ನೆನಪುಗಳೇ ಹೀಗೆ
ಹಿಂಡುವ ಗಾಣದ ಹಾಗೆ
ಒಮ್ಮೆಲೆ ಮುಕುರಿಬಿಡುವ
ಜೇನುಹುಳುಗಳ ದಂಡು
ಜೀಗುಡುತ ಠಳಾಯಿಸುವ
ಒಳಗೇ ಗುನ್ನ ತೋಡಿ
ಸಮಾಧಿಸುವ
ಬದುಕ ತಿನ್ನುವ
ಗೆದ್ದಲ ಕೊರಕ ಸಂತತಿ
ನೆನಪುಗಳೇ ಹೀಗೆ
ಹಿಂಡುವ ಗಾಣದ ಹಾಗೆ
ಅನವರತ ಧೇನಿಸಿ
ಪ್ರೀತಿ ಬನಿ ಸವಿಸವಿದು
ಸಂಚಯಿಸಿದ ಹನಿ ಹನಿ
ಸಿಹಿ ಮುತ್ತಿನ ಗೊಂಚಲು
ನೆನಪುಗಳೇ ಹೀಗೆ
ಹಿಂಡುವ ಗಾಣದ ಹಾಗೆ
ಬರೀ ನೊರೆಯ ಗುಳ್ಳೆ
ಭ್ರಮೆ ವಿಭ್ರಮೆಗಳ
ಮತ್ತು ಜರ್ರನೆ ಇಳಿದು
ಸಿಹಿ-ಕಹಿ
ಕಾರ್ಕೋಟಕವಾಗಿ
ಅಪಶ್ರುತಿಯ ಆಲಾಪದಲಿ
ಮಿಂದೆದ್ದು
ಜೀವರಸ ಹೀರುವ
ಕುತ್ತು-ಕಹಿ ತುತ್ತು
ನೆನಪುಗಳೇ ಹೀಗೆ
ಹಿಂಡುವ ಗಾಣದ ಹಾಗೆ
ಸಾಯದ ನೆನಪುಗಳು
ಮತ್ತೆ ಮತ್ತೆ ಗರಿಗೆದರಿ
ಕಾಡುಕಾಡುತ ಕುಕ್ಕುವ
ನಕ್ಷತ್ರಿಕನ ಅಪರಾವತಾರ