ನೃತ್ಯವೆಂದರೆ ಎಷ್ಟು ಪ್ರಾಣ ಎಂದರೆ ಈ ಹುಡುಗ ದೇವಶಿಶ್ ಪಟ್ನಾಯಕ್ , ಮೂರುವರುಷದವನಿದ್ದಾಗಲೇ ಹಾಡು ಕಿವಿಯ ಮೇಲೆ ಬಿದ್ದರೆ ಸಾಕು, ಅಲ್ಲೇ ಕುಣಿಯಲಾರಂಭಿಸುತ್ತಿದ್ದನಂತೆ. ಅದು ಮದುವೆ ಮೆರವಣಿಗೆಯಾಗಿರಲಿ ಅಥವಾ ದೇವರ ರಥೋತ್ಸವವಾಗಿರಲಿ ತನ್ಮಯನಾಗಿ ಮೈಮರೆತು ಹೆಜ್ಜೆ ಹಾಕುತ್ತಿದ್ದನಂತೆ. ಅದೂ ತುಂಬಾ ಸುಂದರ ಆಂಗಿಕಾಭಿನಯ ತೋರುತ್ತ. ಅವನಲ್ಲಿದ್ದ ಕಲೆಯನ್ನು ಗುರುತಿಸಿ ಮೆಚ್ಚಿದ ರಸಿಕರು ಅವನಿಗೆ ಬಹುಮಾನವಾಗಿ ಹಣವನ್ನು ನೀಡುತ್ತಿದ್ದರಂತೆ. ಹೀಗೆ ಸಂಗ್ರಹವಾದ ಹಣದಿಂದ ಮನೆಯವರಿಗೆ ಗೊತ್ತಾಗದಂತೆ ಒಡಿಸ್ಸಿ ನೃತ್ಯ ಕಲಿಸುವ ಗುರುಗಳಿಗೆ ಶುಲ್ಕ ಕಟ್ಟಿ ಗುಟ್ಟಾಗಿ ನೃತ್ಯ ಕಲಿಯುತ್ತಿದ್ದನಂತೆ. ಹೇಗೋ ವಿಷಯ ಗೊತ್ತಾಗಿ ತಂದೆ ದಿವ್ಯಸಿಂಗ್ ಪಟ್ನಾಯಕ್, ಇರುವ ಒಬ್ಬನೇ ಮಗ ಚೆನ್ನಾಗಿ ಓದಿ, ಪ್ರತಿಷ್ಟಿತ ಉದ್ಯೋಗ ಹಿಡಿದು ಮುಂದೆಬರಬೇಕೆಂದು ಬಯಸಿದವರಿಗೆ ದೊಡ್ಡ ಆಘಾತ!…ಅವನನ್ನು ಕೋಣೆಯಲ್ಲಿ ಕೂಡಿ ಹಾಕಿ, ಅವನೆಂದೂ ನೃತ್ಯ ಎನ್ನುವ ಶಬ್ದವನ್ನು ಉಸುರಬಾರದೆಂದು ಆಜ್ಞೆ ಮಾಡಿದರು. ನೃತ್ಯ ಕಲಿಕೆಯ ಬಗ್ಗೆ ದೊಡ್ಡ ಕನಸು ಕಂಡಿದ್ದ ಏಳರ ಬಾಲಕ, ನಿರಾಶೆಯಿಂದ ಕುಸಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ. ಆಗ ಗಾಬರಿಯಾದ ತಾಯಿ ಸಂಧ್ಯಾರಾಣಿ ಗಂಡನನ್ನು ಒಪ್ಪಿಸಿ ತಾವೇ ಮುಂದೆ ನಿಂತು ಗುರು ಕಾಶೀನಾಥ್ ರಾವುಲ್ ಬಳಿ, ಒಡಿಸ್ಸಿ ನೃತ್ಯ ಕಲಿಯಲು ಮಗನನ್ನು ಸೇರಿಸಿದರು. ಅನಂತರ ದುರ್ಗಾಚರಣ್ ರಣವೀರ್ ಬಳಿ ನಾಟ್ಯಶಿಕ್ಷಣ ಮುಂದುವರಿಯಿತು.
ಒಡಿಸ್ಸಿ ನೃತ್ಯದ ಬಗ್ಗೆ ಅಪಾರ ಒಲವುಳ್ಳ ದೇವಶಿಶ್, ತಪಸ್ಸಿನಂತೆ ಸತತ ಇಪ್ಪತ್ತೈದು ವರ್ಷಗಳ ಕಠಿಣ ಶ್ರಮ, ಬದ್ಧತೆಗಳಿಂದ ನೃತ್ಯಾಭ್ಯಾಸ ಮಾಡಿ, ಇಂದು ಖ್ಯಾತ ಒಡಿಸ್ಸಿ ನೃತ್ಯಕಲಾವಿದನಾಗಿ ರೂಪುಗೊಂಡಿದ್ದಾರೆ.
ಒರಿಸ್ಸಾದ ಭುವನೇಶ್ವರದಲ್ಲಿ ಹುಟ್ಟಿ ಬೆಳೆದು, ರೂರ್ಕೆಲಾದಲ್ಲಿ ‘ದೇವ ನೃತ್ಯಂ ಡಾನ್ಸ್ ಸ್ಟುಡಿಯೋ’ ಮುಖ್ಯನೃತ್ಯಶಾಲೆಯನ್ನು ಕಳೆದ ಹತ್ತುವರುಷಗಳಿಂದ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ದೇವ್, ಅದರೊಡನೆ ಇಲ್ಲಿ ಐದು ಸ್ಥಳಗಳಲ್ಲಿ ಶಾಖೆಗಳನ್ನು ತೆರೆದಿದ್ದಾರೆ. ಕೇರಳದ ಗುರುವಾಯೂರಿನಲ್ಲೂ ಅನೇಕರಿಗೆ ಒಡಿಸ್ಸಿ ನೃತ್ಯಕಲಿಸುವ ಗುರುವಾಗಿ ಬೆಳೆದಿದ್ದಾರೆ. ನೃತ್ಯ ಸಂಯೋಜಕರಾಗಿ ಅನೇಕ ನೃತ್ಯನಾಟಕಗಳಿಗೆ ನೃತ್ಯಸಂಯೋಜಿಸಿದ್ದಾರೆ.
ಬಿ.ಎ.ಪದವೀಧರರಾಗಿ ,ಪಿ.ಜಿ.ಡಿ.ಸಿ.ಎ.(ಕಂಪ್ಯೂಟರ್ ) ಮುಗಿಸಿ, ಚಂಡಿಘಡದ ‘ಪ್ರಾಚೀನ ಕಲಾ ಕೇಂದ್ರ’ದಿಂದ ‘ನೃತ್ಯ ಭಾಸ್ಕರ’ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಅಗ್ಗಳಿಕೆ ದೇವ್ ಅವರದು. ಒಡಿಸ್ಸಿ ನೃತ್ಯಾಧ್ಯಯನಕ್ಕಾಗಿ ಜ್ಯೂನಿಯರ್ ಫೆಲೋಶಿಪ್ ಮತ್ತು ನವದೆಹಲಿಯ ಸಂಸ್ಕೃತಿ ಇಲಾಖೆ (ಹೆಚ್.ಆರ್.ಡಿ.)ಯಿಂದ ‘ಗುರು ಶಿಷ್ಯ ಪರಂಪರೆ’ಗಾಗಿ ಸೀನಿಯರ್ ಸ್ಕಾಲರ್ಷಿಪ್ ಪಡೆದ ಹೆಮ್ಮೆಯೂ ಇವರದಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ‘ಫೆಸ್ಟಿವಲ್ ಆಫ್ ಇಂಡಿಯಾ’ ಮತ್ತು ಐ.ಸಿ.ಸಿ.ಆರ್ ನಲ್ಲಿ ಮಾನ್ಯತೆ ಮತ್ತು ದೆಹಲಿಯ ದೂರದರ್ಶನ ಕೇಂದ್ರದ ‘ಎ’ ಗ್ರೇಡ್ ಕಲಾವಿದರೂ ಕೂಡ.
ಇಂದು ಹೆಸರಾಂತ ಒಡಿಸ್ಸಿ ಕಲಾವಿದರಾಗಿ ದೇವ್, ವಿಶ್ವದಾದ್ಯಂತ ಪರಿಚಿತರು. ಸುಮನೋಹರ ನೃತ್ಯ, ಪರಿಣತ ಅಭಿನಯ, ಅನುಪಮ ಭಂಗಿಗಳ ಪ್ರಸ್ತುತತೆಗೆ ಹೆಸರಾದ ಇವರು, ಬಿಡುವಿಲ್ಲದ ನೃತ್ಯ ಕಲಾವಿದ. ಸಾಧನೆಯ ಪಥದಲ್ಲಿ ಸಾಗಿರುವ ದೇವ್, ಬೆಂಗಳೂರಿನ ಅನೇಕ ಪ್ರತಿಷ್ಟಿತ ಉತ್ಸವಗಳಲ್ಲಿ ನೃತ್ಯಪ್ರದರ್ಶನ ನೀಡಿದ್ದು, ಇಂಟರ್ನ್ಯಾಷನಲ್ ಒಡಿಸ್ಸಿ ಫೆಸ್ತಿವಲ್ ಗಳಲ್ಲಿ, ಬಸಂತ್ ಉತ್ಸವ, ಮುಕ್ತೇಶ್ವರ ಉತ್ಸವ, ಕೊನಾರ್ಕ್ ನೃತ್ಯೋತ್ಸವ, ಮುಂಬೈನ ಸುರ್ ಶಿಂಗಾರ್ ಮತ್ತು ಲಕ್ನೋ ಫೆಸ್ಟಿವಲ್, ದೆಹಲಿ ನೃತ್ಯೋತ್ಸವ, ದೇವದಾಸಿ ನೃತ್ಯೋತ್ಸವ, ಉಜ್ಜಯಿನಿಯ ಕಾಳಿದಾಸ ಉತ್ಸವ ಮುಂತಾದ ನೂರಾರು ನೃತ್ಯೋತ್ಸವಗಳಲ್ಲಿ ನರ್ತಿಸಿದ ಹಿರಿಮೆ. ವಿದೇಶಗಳಲ್ಲಿ ಮಲೇಷ್ಯಾ, ಸ್ಪೇನ್, ಇಂಡೋನೇಷ್ಯಾ, ಜಕಾರ್ತಾ, ಸಿಂಗಾಪುರ್, ಥೈಲ್ಯಾಂಡ್, ರಷ್ಯಾ, ಯುಕ್ರೇನ್, ಜಪಾನ್, ಲಂಡನ್, ವಿಯಟ್ನಾಂ, ಫಿಲಿಪೆನ್ಸ್ ಮುಂತಾದ ಮೂವತ್ತೆಂಟು ರಾಷ್ಟ್ರಗಳಲ್ಲಿ ಪ್ರದರ್ಶನಗಳನ್ನು ನೀಡಿದ ‘ನೃತ್ಯ ರಾಯಭಾರಿ’ ಎಂದರೆ ಅತಿಶಯೋಕ್ತಿಯಲ್ಲ.
ಇವರ ಮುಡಿಗೇರಿರುವ ಪ್ರಶಸ್ತಿಗಳು ಕಡಿಮೆಯೇನಲ್ಲ. ಶಿಂಗಾರ ಮಣಿ, ನೃತ್ಯಭಾರತಿ, ನೃತ್ಯದರ್ಪಣ, ಒಡಿಸ್ಸಿ ಅನುಪಮ ಕಲಾವಿದ, ಜಯದೇವ ಪ್ರಶಸ್ತಿ ಮುಂತಾದವು. ತಮ್ಮ ದ್ರವೀಕೃತ ಮನೋಹರ ಬಾಗು-ಬಳುಕು, ತ್ರಿಭಂಗಿಗಳಿಂದ ಮೋಡಿಮಾಡುವ ಕಲಾನೈಪುಣ್ಯದ ಅಪೂರ್ವ ಕಲಾವಿದ ದೇವ್, ಕಲೆಯ ಉನ್ನತಿಗಾಗಿ ಪ್ರತಿವರ್ಷ ರುದ್ರಧಾರ, ಕಲಾಸಂಗಮ ಮತ್ತು ಸ್ಮೃತಿ ಶ್ರದ್ಧಾಂಜಲಿ ಎಂಬ ಮೂರು ಪ್ರಮುಖ ನೃತ್ಯೋತ್ಸವಗಳನ್ನು ತಪ್ಪದೆ ಆಯೋಜಿಸಿಕೊಂಡು ಬರುತ್ತಿರುವುದು ಈ ಯುವ ನೃತ್ಯಕಲಾವಿದನ ವೈಶಿಷ್ಟ್ಯ.