Image default
Dance Reviews

ಭಾವ ರಸೋತ್ಕರ್ಷದ ನವರಸ ನಾಯಕಿ ಪಾಂಚಾಲಿ

ಸಾಮಾನ್ಯವಾಗಿ ನೃತ್ಯಪ್ರದರ್ಶನಕ್ಕೆ ಕಲಾವಿದೆಯ ಸುಂದರ ಆಂಗಿಕಗಳು, ಭಾವಾಭಿನಯದ ನೃತ್ಯದೊಡನೆ, ಆಕರ್ಷಕ ವೇಷಭೂಷಣ ಮತ್ತು ನೃತ್ಯಕ್ಕೆ ಪೂರಕವಾದ ಗಾಯನ-ವಾದ್ಯಗೋಷ್ಠಿಗಳೊಂದಿಗೆ ನರ್ತಿಸುವ ಕೃತಿಗಳ ಆಯ್ಕೆಯೂ ಅಷ್ಟೇ ಮುಖ್ಯವಾಗುತ್ತದೆ. ಇಂಥ ಅನೇಕ ಅರ್ಥಪೂರ್ಣ ವರ್ಣ, ಜಾವಳಿ, ಪದಂ ಮುಂತಾದ ಕೃತಿಗಳಿಂದ ನಾಟ್ಯಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನಮ್ಮ ನಡುವಿನ ಹಿರಿಯ ವಾಗ್ಗೇಯಕಾರ್ತಿ ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ಅವರ ಕೊಡುಗೆ ಗಮನಾರ್ಹ. ನೃತ್ಯರೂಪಕಕ್ಕೆ ಹೊಂದುವ, ಹೊಸಬಗೆಯ ಪರಿಕಲ್ಪನೆಯೊಂದಿಗೆ ಕೃತಿಗಳನ್ನು ರಚಿಸಿ, ಅದನ್ನು ನೃತ್ಯಕ್ಕಳವಡಿಸಲು ನಾಟ್ಯಗುರುಗಳಿಗೆ ಸ್ಫೂರ್ತಿ ನೀಡುವ ಹಿರಿಯಚೇತನ ದ್ವಾರಕಿ ಅವರ ಕಾರ್ಯಕ್ಷಮತೆ ಸ್ತುತ್ಯಾರ್ಹ.

ಇತ್ತೀಚಿಗೆ ಖ್ಯಾತ ‘’ಕೈಶಿಕೀ ನಾಟ್ಯವಾಹಿನಿ’’ಯ ನಾಟ್ಯಗುರು ಡಾ. ಮಾಲಾ ಶಶಿಕಾಂತ್ ಮನೋಹರವಾಗಿ ನೃತ್ಯ ಸಂಯೋಜಿಸಿದ ‘ನವರಸ ನಾಯಕಿ ಪಾಂಚಾಲಿ’ ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ ಜೆ.ಎಸ್.ಎಸ್. ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಯಿತು.

ಮಹಾಭಾರತದ ಯುದ್ಧಕ್ಕೆ ಕಾರಣಳಾದ ದ್ರೌಪದಿಯದು ವರ್ಣರಂಜಿತ ವ್ಯಕ್ತಿತ್ವ. ಅವಳ ಕಥೆಯೇ ಒಂದು ಬಗೆಯ ರೋಚಕತೆಯಿಂದ ಕೂಡಿದ್ದು, ಕುತೂಹಲವನ್ನು ಕೆರಳಿಸುವಂಥದ್ದು. ಈಕೆಯ ಜೀವನದಲ್ಲಿ ನವರಸಗಳು ಹಾಸುಹೊಕ್ಕಾದ ಘಟನೆ-ಸನ್ನಿವೇಶಗಳ ಸುತ್ತ ಹೆಣೆದ ನೃತ್ಯರೂಪಕ ‘’ನವರಸ ನಾಯಕಿ ಪಾಂಚಾಲಿ’’ ಮನೋಜ್ಞವಾಗಿ ಮೂಡಿಬಂತು. ನಿರೂಪಕಿಯರಾದ ನಾಲ್ಕುಜನ ನರ್ತಕಿಯರೊಂದಿಗೆ, ಐದುಜನ ಪಾಂಚಾಲಿಯರು, ವಿವಿಧ ಸನ್ನಿವೇಶಗಳಲ್ಲಿ ದ್ರೌಪದಿಯರಾಗಿ ಅಭಿನಯಿಸುತ್ತ, ಅವಳ ಜೀವನದ ನವರಸಗಳ ಘಟ್ಟಗಳಲ್ಲಿ ರಸಾನುಭೂತಿಯನ್ನು ಹೊಮ್ಮಿಸಿದರೆ, ಉಳಿದವರು ಪೂರಕವಾಗಿ ಕಥೆಯ ಇನ್ನಿತರ ಪಾತ್ರಗಳಾಗಿ ಜೀವತುಂಬಿದರು.

ಅರ್ಜುನನನ್ನು ವಿವಾಹವಾಗುವ ಸುಮಧುರ ಸನ್ನಿವೇಶದಲ್ಲಿ ಶೃಂಗಾರರಸ ಸ್ಥಾಯಿಭಾವವಾಗಿ ನಿಂತು ಲಜ್ಜೆ, ಸಂತಸ, ಉತ್ಸಾಹ, ಲಘು ಆತಂಕದ ಹನಿಗಳು ಸಂಚಾರಿಭಾವಗಳಾಗಿ ನೆಲೆಗೊಂಡವು. ಶೃಂಗಾರಲೀಲೆಯ ಘಟನೆಯ ನಂತರ, ಅರ್ಜುನ ಗೆದ್ದುತಂದ ಹೆಣ್ಣನ್ನು, ವಸ್ತುಸ್ಥಿತಿ ಅರಿಯದ ತಾಯಿ  ಕುಂತಿ, ಹಣ್ಣು ಎಂದುಕೊಂಡು, ಮಕ್ಕಳೆಲ್ಲ ಸಮನಾಗಿ ಹಂಚಿಕೊಳ್ಳಿರಿ ಎಂದ ಸನ್ನಿವೇಶದಲ್ಲಿ, ಐದುಜನಕ್ಕೆ ತಾನು ಹಂಚಿಹೋದಾಗ ದ್ರೌಪದಿ ಭಯಭೀತಳಾಗುತ್ತಾಳೆ. ಆಗ ಅವಳು ತೋರುವ ಭಯಮಿಶ್ರಿತ ಗಲಿಬಿಲಿ, ನಡುಕ-ಆತಂಕ-ದುಗುಡ, ಗಾಬರಿ, ತುಮುಲದ ಮಿಳಿತಗಳ ಗೊಂದಲದ ಅಭಿವ್ಯಕ್ತಿ ಪರಿಣಾಮ ಬೀರಿತು. ಮುಂದೆ ಮಯನಿರ್ಮಿತ ಅರಮನೆಯ ಚೋದ್ಯಗಳನ್ನರಿಯದ ದುರ್ಯೋಧನ, ಜಲವೆಂದು ಭ್ರಮಿಸಿ ಜಾರಿಬಿದ್ದಾಗ ಉಪ್ಪರಿಗೆಯ ಮೇಲಿಂದ ದ್ರೌಪದಿ ನಗುವನ್ನು ತಡೆಯಲಾರದೆ ನಗುವ ‘’ಹಾಸ್ಯ’’ವಿಲಾಸದ  ಸನ್ನಿವೇಶ ನಿರ್ಮಾಣವಾಗುತ್ತದೆ.

ದ್ರೌಪದಿಯ ಆಪದ್ಭಾಂಧವ ಕೃಷ್ಣನ್ನೊಮ್ಮೆ ಅಚಾತುರ್ಯದಿಂದ ಕೈಗೆ ಪೆಟ್ಟು ಮಾಡಿಕೊಂಡಾಗ, ದ್ರೌಪದಿ ತನ್ನ  ಸೆರಗಿನ ಚುಂಗು ಹರಿದು ಅವನ ಗಾಯಕ್ಕೆ ಕಟ್ಟಿ ಶುಶ್ರೂಷೆ ಮಾಡುವ ಸನ್ನಿವೇಶದಲ್ಲಿ ಅವಳ ಕರುಣೆಯ ಸ್ವಭಾವ ವ್ಯಕ್ತವಾಗುತ್ತದೆ. ತುಂಬಿದ ರಾಜಸಭೆಯಲ್ಲಿ ದುರುಳ ದುಶ್ಶಾಸನ ಅವಳ ಮುಡಿಹಿಡಿದು ಎಳೆತಂದು, ಅವಳ ವಸ್ತ್ರಾಪಹರಣ ಮಾಡುವಾಗ ಕೃಷ್ಣ ಅಕ್ಷಯವಸ್ತ್ರವನ್ನಿತ್ತು ಕಾಪಾಡುವ ಸಂದರ್ಭದಲ್ಲಿ ‘ಅದ್ಭುತ’ ರಸ ಹೊಮ್ಮುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ದುಶ್ಶಾಸನನ ಕರುಳು ಬಗೆವ ದೃಶ್ಯದಲ್ಲಿ ‘’ ಭೀಭತ್ಸ್ಯ’’, ದುರ್ಯೋಧನನ ತೊಡೆ ಮುರಿವಾಗ ವೀರ-ರೌದ್ರ ರಸಗಳು ಜಿನುಗಿ, ಅಂತ್ಯದಲ್ಲಿ ಧ್ಯಾನಸ್ಥಳಾದ ದ್ರೌಪದಿಯ ಸಮಾಧಾನ ಚಿತ್ತದಲ್ಲಿ, ‘ಶಾಂತರಸ’ ಮಡುಗಟ್ಟುವ ಭಾವಗಳನ್ನು ನರ್ತಕಿಯರು, ನಾಟಕೀಯ ದೃಶ್ಯಗಳಲ್ಲಿ ಚಿತ್ರವತ್ತಾಗಿ ಕಟ್ಟಿಕೊಟ್ಟರು. ಇಡೀ ಮಹಾಭಾರತದ ಕಥೆಯನ್ನು ದ್ರೌಪದಿಯ ಮೂಲಕ ಎಳೆಎಳೆಯಾಗಿ ಬಿಡಿಸಲಾಯಿತು.

ಮನೋಹರವಾಗಿ ನರ್ತಿಸಿ, ಅಭಿನಯಿಸಿದ ಎಲ್ಲ ಕಲಾವಿದೆಯರೂ, ಪ್ರತಿ ವಿವರಗಳನ್ನೂ ಸೂಕ್ಷ್ಮವಾಗಿ ಚಿತ್ರಿಸಿ, ನೃತ್ತ-ನೃತ್ಯಗಳಿಂದ ಪರಿಣಾಮ ಮೂಡಿಸಿದರು. ಅರ್ಜುನ ಮತ್ಸ್ಯಯಂತ್ರ ಭೇದಿಸುವ, ದುರ್ಯೋಧನ ಜಾರಿಬೀಳುವ ಪ್ರಸಂಗ, ದ್ಯೂತವಾಡುವ ಸನ್ನಿವೇಶಗಳೊಂದಿಗೆ ಕುರುಕ್ಷೇತ್ರದ ಯುದ್ಧದ ವಾತಾವರಣವನ್ನು ತಮ್ಮ ನೃತ್ಯಾಭಿನಯಗಳಿಂದ ನಿರ್ಮಿಸಿದ ಪ್ರತಿಭಾವಂತ ಕಲಾವಿದೆಯರ ಕಲಾನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು.

Related posts

ಮನೋಜ್ಞ ಅಭಿನಯದ ‘ಅನನ್ಯ’ ನೃತ್ಯ

YK Sandhya Sharma

ಭರವಸೆ ಚೆಲ್ಲುವ ನೃತ್ಯ ಮಂದಾರ

YK Sandhya Sharma

ಚಿತ್ತಾಕರ್ಷಕ ನೃತ್ತ ವೈಭವ-ಮನಮೋಹಕ ಅಭಿನಯ

YK Sandhya Sharma

Leave a Comment

This site uses Akismet to reduce spam. Learn how your comment data is processed.