Image default
Dancer Profile

ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್

ಯಾವುದೇ ನೃತ್ಯಪ್ರಕಾರದಲ್ಲಿ ಸಂಖ್ಯೆಯ ದೃಷ್ಟಿಯಿಂದ ಹೋಲಿಸಿ ನೋಡಿದಾಗ ನೃತ್ಯ ಕಲಾವಿದೆಯರಿಗಿಂತ ಪುರುಷ ನರ್ತಕರು ಕಡಿಮೆ ಎಂದೇ ಹೇಳಬೇಕು. ಆದರೂ ಇತ್ತೀಚಿನ ದಿನಗಳಲ್ಲಿ ಬಾಲಕರು ಮತ್ತು ಯುವಕರು ನೃತ್ಯ ಕಲಿಕೆಯಲ್ಲಿ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ಆ ಪೈಕಿ ‘’ ಅಭಿನವ ಡಾನ್ಸ್ ಕಂಪೆನಿ‘’ಯಲ್ಲಿ ಪ್ರಮುಖ ನರ್ತಕನಾಗಿ ಗುರುತಿಸಿಕೊಂಡಿರುವ ಅಶ್ವಿನ್ ಜೆ. ಪ್ರಭಾತ್ ಉತ್ತಮ ಕಲಾವಿದನಾಗಿ ಕಲಾರಸಿಕರ-ವಿಮರ್ಶಕರ ಮೆಚ್ಚುಗೆ ಪಡೆದಿದ್ದಾನೆ.

ಎಂಟುದಶಕಗಳ ಇತಿಹಾಸವುಳ್ಳ ಪ್ರಸಿದ್ಧ `ಪ್ರಭಾತ್ ಪರಿವಾರ’ಕ್ಕೆ ಸೇರಿದ ಅಶ್ವಿನ್ ತಂದೆ-ತಾಯಿಗಳು ಜಗನ್ನಾಥ್ ಹಾಗೂ ಲತಾ. ‘ಪ್ರಭಾತ್ ಸ್ಟುಡಿಯೋಸ್’ನಲ್ಲಿ ಧ್ವನಿಗ್ರಹಣ ಕಾರ್ಯದಲ್ಲಿ ಅಪಾರ ಅನುಭವವುಳ್ಳ ತಂದೆಯ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಬಂದಿರುವ ಅಶ್ವಿನ್ ತಮ್ಮ ಸ್ಟುಡಿಯೋದಲ್ಲಿ ಸೌಂಡ್ ಇಂಜಿನಿಯರಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ನೃತ್ಯ, ನಾಟಕ, ಸಂಗೀತ  ಮುಂತಾದ ಕಲಾಪ್ರಕಾರಗಳಲ್ಲೂ ಆಸಕ್ತಿ ಹೊಂದಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಶಾಲಾ-ಕಾಲೇಜಿನ ದಿನಗಳಿಂದ ಅನೇಕ ನಾಟಕಗಳಲ್ಲಿ ಭಾಗವಹಿಸಿದ ಅನುಭವ. ನೃತ್ಯದಲ್ಲೂ ಪರಿಶ್ರಮ. ತಮ್ಮ ಮನೆತನದ ‘ಪ್ರಭಾತ್ ಕಲಾವಿದರು’ ಅಂತರರಾಷ್ಟ್ರೀಯ ನೃತ್ಯಸಂಸ್ಥೆಯ ನೃತ್ಯರೂಪಕಗಳಲ್ಲಿ ಪಾಲ್ಗೊಂಡ ಹೆಮ್ಮೆ. ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರ್ ಪದವಿ ಪಡೆದು ಅತ್ಯಲ್ಪ ಕಾಲ ಉದ್ಯೋಗ ಮಾಡಿ ಈಗ ತಮ್ಮ ‘ಪ್ರಭಾತ್ ಸೌಂಡ್ ಸ್ಟುಡಿಯೋಸ್’ನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಮಾಧ್ಯಮ ಮತ್ತು ಪ್ರಸಾರದ ಸೃಜನಾತ್ಮಕ ಕೆಲಸ-ಕಾರ್ಯಗಳಲ್ಲಿ ನೈಪುಣ್ಯ ಸಾಧಿಸುವ ಹಾದಿಯಲ್ಲಿದ್ದಾರೆ. ಮುಖ್ಯ ಸೌಂಡ್ ಎಂಜಿನಿಯರಾಗಿದ್ದು ಹೌಸ್ ಡಾಕ್ಯುಮೆಂಟರಿಗಳು ಮತ್ತು ಅನೇಕ ಜಾಹೀರಾತು ಚಿತ್ರನಿರ್ಮಾಣಗಳಲ್ಲಿ ತೊಡಗಿಕೊಂಡಿದ್ದಾರೆ. ರಂಗಭೂಮಿಯಲ್ಲಿ ನಟನೆ -ಕಥಕ್ ನರ್ತನದ ಜೊತೆ ಪ್ರಕೃತಿ-ಪರಿಸರ ಪ್ರೇಮಿಯಾದ ಇವರು ಉತ್ತಮ ವನ್ಯಛಾಯಾ ಚಿತ್ರಗ್ರಾಹಕ  ಕೂಡ.

ಅಶ್ವಿನ್, ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ‘ಕಥಕ್ ‘ ನೃತ್ಯಜಗತ್ತಿಗೆ ಪದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ಖ್ಯಾತಿ ಪಡೆದ ಬೆಂಗಳೂರಿನ ‘’ ಅಭಿನವ ಆರ್ಟ್ ಸೆಂಟರ್’ ನ ನಾಟ್ಯಗುರುಗಳಾದ ನಿರುಪಮಾ ಹಾಗೂ ಟಿ.ಡಿ.ರಾಜೇಂದ್ರ ದಂಪತಿಗಳಲ್ಲಿ ನೃತ್ಯ ಕಲಿಕೆ ಆರಂಭ. ಕಳೆದ ಹದಿನೈದು ವರ್ಷಗಳಲ್ಲಿ ಬಹು ಬದ್ಧತೆ-ಪರಿಶ್ರಮಗಳಿಂದ ಕಥಕ್ ನೃತ್ಯದ ಆಯಾಮಗಳನ್ನು ರೂಢಿಸಿಕೊಳ್ಳುತ್ತ ಬಂದಿರುವರು.

ಪ್ರತಿವರ್ಷ ‘ಅತ್ಯುತ್ತಮ ನರ್ತಕ’ ಪ್ರಶಸ್ತಿಯನ್ನು ಪಡೆಯುತ್ತಿರುವ ಹೆಮ್ಮೆ ಇವರದು. ವೃತ್ತಿಪರ ಬದ್ಧತೆಯಿಂದ ಕಥಕ್ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದು,  ಹಲವು ವರ್ಷಗಳಿಂದ ‘ಅಭಿನವ’ ಸಂಸ್ಥೆಯ ನೃತ್ಯವಿದ್ಯಾರ್ಥಿಗಳಿಗೆ  ನಾಟ್ಯಶಿಕ್ಷಣ ನೀಡುತ್ತಿದ್ದಾರೆ. ಅಭಿನವ ಡಾನ್ಸ್ ಕಂಪೆನಿಯ ಭಾಗವಾಗಿದ್ದು, ಅದರ ಎಲ್ಲ ನೃತ್ಯರೂಪಕಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನೂ ನೀಡಿ ಜನಮೆಚ್ಚುಗೆ ಪಡೆದಿದ್ದಾರೆ. ಇವರು ಭಾಗವಹಿಸಿರುವ ನೃತ್ಯರೂಪಕಗಳೆಂದರೆ- ಖ್ಯಾತ ಕಥಕ್ ಗುರು ಡಾ. ಮಾಯಾರಾವ್ ನೃತ್ಯಸಂಯೋಜಿಸಿದ ‘’ ಕಥಕ್ ಥ್ರೂ ದ ಏಜಸ್’’, ನೃತ್ಯಾಂತರ, ರಾಮಕಥಾ ವಿಸ್ಮಯ, ಅಭಿಮನ್ಯು, ಕಥಾಕಿತತೋಮ್ ಮತ್ತು ದ್ರೌಪದಿ ಮುಂತಾದವು. ಇತ್ತೀಚಿಗೆ ಪ್ರದರ್ಶಿತವಾದ ‘’ದ್ರೌಪದಿ’’ ನೃತ್ಯರೂಪಕದಲ್ಲಿ ಅಶ್ವಿನ್ ನಿರ್ವಹಿಸಿದ ದುರ್ಯೋಧನ ಮತ್ತು ಕೀಚಕನ ಪಾತ್ರಗಳ ಅಭಿನಯ ಮತ್ತು ದೇಹಭಾಷೆ ಗಮನಾರ್ಹವಾಗಿದ್ದವು.

ದೇಶ-ವಿದೇಶಗಳಲ್ಲಿ ವ್ಯಾಪಕವಾಗಿ ನೃತ್ಯರೂಪಕಗಳನ್ನು ಪ್ರದರ್ಶಿಸಿ ಮನೆಮಾತಾಗಿರುವ ‘ಅಭಿನವ’ದ ಪ್ರದರ್ಶನಗಳಲ್ಲಿ ನರ್ತಿಸುವ ಜೊತೆಗೆ ರಂಗಸಜ್ಜಿಕೆ ಮತ್ತು ಪರಿಕರ ನಿರ್ವಹಣೆಗಳಲ್ಲೂ ಇವರು ಸಕ್ರಿಯರು. ರಾಜ್ಯದ ಎಲ್ಲ ನೃತ್ಯೋತ್ಸವಗಳ ವಿಶೇಷ ಪ್ರದರ್ಶನಗಳಲ್ಲಿ ಪಾಲ್ಗೊಂಡು, ಭಾರತ ಹಾಗೂ ವಿದೇಶಗಳ ಅನೇಕ ರಾಜ್ಯಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯಪ್ರದರ್ಶನ ನೀಡಿರುವ ಅಗ್ಗಳಿಕೆ. ಅಮೇರಿಕಾ, ಯು.ಕೆ., ಚೈನಾ, ಬಹರೆನ್, ದಕ್ಷಿಣ ಆಫ್ರಿಕಾ,ಮುಂತಾದ ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಇದೀಗ ನ್ಯೂಯಾರ್ಕ್, ಫ್ಲಾರಿಡಾ, ಒಹಾಯೋ ಮುಂತಾದೆಡೆ ನೃತ್ಯಪ್ರದರ್ಶನಗಳನ್ನು ನೀಡಲು ಸಜ್ಜಾಗಿದ್ದಾರೆ.

ಕಥಕ್ ನೃತ್ಯವನ್ನು ವೃತ್ತಿಪರವಾಗಿ ಸ್ವೀಕರಿಸಿರುವ ಅಶ್ವಿನರ ಮಡದಿ ಸಿಂಧೂ ಕೂಡ ಕಥಕ್ ನರ್ತಕಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರತೆ. ನಾಲ್ಕುವರ್ಷದ ಮಗಳು ಆರಭಿಯಿಂದ ಕೂಡಿದ ನಲ್ಮೆಯ ಸಂಸಾರದ ಇವರದು.

Related posts

ಮನೋಜ್ಞ ಅಭಿನಯದ ನೃತ್ಯ ಕಲಾವಿದೆ ಧರಣಿ ಕಶ್ಯಪ್

YK Sandhya Sharma

ಉದಯೋನ್ಮುಖ ನೃತ್ಯ ಕಲಾವಿದೆ ಮೇಘನಾ ಮಯೂರ್

YK Sandhya Sharma

Nrutyalokada Rasarushi Prof. M.R. Krishna Murthy

YK Sandhya Sharma

Leave a Comment

This site uses Akismet to reduce spam. Learn how your comment data is processed.