ಭರತನಾಟ್ಯ ನೃತ್ಯಕ್ಷೇತ್ರ ಹಾಗೂ ಕರ್ನಾಟಕ ಸಂಗೀತ ರಂಗದಲ್ಲಿ ಸದ್ದಿಲ್ಲದೇ ಎಲೆಮರೆಯ ಕಾಯಿಯಂತೆ ತಮ್ಮ ಹವ್ಯಾಸ ಕಾಯಕದಲ್ಲಿ ತೊಡಗಿಕೊಂಡಿರುವ ಪ್ರತಿಭೆ ಐಶ್ವರ್ಯ ನಿತ್ಯಾನಂದ . ವೇದಿಕೆಯ ಮೇಲೆ ಅಪೂರ್ವ ಬೆಡಗಿನಿಂದ ನೃತ್ಯ ಪ್ರಸ್ತುತಿಗೊಳಿಸುತ್ತ ಕಲಾರಸಿಕರ ಮನದುಂಬುವಂತೆ, ಇತರ ನೃತ್ಯ ಕಲಾವಿದೆಯರ ನೃತ್ಯ ಪ್ರದರ್ಶನಗಳಲ್ಲಿ ಹಿನ್ನಲೆಯ ಗಾಯನ ಸಹಕಾರದಲ್ಲಿ ತಮ್ಮ ಸುಶ್ರಾವ್ಯ ಗಾನ ಮಾಧುರ್ಯದಿಂದ ಗಮನ ಸೆಳೆಯುತ್ತಾರೆ. ಹೀಗೆ ಐಶ್ವರ್ಯ, ಕಿರಿಯ ವಯಸ್ಸಿಗೇ ಗಾಯನ ಮತ್ತು ನರ್ತನಗಳ ಉಭಯ ರಂಗದಲ್ಲಿ ತಮ್ಮ ಪ್ರತಿಭೆಯನ್ನು ಸಮಾನವಾಗಿ ಪ್ರಕಾಶಿಸಿದ್ದಾರೆ.
ಹಿರಿದನ್ನು ಸಾಧಿಸುವತ್ತ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ ನೃತ್ಯ ಕಲಾವಿದೆ ಶ್ರೀಮತಿ ಐಶ್ವರ್ಯ ನಿತ್ಯಾನಂದ ಅವರದು ನೃತ್ಯದ ಭಾವ-ಭಂಗಿಗಳಿಗೆ ಹೇಳಿ ಮಾಡಿಸಿದಂಥ ಸಪೂರ ಸುಕೋಮಲ ಶರೀರ. ವೇದಿಕೆಯ ಮೇಲೆ ತಮ್ಮ ಮನೋಹರ ನೃತ್ತ-ನೃತ್ಯಗಳಿಂದ ಕೂಡಿದ ಪ್ರಭುದ್ಧ ಅಭಿನಯ ತೋರುವ ಇವರದು ಕಳೆದ ಎರಡೂವರೆ ದಶಕಗಳಿಂದ ಸತತ ನೃತ್ಯಾಭ್ಯಾಸದ ಪರಿಶ್ರಮ, ನಿಷ್ಠೆ, ಅಷ್ಟೇ ನೃತ್ಯದ ಬಗ್ಗೆ ಅಪಾರ ಒಲುಮೆ.
ನಾಲ್ಕು ವರ್ಷದ ಬಾಲೆಯಾದಾಗಿನಿಂದ ಐಶ್ವರ್ಯಾಗೆ ನೃತ್ಯದ ಬಗ್ಗೆ ಅತೀವ ಆಕರ್ಷಣೆ-ಆಸಕ್ತಿ. ಅವಳ ಪ್ರತಿಭೆಯನ್ನು ಗುರುತಿಸಿದವರು ಅವರ ತಾಯಿ ವೀಣಾ ನಿತ್ಯಾನಂದ. ತಂದೆ ನಿತ್ಯಾನಂದ ಅವರೂ ಮಗಳಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ತುಂಬು ಪ್ರೋತ್ಸಾಹ ನೀಡಿದರು. ಪ್ರಖ್ಯಾತ ಹಿರಿಯ ನೃತ್ಯ ಗುರು, ನಗರದ ಪ್ರಸಿದ್ಧ ಶ್ರೀ ವೆಂಕಟೇಶ ನಾಟ್ಯಮಂದಿರದ ನಿದೇರ್ಶಕಿ ರಾಧಾ ಶ್ರೀಧರ್ ಅವರ ಬಳಿ ಮಗಳನ್ನು ನಾಟ್ಯ ಕಲಿಕೆಗೆ ಸೇರ್ಪಡೆಗೊಳಿಸಿದರು. ಅಂದಿನಿಂದ ಇಂದಿನವರೆಗೂ ಸತತವಾಗಿ 27 ವರ್ಷಗಳ ಕಾಲ ನಿರಂತರ ನಿಷ್ಠೆಯ ಕಲಿಕೆ ಐಶ್ವರ್ಯಳದು. 10 ರ ಕಿಶೋರಿಯಾಗಿದ್ದಾಗಿನಿಂದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳ ಸೂರೆ. ತನ್ನ 12 ನೇ ವಯಸ್ಸಿಗೇ ಭರತನಾಟ್ಯಕ್ಕಾಗಿ, ಕೇಂದ್ರ ಸರ್ಕಾರದ ವಿಶೇಷ ಶಿಷ್ಯವೇತನ ಪಡೆದ ಅದೃಷ್ಟ ಇವಳದು. ಮುಂದೆ ಬಾಲಪ್ರತಿಭೆ ವಿಕಸನವಾಗುತ್ತ ಹೋಯಿತು. ಬಾಲ್ಡ್ ವಿನ್ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ಕಿರಿಯ ವಯಸ್ಸಿನಲ್ಲೇ ವಿದ್ಯುಕ್ತವಾಗಿ `ರಂಗಪ್ರವೇಶ’, `ಗುರುವಂದನೆ’ ಮಾಡಿದ ವೈಶಿಷ್ಟ್ಯ ಇವರದು. ಅನಂತರ ಕರ್ನಾಟಕ ಸೆಕೆಂಡರಿ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯದ ಜ್ಯುನಿಯರ್ , ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿರಿಮೆಯೂ ಕೂಡ ಇವರದಾಯಿತು.
ನೃತ್ಯ ಕಲಿಕೆಯ ಜೊತೆ ಜೊತೆಯಲ್ಲೇ ಹಿರಿಯ ಸಂಗೀತ ವಿದುಷಿ ವಸಂತಮಾಧವಿ ಅವರಲ್ಲಿ ಐಶ್ವರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯಲಾರಂಭಿಸಿ, ಉತ್ತಮ ಗಾಯಕಿಯಾಗಿ ರೂಪುಗೊಂಡಳು. ಜೊತೆಗೆ ಅನೇಕ ಕಡೆ ಸಂಗೀತ ಕಾರ್ಯಕ್ರಮ ನೀಡತೊಡಗಿದ್ದಷ್ಟೇ ಅಲ್ಲ, ಸಂಗೀತದ ವಿದ್ವತ್ ಪರೀಕ್ಷೆಯಲ್ಲೂ ಅತ್ಯುಚ್ಛ ಶ್ರೇಣಿ ( ಡಿಸ್ಟಿನ್ ಕ್ಷನ್) ಗಳಿಕೆ -`ಸಂಗೀತ ಕೌಸ್ತುಭ’ ಪದವಿ ಲಭ್ಯ.
ಬೆಂಗಳೂರಿನ ದೂರದರ್ಶನದಲ್ಲಿ ` ಎ ‘ ಶ್ರೇಣಿಯ ಕಲಾವಿದೆಯೆನಿಸಿಕೊಂಡಿರುವ ಇವರು ಕೇಂದ್ರ ಸರ್ಕಾರದ ಐ.ಸಿ.ಸಿ.ಆರ್ ನಲ್ಲಿ ಮಾನ್ಯತೆ ಪಡೆದ ಭರತನಾಟ್ಯ ಕಲಾವಿದೆ. ನೃತ್ಯವನ್ನು ಅನುಭವಿಸಿ ತಾದಾತ್ಮ್ಯತೆಯಿಂದ ನರ್ತಿಸುವ ಕಲೆ ಕರಗತ ಮಾಡಿಕೊಂಡ ಇವರು, ಇದುವರೆಗೂ ದೇಶ-ವಿದೇಶಗಳಲ್ಲಿ ಸೇರಿ ಸುಮಾರು ೫೦೦ ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ. ವಿವಿಧ ನೃತ್ಯೋತ್ಸವ ಹಾಗೂ ಸೋಲೋ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ ಐಶ್ವರ್ಯ ಭಾರತಾದ್ಯಂತ ಸಂಚರಿಸಿದ್ದಾರೆ. ನವದೆಹಲಿ, ಮುಂಬೈ,ಭುವನೇಶ್ವರ, ಗೌಹಾತಿ, ಕ್ಯಾಲಿಕಟ್,ಚೆನ್ನೈ, ತಿರುಪತಿ,ಚಿದಂಬರಂ, ಪೊಲ್ಲಾಚಿ, ಉಡುಪಿ, ಪುತ್ತೂರಿನಿಂದ ಹಿಡಿದು ಅಮೇರಿಕದ ಲಾಸೇಂಜಲೀಸ್, ವಾನ್ ಕೊವರ್, ಲೋವಾ,ವಾಷಿಂಗ್ಟನ್ ಡಿ.ಸಿ., ಹೂಸ್ಟನ್, ಆಸ್ಟಿನ್,ಚೀನಾ, ಕೆನಡಾ ಮುಂತಾದ ಅನೇಕ ದೇಶಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಿದ ಕೀರ್ತಿ ಇವರದು.
ಐಶ್ವರ್ಯ, ಮುಖ್ಯಪಾತ್ರದಲ್ಲಿ ಅಭಿನಯಿಸಿ ನೃತ್ಯ ಮಾಡಿದ ಪ್ರತಿಯೊಂದು ಕೃತಿಗಳೂ ಪ್ರೇಕ್ಷಕರ ಮನಸೂರೆಗೊಂಡು ಮೆಚ್ಚುಗೆ ಪಡೆದಿವೆ. `ಹನುಮದ್ವಿಲಾಸ’ದಲ್ಲಿ ತೋರಿದ ಹನುಮಂತನ ಭಾವಾಭಿವ್ಯಕ್ತಿ- ಭಕ್ತಿಯ ಪರಾಕಾಷ್ಠೆಗಳು ಗಮನ ಸೆಳೆದಿದ್ದವು. `ಮೋಹಿನಿ ಭಸ್ಮಾಸುರ’ದಲ್ಲಿ ಮೋಹಿನಿ, `ಕಾಳಿಂಗ ಮರ್ಧನ’ದಲ್ಲಿ ಪುಟ್ಟ ಕೃಷ್ಣ, ಜಯದೇವನ `ಗೀತಗೋವಿಂದ’ ದಲ್ಲಿ ಕೃಷ್ಣ ಮುಂತಾದ ಪಾತ್ರಗಳಿಗೆ ಜೀವತುಂಬಿ ನರ್ತಿಸಿದ್ದಲ್ಲದೆ, ಇವರು ನಿರ್ವಹಿಸಿದ `ಕೋಳೂರು ಕೊಡಗೂಸು’ ನೃತ್ಯರೂಪಕದಲ್ಲಿ ಕೋಳೂರ ಕೂಸಾಗಿ, ಅತ್ಯಂತ ಮುಗ್ಧ, ಪರಿಣಾಮಕಾರಿ ಅಭಿನಯ ತೋರಿ ತಾವು ಹುಟ್ಟು ಕಲಾವಿದೆ ಎಂಬುದನ್ನು ಮನದಟ್ಟು ಮಾಡಿದರು .
ವೇದಿಕೆಯ ಮೇಲೆ ಮನೋಜ್ಞವಾಗಿ ನರ್ತಿಸುವುದರೊಂದಿಗೆ ಐಶ್ವರ್ಯ, ನೃತ್ಯ ಸಂಯೋಜನೆಯಲ್ಲೂ ಅಷ್ಟೇ ಸೃಜನಶೀಲ ಪ್ರತಿಭಾಶಾಲಿ ಕೂಡ. ಇವರ ಮುಖ್ಯ ಸಂಯೋಜನೆಗಳಲ್ಲಿ ಕೆಲವು- ಶ್ರೀ ಗುರುವಂದನಾ , ಶ್ರೀ ಕೃಷ್ಣ ವಂದೇ ಜಗದ್ಗುರುಂ, ಲೋಕ ಬಾಂಧವ್ಯಂ, ಅಯೋಧ್ಯಾ ಖಾಂಡ ರಾಮಾಯಣಂ, ಅರ್ಧ ನಾರೀಶ್ವರಂ, ಮೈಸೂರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ರಚನೆಗಳು,ಸೌಂದರ್ಯ ಲಹರಿ ಮತ್ತು ಡಿ.ವಿಜಿ ಅವರ ಅಂತಃಪುರ ಗೀತೆಗಳು ಮುಂತಾದವು.
ಉತ್ತಮ ಕಲಾವಿದೆಯೆಂದು ಗುರುತಿಸಿಕೊಂಡಿರುವ ಈಕೆ ಭಾಗವಹಿಸಿರುವ ಮುಖ್ಯ ನೃತ್ಯೋತ್ಸವಗಳು- ಚೀನಾದಲ್ಲಿ ನಡೆದ 16 ನೇ ಏಷ್ಯನ್ ಗೇಮ್ಸ್‍ನ ಸಂದರ್ಭದಲ್ಲಿ ` ಮ್ಯೂಸಿಕ್ ಫರ್ ಕಲ್ಚರಲ್ ಹಾರ್ಮನಿ’, ನವದೆಹಲಿಯ ಇಂಡಿಯನ್ ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ನಡದೆ ಡ್ಯಾನ್ಸ್ ಫೆಸ್ಟಿವಲ್, ಚೆನ್ನೈ ಗಾನ ಸಭಾ ಉತ್ಸವ, ವಿಪಂಚಿ ಆರ್ಟ್ ಫೆಸ್ಟಿವಲ್, ಚಿದಂಬರಂ ನಾಟ್ಯಾಂಜಲಿ ಫೆಸ್ಟಿವಲ್, ಕರ್ನಾಟಕ ಉತ್ಸವ, ಮೈಸೂರು ದಸರಾ ಉತ್ಸವ, ತಿರುಪತಿ ಬ್ರಹ್ಮೋತ್ಸವ, ಕೇಶವ ನೃತ್ಯೋತ್ಸವ, ಅಂಕುರ ನೃತ್ಯೋತ್ಸವ , ಹಂಪಿ ಉತ್ಸವ, ಕಿಂಕಿಣಿ,ನೂಪುರ ನೃತ್ಯೋತ್ಸವ, ಪಲ್ಲವೋತ್ಸವ, ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ, ಬೆಂಗಳೂರು ಹಬ್ಬ ಮುಂತಾದವು. ಜೊತೆಗೆ ತಮ್ಮ ಸುಮಧುರ ಕಂಠದಿಂದ ನಡೆಸಿರುವ ಸಂಗೀತ ಕಛೇರಿಗಳು ಅನೇಕಾನೇಕ.
ಕನ್ನಡ ಸಂಸ್ಕೃತಿ ಇಲಾಖೆಯ ರಾಜ್ಯಮಟ್ಟದ ಭರತನಾಟ್ಯದ ಸ್ಪರ್ಧೆಯಲ್ಲಿ `ಕಿಶೋರ ಪ್ರತಿಭೆ’ ಮತ್ತು ಉಡುಪಿಯಲ್ಲಿ ನಡೆದ ಹೆಜ್ಜೆ-ಗೆಜ್ಜೆಯ ಸ್ಪರ್ಧೆಯಲ್ಲಿ `ಪ್ರಥಮ ಬಹುಮಾನ ಗಳಿಕೆ. `ಆರ್ಯಭಟ’ ಅಂತರ ರಾಷ್ಟ್ರೀಯ ಪ್ರಶಸ್ತಿ, ಗದಗದ ಕಲಾ ವಿಕಾಸನಾ ಪರಿಷದ್‍ನ ಡಾ. ಪಂಡಿತ ಪುಟ್ಟರಾಜ ಗವಾಯಿ ಯುವಪ್ರತಿಭೆ ಪ್ರಶಸ್ತಿ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ `ಯಂಗ್ ಅಚೀವರ್ಸ್ ‘ ಪ್ರಶಸ್ತಿ, ಚೆನ್ನೈನ ಬಾಲ ನೃತ್ಯಪಟು ಎಂ.ಜಿ.ಆರ್ ಅವಾರ್ಡ್, ನಾಟ್ಯ ಕಲಾ ವಿಪಂಚಿ, ಕಲಾ ಸೇವಾ ತಿಲಕ ಮುಂತಾದ ಬಿರುದು-ಬಹುಮಾನಗಳು, ಗೌರವ-ಸನ್ಮಾನಗಳು ಇವಳ ಮುಡಿಗೇರಿವೆ.
ಓದಿನಲ್ಲೂ ಬುದ್ಧಿವಂತೆಯಾದ ಐಶ್ವರ್ಯ. ಮೊದಲ ತರಗತಿಯಿಂದಲೂ ಪ್ರಥಮ ಸ್ಥಾನದಲ್ಲೇ ಮುಂದುವರಿದಿದ್ದು, ಬಿಕಾಂ ಪದವಿ ಗಳಿಸಿದ ನಂತರ ಸಿ.ಎ. ಮುಗಿಸಿ ಚಾರ್ಟೆಡ್ ಅಕೌಂಟೆಂಟ್ ಆಗಿ ವೃತ್ತಿಪರರಾಗಿದ್ದಾರೆ. ಹೀಗೆ ಉದ್ಯೋಗರಂಗದಲ್ಲೂ ಯಶಸ್ಸು ಕಂಡಿರುವ ಐಶ್ವರ್ಯ ನೃತ್ಯ ರಂಗದ ಅಭಿಜಾತ ಕಲಾವಿದೆಯಾಗಿ ಹೆಚ್ಚಿನದನ್ನು ಸಾಧಿಸುವ ತುಡಿತ ಹೊಂದಿದ್ದಾರೆ. ಉದ್ಯಮಿ ಪತಿ ಆದರ್ಶ್ ಮತ್ತು ಐದುವರ್ಷದ ಪುಟ್ಟ ಕಿಶೋರ ಅರ್ಜುನಸಿಂಹರಿಂದ ಒಡಗೂಡಿದ ಮುದ್ದಾದ ಸುಖ ಸಂಸಾರ ಇವರದು.
2 comments
I liked the article sandhyaji. i wish to add, please give credits to the photographers too. We too have contributed a little bit for the dance fraternity. We need our picture credits when you use them. It will also appreciate for the efforts a photographer.
regards
jayasimha
Simha’s Photography
sorry I dont know you personally. I didnt ask photos from you. Dancers or organisers will send photos. we dont have provision to print all the photographers names. This magazine is free of cost. we dont charge writers, Drama artists and dancers etc.