Image default
Dance Reviews

ಚೇತೋಹಾರಿ ಗುರು-ಶಿಷ್ಯ ಪರಂಪರೆಯ ಒಡಿಸ್ಸಿ ನೃತ್ಯ ಲಾಸ್ಯ

                  ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯ ಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು ತ್ರಿಭಂಗದ ಸೊಬಗಿನ ಶೈಲಿಯೇ ಈ ಒಡಿಸ್ಸಿ ನೃತ್ಯದ ಪ್ರಮುಖ ಆಕರ್ಷಣೆ ಹಾಗೂ ಜೀವಾಳ.

        ಇಂಥ ಲಯ-ಲಾಸ್ಯಮಿಳಿತ `ಗುರು-ಶಿಷ್ಯ ಪರಂಪರೆ’ಯ ಒಡಿಸ್ಸಿ ಜೋಡಿ ನಾಟ್ಯಪ್ರಸ್ತುತಿ ಕಾರ್ಯಕ್ರಮವು, ಇತ್ತೀಚಿಗೆ ಬಸವೇಶ್ವರನಗರದ  `ಕಲಾಯುಗ’ ನೃತ್ಯಮಂದಿರದಲ್ಲಿ ನಡೆಯಿತು. ಗುರು-ಶಿಷ್ಯರು ಒಂದೇ ವೇದಿಕೆಯ ಮೇಲೆ ನರ್ತಿಸುವ ಈ ವಿಶಿಷ್ಟ ಕಾರ್ಯಕ್ರಮವನ್ನು `ಸಾಧನ ಸಂಗಮ ಟ್ರಸ್ಟ್ ’ ನೃತ್ಯಸಂಸ್ಥೆ  ಆಯೋಜಿಸಿತ್ತು.

ಪ್ರಸಿದ್ಧ ನೃತ್ಯಗುರು ಮಾನಸಿ ರಘುನಂದನ್ `ಅಭಿವ್ಯಕ್ತಿ ಡಾನ್ಸ್ ಸೆಂಟರ್ ’ನ ಅಧ್ಯಕ್ಷೆ, ಭರತನಾಟ್ಯ ಹಾಗೂ ಒಡಿಸ್ಸಿ ನೃತ್ಯಶೈಲಿಗಳಲ್ಲಿ ಪ್ರಾವೀಣ್ಯ ಸಾಧಿಸಿದವರು. ಒಡಿಸ್ಸಿ ನೃತ್ಯಶೈಲಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿಶ್ವದಾದ್ಯಂತ ನೃತ್ಯ ಪ್ರದರ್ಶನ-ಉಪನ್ಯಾಸಗಳನ್ನು ನೀಡಿ, ಅನೇಕ ಕಾರ್ಯಾಗಾರಗಳನ್ನು ನಡೆಸಿ ಹೆಸರು ಮಾಡಿದವರು. ಇವರೊಂದಿಗೆ ನರ್ತಿಸಿದವರು ಇವರ ಹಿರಿಯ ಶಿಷ್ಯೆ ಸೌಮ್ಯ ಲೋಹಿತ್. ಗುರು-ಶಿಷ್ಯರು ಜೊತೆ ಜೊತೆಯಾಗಿ ನರ್ತಿಸುವುದಕ್ಕೆ , ಸಮನ್ವಯ ಸಾಧನೆಗೆ  ಮತ್ತು  ಪ್ರಾವಿಣ್ಯ ಪ್ರದರ್ಶನಕ್ಕೆ ಇದೊಂದು ಸವಾಲಾಗಿತ್ತು. ಗುರುವಿನ ಪ್ರತಿಬಿಂಬ ಶಿಷ್ಯೆಯಲ್ಲಿ ಗುರುತಿಸುತ್ತ, ಇಬ್ಬರು ಕಲಾವಿದೆಯರ ಪ್ರತಿಭಾ ಪ್ರದರ್ಶನವನ್ನು ಏಕಕಾಲಕ್ಕೆ ತುಲನೆ ಮಾಡುವ ವೀಕ್ಷಣೆ ನಿಜಕ್ಕೂ ಕುತೂಹಲಕರವಾಗಿತ್ತು. ಸರಿ ಮಿಗಿಲೆಂಬಂತೆ ಗುರು-ಶಿಷ್ಯರಿಬ್ಬರೂ ಉತ್ತಮ ಸಾಂಗತ್ಯದಿಂದ ಅನುಪಮವಾಗಿ ನರ್ತಿಸಿ ನೆರೆದ ರಸಿಕರ ಮೆಚ್ಚುಗೆಗೆ ಪಾತ್ರರಾದರು.  

`ಮಂಗಳಾಚರಣ‘.- ಸಾಂಪ್ರದಾಯಕ ಆರಂಭದ ನೃತ್ಯಪ್ರಸ್ತುತಿ. ಭರತನಾಟ್ಯದಲ್ಲಿ `ಪುಷ್ಪಾಂಜಲಿ’ ಇದ್ದಂತೆ.  ಸಕಲ ದೇವಾನುದೇವತೆಗಳಿಗೆ ನಮನದ ಅರ್ಪಣೆ. ದೇವ ಜಗನ್ನಾಥ, ಭೂಮಾತೆ, ಗುರು-ಹಿರಿಯರು, ಪ್ರೇಕ್ಷಕ ವೃಂದ ಹಾಗೂ ರಂಗಮಂದಿರಕ್ಕೆ ವಿನೀತವಾಗಿ ವಂದಿಸುವ ಬಗೆ ಸುಂದರ ಅಂಗವಿನ್ಯಾಸದಲ್ಲಿ ರೂಪುಗೊಂಡಿತ್ತು. ಪಹಾಡಿ ರಾಗದ ಗಣೇಶಸ್ತುತಿಯಲ್ಲಿ ಕಲಾವಿದೆಯರು , ಮಂದಗತಿಯ ಮೆಲುಹೆಜ್ಜೆಗಳನ್ನಿರಿಸುತ್ತ, ತ್ರಿಭಂಗಿಯಲ್ಲಿ ನಯನ ಮನೋಹರ ಲಾಸ್ಯದ  ಭಂಗಿಗಳನ್ನು ಪ್ರದರ್ಶಿಸಿ ಮನಸೂರೆಗೊಂಡರು.

ಅನಂತರ ನೃತ್ತ ಪ್ರಧಾನವಾದ `ಸ್ಥಾಯಿ’ (ಶಂಕರಾಭರಣ ರಾಗ)ಯನ್ನು ಕಲಾವಿದೆಯರು ತಮ್ಮ ವೈವಿಧ್ಯಪೂರ್ಣ ಅಡವುಗಳ ಪಾದಭೇದಗಳಿಂದ, ಹರಿವ ಜಲದಂಥ ಹಸ್ತಚಲನೆಗಳಿಂದ ಪ್ರದರ್ಶಿಸಿದರು. ಭರತನಾಟ್ಯದಲ್ಲಿನ ಅಲ್ಲರಿಪು-ಜತಿಸ್ವರದಲ್ಲಿರುವಂತೆ ಕೇವಲ ನೃತ್ತಗಳ ವಿವಿಧ ವಿನ್ಯಾಸಗಳ ಸೌಂದರ್ಯವನ್ನು ಬಿತ್ತರಿಸುವ ವಿಶಿಷ್ಟ ಕೃತಿ ಇದು. ಒರಿಸ್ಸಾ ದೇವಾಲಯಗಳಲ್ಲಿರುವ ಮನೋಹರ ಮೂರ್ತಿಗಳ ಶಿಲ್ಪಕಲಾ ಭಂಗಿಗಳನ್ನು ಪುನರ್ರಚಿಸಿ ಅಲ್ಲಿನ ದೈವೀಕ ಕಳೆಯನ್ನು ಕಣ್ಮುಂದೆ ಕಟ್ಟಿದರು. ಆ ಶಿಲಾಸುಂದರಿಯರ ಮೈಮೇಲೆ ಶೋಭಿಸಿದ ಕೊರಳಹಾರ, ಓಲೆ, ಕಂಕಣ, ನೂಪುರ ಮುಂತಾದ ವಿವಿಧ ಆಭರಣಗಳ ಕಲಾವಂತಿಕೆಯನ್ನು ಹಾಗೂ ಸೀರೆಯ ನೆರಿಗೆ-ಸೆರಗುಗಳ ವಯ್ಯಾರದೊಂದಿಗೆ ತಮ್ಮ ಸುಕೋಮಲ ಹಸ್ತಚಲನೆ- ಮುದ್ರೆಗಳ ಮೂಲಕ ಶಿಲಾಬಾಲಿಕೆಯರ ವೈವಿಧ್ಯ ಭಂಗಿಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟದ್ದು ರಸಪೂರ್ಣವೆನಿಸಿತು. ಹಾಗೆಯೇ ತಮ್ಮ ಚೌಕ ಮತ್ತು ತ್ರಿಭಂಗ ಭಂಗಿಗಳ ಆಂಗಿಕಗಳಿಂದ  ಸಿತಾರ್, ಕರತಾಳ, ಕೊಳಲು, ಮದ್ದಲೆ ಮುಂತಾದ ಸಂಗೀತವಾದ್ಯಗಳನ್ನು ಅಭಿನಯಿಸಿ ತೋರಿದ್ದು ತುಂಬಾ ಮನೋಜ್ಞವಾಗಿತ್ತು. ದೇವಾಲಯದ ವಾಸ್ತುಶಿಲ್ಪ-ಶಿಲಾಕನ್ನಿಕೆಯರ ವೈಶಿಷ್ಟ್ಯವನ್ನು ಅನಾವರಣಗೊಳಿಸುವ ಈ `ಸ್ಥಾಯಿ’ ಯ ಕೇಂದ್ರಭಾವ ಶೃಂಗಾರ ರಸವಾಗಿತ್ತು. ವಿಳಂಬಗತಿಯ ಅಡವುಗಳಿಂದ ಆರಂಭವಾದ ಪ್ರಸ್ತುತಿ ಕ್ರಮೇಣ ತೀವ್ರಗತಿಯೊಂದಿಗೆ ಪರಾಕಾಷ್ಠಕ್ಕೇರಿತ್ತು.

ಜೋಡಿ ನೃತ್ಯ ನೋಡುವುದೇ ಒಂದು ಸೊಗಸು. ಕಲಾವಿದೆಯರು ಕನ್ನಡಿಯನ್ನು ನೋಡಿಕೊಳ್ಳುತ್ತ ಅಲಂಕಾರ ಮಾಡಿಕೊಳ್ಳುವ ಒನಪು-ವಯ್ಯಾರದ ಬಗೆ, ಸಿತಾರ ನುಡಿಸುವ ಲಾಲಿತ್ಯ, ಹಿನ್ನಲೆಯ ಮದ್ದಲೆಯ ದನಿಗೆ ಹೆಜ್ಜೆಗಳನ್ನು ಕಂಪಿಸಿ ಓಲಾಡುವ ಮೃದುಲಾಸ್ಯ-ಮಾದಕ ಭಂಗಿಗಳು ಚೇತೋಹಾರಿಯಾಗಿದ್ದವು.

`ನವದುರ್ಗ’ ಸಾಂಪ್ರದಾಯಕ ಕೃತಿ- (ಪಂಕಜ್ ಚರಣದಾಸ್ ನೃತ್ಯಸಂಯೋಜನೆ)ಯನ್ನು ಗುರು ಮಾನಸಿ ಏಕಾಂಗಿಯಾಗಿ ಪ್ರದರ್ಶಿಸಿದರು. ನವದುರ್ಗೆಯರ ನವರಸಗಳಾಭಿವ್ಯಕ್ತಿಯ ದಿವ್ಯರೂಪವನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು. ಶುಂಭ-ನಿಶುಂಭ ಮರ್ದನದ ಸಂಚಾರಿಯಲ್ಲಿ ತೋರಿದ ರೌದ್ರಾವೇಶದ ಅಭಿನಯ, ದೇವಿಯ ಪ್ರಸನ್ನರೂಪದ ಅಭಿವ್ಯಕ್ತಿಯಲ್ಲಿ ತೋರಿದ ಸ್ನಿಗ್ಧಭಾವ, ಭಕ್ತಿಸಿಂಚನ, ಸಮರ್ಪಣಾಭಾವ  ಹೃದಯಸ್ಪರ್ಶಿಯಾಗಿತ್ತು. ಭಗವತಿದೇವಿಯ ಸಾಕಾರದಲ್ಲಿ ಕಲಾವಿದೆಯ ಖಚಿತ ಹಸ್ತಮುದ್ರೆಗಳ ಪರಿಪೂರ್ಣತೆ,ರಂಗಾಕ್ರಮಣದಂತೆ ಹಾಕಿದ ವೃತ್ತಾಕಾರದ ಹೆಜ್ಜೆಗಳು, ಮಂಡಿ ಅಡವುಗಳು, ಅಭಿವ್ಯಕ್ತಿಸಿದ ವಿವಿಧಭಾವಗಳ ಸಂಗಮ ಮುದತಂದಿತ್ತು.

`ಶಿವರಕ್ಷಾ ಸ್ತೋತ್ರಂ’ -ಶುದ್ಧ ನೃತ್ಯದ ಕೃತಿಯನ್ನು ಸೌಮ್ಯ, ಆತ್ಮವಿಶ್ವಾಸದಿಂದ, ಕಲಾಪೂರ್ಣವಾಗಿ ಏಕಾಂಗಿಯಾಗಿ ಪ್ರಸ್ತುತಿಪಡಿಸಿದಳು. ಅನುಷ್ಟುಭ್ ಛಂದಸ್ಸಿಗೆ ಅಳವಡಿಸಿದ ಶಿವನ ಮಹಿಮೆಯನ್ನು ವರ್ಣಿಸುವ ಈ ಕೃತಿಯನ್ನು ಸೌಮ್ಯ, ಸುಂದರವಾಗಿ ಅಭಿನಯಿಸಿ ಸೈ ಎನಿಸಿಕೊಂಡಳು. ಶಿವನ ಅಂಗಾಂಗ ಸೌಂದರ್ಯವನ್ನು ಶಿರದಿಂದ ಉಂಗುಷ್ಟದವರೆಗೂ ವರ್ಣಿಸುವ ನಿರೂಪಣೆಯಲ್ಲಿ, ಅವಳು ತನ್ನ ಕಣ್ಣು-ಹುಬ್ಬುಗಳ ಅಲುಗಾಟ, ಕೊರಳು ಕೊಂಕಿಸುವ, ತನುವನ್ನು ಅಲೆಯಂತೆ ಬಳುಕಿಸುವ  ಆಂಗಿಕದಿಂದ, ಪರಿಣಾಮಕಾರಿ ಅಭಿನಯದಿಂದ ನೋಡುಗರ ಹೃದಯ ಗೆದ್ದಳು.

ಅಂತಿಮ ಪ್ರಸ್ತುತಿ ಆನಂದಭೈರವಿ ರಾಗದ `ಪಲ್ಲವಿ’ – ವಿವಿಧ ವಿನ್ಯಾಸದ ಹಸ್ತಚಲನೆ, ಸಶಕ್ತ ಪಾದಕ್ಷಮತೆ, ಶುದ್ಧ ನೃತ್ತದಲ್ಲಿ ಸೌಂದರ್ಯದ ಪರಿಭಾಷೆಯಲ್ಲಿ ಸೊಗಯಿಸಿತು. ಹೂವು ನಿಧಾನವಾಗಿ ಪಕಳೆ ಪಕಳೆಗಳನ್ನು ಬಿಚ್ಚಿಕೊಂಡು ಅರಳುವಂತೆ ನಯವಾಗಿ, ಲಯಾತ್ಮಕ ನಡೆಯ ಮಂದಗತಿಯ ನೃತ್ತಗಳು ಕ್ರಮೇಣ ವೇಗಗತಿಯಲ್ಲಿ ಪರಾಕಾಷ್ಟೆ ತಲುಪಿದ್ದು ಆನಂದದಾಯಕವಾಗಿತ್ತು. ಗುರು-ಶಿಷ್ಯರು ಮೃದುವಾದ ಚಲನೆಗಳಿಂದ ಮೈಯನ್ನು ತ್ರಿಭಂಗದಲ್ಲಿ ಬಳುಕಿಸಿ , ಬಾಗಿಸುತ್ತ ನರ್ತಿಸಿ, ಹೊಸ ಮೆರುಗು ಸ್ಫುರಿಸಿದ್ದು ನಿಜಕ್ಕೂ ಕಣ್ಣಿಗೆ ಹಬ್ಬವಾಗಿತ್ತು.

Related posts

ನಿಖಿತಳ ಚೈತನ್ಯಪೂರ್ಣ ಸುಮನೋಹರ ನೃತ್ಯ

YK Sandhya Sharma

ಮೇಘನಳ ಅಂಗಶುದ್ಧಿಯ ನರ್ತನ – ಭಕ್ತಿ ನೈವೇದ್ಯ

YK Sandhya Sharma

ತ್ರಿಷಾ ರೈ ಮಿಂಚಿನ ಸಂಚಾರದ ಮೋಹಕ ನೃತ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.