕೆ ಸೇರ್ಪಡೆಯಾದರು. ತಮ್ಮ ಒಂಭತ್ತನೆಯ ವಯಸ್ಸಿಗೇ `ಗೆಜ್ಜೆಪೂಜೆ’ ನೆರವೇರಿಸಿಕೊಂಡು ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ಕೊಡುತ್ತ  ಆತ್ಮವಿಶ್ವಾಸವನ್ನೂ ಗಳಿಸಿದ್ದು ವಿಶೇಷ. ಸತತವಾಗಿ ನಿಷ್ಠೆಯಿಂದ ನೃತ್ಯವನ್ನು ಅಭ್ಯಸಿಸುತ್ತ, ತಮ್ಮ ಹದಿನಾರನೆಯ ವಯಸ್ಸಿಗೆ `ರಂಗಪ್ರವೇಶ’ವನ್ನು ಮಾಡಿ ಎಲ್ಲೆಡೆ ನೃತ್ಯ ಪ್ರದರ್ಶನ ನೀಡಲಾರಂಭಿಸಿದರು. ದೂರದರ್ಶನದಲ್ಲಿ ಮಾನ್ಯತೆ ( ಆಡಿಷನ್ )ಪಡೆದ ಕಲಾವಿದೆಯಾಗಿ ಅನೇಕ ಕಾರ್ಯಕ್ರಮಗಳನ್ನಿತ್ತು ಅಪಾರ ಮೆಚ್ಚುಗೆ ಪಡೆದುಕೊಂಡರು.ಜೊತೆಗೆ ನೃತ್ಯದಲ್ಲಿ ವಿದ್ವತ್ ಪದವಿಯೂ ದೊರಕಿತು.

ಶ್ರೀದೇವಿಯ ಕಲಿಕೆ-ಅಭ್ಯಾಸ ಇಷ್ಟಕ್ಕೆ ನಿಲ್ಲಲಿಲ್ಲ. ಅನೇಕ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡರು. ಜೊತೆಜೊತೆಗೆ ವ್ಯಾಸಂಗದಲ್ಲೂ ಜಾಣೆಯಾಗಿದ್ದ ಆಕೆ ಉತ್ತಮಾಂಕಗಳನ್ನು ಗಳಿಸಿ ಪದವೀಧರೆಯೂ ಆದರು. ಮೊದಲಿನಿಂದ ಲವಲವಿಕೆಯ ಸ್ವಭಾವದವರಾಗಿದ್ದ ಶ್ರೀದೇವಿಗೆ ರೂಪದರ್ಶಿಯಾದ ಅನುಭವವೂ ಉಂಟು. ಬಳ್ಳಿನಡುವಿನ ಆಕೆಯ ನೀಳಕಾಯದ ದೇಹಶ್ರೀ ಮತ್ತು ಆಕರ್ಷಕ ರೂಪ ರೂಪದರ್ಶಿಯಾಗಲು  ಅವಕಾಶದ ಬಾಗಿಲನ್ನು ತೆರೆಯಿತು. ಕೆ.ಎಸ್.ಐ.ಸಿ ಯ ಸೀರೆಗಳಿಗಲ್ಲದೆ, ಅನೇಕ ಖಾಸಗಿ ಕಂಪೆನಿಗಳ ಸೀರೆಗಳ ಪ್ರದರ್ಶನದ ಜಾಹೀರಾತಿಗೂ ಬೇಡಿಕೆ ಬಂದದ್ದು ಇವರ ವೈಶಿಷ್ಟ್ಯ.

ಮದುವೆಯ ನಂತರ ವಿಜಯ್ ಜಗನ್ನಾಥರ ಕೈಹಿಡಿದು ಆಕೆ ಅಮೇರಿಕಾದ ನಾರ್ತ್ ಕೆರೋಲಿನಾಗೆ ಹಾರಿದರೂ , ಅಲ್ಲಿ ಆಕೆ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರೂ ಅವರೊಳಗಿನ ಕಲೆಯ ಸೆಳೆತ ಬಿಡಲಿಲ್ಲ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಕಾಲುಗಳು ನರ್ತಿಸದೆ ಬದುಕಿಲ್ಲ ಎಂದಿತು.

ತನು-ಮನದಲ್ಲಿ ನೃತ್ಯಾರಾಧನೆ ಮಾಡುತ್ತಿದ್ದ ಶ್ರೀದೇವಿ  ಅಲ್ಲಿ ತಮ್ಮದೇ ಆದ `ಲಾಸ್ಯ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯುಸಿಕ್’’ ಎಂಬ ಕಲಾ ಶಾಲೆಯನ್ನು ತೆರೆದು ಅಲ್ಲಿನ ಭಾರತೀಯ ಅಷ್ಟೇ ಅಲ್ಲ ವಿದೇಶದ ಮಕ್ಕಳಿಗೂ ಕಲಾಭಿರುಚಿ ಹತ್ತಿಸಿ ನೃತ್ಯ ಹೇಳಿಕೊಡಲಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅಸಂಖ್ಯಾತ ಮಕ್ಕಳಿಗೆ ನೃತ್ಯಶಿಕ್ಷಣ ನೀಡುತ್ತಿದ್ದಾರೆ ಶ್ರೀದೇವಿ. ನೃತ್ಯದ ಮೂಲಭೂತ ಪಠ್ಯಕ್ಕೆ,ವ್ಯಾಕರಣಕ್ಕೆ ಒತ್ತು ನೀಡುವ ಇವರು ಈಗಾಗಲೇ ಐವತ್ತು ಮಂದಿ  ಶಿಷ್ಯರಿಗೆ ರಂಗಪ್ರವೇಶ ಮಾಡಿಸಿದ್ದಾರೆ. ಅವರಲ್ಲಿ ಅನೇಕರು ತಮ್ಮದೇ ಆದ ಸ್ವಂತ ನೃತ್ಯಶಾಲೆಗಳನ್ನು ತೆರದು ಶಿಕ್ಷಣ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸ್ತುತ್ಯಾರ್ಹ ಸಂಗತಿ. 

ಈಗ ಈ ಶಾಲೆಗೆ ಬರೋಬ್ಬರಿ ಇಪ್ಪತ್ತೆರಡು ವರುಷಗಳು. ಪ್ರಸ್ತುತ ಇಲ್ಲಿ ಸುಮಾರು  ಇನ್ನೂರು ಮಕ್ಕಳು ನೃತ್ಯ ಕಲಿಯುತ್ತಿದ್ದಾರೆ. ಎಲ್ಲರಿಗೂ ಬಲು ಆಸ್ಥೆಯಿಂದ ವಿದ್ಯಾದಾನ ಮಾಡುತ್ತಿದ್ದಾರೆ ಶ್ರೀದೇವಿ. ವಿಶ್ವದಾದ್ಯಂತ ಅತಿಥಿ ಉಪನ್ಯಾಸಕರನ್ನು ಕರೆಸಿ ತಮ್ಮ ಶಿಷ್ಯರಿಗೆ ವಿಶಿಷ್ಟ ಸವಲತ್ತುಗಳನ್ನು ಒದಗಿಸಿದ್ದಾರೆ. ಜೊತೆಗೆ ನಿಯತವಾಗಿ ನೃತ್ಯ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದಾರೆ. ಅಂಗವೈಕಲ್ಯವುಳ್ಳವರು, ಆರ್ಥಿಕವಾಗಿ ಸಬಲರಲ್ಲದವರು ಇದ್ದು ಇವರಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಕಾರಣಾಂತರಗಳಿಂದ ಜೀವನದಲ್ಲಿ ನಿರಾಶೆ ಹೊಂದಿದವರಿಗೆ ನೃತ್ಯದ ಮೂಲಕ ಹೊಸ ಚೈತನ್ಯ ತುಂಬುವ ಕಾಯಕದಲ್ಲೂ ಇವರು ತೊಡಗಿರುವುದು ಅನುಕರಣೀಯ ಕಾರ್ಯ.

.         ಕಳೆದ ಹತ್ತುವರ್ಷಗಳಿಂದ ಸಮಕಾಲೀನ ನೃತ್ಯಕಲಾವಿದರೊಡನೆ ಪರಸ್ಪರ ನೃತ್ಯಾಭಿವೃದ್ಧಿಗೆ ಆಸರೆಯಾಗಲು ರೂಹುತಳೆದ  `ಸೃಷ್ಟಿ’ ಎಂಬ ಕಲಾವಿದರ ಸಹಕಾರ ಸಂಸ್ಥೆಯ ಮೂಲಕ ಪ್ರದರ್ಶನಗಳಿಗೆ ಸಹಾಯಹಸ್ತ ನೀಡುವ ಪರಿಪಾಠ ಇವರ ನೂತನ ಪರಿಕಲ್ಪನೆ . ಕಡಲಾಚೆಯ ನಾಡಿನಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ ಕಾಯಕದಲ್ಲಿ ತೊಡಗಿರುವ ಶ್ರೀದೇವಿ ಸ್ವತಃ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸಿಲ್ಲ. ನಿರಂತರ ಪ್ರದರ್ಶನಗಳನ್ನು ಅನೇಕ ಬಾರಿ ಸಾಮಾಜಿಕ ಸೇವಾ ಕಾರಣಗಳಿಗಾಗಿ `ಚಾರಿಟಿ ಶೋ’ ಗಳನ್ನೂ ನಡೆಸಿದ್ದಾರೆ. ಭಾರತಾದ್ಯಂತವಲ್ಲದೆ ಅಮೇರಿಕಾದ ಅನೇಕ ಸ್ಥಳಗಳಲ್ಲಿ,  ಆಸ್ಟ್ರೇಲಿಯಾ, ಕೆನಡಾ ದೇಶಗಳಲ್ಲಿ ವಿವಿಧ ನೃತ್ಯರೂಪಕಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಹಾಗೆಯೇ ಅನೇಕ ಪ್ರತಿಷ್ಟಿತ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ಇತ್ತೀಚಿಗೆ ೨೦೧೭ ರ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಇವರ ಮುಡಿಗೇರಿದ ಇನ್ನೊಂದು ಗರಿ.

Related posts

ಅನುಪಮ ಕಥಕ್ ನೃತ್ಯಗಾರ್ತಿ ವಿಶ್ರುತಿ ಆಚಾರ್ಯ

YK Sandhya Sharma

ಬಹುಮುಖ ಪ್ರತಿಭೆಯ ನೃತ್ಯನಿಪುಣೆ ರೇಖಾ ದಿನೇಶ್ ಕುಮಾರ್

YK Sandhya Sharma

ಮನೋಜ್ಞ ಅಭಿನಯದ ನೃತ್ಯ ಕಲಾವಿದೆ ಧರಣಿ ಕಶ್ಯಪ್

YK Sandhya Sharma

Leave a Comment

This site uses Akismet to reduce spam. Learn how your comment data is processed.