Image default
Dance Reviews

ಅಚ್ಚುಕಟ್ಟಾಗಿ ಮೂಡಿಬಂದ ಸಿರಿಯ ನೃತ್ಯದೈಸಿರಿ

ಅಂತರರಾಷ್ಟ್ರೀಯ ನೃತ್ಯಗುರು-ಕಲಾವಿದೆ, ‘’ನಟನಂ’’ ನೃತ್ಯಸಂಸ್ಥೆಯ ನಿರ್ದೇಶಕಿ ಕರುನಾಡ ಲಲಿತಕಲಾ ತಿಲಕ ಡಾ. ರಕ್ಷಾ ಅವರ ಕೌಶಲ್ಯಪೂರ್ಣ ತರಬೇತಿಯಲ್ಲಿ ರೂಹುತಳೆದ ಕಲಾಶಿಲ್ಪ ಕು. ಸಿರಿ ರೆಡ್ಡಿ ಇತ್ತೀಚಿಗೆ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ನೆರವೇರಿಸಿಕೊಂಡಳು. ಅದ್ದೂರಿಯಾದ ರಂಗಸಜ್ಜಿಕೆ, ಪ್ರತಿ ಕೃತಿಯ ಅರ್ಥವನ್ನು, ಸತ್ವವನ್ನು ಹಿಡಿದಿಡುವಂತೆ ರೂಪುಗೊಂಡ ದೈವೀಕ ಪ್ರಭಾವಳಿಯಲ್ಲಿ ನಡೆದ ಸುಮನೋಹರ ನರ್ತನ ಮನದುಂಬಿತು. 

ಶುಭಾರಂಭದಲ್ಲಿ ‘ಪುಷ್ಪಾಂಜಲಿ’ಯಲ್ಲಿ ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ವಂದಿಸಿ, ನಟರಾಜನಿಗೆ ರಂಗದ ಮೊದಲ ಪದಾರ್ಪಣೆಯ ಶುಭಗಳಿಗೆಯಲ್ಲಿ ಅನನ್ಯ ಭಕ್ತಿಯಿಂದ ಪುಷ್ಪನಮನ ಸಲ್ಲಿಸಿದಳು. ಪ್ರಥಮಪೂಜಿತ ವಿಘ್ನರಾಜನನ್ನು ಗಂಭೀರ ನಾಟರಾಗದಲ್ಲಿ ‘ಶ್ರೀ ವಿಘ್ನ ರಾಜಂ ಭಜೆ’ (ರಚನೆ-ಊತುಕಾಡು ವೆಂಕಟಸುಬ್ಬೈಯರ್) ಎಂದು ಮನಸಾ ಸ್ತುತಿಸುತ್ತ, ಅವನ ಅನೇಕ ರೂಪಗಳನ್ನು ತನ್ನ ಸುಂದರ ಆಂಗಿಕಾಭಿನಯ-ಮನೋಜ್ಞ ಭಂಗಿಗಳ ಮೂಲಕ ಪ್ರದರ್ಶಿಸಿದಳು. ಸಂಚಾರಿಯಲ್ಲಿ ಕುಬೇರನ ಗರ್ವಭಂಗ ಮಾಡಿದ ಕಥೆಯನ್ನು ದೃಶ್ಯಾತ್ಮಕ ಚಿತ್ರಣದಲ್ಲಿ ಬಹು ಸೊಗಸಾಗಿ ಸಾದರಪಡಿಸಿ ಗಣಪತಿಯ ಮಹಿಮೆಯನ್ನು ಎತ್ತಿಹಿಡಿದಳು.

ಶ್ಯಾಮಾ ಶಾಸ್ತ್ರಿಗಳು ರಚಿಸಿದ ಶಂಕರಾಭರಣ ರಾಗದ ‘ಸರೋಜಗಮನ ದೇವಿ ಶ್ರೀ ಹಿಮಗಿರಿ ಪುತ್ರಿ’ ಎಂಬಿತ್ಯಾದಿಯಾಗಿ ಜಗದಂಬಿಕೆಯ ಗುಣಗಾನ, ರೂಪ-ಮಹಿಮೆಗಳನ್ನು ಕಲಾವಿದೆ ತನ್ನ ಸುಂದರ ಅಭಿನಯ-ಭಾವ-ಭಂಗಿಗಳಿಂದ, ಆಂಗಿಕಾಭಿನಯದಿಂದ ಪಡಿಮೂಡಿಸಿದಳು. ‘ಸರೋಜದಳ ನೇತ್ರಿ’ ಯಾದ ಸರ್ವಾಂಗಸುಂದರಿ ದೇವಿಯ ಸವಿವರ ವರ್ಣನೆಯನ್ನು ತನ್ನ ಸೂಕ್ಷ್ಮ- ಸಾತ್ವಿಕಾಭಿನಯದ ಸೊಗಸಿನಿಂದ ಎಳೆಎಳೆಯಾಗಿ ಅನಾವರಣಗೊಳಿಸಿದಳು.

ಶ್ರೀ ಆದಿ ಶಂಕಾರಾಚಾರ್ಯ ಕೃತ ರಾಗಮಾಲಿಕೆಯ ಶಿವ ಪಂಚಾಕ್ಷರ ಸ್ತೋತ್ರದಲ್ಲಿ ‘ನಾಗೇಂದ್ರ ಹಾರಾಯ’ ಪರಾತ್ಪರ ಶಕ್ತಿ ಶಿವನ ಸರ್ವಾಂಗ ಸೌಂದರ್ಯವನ್ನು, ರುದ್ರ-ರಮಣೀಯತೆ, ಲೀಲಾವಿನೋದ ವರ್ಣನೆಗಳ ಜೊತೆ, ನಟರಾಜನ ವಿಶಿಷ್ಟ ನಾಗಾಭರಣ, ಅಲಂಕಾರಗಳು, ಗುಣ-ವಿಶೇಷಗಳನ್ನು ಅರ್ಥಪೂರ್ಣ ಆಂಗಿಕದಲ್ಲಿ ಸೆರೆಹಿಡಿದು, ತನ್ಮಯತೆ ತುಂಬಿದ ದೈವೀಕ ನರ್ತನಾರ್ಪಣೆಗೈದಳು ಸಿರಿ. ಪ್ರದರ್ಶಿಸಿದ ಪ್ರತಿ ಭಂಗಿಗಳೂ ಮನೋಜ್ಞವಾಗಿದ್ದು ದೈವೀಕತೆಯ ಕಾಂತಿಯನ್ನು ಪಸರಿಸಿದ್ದವು.

ಪ್ರಸ್ತುತಿಯ ಹೃದಯಂಗಮ ಭಾಗವಾದ ‘ಪದವರ್ಣ’ ದಲ್ಲಿ ಜತಿಗಳ ಝೇಂಕಾರ, ಸ್ವರಗಳ ಮಾಧುರ್ಯದ ಜೊತೆ ಮನೋಹರವಾದ ಅಭಿನಯ ಮಿಂಚಿತು. ಶ್ರೀ ಕೃಷ್ಣಾಷ್ಟಕಂ ನಿಂದ ಆಯ್ದ ಭಾಗವನ್ನು, ಶ್ರೀ ತಿರುಮಲೆ ಶ್ರೀನಿವಾಸ್ ರೀತಿಗೌಳ ರಾಗದಲ್ಲಿ ಸಂಯೋಜಿಸಿದ್ದ  ‘ಶ್ರೀಕೃಷ್ಣ ಕಮಲಾನಾಥೋ’- ಭಕ್ತಿ, ತಾದಾತ್ಮ್ಯತೆಗಳಿಂದ ಪರವಶತೆಗೊಳಿಸಿ ಗಂಧರ್ವಲೋಕಕ್ಕೆ ಕೊಂಡೊಯ್ದಿತು. ಶ್ರೀಕೃಷ್ಣನ ಇಡೀ ಜೀವನಚಿತ್ರವನ್ನು ಸಮಗ್ರವಾಗಿ, ಅಷ್ಟೇ ಬಹು ಸೂಕ್ಷ್ಮವಾಗಿ ಕಟ್ಟಿಕೊಟ್ಟಿತು. ಕೃಷ್ಣನ ಜನನ, ಬಾಲ್ಯ, ಸಾಹಸದ ಗಾಥೆಗಳು ಮತ್ತು ವಿಶ್ವರೂಪ-ಗೀತೋಪದೇಶದವರೆಗೂ ಪ್ರತಿಯೊಂದು ಘಟನೆಗಳನ್ನೂ ದೃಶ್ಯಾತ್ಮಕವಾಗಿ ಕಣ್ಮನ ಸೆಳೆವಂತೆ ಸಿರಿ, ತನ್ನ ಸುಂದರ ಅಭಿನಯದಿಂದ, ಬೆಡಗಿನ ನೃತ್ತಗಳ ಸೊಗಸಿನಿಂದ ತಾನೊಬ್ಬ ಸಮರ್ಥ ಕಲಾವಿದೆ ಎಂಬುದನ್ನು ಸಾಬೀತುಪಡಿಸಿದಳು. ಬಾಲಸುಬ್ರಮಣ್ಯ ಶರ್ಮರ ಭಾವಪೂರ್ಣ ಗಾಯನ ಪರಾಕಾಷ್ಟತೆಗೊಯ್ದಿತು.  ಗುರು ರಕ್ಷಾ ಅವರ ಸಶಕ್ತ ನಟುವಾಂಗಕ್ಕೆ ತಕ್ಕಂತೆ ಸಿರಿ, ಪೂರಕ ನೃತ್ತಾವಳಿಗಳನ್ನು ಪ್ರಸ್ತುತಪಡಿಸಿದಳು. ಹಸನ್ಮುಖದ ಲವಲವಿಕೆಯ ನೃತ್ಯದ ಬೆಡಗು ಮೆಚ್ಚುಗೆ ತಂದಿತು.

ಮುಂದೆ, ಕನಕದಾಸರ ‘ಯಾದವರಾಯ ಬೃಂದಾವನದೊಳು’ ಮೋಡಿ ಮಾಡಿದ ಶ್ರೀಕೃಷ್ಣನ ಮುರಳೀಗಾನದ ಸಮ್ಮೋಹಕತೆಯ ಮಹತ್ವವನ್ನು, ತ್ರಿಮೂರ್ತಿಯರೇ ಆನಂದತುಂದಿಲರಾದ, ರಾಧಾ ಮಾಧವರ ವಿಲಾಸವನ್ನು ಕಲಾವಿದೆ ಸಿರಿ, ಶ್ರೀಕೃಷ್ಣನೇ ತಾನಾಗಿ ಪಾತ್ರದಲ್ಲಿ ಒಂದಾಗಿ ಬೆರೆತು ಭಾವಪೂರ್ಣವಾಗಿ ನಿವೇದಿಸಿದಳು. ಅನಂತರ ಅಣ್ಣಮಾಚಾರ್ಯರ ಭಕ್ತಿಭಾವದ ಕೃತಿಯನ್ನು ಭಕ್ತಿ ಪುರಸ್ಸರವಾಗಿ ನಿರೂಪಿಸಿ, ಮಿಂಚಿನ ವೇಗದ ನೃತ್ತಗಳ ಸಂಭ್ರಮದ  ‘ತಿಲ್ಲಾನ’ದೊಂದಿಗೆ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ಅಂತ್ಯದ ‘ಬ್ರಹ್ಮಮೊಕ್ಕಟೆ ಪರ’ ಸಿರಿಯ ರಮ್ಯಾಭಿನಯದ ‘ಮಂಗಳ’ ಸ್ಮರಣೀಯವಾಗಿತ್ತು.

Related posts

ಸುಂದರ ಅಭಿನಯದ ಸುಷ್ಮಳ ಕಲಾತ್ಮಕ ನಾಟ್ಯಪ್ರದರ್ಶನ

YK Sandhya Sharma

ತ್ಯಾಗರಾಜರ ಚೇತನವನ್ನು ಸಾಕ್ಷಾತ್ಕರಿಸಿದ ಅಪೂರ್ವ ಕ್ಷಣಗಳು

YK Sandhya Sharma

ಹರ್ಷಿತಳ ಕಣ್ಮನ ತುಂಬಿದ ಆಹ್ಲಾದಕರ ‘ಕಥಕ್’ ವಿಲಾಸ

YK Sandhya Sharma

Leave a Comment

This site uses Akismet to reduce spam. Learn how your comment data is processed.