ಹೆಣ್ಣೆದೆಯ ಅಗ್ನಿಕುಂಡದಲಿ
ಧಗಧಗನುರಿದು
ಹುರುಪಳಿಸಿಹೋದ
ರಮ್ಯಭಾವನೆಗಳ ಕಾವಿನಲಿ
ಬೆಚ್ಚನೆ ಮೈ
ಕಾಯಿಸಿಕೊಳ್ಳುವವರು
ಅದೆಷ್ಟೋ ಮಂದಿ
ಮನಸ ಪಕಳೆ
ಪಕಳೆಗಳ ಕೊಯ್ದು
ಉಪ್ಪು ತುಂಬಿ
ಬಾಳಕ ಮಾಡಿ ಕರಿದರೂ
ತೃಪ್ತಿಗಾಣದ ತೆವಲುಗಳು
ಹೆಚ್ಚೇನು ಮೃದು ಮೈಗೆ
ಸೀಮೆಎಣ್ಣೆಯ ಧಾರಾಕಾರ
ಅಭಿಷೇಕ
ದೀಪ ಧೂಪದ
ಮಂಗಳಾರತಿ
ಕಣ್ಮಿಂಚು ಕಣ್ಮಾಯದಲಿ
ಸುಂದರ ಆಕಾರ
ಬೂದಿಗುಡ್ಡೆಯಾಗಿಸುವ
ಪವಾಡ!
ವಿಭೂತಿ ಅನುಭೂತಿ…
ಮೈತುಂಬ ಪಟ್ಟಾಪಟ್ಟಿ ಬಳಿದು
ಕೇಕೆ ಹಾಕುವ
ಭಸ್ಮಾಸುರರದೆಷ್ಟೋ ಮಂದಿ
ಕನಸುಗಳ ಗೋರಿ ಕಟ್ಟಿ
ಎಲುಬು ಚರ್ಮಗಳ ಗೂಡಾಗಿ
ಪ್ರಯಾಸದಿ ದಿನ ಪೋಣಿಸುವ
ಸೋತ ಅಬಲೆಯರ ಬಾಳು
ಉರಿದುರಿದು ಹಣತೆಯಾದ
ಕಡೆಯುಸಿರ ಸೊಡರು
ಏಕೆ…ಏಕಿಷ್ಟು ಹತಾಶೆ?
ಬೆಂಕಿಯೊಡಲಿಗೆ ನುಗ್ಗುವ
ನಕಾಶೆ
ತಾಳಿಕೊಳಮ್ಮ…ತಾಳು
ತನ್ನೊಡಲಲೇ ಬೆಂಕಿ
ಕಟ್ಟಿಕೊಂಡವಳಿಗೆ
ಜಗವ ಸುಡುವುದ
ಹೇಳಿಕೊಡಬೇಕೇ?