Image default
Dancer Profile

ನಾಟ್ಯ-ನಟನಾ ನಿಪುಣ ಪ್ರಶಾಂತ್ ಗೋಪಾಲ್ ಶಾಸ್ತ್ರೀ

ನೋಡಲು ಸ್ಫುರದ್ರೂಪಿ. ಲೀಲಾಜಾಲವಾಗಿ ಆಂಗಿಕಾಭಿನಯವನ್ನು ಅಭಿವ್ಯಕ್ತಿಸಲು ದತ್ತವಾದ ಮೈಕಟ್ಟು. ಜನ್ಮಜಾತವಾಗಿ ಬಂದ ನೃತ್ಯ ಪ್ರತಿಭೆ, ಪ್ರಶಾಂತ್ ಪಡೆದ ವರಗಳು. ತಾಯಿ ಹೆಸರಾಂತ ಭರತನಾಟ್ಯ ವಿದುಷಿ, ನಾಟ್ಯಗುರು ದಿ. ಪ್ರಭಾವತಿ ಶಾಸ್ತ್ರೀಯವರಿಂದ ನಾಟ್ಯಶಿಕ್ಷಣ ಪಡೆದುಕೊಳ್ಳುವ ಅದೃಷ್ಟ ಇವರದಾಗಿತ್ತು. ತಂದೆ ಕಲಾರಾಧಕ ಗೋಪಾಲಶಾಸ್ತ್ರಿಗಳ ಪ್ರೋತ್ಸಾಹವೂ ಅಧಿಕ. ತಾತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಸಿತಾರ್ ವಾದಕರು. ಸೋದರಿಯರು ನೃತ್ಯಕಲಾವಿದೆಯರು, ಒಬ್ಬರು ತಮಿಳು ಭಾಷೆಯ ಧಾರಾವಾಹಿಗಳಲ್ಲಿ ಪ್ರಸಿದ್ಧ ನಟಿ. ಹೀಗಾಗಿ ಮನೆಯಲ್ಲಿ ಸಾಂಸ್ಕೃತಿಕ ವಾತಾವರಣ. ಹುಟ್ಟಿದ್ದು ಮುಂಬೈಯಾದ್ದರಿಂದ ನಿರರ್ಗಳವಾಗಿ ಪ್ರಶಾಂತ್, ಹಿಂದೀ, ಮರಾಠಿ ಭಾಷೆಗಳ ಜೊತೆ ಮನೆಮಾತು ಕನ್ನಡ, ಜೊತೆಗೆ ತೆಲುಗು, ತಮಿಳು ಇತರ ಭಾಷೆಗಳನ್ನು ಬಲ್ಲರು.

ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಇವರು ತಾಯಿಯ ಮಾರ್ಗದರ್ಶನದಲ್ಲಿ ನೃತ್ಯ ಕಲಾವಿದರಾಗಿ ಬೆಳೆದರು. ಶಾಲಾ-ಕಾಲೇಜು ದಿನಗಳಿಂದ ಭರತನಾಟ್ಯ ಪ್ರದರ್ಶನ ನೀಡುತ್ತ ನೃತ್ಯ ಪರೀಕ್ಷೆಗಳಲ್ಲೂ ಜಯಶೀಲರಾಗಿ, ರಂಗಪ್ರವೇಶ ಮಾಡಿದರು. ಎರಡನೆಯ ವರ್ಷದ ಎಲ್.ಎಲ್.ಬಿ ಓದುತ್ತಿರುವಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ನಿರ್ಮಾಣದ ‘’ ವಲ್ಲಿ’’ ತಮಿಳು ಚಿತ್ರದಲ್ಲಿ ನಟಿಸಲು ಆಹ್ವಾನ ಬಂತು. ಅದರಲ್ಲಿನ ಅವರ ಶಾಸ್ತ್ರೀಯ ನೃತ್ಯ ಅಪಾರ ಮೆಚ್ಚುಗೆ ಗಳಿಸಿ, ಹಿಂದೆಯೇ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಲು ಕರೆ ಬಂದಾಗ ಪ್ರಶಾಂತ್ ಓದನ್ನು ಅರ್ಧದಲ್ಲೇ ನಿಲ್ಲಿಸಿ, ತೆಲುಗು, ತಮಿಳು, ಮಲೆಯಾಳಂ, ಹಿಂದೀ ಮತ್ತು ಕನ್ನಡ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಗಮನ ಸೆಳೆದರು. ಕನ್ನಡದಲ್ಲಿ ‘’ರಂಗೋಲಿ’’ ಮುಂತಾದ ಒಟ್ಟು ನಲವತ್ತು ಚಿತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ಇವರದು. ಜೊತೆಗೆ ಅನೇಕ ಧಾರಾವಾಹಿಗಳಲ್ಲೂ.

ಇಷ್ಟಾದರೂ ಪ್ರಶಾಂತ್ ತಮ್ಮ ಮೂಲಸೆಲೆ ನೃತ್ಯಾಸಕ್ತಿಯನ್ನು ಮರೆಯಲಿಲ್ಲ. ಗುರು ಲಲಿತಾ ಶ್ರೀನಿವಾಸನ್ ಮತ್ತು ಖ್ಯಾತ ಧನಂಜಯನ್ಸ್ ಬಳಿ ಹೆಚ್ಚಿನ ಕಲಿಕೆಯನ್ನು ಅರ್ಜಿಸಿದರು. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತ ಕ್ರಿಯಾಶೀಲರಾದರು. ಚಿದಂಬರೋತ್ಸವ, ಬೃಹನ್ನಾಟ್ಯಾಂಜಲಿ, ಚೆನ್ನೈ, ತಿರುನಾಳ್, ಕುಂಭಕೋಣಂ, ಶ್ರೀಶೈಲಂ ಮುಂತಾಗಿ ತಮಿಳುನಾಡಿನಾದ್ಯಂತ, ಆಂಧ್ರದ ಮಲ್ಲಿಕಾರ್ಜುನ ದೇವಾಲಯದಲ್ಲಿ ಸತತ ಮೂರುವರ್ಷಗಳ ಕಾಲ ಪಾರಂಪರಿಕ ನೃತ್ಯಸೇವೆ ಸಲ್ಲಿಸಿದರು.  ಹೀಗೆ, ಸುಮಾರು ೩೫೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ  ದೇಶಾದ್ಯಂತ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದಲ್ಲದೆ,  ಪ್ಯಾರಿಸ್, ಸಿಂಗಾಪೂರ್, ಮತ್ತು ದುಬೈ ಮುಂತಾದ ವಿದೇಶದ ಸ್ಥಳಗಳಲ್ಲಿ ನೃತ್ಯ ಪ್ರಸ್ತುತಿಯೊಂದಿಗೆ ಕಾರ್ಯಾಗಾರಗಳನ್ನು ನಡೆಸಿಕೊಟ್ಟ ಅಗ್ಗಳಿಕೆ ಇವರದು. ಲತಾ ರಜನೀಕಾಂತ್ ನಿರ್ಮಾಣದ ‘ ಐಯಾಮ್ ಇಂಡಿಯಾ’’ ಎಂಬ ದೇಶಾದ್ಯಂತ  ನಡೆದ ನೃತ್ಯಕಾರ್ಯಕ್ರಮದ  ಭಾಗವಾಗಿದ್ದರು. 

ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಾಲ್ಕುವರ್ಷಗಳು ನೃತ್ಯಗುರುಗಳಾಗಿ ಸೇವೆ ಸಲ್ಲಿಸಿದ ಇವರು, ತಾಯಿಯವರು ಸ್ಥಾಪಿಸಿದ ‘ ನಾಟ್ಯ ಕಲಾಕ್ಷೇತ್ರ’ ವನ್ನು ಮುಂದುವರಿಸಿಕೊಂಡು ಹೋಗುತ್ತಾ ತಂದೆಯವರ ನೆನಪಿಗೆ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ, ನೃತ್ಯೋತ್ಸವ ಆಯೋಜಿಸಿ,  ಸನ್ಮಾನ ಮಾಡುವ ಉತ್ತಮ ಕೈಂಕರ್ಯ ಕೈಗೊಂಡಿದ್ದಾರೆ. ತಾಯಿಯವರ ಸವಿನೆನಪಿಗೆ ‘ನಾಟ್ಯ ಕಲಾಕ್ಷೇತ್ರ’ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ, ಪ್ರತಿಮಾಸ, ಭಾರತಾದ್ಯಂತ ಹಿರಿ ಕಲಾವಿದರಿಗೆ ಗೌರವ ಮನ್ನಣೆ ನೀಡಿ, ‘ನೃತ್ಯ ಪ್ರಭಾ’, ‘ವಾದ್ಯ ಪ್ರಭಾ’ ಮತ್ತು ‘ಸಂಗೀತ ಪ್ರಭಾ’ ಎಂಬ ಬಿರುದು-ಗೌರವ ಅರ್ಪಿಸಲಾಗುತ್ತಿದೆ. ಶೃಂಗಾರಮಣಿ, ಸುರಸಿಂಗಾರ್ ಪ್ರಶಸ್ತಿಗಳೊಡನೆ ದೆಹಲಿಯಲ್ಲಿ ಪ್ರದರ್ಶಿಸಿದ ‘ಶಿವತಾಂಡವ’ನೃತ್ಯಕ್ಕೆ ಪ್ರೆಸಿಡೆಂಟ್ ಸ್ವರ್ಣ ಪದಕ ಗಳಿಸಿದ ಕೀರ್ತಿ. ಜೀವನದ ಜೊತೆಗಾತಿ ನೃತ್ಯಕಲಾವಿದೆ, ‘ಅಮೇರಿಕಾ ಅಮೇರಿಕಾ’ ಚಲನಚಿತ್ರದ ಖ್ಯಾತಿಯ ‘ಹೇಮಾ ಪ್ರಭಾತ್ ‘ ಮತ್ತು ಪುಟ್ಟ ಕೂಸು ‘ಅದ್ವಿಕಾ’ ಳೊಂದಿಗಿನ ಸುಖಸಂಸಾರ ಅವರದು.  

Related posts

ಅನುಪಮ ಸಾಧಕಿ ಭರತನಾಟ್ಯ ಕಲಾವಿದೆ ಕೌಸಲ್ಯ ನಿವಾಸ್

YK Sandhya Sharma

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma

well known Kathak Exponent Veena Bhat

YK Sandhya Sharma

Leave a Comment

This site uses Akismet to reduce spam. Learn how your comment data is processed.