Image default
Short Stories

ಕೂಸು-ಸ್ಕೂಲು

            ಕಮಲೂ ಮತ್ತು ಶ್ರೀಕಂಠೂ ಇಬ್ಬರೂ ಜಗಳ-ವಾಗ್ವಾದದ ಶುರು ಮಾಡಿಬಿಟ್ರೂ ಅಂದರೆ ಅದು ಯಾವಾಗ್ಲೂ ಹಾಗೇನೇ …ಚು….ಯಿಂಗ್‍ಗಮ್‍ನಂತೆ ಉದ್ದಕ್ಕೆ ರಬ್ಬರಿನ ಹಾಗೆ ಎಳೆದಷ್ಟೂ ಲಂಬಿಸ್ತಾ ಲಂಗುಲಗಾಮಿಲ್ಲದೆ ಎತ್ತೆತ್ಲಾಗೋ ಎಳ್ಕೊಂಡು ಹೋಗ್ಬಿಡ್ತಿತ್ತು ವಿಷ್ಯ. ಯಾತಕ್ಕೆ ಜಗಳ ಶುರುವಾಯ್ತು ಅನ್ನೋದೇ ಮರ್ತು ಹೋಗ್ತಿತ್ತು ಇಬ್ಬರಿಗೂ.

            ಅವತ್ತು ಆಗಿದ್ದೂ ಹಾಗೇನೇ.

            ಬೆಳಬೆಳಗ್ಗೆಯೇ ರಾಂಗಾಗಿದ್ಳು ಕಮಲೂ. ಹಿಂದಿನ ರಾತ್ರಿಯಿಂದ ಸಣ್ಣಗೆ ಶುರುವಾಗಿದ್ದ ಕೋಲ್ಡ್ ವಾರ್ ಈಗ ರಣಕಹಳೆಯೊಂದಿಗೆ ಊರ್ಧ್ವಮುಖಿಯಾಗಿತ್ತು. ಅಡುಗೆಯ ಮನೆಯೊಳಗಿಂದ ನಡುಮನೆಯವರೆಗೂ ಪಾತ್ರೆಗಳು ಪಾಕ್ ಗಡಿಯಲ್ಲಿ ಬಾಂಬ್ ಸಿಡಿದಂತೆ ದಬದಬನೆ ನೆಲಕ್ಕೆ ಅಪ್ಪಳಿಸುತ್ತಿದ್ದವು!!

            ಶ್ರೀಕಂಠೂ ಬೆಚ್ಚಿಬಿದ್ದ!!…ಬೆಳಗಿನ ಫ್ರೆಷ್ ಗಾಳಿಯಲ್ಲಿ ಹಾಯಾಗಿ ವಾಕಿಂಗ್ ಹೋಗೋ ಪ್ರಶಾಂತವಾದ ಗಳಿಗೆಯಲ್ಲೇ ಕಮಲೂ ನೋಟಿಸ್ ಕೊಡದೆ ಈ ಬಗೆ ಧಿಡೀರ್ ಕಾಳಗ ಸಾರಬೇಕೇ?!!

            ಬೆಳಬೆಳಗ್ಗೆಯೇ ಅವಳ ಮೂಡ್ ಕೆಡಿಸಿದ್ದರಲ್ಲಿ ತನ್ನ ಕಿರಿಕ್ ಇದೆಯೆಂಬ ನಿಜ ಅರಿತ ಶ್ರೀಕಂಠೂ ತನ್ನ ಕೈಲಿದ್ದ ದಿನಪತ್ರಿಕೇನ ಉಂಡೆ ಮಾಡಿ ಮೂಲೆಗೆ ತೂರಿದ….ತನಗೇಕೀ ಹಾಳು ದುರಭ್ಯಾಸ ಅಂಟುಕೊಂಡು ಬಂದಿದೆಯೋ….ಪೇಪರಿನಲ್ಲಿ ಬರೋ ಸುದ್ದಿಗಳನ್ನೆಲ್ಲ ಮಂತ್ರದಂತೆ, ಅಡುಗೇಮನೆಯಲ್ಲಿದ್ದ ಅವಳ ಕಿವಿ ಕಚ್ಚುವಂತೆ ಜೋರಾಗಿ ಪಠಿಸುವ ಖಯಾಲಿಯೋ??!…ತನ್ನನ್ನೇ ತಾನು ದೂರ್ವಾಸನಂತೆ ಸ್ವಶಪಿಸಿಕೊಂಡ….ಛೇ, ಮರೆತೇ ಹೋಗಿತ್ತು, ರಾತ್ರಿಯ ರಾದ್ಧಾಂತ.

            ಕೆಲಸದ ನಿಂಗಿಯ ತಾಪತ್ರಯಗಳ ವಿಚಾರದಿಂದ ಹಿಡಿದು ದೇಶದ ಸ್ವಚ್ಛತಾ ಮಿಷನ್ ಮೋದಿಯ ನವನವೀನ ಯೋಜನೆಗಳ ಬಗ್ಗೆ ಸೀರಿಯಸ್ ಆಗಿ ಚರ್ಚಿಸುತ್ತ ಕಡೆಗೆ ಕದನಕ್ಕಿಟ್ಟುಕೊಂಡು ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ದನಿಯನ್ನು ತಾರಕ್ಕಕ್ಕೇರಿಸುವ ಪರಿಪಾಠ ತಪ್ಪಿರಲಿಲ್ಲ. ನಿನ್ನೆ ರಾತ್ರಿಯೂ ಅಗಿದ್ದಷ್ಟೇ…ದರಿದ್ರ ಪೇಪರ್ ಸುದ್ದಿಯಿಂದಲೇ ….ಎಲ್ಲ ಕಡೆ ದುಬಾರಿ ಸ್ಕೂಲ್ ಡೊನೇಷನ್ ಹಾವಳಿ ಬಗ್ಗೆ ಪೋಷಕರ ತರಾಟೆ, ದೂರು-ಮುಷ್ಕರ…ಅರ್ಜಿ ಗುಜರಾಯಿಸಲು ಹಿಂದಿನರಾತ್ರಿಯೇ ಶಾಲೆಯ ಗೇಟಿನ ಮುಂದೆ ಠಿಕಾಣಿ ಹೂಡಿ, ಕಣ್ಣುಜ್ಜುತ್ತಲೇ ಕ್ಯೂನಲ್ಲಿ ನಿಂತು, ನುಗ್ಗಿ ಬಗ್ಗಿ, ಛೇ…ಛೇ…ಓದ್ತಾ ಓದ್ತಾ ಶ್ರೀಕಂಠೂ ಉದ್ವೇಗದಿಂದ ಕ್ಯಾಕರಿಸಿ ಉಗುಳುತ್ತ ನಿಷ್ಪಾಪಿ ಪೇಪರನ್ನ ಉಂಡೆ ಮಾಡಿ ಎಸೆದಿದ್ದ.

            ಈ ವಿಷ್ಯ ಅಪರಾತ್ರೀವರೆಗೂ ಗಂಡ-ಹೆಂಡಿರ ಚರ್ಚೆಯಲ್ಲಿ ಬೆಂದುಹೋಯ್ತು…`ದರಿದ್ರ ವ್ಯವಸ್ಥೆ, ಎಲ್ಲಕ್ಕೂ ಇನ್‍ಫ್ಲುಯೆನ್ಸು, ಡೊನೇಷನ್ನು…ಕಾಂಪಿಟೀಷನ್…ಬಡವರು ಈ ದೇಶದಲ್ಲಿ ಹೇಗೆ ಬದುಕಬೇಕು?…ಏನು ಜೀವನಾನೋ ಏನೋ ಹಾರಿಬಲ್, ಮಿಸರಬಲ್….ಬರೀ ಸಮಸ್ಯೆಗಳ ಬಂಡಲ್…’ – ಎಂದವನು ಹೊದ್ದ ರಗ್ಗು ಬಿಸಾಡಿ ಹಣೆ ಹಣೆ ಬಡಿದುಕೊಂಡ.

            ಸಂಸಾರದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅವನ ಪಲಾಯನವಾದ ಕಂಡು ಕಮಲೂಗೂ ಸಿಕ್ಕಾಪಟ್ಟೆ ರೇಗಿ ಹೋಯ್ತು. `ಇಂಥವರಿಗ್ಯಾಕ್ರೀ ಮದುವೇ, ಮಕ್ಳು, ಸಂಸಾರ…? ಎಲ್ಲಾ ಬಿಟ್ಟು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕಿತ್ತಪ್ಪ’ ಎಂದು ಎಗರಾಡಿ, ಸೊರಬುಸ ಮಾಡ್ತಾ, ಖೆಡ್ಡಕ್ಕೆ ಬಿದ್ದ ಆನೆಯಂತೆ ಚಡಪಡಿಸ್ತಾ ಗೋಡೆಗೊತ್ತಿ ಮಲಗಿದಳು-`ನನ್ನ ಮುಟ್ಟಿದರೆ ದೇವರಾಣೆ’ ಅಂತ ಲಕ್ಷ್ಮಣರೇಖೆ ಗೀಚಿ.

            ಶ್ರೀಕಂಠೂ ಮುಖ ಹರಳೆಣ್ಣೆ ಕುಡಿದ ಹಾಗಾಗಿತ್ತು. ರಾತ್ರಿಯೆಲ್ಲ ರಾಮಾಯಣ ಕೇಳಿ, ಮತ್ತೆ ಹೊತ್ತು ಹುಟ್ಟುತ್ತಲೇ ತಾನ್ಯಾಕೆ ಈ ಹಾಳು ಪೇಪರಿನ ಅದೇ ರಂಪ-ರಗಳೆ ತೆಗೆದೆ ಎಂದು ಕೈ ಹಿಸುಕಿಕೊಂಡು ಮಿಡುಕಿದ….ಛೇ..ಹಾಳಾದ್ದು ಬೆಳಗಿನ ಸ್ಟ್ರಾಂಗ್ ಕಾಫಿಗೆ ಸಂಚಕಾರ ತರಬೇಕೇ?

            ಒಳಗಡೆ ಅರ್ಧಂಬರ್ಧ ಕಾದಿದ್ದ ಹಾಲಿನ ಡಬರೀನ ಕೆಳಗಿಳಿಸಿ ಟಪ್ಪನೆ ಸ್ಟೌವ್ ಆಫ್ ಮಾಡಿದ ಶಬ್ದ ಕೇಳಿ `ಕೆಡ್ತು ಕೆಲಸ’ ಎಂದವನು ಗುನುಗೋ ಅಷ್ಟರಲ್ಲಿ ಬಿರುಗಾಳಿಯಂತೆ ನಡುಮನೆಗೆ ನುಗ್ಗಿ ಬಂದಿದ್ಳು ಕಮಲೂ!!!

            `ಪೇಪರಿನವರೇನ್ರೀ ಮನಸ್ಸಿಗೆ ಬಂದದ್ದು ಏನು ಬೇಕಾದ್ರೂ ಬರೆದುಬಿಡ್ತಾರೆ…ಯಾರೋ ಹೇಳಿದ್ದನ್ನ ನಿಜಾಂತ, ಅದೇ ವೇದವಾಕ್ಯಾಂತ ನಂಬಿ ಏನೇನೋ ಪ್ರಿಂಟ್ ಮಾಡಿಬಿಡ್ತಾರೆ…ನಿಜಸ್ಥಿತಿ, ಜನಗಳ ಪಾಡು ಅವರಿಗೇನು ಗೊತ್ತು?…ಅದರಲ್ಲಿ ಬರೋದೆಲ್ಲ ಬರೀ ಸುಳ್ಳು ಸುದ್ದಿಗಳು…ಆ ದೇವರೇ ಭೂಮಿಗಿಳಿದು ಬಂದ್ರೂ ಈ ಡೊನೇಷನ್ ಹಾವಳೀನ ತಪ್ಪಿಸಕ್ಕಾಗಲ್ಲ….ಹೂಂ, ಎಲ್ಲಕ್ಕೂ ವ್ಯಥ್ ಹೋರಾಟ ಈ ಜೀವನದಲ್ಲಿ…ಯಾರು ಬಂದ್ರೂ ಸುಧಾರಿಸಕ್ಕಾಗಲ್ಲ …ನಾನೂ ಹತ್ತಾರು ಕಡೆ ತಿರುಗಿರೋಳು, ಹತ್ತಾರು ಜನಗಳನ್ನ ಮಾತಾಡಿಸಿರೋಳು, ಪರಿಸ್ಥಿತಿ ಎಷ್ಟು ಗಬ್ಬೆದ್ದು ಹೋಗಿದೆ ಅಂತ ನನಗ್ಗೊತ್ತು, ನಿಮಗೇನು ಗೊತ್ತು ಪುಸ್ತಕದ ಬದನೇಕಾಯಿ…’-ಎಂದು ಗಂಡನ ಮೂಗು ಮುರಿದು, `ಅಲ್ಲಿ ಬರೆದಿರೋದನ್ನೆ ನೈವೇದ್ಯ ಅಂತ ನನ್ನ ಮುಂದೆ ಬಂದು ಶಂಖ ಊದಬೇಡಿ ಮತ್ತೆ’ -ಎಂದವಳು ಘಟವಾಣಿಯಲ್ಲಿ ಗದರಿದ ತತ್‍ಕ್ಷಣ ಶ್ರೀಕಂಠೂ ಗಪ್ ಚಿಪ್!!…ಎರಡೇ ನಿಮಿಷ  ಶ್ರೀಮದ್ ಗಾಂಭೀರ್ಯ…ಮರಳಿ ಅದೇ ತೆವಲು…

            ವಾಕಿಂಗ್‍ನಲ್ಲೂ ಮುಂದುವರಿಸಿದ ಅವನು ತನ್ನ ವಾಗ್ವಾದಾನ ಸೋಲೊಪ್ಪಿಕೊಳ್ಳದೆ…ಅಂತರಂಗದಲ್ಲಿ, ಕಾಫಿಗೆ ಕಲ್ಲು ಬಿದ್ದ ಅಸಮಾಧಾನದ ಹೊಗೆ, ಹೊರಗೆ ಬೆಂಕಿಯ ಕಿಡಿ.      `ಎಲ್ಲಾ ನಿನಗೇ ತಿಳಿದಿದೆ, ಸರ್ವಜ್ಞನ ತುಂಡು ಅನ್ನೋ ಹಾಗೆ ನಿನ್ನ ಮೂಗಿನ ನೇರಕ್ಕೆ ವಿತಂಡವಾದ ಮಾಡಬೇಡ…ನಿನ್ದು ಬರೀ ನಿರಾಶಾವಾದ…ವೆರಿ ಬ್ಯಾಡ್ ಸೈನ್…’

            ಒಮ್ಮೆ ಅವನತ್ತ ಕೆಕ್ಕರಿಸಿ ನೋಡಿ ಗುರುಗುಟ್ಟಿದ ಕಮ್ಲೂ, ತನ್ನ ಮುಖಾನ ಅತ್ತ ತಿರುಗಿಸಿದರೆ, ಅವನ ಮುಖ ವಿರುದ್ದ ದಿಕ್ಕಿಗೆ ತಿರುಗಿತು. ಲಾಲ್‍ಬಾಗಿನುದ್ದಕ್ಕೂ ವಿರೋಧಪಕ್ಷದವರಂತೆ ಮುಖ ಉಂಡೆ ಮಾಡ್ಕೊಂಡು ಬಿರುಸಾಗಿ ಹೆಜ್ಜೆ ಎಸೆದರು.

            ಎತ್ತು ಏರಿಗೆ…ಕೋಣ ನೀರಿಗೆ!!!

            ಪ್ರತಿದಿನ ವಾಕಿಂಗ್ ಹೊರಡುವಾಗಲೂ ಅವರ ನಿರ್ಧಾರಾನೇ ಬೇರೆ…ಹಾಯಾಗಿ ವಾಕಿಂಗ್ ಮಾಡ್ತಾ, ತಾಜಾ ಗಾಳಿ ಸೇವಿಸ್ತಾ ಟ್ರಿಮ್ಮು,ಸ್ಲಿಮ್ಮು…ಹೆಲ್ತಿ ಆಗಬೇಕು ಎಂಬ ಗುರಿ-ಹುಮ್ಮಸ್ಸು ಹೊಸಿಲು ದಾಟ್ತಿದ್ದ ಹಾಗೇ ಇಬ್ಬರಿಗೂ ಮರ್ತೇಹೋಗ್ತಿತ್ತು. ಎರಡು ಹೆಜ್ಜೆಯಲ್ಲೇ ಯಾವುದೋ ದರಬೇಸಿ ವಿಷಯಗಳು ಅವರ ದವಡೆಗೆ ಸಿಕ್ಕು , ಚಕ್ಕುಲಿ-ಮುರುಕಿನ ಥರ ಕುರುಂ ಕುರುಂ ಅಗೆದಗೆದು ಹಲ್ಲುಗಳು ಗರಗಸದಂತಾಗುತ್ತಿದ್ದವು….ಕಡೆಗೆ ಪರಸ್ಪರ ದೋಷಾರೋಪಣದಲ್ಲಿ ಬೆಳೆದು ವಿಷಯಗಳನ್ನು ಉಜ್ಜುಜ್ಜಿ ಹಾಕಲಾರಂಭಿಸುತ್ತಿದ್ದರು. ಇದೇ ವಾಗ್ಯದ್ಧದಲ್ಲಿ ವಾಕಿಂಗ್ ಅನ್ನೋ ಕರ್ಮ ಮುಗಿಸಿ, ಸಾಕಪ್ಪ ಸಾಕು ಸಹವಾಸ ಅನ್ನೋ ಕೆಟ್ಟಮೋರೆಯಲ್ಲಿ ಮನೆ ಕಡೆ ಮುಖ ಮಾಡಿದಾಗ, ಅವರಿಬ್ಬರ ಮುಖಗಳು ಉತ್ತರ ದಕ್ಷಿಣವಾಗಿ ಜನ್ಮಾಂತರದ ದ್ವೇಷಿಗಳು ಅಂಬೋ ಹಾಗೆ ಸಿಟ್ಟು ಮಸೆಯುತ್ತಿದ್ದವು. ಅದೇ ಕೋಪ,ಗುರುಗುಟ್ಟುವಿಕೆ, ಅಸಮಾಧಾನವನ್ನು ಮನೆವರ್ಗೂ ಲಾಲಿ ಹಾಡ್ತಾ ಪೋಷಿಸಿಕೊಂಡು ಬರುತ್ತಿದ್ರು.

            ದೇಶದ ಸಮಸ್ಯೆಗಳನ್ನೆಲ್ಲ ತಮ್ಮದೇ ಅನ್ನೋ ಹಾಗೆ ಬಾಚ್ಕೊಂಡು ಸೀರಿಯಸ್ಸಾಗಿ ಅದರ ಪರ-ವಿರುದ್ಧ ಸೆಣೆಸಾಡ್ತಾ, ತಮ್ಮ ವೈಯಕ್ತಿಕ ಖುಷಿ ಕ್ಷಣಗಳನ್ನೆಲ್ಲ ಬೊಗಸೆಯೊಳಗಿನ ನೀರಿನ ಹಾಗೆ ಸೋರಿಹೋಗ್ತಿರೋದನ್ನೂ ಗಮನಿಸದಂಥ ಅಪ್ಪಟ ದೇಶಪ್ರೇಮಿ ದುಷ್ಮನ್‍ಗಳ ಆವೇಶ ಬರಸೆಳೆದುಕೊಂಡ ಆದರ್ಶ ದಂಪತಿಗಳಾಗಿ ಮೆರೀತ್ತಿದ್ದ ಅಪರೂಪದ ಜೋಡಿ ಇದು!!

            ಇಂದೂ ಆಗಿದ್ದೂ ಅದೇ.

            ಗಂಟಲಿಗೆ ಕಾಫೀ ಬೀಳದ ಗಡಸುಕಂಠದಲ್ಲಿ ಶ್ರೀಕಂಠೂ ವಾದಿಸಿದ್ದೇ ವಾದಿಸಿದ್ದು…ಇಬ್ಬರಿಗೂ ಕಂಠಭರ್ತಿ `ಈಗೋ’…!!

            ಯಾರ ಮಾತನ್ನು ಯಾರೂ ಕೇಳದ ಪರಿಸ್ಥಿತಿ, ಮನಸ್ಥಿತೀಲೂ ಇರಲಿಲ್ಲ. ಆದರೂ ಕೆಟ್ಟುಹೋದ ರೆಕಾರ್ಡುಗಳ ಹಾಗೆ ಕೆಟ್ಟಸ್ವರದಲ್ಲಿ ಅರಚೋ ಕಿಸಬಾಯಿದಾಸನ ಅಪರಾವತಾರ ದಲ್ಲಿದ್ದರು.

            `ನಿಮ್ಮ ಗಂಡಸರ ಬುದ್ಧಿ ಎಲ್ಲಿ ಬಿಡ್ತೀರಾ…ಎಲ್ಲದರಲ್ಲೂ ನಿಮ್ಮ ಹಟಾನೇ ಗೆಲ್ಲಬೇಕಲ್ಲಾ??!…ಹೂಂ ನಾವು ಆಟಕ್ಕುಂಟು, ಲೆಕ್ಕಕ್ಕಿಲ್ಲ’

            -ಮಿಂಚು ಗುಡುಗು ಮುಗಿದುಹೋಗಿತ್ತು!…ಇನ್ನೇನು ತುಂತುರುಮಳೆ…

            ಅಷ್ಟರಲ್ಲಿ ಶ್ರೀಕಂಠೂ ಎಚ್ಚೆತ್ತುಕೊಂಡುಬಿಟ್ಟ.

            `ಆಯ್ತು ಬಿಡೆ…ನಿನ್ನ ಇಷ್ಟದಂತೆಯೇ ಕಾನ್ವೆಂಟಿಗೇ ಸೇರಿಸೋಣ…ಆದರೂ ಕನ್ನಡಿಗರಾದ ನಾವು ಮಾತೃಭಾಷೆಗೆ ಆದ್ಯತೆ ಕೊಡಬೇಕೂ ಅನ್ನೋ ಅಭಿಮಾನದಿಂದ ಕನ್ನಡಶಾಲೆಗೆ ಸೇರಿಸೋಣ ಅಂದಿದ್ದೇ ದೊಡ್ಡ ತಪ್ಪಾಯ್ತಲ್ಲ…ಸರಿಕಣೆ ಮಾರಾಯ್ತೀ, ಜೀ ಹುಕುಂ…ನೀನು ಆರ್ಡರ್ ಕೊಟ್ಮೇಲೆ ಮುಗೀತು…ಸ್ವಲ್ಪ ಮೆಲ್ಲಗೆ ಮಾತಾಡೇ, ಅಕ್ಕಪಕ್ಕದಲ್ಲೇ ಯಾವುದಾದ್ರೂ ಶಾಲೆ ಹುಡುಕಿದರಾಯ್ತು’- ಅವನ ಭರವಸೆ ನುಡಿ ಹೊರಜಾರಿದೊಡನೆ ಕಮ್ಲೂ ಮುಖದಲ್ಲಿ ಅರ್ಧಭಾರ ಇಳಿದ ಭಾವ!

            `ಅಂತೂ ನಿನ್ನ ಡಿಮ್ಯಾಂಡ್ ಲಿಸ್ಟು ಇನ್ನೂ ಉದ್ದಕ್ಕೆ ಇದೆ ಅನ್ನು…ಸಾಕಪ್ಪ ಸಾಕು,ಇದನ್ನ ಪೂರೈಸಕ್ಕೆ ನಾನು ಇನ್ನೊಂದು ಆರ್.ಡಿ. ಶುರು ಮಾಡಬೇಕು, ಹಾಗೇನೆ ಪಿ.ಎಫ್. ಅಮೌಂಟು ಸ್ವಲ್ಪ ಜಾಸ್ತಿ ಮಾಡಬೇಕಾಗತ್ತೆ…ಲೋನೂ ಬೇಕಾದ್ರೆ ತೊಗೋಬಹ್ದು…ಓಕೆ…ಈಗ ನಿರಾಳ ತಾನೇ?’

            -ಗಂಡನ ನೋಟದಲ್ಲಿ ವ್ಯಂಗ್ಯ ಅರಸುತ್ತ ಕಮ್ಲೂ, `ಆಹಾಹಾ…ಸಮಸ್ಯೆ ಎಲ್ಲ ನನ್ನೊಬ್ಬಳದೇ ಅನ್ನೋಹಾಗೆ ಎಷ್ಟು ಸಲೀಸಾಗಿ ಸುವ್ವಿರಾಗ ಹಾಡ್ತೀರಾ, ನಿಮಗೇನು ಇದು ಸಂಬಂಧಿಸಿದ್ದಲ್ವಾ ಹಾಗಾದ್ರೆ?!…ಹೂಂ…ಈ ಹಾಳು ಗಂಡಸರೇ ಹೀಗೆ, ಜವಾಬ್ದಾರಿಗಳನ್ನೆಲ್ಲ ಹೆಂಡ್ತೀರ ಮೇಲೆ ಜಾರಿಸಿ, ಹಾಯಾಗಿ ಸದಾ ಟಿ.ವಿ. ಮುಂದೆ ಪ್ರತಿಷ್ಠಾಪನೆ ಆಗ್ಬಿಟ್ಟಿರ್ತೀರಾ…ಮಹಾ ಕಿಲಾಡಿಗಳೂರೀ ನೀವುಗಳು…ನಾವೂ ಎಲ್ಲೀತನಕ ಈ ಶೋಷಣೇನಾ ಸಹಿಸ್ಕೊಳಕ್ಕಾಗತ್ತೆ…ನೋ..ನೋ…ಬೇಡವೇ ಬೇಡ, ನೀವು ಯಾವ ಕಾನ್ವೆಂಟಿಗಾದ್ರೂ ಸೇರಿಸ್ಕೊಳ್ಳಿ, ನಂಗೇನಂತೆ, ಅಥ್ವಾ ಸರಕಾರೀ ಶಾಲೇಗೇ ತಳ್ಳಿ, ನಮ್ಮಪ್ಪನಾಣೆ ನಾನಿನ್ನು ಈ ವಿಷ್ಯದಲ್ಲಿ ತಲೆ ಹಾಕಿದರೆ ಕೇಳಿ…ಇದು ನನ್ನ ಕಡೇ ನಿರ್ಧಾರ, ಮೈಂಡ್ ಇಟ್!!’

            -ಎಂದು ಭದ್ರಕಾಳಿಯಾಗಿ ಕಾಲನ್ನು ನೆಲಕ್ಕಪ್ಪಳಿಸಿದಳು.

            ನೆಲದ ಮಣ್ಣು ಅವಳುದ್ದ ಮೇಲೆದ್ದಿತು. ಹೀಗೆ ಅವರ ಜಗಳ ಸುಮಾರು ವಾಕಿಂಗ್‍ನ ಮುಕ್ಕಾಲು ಮೈಲು ಕಬಳಿಸಿತ್ತು. ಕೈ ಕೈ ಮಿಲಾಯಿಸೋದೊಂದು ಬಾಕಿ. ಅದುವರೆಗೂ ಅವರ ಹಿಂದೆಯೇ ನೆರಳಿನಂತೆ ಅವರನ್ನು ಹಿಂಬಾಲಿಸಿಕೊಂಡು ಬರುತ್ತ ಅವರ ವಾಗ್ವಾದಕ್ಕೆ ಕಿವಿಯಾಗಿ ಕುತೂಹಲದ ಮೂಟೆಯಾಗಿದ್ದ ವೃದ್ಧರೊಬ್ಬರು ತಡೆಯಲಾರದೆ ಅವರ ಮಧ್ಯೆ ಪ್ರವೇಶಿಸಿಯೇ ಬಿಟ್ಟರು ಃ `ತಪ್ಪು ತಿಳ್ಕೊಳಲ್ಲ ಅಂದ್ರೆ ಒಂದ್ಮಾತು, ವಯಸ್ಸಿನಲ್ಲಿ ಹಿರಿಯ, ಅಧಿಕಪ್ರಸಂಗವಾಗದಿದ್ರೆ ನಾನು ನಿಮ್ಮ ಪ್ರಾಬ್ಲಂ ಸಾಲ್ವ್ ಮಾಡ್ಲಾ?’

            ಶ್ರೀಕಂಠೂ ಆ ಕಿವಿಯಿಂದ ಈ ಕಿವಿಯವರೆಗೂ ಹಲ್ಲು ಕಿರಿದ ಪೆಚ್ಚು ಪೆಚ್ಚಾಗಿ.

            `ಬೇಡ, ನೀವು ಏನೂ ಹೇಳೋದೇ ಬೇಡ…ದಾರಿಯುದ್ದಕ್ಕೂ ನಿಮ್ಮ ಮಾತೆಲ್ಲ ಕಿವಿಗೆ ಬೀಳ್ತಿತ್ತು…ಹಿ ಹ್ಹೀ…ಮಗೂನ ಯಾವ ಕಾನ್ವೆಂಟಿಗೆ ಸೇರಿಸೋದು ಅನ್ನೋದರ ಬಗ್ಗೆ ಕಚ್ಚಾಡ್ತಿದ್ದೀರಾ ಗೊತ್ತಾಯ್ತು..ನನ್ನ ಮಾತು ಕೇಳಿ..ಇಬ್ಬರೂ ಸಮಾಧಾನವಾಗಿ ಕೊಂಚ ಹೊತ್ತು ಈ ಬೆಂಚಿನ ಮೇಲೆ ಕೂತ್ಕೊಂಡು ಸಮಾಧಾನವಾಗಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ…ತಂದೆ ತಾಯಿ ಅನ್ನಿಸ್ಕೊಂಡ್ಮೇಲೆ ಇಬ್ಬರೂ ಸಮಾನ ಜವಾಬ್ದಾರಿ ಹೊರಬೇಕು, ಇಬ್ಬರ ಅಭಿಪ್ರಾಯಗಳೂ ಮುಖ್ಯಾನಪ್ಪಾ…ಬನ್ನಿ, ಇಲ್ಲಿ ಕೂಡಿ’

            ಕಿತ್ತಾಡ್ತಿದ್ದವರಿಬ್ರೂ ಗಪ್‍ಚಿಪ್ಪಾಗಿ ತೆಪ್ಪನೆ ಕೂತರು.

            `ಹ್ಞಾ…ಈಗ್ಹೇಳಿ…ನಿಮಗೆ ಮಗನೋ ಮಗಳೋ..ಎಷ್ಟು ವರ್ಷ?’

            ಇಂಗು ತಿಂದ ಮಂಗನಂತಾದ ಕಮ್ಲೂ-ಶ್ರೀಕಂಠೂ ಮುಖ ಮುಖ ನೋಡಿಕೊಂಡು ಕಕ್ಕಾಬಿಕ್ಕಿಯಾದರು!…

            `ಇರಲಿ ಇಲ್ಲಿ ಹೆಣ್ಣು-ಗಂಡು ಮುಖ್ಯ ಅಲ್ವೇ ಅಲ್ಲ, ಡೋಂಟ್ ವರಿ…ಮಕ್ಕಳ ಭವಿಷ್ಯ  ಖಂಡಿತಾ ಮುಖ್ಯಕಣ್ರಪ್ಪ…ಇಬ್ಬರೂ ಶಾಂತಚಿತ್ತರಾಗಿ ಆಲೋಚನೆ ಮಾಡಿ…ನಿಮ್ಮಿಬ್ಬರ ಜಗಳದಲ್ಲಿ ಪಾಪಾ ಕೂಸು ಬಡವಾಗಬಾರದಲ್ವೇ?’

            `ಹಾಂ…ಕೂಸು?!’ ಜೋಡಿದನಿ ಒಟ್ಟಿಗೆ ಚಿಮ್ಮಿತು ಅಚ್ಚರಿಯಿಂದ.

            `ನೀವು ಜಗಳ ಕಾಯಕ್ಕೆ ಅಡ್ಡೀಂತ ಮಗೂನ ಮನೇಲೇ ಬಿಟ್ಟು ಬಂದ್ರಾ ಅಜ್ಜೀ ತಾತನ ಹತ್ರ?’- ಎಂದರಾತ ಲೇವಡಿಯಿಂದ ಕಿಸಕ್ಕನೆ ನಕ್ಕು.

            `ಮ…ಮ..ಮಗೂ!!..’ ಶ್ರೀಕಂಠ ತಲೆ ತುರಿಸಿಕೊಂಡ ಬೆಪ್ಪಾಗಿ.

            `ಮಗೂ?!!’ ಕಮ್ಲೂ ಬೆಚ್ಚಿಬಿದ್ದಳು.

            `ಇಲ್ಲಾ…ಮಗೂ ಇಲ್ಲಾ….ಮಕ್ಕಳ ಬಗ್ಗೆ ನಾವಿನ್ನೂ ಪ್ಲಾನ್ ಮಾಡಿಲ್ಲ ಸಾರ್…ಕಾನ್ವೆಂಟ್ ಸೀಟು, ಡೊನೇಷನ್ನು ಇತ್ಯಾದಿಗಳೆಲ್ಲಾ ಕನ್‍ಫರಂ ಆದ್ಮೇಲೆ ಮಗೂನ ಮಾಡ್ಕೊಳ್ಳೋಣಾಂತ…’- ಶ್ರೀಕಂಠೂ ದನಿ ಕಟ್ಟಿತು ನಾಚಿಕೆ-ಸಂಕೋಚಗಳಿಂದ ಹಿಡಿಯಾಗಿ.

  ಪಿಚಕಾರಿಯಂತೆ ಪಕಪಕನೆ ನಗು ತೂರತೊಡಗಿದ ಬೊಚ್ಚಬಾಯ ಆ ಜೋರುನಗು ಆಕಾಶಕ್ಕೆ ನೆಗೆಯಿತು.

` ಚೆನ್ನಾಗಿದೆ, ತುಂಬ ಚೆನ್ನಾಗಿದೆ…ಕೂಸು ಹುಟ್ಟೋಕ್ಮುಂಚೆ ಕುಲಾವೀನೇ ಅಂತ ಗಾದೆ ಕೇಳಿದ್ನಪ್ಪ…ಹಹ್ಹಹ್ಹಾ…ಈಗ ಕೂಸಿಗೆ ಮುಂಚೇನೆ ಸ್ಕೂಲೇ ?!!…ಹೊಸ ಗಾದೆ…ಈ ಕಾಲಕ್ಕೆ ಅರ್ಥಪೂರ್ಣವಾಗಿದೆ ಬಿಡಿ..’

            ಕಮ್ಲೂ-ಶ್ರೀಕಂಠೂ ಕೂಡ ಜಗಳ ಮರೆತು ನಗತೊಡಗಿದರು.

Related posts

ಕನಸೆಂಬ ಹೆಗಲು…

YK Sandhya Sharma

ಹಾವಸೆ

YK Sandhya Sharma

ಕತ್ತಲೊಳಗಣ ಬೆಳಕು

YK Sandhya Sharma

Leave a Comment

This site uses Akismet to reduce spam. Learn how your comment data is processed.