Image default
Dance Reviews

‘ಶ್ರೀರಾಮಾಯಣ ದರ್ಶನ’ದ ದಿವ್ಯಾನುಭೂತಿಯ ಸುಂದರ ದೃಶ್ಯಕಾವ್ಯ

ನಮ್ಮ ಭಾರತೀಯ ಮಹಾಕಾವ್ಯಗಳಾದ ರಾಮಾಯಣ -ಮಹಾಭಾರತಗಳು ಕಥಾನಕಗಳ ಒಂದು ಮಹಾಸಾಗರ. ಪಾತ್ರವೈವಿಧ್ಯಗಳ ಆಗರ. ಇಲ್ಲಿರದ ಪ್ರಪಂಚವಿಲ್ಲ. ಮೊಗೆದಷ್ಟೂ ಹೊಸ ಹೊಸ ಅರ್ಥ ಸ್ಫುರಿಸುವ ವಿಸ್ಮಯಗಳ ಗಣಿ. ಇಂಥ ಒಂದು ಹೊಸನೋಟ ನೀಡುವ ರಾಷ್ಟ್ರಕವಿ ಕುವೆಂಪು ವಿರಚಿತ ‘ರಾಮಾಯಣ ದರ್ಶನಂ’ ಕೃತಿಯನ್ನು ವಿವಿಧ ಪ್ರಕಾರ-ಮಾಧ್ಯಮಗಳಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಇಲ್ಲಿನ ಕೆಲ ದುಷ್ಟ ಪಾತ್ರಗಳೆಂದು ಗುರುತಿಸಲ್ಪಟ್ಟ ವ್ಯಕ್ತಿಗಳ ಬಗ್ಗೆ ಕುವೆಂಪು ಹರಿಸಿರುವ ಮಾನವೀಯ ಅಂತಃಕರಣದ ದೃಷ್ಟಿ, ಮನೋವೈದ್ಯೆ ಡಾ.ಕೆ.ಎಸ್. ಪವಿತ್ರ ಅವರ ಸೃಜನಶೀಲ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು, ತಮ್ಮ ನೃತ್ಯಪ್ರಯೋಗಕ್ಕೆ ಅವರು ಈ ಪಾತ್ರಗಳ ಚಿತ್ರಣವನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಇದು ಸುಲಭದ ಕೆಲಸವಲ್ಲ. ಪಾತ್ರಗಳ ಅಂತಃಸತ್ವವನ್ನು ನೃತ್ಯದಲ್ಲಿ ಹೊರಹೊಮ್ಮಿಸುವುದು ಸವಾಲಿನ ಕೆಲಸವೇ ಸರಿ. ಕೃತಿಯ ಬಗ್ಗೆ ಕೂಲಂಕಷ ಅಧ್ಯಯನ ಮಾಡಿರುವ ಪವಿತ್ರ, ರಾಮಾಯಣದ ಪಾತ್ರಗಳ ಬಗ್ಗೆ ಹೊಸ ಆಯಾಮದ ಪದರಗಳನ್ನು ಶೋಧಿಸಿ, ಸುಮಧುರ ಗಾಯನ, ವಾದ್ಯಗೋಷ್ಟಿಯ ಸಹಕಾರದ ಮೂಲಕ ತಮ್ಮ ಪ್ರಬುದ್ಧಾಭಿನಯದ ತಾದಾತ್ಮ್ಯ ನರ್ತನದ ಮೂಲಕ ಕಲಾರಸಿಕರ ಮನಸೂರೆಗೊಂಡರು.

ಇತ್ತೀಚಿಗೆ ಮಲ್ಲೇಶ್ವರದ ಸೇವಾಸದನದಲ್ಲಿ ‘ಶ್ರೀ ವಿಜಯ ಕಲಾನಿಕೇತನ’ ಆಯೋಜಿಸಿದ್ದ ‘ರಾಮಂಗೆ ಮೊದಲಲ್ತೆ ರಾಮಾಯಣಂ’ -ಏಕವ್ಯಕ್ತಿ ನೃತ್ಯಪ್ರಸ್ತುತಿಯನ್ನು ಡಾ. ಪವಿತ್ರಾ ತಮ್ಮ ಸುಮನೋಹರ ನೃತ್ಯದ ಮೂಲಕ ದಿವ್ಯಾನುಭೂತಿಯನ್ನು ನೀಡಿದರು. ವಿಷಯಾಧಾರಿತ ನೃತ್ಯಪ್ರಸ್ತುತಿಯಲ್ಲಿ ಕಥಾ ನಿರೂಪಣೆಯನ್ನು ತಮ್ಮ ಸ್ಫುಟವಾದ ಅಷ್ಟೇ ಸುಂದರವಾದ ಆಂಗಿಕ, ಮುಖಾಭಿವ್ಯಕ್ತಿಯ ಮೂಲಕ ಕಪ್ಪು ಅಂಚಿನ ಪಾತ್ರಗಳ ಬಗ್ಗೆ ಬೆಳ್ಳಿರೇಖೆಯನ್ನು ಮೂಡಿಸಿದ ನೋಟ, ಪ್ರಯೋಗ ಸ್ವಾಗತಾರ್ಹ. ಕುವೆಂಪುರವರ ಮುಖ್ಯಧ್ವನಿ, ದುಷ್ಟ ಪರಿವರ್ತನೆ-ಶಿಷ್ಟ ಸಂವರ್ಧನೆ. ಸಾಮಾನ್ಯವಾಗಿ ನಾವು ಕೆಟ್ಟವರೆಂದುಕೊಳ್ಳುವ ವ್ಯಾಧ, ಮಂಥರೆ, ಕೈಕೇಯಿ, ವಾಲಿ, ರಾವಣ, ಕುಂಭಕರ್ಣ ಮತ್ತು ಶೂರ್ಪನಖಿ ಎಲ್ಲರೂ ಕುವೆಂಪು ದೃಷ್ಟಿಯಲ್ಲಿ ರಾಮ-ಸೀತೆಯರಿಗೆ ಸ್ವಶಕ್ತಿಯ ದರ್ಶನ ಮಾಡಿಸುತ್ತಾರೆ.

ಭಾವ ಬೆರೆತ ಸುಮನೋಹರ ನೃತ್ತಗಳಿಂದ ಆರಂಭಿಸಿದ ಪವಿತ್ರ, ವಾಲ್ಮೀಕಿ, ಕ್ರೌಂಚ, ಜೋಡಿಹಕ್ಕಿಗಳನ್ನು ಕೊಲ್ಲದಂತೆ ತಡೆಯುವ ದೃಶ್ಯ ಮತ್ತು ನಾರದೋಪದೇಶದಿಂದ ತಾನು ಹೇಗೆ ಬದಲಾದೆ ಎಂದು ತನ್ನ ಹಿಂದಿನ ಕಥೆಯನ್ನು ಹೇಳುತ್ತ ರಾಮಮಂತ್ರದ ಮೂಲಕ ಕ್ರೌಂಚನ ಕ್ರೌರ್ಯ ಮನೋಭಾವವನ್ನು ಪರಿವರ್ತಿಸುವ ಘಟನೆಯನ್ನು ಸಂಕ್ಷಿಪವಾಗಿ ಕಟ್ಟಿಕೊಟ್ಟರು. ಕಥಾನಿರೂಪಣೆಯಲ್ಲಿ ಕಲಾವಿದೆಯ ನರ್ತನಾ ಸಾಮರ್ಥ್ಯದೊಂದಿಗೆ ಅಭಿನಯ ಚಾತುರ್ಯವೂ ಬಿಂಬಿತವಾಯಿತು.

ಉದ್ಯಾನವನದಲ್ಲಿ ಮರಿಗಳಿಗೆ ಗುಟುಕು ನೀಡುತ್ತಿದ್ದ ಹಕ್ಕಿಯನ್ನು ಕಂಡು ದಶರಥನಲ್ಲಿದ್ದ ಸಂತಾನಾಪೇಕ್ಷೆ  ಜಾಗೃತವಾಗಿ, ಪುತ್ರಕಾಮೇಷ್ಟಿ ಯಾಗಮಾಡಿ, ಪಾಯಸ ಪ್ರಾಪ್ತಿ, ಮೂವರು ಹೆಂಡತಿಯರಿಗೆ ವಿತರಣೆ, ಸಂತಾನಭಾಗ್ಯ  ಅಷ್ಟೂ ಘಟನೆಯನ್ನು ಪರಿಣಾಮಕಾರಿ ಅಭಿನಯದಿಂದ ಕಾಣಿಸಿದ ನರ್ತಕಿ, ಕೌಸಲ್ಯೆಯ ಮಾತೃಪ್ರೇಮವನ್ನು ಆವಾಹಿಸಿಕೊಂಡು ತನ್ಮಯರಾಗಿ ಅಭಿನಯಿಸಿದರು. ಚಂದ್ರ ಬೇಕೆಂದು ಹಠ ಹಿಡಿದ ರಾಮನನ್ನು ಸಮಾಧಾನಿಸಲು ಸೋತ ತಾಯಿಯ ವೈಫಲ್ಯ ಕಂಡ ಗೂನುಬೆನ್ನಿನ ‘ಮಂಥರೆ’, ಮಗುವನ್ನು ಪ್ರೀತಿಯಿಂದೆತ್ತಿಕೊಂಡು, ಆಗಸದ ಚಂದಿರನನ್ನು ಕನ್ನಡಿಯಲ್ಲಿ ತೋರಿಸಿ ಸಮಾಧಾನಿಸಿದ ಪರಿ ಸೊಗಸಿತ್ತು.

ಪತಿತಪಾವನ ರಾಮ, ಶಿಲಾತಪಸ್ವಿನಿ ಅಹಲ್ಯೆಯ ಶಾಪವಿಮೋಚನೆ ಮಾಡುವ ಪ್ರಸಂಗದಲ್ಲಿ ಸ್ತಬ್ಧವಾದ, ಚಿತ್ರವತ್ತಾದ ನೀರವ ಪ್ರಕೃತಿ, ಧೀಮಂತ ನಡೆಯ ರಾಮನ ಆಗಮನವಾಗುತ್ತಿದ್ದ ಹಾಗೇ ನಲಿವನ್ನು ಸೂಸುವಂತೆ ನಲ್ಮೆಯಿಂದ ಚಲಿಸಿದ ರೀತಿಯನ್ನು, ಕಲಾವಿದೆ ತನ್ನ ಮೃದುವಾದ ಹಸ್ತಚಲನೆಯ ಆಂಗಿಕದಿಂದ ಚಲನಶೀಲಗೊಳಿಸಿ ದಂತೆ ಆರ್ದ್ರತೆ ಸೂಸಿದರು. ಧನ್ಯತೆ ಪಡೆದ ಅಹಲ್ಯೆಯ ಮೊಗದಲ್ಲಿ ದೈನ್ಯತೆ ಮಿಳಿತ ಸಾರ್ಥಕ ಭಕ್ತಿಭಾವ ಸ್ರವಿಸಿತ್ತು. ಉಸಿರುಗಟ್ಟುವ ವಾತಾವರಣ ತಿಳಿಯಾಗಿ, ಬಂಡೆ ಕಂಪಿಸಿ, ಹೆಣ್ಣಾದ ದೃಶ್ಯ ಅನನ್ಯ.

ರಾಮ-ಸೀತೆಯರ ದಾಂಪತ್ಯಕ್ಕೆ ಮುನ್ನುಡಿ ಬರೆದ ಸೀತಾ ಸ್ವಯಂವರದ ದೃಶ್ಯದಲ್ಲಿ, ಯಾವ ದೈತ್ಯ ಬಂದು  ಬಿಲ್ಲು ಮುರಿದಾನೋ ಎಂಬ ಆತಂಕದಲ್ಲಿ ಮಿಡುಕುತ್ತ ಸೀತೆ, ಬಂದ ಸುಂದರಾಂಗ ರಾಮನೇ ಗೆಲ್ಲಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವ ಅಭಿವ್ಯಕ್ತಿ ನವಿರಾಗಿ ಮೂಡಿಬಂದಿತು. ರಾಮನಿಗೆ ವರಮಾಲೆ ಹಾಕುವ ಲಜ್ಜಾನ್ವಿತ ಸೀತಾಕಲ್ಯಾಣದಲ್ಲಿ, ಕುವೆಂಪು ಅವರ ‘ಮಂತ್ರ ಮಾಂಗಲ್ಯ’ದ ಪರಿಕಲ್ಪನೆಯ ಬಳಕೆ ಪರಿಣಾಮವನ್ನು ಹೆಚ್ಚಿಸಿತ್ತು. ರಾಮನ ವರ್ಣನೆ, ಹರಧನುಸ್ಸು ಎತ್ತಿದ ರಮಣೀಯ ದೃಶ್ಯಕ್ಕೆ ಪ್ರಪ್ಹುಲ್ಲ ಪ್ರಭಾವಳಿ ನಿರ್ಮಿಸಿದ ಆಹ್ಲಾದಕಾರಿ ನೃತ್ಯ ಕಣ್ಮನ ತುಂಬಿತು.

ಶ್ರೀರಾಮನ ವನವಾಸಕ್ಕೆ ಕಾರಣಳಾದ ಕೈಕೇಯಿಯ ಬಗ್ಗೆ ಸಹಾನುಭೂತಿ ಹುಟ್ಟಿಸುವ, ಅವಳನ್ನು ದುರಂತ ನಾಯಕಿಯಾಗಿ ಕಾಣಿಸುವ ಬಗೆಯಲ್ಲಿ ಕರುಳ ಮಿಡಿತವಿತ್ತು. ಮಾಯಾಮೃಗದ ಪ್ರಕರಣದಲ್ಲಿ ಮುಗ್ಧ ಜಾನಕಿ, ಹೊನ್ನಜಿಂಕೆಯ ಹಿಂದೆ ತಾನೂ ಹರಿಣಿಯಂತೆ ಜಿಗಿಯುತ್ತ ಅದನ್ನು ಬಯಸುವ ಪರಿ, ಅದರ ಬೆನ್ನತ್ತಿದ ರಾಮನ ‘ಹಾ ಲಕ್ಷ್ಮಣ’ ಎಂಬ ಚೀತ್ಕಾರ ಕೇಳಿ, ಮೈದುನನ್ನು ಒತಾಯದಿಂದ ಕಳಿಸಿ, ರಾವಣನಿಂದ ಅಪಹೃತಳಾದ ಸನ್ನಿವೇಶಗಳಲ್ಲಿ ಬಳಸಿದ ಜತಿಗಳು ಔಚಿತ್ಯಪೂರ್ಣವಾಗಿತ್ತು. ಅಭಿನಯಪ್ರಧಾನವಾದ ಮುಂದಿನ ಭಾಗಗಳಲ್ಲಿ ಮಿಂಚಿದ್ದು ನುರಿತ ಅಭಿನಯ, ಭಾವಸೂರೆ. ರಾವಣನಾಗಿ ವೀರಾವೇಶದ ಅಭಿನಯ, ಜಟಾಯು ಪ್ರತಿರೋಧಗಳಲ್ಲಿ ನಾಟಕೀಯ ಸೆಳೆಮಿಂಚು. ದಶಾನನ ಸಿದ್ಧಿಯ ಪ್ರಸಂಗದ ನಿರೂಪಣೆ, ರಾಮ-ರಾವಣರ ಯುದ್ಧ, ಜತಿಗಳ ಝೇಂಕಾರದಲ್ಲಿ ಮೊಳಗಿದ್ದು, ಸೀತಾ-ರಾಮರಿಬ್ಬರೂ ಅಗ್ನಿಪ್ರವೇಶದ ಪರೀಕ್ಷೆಯಲ್ಲಿ ಗೆದ್ದುಬರುವ ಹಾಗೂ ಸೀತಾರಾಮರ ಪುನರ್ಮಿಲನದ ದೃಶ್ಯಗಳಲ್ಲಿ ಕಲಾವಿದೆಯ ಭಾವಪೂರ್ಣ ಅಭಿನಯ ಪರಾಕಾಷ್ಠತೆಯ ಗರಿಗೆದರಿತ್ತು. ಮೊದಲಿನಿಂದ ಕಡೆಯವರೆಗೂ ಕಲಾವಿದೆಯ ಲವಲವಿಕೆಗೆಡದ ಎರಡುಗಂಟೆಗಳ ಏಕವ್ಯಕ್ತಿಯ ಅಭಿನಯ, ಯಾಂತ್ರಿಕತೆ ಸುಳಿಯದ ನಿರೂಪಣೆ ಸ್ತುತ್ಯಾರ್ಹ.

Related posts

ಪ್ರೌಢ ಅಭಿನಯದ ಸೊಗಸಾದ ನರ್ತನ

YK Sandhya Sharma

ದೀಪಾ ದೇವಸೇನಾ ಚೇತೋಹಾರಿ ಕಥಕ್ ನರ್ತನ

YK Sandhya Sharma

ನವವರುಷ-ನವೋಲ್ಲಾಸದ ಶರದೋತ್ಸವ

YK Sandhya Sharma

Leave a Comment

This site uses Akismet to reduce spam. Learn how your comment data is processed.