Image default
Dancer Profile

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

ಡಾ. ಸರಸ್ವತಿ ರಜತೇಶ್ ಭರತನಾಟ್ಯ ಹಾಗೂ ಕೂಚಿಪುಡಿ ಉಭಯನೃತ್ಯ ವಿದುಷಿ. ವೃತ್ತಿಯಲ್ಲಿ ದಂತವೈದ್ಯೆ . ಪ್ರವೃತ್ತಿಯಲ್ಲಿ ನೃತ್ಯಕಲಾವಿದೆ, ನೃತ್ಯಗುರು, ನೃತ್ಯಕಾರ್ಯಕ್ರಮಗಳ ಸಂಯೋಜಕಿ . ತಮ್ಮದೇ ಆದ “ನಾಟ್ಯ ಸರಸ್ವತಿ ಕೂಚಿಪುಡಿ ಡ್ಯಾನ್ಸ್ ಅಕಾಡೆಮಿ’’ ಯ ಸಂಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ ಕೂಡ. ವರ್ಷವಿಡೀ ವಿವಿಧ ನೃತ್ಯ ಕಾರ್ಯಕ್ರಮ ಪ್ರಸ್ತುತಿ ಮತ್ತು ಉತ್ಸವಗಳ ಆಯೋಜನೆಯಲ್ಲಿ ಕಾರ್ಯನಿರತೆ. ಜೊತೆ ಜೊತೆಗೆ ವೈದ್ಯಸೇವೆ.

ಮೂಲತಃ ಆಂಧ್ರಪ್ರದೇಶದವರಾದರೂ ಕನ್ನಡ ನಾಡಿನಲ್ಲಿ ಓದಿ, ಬೆಳೆದು, ಕರ್ನಾಟಕದ ಎಂಜಿನಿಯರ್ ರಜತೇಶರ ಕೈಹಿಡಿದು ಬೆಂಗಳೂರಿನ ಸೊಸೆಯಾಗಿ ಕನ್ನಡಿಗರೇ ಆಗಿಹೋಗಿದ್ದಾರೆ. ಸುಮಾರು ಏಳೆಂಟು ವರ್ಷದ ಹುಡುಗಿ, ನಿಂತರೆ ಕೂತರೆ ನೃತ್ಯದ ಚಲನೆಗಳನ್ನು ತೋರುತ್ತಿದ್ದ ಮಗಳಲ್ಲಿನ ವಿಶೇಷ ಆಸಕ್ತಿ, ನೃತ್ಯಪ್ರತಿಭೆ ತಾಯಿಯ ಒಳಗಣ್ಣಿಗೆ ಸುಳಿವು ಬಿಟ್ಟುಕೊಡತೊಡಗಿತ್ತು. ಕೂಡಲೇ ಆಕೆ ತಾವಿದ್ದ ಹೈದರಾಬಾದ್ ಪ್ರದೇಶದ ತಮ್ಮ ಓಣಿಯಲ್ಲಿನ ಭರತನಾಟ್ಯ ಶಾಲೆಗೆ ಸೇರಿಸಿಯೇಬಿಟ್ಟರು. ಶ್ರೀಮತಿ ಸಾಮ್ರಾಜ್ಯಮ್ ರಮಣರಾವ್ ಅವರಲ್ಲಿ ತಂಜಾವೂರು ಶೈಲಿಯ ಭರತನಾಟ್ಯಾಭ್ಯಾಸ ನಡೆದು `ರಂಗಪ್ರವೇಶ’ವನ್ನೂ ಅಲ್ಲಿಯೇ ನೆರವೇರಿಸಿಕೊಂಡರು ಸರಸ್ವತಿ. ಅಷ್ಟುಹೊತ್ತಿಗೆ ಅವರು ಮೆಟ್ರಿಕ್ ಪರೀಕ್ಷೆ, ಪಿ.ಯೂ.ಸಿ ಮುಗಿಸಿದ್ದರು.

ಸರಸ್ವತಿಯ ಅಜ್ಜಿ ಸ್ತ್ರೀಯರ ಪ್ರಸೂತಿತಜ್ಞೆ. ಅವರಂತೆ ಮಗಳು ವೈದ್ಯೆಯಾಗಬೇಕೆಂಬುದು ತಂದೆಯ ಕನಸು. ಫಲವಾಗಿ ಬೆಂಗಳೂರಿನಲ್ಲಿ ದಂತವೈದ್ಯ ಕೋರ್ಸಿಗೆ ಸೇರಿಸಿದರು. ಒಳಗೊಳಗೇ ಪ್ರವಹಿಸುತ್ತಿದ್ದ ನೃತ್ಯಾಸಕ್ತಿ ಸರಸ್ವತಿಯನ್ನು ಸುಮ್ಮನಿರಲು ಬಿಡಲಿಲ್ಲ. ಪ್ರಸಿದ್ಧ ಕೂಚಿಪುಡಿ ನೃತ್ಯತಾರೆ ಮಂಜುಭಾರ್ಗವಿಯವರ ನೇತೃತ್ವದ `ಪದ್ಮಾವತಿ ಕಲಾನಿಕೇತನ’ ದಲ್ಲಿ ಕೂಚಿಪುಡಿ ನೃತ್ಯ ಕಲಿಯಲಾರಂಭಿಸಿದರು. ಮದುವೆಯ ತರುವಾಯವೂ ಕಲಿಕೆ ನಿಲ್ಲಲಿಲ್ಲ. ವೆಂಪಟಿ ಚಿನ್ನಸತ್ಯಂ ಅವರ ಶಿಷ್ಯ ವೇದಾಂತಂ ರಾಮು, ರಾಧೇಶ್ಯಾಂ, ಮುಂತಾದವರ ಬಳಿ ಕಲಿಯುತ್ತ, ಆಗಾಗ ಚೆನ್ನೈಗೆ ಹೋಗಿ ಅಭ್ಯಾಸ ಮಾಡಿ ಬರುವ ರೂಢಿ ಬೆಳೆಸಿಕೊಂಡರು ಸರಸ್ವತಿ. ಗಂಡನೊಡನೆ ಆತನ ಕಾರ್ಯನಿಮಿತ್ತ ಎರಡುವರ್ಷ `ಜರ್ಮನಿ’ ದೇಶಕ್ಕೆ ಹೋದರೂ ಕಾಲ ವ್ಯರ್ಥ ಮಾಡದೆ, ಜರ್ಮನ್ ಭಾಷೆ ಕಲಿತು ಅಲ್ಲಿನ ನೃತ್ಯಾಕಾಂಕ್ಷಿಗಳಿಗೆ ನೃತ್ಯ ಹೇಳಿಕೊಟ್ಟರು.

ಅನಂತರ ಕೂಚಿಪುಡಿಗ್ರಾಮಕ್ಕೆ ಹೋಗಿ ಪೊಟ್ಟಿ ಶ್ರೀರಾಮರವರ `ಸಿದ್ಧೇಂದ್ರ ಕಲಾಕ್ಷೇತ್ರ’ದಲ್ಲಿ ಕುಚಿಪುಡಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಗುರು ವೋಲೆಟಿ ರಂಗಮಣಿ ಅವರಿಂದ “ಸಿಂಹನಂದಿನಿ’’ ವಿಶೇಷ ಕಲಿಕೆ ಇವರದಾಯಿತು. ಅಚ್ಚ ಸಾಂಪ್ರದಾಯಕ ಶುದ್ಧ ಕೂಚಿಪುಡಿ ನೃತ್ಯಶಿಕ್ಷಣ ತಮಗೆ ದೊರಕಿತೆಂಬ ಅತೀವ ಹೆಮ್ಮೆ ಇವರದು. ಭರತನಾಟ್ಯದ ಶೈಲಿ ತಮಗೆ ತಿಳಿದಿದ್ದರೂ ಕಿಂಚಿತ್ತೂ ಅದರ ಪ್ರಭಾವ ಬೀಳದಂಥ ಶುದ್ಧತೆ ಕಾಪಾಡಿಕೊಂಡು ಬಂದಂಥ ಕೆಲವೇ ವಿರಳ ನೃತ್ಯಗುರುಗಳಲ್ಲಿ ತಾವೂ ಒಬ್ಬರೆಂಬ ಹಿರಿಮೆ ಅವರದು. ತಮಿಳುನಾಡಿನ `ಕಲೈ ಕಾವೇರಿ’ ನೃತ್ಯಶಿಕ್ಷಣ ಸಂಸ್ಥೆಯಿಂದ ಭರತನಾಟ್ಯದಲ್ಲಿ ಡಿಪ್ಲೊಮಾ ಪಡೆದು, ನಂತರ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ. ಭರತನಾಟ್ಯ ಸ್ನಾತಕೋತ್ತರ ಪದವಿಯನ್ನೂ ಗಳಿಸಿ, `ಉಭಯ ನೃತ್ಯವಿದುಷಿ’ ಎನಿಸಿಕೊಂಡರು.

ಬೆಂಗಳೂರಿನ ಸಂಜಯನಗರದಲ್ಲಿ ಕಳೆದ ಎರಡು ದಶಕಗಳಿಂದ ತಮ್ಮದೇ ಆದ `ನಾಟ್ಯ ಸರಸ್ವತಿ’ ನೃತ್ಯಶಾಲೆ ತೆರೆದು ನೂರಾರು ಮಕ್ಕಳಿಗೆ ನೃತ್ಯಶಿಕ್ಷಣ ನೀಡುತ್ತಾ ಬಂದಿದ್ದಾರೆ. ಜೊತೆಜೊತೆಗೆ ನೂರಾರು ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನೂ ನೀಡುತ್ತ ಬಂದಿದ್ದಾರೆ. ಮತ್ತಿತರ ಭಾರತೀಯ ನೃತ್ಯಕಲೆಗಳಾದ ಕಥಕ್, ಮಣಿಪುರಿ, ಒಡಿಸ್ಸಿ ಮತ್ತು ಮೋಹಿನಿಯಾಟ್ಟಮ್ ಮುಂತಾದವುಗಳನ್ನು ಗುರುಗಳಾದ ಉಷಾ ದಾತಾರ್, ಮಾಯಾರಾವ್, ಶ್ರೀದೇವಿ ಉನ್ನಿ, ದರ್ಶನ ಜವೇರಿ ಮತ್ತು ನೃತ್ಯಗ್ರಾಮ ಕ್ಷೇತ್ರದಿಂದ ಕಲಿತಿರುವುದು ಇವರ ಬಹುಮುಖ ಆಸಕ್ತಿಗೆ ದ್ಯೋತಕ.

ಭಾರತ ದೂರದರ್ಶನದ `ಎ’ ಗ್ರೇಡ್ ಆರ್ಟಿಸ್ಟ್ ಆಗಿರುವ ಇವರು, ಐ.ಸಿ.ಸಿ.ಆರ್.ನ ಮಾನ್ಯತೆ ಪಡೆದ ದೇಶ ಮತ್ತು ವಿದೇಶಗಳ ನೃತ್ಯಕಲಾವಿದೆಯಾಗಿ, ಸೀನಿಯರ್ ಫೆಲೋಶಿಪ್ ಪಡೆದ ಹೆಗ್ಗಳಿಕೆ ಈಕೆಯದು. ಇವರೇ ಸಂಯೋಜಿಸಿದ ನೃತ್ಯನಾಟಕಗಳಾದ ಗೀತಗೋವಿಂದಮ್,ಮೋಹಿನಿ ಭಸ್ಮಾಸುರ, ಶಿವಗಂಗಾ ದಾಸೋಹಂ ಮುಂತಾದವುಗಳನ್ನು ದೇಶ-ವಿದೇಶದ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ನೃತ್ಯ ಶಿರೋಮಣಿ, ಕಲ್ಪಶ್ರೀ, ಕಲೋಪಾಸಕ, ಎನ್.ಟಿ.ಆರ್.ಮೆಮೋರಿಯಲ್ ಮತ್ತು ಗಿನ್ನಿಸಿ ವಿಶ್ವದಾಖಲೆ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ, ಎಂಟುಭಾಷೆಗಳ ಕಲಾವಿದರು ಗ್ರಾಮೀಣಭಾಗಗಳಲ್ಲಿ ಪ್ರದರ್ಶಿಸುವ ಸಂಚಾರಿ ಏಕವ್ಯಕ್ತಿ  ನೃತ್ಯಪ್ರದರ್ಶನ “ನೃತ್ಯಭಾರತಿ ‘’ ಯನ್ನು ಆಯೋಜಿಸಿದ ಛಾತಿ  ಇವರದು. ಹತ್ತನೆಯ ವರ್ಷಕ್ಕೆ ಕಾಲಿಟ್ಟ ‘’ ಅಖಿಲ ಕರ್ನಾಟಕ ಕೂಚಿಪುಡಿ ನೃತ್ಯೋತ್ಸವ’’ – ಭಾರತೀಯ ನೃತ್ಯಕ್ಷೇತ್ರಕ್ಕೆ ಇವರಿಂದ  ಸಂದ ಅನುಪಮ ಸೇವೆ ಎನ್ನಬಹುದು.

ಕರ್ನಾಟಕ ಸರ್ಕಾರದ ಕೂಚಿಪುಡಿ ನೃತ್ಯಪರೀಕ್ಷೆಗಳಿಗೆ ಪರೀಕ್ಷಕರು, ತೀರ್ಪುಗಾರರಾಗಿ ಸೇವೆಸಲ್ಲಿಸಿರುವ ಸರಸ್ವತಿ, ಐರೋಪ್ಯ ದೇಶಗಳಾದ ಫ್ರಾನ್ಸ್, ಜರ್ಮನಿ, ಇಟಲಿ, ಇಂಗ್ಲೆಂಡ್,ನೆದರ್ಲ್ಯಾಂಡ್ಸ್,ಜೆಕ್ ರಿಪಬ್ಲಿಕ್ ಹಾಗೂ ಅಮೇರಿಕಾ ದೇಶಗಳಲ್ಲಿ ತಮ್ಮ ನೃತ್ಯ ಪ್ರದರ್ಶನ, ವಿಚಾರಸಂಕಿರಣ, ಕಾರ್ಯಾಗಾರ, ಉಪನ್ಯಾಸ ಪ್ರಾತ್ಯಕ್ಷಿಕೆ ಮತ್ತು ತರಬೇತಿಗಳನ್ನು ನಡೆಸಿರುವ ಕ್ರಿಯಾಶೀಲೆ. ಇದೀಗ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಗಾಗಿ ನೋಂದಣಿಸಿ, ಶಾಸ್ತ್ರೀಯ ಬಗೆಯಲ್ಲಿ ‘’ಕೂಚಿಪುಡಿ ಚಿಕಿತ್ಸಕ ಮೌಲ್ಯಗಳು ‘’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸುತ್ತಿರುವ ಸರಸ್ವತಿ, ಬೆಂಗಳೂರಿನಲ್ಲಿ ತಮ್ಮ ನೃತ್ಯಶಾಲೆಯ ನಾಲ್ಕುಶಾಖೆಗಳನ್ನು, ಹೈದರಾಬಾದ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಎರಡು ಶಾಖೆಗಳನ್ನು ನಡೆಸುತ್ತಿದ್ದಾರೆ. ಇವೆಲ್ಲ ಚಟುವಟಿಕೆಗಳ ನಡುವೆ ಪತಿ ಮತ್ತು ಎರಡು ಮಕ್ಕಳ ಸಂಸಾರವನ್ನೂ ಒಪ್ಪವಾಗಿ ನಡೆಸಿಕೊಂಡು ಹೋಗುತ್ತಿರುವ ಸಂತೃಪ್ತ ಸದ್ಗೃಹಿಣಿ ಈಕೆ ಎಂಬುದು ವಿಶೇಷ.

Related posts

Nrutyalokada Rasarushi Prof. M.R. Krishna Murthy

YK Sandhya Sharma

ಪರಿಪೂರ್ಣ ನೃತ್ಯ ಕಲಾವಿದ ಸತ್ಯನಾರಾಯಣ ರಾಜು

YK Sandhya Sharma

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

YK Sandhya Sharma

Leave a Comment

This site uses Akismet to reduce spam. Learn how your comment data is processed.