ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ತ್ರಿಮೂರ್ತಿಗಳಾದ ಶ್ಯಾಮಾಶಾಸ್ತ್ರಿ, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಹೃದಯಸ್ಪರ್ಶಿ ರಚನೆಗಳಿಗೆ ಮೂರ್ತರೂಪ ನೀಡುವ ಸಾರ್ಥಕ ಪ್ರಯೋಗ ಮಾಡಿದವರು ‘ನಟನಂ ಇನ್ಸ್ಟಿಟ್ಯೂ ಟ್ ಆಫ್ ಡಾನ್ಸ್’ ಸಂಸ್ಥೆಯ ನಿರ್ದೇಶಕಿ, ನಾಟ್ಯಗುರು ಡಾ. ರಕ್ಷಾ ಕಾರ್ತೀಕ್. ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಈ ಸಂಗೀತ ತ್ರಿವಳಿಗಳ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಿ ಯಶಸ್ವಿ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದರು.
ಭಕ್ತಿ ರಸಧಾರೆಗೆ ಪೂರಕವಾದ ವೇದಿಕೆಯಲ್ಲಿ ಶ್ರೀಕೃಷ್ಣನ ಮಂಗಳಮೂರ್ತಿ, ಮೇಲಿನಿಂದ ತೂಗಾಡುತ್ತಿದ್ದ ಘಂಟೆಗಳ ಗುಚ್ಛ , ಸಿಂಹ-ಶಾರ್ದೂಲಗಳ ದೇವಾಲಯದ ಹೆಬ್ಬಾಗಿಲು ದೈವೀಕತೆಯ ವಾತಾವರಣವನ್ನು ನಿರ್ಮಿಸಿತ್ತು. ಇಂಥ ಅನನ್ಯ ಆವರಣದೊಳಗೆ ಪ್ರತಿಭಾವಂತ ನಾಲ್ವರು ಕಲಾವಿದೆಯರ ಅದ್ಭುತ ನೃತ್ಯಕ್ಕೆ ಕಲಾರಸಿಕರು ಸಾಕ್ಷಿಯಾದರು. ಸಂದರ್ಭ- ಸಂಗೀತಲೋಕದ ಮೂವರು ದಿಗ್ಗಜರಿಗೆ ಸಲ್ಲಿಸಿದ ಭಕ್ತ್ಯಾರ್ಪಣೆಯ ಕಾರ್ಯಕ್ರಮ.
ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ಡಾ. ರಕ್ಷಾ ಭಾವಪೂರ್ಣ ಅಭಿನಯಕ್ಕೆ ಹೆಸರಾದವರು. ತಮ್ಮ ಶಿಷ್ಯರಲ್ಲೂ ಅಭಿನಯಕ್ಕೆ ಪ್ರಾಮುಖ್ಯ, ಗುಣಶಿಕ್ಷಣಕ್ಕೆ ಒತ್ತು ನೀಡುತ್ತ ಬಂದವರು. ನೂರಾರು ಶಿಷ್ಯರನ್ನು ತರಬೇತಿಗೊಳಿಸಿ ಉತ್ತಮ ಕಲಾಶಿಲ್ಪವನ್ನಾಗಿ ರೂಪಿಸಿದವರು. ಅವರ ಶಿಷ್ಯೆಯರಾದ ಅನಘಾ ಲಕ್ಷ್ಮೀ ಸಂಪತ್ಕುಮಾರ್, ದಿವ್ಯಾ ವಿಜಯಲಕ್ಷ್ಮೀ ಧರ್ಮರಾಜನ್, ಸಂಪದಾ ಹೊಸೂರ್ ಮತ್ತು ಸ್ಮೃತಿ ಶ್ರೀಧರ್ ಅಂದು ತುಂಬಿದ ಸಭೆಯಲ್ಲಿ ಭಾವಪೂರ್ಣವಾಗಿ ನರ್ತಿಸಿ ಜನಮನ ಗೆದ್ದರು. ಕಲಾವಿದೆಯರ ವಯಸ್ಸು ಸಣ್ಣದಾಗಿದ್ದರೂ ವೇದಿಕೆಯ ಮೇಲೆ ನುರಿತ ನರ್ತಕಿಯರಂತೆ ಲೀಲಾಜಾಲವಾಗಿ ನರ್ತಿಸಿದ್ದು ಅಂದಿನ ವಿಶೇಷವಾಗಿತ್ತು.
ಮೊದಲಿಗೆ ಸಂಪದಾ, ದೀಕ್ಷಿತರ ಸುಮೇರುಕೃತಿ ‘ಶ್ರೀ ಮಹಾಗಣಪತಿ’ಯನ್ನು ತಮ್ಮ ಅಂಗಶುದ್ಧ ಅಂಗಿಕಾಭಿನಯದಿಂದ ವಿನಾಯಕನ ವಿವಿಧ ಭಂಗಿಗಳನ್ನು ಸುಂದರವಾಗಿ ಚಿತ್ರಿಸಿದರು. ಖಚಿತ ಅಡವುಗಳು, ಅರೆಮಂಡಿ, ಚಾರಿಗಳು ಆಕರ್ಷಿಸಿದವು.
ಅನಂತರ- ದಿವ್ಯಾ, ಜಯಂತಶ್ರೀ ರಾಗದ ತ್ಯಾಗರಾಜರ ಕೃತಿಯ ಮೂಲಕ ‘ಮರುಗೇಲರಾ, ಓ ರಾಘವಾ’ ಎಂದು ಧೀಮಂತ ನಿಲುವಿನ ಮರ್ಯಾದಾ ಪುರುಷೋತ್ತಮನ ದಿವ್ಯ ವರ್ಣನೆ- ಮಹಿಮೆಗಳನ್ನು ಅಹಲ್ಯಾ ಶಾಪ ವಿಮೋಚನೆ ಮತ್ತು ಸೇತುಬಂಧದ ಸಂಚಾರಿಗಳ ಕಥಾನಕಗಳಲ್ಲಿ ಪರಿಣಾಮಕಾರಿಯಾದ ಅಭಿನಯದ ಮೂಲಕ ಅಚ್ಚುಕಟ್ಟಾಗಿ ನಿರೂಪಿಸಿದಳು. ಅನಂತರ ನಾಲ್ವರೂ ಸಮೂಹ ನೃತ್ಯದಲ್ಲಿ ಶ್ಯಾಮಾಶಾಸ್ತ್ರಿಗಳು ಕಂಡ (ಕಲ್ಯಾಣಿ ರಾಗ) ‘ಹಿಮಾದ್ರಿ ಸುತೆ’ ಯನ್ನು ‘ಪಾಹಿಮಾಂ’ ಎಂದು ಭಕ್ತಿಪುರಸ್ಸರವಾಗಿ ತನ್ಮಯತೆಯಿಂದ ಅರ್ಚಿಸಿ, ಕಲಾನೈಪುಣ್ಯದ ನೃತ್ಯ ನೈವೇದ್ಯವನ್ನು ಅರ್ಪಿಸಿದರು.
ಮುಂದೆ, ಅನಘಾ ಲಕ್ಷ್ಮೀ, ‘ನಾದ ತನುಮನಿಷಂ’ (ತ್ಯಾಗರಾಜರ ರಚನೆ) ಎಂದು ತನ್ನ ರಮ್ಯನೃತ್ತಗಳ ಝೇಂಕಾರದಿಂದ, ಸ್ಫುಟವಾದ ಆಂಗಿಕಗಳಿಂದ ಗಮನ ಸೆಳೆದಳು. ರಾವಣನ ಭಕ್ತಿಯ ಪರಾಕಾಷ್ಠೆಯನ್ನು, ಆತ ತನ್ನ ಕರುಳಬಳ್ಳಿಗಳನ್ನು ವೀಣೆಯ ತಂತಿಗಳನ್ನಾಗಿ ಮಾಡಿಕೊಂಡು ಸಾಮಗಾನ ನುಡಿಸಿ ಶಿವನನ್ನು ಒಲಿಸಿಕೊಂಡ ಘಟನೆಯನ್ನು ಹೃದಯಸ್ಪರ್ಶಿ ಸಂಚಾರಿಯ ಕಥಾನಕದಲ್ಲಿ ಎರಕ ಹುಯ್ದಳು.
ಅನಂತರ ಸ್ಮೃತಿ ಶ್ರೀಧರ್, ಮುತ್ತುಸ್ವಾಮಿ ದೀಕ್ಷಿತರ ಕಮಲಮನೋಹರಿರಾಗದ ‘ಕಂಜದಳಾಯತಾಕ್ಷಿ ಕಾಮಾಕ್ಷಿ’ ದೇವಿಯ ವೈಶಿಷ್ಟ್ಯ-ಮಹಿಮೆಯನ್ನು ತನ್ನ ಸುಮನೋಹರ ಆಂಗಿಕಾಭಿನಯ, ಆಕರ್ಷಕ ಭಂಗಿಗಳಿಂದ ಚಿತ್ರಿಸಿದಳು. ದುರ್ಗೆಯ ರುದ್ರಭಾವ ಮತ್ತು ಪ್ರಸನ್ನತೆಯ ಅನುಪಮ ವರ್ಚಸ್ಸು, ದೈವೀಕತೆಯಿಂದ ವಿಜ್ರುಂಭಿಸಿದ ಕಲಾವಿದೆಯ ಉತ್ತಾಮಾಭಿನಯ, ತನ್ಮಯತೆ ಕಣ್ತುಂಬಿತು.
ಪ್ರತಿಭಾವಂತ ನರ್ತಕಿಯರ ಮನೋಹರ ನೃತ್ಯ ಸಾಕ್ಷಾತ್ಕಾರಕ್ಕೆ, ಗುರು ಡಾ. ರಕ್ಷಾ ಅವರ ಸ್ಫುಟವಾದ ನಟುವಾಂಗ ಸ್ಫೂರ್ತಿ ನೀಡಿತು. ಮುಂದೆ, ಚತುರ್ಕನ್ಯೆಯರು ಪ್ರಸ್ತುತಿಪಡಿಸಿದ ಸುಮನೋಹರ ‘ಶ್ರೀವಿಶ್ವನಾಥಂ ಭಜೆ’,-ನವವಿನ್ಯಾಸದ ಶಕ್ತಿಶಾಲಿಯಾದ ಲೀಲಾಜಾಲ ನೃತ್ತಗಳು, ವಿವಿಧ ರಸಾಭಿವ್ಯಕ್ತಿಯ ಅಭಿನಯ ಕಲಾವಿದೆಯರ ಅಭ್ಯಾಸ ಮತ್ತು ಪರಿಶ್ರಮವನ್ನು ಅಭಿವ್ಯಕ್ತಿಸಿದವು. ಒಬ್ಬೊಬ್ಬರೂ ವಿಶ್ವನಾಥನ ವಿಶಿಷ್ಟ ಆಭರಣಗಳನ್ನು ಸುಂದರ ಅಭಿನಯದ ಮೂಲಕ ನಿರೂಪಿಸಿದರು. ಸಮೂಹ ನೃತ್ಯ- ‘ಎಂದರೋ ಮಹಾನುಭಾವಲು’ ಹದವಾದ ನೃತ್ತಾಭಿನಯದಲ್ಲಿ ಅನನ್ಯ ಅನುಭವ ನೀಡಿ, ಹೃದಯವನಾವರಿಸಿತು.
‘ಗಾನಮೂರ್ತಿ’ಯಾದ ಕೃಷ್ಣನ ಸ್ತುತಿಯಲ್ಲಿ ದಿವ್ಯಳ ಉತ್ತಮಾಭಿನಯ, ‘ಸಾಮಜವರಗಮನ’ -ಕೃತಿಯಲ್ಲಿ ಅನಘಳ ಕಾರುಣ್ಯಮೂರ್ತಿ ಶಬರಿಯ ಅದ್ಭುತ ಪಾತ್ರಚಿತ್ರಣ, ಸ್ಮೃತಿ ಮತ್ತು ಸಂಪದರ ಏಕವ್ಯಕ್ತಿ ನೃತ್ಯ ಪ್ರದರ್ಶನಗಳು ವಿಶಿಷ್ಟ ಅಸ್ಮಿತೆಯಿಂದ ಹೊರಹೊಮ್ಮಿದವು. ಬಾಲಸುಬ್ರಮಣ್ಯ ಶರ್ಮರ ಸುಶ್ರಾವ್ಯ ಗಾಯನ, ಜಯರಾಂ ಕಿಕ್ಕೇರಿಯವರ ಕಿವಿ ತುಂಬಿದ ವೇಣುನಾದ, ಶಂಕರರಾಮನ್ ಮಾಂತ್ರಿಕ ವೀಣೆ, ಶ್ರೀಹರಿ ರಂಗಸ್ವಾಮಿಯವರ ಲಯಶುದ್ಧತೆಯ ಮೃದಂಗವಾದನ, ಕಾರ್ತೀಕ್ ದಾತಾರ್ ಚಾಣಾಕ್ಯತೆಯ ರಿದಂಪ್ಯಾಡ್ ನೃತ್ಯ ಪ್ರಸ್ತುತಿಗೆ ಜೀವತುಂಬಿತು.