‘ನೃತ್ಯ ಸಂಭ್ರಮ’ದ ವೈಭವ ಹೆಚ್ಚಿಸುವ ಬೃಹದ್ರಥದಂಥ ಕಲಾತ್ಮಕ ಹೊನ್ನಿನ ಮಂಟಪ, ದೈವೀಕ ವಾತಾವರಣ ರೂಪಿಸಿದ ನಂದಾದೀಪಗಳ ಮಾಲೆ, ಅಂದವಾದ ವೇದಿಕೆಯ ಮೇಲೆ ಎಂಥ ನರ್ತಕಿಗೂ ಸ್ಫೂರ್ತಿ ಬರುವಂಥ ವಿನೂತನ-ವಿಶಾಲ ಆಡುಂಬೊಲ. ಪಾರ್ಶ್ವದಲ್ಲಿ ನೃತ್ಯಕ್ಕೆ ಜೀವತುಂಬುವ ಸುಶ್ರಾವ್ಯ ವಾದ್ಯಗೋಷ್ಠಿ, ನಡುವೆ ನರ್ತಕಿಯ ಶಿಲ್ಪಿ-ಮಾರ್ಗದರ್ಶಕ ಖ್ಯಾತ ನಾಟ್ಯಗುರು ಅಶೋಕ್ ಕುಮಾರ್. ಅವರ ನಟುವಾಂಗದ ಲಯಕ್ಕೆ ಮೋಹಕವಾಗಿ ನರ್ತಿಸುವ ಕಲಾವಿದೆ ರೋಶಿನಿ ಬ್ರಹ್ಮಯ್ಯ. ಗಂಧರ್ವಕನ್ಯೆಯಂತೆ ಶೋಭಿಸುವ ಆಕೆಯ ನರ್ತನವನ್ನು ಜಯನಗರದ ‘ಮಂಗಳ ಮಂಟಪ’ದಲ್ಲಿ ವೀಕ್ಷಿಸುತ್ತಿದ್ದ ಕಲಾರಸಿಕರಿಗೆ ಬ್ರಹ್ಮಾನಂದ.
ಆದಿವಂದಿತ ಗಣಪನಿಗೆ ಮೊದಲನಮನ. ‘ಪ್ರಭೋ ಗಣಪತೇ…’ ( ತಿಲ್ಲಾಂಗ್ ರಾಗ, ಆದಿತಾಳ) ಎಂದು ಕಲಾವಿದೆ ಗಣೇಶನಿಗೆ ಸಲ್ಲಿಸುವ ಭಕ್ತಿಪೂರ್ವಕ ಪೂಜಾವಿಧಾನಗಳು ಆಪ್ಯಾಯಮಾನವೆನಿಸಿದವು. ಅಷ್ಟೇ ಸಂತಸದಿಂದ ಸಮ್ಮೋಹಕಭಂಗಿಗಳಲ್ಲಿ ಗಣೇಶನ ವಿವಿಧ ಸ್ವರೂಪಗಳನ್ನು ವಿಶಿಷ್ಟವಾಗಿ ಅಭಿವ್ಯಕ್ತಿಸಿ ತನ್ನ ‘ಅಸ್ಮಿತೆ’ಯನ್ನು ಮೆರೆದಳು.
ಮುಂದೆ ತಂಜಾವೂರು ಸಹೋದರರು ರಚಿಸಿದ ‘ಜತಿಸ್ವರ’ವನ್ನು ತನ್ನ ಮಿಂಚಿನ ವೇಗದ ಸುಂದರ ಜತಿಗಳಿಂದ ಆಕರ್ಷಕವಾಗಿಸಿದಳು. ಮನೋಹರ ಗ್ರೀವ-ದೃಷ್ಟಿ ಭೇದಗಳ ಸೊಗಸಿನಿಂದ, ನೃತ್ತಗಳಲ್ಲೇ ಮನೋಜ್ಞ ಭಂಗಿಗಳನ್ನು ರಚಿಸಿದ ರೋಶಿನಿ, ತನ್ನ ಹಸನ್ಮುಖದ ಶುದ್ಧ ಆಂಗಿಕಗಳೊಡನೆ ಸೃಜನಾತ್ಮಕ ವಿನ್ಯಾಸದ ಚಲನೆಗಳಿಂದ ಮುದನೀಡಿದಳು. ಆಕೆ ತೋರಿದ ಲೀಲಾಜಾಲ ಆಕಾಶಚಾರಿಗಳು ಅವಳ ನರ್ತನ ಸಾಮರ್ಥ್ಯವನ್ನು ಸಾಬೀತುಗೊಳಿಸಿದವು.
‘ಮಾರ್ಗಂ’ ಪ್ರಸ್ತುತಿಯ ಹೃದಯಭಾಗ ಅಷ್ಟೇ ಹೃದ್ಯವಾದ ಭಾಗ ‘ವರ್ಣ’. ಕಮಾಚ್ ರಾಗದ ಈ ಕನ್ನಡವರ್ಣದ ರಚಯಿತ್ರಿ ದ್ವಾರಕೀ ಕೃಷ್ಣಸ್ವಾಮಿ. ಭುವನಸುಂದರ ಮನಮೋಹಕ ಕೃಷ್ಣನ ಸುತ್ತ ಹೆಣೆದ ಕೃತಿಯಲ್ಲಿ, ವಿರಹೋತ್ಖಂಠಿತ ನಾಯಕಿ ಇನಿಯ ಕೃಷ್ಣನಿಗಾಗಿ ಹಂಬಲಿಸುತ್ತಿದ್ದಾಳೆ. ತಾನು ಬರೆದ ಕೃಷ್ಣನ ತೈಲವರ್ಣಚಿತ್ರವನ್ನು ಕೈಯಲ್ಲಿ ಹಿಡಿದು ಉದ್ಯಾನವನದ ಮಂಟಪದ ಮೆಟ್ಟಿಲಿಳಿದು ಬರುವ ನಾಯಕಿ, ಚಿತ್ರವನ್ನು ಭಾವುಕತೆಯಿಂದ ಎದೆಗಪ್ಪಿಕೊಂಡು ರಂಗದ ತುಂಬಾ ತನ್ಮಯಳಾಗಿ ಚಲಿಸುತ್ತ, ಅಪ್ಪಟ ಪ್ರಣಯಿನಿಯ ಹಾವಭಾವಗಳಲ್ಲಿ ಪರಿತಪಿಸುತ್ತಾಳೆ. ಶ್ರೀಕೃಷ್ಣನ ಸಾಹಸಕಥೆಗಳನ್ನೆಲ್ಲ ಮನದುಂಬಿ ವರ್ಣಿಸುತ್ತ, ಚಿತ್ರವತ್ತಾಗಿ ಕಟ್ಟಿಕೊಡುತ್ತಾಳೆ. ಇಂಥ ತನ್ನ ಪ್ರಿಯ ‘ಭುವನ ಸುಂದರನ ಕರೆತಾರೆ ಸಖಿ’ ಎಂದು ಸಖಿಯಲ್ಲಿ ಅನುನಯದಿಂದ ತನ್ನ ವಿರಹದ ತೀವ್ರತೆಯನ್ನು ಹಲವು ಬಗೆಯಲ್ಲಿ ತೋಡಿಕೊಳ್ಳು ತ್ತಾಳೆ. ವಿಪ್ರಲಂಭ ಶೃಂಗಾರದ ನಾನಾ ಮಜಲುಗಳನ್ನು ಕಲಾವಿದೆ ರೋಶಿನಿ ಪ್ರಬುದ್ಧವಾಗಿ ಅಭಿನಯಿಸಿ, ತನ್ನ ನೋವಿನ ಕಾವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದಳು. ಮನಸ್ಸಿನ ಒಳತೋಟಿಯನ್ನು ಅನೇಕ ಬಗೆಯ ನೃತ್ತಗಳ ಝೇಂಕಾರದಲ್ಲಿ, ಶಿಲ್ಪಸದೃಶ ಭಂಗಿಗಳಲ್ಲಿ ಅನುರಣಿಸಿದಳು. ಅದ್ಭುತ ಚೈತನ್ಯ ಹೊಂದಿರುವ ರೋಶಿನಿ ಅಭಿನಯದಲ್ಲಿ ‘ಸೈ’ ಎನಿಸಿಕೊಂಡಂತೆ, ನೃತ್ಯಸಾಮರ್ಥ್ಯವನ್ನು ಅಭಿವ್ಯಕ್ತಿಸುವಲ್ಲೂ ಯಶಸ್ವಿಯಾದಳು.
ಹೃದಯತಂತಿ ಮೀಟುವಂಥ ಸುಮಾರಾಣಿಯ ಸಿತಾರ್, ಶ್ರೀವತ್ಸರ ಭಾವಪೂರ್ಣ ಗಾಯನ, ಮನಮಿಡಿಸುವ ಕಾರ್ತಿಕ್ ಸಾರ್ಥವಳ್ಳಿ ಕೊಳಲಗಾನ, ನಾದತರಂಗದ ಪ್ರಾದೇಶಾಚಾರ್ ವೈಯೋಲಿನ್, ಮೃದಂಗ ಲಯದ ಭವಾನಿ ಶಂಕರ್ ಮತ್ತು ರಿದಂಪ್ಯಾಡಿನಿಂದ ವಿವಿಧ ಪರಿಣಾಮ ಹೊಮ್ಮಿಸಿದ ಕಾರ್ತೀಕ್ ವೈಧಾತ್ರಿ ಜೊತೆ ಕಳಶಪ್ರಾಯವಾಗಿ ಗುರು ಅಶೋಕ್ ಕುಮಾರ್ ಕಂಚಿನಕಂಠದ ಸ್ಫುಟವಾದ ನಟುವಾಂಗದ ಹಿಮ್ಮೇಳ, ಒಟ್ಟಾರೆ ರೋಶಿನಿಯ ನೃತ್ಯಾಭಿನಯವನ್ನು ಪುಟಕ್ಕಿಟ್ಟ ಚಿನ್ನವಾಗಿಸಿತು.
ಅಪೂರ್ವ ನೃತ್ಯಸಂಯೋಜನೆಯಿಂದ ಗಮನ ಸೆಳೆದ ಅಶೋಕ್ ಕುಮಾರ್, ರಂಗಸಜ್ಜಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲೂ ನೈಪುಣ್ಯ ತೋರಿದ್ದು ವಿಶೇಷ. ‘ಶಿವಸ್ತುತಿ’ ಯಲ್ಲಿ ಭಗೀರಥನ ಪ್ರಯತ್ನದಿಂದ ಭುವಿಗಿಳಿದ ಗಂಗೆ ಸೊಕ್ಕಿ ಹರಿದ ಭೋರ್ಗರೆತವನ್ನು ಬಿಳಿಯ ಸೀರೆಯುಟ್ಟ ಗಂಗೆ, ಮೆಟ್ಟಿಲುಗಳ ಮೇಲೆ ಅಲೆಯಲೆಯಾಗಿ ಹರಿಯುತ್ತಾ, ರಂಗ ದಂಡೆಯ ತುಂಬಾ ಹರಿದಾಡಿದ ದಿವ್ಯನೋಟವನ್ನು ಕಲಾವಿದೆ, ತನ್ನ ದ್ರವೀಕೃತ ಚಲನೆಗಳಿಂದ ಪುನರ್ಸೃಷ್ಟಿಸಿದಳು. ‘ಓಂ ಶಂಭೋ ಶಿವ ಶಂಭೋ ಸ್ವಯಂಭೋ’ ಎಂದು ದೇವತೆಗಳು, ಗಂಗೆಯ ಉಬ್ಬರವಿಳಿತವನ್ನು ತಾಳಲಾರದೆ, ಶಿವನಿಗೆ ಮೊರೆಯಿಟ್ಟಾಗ, ತಾಂಡವ ನಾಟ್ಯವಾಡಿದ ಶಿವನ, ವಿಸ್ಮಿತ ಭಂಗಿಗಳ -ರಭಸದ ಅಡವುಗಳ, ವಿರಾಟ್ ರೂಪದ ನರ್ತನ ರಸಿಕರ ಕಣ್ದುಂಬಿತು.
ಅನಂತರ ತ್ರಿಶಾಲ ಬ್ರಹ್ಮಯ್ಯ ರಚಿಸಿದ, ಆದಿಕವಿ ಪಂಪನ ‘ಆದಿಪುರಾಣ’ ಆಧಾರಿತ, ಆದಿ ತೀರ್ಥಂಕರನ ಅವತಾರದ ಹಿನ್ನಲೆ ಸಾರುವ ‘ಹದಿನಾರು ಸ್ವಪ್ನಗಳು’ ಮನೋಹರವಾಗಿ ಪ್ರಸ್ತುತವಾಯಿತು. ಅಂತ್ಯದಲ್ಲಿ ಚೈತನ್ಯದಾಯಕ ಧ್ರುತಗತಿಯ ‘ತಿಲ್ಲಾನ’ದಲ್ಲಿ ಮೂಡಿಬಂದ ನೃತ್ಯಸಂಭ್ರಮ ಚಿರಸ್ಮರಣೀಯ ಅನುಭವ ನೀಡಿತು.