Image default
Dance Reviews

ಪುರಂದರ ಪಲ್ಲವಿಗಳ ವರ್ಣರಂಜಿತ ನೃತ್ಯಪ್ರಯೋಗ

ಯಾವುದೇ ಕಲೆಯಾಗಲಿ ಯಾಂತ್ರಿಕತೆಯಿಂದ ನಿಂತ ನೀರಾಗಬಾರದು. ಬೆಳವಣಿಗೆಯೇ ಜೀವಂತಿಕೆಯ ಸಂಕೇತ. ಪ್ರಯೋಗಶೀಲತೆ ಸೃಜನಾತ್ಮಕತೆಯ ಪ್ರತಿಬಿಂಬ. ಇಂಥ ಒಂದು ಸ್ತುತ್ಯಾರ್ಹ ಪ್ರಯತ್ನ-ಉತ್ತಮ ಪ್ರಯೋಗ `ಅಭಿವ್ಯಕ್ತಿ ಡಾನ್ಸ್ ಸೆಂಟರ್’ನ ಪ್ರತಿಭಾವಂತ ನಾಟ್ಯಗುರು ಎಸ್. ರಘುನಂದನ್ ಅವರ ಹೊಸ ಕೊಡುಗೆ.

ಇತ್ತೀಚಿಗೆ `ಸೇವಾಸದನ’ದಲ್ಲಿ ನಡೆದ `ಅಭಿವ್ಯಕ್ತಿ’ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಿಪಡಿಸಿದ ಹೊಸ ಹೊಳಹಿನ ನೃತ್ಯರೂಪಕ `ಪುರಂದರ ಪಲ್ಲವಿ’ ರಘುನಂದನ್ ಅವರ ಕನಸಿನ ಕೂಸು. ಸದಾ ನೃತ್ಯದ ಹೊಸ ಆಯಾಮಗಳ ಕುರಿತು ಚಿಂತಿಸುವ ಇವರು ದಾಸಶ್ರೇಷ್ಠ ಪುರಂದರ ದಾಸರ ಐವತ್ತು ಕೀರ್ತನೆಗಳ ಪಲ್ಲವಿಯನ್ನು ಆರಿಸಿಕೊಂಡು ಭಾಗವತದ ಸುಂದರ  ಕಥೆಯೊಂದನ್ನು ಹೆಣೆದು ರಸವತ್ತಾಗಿ ಪ್ರಸ್ತುತಿಪಡಿಸಿದ್ದು ಸ್ತುತ್ಯಾರ್ಹ.

ಪುರಂದರದಾಸರು ಬಿಡಿ ಬಿಡಿಯಾಗಿ ರಚಿಸಿದ ಗೀತೆಗಳ ಕೇಂದ್ರ ವ್ಯಕ್ತಿ, ವರ್ಣರಂಜಿತ ವ್ಯಕ್ತಿತ್ವದ ಆಕರ್ಷಕ ಕೃಷ್ಣನೇ. ಅಂತರಸಂಬಂಧವಿರುವ ಇವುಗಳಲ್ಲಿ ಒಂದು ಸಾವಯವ ಎಳೆಯಿದೆ. ಆ ಒಂದು ದಾರದಲ್ಲಿ ಸೃಜನಶೀಲ ಸಂಯೋಜಕ ರಘುನಂದನ್ ಸುಂದರ ಪುಷ್ಪಗಳನ್ನು ಅಯ್ದಾಯ್ದು ಮನೋಹರಮಾಲೆಯೊಂದನ್ನು  ಪೋಣಿಸಿದ್ದಾರೆ. ಈ ಒಂದು ಪರಿಕಲ್ಪನೆ ನಿಜಕ್ಕೂ ಹೊಸದು. ವಿನೂತನವಾಗಿ ಮೂಡಿಬಂದ ಈ ನೃತ್ಯರೂಪಕ ಕಲಾರಸಿಕರ ಮನಸ್ಸನ್ನು ಆವರಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಕೃಷ್ಣನ ಬಾಲಲೀಲೆಗಳನ್ನು ಕಣ್ಮುಂದೆ ಕಟ್ಟಿಕೊಡುವ ಐವತ್ತು ಅನುಪಮ ಗೀತೆಗಳ ಮೂಲರಾಗಗಳನ್ನು ಆದಷ್ಟೂ ಬಳಸಿದ್ದರೂ ಕೆಲವೆಡೆ ಹೆಚ್ಚಿನ ಪರಿಣಾಮಕ್ಕಾಗಿ (ಸಂಗೀತ ಸಂಯೋಜಕಿ ಭಾರತಿ ವೇಣುಗೋಪಾಲ್ ) ನಾಟಕೀಯತೆಗೆ ಹೊಂದುವಂತೆ  ಎಪ್ಪತ್ತು ರಾಗಗಳನ್ನು ಅಳವಡಿಸಿ ಸೂಕ್ತವಾಗಿ ಬದಲಿಸಿಕೊಳ್ಳಲಾಗಿದೆ. ಇಲ್ಲಿ ದೃಶ್ಯಾನಂದವೂ ಉಂಟು, ಕರ್ಣಾನಂದವೂ ಉಂಟು. ಬಹುತೇಕ ಭರತನಾಟ್ಯದ ಶೈಲಿಯಲ್ಲಿಯೇ ರೂಪಕ ಸಾಗಿದರೂ ಅಲ್ಲಲ್ಲಿ ಕರಣಗಳ ಚಲನೆಯಲ್ಲಿ ಜಾನಪದ ನೃತ್ಯದ ಸೊಗಡೂ ಮಿನುಗಿದೆ. ಇಪ್ಪತ್ತೆರಡು ಜನ ನೃತ್ಯಕಲಾವಿದೆಯರ ಪರಿಶ್ರಮ ಎದ್ದುಕಾಣುತ್ತಿತ್ತು. ಸೊಗಸಾದ ಸಂಗೀತ ಸಹಕಾರ, ರಘುನಂದನ್ ನಿರ್ದೇಶಿತ ನೃತ್ಯ ಸಂಯೋಜನೆ ಯಶಸ್ಸು ಕಂಡಿತ್ತು. ಹಿನ್ನಲೆಯ ಪರದೆಯಮೇಲೆ ಮೂಡಿಬಂದ ಪೂರಕ `ಸ್ಲೈಡ್’ ‘ ಗಳು ಸಹಜ ವಾತಾವರಣವನ್ನು ನಿರ್ಮಿಸಲು ಸಹಾಯಕವಾಗಿದ್ದವು. ಕೃಷ್ಣನ ತುಂಟಾಟಗಳನ್ನು ಐದು ಅಂಕಗಳಲ್ಲಿ ತೋರಿಸಲಾಗಿತ್ತು.

ಗೋಕುಲ ಬಾಲಕೃಷ್ಣ- ಗೋಪಬಾಲನ ಸುತ್ತುವರಿದ ಗೋಪಿಯರು ಅವನ ಬಗ್ಗೆ ತೋರಿಸುವ ವಾತ್ಸಲ್ಯದ ಪರಿ ವಿಧವಿಧ. `ತೂಗಿರೇ ರಂಗನ ತೂಗಿರೇ ಕೃಷ್ಣನ ‘ ಎಂದು ರಾತ್ರಿ ತೊಟ್ಟಿಲಿಗೆ ಹಾಕಿ ತೂಗಿದವರು ಬೆಳಗ್ಗೆ ಅವನನ್ನು `ಏಳಯ್ಯ ಬೆಳಗಾಯಿತು ಕೃಷ್ಣಯ್ಯ’ ಎಂದು ಪ್ರೀತಿಯಿಂದ ರಮಿಸಿ, ಎಬ್ಬಿಸಿ ಅಭ್ಯಂಗನ ಮಾಡಿಸುವ ಪರಿಯೇನು? ಚಂದನ ಲೇಪಿಸಿ ಸಿಂಗರಿಸುವ, ವಸ್ತ್ರ ಉಡಿಸುವ ಮುದವೇನು? ನವರಸ ಖಾದ್ಯವಿತ್ತು ಉಪಚರಿಸುವ ಮುಚ್ಛಟೆಯೇನು? ಇಡೀ ವಾತಾವರಣ ಉಲ್ಲಸಿತವಾಗುತ್ತದೆ.

ನವನೀತ ಚೋರ ಕೃಷ್ಣ– ಕಡೆಗೋಲು ಮುಚ್ಚಿಟ್ಟು ತಾಯಿಯನ್ನು ಗೋಳುಹೊಯ್ದುಕೊಳ್ಳುವ ತುಂಟನನ್ನು `ಕಡೆಗೋಲ ತಾರೆನ್ನ ಚಿನ್ನವೇ…’ ಎಂದು ಯಶೋದೆ ಪುಸಲಾಯಿಸುವ ರಮ್ಯದೃಶ್ಯದೊಂದಿಗೆ ಆರಂಭವಾಗುವ ಸನ್ನಿವೇಶ, ಉಳಿದ ಗೋಪಿಯರು ಬಂದು ಅವನು ಬೆಣ್ಣೆ ಕದ್ದ ಬಗ್ಗೆ, ಮಡಕೆಗಳನ್ನು ಒಡೆದ ಬಗ್ಗೆ ದೂರುಗಳನ್ನು ಹೇಳಿದರೂ ನಂಬಳು ಆ ತಾಯಿ. ಎಲ್ಲ ಕ್ರಿಯೆ-ಚಲನವಲನಗಳೂ ಹಾಡಿನ ಮೂಲಕವೇ ಸಾಗುವ ಕಥಾತಂತ್ರ ಬಹು ನೈಜವಾಗಿತ್ತು. ಯಾವುದೂ ತುರುಕಿದಂತಿರಲಿಲ್ಲ.  ಯಶೋದೆಯ ಮೊಗದಲ್ಲಿ ಭಾವಪೂರ್ಣ ವಾತ್ಸಲ್ಯ ಹರಿದರೆ, ಗೋಪಿಕೆಯರ ಆಂಗಿಕಾಭಿನಯದಲ್ಲಿ ಲವಲವಿಕೆಯ ಚೆಲುವಿತ್ತು. ಪುಟ್ಟಕೃಷ್ಣನ ಮೊಗದಲ್ಲಿ ಸ್ನಿಗ್ಧನಗು ಮೊದಲಿಂದ ಕಡೆಯವರೆಗೂ ಮಾಸದೆ ನೋಡುಗರಲ್ಲಿ ಪ್ರೀತಿ ಜಿನುಗಿಸಿತ್ತು. ಜೊತೆಗಾರರೊಡನೆ ಸೇರಿ ಬೆಣ್ಣೆ ಕದಿಯುವ ಚೋರ, ಗೋಪಿಯರ ಸೆರಗುಗಳನ್ನು ಗಂಟುಹಾಕಿ ತಮಾಷೆ ಮಾಡಿ ಮೈಮರೆಸುವ ಅವನನ್ನು `ಸೆರಗ ಬಿಡೋ ಕೃಷ್ಣಯ್ಯ…’ ಎಂದು ಬೇಡುತ್ತಾ,“ಎಂಥವನೇ ಗೋಪಿ ನಿನ್ನ ಮಗ’’ ಎಂದು ಯಶೋದೆಯಲ್ಲಿ ದೂರುವರು. ಅಳತೊಡಗಿದವನನ್ನು `ಅಳುವುದೆತಕೋ ರಂಗ..ಅತ್ತರಂಜಿಪ ಗುಮ್ಮ ,,,’ ಎಂದು ಸಾಂತ್ವನ ಹೇಳುವರು.

ಕಾಳಿಂಗ ಮರ್ದನ ಕೃಷ್ಣ– ಗೋಪಾಲಕ ಗೆಳೆಯರೊಡನೆ ಕಾಳಿಂದಿಮಡುವಿನಲ್ಲಿ ಈಜುವಾಗ, ಜನರಿಗೆ ದುಃಸ್ವಪ್ನವಾಗಿದ್ದ ಐದುಹೆಡೆಯ ಕಾಳಿಂಗನ ಜೊತೆ ಹೋರಾಡಿ ಮಣಿಸಿ, ಅದರ ಹೆಡೆಯಮೇಲೆ ನರ್ತಿಸಿದ ಅವನನ್ನು `ಆಡಿದನೋ ರಂಗ ಅದ್ಭುತದಿಂದ ಲಿ ಕಾಳಿಂಗನ ಫಣೆಯಲಿ…’ ಎಂದು ಕೊಂಡಾಡುತ್ತಾರೆ. ಸರ್ಪದ ಜೊತೆ ಹೋರಾಡಿದ ದೃಶ್ಯ ನಿಜಕ್ಕೂ ಅದ್ಭುತವಾಗಿತ್ತು. ಕೆರಳಿದಸರ್ಪ ಹಾಕಿದ ಮಂಡಿ ಅಡವುಗಳು, ವೀರಾವೇಶದ ಅಭಿನಯ-ಆಂಗಿಕಗಳು ಪರಿಣಾಮಕಾರಿಯಾಗಿದ್ದವು. ಪೂರಕವಾಗಿ ಬಳಸಿದ ಬೆಳಕಿನ ಚಮತ್ಕಾರವೂ ಸೊಗಸಾಗಿತ್ತು. `ಹರಿ ಕುಣಿದ ನಮ್ಮ ಹರಿ ಕುಣಿದ..’ ಎಂಬ ಸಂತಸದ ಲಹರಿ ಹೊಮ್ಮಿತ್ತು.

ಯಶೋದಾಪ್ರಿಯ ಕೃಷ್ಣ– ಮಗ ಹೊರಗೆ ಸಾಹಸ ಮಾಡುತ್ತಿದ್ದರೆ, ತಾಯಿ ಮಗನನ್ನು ಕಾಣದೆ `ಅಮ್ಮಾ, ನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಂಡೀರೆನಮ್ಮ…’ ಎಂದು ಹುಡುಕುತ್ತಿದ್ದಾಳೆ. ಮಗನ ಸಾಹಸಕಥೆ ಕೇಳಿ ಗಾಬರಿಯಾದ ತಾಯಿ- `ಮನೆಯೊಳಗಾಡೋ ಕೃಷ್ಣಯ್ಯ , ನೆರೆಮನೆಗಳಿಗೇಕೆ ಹೋಗುವೆಯೋ’ ಎಂದು ಬೇಡಿಕೊಳ್ಳುತ್ತಾಳೆ.ಕಡೆಗೆ `ಬೂಚಿ ಬಂದಿದೆ ನೋಡೋ’ ಎಂದು ಹೆದರಿಸುವ ತಾಯಿ ಸಾಮ,ದಾನ,ಭೇದ ಮತ್ತು ದಂಡೋಪಾಯಗಳನ್ನು ಬಳಸುತ್ತಾಳೆ. `ಗುಮ್ಮನ ಕರೆಯದಿರೆ ಅಮ್ಮಯ್ಯ…’ ಎಂದು ಕೃಷ್ಣ  ಭಯ ನಟಿಸುತ್ತಾನೆ.

ಗೋಪಿಕಾಲೋಲ ಕೃಷ್ಣ– ಶೃಂಗಾರರಸ ಪ್ರಧಾನವಾದ ಈ ಸನ್ನಿವೇಶ ರಸವತ್ತಾಗಿ ಮೂಡಿಬಂತು. ಮನ್ಮಥರೂಪಿ ಕೃಷ್ಣನ ಅಂದಚೆಂದಕ್ಕೆ ಮರುಳಾದ ಗೋಪಿಯರೊಡನಾಟದ ಅವನ ಲೀಲಾವಿನೋದ ಒಂದೇ ಎರಡೇ? `ಕೊಳನೂದುವ ಚದುರನ್ಯಾರೆ ಪೇಳಮ್ಮಯ್ಯ…’ ಎಂದು ಅವನ ಸಂಗ ಬಯಸಿ ಹಾತೊರೆವ ಗೋಪಿಯರು ಸಂತಸದ ಹೆಜ್ಜೆಗಳಲ್ಲಿ ನರ್ತಿಸುವರು. ಗೋಕುಲದಲ್ಲಿ ರಾಸಲೀಲೆಗೆ ಅಡೆತಡೆಯೇ?ಯುವಕೃಷ್ಣ ಚೆಂದದಲಿ ಹೆಜ್ಜೆಹಾಕುತ್ತ ಎಲ್ಲರ ಮನಸೂರೆಗೊಳ್ಳುವನು. ಪಿಚಕಾರಿಗಳಲ್ಲಿ ಪರಸ್ಪರ ಬಣ್ಣಕಾರಂಜಿ ಪುಟಿದೇಳುತ್ತದೆ. ಜಾನಪದ ಲಯದಲ್ಲಿನ  ದಾಂಡ್ಯದ ರಸಘಟ್ಟವೂ ರೂಪಕದ ಆಕರ್ಷಣೆಯಾಗಿತ್ತು. `ಬಂದನೇನೆ ರಂಗ ಬಂದನೇನೆ ?’ ಎಂದು ಹಂಬಲಿಸುವ ಚೆಲುವಿನ ಪ್ರಣಯದಾಟ ರಸಿಕರನ್ನು ರಂಜಿಸಿತು.

Related posts

ವಿಸ್ಮಯ ಸೃಷ್ಟಿಸಿದ ‘ಅರಣ್ಯೇ ನಿನಗೆ ಶರಣು’ ಹೃದಯಸ್ಪರ್ಶೀ ನೃತ್ಯರೂಪಕ

YK Sandhya Sharma

ಭರವಸೆ ಚೆಲ್ಲುವ ನೃತ್ಯ ಮಂದಾರ

YK Sandhya Sharma

ಆಪ್ಯಾಯಮಾನ ಮೋಹಿನಿಯಾಟ್ಟಂ -ಕಥಕ್ ಸಮ್ಮಿಲನ

YK Sandhya Sharma

Leave a Comment

This site uses Akismet to reduce spam. Learn how your comment data is processed.