ನನ್ನೆದೆಯ ಕಾಡು
ವಿಶ್ವರೂಪದ ಬೀಡು
ಕಿವಿಗೊಟ್ಟು ಆಲಿಸು
ಹಕ್ಕಿಗಳ ಕಲರವ
ಪಿಸುದನಿಯ ಮೆಲು ಮಾತು
ದನಿ ಸತ್ತ ಮೌನ ಚಲನೆಯ ತುಟಿಗಳು
ಕಾಡ ಒಡಲಾಳದಲ್ಲಿ
ಸೋತ ನಿಟ್ಟುಸಿರ ಮರ್ಮರ
ಮೌನ ಮುಕ್ಕಿದ ಬಿಕ್ಕು
ಸೀಟಿ ಹೊಡೆವ ಸುಯ್ ಗಾಳಿ
ಕರುಳು ಹಿಂಡುವ ಬೇನೆ
ಒಳಗೊಳಗೇ ಕರಗಿ ಹೋಗುವ
ಸಿಂಹ-ಶಾರ್ದೂಲಗಳ ಘರ್ಜನೆ
ಕೆಂಡದುರಿಗಣ್ಣು ಉರಿದುರಿದು
ಆರುವ ಬೂದಿ
ಸ್ಫೋಟಿಸಲು ಸೋತ
ಅಸಹಾಯ ಹೆಳವತನ
ನನ್ನೆದೆಯ ದಟ್ಟಾರಣ್ಯದಿ
ಒಂದೇಸಮ ಸುರಿವ ಜಿಟಿ ಜಿಟಿ ಮಳೆ
ಸಿಕ್ಕು ಹೆಣೆದ ರಕ್ಕಸಗೊಂಬೆಗಳ ನರ್ತನ
ನನ್ನೆದೆಯ ನಂಜು ಕಾಡಲ್ಲಿ
ಹೆಪ್ಪು-ಹಾವಸೆ; ಮಂಜುಗಡ್ಡೆಯ
ಜೋಭದ್ರ ಥಂಡಿ
ಅದರೊಡಲಲೇ ನಿಗಿನಿಗಿಯುರಿವ
ಕೆಂಡ ಕಾಡ್ಗಿಚ್ಚು
ನನ್ನೆದೆಯ ಪರ್ವತ ನಿಗೂಢ-ನಿಶಬ್ದ
ಕಣ್ತಂಪಿನ ಹಸಿರು ಮುಸುಕಲಿ
ಹಲ್ಲು ಕಿತ್ತ ಸರ್ಪಗಳ ಮುಲುಕು
ಪ್ರತಿ ಆಘಾತ ಪೆಟ್ಟಿಗೂ ಜರ್ಜರಿತ
ತಗ್ಗಾದ ಕಂದರದಿ ಬಸಿವ
ಕಣ್ಣೀರ ಝರಿಗಳು
ಹರಿದು ಜೂಲಾದ
ಕನಸುಗಳ ದಾರಿಗುಂಟ
ನನ್ನೆದೆಯ ಅಂತರಗಂಗೆಯ
ತಿಳಿಗೊಳದಾಳದಲಿ ತಿರಿತಿರಿವ ಸುಳಿ
ರೋಷಾವಿಷ್ಟದ ಚಕ್ರತೀರ್ಥ
ಮೇಲ್ಮೈ ಯಲಿ ಪಲ್ಲವಿಸಿದ
ನಗುವ ಕೆಂದಾವರೆ ಜಾತ್ರೆ
ಜಗಕೆಸೆವ ಅದ್ಭುತ ವಿಸ್ಮಯ
ಈ ಚೆಂದದ ಕಾನು-ಕೊಳ-ಪರ್ವತಗಳೆಲ್ಲ
ರಮ್ಯನೋಟ-ರಸಾಸ್ವಾದ ಚಪ್ಪರಿಕೆ
ಒಳಗೇ ಮುಲುಗುವ
ಕುದ್ದು ಕರುಕಲಾದ ಮನ
ಜ್ವಾಲಾಮುಖಿಯೊಡಲ ಬಿಸಿಯುಸಿರ
ಧಾರಾವಾಹಿಯ ಗಾನ
ಮನ್ವಂತರದಿ ಹಾಡಿಕೊಂಡೇ ಬಂದ
ಲಯಬದ್ಧ ಚೆಂದದ ಕವನ