ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ ರಾಧಾ-ಕೃಷ್ಣರ ಪ್ರೇಮಲೋಕವನ್ನು ವಿವಿಧ ಉಪಮೆ, ರಸಾಲಂಕಾರಗಳಿಂದ ಅನಾವರಣಗೊಳಿಸುವ `ಗೀತಗೋವಿಂದ’ ನೃತ್ಯ ಪ್ರಪಂಚಕ್ಕೊಂದು ದೊಡ್ಡ ಕೊಡುಗೆ. ರಾಧಾ-ಕೃಷ್ಣರ ಪ್ರೇಮದ ಔನ್ನತ್ಯ, ಆಧ್ಯಾತ್ಮಿಕ ಭಾವದೊಂದಿಗೆ ಮಿಳಿತವಾಗಿದ್ದು, ಕವಿಯ ಅಪರಿಮಿತ ಭಕ್ತಿಯ ಅತೀಂದ್ರಿಯ ಅನುಭವದ ರಸಪಾಕ ಇದರಲ್ಲಿ ಕೆನೆಗಟ್ಟಿದೆ.
ಹನ್ನೆರಡು ಸರ್ಗಗಳನ್ನುಳ್ಳ `ಗೀತಗೋವಿಂದ ‘ ಅತೀ ಸುಂದರ ಆಲಂಕಾರಿಕ ಸಾಹಿತ್ಯವನ್ನು ಹೊಂದಿದ್ದು, ಅನುಪ್ರಾಸಗಳಿಂದ ಲಯಪೂರ್ಣವಾಗಿದ್ದು, ಸಂಗೀತ ಮತ್ತು ನೃತ್ಯ ಪ್ರಸ್ತುತಿಗೆ ಹೇಳಿಮಾಡಿಸಿದಂತಿದೆ. ಇಪ್ಪತ್ನಾಲ್ಕು ವಿಭಾಗಗಳಲ್ಲಿರುವ ಎಂಟುಸಾಲುಗಳ ಗೀತೆಯು `ಅಷ್ಟಪದಿ’ ಎಂದೇ ಪ್ರಸಿದ್ಧ. ರಾಧಾ-ಕೃಷ್ಣರ ಪ್ರೇಮ ಸಲ್ಲಾಪ, ವಿರಹ, ಅಗಲಿಕೆ. ಪುನರ್ಮಿಲನದ ವಿವಿಧ ಘಟ್ಟಗಳನ್ನು ರಸವತ್ತಾಗಿ ಬಣ್ಣಿಸುವ ಗೀತೆಗಳ ಸೌಂದರ್ಯವನ್ನು ಆಸ್ವಾದಿಸಿಯೇ ತಿಳಿಯಬೇಕು. ಭಾವತುಂಬಿ ಹಾಡಲು, ಮನದುಂಬಿ ನರ್ತಿಸಲು ಅನುರೂಪವಾಗಿರುವುದರಿಂದ `ಅಷ್ಟಪದಿಗಳು’ ನೃತ್ಯದ ರಸದೌತಣ !! ಎಷ್ಟು ಬಾರಿ ಪ್ರಸ್ತುತವಾದರೂ ಬೇಸರ, ಚರ್ವಿತ ಚರ್ವಣವೆನಿಸದೆ `ನವ ನವೋನ್ಮೇಷಶಾಲಿನಿ’ ಯಾಗಿ ಮನೋಲ್ಲಾಸ ನೀಡುತ್ತದೆ. ಇಂಥದೊಂದು, `ಕಾವ್ಯರಸ’ ಎನ್ನುವ ಸುಂದರ ಕಾರ್ಯಕ್ರಮವನ್ನು ವೀಕ್ಷಿಸುವ ಸದವಕಾಶವನ್ನು `ನೃತ್ಯಾಂತರ’ ತಂಡ ಇತ್ತೀಚಿಗೆ `ಸೇವಾಸದನ’ದಲ್ಲಿ ಕಲ್ಪಿಸಿತ್ತು.
ಆಗಾಗ ನಗರದ ಕಲಾರಸಿಕರಿಗೆ ವಿಶಿಷ್ಟ ಪರಿಕಲ್ಪನೆಯ ವಿಷಯಾಧಾರಿತ ಶಾಸ್ತ್ರಿಯ ನೃತ್ಯಸಂಭ್ರಮವನ್ನು ಹಂಚುವ ಕಾಯಕವನ್ನು` ನೃತ್ಯಾಂತರ’ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯಾರ್ಹ.
ರಾಧಾ-ಕೃಷ್ಣರ ಪ್ರೇಮದಾಟದ ಎಲ್ಲ ಬಗೆಗಳ ರಸಾನಂದವೂ ಭರತನಾಟ್ಯ, ಒಡಿಸ್ಸಿ ಮತ್ತು ಕಥಕ್ ನೃತ್ಯಶೈಲಿಯಲ್ಲಿ ಉಣಬಡಿಸಲಾಯಿತು. ಪ್ರೇಮಿಗಳ ಪ್ರೀತ್ಯಾರ್ಪಣೆ , ಕೋಪ-ಅನುತಾಪ, ಅಗಲುವಿಕೆ, ,ವಿರಹವೇದನೆ, ಸೇರುವ ಹಂಬಲ,ಪಶ್ಚಾತ್ತಾಪ ಮತ್ತು ಪುನರ್ಮಿಲನದಲ್ಲಿ ಸುಖಾಂತ್ಯವಾಗುವ ಅನುಕ್ರಮದಲ್ಲಿ ಅಷ್ಟಪದಿಗಳನ್ನು ಎಂಟು ಜನ ಕಲಾವಿದರು ಆಯ್ಕೆ ಮಾಡಿಕೊಂಡಿದ್ದರು.
`ಪ್ರಿಯೆ ಚಾರುಶೀಲೆ…’ ಎಂದು ಕುಪಿತ ರಾಧೆಯನ್ನು ಗೆಲ್ಲುವ ಪ್ರಯತ್ನವನ್ನು ಭರತನಾಟ್ಯ ಶೈಲಿಯಲ್ಲಿ ಸಾಕಾರಗೊಳಿಸಿದವರು ಮಿಥುನ್ ಶ್ಯಾಮ್. ರಾಧೆಯ ಪವಿತ್ರ ಪ್ರೇಮವನ್ನು ಮನಗಂಡು ಹಿಂತಿರುಗಿರುವ ಕೃಷ್ಣ ಅವಳನ್ನು ಉಪಮಾತೀತವಾಗಿ ವರ್ಣಿಸುತ್ತ, ಒಲಿಸಿಕೊಳ್ಳುವ ಪ್ರಯತ್ನ ಮಾಡುವುದನ್ನು ಕಲಾವಿದ ಪರಿಣಾಮಕಾರಿಯಾಗಿ ಮೂಡಿಸಿದರು.
ಭರತನಾಟ್ಯ ನೃತ್ಯಪಟು ಪಾರ್ಶ್ವನಾಥ ಉಪಾಧ್ಯೆ, `ಮಾಮ್ಯಂ ಚಲಿತ ವಿಲೋಕ್ಯ’- ಎಂದು ಯಮುನಾ ನದಿಯ ತೀರದ ಕುಟೀರದಲ್ಲಿ, ಅಗಲಿದ ರಾಧೆಗಾಗಿ ವಿಲಪಿಸುತ್ತ ಪಶ್ಚಾತ್ತಾಪ ಪಡುವ ದೃಶ್ಯವನ್ನು ತಮ್ಮ ಆರ್ದ್ರ- ಭಾವತುಂಬಿದ ಅಭಿನಯದಿಂದ, ಪರಿಣಾಮಕಾರಿಯಾದ ಅಂಗಿಕಾಭಿನಯದಿಂದ ಹೃದಯಂಗಮವಾಗಿ ನಿರೂಪಿಸಿದರು. ಕಲಾವಿದರ ಖಚಿತ ಹಸ್ತಚಲನೆಯ ಸುಂದರ ಅಭಿವ್ಯಕ್ತಿ, ಪಾದರಸದ ಚುರುಕಿನ ಪದಗತಿಗಳಿಂದ, ಅಭಿನಯ ಪ್ರೌಢಿಮೆಯಿಂದ ಮನಮುಟ್ಟಿದರು.
`ನಿಂದತಿ ಚಂದನಂ ‘ – ಎಂದು ರಾಧೆಯ ಸಖಿ, ಕೃಷ್ಣನಿಗೆ, ಅವನಿಂದ ದೂರಾದ ಪ್ರಿಯತಮೆ ರಾಧೆಯ ವಿರಹದ ಸಂಕಟವನ್ನು ಬಣ್ಣಿಸುತ್ತಿದ್ದಾಳೆ. ಚಂದನದ ಸುವಾಸನೆ, ಬೆಳದಿಂಗಳ ತಂಪು ಕೂಡ ರಾಧಳಿಗೆ ಅಹಿತವಾಗಿ ಶಪಿಸುತ್ತಿದ್ದಾಳೆ. ಮದನನ ಶರಾಘಾತದಿಂದ ತತ್ತರಿಸಿ ನಿನಗಾಗಿ ಹಾತೊರೆಯುತ್ತಿದ್ದಾಳೆ ಎಂಬುದಾಗಿ ಅವನಿಗೆ ಮನವರಿಕೆ ಮಾಡಿಕೊಡುವ ಸಾಲುಗಳಿಗೆ ಭರತನಾಟ್ಯ ಕಲಾವಿದೆ ಅನುರಾಧಾ ವಿಕ್ರಾಂತ್ ನರ್ತಿಸಿ, ತಮ್ಮ ಸೂಕ್ಷ್ಮಾಭಿನಯದಲ್ಲಿ ಕಟ್ಟಿಕೊಟ್ಟರು. ರಾಧಳ ಮನಸ್ಸಿನ ತುಮುಲಗಳನ್ನು ತನ್ಮಯತೆಯಿಂದ ಅಭಿವ್ಯಕ್ತಿಸಿದರು.
`ರಮತೆ ಯಮುನಾ ಪುಲಿನವನೆ’ ಎಂಬುದಾಗಿ ರಾಧೆ, ಕೃಷ್ಣನ ಪರಸ್ತ್ರೀ ವ್ಯಾಮೋಹ, ಮತ್ತವನ ಪರಿಪರಿಯ ರಾಸಲೀಲೆಯಾಟವನ್ನು ನೆನೆಯುತ್ತ ಯಮುನಾ ನದಿಯ ದಂಡೆಯಮೇಲೆ ಕುಳಿತು ದುಃಖಿಸುತ್ತಿದ್ದಾಳೆ.ಈ ಒಡಲ ಬೇಗುದಿಯನ್ನು, ಒಡಿಸ್ಸಿ ನೃತ್ಯದಲ್ಲಿ ಪರಿಣತಿ ಸಾಧಿಸಿರುವ ಮಧುಲಿತಾ ಮಹಾಪಾತ್ರ, ತಮ್ಮ ನಾಜೂಕಾದ ಶರೀರವನ್ನು ತ್ರಿಭಂಗಿಯಲ್ಲಿ ಕೊಂಕಿಸಿ, ಮುಖದಲ್ಲಿ ನೋವು, ಕಣ್ಣಲ್ಲಿ ಭಾಷ್ಪ ತುಳುಕಿಸಿ ಸಹಜ ಅಭಿನಯವನ್ನು ಹೃದಯಸ್ಪರ್ಶಿಯಾಗಿ ತೆರೆದಿಟ್ಟರು. ಕೃಷ್ಣನ ಪ್ರೇಮಸಖ್ಯ ನೆನಪಿಸಿಕೊಂಡು, ಅವನ ಪ್ರೀತಿ ನಿರೀಕ್ಷೆಯಲ್ಲಿ ತೇಲುವ, ಅದು ಹುಸಿಯಾದಾಗ ನಿರಾಶೆಯಲ್ಲಿ ಮುಳುಗುವ ವಿಷಾದಭಾವವನ್ನು ನರ್ತಕಿ ತಮ್ಮ ಮನೋಹರ-ಕೋಮಲ ಆಂಗಿಕಾಭಿನಯದಿಂದ ಅಭಿವ್ಯಕ್ತಿಸಿದರು.
ಇಡೀ ರಾತ್ರಿ ಕೃಷ್ಣನ ಹಾದಿ ಕಾದು ಸೋತ ರಾಧೆ, ಬೆಳಗ್ಗೆ ಅವನು ಬಂದಾಗ, ರಾತ್ರಿಯಿಡೀ ನಿದ್ದೆಗೆಟ್ಟ ಅವನ ಕೆಂಪು ಕಣ್ಣುಗಳು, ದೇಹದ ಮೇಲಿನ ಕಾಮದಾಟದ ಗುರುತುಗಳನ್ನು ಕಂಡು ಕುಪಿತಳಾಗಿ `ಯಾಹಿ ಮಾಧವ…ಯಾಹಿ ಕೇಶವ ’ ಎಂದವನನ್ನು ಹೊರಗಟ್ಟುವ ದುಃಖಮಿಶ್ರಿತ ಕ್ರೋಧಭಾವನೆಯನ್ನು ಸಮರ್ಥವಾಗಿ ಮಡುಗಟ್ಟಿಸಿದವರು ಹಿರಿಯ ಕಲಾವಿದೆ, ಒಡಿಸ್ಸಿ ನಿಪುಣೆ ಶರ್ಮಿಳಾ ಮುಖರ್ಜಿ. ಅವರ ಭಾವ ಪರವಶತೆ,ತನ್ಮಯತೆ ಅಪೂರ್ವವಾಗಿತ್ತು.
`ವಿರಚಿತ ಚಾಟು ವಚನ’- ಎಂಬ ಅಷ್ಟಪದಿಯನ್ನು ಮೋಹಕವಾಗಿ ಪ್ರಸ್ತುತಿಗೊಳಿಸಿದವರು ಒಡಿಸ್ಸಿ ಕಲಾವಿದೆ ಅಂಜಲಿ ರಾಜ್ ಅರಸ್. ನಿನಗಾಗಿ ತಹತಹಿಸುತ್ತಿರುವ ನಿನ್ನಿನಿಯ ಕೃಷ್ಣನ ಬಳಿ ಮರಳೆಂದು ಸಖಿ, ರಾಧೆಯನ್ನು ಒತ್ತಾಯಿಸುತ್ತಾ, ನಿನ್ನ ಹುಸಿಗೋಪ, ಬಿಂಕವನ್ನು ಬಿಟ್ಟು ಅವನ ನಿಜವಾದ ಪ್ರೀತಿಯನ್ನು ಗುರುತಿಸು ಎಂಬುದಾಗಿ ಸಾಂತ್ವನ ಹೇಳುವ ಕಥಾನಕವನ್ನು ನಿರೂಪಿಸಿದ ಕಲಾವಿದೆಯ ಅಭಿನಯ ಆಹ್ಲಾದತೆಯಿಂದ ತುಂಬಿತ್ತು.
ವಿರಹತಪ್ತ ರಾಧೆಯ ಕೋಪವನ್ನು ಶಮನಗೊಳಿಸಿ, ಅವಳಲ್ಲಿ ಕ್ಷಮೆ ಯಾಚಿಸುತ್ತ ತನ್ನ ಬಾಹುಬಂಧನದಲ್ಲಿ ಬಂಧಿಸಿ, ತನ್ನ ಅನನ್ಯ ಪ್ರೀತಿಧಾರೆಯನ್ನು ಹರಿಸುವ ಸುಖಾಂತ್ಯ ತೋರುವ ಘಟನೆಯನ್ನು ಸ್ಮಿತಾ ಶ್ರೀನಿವಾಸನ್ ಕಥಕ್ ನೃತ್ಯ ಶೈಲಿಯಲ್ಲಿ ಅಭಿನಯಿಸಿದರು. ರಾಧಾ- ಕೃಷ್ಣರ ಪುನರ್ಮಿಲನದ ಸಂತಸಕರ ದೃಶ್ಯವನ್ನು, ಅವರ ದೀರ್ಘ ಅಗಲಿಕೆಯ ನೋವಿನ ಉಪಶಮನವನ್ನು ಮಾಡುವ ಮಧುರ ಸನ್ನಿವೇಶವನ್ನು ಕವಿತಾ ರಾಮು, ಭರತನಾಟ್ಯದ ತಮ್ಮ ಮನೋಜ್ಞ ನೃತ್ಯದಲ್ಲಿ ಅನಾವರಣಗೊಳಿಸಿದರು.