ಸಿರಸಿಯಲ್ಲಿ ಹುಟ್ಟಿ ಬೆಳೆದ ಬಹುಮುಖ ಆಸಕ್ತಿಯ ಸ್ಮಿತಾ ಪ್ರಕಾಶ್ ಉತ್ತಮ ಭರತನಾಟ್ಯ ಕಲಾವಿದೆ. ಜೊತೆಗೆ ಕೂಚಿಪುಡಿ ಮತ್ತು ಕಥಕ್ ನೃತ್ಯಶೈಲಿಯಲ್ಲೂ ಪರಿಶ್ರಮ ಹೊಂದಿರುವುದು ಇವರ ವಿಶೇಷ. ವಂದನಾ ಮತ್ತು ರಮೇಶ್ ನಾಯಕರ ಪುತ್ರಿಯಾದ ಇವರಿಗೆ ಬಾಲ್ಯದಿಂದಲೂ ನೃತ್ಯಾಸಕ್ತಿ. ಏಳುವರ್ಷಕ್ಕೆ ಭರತನಾಟ್ಯ ಕಲಿಯಲಾರಂಭಿಸಿದರು. ವಿದುಷಿ ಸೀಮಾ ಭಾಗವತ್ ನಾಟ್ಯಗುರು. ಅತ್ಯಾಸಕ್ತಿಯಿಂದ ನೃತ್ಯ ಕಲಿತ ಸ್ಮಿತಾ, ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಶ್ರೇಷ್ಟಾಂಕಗಳಿಂದ ಜಯಶೀಲರಾದರು. ಇಷ್ಟುಹೊತ್ತಿಗೆ ಶಾಲಾ-ಕಾಲೇಜುಗಳ ನೃತ್ಯ ಸ್ಪರ್ಧೆಗಳಲ್ಲಿ ಗುರುತಿಸಿಕೊಂಡು ಬಹುಮಾನ ಗಳಿಸಿದ್ದರು. ಕಥೆ-ಕವನ, ಲೇಖನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದ ಸ್ಮಿತಾ ನಾಟಕಗಳಲ್ಲೂ ಅಭಿನಯಿಸಿ ಗಮನ ಸೆಳೆದಿದ್ದರು. ಏಕ ಪಾತ್ರಾಭಿನಯ, ನಿರೂಪಣೆ ಇವರ ಇನ್ನೊಂದು ಆಸಕ್ತ ಕ್ಷೇತ್ರ.
![](http://sandhyapatrike.com/wp-content/uploads/2020/04/FB_IMG_1568709471326.jpg)
ಬರವಣಿಗೆಯನ್ನು ರೂಢಿಸಿಕೊಂಡಿದ್ದ ಸ್ಮಿತಾ, ‘ಪತ್ರಿಕೋದ್ಯಮ’ ದಲ್ಲಿ ಪದವೀಧರೆಯಾದರು . ಪತ್ರಿಕೆಗಳಿಗೆ ಬರೆಯುತ್ತಲೇ, ಸಮಾಜಶಾಸ್ತ್ರದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿ, ಕೆಲಕಾಲ ಉಪನ್ಯಾಸಕರಾಗಿಯೂ ಉದ್ಯೋಗ ಮಾಡಿದ್ದು ಇವರ ವಿಶೇಷ. ನಾಟ್ಯಾಭ್ಯಾಸ ಮಾತ್ರ ಜೊತೆಯಲ್ಲಿ ಸಾಗುತ್ತಲೇ ಇತ್ತು. ಸುಮಾರು 22 ವರ್ಷಗಳಿಗೂ ಮಿಕ್ಕು ನೃತ್ಯಾನುಭಾವವುಳ್ಳ ಇವರು, ಅನೇಕ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಲೇ, ಬೆಳಗಾವಿಯಲ್ಲಿ ಗುರು ರೇಖಾ ಹೆಗಡೆ ಅವರಲ್ಲಿ ಹೆಚ್ಚಿನ ಕಲಿಕೆ ಹೊಂದಿ, ಪ್ರೀ ವಿದ್ವತ್ ಪರೀಕ್ಷೆಯಲ್ಲಿ 2ನೆಯ ರ್ಯಾಂಕ್ ಮತ್ತು ‘ವಿದ್ವತ್‘ ನಲ್ಲಿ ಪ್ರಥಮ ದರ್ಜೆ ಪಡೆದರು.
![](http://sandhyapatrike.com/wp-content/uploads/2020/04/Smitha-Prakash-2-1.png)
ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ಸ್ಮಿತಾ, ಸ್ಥಾಪಿಸಿದ ‘ ಶ್ರೀ ಮಾರಿಕಾಂಬ ನೃತ್ಯಕಲಾ ಕೇಂದ್ರ’ ‘ನಡೆದಾಡುವ ಶಾಲೆ’ಯಾಗಿ ಬಿಟ್ಟಿದೆ ಎಂದು ಅವರೇ ಹೇಳಿಕೊಳ್ಳುವರು. ಪ್ರತಿ ಮೂರುವರ್ಷಗಳಿಗೆ ಊರಿಂದ ಊರಿಗೆ ವರ್ಗವಾಗುವ ‘ನ್ಯಾಯಾಧೀಶ’ ಪತಿಯ ಉದ್ಯೋಗ ನಿಮಿತ್ತ ಅನಿವಾರ್ಯವಾಗಿ ತಮ್ಮ ನೃತ್ಯಶಾಲೆಯನ್ನು ‘ಜಂಗಮ ಶಾಲೆ’ಯನ್ನಾಗಿಸಿದ್ದಾರೆ. ಈಗಾಗಲೇ ಅವರು, ಶಿರಾಳಿ, ಭಟ್ಕಳ, ಯಲ್ಲಾಪುರ, ಕುಂದಾಪುರ, ಹಳಿಯಾಳ, ಬೆಳಗಾವಿ ಮತ್ತು ಚಿಕ್ಕನಾಯಕನಹಳ್ಳಿ ಮುಂತಾದೆಡೆಗಳಲ್ಲಿ ನೂರಾರು ನೃತ್ಯಾಂಕಾಂಕ್ಷಿಗಳಿಗೆ ಬದ್ಧತೆಯಿಂದ ನೃತ್ಯ ಕಲಿಸಿದ್ದಾರೆ. ಇವರ ಅನೇಕ ಜನ ವಿದ್ಯಾರ್ಥಿಗಳು, ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದು, ಸ್ಮಿತಾ, ಕರ್ನಾಟಕ ಸರ್ಕಾರ ನಡೆಸುವ ನೃತ್ಯಪರೀಕ್ಷೆಗಳಲ್ಲಿ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಬೆಂಗಳೂರಿನ ‘ರಿದಂ ಇನ್ಸ್ಟಿಟ್ಯುಟ್ ಆಫ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಅತಿಥಿ ನೃತ್ಯಶಿಕ್ಷಕಿಯಾಗಿದ್ದಾರೆ.
![](http://sandhyapatrike.com/wp-content/uploads/2020/04/Smitha-prakash-1.png)
ಪ್ರಖ್ಯಾತ ನಾಟ್ಯಗುರು ಮಾಯಾರಾವ್ ಅವರಲ್ಲಿ ‘ಕಥಕ್’ ನೃತ್ಯಾಭ್ಯಾಸ ಮಾಡಿ ಡಿಪ್ಲೊಮಾ ಪಡೆದಿದ್ದಾರೆ. ಕಳೆದ 9 ವರ್ಷಗಳಿಂದ ಕೂಚಿಪುಡಿ ನೃತ್ಯ ಕಲಿಯುತ್ತಿರುವುದಲ್ಲದೆ, ಭರತನಾಟ್ಯದ ವಿವಿಧ ಆಯಾಮಗಳ ಅಭ್ಯಾಸದಲ್ಲಿ ತೊಡಗಿದ್ದಾರೆ. ಗುರು ಭಾನುಮತಿಯವರ ಕಾರ್ಯಾಗಾರದಲ್ಲಿ ‘ಅಭಿನಯ’ದಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ. ಸುಮಾರು ಐದುನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಸ್ಮಿತಾ, ದೂರದರ್ಶನದ ಚಂದನ ಮತ್ತು ‘ಈ ’ ಟಿವಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕಾಲೇಜಿನ ದಿನಗಳಿಂದ ಎನ್.ಸಿ.ಸಿ ಕೆಡೆಟ್ ಆಗಿದ್ದ ಸ್ಮಿತಾ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ನಡೆದ ನೃತ್ಯಸ್ಪರ್ಧೆಯಲ್ಲಿ ಎರಡು ಬಾರಿ ರಾಷ್ಟ್ರೀಯಮಟ್ಟದಲ್ಲಿ ‘ಸ್ವರ್ಣಪದಕ’ ವಿಜೇತೆಯಾಗಿದ್ದು ಇವರ ಅಗ್ಗಳಿಕೆ.
ಬೆಂಗಳೂರಿನ ‘ಯುವಜನೋತ್ಸವ’ದಲ್ಲೂ ಬಹುಮಾನ ಗೆದ್ದ ಸ್ಮಿತಾ, ಧಾರವಾಡದಲ್ಲಿ ಪ್ರಥಮಸ್ಥಾನ ಗಳಿಸಿಕೊಂಡರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನಟುವಾಂಗ ಕಲಿಯುತ್ತಿರುವ ಇವರು, 2007 ರಲ್ಲಿ ‘ರಂಗಪ್ರವೇಶ’ ಮಾಡಿದ ನಂತರ ಬೆಳಗಾವಿಯಲ್ಲಿ ‘ಸುರೇಂದ್ರ ಕಾಮತ್’ ಟ್ರೋಫಿ, ಇತ್ತೀಚಿಗೆ ರಾಜ್ಯಮಟ್ಟದಲ್ಲಿ ‘ ಶ್ರೇಷ್ಠ ನೃತ್ಯಶಿಕ್ಷಕಿ ’ ಪ್ರಶಸ್ತಿ ಪಡೆದಿದ್ದಾರೆ. ಇವರು ಭಾಗವಹಿಸಿದ ನೃತ್ಯೋತ್ಸವಗಳೆಂದರೆ- ಕದಂಬೋತ್ಸವ, ಶರಾವತಿ-ಹಳಿಯಾಳ, ಕರಾವಳಿ ಉತ್ಸವಗಳಲ್ಲದೆ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಉತ್ಸವಗಳು. ಮಹಿಷಾಸುರ ಮರ್ಧಿನಿ, ದಶಾವತಾರ, ಕರ್ನಾಟಕ ವೈಭವ, ಕೃಷ್ಣಲೀಲಾ ಇವರ ನಿರ್ಮಾಣದ ನೃತ್ಯರೂಪಕಗಳು.
![](http://sandhyapatrike.com/wp-content/uploads/2020/04/FB_IMG_1568709338664-1-684x1024.jpg)
ಇವರ ಆರುವರ್ಷದ ಹಿರಿಮಗಳು ‘ತನ್ವೀ’ ತಾಯಿಯಂತೆ ಪ್ರತಿಭಾನ್ವಿತೆ. ತಾಯಿಯ ಬಳಿಯೇ ಭರತನಾಟ್ಯ ಕಲಿಯುತ್ತಿದ್ದು, ಈಗಾಗಲೇ ಐವತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಭರವಸೆ ಮೂಡಿಸಿದ್ದಾಳೆ. ಪುಟ್ಟಮಗು ಶ್ರೀಆದ್ಯ ಮತ್ತು ಕಲಾಪೋಷಕ ಪತಿ ಪ್ರಕಾಶ್ ನಾಯಕರೊಂದಿಗಿನ ಸುಖಸಂಸಾರ ಇವರದು.