Image default
Dance Reviews

ಪಕ್ವಾಭಿನಯದ ‘ರಮ್ಯ’ ನೃತ್ಯರಂಜನೆ

ಖ್ಯಾತ ‘’ಶಿವಪ್ರಿಯ’’ ನೃತ್ಯಸಂಸ್ಥೆಯ ಗುರು-ನಾಟ್ಯಕಲಾವಿದ ಡಾ.ಸಂಜಯ್ ಶಾಂತಾರಾಂ ಅವರ ಸಮರ್ಥ ತರಬೇತಿಯ ಮೂಸೆಯಲ್ಲಿ ಕಲಾಶಿಲ್ಪವಾಗಿ ಅರಳಿದ ನೃತ್ಯಕಲಾವಿದೆ ಸಹನಾ (ರಮ್ಯ)ಶ್ರೀನಿವಾಸ್. ಇತ್ತೀಚಿಗೆ ಅವಳು ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದ ಕಲಾರಸಿಕರ ಸಮ್ಮುಖ ತನ್ನ ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಂಡಳು. ಸಂಗೀತ ಕೋವಿದ ಸಂಜಯ್ ಗುರುವಾಗಿ ನಟುವಾಂಗವನ್ನು ಚೈತನ್ಯಪೂರ್ಣವಾಗಿ ನಿರ್ವಹಿಸುವ ಜೊತೆಗೆ ಈ ಸಂಭ್ರಮದ ಸನ್ನಿವೇಶಕ್ಕೆ ಹೊಂದುವಂತೆ ತಾವೇ ರಚಿಸಿದ ವಿಶಿಷ್ಟ ಕೃತಿಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು.

ಮೊದಲಿಗೆ ಸಾಂಪ್ರದಾಯಕ ‘’ ಪುಷ್ಪಾಂಜಲಿ’’ಯಲ್ಲಿ ಸಹನಾ, ಮನಮೋಹಕ ನೃತ್ತಮಂಜರಿಯಲ್ಲಿ ಸಾಂಕೇತಿಕವಾಗಿ ಭೂದೇವಿಗೆ ನಮಿಸಿ, ಅನಂತರ ‘’ಗಣೇಶ ಸ್ತುತಿ’’ಯಲ್ಲಿ ಗಣಪತಿಯ ವಿವಿಧ-ವಿಶಿಷ್ಟ ರೂಪಗಳನ್ನು ತನ್ನ ಸುಂದರ ಆಂಗಿಕ, ಭಾವಾಭಿವ್ಯಕ್ತಿಯ ಮೂಲಕ ಕಟ್ಟಿಕೊಟ್ಟು, ಮನಮೋಹಕ ಭಂಗಿಗಳಲ್ಲಿ ಆಕರ್ಷಿಸಿದಳು. ಕಲಾವಿದೆಯ ಹಸನ್ಮುಖ, ಚೇತೋಹಾರಿ ನೃತ್ಯಕ್ಕೆ ಕಳೆಕೊಟ್ಟಿತ್ತು. ಮುಂದೆ ಮುತ್ತಯ್ಯಸ್ವಾಮಿ ದೀಕ್ಷಿತರು ನಾಗಭೂಷಣ ರಾಗದಲ್ಲಿ ರಚಿಸಿದ ‘’ ಶ್ರೀರಮಾ ಸರಸ್ವತಿ’’ ಕೀರ್ತನೆಯನ್ನು ಸಹನಾ ಬಹು ತನ್ಮಯತೆಯಿಂದ ಸುಮನೋಹರವಾಗಿ ಸಾಕಾರಗೊಳಿಸಿದಳು. ದೇವಿಯ ಗುಣಗಾನದಲ್ಲಿ ಸ್ನಿಗ್ಧಕಳೆ ಮೊಗದಲ್ಲಿ ಮಿಂಚಿ ಅರ್ಪಣಾಭಾವವನ್ನು ಹೊರಸೂಸಿತ್ತು. ಆಂಗಿಕ ಮತ್ತು ನೃತ್ತಗಳಲ್ಲಿ ಬೆಡಗು ರಾರಾಜಿಸುತ್ತಿತ್ತು.

ಡಾ.ಸಂಜಯ್ ರಚಿಸಿದ ರಾಗಮಾಲಿಕೆ-ಮಿಶ್ರಛಾಪು ತಾಳದ ಅಭಿನಯಪ್ರಧಾನವಾದ ‘ಶಬ್ದಂ’ ಶಿವನ ಮಹಿಮೆಯನ್ನು ಎತ್ತಿಹಿಡಿಯುವ ಸಂಚಾರಿ ಮತ್ತು ಆಂಗಿಕಾಭಿನಯ-ಪಕ್ವತೆ ಹೊರಸೂಸಿ ಸಫಲವಾಯಿತು. ಶಿವ, ನೀಲಕಂಠನಾದ ಪ್ರಸಂಗವನ್ನು ಮತ್ತು ಮಾರ್ಕಂಡೇಯನ ಭಕ್ತಿಯ ಪಾರಮ್ಯವನ್ನು ಚಿತ್ರಿಸುವಲ್ಲಿ ಕಲಾವಿದೆಯ ನೈಪುಣ್ಯ ಅಭಿವ್ಯಕ್ತವಾಯಿತು. ಸರಳನೃತ್ತಗಳು ಒಂದರೊಳಗೊಂದು ಬೆಸೆದುಕೊಂಡಿದ್ದು ಹೊಸತನ ಸೂಸಿತು. ಭಕ್ತಪಾಲಕ ಶಿವನ ಬಿರುದುಗಳಿಗೆ ತಕ್ಕ ನಿರೂಪಣೆಯ ಕಥಾನಕಗಳು ವಿವರಣಾತ್ಮಕವಾಗಿ ದೈವೀಕತೆಯನ್ನು ಸಿಂಚನಗೊಳಿಸಿದವು.

ವಿರಹೋತ್ಖಂಠಿತ-ವಾಸಿಕಸಜ್ಜಿಕಾ ನಾಯಿಕೆಯ ಬವಣೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದ ‘’ಇನ್ನೂ ದಯ ಬಾರದೇ ಗೋಪಿರಮಣನೇ’’ -ಸಂಜಯ್, ರಚಿಸಿ, ತುಂಬುಕಂಠದಲ್ಲಿ ಹಾಡಿದ ‘’ವರ್ಣ’’ ಮನಸ್ಸನ್ನು ಸೂರೆಗೊಂಡಿತು. ಕಲಾವಿದೆಯ ಕಾಂತಿಯುಕ್ತ ಕಣ್ಣುಗಳು, ಭಾವಪೂರ್ಣ ಅಭಿನಯಕ್ಕೆ ಪೂರಕವಾಗಿ ರಸಾನುಭವ ನೀಡಿತು. ಆಕೆಯ ಉತ್ಸಾಹ ಮತ್ತು ತನ್ಮಯತೆ ಗಮನ ಸೆಳೆಯಿತು.  ನೃತ್ತಗಳ ಝೇಂಕಾರ ಹಾಗೂ ಜತಿಗಳ ಹೆಣಿಗೆಯಲ್ಲಿ ಮನೋಹರತೆ ತುಂಬಿತ್ತು.

ನಾಯಕನಾದ ಕೃಷ್ಣನನ್ನು ಬಗೆಬಗೆಯಾಗಿ ಮನಃತೃಪ್ತಿ ವರ್ಣನೆ ಮಾಡಿ, ಗತ ಮಧುರನೆನಪುಗಳನ್ನು ಅನುಭವಿಸುತ್ತ, ನಾಯಕಿ, ಹತಾಶೆಯಿಂದ ಇನಿಯನ ಹುಡುಕಾಟದಲ್ಲಿ ತೊಡಗಿದ್ದಾಳೆ. ದೈನ್ಯ-ಅರ್ಪಣಾಭಾವಗಳಲ್ಲಿ ಅವಳ ಅಂತರ್ಗತ ಪ್ರವಹಿಸುತ್ತದೆ. ಸಂಭ್ರಮದ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಅವನ ತುಂಟತನ-ಸರಸದಾಟಗಳ ಕಲ್ಪನೆಯ ಸುಖ ಅಮಿತಾನಂದ ನೀಡುತ್ತದೆ. ನಿರೀಕ್ಷೆಯ ಖುಷಿಯಲ್ಲಿ ಕುಣಿವ ನೃತ್ತಗಳ ಬೆಡಗು ಅವರ್ಣನೀಯ. ಎದುರಿಗೆ ನಿಂತ ಅವನ ಸುಂದರಮೂರ್ತಿಯನ್ನು ಕಂಡು ಇದು ನಿಜವೇ ಎಂದು ತನ್ನ ತೋಳು ಜಿಗುಟಿಕೊಂಡು, ತನ್ನ ಕಣ್ಣನ್ನೇ ತಾನು ನಂಬದಂಥ ಅನೇಕ ಸೂಕ್ಷ್ಮಾತಿ ಸೂಕ್ಷ್ಮವಿವರಗಳನ್ನು ಸಹನಾ, ಬಹು ಸೊಗಸಾಗಿ, ಆಹ್ಲಾದಕರವಾಗಿ ನಿರೂಪಿಸಿದಳು. ಮುಂದೆ ನಡೆಯುವುದೆಲ್ಲ ಶೃಂಗಾರದ ಅಂಕಗಳು. ಆದರದ ನಲ್ಮೆಯ ಸ್ವಾಗತ, ಸಂಭ್ರಮೋಲ್ಲಾಸದ ಉಯ್ಯಾಲೆಯ ಉನ್ಮಾದ, ರಾಸಲೀಲೆಯ ತುಂಟಾಟಗಳ ರಸಘಟ್ಟದಲ್ಲಿ ಕಲಾವಿದೆ ನಾಚುತ್ತ ನಿಷ್ಕ್ರಮಿಸುವ ಪರಿ ಮನೋಜ್ಞವಾಗಿತ್ತು.

ಸುಮನೋಹರ ಅಭಿನಯ ಮತ್ತು ನೃತ್ತ ನೈಪುಣ್ಯಕ್ಕೆ ಕನ್ನಡಿ ಹಿಡಿದ ಕುಣಿತದ ಲಯ- ಆಹ್ಲಾದಕಾರ ಓಘದ  ‘’ಏನೀ ಮಹಾನಂದವೇ’- ಅಂತಃಪುರ ಗೀತೆ (ರಚನೆ-ಡಿವಿಜಿ) ಯ ಸಾಕಾರ ಶಿಲ್ಪಕಲಾಭಂಗಿಗಳಿಂದ, ನೃತ್ತಾಮೋದದಿಂದ ತುಂಬಿತುಳುಕಿತು.

ಅದೇ ನವರಸಭರಿತ ಆನಂದ ನೀಡಿದ ಇನ್ನೊಂದು ದೇವರನಾಮ, ಪುರಂದರದಾಸರ ‘’ಓಡಿ ಬಾರಯ್ಯ ವೈಕುಂಠಪತಿ’’ ಭಾವಪೂರ್ಣ ಅಭಿನಯದಿಂದ ಮನಮುಟ್ಟಿತು. ಪ್ರಾರಂಭದಲ್ಲಿ ಒಟ್ಟು ಸಾರಾಂಶದ ಪೂರ್ವಾಭಿನಯ ನಿರೂಪಿತಗೊಂಡು, ಆನಂತರ ಸವಿವರವಾಗಿ, ಸಂಚಾರಿಗಳೊಡನೆ ಕಣ್ಮನ ತುಂಬಿದ ನೃತ್ಯ ಕಲಾನೈಪುಣ್ಯ ತೆರೆದುಕೊಂಡಿತು.

ಅಂತ್ಯದಲ್ಲಿ- ಆರ್.ಗಣೇಶ್ ರಾಮನನ್ನು ಕುರಿತು ರಚಿಸಿದ ‘’ ತಿಲ್ಲಾನ’’ ಅಚ್ಚುಕಟ್ಟಾಗಿ ಅಷ್ಟೇ ನಿರಾಯಾಸ ನರ್ತನದಿಂದ ಸಂಪನ್ನಗೊಂಡಿತು. ನೃತ್ಯದ ಸೌಂದರ್ಯವನ್ನು ವೈಭವೀಕರಿಸಲು ಹಿನ್ನಲೆಯ ವಾದ್ಯಗೋಷ್ಠಿ- ( ವೀಣೆ- ವಿ.ಗೋಪಾಲ್,ಮೃದಂಗ-ಕಾರ್ತೀಕ್ ವೈಧಾತ್ರಿ, ಕೊಳಲು-ಗಣೇಶ್ ಮತ್ತು ರಿದಂ ಪ್ಯಾಡ್-ಕಾರ್ತೀಕ್ ದಾತಾರ್, ಮಾಸ್ಟರ್ ಕೌಶಿಕ್ ನಟುವಾಂಗ ಸಹಾಯ ) ನೆರವಾಯಿತು.

Related posts

Natanam Institute Of Dance- Naatyaarpanam

YK Sandhya Sharma

ಅಂತರ್ಜಾಲದಲ್ಲಿ ತಾಯಿ-ಮಗಳ ಅನುರೂಪ ನೃತ್ಯ

YK Sandhya Sharma

ಅಪೂರ್ವ ವರ್ಚಸ್ವೀ ಅಭಿನಯದ ಸಾಕ್ಷಾತ್ಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.