Image default
Dance Reviews

ನಿರಂತರೋತ್ಸವದಲ್ಲಿ ‘ಪ್ರತಿಭಾ’ ಪ್ರದರ್ಶನ

`ಸಂಗೀತ ಸಂಭ್ರಮ’ ಸಂಸ್ಥೆ ಇತ್ತೀಚಿಗೆ ನಗರದ `ಸೇವಾಸದನ’ದಲ್ಲಿ ಆಯೋಜಿಸಿದ್ದ `ನಿರಂತರಂ’ ಸಂಗೀತ-ನೃತ್ಯೋತ್ಸವ ಬೆಂಗಳೂರಿನ ರಸಿಕವೃಂದಕ್ಕೆ ಧಾರಾಳ ಮನರಂಜನೆಯ ಆಹ್ಲಾದವನ್ನು ನೀಡಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆಯನ್ನು ಉಣಬಡಿಸಿದವರು- ಯುವ ಸಂಗೀತ ಕಲಾವಿದರಾದ ವಿದ್ವಾನ್ ಅರ್ಜುನ್ ಶ್ರೀವಾತ್ಸವ್. ಇವರು ಪ್ರಸಿದ್ಧ ಸಂಗೀತ ಕಲಾವಿದ ವಿದ್ವಾನ್ ಎಸ್.ಶಂಕರ್ ಅವರ ಶಿಷ್ಯರು. ವಾದ್ಯ ಸಹಕಾರದಲ್ಲಿ ವಯೊಲಿನ್ ನಲ್ಲಿ ವಿದ್ವಾನ್ ಪ್ರಣವ್ ಸ್ವರೂಪ್ ಮತ್ತು ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಅಪೂರ್ವ ಸಹಕಾರ ನೀಡಿ ರಸಿಕರ ಮನತಣಿಸಿದರು. ಅನಂತರ-ಪದ್ಮಭೂಷಣ ಶ್ರೀ ಟಿ.ವಿ.ಶಂಕರನಾರಾಯಣನ್ ಅವರು ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಸಂಗೀತ ರಸಾಯನ ಹರಿಸಿ ಕರ್ಣಾನಂದ ನೀಡಿದರು. ಅವರ ಅನುಭವೀ ಸಂಗೀತದ ಹಾಡುಗಾರಿಕೆಯ ತನಿ-ಬನಿ ಮನಸೂರೆಗೊಂಡು, ಸಂಗೀತದ ಸವಿ ಶ್ರೋತೃಗಳ ಮನದೊಳಗೆ ಪಸರಿಸಿತ್ತು. ಇವರಿಗೆ ವಯೊಲಿನ್ ನಲ್ಲಿ ವಿದ್ವಾನ್ ಬಿ.ಕೆ.ರಘು, ಮೃದಂಗ-ವಿದ್ವಾನ್ ತುಮಕೂರು ಬಿ.ರವಿಶಂಕರ್ ಮತ್ತು ಖಂಜಿರಾದಲ್ಲಿ ವಿದ್ವಾನ್ ಭಾರ್ಗವ ಹಾಲಂಬಿ ಸಮರ್ಥವಾಗಿ ಸಹಕರಿಸಿದ್ದರು.

ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ವಿಜೇತೆ ಪ್ರತಿಭಾ ಪ್ರಹ್ಲಾದ್ ತಮ್ಮ ಸಾತ್ವಿಕಾಭಿನಯದ ಕೆಲವು ಕೃತಿಗಳ ಮನೋಜ್ಞ ಅಭಿನಯದಿಂದ ಆತ್ಮಾನಂದವನ್ನು ನೀಡಿದರು. ಮೊದಲಿಗೆ ಅವರ ಪ್ರೌಢ ಅಭಿನಯದಲ್ಲಿ ಸುಂದರ ‘ಗಣೇಶ ವಂದನಂ’ ಪ್ರಸ್ತುತಗೊಂಡಿತು. ಭಾವತೀವ್ರತೆಯ ಅಭಿವ್ಯಕ್ತಿ, ಗಣಪತಿಯ ವಿವಿಧ ರೂಪಗಳ ಸುಂದರ ಪ್ರಸ್ತುತಿ ಸೌಮ್ಯತೆಯ ಪ್ರತೀಕವಾಗಿ ಅರಳಿತು. ಅನಂತರ ವಿವಿಧ ನಾಯಿಕಾ ಭಾವಗಳನ್ನು ತಮ್ಮ ಸಾತ್ವಿಕಾಭಿನಯದಲ್ಲಿ ಅಭಿವ್ಯಕ್ತಿಗೊಳಿಸಿದರು. ಶ್ರೀಕೃಷ್ಣನ  ಬಗ್ಗೆ ಅವನ ಅನುರಾಗದ ಮತ್ತಿನಲ್ಲಿ ಭ್ರಮಿತಳಾದ ಮುಗ್ಧ ನಾಯಕಿ ಅವನ ತುಂಟಾಟಗಳನ್ನು ನೆನೆಯುತ್ತ, ಲಜ್ಜೆ-ಕಂಪನಗಳಲ್ಲಿ ಮೀಯುತ್ತ, ಅವನ ನಿರೀಕ್ಷೆಯಲ್ಲಿ ರೋಮಾಂಚಗೊಳ್ಳುತ್ತ  ಕನಸಿನಲೋಕಕ್ಕೆ ಜಾರುವ ದೃಶ್ಯವನ್ನು ಕಲಾವಿದೆ `ಶ್ಯಾಮಮಿಲೆ…” (ಶಿವರಂಜಿನಿರಾಗ) ಎಂದು ಹಾಡುತ್ತ ಭಾವನಿಮಗ್ನಳಾಗುವ ಸನ್ನಿವೇಶ ರಸಪೂರ್ಣವಾಗಿತ್ತು.

ಜಯದೇವನ ಗೀತಗೋವಿಂದದ `ಅಷ್ಟಪದಿ’ ಕಲಾವಿದೆಯ ಮುಂದಿನ ಆಯ್ಕೆಯಾಗಿತ್ತು. ಇದರಲ್ಲಿ ಅನೇಕ ನಾಯಿಕಾಭಾವಗಳು ಒಂದರೊಳಗೊಂದು ಬೆರೆತುಹೋಗಿದ್ದು ವಿಶೇಷವಾಗಿತ್ತು. ತನ್ನಿನಿಯನಿಗಾಗಿ ಅಲಂಕರಿಸಿಕೊಂಡು ಕಾತರದಿಂದ ಕಾಯುವ `ವಾಸಿಕಾಸಜ್ಜ ನಾಯಕಿ’ , ಬೇಗ ಹಿಂತಿರುಗುವ ಅವನ ಭಾಷೆಯನ್ನು ನೆಚ್ಚಿಕೊಂಡು ಅವನ ಹಾದಿ ಕಾಯುತ್ತ , ಬೇಸತ್ತು ನಿರಾಶಗೊಂಡ `ಅಭಿಸಾರಿಕಾ ನಾಯಕಿ’, ಮನದ ದುಗುಡ-ನೋವುಗಳಿಂದ ಮುನಿದು, ದುಃಖಭರಿತಳಾದ `ವಿರಹೋತ್ಖಂಡಿತ ನಾಯಕಿ’ಯಾಗಿ, ಅವನ ಪ್ರಾಮಾಣಿಕ ಪ್ರೀತಿಯ ಬಗ್ಗೆ ಅನುಮಾನ ಹುಟ್ಟಿ ಪ್ರಲಪಿಸುವ, `ವಿಪ್ರಲಬ್ಧ’ ಶೃಂಗಾರ ಭಾವ ಪ್ರವಹಿಸಿ ಹತಾಶಳಾಗುತ್ತಾಳೆ. ದೇಶರಾಗದ `ನಾಥ ಹರೇ, ಜಗನ್ನಾಥ ಹರೇ’ ಎಂಬ ವಿದುಷಿ ಪಿ.ರಮಾ ಅವರ ಭಾವಪೂರ್ಣ ಮಧುರಕಂಠ ನಾಯಕಿಯ ಮಧುರಭಾವನೆಗಳನ್ನು ಹೃದಯಸ್ಪರ್ಶಿಯಾಗಿ ಸ್ರವಿಸಿತ್ತು. ಕಲಾವಿದೆ ಕೃಷ್ಣನಿಗಾಗಿ ಕಾಯುವ ಸಂಭ್ರಮ, ಸಿದ್ಧತೆಯ ಪ್ರತಿ ಸೂಕ್ಷ್ಮವಿವರಗಳನ್ನು ಬಹು ನವಿರಾಗಿ ಅಭಿವ್ಯಕ್ತಿಸಿದರು. ಅಭಿಸಾರಿಕೆಯ ಭಾವತೀವ್ರತೆಯಿಂದ ಕಾಡಿನ ದಾರಿಯ ಅಪಾಯಗಳನ್ನು ಲೆಕ್ಕಿಸದೆ ನಡೆಯುವ , ಅವನ ಸುಳಿವುಗಾಣದೆ ಸಂಕಟಪಡುವ, ತೊಟ್ಟ ಒಡವೆಗಳನ್ನು ಬಿಚ್ಚೆಸೆದು, ವಿರಹಾರ್ತನಾದದಿಂದ ಶೋಕತಪ್ತೆಯಾಗುವ ಅಭಿನಯವನ್ನು ಕಲಾವಿದೆ ಪರಿಣಾಮಕಾರಿಯಾಗಿ ಅಭಿನಯಿಸಿದರು.

ಅನಂತರ `ವಿಪ್ರಲಂಭ’ ಶೃಂಗಾರದ (ರಚನೆ-ಧರ್ಮಪುರಿ ಸುಬ್ಬರಾವ್, ರಾಗ-ಝುಂಝುಟಿ) ಜಾವಳಿಯನ್ನು ನೃತ್ಯ ಕಲಾವಿದೆ  ಪ್ರತಿಭಾ ಅನುಭವಿಸಿ ಸಾಕ್ಷಾತ್ಕರಿಸಿದರು. ಬಂದೇ ಬರುವೆನೆಂದು ಮಾತು ಕೊಟ್ಟ ಇನಿಯನಿಗಾಗಿ ರಾತ್ರಿಯೆಲ್ಲ ಕಾದು, ಬೆಳಗ್ಗೆ ಅವನು ಪರಸ್ತ್ರೀಯೊಡನೆ ಕಾಣಿಸಿಕೊಂಡಾಗ ಆಗುವ ನೋವು ಹಲವಾರು ರೀತಿಯ ಅಭಿವ್ಯಕ್ತಿ ಪಡೆದವು. `ಪ್ರಾಣಸಖಿ…’ ಎಂದು ಒರಲುತ್ತ ಅವಳು ತನ್ನ ದುಃಖವನ್ನು ನಾನಾ ಬಗೆ ಹೇಳಿಕೊಳ್ಳುತ್ತಾ, ಆತ್ಮಹತ್ಯೆಗೂ ಪ್ರಯತ್ನಿಸುವ ಹಂತ ತಲುಪಿದ  ನಾಯಕಿ ಹತಾಶಳಾಗುತ್ತಾಳೆ.

ಅಂತಿಮ ಪ್ರಸ್ತುತಿ-ಪೂರ್ವೀಕಲ್ಯಾಣಿ ರಾಗದ ಪ್ರಗಲ್ಭ, ಸ್ವಾಧೀನಪತ್ತಿಕಾ ನಾಯಕಿ, ತನ್ನ ಪ್ರಿಯಕರನೊಡನೆ ಕಳೆದ ಆಪ್ತ ಗಳಿಗೆಗಳನ್ನು ಸೆರೆಹಿಡಿಯುವ ಚಿತ್ರಣವನ್ನು ಕಲಾವಿದೆ ಭಾವಪೂರ್ಣವಾಗಿ ಕಟ್ಟಿಕೊಟ್ಟರು. ಪರಿಣಾಮಕಾರಿ ಅಭಿನಯವನ್ನು ಎತ್ತಿಹಿಡಿದದ್ದು ರಮಾ ಅವರ ಸುಶ್ರಾವ್ಯ ಗಾಯನ, ಜನಾರ್ಧನರ ಮೃದಂಗ, ಕಿಕ್ಕೇರಿ ಜಯರಾಂ ಅವರ ಕೊಳಲ ಗಾನ ಮತ್ತು ದಯಾಕರರ ವಯೊಲಿನ್ ವಾದನ. ಸಂಗೀತ ಸಂಭ್ರಮ ಸಂಸ್ಥೆಯ ‘’ನಿರಂತರ’’ ಉತ್ಸವ ಸೃಷ್ಟಿಸಿದ ರಸಸಂಜೆ ಸ್ಮರಣೀಯವಾಗಿತ್ತು.    

Related posts

ಮುದ ನೀಡಿದ ನವ್ಯಳ ಮೋಹಕ ನೃತ್ಯ

YK Sandhya Sharma

ಕಣ್ಮನ ತಣಿಸಿದ ಸೋನಿಯಾಳ ಒಡಿಸ್ಸಿ ಲಾಸ್ಯ-ಲಾಲಿತ್ಯ

YK Sandhya Sharma

ಹೃನ್ಮನ ತಣಿಸಿದ ಮನೋಹರ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.