ಅಭಿನಯಪ್ರಧಾನ ಕೃತಿಗಳಿಗೆ ಭಾವಾಭಿವ್ಯಕ್ತಿ ಅತ್ಯಂತ ಮುಖ್ಯ. ರಸೋತ್ಕರ್ಷ ಭಾವಗಳ ಸ್ಫುರಣೆಯಿಂದಲೇ ರಸಾನುಭವ ಸಾಧ್ಯ. ಅಂಥದೊಂದು ಅನುಭವ ದಕ್ಕಿದ್ದು ಇತ್ತೀಚಿಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಭರತನಾಟ್ಯದ “ರಂಗಪ್ರವೇಶ’’ ಮಾಡಿದ ಮೊನಿಷಾ ರಾಬರ್ಟ್ಸ್ ಪ್ರಸ್ತುತಪಡಿಸಿದ ವೈವಿಧ್ಯಪೂರ್ಣ ಕೃತಿಗಳ ಪ್ರದರ್ಶನದ ಸಂದರ್ಭದಲ್ಲಿ. `ವಿಶ್ರುತ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ‘ – ನೃತ್ಯಶಾಲೆಯ ನಿರ್ದೇಶಕಿ ಹಾಗೂ ಹಿರಿಯ ನಾಟ್ಯಗುರು ಕರ್ನಾಟಕ ಕಲಾಶ್ರೀ ಬಿ.ಕೆ ವಸಂತ ಲಕ್ಷ್ಮೀ ಅವರ ಶಿಷ್ಯೆ ಈಕೆ.
ಮೋನಿಷಳ ನೃತ್ಯ ಸೊಗಸು ಕಂಡಿದ್ದು ಅವಳ ಸುಂದರ ಆಂಗಿಕಾಭಿನಯ, ಚುರುಕಾದ ನೃತ್ತಗಳು ಹಾಗೂ ಬಟ್ಟಲು ಕಂಗಳ ಭಾವಾಭಿವ್ಯಕ್ತಿಯಿಂದ. ನಗುಮುಖದಿಂದ ಸುಮಾರು ಎರಡು ಗಂಟೆಗಳ ಕಾಲ ಅನಾಯಾಸವಾಗಿ ಅವಳು ನರ್ತಿಸಿದ್ದರ ಹಿನ್ನಲೆಯಲ್ಲಿ ಅವಳ ಅಪರಿಮಿತ ನೃತ್ಯಾಸಕ್ತಿ ಮತ್ತು ಶ್ರದ್ಧೆ-ಪರಿಶ್ರಮಗಳು ಸುವ್ಯಕ್ತವಾದವು.
ಸಾಮಾನ್ಯವಾಗಿ ಮಾರ್ಗಪದ್ಧತಿಯಂತೆ ನಾಟ್ಯದ ಶುಭಾರಂಭ ಪುಷ್ಪಾಂಜಲಿ,ಅಲ್ಲರಿಪು, ಮತ್ತು ದೇವತಾ ಪ್ರಾರ್ಥನೆಗಳಿಂದ. ಸಮಸ್ತ ದೇವತೆಗಳು, ಗುರು ಹಿರಿಯರಿಗೆ ಭಕ್ತಿಭಾವಗಳಿಂದ ವಿನೀತವಾಗಿ ವಂದಿಸಿ , ಶಾರದಾ ಭುಜಂಗ ಸ್ತೋತ್ರವನ್ನು ಸಾಕಾರಗೊಳಿಸುವಲ್ಲಿ ವಿದ್ಯಾಧಿದೇವತೆ ಸರಸ್ವತಿಯ ನಾನಾ ಭಂಗಿಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ರಸಿಕರನ್ನು ಸುಪ್ರಸನ್ನಗೊಳಿಸಿದಳು. ಅಂಗ,ಪ್ರತ್ಯಂಗ ಉಪಾಂಗಗಳ ಹಲವಾರು ಚಲನೆಗಳ ಜೊತೆಗೆ, ತಾಳ-ಲಯ ಬದ್ಧವಾಗಿ ಪ್ರದರ್ಶಿಸಲ್ಪಡುವ ನೃತ್ತ ಭಾಗ “ಅಲ್ಲರಿಪು’’ವನ್ನು ಮೋನಿಷಾ ಅಚ್ಚುಕಟ್ಟಾಗಿ ನಿರ್ವಹಿಸಿದಳು. ಖಚಿತ ಹಸ್ತ, ಅಡವುಗಳು ಅದರವೇ ಆದ ಸೌಂದರ್ಯವನ್ನು ಒಳಗೊಂಡಂಥವು.ಶುದ್ಧ ನೃತ್ತಗಳು ಯಾವತ್ತೂ ಸಂತಸವನ್ನು ನೀಡುತ್ತವೆ. ಇದರೊಡನೆ ಕಲಾವಿದೆ ಪ್ರದರ್ಶಿಸಿದ ಅರೆಮಂಡಿ ಅಡವುಗಳು ಮೆಚ್ಚುಗೆ ಪಡೆದವು.
ಮುಂದಿನ ಪ್ರಸ್ತುತಿ `ಸ್ವರ ಜತಿ’- ಬಿಲಹರಿ ರಾಗ, ಆದಿತಾಳಕ್ಕೆ ನಿಬದ್ಧವಾಗಿತ್ತು. ಮಧುರವಾದ ಕೃಷ್ಣ ಭಕ್ತಿಯ ಸಾಹಿತ್ಯದಿಂದ ಕಂಗೊಳಿಸಿದ `ರಾ ರಾ ವೇಣು ಗೋಪಾ ಬಾಲ ರಾಜಿತ ಸದ್ಗುಣ ಜಯಶೀಲ’ ವೆಂಬ ಕರ್ನಾಟಕ ಸಂಗೀತದಲ್ಲಿ ಪ್ರಚಲಿತ ಹಾಗೂ ಜನಪ್ರಿಯವಾದ ಗೀತೆಯನ್ನು ಗಾಯಕಿ ಭಾರತೀ ವೇಣುಗೋಪಾಲ್ ಭಾವಪೂರ್ಣವಾಗಿ ಹಾಡಿದರು. ಅದಕ್ಕೆ ಪೂರಕವಾಗಿ ಕಲಾವಿದೆ, ತನ್ನ ಸುಂದರನರ್ತನದಿಂದ ಭಾವಪುಂಜ ನಿರ್ಮಿಸಿ ಜೀವಂತ ಗೊಳಿಸಿದಳು. ಅದಕ್ಕೆ ಸ್ಫೂರ್ತಿಯಾಗಿದ್ದು ಗುರು ವಸಂತಲಕ್ಷ್ಮೀ ಅವರ ಸಮರ್ಥ ನಟುವಾಂಗ. ವೇದಿಕೆಯ ತುಂಬ ಲವಲವಿಕೆಯಿಂದ ಹೆಜ್ಜೆಗಳನಿಡುತ್ತ ಕೃಷ್ಣನನ್ನು ಆರಾಧಿಸುವ ತನ್ಮಯತೆಯಿಂದ ತೋರಿದ ಕೃಷ್ಣನ ವಿವಿಧ ಸುಂದರ ಭಂಗಿಗಳು ನಯನ ಮನೋಹರವಾಗಿದ್ದವು. ಕುಣಿಸುವ ಲಯದ ಮೃದಂಗ ( ಹರ್ಷ ಸಾಮಗ) , ಮುದಗೊಳಿಸುವ ವೇಣುಗಾನ ( ವಿವೇಕ ಕೃಷ್ಣ) ದ ಅಲೆಯಲ್ಲಿ ಮೀಯುತ್ತ ನೃತ್ತಗಳ ಝೇಂಕಾರವನ್ನು ಮೆರೆದಳು ಕಲಾವಿದೆ.
ಸಾಂಪ್ರದಾಯಕ ಮಾರ್ಗ ಪದ್ಧತಿಯಂತೆ ಅಭಿನಯಪ್ರಧಾನವಾದ ಮೂರನೆಯ ಕೃತಿ `ಶಬ್ದಂ’. ರಾಗಮಾಲಿಕೆ ಮಿಶ್ರಛಾಪು ತಾಳದ ಈ ಮುರಳೀಶಬ್ದದ ರಚನೆ ದಿ. ಹೆಚ್.ಆರ್. ಕೇಶವಮೂರ್ತಿ ಅವರದು.ಸರ್ವರಿಗೂ ಅತ್ಯಂತ ಪ್ರಿಯನಾದ ಕೃಷ್ಣನ ಆಧರಸುಧೆಯನ್ನು ಸದಾ ಪಡೆಯುವ ಭಾಗ್ಯಶಾಲಿಯಾದ ಕೊಳಲಿನ ಮಹತ್ವ, ಮರುಳುಗೊಳಿಸುವ ಮುರಳೀನಾದದ ವೈಶಿಷ್ಟ್ಯವನ್ನು ಸಾರುವ ಈ ಕೃತಿ ಕೃಷ್ಣನ ಮಹಿಮೆಗೆ, ಅನನ್ಯ ವರ್ಣನೆಗೆ ಮೀಸಲಾಗಿತ್ತು. ಸಂಚಾರಿಯಲ್ಲಿ ಗೋಕುಲದಲ್ಲಿ ಹಾಲು ಕರೆಯುವ, ಮೊಸರು ಕಡೆಯುವ ಗೋಪಿಕೆಯರ ದೈನಂದಿನ ಕಾರ್ಯ ಚಿತ್ರಣಗಳನ್ನು ಸುಂದರವಾಗಿ ಕಟ್ಟಿಕೊಟ್ಟ ಮೋನಿಷಾ, ಪ್ರಕೃತಿ ವಿಕೋಪದಿಂದ ಬೆದರಿದ ಜನರಿಗೆ ಅಭಯವಿತ್ತು, ಗೋವರ್ಧನಗಿರಿಯನ್ನು ಎತ್ತಿ ಪುರಜನರನ್ನು ಕಾಪಾಡಿದ ಕೃಷ್ಣನ ಸಾಹಸಗಾಥೆಯನ್ನು ಅಭಿನಯಿಸಿ ತೋರಿದಳು.
ರಂಗಪ್ರವೇಶದಲ್ಲಿ ಪ್ರಸ್ತುತಪಡಿಸುವ ನೃತ್ಯಗಳ ಅನುಕ್ರಮಣಿಕೆಯಲ್ಲಿ ಪ್ರಮುಖವಾದ ಘಟ್ಟ, `ವರ್ಣ ‘ ಪ್ರಸ್ತುತಿ. ಕಲಾವಿದರ ಉತ್ತಮ ಸ್ಮರಣಶಕ್ತಿ, ದೇಹ ದೃಢತೆ , ಸಾಧನೆಗಳನ್ನು ಒರೆಗೆ ಹಚ್ಚುವಂಥ ಒಂದು ಸಂಕೀರ್ಣ ದೀರ್ಘ ಪ್ರಬಂಧ. ಧನ್ಯಾಸಿರಾಗದ ಮೈಸೂರು ಸದಾಶಿವರಾಯರ ರಚನೆ, ಕಲಾಕ್ಷೇತ್ರದ ಶ್ರೀಮತಿ ರುಕ್ಮಿಣಿ ಅರುಂಡೆಲ್ ಅವರು ನೃತ್ಯ ಸಂಯೋಜಿಸಿದ ವರ್ಣ `ಏ ಮಗುವ ಭೇದಿಂಚಿರಾ …’.. ಇಲ್ಲಿಯ ವಿಪ್ರಲಬ್ಧ ನಾಯಕಿ, ತನ್ನಿನಿಯ ಬೇರೊಂದು ಹೆಣ್ಣಿನಲ್ಲಿ ಆಸಕ್ತ ಎಂಬ ಅನುಮಾನಭಾವದಿಂದ ತೊಳಲಾಡುವ ವಿರಹಗೀತೆ ಭಾವಪ್ರದವಾಗಿ ಬೆಳೆಯುತ್ತ ಹೋಗುತ್ತದೆ. ಪರಸ್ತ್ರೀಯ ಚಾಡಿ ಮಾತಿಗೆ ಕಿವಿಗೊಟ್ಟು ನನ್ನನ್ನು ತೊರೆಯುವುದು ನ್ಯಾಯವೇ , ನನ್ನ ಕೈ ಬಿಡಬೇಡ, ಕಾಪಾಡು ಎಂದು ಆರ್ದ್ರವಾಗಿ ಮೊರೆಯಿಟ್ಟು, ತಲ್ಲಣಿಸುವ ಸನ್ನಿವೇಶವನ್ನು ಕಲಾವಿದೆ, ತನ್ಮಯತೆಯ ಅಭಿನಯದಿಂದ ಕಟ್ಟಿಕೊಟ್ಟಳು. ನಡುನಡುವೆ ಕಾಣಿಸಿಕೊಂಡ ನೃತ್ತಗಳು ಚುರುಕಾಗಿದ್ದವು.
`ಕರುಣಾಮೃತ ವರ್ಷಿಣಿ ಅಂಬಾಭವಾನಿ’ ಯನ್ನು ಅನೇಕ ಬಗೆಯಲ್ಲಿ ಮನದುಂಬಿ ವರ್ಣಿಸುವ ಕೃತಿಯನ್ನು ಮೋನಿಷಾ, ಅಂಬಾಭವಾನಿಯ ದಿವ್ಯರೂಪವನ್ನು ಸುಮನೋಹರ ಭಾವ-ಭಂಗಿಗಳಿಂದ ಸಾಕಾರಗೊಳಿಸಿ, ದೈವೀಕತೆ ಯನ್ನು ಸಾಕ್ಷಾತ್ಕರಿಸಿದಳು. ಪ್ರಪ್ಹುಲ್ಲತೆಯಿಂದ ಅಭಿನಯಿಸಿದ ಪ್ರಸ್ತುತಿ ಪರಿಣಾಮಕಾರಿಯಾಗಿತ್ತು. ಅನಂತರ ನಾಯಕನಲ್ಲಿ ಅನುಮಾನಗೊಂಡ `ಖಂಡಿತ ನಾಯಕಿ’ ಅವನ ವಿಮನಸ್ಕತೆಯನ್ನು ಪ್ರಶ್ನಿಸುವ ಎದೆಗಾರಿಕೆ ತೋರುತ್ತ, ಪುಸಲಾಯಿಸಲು ಬಂದ ಅವನನ್ನು ನಿರಾಕರಿಸುವ ಸ್ವಾಭಿಮಾನವನ್ನು ಪ್ರಕಟಪಡಿಸುವ `ಜಾವಳಿ’ಯ ಅಭಿನಯದಲ್ಲಿ ಮೋನಿಷಾಳ ಆತ್ಮವಿಶ್ವಾಸ ಹಾಗೂ ಪಕ್ವತೆ ವ್ಯಕ್ತಗೊಂಡಿದ್ದವು. ಮುಂದಿನ ದೇವರನಾಮ ವಿಜಯದಾಸರ `ಗುಮ್ಮ ಬಂದ ಬಾಗಿಲು ಮುಚ್ಚೆ..’ ಚೇತೋಹಾರಿಯಾಗಿತ್ತು. ಕಲಾವಿದೆಯ ಅಭಿನಯ ಸುಂದರವಾಗಿ ಅಷ್ಟೇ ಪಳಗಿದಂತಿತ್ತು. ಲಾಸ್ಯಭರಿತ ಚಲನೆಗಳು, ವೈವಿಧ್ಯಪೂರ್ಣ ನೃತ್ತಗಳು, ರಂಗಾಕ್ರಮಣ , ತೀವ್ರಗತಿಯ ಪದಗತಿಗಳಿಂದ ಶೋಭಿಸಿದ ತಿಲ್ಲಾನ`ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು. ಅಂತ್ಯದಲ್ಲಿ ಮೂಡಿಬಂದ ಏಸುಕ್ರಿಸ್ತನನ್ನು ಕುರಿತ ಶ್ಲೋಕ ಸಂವೇದನೆಯನ್ನುಂಟು ಮಾಡಿತು.