Image default
Dancer Profile

ಆಕರ್ಷಕ ನೃತ್ಯ ಸಂಯೋಜಕಿ- ಕಲಾವಿದೆ ರಶ್ಮಿ ವಿಜಯ್

ಪ್ರತಿ ಬಾರಿಯೂ ಹೊಸತನಕ್ಕೆ ತುಡಿಯುವ, ಆಕರ್ಷಕ ವಿನ್ಯಾಸಗಳಿಂದ ನೃತ್ಯ ಸಂಯೋಜಿಸಿ ಪ್ರೇಕ್ಷಕರನ್ನು ಸೆಳೆವ ಭರತನಾಟ್ಯ ಕಲಾವಿದೆ ರಶ್ಮಿ ವಿಜಯ್ ಹೊಸ ಪೀಳಿಗೆಯ ನಾಟ್ಯಗುರು ಕೂಡ. ‘ನೃತ್ಯೋ ರಕ್ಷತಿ ರಕ್ಷಿತಃ’ ಎಂಬ ನಂಬಿಕೆ-ಬದ್ಧತೆಗಳಿಂದ ಅಷ್ಟೇ ಪರಿಶ್ರಮದಿಂದ ಶಾಸ್ತ್ರೀಯ ಭರತನಾಟ್ಯ ಕಲೆಯ ಉತ್ಥಾನಕ್ಕೆ ಪ್ರಯತ್ನಿಸುತ್ತಿರುವ ರಶ್ಮಿ ರಂಗದ ಮೇಲೆ ತಮ್ಮ ಸುಮನೋಹರ ನೃತ್ಯದಿಂದ ಕಣ್ಮನ ಸೆಳೆಯುತ್ತಾರೆ. ಕರಣಗಳ ಬಗ್ಗೆ ನೃತ್ಯಗುರು ಶಮಾ ಕೃಷ್ಣ ಅವರಲ್ಲಿ ತರಬೇತಿಗೊಂಡಿರುವ ಇವರು ನಟುವಾಂಗದ ಬಗ್ಗೆ ವಿಶೇಷ ತರಬೇತಿಯನ್ನು ಡಿ.ವಿ.ಪ್ರಸನ್ನಕುಮಾರ್ ಅವರಿಂದ ಪಡೆದಿರುವುದರಿಂದ ಇವರ ಕಲಿಕೆಗೊಂದು ಭದ್ರಬುನಾದಿ ಒದಗಿದೆ ಎನ್ನಬಹುದು.

ಬೆಂಗಳೂರಿನವರೇ ಆದ ರಶ್ಮಿಯವರ ತಂದೆ ಗೋವಿಂದರಾಜ್ ಮತ್ತು ತಾಯಿ ಸರಳಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರು. ಮನೆಯಲ್ಲಿ ಸಂಗೀತದ ಒಲವುಳ್ಳ ಪರಿಸರವಿದ್ದುದರಿಂದ ರಶ್ಮಿ ಬಾಲ್ಯದಲ್ಲೇ ನೃತ್ಯಕ್ಕೆ ಮನಸೋತು, ಹೆತ್ತವರ ಒತ್ತಾಸೆಯಿಂದ ಏಳನೆಯ ವರ್ಷದ ಎಳವೆಯಲ್ಲೇ ನಾಟ್ಯಗುರು ಅನಿತಾರಾವ್ ಅವರ ಬಳಿ ತಂಜಾವೂರು ಶೈಲಿಯಲ್ಲಿ ಭರತನಾಟ್ಯ ಕಲಿಯಲಾರಂಭಿಸಿದರು. ಅನಂತರ ವಿದ್ವಾನ್. ರಮೇಶ್, ಡಾ.ಪ್ರಿಯಶ್ರೀ ರಾವ್ ಮತ್ತು ಡಾ. ದ್ವರಿತಾ ವಿಶ್ವನಾಥನ್ ಅವರ ಬಳಿ ಹೆಚ್ಚಿನ ತರಬೇತಿ ಪಡೆದುಕೊಂಡರು.

ಹೀಗಾಗಿ ಅವರ ನೃತ್ಯ ಕಲಿಕೆಗೊಂದು ವೈವಿಧ್ಯ ಆಯಾಮ ದೊರೆಯಲು ಸಾಧ್ಯವಾಯಿತು. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉಚ್ಚಾಂಕಗಳನ್ನು ಗಳಿಸಿ ತೇರ್ಗಡೆಯಾದರು. ಯಶಸ್ವಿಯಾಗಿ ‘ರಂಗಪ್ರವೇಶ’ವನ್ನೂ ನೆರವೇರಿಸಿಕೊಂಡು ವೇದಿಕೆಯ ಮೇಲೆ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡತೊಡಗಿದರು.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಂ ಪದವೀಧರೆಯಾಗಿರುವ ರಶ್ಮಿ , ಶಾಲಾ ಕಾಲೇಜಿನ ದಿನಗಳಿಂದಲೂ ಕ್ರೀಡೆಯೊಂದಿಗೆ, ನೃತ್ಯ-ಸಂಗೀತಾದಿಗಳಲ್ಲೂ ಮುಂದು. ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನ ಖಚಿತವಾಗಿತ್ತು. ಪದವಿಯನಂತರ ಕಠಿಣತರವಾದ ಸಿ.ಎ. ಓದಿರುವ ಇವರು ಕೆಲಕಾಲ ಉದ್ಯೋಗ ಮಾಡಿದರೂ ನೃತ್ಯದ ಸೆಳೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕಲೈ ಕಾವೇರಿ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿ ಗಳಿಸಿ ಇದೀಗ ಸ್ನಾತಕೋತ್ತರ ಪದವಿಗೆ ಅಭ್ಯಾಸ ನಡೆಸಿದ್ದಾರೆ. ಜೊತೆಗೆ ಭರತನಾಟ್ಯದ ಡಿಪ್ಲೋಮಾವನ್ನೂ ಪೂರೈಸಿದ್ದಾರೆ.

ಗುರುಗಳು ಹೇಳಿಕೊಟ್ಟುದರ ಜೊತೆ ತಮ್ಮ ಸೃಜನಾತ್ಮಕ ಪ್ರತಿಭೆಯಿಂದ ನೂತನ ರಚನೆಗಳಿಗೆ ನೃತ್ಯ ಸಂಯೋಜಿಸಿಕೊಂಡು ಅನೇಕ ನೃತ್ಯಪ್ರದರ್ಶನಗಳನ್ನು ನೀಡಿದ್ದೂ ಉಂಟು. ಅವರು ಭಾಗವಹಿಸಿದ ಅನೇಕ ಪ್ರತಿಷ್ಟಿತ ನೃತ್ಯೋತ್ಸಗಳಲ್ಲಿ ಪ್ರಮುಖವಾದವು- ಧೆಹಲಿಯ ಕೆಂಪೇಗೌಡ ಉತ್ಸವ, ಮೈಸೂರು ದಸರಾ ಉತ್ಸವ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ, ಹಂಪಿ ಉತ್ಸವ, ಇನ್ನೋವೇಟಿವ್ ಫಿಲಂ ಸಿಟಿಯ ದಸರಾ ಉತ್ಸವಗಳಲ್ಲದೆ, ನಾಡಿನ ಅನೇಕ ಮುಖ್ಯ ದೇವಾಲಯಗಳಲ್ಲಿ ನೃತ್ಯಾರ್ಪಣೆ ಸಲ್ಲಿಸಿರುವುದು ಇವರ ವಿಶೇಷತೆ. 2014 ರಲ್ಲಿ ಉತ್ತಮ ಭರತನಾಟ್ಯ ಕಲಾವಿದೆ ಎಂಬ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರವೂ ದೊರೆತಿರುವುದು ಇವರ ಅಗ್ಗಳಿಕೆ. ಜೊತೆಗೆ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಉತ್ಸವದಲ್ಲಿ ಪಾಲ್ಗೊಳ್ಳುವ ಭಾಗ್ಯ ಇವರದಾಯಿತು.  

ದೂರದರ್ಶನ ವಾಹಿನಿಯಲ್ಲಿ ಅನೇಕ ಬಾರಿ ನೃತ್ಯಪ್ರದರ್ಶನ ನೀಡಿರುವ ರಶ್ಮಿ, ತಮ್ಮ ಆಹ್ಲಾದಕರ ನೃತ್ಯದಿಂದ ವೇದಿಕೆಯ ಮೇಲೆ ಆನಂದ ಸೃಷ್ಟಿಸುತ್ತ ನೃತ್ತಾಭಿನಯಗಳಲ್ಲಿ ಸಮಾನ ಪ್ರಾವೀಣ್ಯ ಮೆರೆದು ಗಮನ ಸೆಳೆಯುತ್ತಾರೆ.

ಕಥಕ್ ಮತ್ತು ಸಮಕಾಲೀನ ನೃತ್ಯವನ್ನೂ ಬಲ್ಲ ರಶ್ಮಿ, ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮದೇ ಆದ ’ಸಪ್ತಾಂಗ ನಾಟ್ಯಕಲಾ ಅಕಾಡೆಮಿ’ ನೃತ್ಯಶಾಲೆಯನ್ನು ನಡೆಸುತ್ತ ಬೆಂಗಳೂರಿನಲ್ಲಿರುವ ತಮ್ಮ ನಾಲ್ಕುಶಾಖೆಗಳಲ್ಲಿ ನೂರಾರು ನೃತ್ಯಾಕಾಂಕ್ಷಿಗಳಿಗೆ ಉತ್ಸಾಹದಿಂದ ನೃತ್ಯ ಕಲಿಸುತ್ತಿರುವುದು ಇವರ ವೈಶಿಷ್ಟ್ಯ. ಆಧ್ಯಾತ್ಮಿಕತೆಯತ್ತ ಒಲಿದಿರುವ ರಶ್ಮಿ ನೃತ್ಯದಿಂದ ಸಂಬಂಧಗಳು ಉತ್ತಮಗೊಳ್ಳುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಚಾರದ ಗೀಳಿಗೆ ಬೀಳದ ಈ ಶುದ್ಧ ನೃತ್ಯಾಸಕ್ತಿಯ ಕಲಾವಿದೆ ಎಲೆಮರೆಯ ಕಾಯಂತೆ ವಾರದ ಏಳೂ ದಿನಗಳೂ ನೃತ್ಯ ಶಿಕ್ಷಣ ನೀಡುವುದರಲ್ಲೇ ತಲ್ಲೀನೆ. ಪತಿ ವಿಜೇಂದ್ರ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಪತ್ನಿಯ ಕಲಾಸಕ್ತಿಗೆ ಇಂಬು ನೀಡುತ್ತಿರುವ ಸಹೃದಯಿ. ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಮಗ ಚಿರಂತ್, ಕ್ರೀಡಾಸಕ್ತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾನೆ.

Related posts

ಉತ್ತಮ ನೃತ್ಯಕಲಾವಿದೆ ವಿದುಷಿ ಸ್ಮಿತಾ ಪ್ರಕಾಶ್ ಸಿರ್ಸಿ

YK Sandhya Sharma

ಅನುಪಮ ಬಾಲಪ್ರತಿಭೆ ಕಾರುಣ್ಯ ಜಿ. ವಸಿಷ್ಠ

YK Sandhya Sharma

ಉದಯೋನ್ಮುಖ ನೃತ್ಯ ಕಲಾವಿದೆ ಮೇಘನಾ ಮಯೂರ್

YK Sandhya Sharma

Leave a Comment

This site uses Akismet to reduce spam. Learn how your comment data is processed.