ಹೆಸರಿಗೆ ಅನ್ವರ್ಥಕವಾಗಿ ‘’ ರಸಾನಂದ’’ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು. ವಿದುಷಿ ಪೂರ್ಣಿಮಾ ಮೋಹನ್ ರಾಮ್ ಅವರ ಕಲಾನೈಪುಣ್ಯ, ನೃತ್ಯಸಂಯೋಜನೆಯ ರಸಭಿಜ್ಞತೆ, ನೃತ್ಯಶಿಕ್ಷಣದ ವೈಶಿಷ್ಟ್ಯ ಎದ್ದುಕಾಣುತ್ತಿದ್ದವು.

ನೃತ್ಯಪಯಣದ ಹಾದಿಯಲ್ಲಿ ನೃತ್ಯಶಾಲೆಯೊಂದು ಉತ್ತಮ ನಾಟ್ಯಶಿಕ್ಷಣವನ್ನು ಬದ್ಧತೆಯಿಂದ ಧಾರೆಯೆರೆಯುತ್ತ, ನೃತ್ಯಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ವಹಿಸುವ ಪಾತ್ರ ಅಗಾಧ. ಈ ನಿಟ್ಟಿನಲ್ಲಿ ‘’ರಸಾನಂದ’’ ನಾಟ್ಯಶಾಲೆಯು 22 ವರುಷಗಳ ಸಾರ್ಥಕಸೇವೆಯ ಸಂಭ್ರಮವನ್ನು ಆಚರಿಸುತ್ತಿರುವ ಸಂಗತಿ ನಿಜಕ್ಕೂ ಸ್ತುತ್ಯಾರ್ಹ. ಎರಡು ವರುಷಗಳಿಗೊಮ್ಮೆ ನುರಿತ ಪ್ರಯೋಗಗಳಿಂದ ವೇದಿಕೆಯ ಪ್ರದರ್ಶನ ಸೃಷ್ಟಿಸುವ ಈ ಶಾಲೆಯ ಪದ್ಧತಿ ಮಾದರಿ ಕೂಡ.
ಗುರು ಪೂರ್ಣಿಮಾ ಮೋಹನರಾಂ ಅವರ ಹರಿತ ಶಿಕ್ಷಣದಲ್ಲಿ ರೂಪುಗೊಂಡ ಉದಯೋನ್ಮುಖ ಪ್ರತಿಭೆಗಳು ಸಾದರಪಡಿಸಿದ ನೃತ್ಯಗಳು ಬಹು ಅಚ್ಚುಕಟ್ಟಾಗಿದ್ದವು. ಪ್ರತಿಯೊಬ್ಬ ಶಿಷ್ಯರಿಗೂ ವೇದಿಕೆ ಒದಗಿಸಿದ ಪ್ರಸ್ತುತಿಯ ಶುಭಾರಂಭ ‘ಪುಷ್ಪಾಂಜಲಿ’ಯಿಂದಾಯಿತು. ತಿಲ್ಲಾಂಗ್ ರಾಗದ ‘ ಪ್ರಭೋ ಗಣಪತಿ..’ಯ ವೈಭವ ನರ್ತಕಿಯರ ಮೆರವಣಿಗೆಯ ದೃಶ್ಯ, ವಿವಿಧ ವಾದನಗಳ ನೃತ್ಯಸೇವೆಗಳಿಂದ ಕಂಗೊಳಿಸಿತು. ಆಕರ್ಷಕ ಆಹಾರ್ಯದ ರಮಣೀಯತೆಯೊಂದಿಗೆ ಗಣಪತಿಯ ಗಂಭೀರಹೆಜ್ಜೆಗಳ ಹಾಸು-ಬೀಸು, ಸುಂದರಭಂಗಿಗಳ ವಿನ್ಯಾಸ ಸೆಳೆಯಿತು. ‘’ಅಧ್ಯಾಂಜಲಿ’’ಯಲ್ಲಿ ತ್ರಿದೇವಿಯರಾದ ಲಕ್ಷ್ಮೀ, ಪಾರ್ವತಿ ಮತ್ತು ಸರಸ್ವತಿಯರ ಕೃಪೆ ಬೇಡುತ್ತಾ, ಅವರ ಸೌಂದರ್ಯ, ಮಹಿಮೆಗಳನ್ನು ವರ್ಣಿಸುವ ಕೃತಿಯ ಸಾಕ್ಷಾತ್ಕಾರದಲ್ಲಿ ಕಲಾವಿದೆ ನೇತ್ರಾ, ತನ್ನ ಪ್ರಸನ್ನವದನ, ಕ್ಲಿಷ್ಟ ಜತಿಗಳ ಸುಂದರ ನಿರೂಪಣೆಯಲ್ಲಿ ಯಶಸ್ವಿಯಾದಳು.

ಷಣ್ಮುಖಪ್ರಿಯರಾಗದ ‘ಸುಬ್ರಹ್ಮಣ್ಯ ಕವಿತ್ವಂ’’ ಕಲಾವಿದೆಯರ ನಡುವಣ ಅನುಪಮ ಸಾಮರಸ್ಯ, ಲವಲವಿಕೆಯ ನೃತ್ಯಲಾಸ್ಯ, ಅರೆಮಂಡಿ, ಜಾಮಿತ್ರಿಯ ವಿನ್ಯಾಸ, ನಾಟಕೀಯ ಸನ್ನಿವೇಶಗಳ ನಿರ್ಮಾಣದಿಂದ ಸೊಗಸೆನಿಸಿತು. ’ಜತಿಸ್ವರ’’ದಲ್ಲಿ ಮೂಡಿಬಂದ ಅಂಗಶುದ್ಧಿ, ಅಡವುಗಳ ವಿಶಿಷ್ಟ ಜೋಡಣೆ, ಒಟ್ಟಾಗಿ ನಿನದಿಸಿದ ನೂಪುರ ಝೇಂಕಾರ ಗಮನಾರ್ಹವಾದವು. ಸಮೂಹನೃತ್ಯದಲ್ಲಿ ಒಂದೇ ಬಗೆಯಲ್ಲಿ ಹಸ್ತ ಮತ್ತು ಪಾದಗಳ ಚಲನೆಯ ಶಿಸ್ತನ್ನು ಸಾಧಿಸುವುದು ಕಷ್ಟ. ಒಟ್ಟಂದ ಪಡೆದ ಜತಿಸ್ವರಗಳ ಖಾಚಿತ್ಯ ಆನಂದದಾಯಕವಾಗಿತ್ತು. ಮುಂದಿನ ‘ಶಿವಕೃತಿ’ -ಮಹೇಶ್ವರನ ವರ್ಣನೆಯನ್ನು ಮನೋಹರವಾಗಿ ಸಾದರಪಡಿಸಿತು. ಚಿತ್ಸಭೆಯಲ್ಲಿ ಆನಂದ ನಟನವಾಡಿದ ಶಿವನ ರೌದ್ರಾವೇಶದ ಜತಿಗಳು, ಪ್ರಭುದ್ಧಾಭಿನಯ, ಪೋಷಕವಾಗಿ ನರ್ತಕಿಯರ ಮಂಡಿ ಅಡವುಗಳು, ಆಕಾಶಚಾರಿಗಳು, ರಭಸದ ಹೆಜ್ಜೆಗಳು, ಲೀಲಾಜಾಲದ ಲವಲವಿಕೆಯ ನರ್ತನ, ಬಿಲ್ಲಿನಂತೆ ಬಾಗುವ ತನುಗಳ ಲಾಲಿತ್ಯ, ಪಾತ್ರದಲ್ಲಿನ ತಾದಾತ್ಮ್ಯತೆ ಹೃದಯಸ್ಪರ್ಶಿಸಿತು.

ಅನಂತರ-‘ ಹರಿಗೆ ಗತಿ..’-ಪುರಂದರದಾಸರ ದೇವರನಾಮ ದೈವೀಕವಾಗಿ ಅಭಿನಯಗೊಳ್ಳುತ್ತ, ಮೋಹಿನಿ-ಭಸ್ಮಾಸುರ ಮತ್ತು ವಾಮನ-ಬಲಿ ಚಕ್ರವರ್ತಿಯ ಸಂಚಾರಿಗಳ ಚಿತ್ರಣದಲ್ಲಿ ಹರಿಯ ಶ್ರೇಷ್ಠತೆಯನ್ನು ಸಾರಿತು. ದಶಾವತಾರದ ಸಂಕ್ಷಿಪ್ತ ನಿರೂಪಣೆಯ ಜಾಣ್ಮೆ, ಮನೋಹರ ಭಂಗಿಗಳ ಕಾಣ್ಕೆ ಮನೋಜ್ಞವಾಗಿತ್ತು. ಮುಂದಿನ ‘’ಲಯ ಕವಿತೆ’’ಯನ್ನು ಅರ್ಥಪೂರ್ಣವಾಗಿ ನಿರೂಪಿಸಿದ ಗುರು ಪೂರ್ಣಿಮಾ ಅವರ ಸ್ಫುಟತ್ವ, ಸುಭಗತೆ, ಲಯವಾದ್ಯಗಳ ತಾಳದ ಝರಿಗೆ, ಮಿಂಚಿನ ಗತಿಗೆ, ಅನನ್ಯವಾಗಿ ನರ್ತಿಸಿದ ಕಲಾವಿದೆಯರ ನೃತ್ಯ ಸಾಮರ್ಥ್ಯಗಳಿಗೆ ಈ ಹೊಸಪ್ರಯೋಗ ನಿಜವಾಗಿಯೂ ಒರೆಗಲ್ಲಾಯಿತು. ಗಾಯನದಲ್ಲಿ ಭಾರತಿ ವೇಣುಗೋಪಾಲ್, ಮೃದಂಗ-ವಿ.ಆರ್.ಚಂದ್ರಶೇಖರ್, ಪಿಟೀಲು-ಮಧುಸೂದನ್, ಕೊಳಲು-ಪ್ರಮುಖ್ ಮತ್ತು ರಿದಂ ಪ್ಯಾಡ್- ಪ್ರಸನ್ನಕುಮಾರ್ ಹಿಮ್ಮೇಳ ಸುಂದರ ಪ್ರಭಾವಳಿ ಒದಗಿಸಿತ್ತು.

ಅಂತ್ಯದಲ್ಲಿ ಜನಪ್ರಿಯವಾಗಿರುವ ‘’ಕೆರೆಗೆ ಹಾರ’’ ಜಾನಪದ ನೃತ್ಯರೂಪಕ, ಕೋಲಾಟದವರ ಸೂತ್ರಧಾರಿಕೆಯಲ್ಲಿ ಸಾಗಿದ ನಾಟಕೀಯ ಸನ್ನಿವೇಶಗಳು ಪರಿಣಾಮಕಾರಿಯಾಗಿದ್ದವು. ಮಲ್ಲನಗೌಡ ಕಟ್ಟಿಸಿದ ಕೆರೆಯಲ್ಲಿ ನೀರು ಬಾರದುದಕ್ಕೆ, ಅವನ ಮುಗ್ಧ ಸೊಸೆ ಭಾಗೀರಥಿಯ ‘ಬಲಿದಾನ’ವಾದ ಕಥೆ ನಿಜಕ್ಕೂ ಹೃದಯಂಗಮವಾಗಿತ್ತು.