Image default
Dance Reviews

ಪರಿಣಿತ ಅಭಿನಯದಿಂದ ಕಂಗೊಳಿಸಿದ ಅಕ್ಷತಾ ನೃತ್ಯ

ಮೊದಲ ಹೆಜ್ಜೆಯ ಪಲುಕಿನಲ್ಲೇ ತಾವೊಬ್ಬ ನುರಿತ ನೃತ್ಯಕಲಾವಿದೆ ಎಂಬುದನ್ನು ಬಿಂಬಿಸಿದ ವಿದುಷಿ. ಅಕ್ಷತಾ ಶ್ರೀನಿವಾಸಮೂರ್ತಿ, ಇತ್ತೀಚಿಗೆ ಮಲ್ಲೇಶ್ವರದ `ಸೇವಾಸದನ’ದಲ್ಲಿ ತಮ್ಮ ‘ರಂಗಪ್ರವೇಶ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಂಡರು.

ಖ್ಯಾತ `ಶಿವಪ್ರಿಯ’ ನಾಟ್ಯಸಂಸ್ಥೆಯ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಪಾರಂಗತ ಗುರು ಡಾ.ಸಂಜಯ್ ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಅಕ್ಷತಾ ಅಂದು ಪ್ರಸ್ತುತಿಗೊಳಿಸಿದ ಎಲ್ಲ ಕೃತಿಗಳೂ ವಿಶಿಷ್ಟವಾಗಿದ್ದವು. ಮೊದಲಿಗೆ ಸಾಂಪ್ರದಾಯಕ `ಪುಷ್ಪಾಂಜಲಿ’ ಯಲ್ಲಿ ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ಕೃತಜ್ಞತೆಯನ್ನು ಅರ್ಪಿಸಿದ ಪರಿ, ಶಿರೋಭೇದ ಮತ್ತು ದೃಷ್ಟಿಭೇದಗಳ ವಿಶಿಷ್ಟತೆಯಿಂದ ಆರಂಭಿಸಿ ಸುಮನೋಹರ ನೃತ್ತಗಳ ನಿರೂಪಣೆಯಿಂದ ಅಕ್ಷತಾ ನೋಡುಗರನ್ನು ಆಕರ್ಷಿಸಿದಳು. ಅನಂತರ ಕಾಮವರ್ಧಿನಿ ರಾಗದ ‘ಗಣೇಶ ಸ್ತೋತ್ರ’ವನ್ನು ಮುದ್ದುಗಣಪನ ವರ್ಣನೆಯಿಂದ ತನ್ನ ಸುಂದರ ಆಂಗಿಕಾಭಿನಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಿದಳು.

ಭಕ್ತಿಭಾವದ ಸಿಂಚನಗೈದ `ಮಹಾಲಕ್ಷ್ಮೀ ದೇವಿ ಸ್ತುತಿ’ (ಮಿಶ್ರಚಾಪು ತಾಳ-ರಚನೆ ಪಾಪನಾಶಂ ಶಿವಂ) ಯಲ್ಲಿ ದೇವಿಯ ರೂಪ ವರ್ಣನೆ, ಮಹಿಮೆಗಳನ್ನು ಬಣ್ಣಿಸಿ, ದಯೆ ಪಾಲಿಸೆಂದು ಬೇಡುವ ಕೃತಿಯಲ್ಲಿ, ಕಲಾವಿದೆಯ ದೈವೀಕ ಅಭಿನಯ, ಪರಿಣಾಮಕಾರಿ ವರ್ಚಸ್ವೀ ಮುಖಭಾವ ಸೆಳೆಯಿತು. ಕೃತಿಯ ಮಧ್ಯ ಉಲಿದ ಲವಲವಿಕೆಯ ನೃತ್ತಗಳ ಹೆಜ್ಜೆನಾದ ಪ್ರಸ್ತುತಿಯ ಚೆಲುವನ್ನು ವರ್ಧಿಸಿತು. ದೇವಿಯ ಭಂಗಿಗಳು ಚೇತೋಹಾರಿಯಾಗಿ ಕಣ್ಸೆಳೆದವು.

ಪ್ರಸ್ತುತಿಯ ಹೃದಯಭಾಗ `ವರ್ಣ – ಸಂಜಯ್ ವಿರಚಿತ `ಅಮೃತವರ್ಷಿಣಿ’ ರಾಗದ ‘ ಕಮಲನಾಭನ ಕರೆ ತಾರೇ ಸಖಿ’ ಎಂಬ ನೋವಿನ ಮಿಡಿತದ ಅನುರಣನವನ್ನು ಸಂಜಯ್ ಅವರ ಭಾವಪೂರ್ಣ ಧ್ವನಿ ಸಮಂಜಸವಾಗಿ ಎತ್ತಿಹಿಡಿಯಿತು. ನವವಿನ್ಯಾಸದ ಕ್ಲಿಷ್ಟನೃತ್ತಗಳೊಂದಿಗೆ, ಮುದನೀಡುವ ಅಭಿನಯ ವೈವಿಧ್ಯದೊಂದಿಗೆ ಕಲಾವಿದೆ, ವಿನೂತನ ಅನುಭವ ನೀಡಿದಳು. ಇನಿಯ ಕೃಷ್ಣನ ಅಗಲಿಕೆಯನ್ನು ಸಹಿಸದ ರಾಧೆಯ ವಿರಹದ ಬೇಗುದಿ-ವ್ಯಥೆಯನ್ನು ಅಕ್ಷತಾ ಮನತಾಗುವಂತೆ ಅಭಿವ್ಯಕ್ತಿಸಿದಳು. ಅನಂತರದ ಸಂಚಾರಿಯಲ್ಲಿ, ರಾಧೆಯ ಮನಃಪಟಲದ ಮೇಲೆ ಕೃಷ್ಣನ ಬಾಲಲೀಲೆಗಳು ದೃಶ್ಯವತ್ತಾಗಿ ಸಾಗಿದವು. ಬಾಲಕೃಷ್ಣನ ಒಂದೊಂದು ತುಂಟಾಟವೂ ವಿಷದವಾಗಿ ಮೂಡುತ್ತಾ, ಅವುಗಳ ಅಭಿನಯದಲ್ಲಿ ಅನುಭವದ ಮುಖಭಾವ ಮಿನುಗಿ, ಕಲಾವಿದೆಯ ಕಾಲುಗಳ ಕಸುವು ಹೆಚ್ಚಾದುದು ಸಂಚಾರಿಯ ಪೂರ್ಣತೆಗೆ ಬೆಂಬಲ ನೀಡಿದವು. ನೃತ್ತಗಳಲ್ಲಿ ಪಾದರಸದ ಮಿಂಚು, ಲಾಸ್ಯಗಳ ಸಂಭ್ರಮ ಖಷಿ ನೀಡಿತು. ಕೃಷ್ಣನ ಬಗೆಗಿನ ಅನನ್ಯ ಒಲವು, ದೈವೀಕ ಭಕ್ತಿ ಮಿಶ್ರಣಗೊಂಡು ಪರಾಕಾಷ್ಟತೆಯಲ್ಲಿ ಭಾವಸಮಾಧಿಯ ತಾದಾತ್ಮ್ಯತೆ ಕೆನೆಗಟ್ಟಿತು. ಕಲಾವಿದೆಯ ಅಂಗಶುದ್ಧಿ, ಖಚಿತ ಹಸ್ತಚಲನೆ, ಅಡವುಗಳ ಸೊಗಸೂ ಪ್ರಸ್ತುತಿಗೆ ಪೂರಕವಾಯಿತು.

ಮುಂದೆ, ಸುಮಧುರ ಶೃಂಗಾರ ವಸ್ತುವಾಗುಳ್ಳ ಆಡುಭಾಷೆಯ `ಜಾವಳಿ’ ಮನರಂಜನೆಯ ಸ್ತರದಲ್ಲಿ ಪ್ರಸ್ತುತಿಗೊಂಡಿತು. ಶಿವ-ಪಾರ್ವತಿಯರ ನಡುವಣ ಸರಸ-ಸುಂದರ ಸನ್ನಿವೇಶದ ಚಿತ್ರಣವನ್ನು ಅಕ್ಷತಾ ಸುಭಗವಾಗಿ ಕಟ್ಟಿಕೊಟ್ಟಳು. ಗಂಡನ ಮೇಲೆ ಹುಸಿಮುನಿಸು ತೋರಿದ ಶಿವೆಯ ಸಿಟ್ಟಿಗೆ ಕಾರಣ, ಅವನು ತನ್ನ ತಲೆಯ ಮೇಲೆ ಗಂಗೆಯನ್ನು ಧರಿಸಿ ಅವಳಿಗೆ ಪ್ರಾಮುಖ್ಯವನ್ನಿತ್ತು, ತನ್ನ ಬಗ್ಗೆ ಅನಾದರ ತೋರುತ್ತಿರುವನೇ ಎಂಬ ಶಂಕೆ.  `ಆಹಾ ಬಂದ ನೋಡೆ ಕೆಂಜೆಡೆಯವನು, ಸಖಿ’ ಎಂದು ಗಂಡನ ಅನ್ಯಮನಸ್ಕತೆಯ ಬಗ್ಗೆ ಗೆಳತಿಯೊಡನೆ ವ್ಯಂಗ್ಯವಾಗಿ ದೂರುತ್ತಾ, ಅವನನ್ನು ತರಾಟೆಗೆ ತೆಗೆದುಕೊಳ್ಳುವ ಸನ್ನಿವೇಶ ಲಹರಿಯಲ್ಲಿ ಸಾಗಿ, ಮನಸ್ಸಿಗೆ ಮುದನೀಡುವ ಈ ಸಂದರ್ಭ, ಸಾಮಾಜಿಕ ಆಯಾಮವನ್ನು ವಿಸ್ತರಿಸಿತು. ಕಡೆಗೆ ಶಿವ, ಅವಳಿಗೆ ತನ್ನ ದೇಹದ ವಾಮಭಾಗದಲ್ಲಿ ಅರ್ಧಾಂಗ ನೀಡಿದಾಗ, ಅವಳಲ್ಲಿ ಪಶ್ಚಾತ್ತಾಪದ ಭಾವನೆಯೊಂದಿಗೆ, ಧನ್ಯತೆ ಮತ್ತು ಕಣ್ಣಲ್ಲಿ ಕೃತಜ್ಞತಾರ್ಪಣೆಯ ಭಾವ ಕಾರಂಜಿ ಅಭಿವ್ಯಕ್ತವಾಯಿತು. ಕಲಾವಿದೆಯ ಪಾತ್ರದೊಳಗಿನ ಪರಕಾಯ ಪ್ರವೇಶ ಪ್ರಸ್ತುತಿಯ ಪರಿಣಾಮವನ್ನು ಹೆಚ್ಚಿಸಿತು.

ಅನಂತರ, ಜಯದೇವ ಕವಿಯ `ಗೀತಗೋವಿಂದ’ ದ ‘ಅಷ್ಟಪದಿ’ಯ ರಸಮಯ ಕಾವ್ಯವನ್ನು ಕಲಾವಿದೆ ವಿಹಂಗಮವಾಗಿ ಪ್ರದರ್ಶಿಸಿದಳು. `ರಾಧಾ ವದನ ವಿಲೋಚಿತ ವಿಕಸನ’ ಎಂದು ಪ್ರಾರಂಭವಾಗುವ ಮಧುರ ಸಾಲುಗಳಲ್ಲಿ ರಾಧಾ-ಕೃಷ್ಣರ ಸರಸ ಸನ್ನಿವೇಶಗಳನ್ನು ಸುಂದರವಾಗಿ ಸೆರೆಹಿಡಿಯಲಾಯಿತು. ಮಧ್ಯಮಾವತಿ ರಾಗದ ಸುಶ್ರಾವ್ಯತೆ ಮನಸ್ಸನ್ನು ಮಿಡಿಯುವಂತೆ ಮಾಡಿತು. ಪರಸ್ಪರ ವರ್ಣಿಸಿ ತಣಿಯುವ ಪ್ರೇಮಿಗಳ ರಮ್ಯಭಾವನೆಗಳ ಸರಸದಾಟವನ್ನು ಕಲಾವಿದೆ ಸುಂದರವಾಗಿ ಅಭಿವ್ಯಕ್ತಿಸಿದಳು. ಬಾಲಮುರಳೀ ಕೃಷ್ಣ ರಚಿಸಿದ `ತಿಲ್ಲಾನ’- ಚುರುಕಾದ ಜತಿಗಳಿಂದ, ಶೀಘ್ರಗತಿಯ ಪಾದಭೇದಗಳ ರಮಣೀಯತೆಯಿಂದ ಸೊಗಯಿಸಿತು.

ಹಿನ್ನಲೆಯ ವಾದ್ಯಗೋಷ್ಠಿಯಲ್ಲಿ, ನಟುವಾಂಗಂ ಮತ್ತು ಗಾಯನ ಡಾ.ಸಂಜಯ್ ಶಾಂತಾರಾಮ್, ತಬಲಾ- ತುಮಕೂರು ಬಿ. ಶಶಿಶಂಕರ್, ವೀಣೆ-ವಿ.ಗೋಪಾಲ್, ಕೊಳಲು- ನರಸಿಂಹಮೂರ್ತಿ ಮತ್ತು ರಿದಂ ಪ್ಯಾಡ್- ಕಾರ್ತೀಕ ದಾತಾರ್ ಅದ್ಭುತ ಸಹಕಾರ ನೀಡಿದರು.  

Related posts

ಅಂಗಶುದ್ಧಿಯ ಸುಮನೋಹರ ನಿಶಾ ನರ್ತನ

YK Sandhya Sharma

ಸೃಷ್ಟಿಯ ಸಾತ್ವಿಕಾಭಿನಯದ ಕಲಾತ್ಮಕ ನರ್ತನ

YK Sandhya Sharma

ಗೀತ ಗೋವಿಂದ -ಆಹ್ಲಾದಕರ ಶೃಂಗಾರ ರಸಧಾರೆ

YK Sandhya Sharma

Leave a Comment

This site uses Akismet to reduce spam. Learn how your comment data is processed.