Image default
Dance Reviews

ಶಾಲಿವಾಹನ ಸುಂದರ ನೃತ್ಯರೂಪಕ

ಇತಿಹಾಸ ಪುರುಷ ಜನಪ್ರಿಯ ರಾಜಾ ಶಾಲಿವಾಹನನ ಬಗ್ಗೆ ಅನೇಕ ಐತಿಹ್ಯಗಳಿವೆ. ಅವನ ಜನಾನುರಾಗದ ಕಥೆಯನ್ನು ‘ಅಮರಚಿತ್ರ ಕಥೆ’ಯಿಂದ ಆರಿಸಿಕೊಂಡು ಖ್ಯಾತ ನಾಟ್ಯಗುರು ಪ್ರಸನ್ನ ಕಸ್ತೂರಿ (ಯು.ಎಸ್.ಎ.) ತಮ್ಮ ಪರಿಕಲ್ಪನೆಯಲ್ಲಿ  ಐತಿಹಾಸಿಕ ನೃತ್ಯ ನಾಟಕವಾಗಿ ರೂಪಿಸಿ, ”ಶಾಲಿವಾಹನ”ನನ್ನು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ವರ್ಣರಂಜಿತವಾಗಿ ಪ್ರದರ್ಶಿಸಿದರು. ಈ ಯಶಸ್ವೀ ನೃತ್ಯನಾಟಕದ ಸಾಹಿತ್ಯ-ಸಂಗೀತ ಮತ್ತು ನೃತ್ಯ ಸಂಯೋಜನೆ ವಿ.ಪ್ರಸನ್ನ ಕಸ್ತೂರಿ ಅವರದೇ. ವಿದ್ವಾನ್.ಪುಲಿಕೇಶೀ ಕಸ್ತೂರಿಯವರ ನೇತೃತ್ವದ ‘ಶಾಂತಲಾ ಆರ್ಟ್ಸ್ ಟ್ರಸ್ಟ್’ ಆಯೋಜಿಸಿದ್ದ ಈ ರೂಪಕವನ್ನು ‘ಸೂರ್ಯ ಪರ್ಫಾರ್ಮಿಂಗ್ ಆರ್ಟ್ಸ್’ ನಿರ್ಮಾಣ ಮಾಡಿತ್ತು.

ನಿರೂಪಣಾ ಧಾಟಿಯಲ್ಲಿ ಹಿನ್ನಲೆಯ ಹಾಡಿನ ಮೂಲಕ, ನೃತ್ಯಶೈಲಿಯಲ್ಲಿ, ನಾಟಕೀಯ ಸೆಳೆಮಿಂಚುಗಳೊಂದಿಗೆ  ಪ್ರಾಚೀನ ಇತಿಹಾಸ ಕಾಲದ, ಪ್ರಸಿದ್ಧ ಜನಾನುರಾಗಿಯಾಗಿದ್ದ ದೊರೆ ಶಾತವಾಹನನ ರೋಚಕ ಕಥೆಯನ್ನು ಹಲವಾರು ದೃಶ್ಯ-ಸನ್ನಿವೇಶಗಳ ಚಿತ್ರಣಗಳ ಮೂಲಕ ಅನಾವರಣಗೊಳಿಸಲಾಯಿತು.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಬಾಲಕ ‘ಶಾತಕರ್ಣಿ’ ತಾಯಿಯೊಂದಿಗೆ ಚಿಕ್ಕಪ್ಪಂದಿರ ಮನೆಯಲ್ಲಿ ಜೀತ ಮಾಡಿಕೊಂಡು, ಅನೇಕ ಬಗೆಯಲ್ಲಿ ಕಷ್ಟಗಳನ್ನು ಅನುಭವಿಸಿ, ಮುಂದೆ ಅರಣ್ಯದಲ್ಲಿ ವೃದ್ಧ ಕುಂಬಾರನ ಆಶ್ರಯ ಪಡೆದು, ಅವನಿಂದ ಕಸುಬು ಕಲಿತದ್ದಲ್ಲದೆ, ಅದರಲ್ಲಿ ಕಲಾನೈಪುಣ್ಯವನ್ನು ಸಾಧಿಸಿದ. ಶಾಲಿವೃಕ್ಷದ ಬೊಡ್ಡೆಯ ಮೇಲೆ ಕುಳಿತು ಅದನ್ನು ವಾಹನದಂತೆ ಭಾವಿಸಿ, ಗೆಳೆಯರೊಡನೆ ಆಡುತ್ತಿದ್ದ ಹುಡುಗ ಶಾತಕರ್ಣಿಗೆ ‘ಶಾಲಿವಾಹನ’ ಎಂಬ ಅಡ್ಡ ಹೆಸರು ಪ್ರಾಪ್ತವಾಯಿತು. ಅಲ್ಲಿಂದ ಮುಂದೆ ಜನ ಅವನನ್ನು ‘ಶಾಲಿವಾಹನ’ ಎಂದೇ ಕರೆದರು. ಒಳ್ಳೆಯ ನಡೆನುಡಿಗಳ ಯುವಕನಾಗಿ ಅವನು, ಬಹುಬೇಗ ತನ್ನ ಸದ್ಗುಣಗಳಿಂದ ಗೆಳೆಯರ ಸಮೂಹದ ಪ್ರೀತಿಯನ್ನು, ನಂಬಿಕೆಯನ್ನು ಗಳಿಸಿಕೊಂಡ, ಪರೋಪಕಾರದ ಗುಣದಿಂದ ಜನಸಾಮಾನ್ಯರ ಬೆಂಬಲ ಪಡೆದುಕೊಂಡ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಯತಿವರ್ಯರೊಬ್ಬರನ್ನುಅವನು ವಿನಮ್ರನಾಗಿ, ಗೌರವಾದರಗಳಿಂದ ಕಂಡು ಅವರ ಬಾಯಾರಿಕೆಯನ್ನು ನೀಗಿಸಿ ಅವರ ಆಶೀರ್ವಾದ ಗಳಿಸಿದ. ಅವನ ಕರುಣಾರ್ದ್ರ ಮನೋಭಾವ ಕಂಡು ಸಂತುಷ್ಟರಾದ ಅವರು ಅವನು ಮುಂದೆ ನಾಡಿನ ಪ್ರಭುವಾಗುವ ಯೋಗವಿದೆ ಎಂದು ತಿಳಿಸಿದರು.

ಅದಕ್ಕೆ ಪೂರಕವಾಗಿ ಅವನ ನಾಯಕತ್ವದ ಗುಣವೂ ಪ್ರತಿಬಿಂಬಿತವಾಗತೊಡಗಿತ್ತು. ಒಮ್ಮೆ, ಸಂತೆಯ ಜಾಗದಲ್ಲಿ ಎಲ್ಲ ವೃತ್ತಿಗಳವರೂ ವ್ಯಾಪಾರದಲ್ಲಿ ತೊಡಗಿದ್ದಾಗ, ಅನಾಮತ್ತು ದಾಳಿ-ದೌರ್ಜನ್ಯ ನಡೆಸಿದ ದುಷ್ಟರ ಪಡೆಯನ್ನು ಸದೆಬಡಿದು ಜನಸಾಮಾನ್ಯರ ನೆರವಿಗೆ ನಿಂತು ಅವರನ್ನು ಕಾಪಾಡಿದ. ಇನ್ನೊಮ್ಮೆ ಪ್ರಯಾಣಿಕರನ್ನು ಮುಖ್ಯರಸೆಯಲ್ಲಿ ಅಡ್ಡಗಟ್ಟಿ ಲೂಟಿ ಮಾಡುತ್ತಿದ್ದ ಢಕಾಯಿತರ ಗುಂಪಿನ ವಿರುದ್ಧ ಹೋರಾಡಿ ಅವರ ಒಡವೆ-ಸಂಪತ್ತನ್ನು ಸಂರಕ್ಷಿಸಿ ಅವರಿಗೆ ಮರಳಿ ಕೊಡಿಸಿದ. ಇಂಥ ಹಲವಾರು ಪರೋಪಕಾರ ಪ್ರಸಂಗಗಳಿಂದ ಅವನು ಬಹುಬೇಗ ಜನತೆಯ ವಿಶ್ವಾಸ-ಪ್ರೀತಿಗಳನ್ನು ಗಳಿಸಿ ಅವರೆಲ್ಲರ ಪ್ರೀತಿಯ ನಾಯಕನಾದ. ಆದರೆ ಇತ್ತ ಹೆಡೆ ತುಳಿಸಿಕೊಂಡು ಫಣಿಯಂತಾಗಿದ್ದ ಆ ಢಕಾಯಿತ ನಾಯಕ, ಇವನ ವಿರುದ್ಧ ರಾಜನಿಗೆ ಚಾಡಿ ಹೇಳಿ, ಇವನಿಂದ ನಿಮ್ಮ ರಾಜ್ಯಕ್ಕೆ ಅಪಾಯ, ಆವನು ಪರ್ಯಾಯ ರಾಜನಾಗುವ ಸಿದ್ಧತೆ ಮಾಡಿಕೊಂಡಿದ್ದಾನೆ ಎಂದು ರಾಜನ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ. ಇದರಿಂದ ಆತಂಕಗೊಂಡ ಕ್ರೋಧಿತ ರಾಜಾ ಇವನ ಮೇಲೆ ಯುದ್ಧ ಸಾರಿದ. ವೀರಾಗ್ರಣಿ ಶಾಲಿವಾಹನ, ದುಷ್ಟರಾಜನ ವಿರುದ್ಧ ಹೋರಾಡಿ ಜಯಶಾಲಿಯಾದ. ಅನಂತರ ಪ್ರಜೆಗಳ ಒತ್ತಾಯದಿಂದ ತಾನೇ ರಾಜ್ಯದ ಆಳ್ವಿಕೆ ವಹಿಸಿಕೊಂಡು ಸುಭದ್ರ ಆಡಳಿತ ನಡೆಸಿದ ಎಂಬುದು ಇತಿಹಾಸದ ಕಥೆ.

ಜಾನಪದ ಕಥೆಯ ಆಯಾಮದ ಈ ಸುಂದರ ಕಥೆಯನ್ನು ಪುಲಿಕೇಶಿ ಮತ್ತವರ ಶಿಷ್ಯತಂಡ ಉತ್ತಮ ಹಿನ್ನಲೆಯ ಸಂಗೀತದ ಮಾಧುರ್ಯದ ಹಾಡುಗಳಿಗೆ ಹೆಜ್ಜೆ ಹಾಕುತ್ತ ಕಥೆಯನ್ನು ನಡೆಸಿಕೊಂಡು ಹೋಯಿತು. ಪ್ರಧಾನವಾಗಿ ನೃತ್ಯಗಳ ಮಜಲಿನಲ್ಲೇ ಸಾಗಿದ ರೂಪಕ, ನಾಟಕದ ದೃಶ್ಯಗಳಲ್ಲಿ ಮಿಂಚಿತು. ಬಾಲಕ ಶಾತಕರ್ಣಿ ತಾಯಿಯೊಂದಿಗೆ ಬಂಧುಗಳ ಮನೆಯಲ್ಲಿ, ಹೊಲದಲ್ಲಿ ದುಡಿಯುವ ಚಿತ್ರಣವನ್ನು ಸೂಕ್ಷ್ಮ ವಿವರಗಳೊಂದಿಗೆ ಚಿತ್ರಿಸಲಾಯಿತು. ಚಿಕ್ಕಮ್ಮ-ಚಿಕ್ಕಪ್ಪಂದಿರ ಕ್ರೌರ್ಯ ನಡವಳಿಕೆಯನ್ನು ಪಾತ್ರಧಾರಿಗಳು ಸಮರ್ಥವಾಗಿ ಅಭಿವ್ಯಕ್ತಿಸಿದರು. ತಾಯಿ-ಮಗನ ದೈನ್ಯ ಪರಿಸ್ಥಿತಿ ಮನಕರಗುವಂತ್ತಿತ್ತು. ಮುಂದೆ ಕುಂಬಾರನ ಆಶ್ರಯ, ಮಣ್ಣು ಹದಗೊಳಿಸಿ ಮಡಕೆಗಳನ್ನು ಮಾಡುವುದು, ಇನ್ನಿತರ ದಿನನಿತ್ಯದ ಕಾಯಕ ಮತ್ತು ಯುವಕನಾಗಿ ಬೆಳೆದ ಶಾಲಿವಾಹನನ ವ್ಯಕ್ತಿತ್ವವನ್ನು ಹಂತಹಂತವಾಗಿ  ಸೂಕ್ತವಾಗಿ ಬೆಳೆಸಲಾಗಿತ್ತು. ಕಥೆಯ ಸಂಪೂರ್ಣ ಬೆಳವಣಿಗೆ, ಹಾಡು-ಕುಣಿತದ ಮೂಲಕ ಆಸಕ್ತಿಕರವಾಗಿ ಸಾಗಿತು. ಪ್ರತಿ ಸನ್ನಿವೇಶದಲ್ಲೂ ಸೂಕ್ತ ಪರಿಕರಗಳ ಬಳಕೆ, ಪಾತ್ರಗಳಿಗೆ ತಕ್ಕ ಸೂಕ್ತ- ಸಹಜ ವೇಷಭೂಷಣ, ಪ್ರಸಾಧನಗಳಿಂದೊಡಗೂಡಿದ ರೂಪಕ  ಕಲಾಭಿಮಾನಿಗಳನ್ನು ರಂಜಿಸಿತು. 

ಐತಿಹಾಸಿಕ ಸಂಗತಿಗಳನ್ನು ಕಲೆಹಾಕಿ, ಅಧ್ಯಯನ ಮಾಡಿ ಅದಕ್ಕೊಂದು ಚಿತ್ರಕಥೆಯ ರೂಪ ಕೊಟ್ಟು, ನೃತ್ಯ ಸಂಯೋಜಿಸಿ ಆಕರ್ಷಕ ರೀತಿಯಲ್ಲಿ ನೃತ್ಯರೂಪಕವಾಗಿಸುವುದು ಸುಲಭದ ಮಾತಲ್ಲ. ಕಥೆಯ ನಡೆಗೆ ತಕ್ಕಂತೆ ನೃತ್ಯ ಸಂಯೋಜಿಸಿ, ನರ್ತಕರಿಗೆ ಉತ್ತಮ ತರಬೇತಿ ನೀಡಿದ ಪ್ರಸನ್ನ ಹಾಗೂ ಪುಲಿಕೇಶೀ ಕಸ್ತೂರಿ ಸಹೋದರರ ಪರಿಶ್ರಮ ಸಾರ್ಥಕ, ಅಷ್ಟೇ ಸುತ್ಯಾರ್ಹ.  

Related posts

ರೋಶಿನಿಯ ಪ್ರಬುದ್ಧ ಅಭಿನಯ- ಸಮ್ಮೋಹಕ ನಾಟ್ಯ

YK Sandhya Sharma

ವಚನಗಳಲ್ಲಿ ನವರಸ –ನವಪ್ರಯೋಗದ ಸೊಗಸು

YK Sandhya Sharma

ಮನೋಜ್ಞ ಭಂಗಿ-ಅಭಿನಯದ  ಸುನೇತ್ರಳ  ಆಹ್ಲಾದಕರ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.