Image default
Dance Reviews

ರಸಾನುಭವ ನೀಡಿದ ಕಥಕ್ ರಂಗಾವಳಿ

ಪ್ರಖ್ಯಾತ ಕಥಕ್ ನೃತ್ಯಗಾರ್ತಿ ಸಂಪದಾ ಪಿಳ್ಳೈ ತಮ್ಮ ‘’ರಿದ್ಧಂ ’’ ಕಥಕ್ ನೃತ್ಯಶಾಲೆ ಹಾಗೂ ಪುಣೆಯ ‘ರುಜುತಾ ಸೋಮನ್ ಕಲ್ಚುರಲ್ ಅಕಾಡೆಮಿ’ಯ ಸಹಯೋಗದೊಂದಿಗೆ ಇತ್ತೀಚಿಗೆ ಪ್ರಸ್ತುತಪಡಿಸಿದ ರಂಗುರಂಗಾದ ‘’ಕಥಕ್ ರಂಗ್‘’ ಸೊಬಗಿನ ನೃತ್ಯಪ್ರದರ್ಶನ  ಮಲ್ಲೇಶ್ವರದ ‘’ಸೇವಾಸದನ’’ದಲ್ಲಿ ನಗರದ ಕಲಾರಸಿಕರ ಕಣ್ಮನ ತಣಿಸಿತು. 

ಈ ಇಬ್ಬರು ಕಲಾವಿದೆಯರೂ ಪುಣೆಯ ಕಥಕ್ ದಿಗ್ಗಜ ಗುರು ಪಂಡಿತ್ ಡಾ. ರೋಹಿಣಿ ಭಾಟೆಯವರ ಹಿರಿಯ ಶಿಷ್ಯರು. ದೇಶ-ವಿದೇಶಗಳಲ್ಲಿ ಅಸಂಖ್ಯಾತ ನೃತ್ಯಪ್ರದರ್ಶನಗಳನ್ನು ನೀಡಿ ಬಹು ಮಾನ್ಯತೆ ಪಡೆದ ಕಲಾವಿದೆಯರಿವರು. ಪ್ರತಿಭಾವಂತ ಈ ಯುಗಳ ನರ್ತಕಿಯರು, ತಮ್ಮ ಏಕವ್ಯಕ್ತಿ ಹಾಗೂ ಸಮೂಹ ಕಥಕ್ ನೃತ್ಯ ವೈವಿಧ್ಯದಲ್ಲಿ ಸುಮನೋಹರ ಕಥಕ್ ನೃತ್ಯದ ವಿವಿಧ ಆಯಾಮಗಳನ್ನು  ಪ್ರದರ್ಶಿಸಿದರು.

ಇವರೊಂದಿಗೆ ರುಜುತಾ ಸೋಮನ್ ಅವರ ಶಿಷ್ಯರಾದ ಶಿವಾಂಗಿ ಮಂಡ್ಕೆ ಮತ್ತು ಸನಿಕಾ ಡಿಯೋಧರ್ ಕೂಡ ದಿ. ರೋಹಿಣಿ ಭಾಟೆಯವರ ಹಲವು ರಚನೆ ಮತ್ತು ನೃತ್ಯಸಂಯೋಜನೆಯ ಮನೋಹರ ಕೃತಿಗಳನ್ನು ಪ್ರಸ್ತುತಪಡಿಸಿ ಮನೋಲ್ಲಾಸ ನೀಡಿದರು.

ಶುಭಾರಂಭದಲ್ಲಿ ‘ಗಣೇಶಸ್ತುತಿ’ (ಹಂಸಧ್ವನಿರಾಗ) ದ್ರುಪದ್ ರೂಪದಲ್ಲಿದ್ದು ಇದನ್ನು ನಾಲ್ಕೂಜನ ಕಲಾವಿದೆಯರು ಸಾಮರಸ್ಯದ ಆಂಗಿಕಗಳಿಂದ, ಮನೋಹರ ಹೆಜ್ಜೆ-ಗೆಜ್ಜೆಗಳ ಝಣತ್ಕಾರದಿಂದ, ಮೋಹಕ ನಗೆ-ನೋಟಗಳಿಂದ ಮನಸೂರೆಗೊಂಡರು. ‘ಗಣನಾಥ ಗೌರಿಸುತ’ನ ಚಿದಾನಂದರೂಪವನ್ನು ನವಿರಾದ ಹಸ್ತಚಲನೆಗಳು, ಚಕ್ಕರುಗಳ ಮೋಡಿಯಿಂದ ಸುಂದರವಿನ್ಯಾಸದಲ್ಲಿ ಗಣಪತಿಯ ಭಂಗಿ ಚಿತ್ರಿಸಿದರು.

ಅನಂತರ ನಾಲ್ಕೂಜನ ಪ್ರಸ್ತುತಪಡಿಸಿದ ‘ಮಧ್ಯ ದ್ರುತ್ ಜಪ್ತಾಳ್ ’ಕಥಕ್ಕಿನ ತಾಂತ್ರಿಕಾಂಶಗಳಿಂದ ಕೂಡಿತ್ತು.  ರೇಖೀಯ ಚಲನೆಗಳು, ದೇಹದ ಹರಿವಿನೊಂದಿಗೆ ಶಬ್ದ ಏರಿಳಿತದ ಸುಶ್ರಾವ್ಯದ ಆಯಾಮಗಳು, ಸಂಪೂರ್ಣ ದೃಶ್ಯಾನುಭವವನ್ನು ದಕ್ಕಿಸಿತು. ಲಯವಾದ್ಯಗಳ ವಿನ್ಯಾಸಕ್ಕನುಗುಣವಾಗಿ ಆನಂದಲಹರಿಯ ಕಲಾತ್ಮಕ ವಿನ್ಯಾಸದ ಚಲನೆಗಳನ್ನು ಸೃಷ್ಟಿಸಿದವು. ಕಾರ್ಮೋಡ ತುಂಬಿದ ಆಗಸದಿಂದ ಮಳೆಹನಿಗಳು ಟಪ ಟಪನೆ ನೆಲಕ್ಕುದುರಿದಂತೆ ಕಲಾವಿದೆಯರ ಗೆಜ್ಜೆಗಳ ಸಪ್ಪುಳ ರಿಂಗಣಗುಣಿಸಿತು. ಎದೆಮಟ್ಟ ತುಂಬಿಬಂದ ನೀರನ್ನ ಕಂಡು ಜನ ಆತಂಕಗೊಂಡಾಗ, ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನಗಿರಿಯನ್ನು ಎತ್ತಿ ಅವರನ್ನು ಕಾಪಾಡಿದ ಪ್ರಸಂಗದ ನಿರೂಪಣೆಯಲ್ಲಿ ಸಾತ್ವಿಕಾಭಿನಯದ ಸೊಗಸು ಮಿಂಚಿತು.  ಸೂಕ್ಷ್ಮಾಭಿವ್ಯಕ್ತಿಯ ತತ್ಕಾರಗಳ ಝೇಂಕಾರ, ಕಿವಿದುಂಬುವ ಕಿಂಕಿಣಿಯ ಸ್ವರಮಾಧುರ್ಯ, ತಾಳ ಸೌಂದರ್ಯವನ್ನು ಧ್ವನಿಸಿತು. ಲಂಗದ ಚುಂಗುಗಳನ್ನು ಹಿಡಿದು ಸಾಮರಸ್ಯದಲ್ಲಿ ಮೂಡಿಸಿದ ವಿವಿಧ ಆಯಾಮಗಳ ‘ತತ್ಕಾರ್’ ಗಳ ಝಣತ್ಕಾರ, ರಸಿಕರ ಮೆಚ್ಚುಗೆಯ ಕರತಾಡನ ಪಡೆಯಿತು. ಒಂದೇ ಎರಕದ ಗೊಂಬೆಗಳಂತೆ, ಲಯಬದ್ಧವಾಗಿ ಚಪ್ಪಾಳೆ ತಟ್ಟುತ್ತ, ತುಕುಡಾಗಳನ್ನು ಪ್ರಸ್ತುತಪಡಿಸಿದ್ದು ರಸಾನುಭವ ನೀಡಿತು.  

ಮುಂದೆ-ಮೂಡಿಬಂದ ರಸಖಾನ್ ರಚನೆಯ ಕೀರ್ತನೆ ಸಂಕ್ಷಿಪ್ತವಾಗಿತ್ತು. ಗೋಕುಲದ ಗೋಪಿಕೆಯರನ್ನು ಕೃಷ್ಣ ತನ್ನ ತುಂಟಾಟಗಳಿಂದ ಕಾಡಿದ ಪ್ರಸಂಗಗಳು ಯುಗಳನೃತ್ಯದಲ್ಲಿ ರಮ್ಯವಾಗಿ ಅನಾವರಣಗೊಂಡವು. ಸಂಪದಾ ಪಿಳ್ಳೈ ತನ್ಮಯತೆಯಿಂದ ಅಭಿನಯಿಸಿದ ಬಿಂದಾದಿನ್ ಮಹಾರಾಜ್ ರಚನೆಯ ‘ಕೃಷ್ಣ ಭಜನ್’- ಕೃಷ್ಣನ ವಿವಿಧ ಸಾಹಸಗಾಥೆಗಳನ್ನು ನಿರೂಪಿಸಿದ ಭಕ್ತಿಸಿಂಚನ ಮನೋಜ್ಞವಾಗಿ ಮೂಡಿಬಂತು.

ರುಜುತಾ ಸೋಮನ್ ಮನೋಹರವಾಗಿ ಪ್ರಸ್ತುತಪಡಿಸಿದ ‘ಪೂತನ ವಧ’- ಗತಭಾವ್ ನಲ್ಲಿ ಅಮೋಘವಾಗಿ ಅಭಿನಯಿಸಲ್ಪಟ್ಟಿತು. ಸಾಹಿತ್ಯವಿಲ್ಲದೆ, ಕೇವಲ ದೇಹಭಾಷೆಯ ಮೂಲಕ ಸಮರ್ಥವಾಗಿ ರುಜುತಾ, ಅಧಮ ನಾಯಿಕಾ ಪೂತನಿ, ಬಾಲಕೃಷ್ಣನನ್ನು ಸಂಹರಿಸಲು ಪ್ರಯತ್ನಿಸಿ, ತಾನೇ ಮೃತಳಾಗುವ ಸ್ವಾರಸ್ಯಕರ ಪ್ರಸಂಗವನ್ನು ತಮ್ಮ ವಿಶಿಷ್ಟ ದೈಹಿಕ ಚಲನೆ, ಸಂಕೇತ, ಹಸ್ತ ಮುದ್ರೆಗಳು ಮತ್ತು ಮುಖಾಭಿವ್ಯಕ್ತಿಯಿಂದ ಸೊಗಸಾಗಿ ಅಭಿನಯಿಸಿದರು.

ಅನಂತರ-ಒಂದೇರಾಗದ  ನಾಲ್ಕುವಿಧದ ಶಾಸ್ತ್ರೀಯ ಭಿನ್ನರೂಪಗಳಾದ ಖಯಾಲ್, ತರಾನಾ, ಸರ್ಗಂ ಮತ್ತು ತ್ರಿಪತ್ ಗಳಿಂದ ಕೂಡಿದ ‘ಬಂದೀಶ್’ ಮನಮುಟ್ಟುವ ಶೈಲಿಯ ನೃತ್ಯಬಂಧ. ‘ಮೇಘರಾಗದಲ್ಲಿ ಶ್ರೀ ಚೈತನ್ಯ ಕುಂಟೆ ರಚಿಸಿದ ಈ ‘’ಚತುರಂಗ’’.  ನಾಲ್ಕುಬಂಧಗಳನ್ನು ಒಂದೇ ನೇಯ್ಗೆಯಲ್ಲಿ ಹೆಣೆದ ಕಾಮನಬಿಲ್ಲಿನ ಈ ರಮ್ಯಕೃತಿಗೆ ನೃತ್ಯಸಂಯೋಜಿಸಿದವರು ರುಜುತಾ. ಕಾರ್ಮೋಡ ಕವಿದ ಮಳೆಗಾಲದ ದಿನದಲ್ಲಿ ನಾಯಿಕೆ ತನ್ನ ಪ್ರೇಮಿಯ ಸಮಾಗಮಕ್ಕಾಗಿ ಕಾಯುತ್ತ ಅಗಲಿಕೆಯ ನೆನಪಿನಲ್ಲಿ ನೆನೆಯುತ್ತಿದ್ದಾಳೆ. ವರ್ಷಾಗಮನ ಕಂಡು ಸಂಭ್ರಮದಿಂದ ನೃತ್ತಗಳಲ್ಲಿ ನರ್ತಿಸುತ್ತಾಳೆ. ಕೊರಳು ಕೊಂಕಿಸಿ ಗರಿಬಿಚ್ಚಿ ನವಿಲ ನಡೆಯಲ್ಲಿ ರಂಗದ ತುಂಬಾ ಚಕ್ಕರಗಳನ್ನು ಹಾಕುತ್ತ, ತತ್ಕಾರಗಳಲ್ಲಿ ಗೆಜ್ಜೆದನಿಗೈಯುತ್ತ ಸಡಗರಿಸುತ್ತಾಳೆ. ತನ್ನ ಮುರಳಿಗಾನದಿಂದ ಮರುಳು ಮಾಡಿದ ಕೃಷ್ಣನ ಗಾನಸುಧೆಗೆ ಆಕರ್ಷಿತರಾಗಿ ಮೈಮರೆತ ದನ-ಕರು, ಗೋಪಿಕೆಯರ ತನ್ಮಯತೆಯನ್ನು ಸೆರೆಹಿಡಿದ ರುಜುತಾ ಅವರ ‘’ಕೃಷ್ಣ ಭಜನ್’ನ ದೈವೀಕ ಅಭಿನಯ ಮನದುಂಬಿತು. ಅಂತ್ಯದಲ್ಲಿ ತೀನ್ ತಾಳದ ‘ತರಾನಾ’ ಆಹ್ಲಾದಕರ ಚಕ್ಕರುಗಳು, ತತ್ಕಾರಗಳು, ಮನಮೋಹಕ ಭಂಗಿಗಳು ಅನನ್ಯವಾಗಿದ್ದವು.

Related posts

ಮಹತಿಯ ಆಹ್ಲಾದಕರ ನರ್ತನಲಾಸ್ಯ- ಸುಂದರಾಭಿನಯ

YK Sandhya Sharma

ನಿಖಿತಳ ಚೈತನ್ಯಪೂರ್ಣ ಸುಮನೋಹರ ನೃತ್ಯ

YK Sandhya Sharma

ಹೃನ್ಮನ ತಣಿಸಿದ ಮನೋಹರ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.