Image default
Dance Reviews

ಶಮಂತ-ಅನನ್ಯರ ಚೈತನ್ಯ ಚಿಲುಮೆಯ ಮನೋಜ್ಞ ನೃತ್ಯ

ಅಂದು-ರಂಗದ ಮೇಲೆ ಮಿಂಚಿನಬಳ್ಳಿಗಳಂತೆ ಲವಲವಿಕೆಯಿಂದ ನರ್ತಿಸುತ್ತ ಮನೋಜ್ಞ ಭಂಗಿಗಳಿಂದ ಕಣ್ಮನ ತುಂಬಿದ ಅಣ್ಣ-ತಂಗಿಯರ ಸುಮನೋಹರ ‘ರಂಗಪ್ರವೇಶ’ ಚಿರಸ್ಮರಣೀಯವಾಗಿತ್ತು. ಖ್ಯಾತ ‘ಶಿವಪ್ರಿಯ’ ನೃತ್ಯಸಂಸ್ಥೆಯ ಅಂತರರಾಷ್ಟ್ರೀಯ ನೃತ್ಯಕಲಾವಿದ-ಗುರು ಡಾ.ಸಂಜಯ್ ಶಾಂತಾರಾಂ ಅವರ ತರಬೇತಿಯಲ್ಲಿ ಭರವಸೆಯ ಕಲಾವಿದರಾಗಿ ಹೊರಹೊಮ್ಮಿದ ಈ ನರ್ತಕರು, ಇತ್ತೀಚಿಗೆ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ತಾವು ಇದುವರೆಗೂ ಕಲಿತ ನೃತ್ಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು.

ಯುಗಳನೃತ್ಯದಲ್ಲಿ ಜೋಡಿಗಳ ಸಾಮರಸ್ಯತೆ ಬಹುಮುಖ್ಯ. ರಂಗದ ಮೇಲೆ ಏಕವ್ಯಕ್ತಿಯಾಗಿ ನರ್ತನ ಮಾಡುತ್ತಿರುವ ಭಾಸವನ್ನುಂಟು ಮಾಡದೆ, ಜೋಡಿಗಳು ಪರಸ್ಪರ ಸಮರಸತೆಯಿಂದ, ಒಬ್ಬರಿಗೊಬ್ಬರು ಪೂರಕವಾಗಿ ಪ್ರಸ್ತುತಿಗೊಳಿಸುವ ಪರಿಣಾಮವೇ ಬೇರೆ. ಇಂಥ ಒಂದು ಯುಗಳನೃತ್ಯದ ಆನಂದವನ್ನು ತಂದವರು ಈ ಜೋಡಿ ಕಲಾವಿದರು. ಪರಸ್ಪರ ನೋಟಗಳ ವಿನಿಮಯ, ತುಟಿಯಲ್ಲಿ ಮಂದಹಾಸದ ಮಿನುಗು, ಕೊರಳನ್ನು ಕೊಂಕಿಸುತ್ತ ಸುಮನೋಹರವಾಗಿ ನರ್ತಿಸಿದ ಸೊಬಗು ಮನಸ್ಸನ್ನಾವರಿಸಿತು.

ಮೊದಲಿಗೆ ‘ಪುಷ್ಪಾಂಜಲಿ’ಯಲ್ಲಿ ವೈವಿಧ್ಯ ಅಡವುಗಳು, ಆಕಾಶಚಾರಿ-ಭ್ರಮರಿಗಳ ಸೌಂದರ್ಯ ಚಿಮ್ಮಿಸುತ್ತ ಭಕ್ತಿಪೂರ್ವಕವಾಗಿ ಗುರು-ಹಿರಿಯರಿಗೆ ನಮನ ಸಲ್ಲಿಸಿದರು. ಗಣೇಶನ ಕಥೆಯನ್ನು ಸಂಕ್ಷಿಪ್ತವಾಗಿ ಸುಂದರ ಸಂಚಾರಿಯಲ್ಲಿ ಅಭಿನಯಿಸಿ, ವಿಘ್ನವಿನಾಶನಿಗೆ ಭಕ್ತ್ಯಾರ್ಪಣೆ ಮಾಡಿದರು. ನಂತರ ಶಮಂತ್, ಲಯಾತ್ಮಕ ‘ಜತಿಸ್ವರ’ವನ್ನು ಪಾದರಸದ ಅಂಗಚಲನೆಯಲ್ಲಿ, ದೃಷ್ಟಿಭೇದ-ಗ್ರೀವಭೇದಗಳನ್ನು ನಿರೂಪಿಸುತ್ತ, ಆಕರ್ಷಕ ನೃತ್ತವಿನ್ಯಾಸಗಳ ಲಾಸ್ಯದಲ್ಲಿ  ತನ್ನ ಕಲಾನೈಪುಣ್ಯವನ್ನು ಅನಾವರಣಗೊಳಿಸಿದ.

ಅನನ್ಯ ಅಭಿನಯಿಸಿದ ಷಣ್ಮುಗಪ್ರಿಯ ರಾಗದ ಕನ್ನಡದ ‘’ಕೌತ್ವಂ’’-ಮುರುಗಸ್ತುತಿ ಸುಮನೋಹರವಾಗಿ ಮೂಡಿಬಂತು. ದೇವಾಧಿಪತಿಯಾದ ಷಣ್ಮುಖ, ತಾರಕಾಸುರನನ್ನು ವಧಿಸುವ ಘಟನೆಯಲ್ಲಿ ತೋರಿದ ವೀರಾವೇಶದ ಅಡವುಗಳು, ಉಗ್ರನೋಟ, ಯುದ್ಧದ ನಾಟಕೀಯದೃಶ್ಯ ಮತ್ತು ವಳ್ಳಿವಿವಾಹದ ಸಂದರ್ಭವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದಳು. ಸುಬ್ರಹ್ಮಣ್ಯನ ಮಹಿಮೆಯ ವರ್ಣನೆ ಸ್ಫುಟವಾದ ಅಂಗಿಕಗಳ ಸೊಬಗಿನಲ್ಲಿ ಚೈತನ್ಯದ ಚಿಲುಮೆಯಾಗಿ ನರ್ತಿಸಿದಳು.

ಹಿಂದೀ ಕೃತಿಯನ್ನು ‘ವರ್ಣ’ವಾಗಿ ಪ್ರಸ್ತುತಪಡಿಸಿದ್ದು ಈ ರಂಗಪ್ರವೇಶದ ವಿಶೇಷವಾಗಿತ್ತು. ರಾಗಮಾಲಿಕೆಯಲ್ಲಿ  ‘ದೇವಕಿನಂದನ ನಂದಕುಮಾರ’ನನ್ನು ಕೇಂದ್ರದಲ್ಲಿರಿಸಿಕೊಂಡು ಭಕ್ತಿಪ್ರಧಾನವಾಗಿ ಅರ್ಪಿಸಿದ ಶ್ರೀಕೃಷ್ಣನ ವರ್ಣರಂಜಿತ ವ್ಯಕ್ತಿತ್ವ ಬಹು ರಮ್ಯವಾಗಿ ಮೂಡಿಬಂತು. ವಿರಹೋತ್ಖಂಠಿತ ರಾಧೆಯ ವಿರಹ ಹಲವು ಬಗೆಯಲ್ಲಿ ವರ್ಣಿತವಾಯಿತು. ಕೃಷ್ಣನ ಲೀಲಾಮಯ ಭಂಗಿಗಳನ್ನು ಜತಿಗಳಲ್ಲಿ ಪೋಣಿಸಲಾಗಿದ್ದು ಅತ್ಯಂತ ಮನೋಹರವಾಗಿದ್ದು, ಖಚಿತ ಅಡವುಗಳ ವಿಶೇಷ ವಿನ್ಯಾಸದ ನೃತ್ತಗಳು ಕಣ್ಣಿಗೆ ಹಬ್ಬವಾದವು. ಕೃಷ್ಣನ ಜನನದಿಂದ ಹಿಡಿದು ಅವನು ಗೋಕುಲದಲ್ಲಿ ಬೆಳೆಯುತ್ತ ತೋರಿದ ಸಾಹಸ-ಗೋಪಿಕೆಯರೊಡನಾಟದ ರಾಸಲೀಲೆಗಳನ್ನು ಬಹು ಸಂಕ್ಷಿಪ್ತವಾಗಿ ಅಷ್ಟೇ ಪರಿಣಾಮಕಾರಿಯಾಗಿ ನಿರೂಪಿಸಲಾಯಿತು. ಕಲಾವಿದರ ನಡುವಿನ ಹೊಂದಾಣಿಕೆ-ಕಣ್ಣೋಟದ ಆನಂದದ ಜಿನುಗು, ರಾಸಲೀಲೆಗಳಲ್ಲಿನ ರಸಾನುಭವದ ಕಾರಂಜಿ, ನಾವೀನ್ಯ-ಸೃಜನಶೀಲತೆ ಶ್ಲಾಘನೀಯ.

ಶಮಂತ್ ಅಭಿನಯಿಸಿದ ‘’ ಶಂಭೋ ಶಂಕರ ಶಿವ ’’-ನಟರಾಜನ ಕುರಿತ ಕೃತಿಯಲ್ಲಿ ಕಲಾವಿದನ ನೃತ್ಯನೈಪುಣ್ಯ ಪರಾಕಾಷ್ಟತೆ ಮುಟ್ಟಿತು. ಸಂಜಯರ ಶಕ್ತಿಶಾಲಿ ನಟುವಾಂಗಕ್ಕೆ ಜತಿಗಳ ಝೇಂಕಾರ ಅದ್ಭುತವಾಗಿತ್ತು. ಮಾರ್ಕಂಡೇಯ ಪ್ರಸಂಗದಲ್ಲಿ ತೋರಿದ ಏಕವ್ಯಕ್ತಿ ಅಭಿನಯ ವೈವಿಧ್ಯಪೂರ್ಣವಾಗಿ ಮಿನುಗಿತು. ಶಿವ ಢಮರುಗ ಹಿಡಿದು ರಂಗದ ತುಂಬಾ ತಾಂಡವವಾಡುವ ಬಗೆ, ಮಂಡಿ ಅಡವುಗಳಲ್ಲಿ ರಂಗಾಕ್ರಮಿಸುವ ಮನೋಜ್ಞತೆ ರೋಮಾಂಚಗೊಳಿಸಿತು.  ದೈವೀಕತೆ ಮಡುಗಟ್ಟಿದ ‘ರಂಜಿನಿ ಮೃದು ಪಂಕಜಲೋಚನಿ’ -ಅಂಬಾಸ್ತುತಿಯನ್ನು ತನ್ಮಯತೆಯಿಂದ ಅಭಿನಯಿಸಿದ ಅನನ್ಯಳ ನೃತ್ಯಪ್ರತಿಭೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಸೂರ್ಯರಾಗದ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.         

Related posts

ಗೀತ ಗೋವಿಂದ -ಆಹ್ಲಾದಕರ ಶೃಂಗಾರ ರಸಧಾರೆ

YK Sandhya Sharma

ಪರಿಣಿತ ಅಭಿನಯದಿಂದ ಕಂಗೊಳಿಸಿದ ಅಕ್ಷತಾ ನೃತ್ಯ

YK Sandhya Sharma

Natanam Institute Of Dance- Naatyaarpanam

YK Sandhya Sharma

Leave a Comment

This site uses Akismet to reduce spam. Learn how your comment data is processed.